ಪ್ರಯಾಸಗೊಂಡರೂ ಮುದ ಕೊಟ್ಟ ಪ್ರಯಾಣ_೪

ಚಾರ್ಲ್ಸ್ ಡಿ ಗಾಲೆಯಲ್ಲಿ..

ProfileImg
04 May '24
3 min read


image

ಹಿಂದಿನ ಕಂತಿನಿಂದ..

ಚಾರ್ಲ್ಸ್ ಡಿ ಗಾಲೆ  ವಿಮಾನ ನಿಲ್ದಾಣ ದೊಡ್ಡದು.ನಮಗೆ ಅಲ್ಲಿ ಎರಡು ಗಂಟೆಗಳ ಸಮಯವಿತ್ತು. ಎರಡು ಗಂಟೆ ಅಂತ ನಿಧಾನ ಮಾಡುವಂತಿಲ್ಲ. ವಿಮಾನದಿಂದ ಇಳಿಯುವಾಗಲೇ ಅರ್ಧ ಗಂಟೆಯಾಗುತ್ತದೆ. ನಮ್ಮ ವಿಮಾನದಲ್ಲಿದ್ದ ಸಹಪ್ರಯಾಣಿಕಳೊಬ್ಬಳು ಈಗಾಗಲೇ ತಡವಾಗಿದೆ. ಬೇಗ ಹೋಗಿ ಅಂತ ಉಚಿತ ಸಲಹೆ ಕೊಟ್ಟಳು.ನಮ್ಮ ಮುಂದಿನ ಪ್ರಯಾಣ ಡೆಲ್ಟಾ ಏರ್ಲೈನ್ಸ್ ನಲ್ಲಿ.ಅದು ಅಲ್ಲಿಯ ೧೦. ೩೦ರ ಲೋಕಲ್ ಸಮಯದಲ್ಲಿತ್ತು.
ನಮ್ಮದು ಇಕಾನಮಿ ಸೀಟುಗಳು. ಒಂದೊಂದು ಸಾಲಿನಲ್ಲಿ ಮೂರು ಮೂರರ ಒಂಬತ್ತು ಸೀಟುಗಳು.  ಬೆಂಗಳೂರಿನಿಂದ ಬರುವಾಗ ನಾನು ಕಿಟಿಕಿ ಪಕ್ಕದ ಸೀಟು ಬೇಕು ಎಂದಿದ್ದೆ.ಹೊರಗೆ ನೋಡಬಹುದು ಅಂತ. . ರಾತ್ರಿ ಎಂತ ಹೊರಗೆ ನೋಡುವುದು ಅಂತ ತಮಾಷೆ ಮಾಡಿದ್ದರು ನನ್ನ ಯಜಮಾನರು.ನಮ್ಮ ಪಕ್ಕದ ಸೀಟಿನಲ್ಲಿ  ಕೇರಳದ ಯುವಕನೊಬ್ಬ ಇದ್ದ. ಆತ  ಕೆನಡಾದ ಮಾಂಟ್ರಿಯಲ್ ಗೆ ಹೋಗುವವನಿದ್ದ. ಮೂರು ತಿಂಗಳ ಒಂದು ಸರ್ಟಿಫಿಕೇಟ್ ಕೋರ್ಸ್ ಗೆ ಹೋಗುತ್ತಿದ್ದುದಂತೆ.   ಮೊದಲ ಬಾರಿಗೆ ಹೋಗುತ್ತಿದ್ದ.ಅದೇನೋ "ಬೆಳಕಿನ" ಬಗ್ಗೆ  ಅವನ ರಿಸರ್ಚ್.ಅವನ  ಫ್ಲೈಟ್ ಗೆ ಪ್ಯಾರಿಸ್ ನಲ್ಲಿ  ತುಂಬಾ ಸಮಯವಿತ್ತು.ಅವನ ಪ್ರಯಾಣದ ದಿಕ್ಕು ಬೇರೆ. ಡೆಟ್ರಾಯಿಟ್ ಗೆ ಹೋಗುವ ಒಬ್ಬ ನವ ವಿವಾಹಿತೆಯೂ ನಮ್ಮ ಫ್ಲೈಟಿನಲ್ಲಿದ್ದಳು ಅವಳು ಬೆಂಗಳೂರಲ್ಲಿ ಚೆಕ್ ಇನ್ ಆಗುವಾಗ ಪರಿಚಯವಾದವಳು... ಒಬ್ಬಳೇ ಪ್ರಥಮ ಬಾರಿಗೆ ಹೋಗುತ್ತಿದ್ದಳು , ಗಂಡನನ್ನು ಕೂಡಿಕೊಳ್ಳಲು. ಅವಳು ಡೆಟ್ರಾಯಿಟ್ ಗೆ ಹೋಗುವವಳಾದರೂ CDG ಯಲ್ಲಿ ಅವಳ ಫ್ಲೈಟಿಗೆ ಎಂಟು ಗಂಟೆಗಳ ಅಂತರವಿತ್ತು.ಬಹುಷ: ಮೊದಲು ಬಾರಿಗೆ ಹೋಗುವವಳಾದುದರಿಂದ ಸಮಯ ಕಡಿಮೆ ಇದ್ದಾಗ ಮುಂದಿನ ವಿಮಾನಕ್ಕೆ  ಹೋಗುವ ಜಾಗ ಹುಡುಕಲು ಕಷ್ಟವಾಗಬಹುದೆಂದೋ ಏನೋ  ಜಾಸ್ತಿ ಸಮಯವಿರುವಂತೆ ಟಿಕೆಟ್ ಕಾಯ್ದಿರಿಸಿದ್ದಿರಬಹುದು. ಹಾಗಾಗಿ ನಮ್ಮ ಫ್ಲೈಟಿಗೆ ಅವಳು ಬರಲಿಲ್ಲ. ಎಂಟು ಗಂಟೆ ಕಾಯಬೇಕು. ನಿದ್ದೆ ಮಾಡದಿದ್ದರಾಯಿತು.
ವಿಮಾನ ನಿಲ್ದಾಣದಲ್ಲಿ ಎರಡು ಗಂಟೆ ಆದರೂ ಐದು ಗಂಟೆಯಾದರೂ ಸಮಯ ಸರಿದದ್ದೇ ತಿಳಿಯುವುದಿಲ್ಲ. ವಿಶಾಲವಾದ ಹಾಲಿನಲ್ಲಿ  ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗಲೇ ಸಮಯ ಸರಿಯುತ್ತದೆ. ಹಿಂದಿನ ಪ್ರಯಾಣದಲ್ಲಿ ನಮಗೆ ಐದು ಗಂಟೆಗಳ ಅವಕಾಶ ಸಿಕ್ಕಿತ್ತು. ಇಬ್ಬರಿದ್ದರೆ ಬೇಜಾರೆನಿಸುವುದಿಲ್ಲ.ಒಬ್ಬರೇ ಆದರೆ ಸಮಯ ಕಳೆಯುವುದು ಕಷ್ಟವೇ...ನಮಗೆ ನಮ್ಮ ವಿಮಾನವು  zone_೨ ಅಂತ ಟಿಕೆಟಿನಲ್ಲಿತ್ತು.. ಆದರೆ ಯಾವ ಗೇಟು ,ಅಲ್ಲಿಗೆ ಹೋಗುವ ದಾರಿ ತಿಳಕೊಳ್ಳಬೇಕಾಗಿತ್ತು. ಅಲ್ಲಿ ಸರಿಯಾದ ಮಾರ್ಗದರ್ಶಕರೂ ಇಲ್ಲ.  ವಿಮಾನದಿಂದ ಇಳಿದು ಬರುತ್ತಿದ್ದಂತೆ ಅಲ್ಲೊಂದು ಪ್ರಕಟಣಾ  ಫಲಕವಿತ್ತು. ಅದು ಬಹಳ ಚಿಕ್ಕದಿತ್ತು. ಆ ಪ್ರಕಟಣಾ ಫಲಕದ ಮುಂದೆ ಪ್ರಯಾಣಿಕರ ಗುಂಪು ನಿಂತು  ತಮ್ಮ ತಮ್ಮ ವಿಮಾನದ ವೇಳೆಯನ್ನು ಹುಡುಕುತ್ತಿದ್ದರು. ನಮ್ಮವರೂ ,ನಾಯಕ್ ಅವರೂ ಅದರ ಮುಂದೆ  ಕುತ್ತಿಗೆ ಎತ್ತರಿಸಿ ಹುಡುಕಿದ್ದೇ ಹುಡುಕಿದ್ದು. ನಮ್ಮ ಫ್ಲೈಟಿನ ಬಗ್ಗೆ  ಏನೂ ಕಾಣಿಸುತ್ತಿಲ್ಲ ಅಂತ ಹೇಳಿದರು. ಆದರೆ ನನಗೆ ಮುಂದೆ ಇರಬಹುದು ಅಂತ ನಂಬಿಕೆ. ಹಾಗಾಗಿ ಮುಂದೆ ಇರಬಹುದು ಬನ್ನಿ ಹೋಗೋಣ ,ಇಲ್ಲಿ ಯಾಕೆ ಸಮಯ ದಂಡ ಮಾಡುವುದು ಅಂತ ಹೇಳಿದೆ. ಯಾಕೆಂದರೆ ಅಲ್ಲಿ ಕೇಳಲು ಪ್ರಯಾಣಿಕರನ್ನು, ಅದೂ ನಮ್ಮ ವಿಮಾನದಲ್ಲಿ ಬಂದವರನ್ನು ಬಿಟ್ಟರೆ  ಬೇರೆ ಯಾರೂ ಇಲ್ಲ. ನಿರ್ಜನ ಪ್ರದೇಶ. ಹಾಗೆ ಮುಂದಕ್ಕೆ ಹೋದಾಗ ದೊಡ್ಡ ಪ್ರಕಟಣಾ ಫಲಕ ಕಂಡಿತು. ಎಲ್ಲಾ ವಿಮಾನಗಳ ವಿವರ ಆ ಪ್ರಕಟಣಾ ಫಲಕದಲ್ಲಿತ್ತು. ನಮ್ಮ ಫ್ಲೈಟ್  ಸಮಯಕ್ಕೆ ಸರಿಯಾಗಿ ಬರುವುದೆಂದು ತಿಳಿದುಕೊಂಡೆವು.ಆ ಫಲಕದ ಮುಂದೆ ನಮ್ಮ ಮಾತು ಕೇಳಿ  ಗುಂಪಿನಿಂದ  ಒಬ್ಬ ಯುವತಿ ನೀವು ಹವ್ಯಕರಾ ,ಎಲ್ಲಿ ಮನೆ ಎಲ್ಲಿಗೆ ಹೋಗುವುದು ಅಂತ ಆ ಗಡಿಬಿಡಿಯಲ್ಲಿಯೂ ಕೇಳಿದಳು. ಎಲ್ಲಿದ್ದರೂ ನಮ್ಮ ಭಾಷೆ , ನಮ್ಮ ನಾಡು ದೇಶ ಎಂದಾಗ ಕಿವಿ ನೆಟ್ಟಗಾಗುತ್ತದೆಯಲ್ಲವೇ? ಆ ಹುಡುಗಿ ಸಿರಸಿಯವಳಂತೆ.ಅದೆಲ್ಲೋ ಹೋಗಬೇಕೆಂದಳು. ಯಾಕೋ ಆ ಜಾಗದ ಹೆಸರು ನೆನಪಾಗುತ್ತಿಲ್ಲ.
ನಾವು ಕೆಳಗಿನ ಫ್ಲೋರಿಗೆ ಹೋಗಬೇಕಾಗಿತ್ತು.ಮುಂದೆ ಹೋದಾಗ ಎಡಗಡೆಗೆ ಹೋಗಬೇಕೋ  ಇಲ್ಲ ಎಡಗಡೆಗೋ ಅಂತ ಗೊಂದಲವಾಯಿತು.
ಯಾಕೆಂದರೆ ಒಂದು ಕಡೆ ಲಗ್ಗೇಜ್ ಪಡೆದುಕೊಳ್ಳಲು ಹೋಗಬೇಕಾದ ಜಾಗ. ಅದು ಪ್ಯಾರಿಸ್ನಲ್ಲಿಯೇ ಪ್ರಯಾಣ ಮುಗಿಸುವವರಿಗೆ  ಇರುವ ದಾರಿ.
ಅಲ್ಲೊಬ್ಬಳು ನಿಲ್ದಾಣದ  ಸಹಾಯಕಳಿರಬಹುದು  ನೆಟ್ಟಗೆ ನಿಂತಿದ್ದಳು ಕರಿಯಳು. ಅವಳಲ್ಲಿ ವಿಚಾರಿಸಿದಾಗ ಈ ಕಡೆ ಹೋಗಬೇಕೆಂದು ಕೈ ತೋರಿಸಿದಳು. ನಮಗೆ ಸಂಶಯ ನಾವು ಹೇಳಿದ್ದು ಅವಳಿಗೆ ಅರ್ಥವಾಯಿತಾ ಅಲ್ಲಾ ಅವಳು ಹೇಳಿದ್ದು ನಮಗೆ ಅರ್ಥ ವಾಗಲಿಲ್ಲ ವೋ ಅಂತ. ಇನ್ನೊಂದು ವಿಷಯ ಎಂದರೆ ನಾವು ಕರಿಯರು ಅಂತ ಹೇಳಿದರೆ ನಮ್ಮಲ್ಲಿ ಅವಮಾನ. ಆದರೆ ವಿದೇಶದಲ್ಲಿ blacks ಅಂತ ಹೇಳಬೇಕು . ನೀಗ್ರೋ ಅಂತ ಹೇಳಬಾರದು.
ಅಷ್ಟರಲ್ಲಿ ನಾಯಕರು ನಾನೆಲ್ಲಾ ನೆಟ್ನಲ್ಲಿ ಹುಡುಕಿದ್ದೇನೆ. ಈ ಕಡೆ ಹೋಗಬೇಕೆಂದು ಹೇಳಿದರು.ಆದರೂ ನಮಗೆ ಸಂಶಯ . ಎಲ್ಲಿಗಾದರೂ ತಪ್ಪಿ  ಹೋದರೆ ಹಿಂದೆ ಬರುವುದು ಕಷ್ಟ ಆ ಅಪರಿಚಿತ ಜಾಗದಲ್ಲಿ. ಅಲ್ಲಿ M,L  ಎರಡೂ ಫ್ಲಾಟ್ ಫಾರಂ ಅಂತ ಬೋರ್ಡ್ ಇತ್ತು. ಆಗ ಅಲ್ಲೊಬ್ಬ ಬಿಳಿಯ ಸಹಪ್ರಯಾಣಿಕಳು ನಗುಮುಖದಿಂದ  ಬನ್ನಿ ನಾವೂ ಅಲ್ಲಿಗೇ ಹೋಗುವುದು ಅಂತ ಹೇಳಿದಳು. ನಾವೂ  ಅವಳನ್ನು  ಹಿಂಬಾಲಿಸಿದೆವು. ಎಸ್ಕಲೇಟರ್ನಲ್ಲಿ ಕೆಳಗಿಳಿದೆವು. ಸ್ವಲ್ಪ ಹೊತ್ತಿನಲ್ಲಿ ಟ್ರಾಮ್ ಬಂತು. ಈ ಟ್ರಾಮ್ ನಿಮಿಷ ನಿಮಿಷಕ್ಕೂ ಬರುತ್ತಿರುತ್ತದೆ.M ಪ್ಲಾಟ್ ಫಾರಂ ಗೆ ಹೋಗಬೇಕೆಂದು ತಿಳಿಯಿತು .ಮುಂದಿನ ನಿಲ್ದಾಣದಲ್ಲಿ ಬಿಳಿಯಳು ಹೇಳಿದಂತೆ   ಇಳಿದುಕೊಂಡೆವು.ಮತ್ತೆ ಮುಂದೆ ಸರತಿಯ ಸಾಲಿನಲ್ಲೋ , ಹಾಲಿನಲ್ಲೋ ಸಿಗುವಾಗ ಆ ಮಹಿಳೆ ನಗುತ್ತಾ  'ನಮ್ಮ ಯಜಮಾನರಿಗೆ 'ಥಮ್ಸ್ ಅಪ್ '  👍 ಚಿಹ್ನೆ ತೋರಿಸುತ್ತಿದ್ದಳು‌. ನಮಗೆ ಸಹಾಯ ಮಾಡಿದೆ ಎಂಬ ತೃಪ್ತಿ ಅವಳಲ್ಲಿದ್ದಂತೆನಿಸಿತು. ನಮ್ಮಂತೆ ಬೇರೆ ಕೆಲವರು ಪರದಾಡುವವರಿದ್ದರು.ನಮಗೆ ಸ್ವಲ್ಪ ಮಟ್ಟಿಗೆ ಅವಳೇ ಮಾರ್ಗದರ್ಶಕಳಾದಳು .ನಮಗೆ  ಸಮಯಕ್ಕೆ  ಸರಿಯಾಗಿ ತಲುಪಿದೆವಲ್ಲಾ ಅಂತ ನೆಮ್ಮದಿಯಾಯಿತು.


ಮುಂದೆ….


✍️ ಪರಮೇಶ್ವರಿ ಭಟ್

Category:Travel



ProfileImg

Written by Parameshwari Bhat