ಮರಳಿ ಬಾರದ ಆ ದಿನಗಳು..!

ProfileImg
12 May '24
2 min read


image

"ಮಳೆ ಶುರುವಾಯ್ತು ಬಟ್ಟೆಗಳನ್ನೆಲ್ಲ ಒಳ ತಂದುಬಿಡು ಯಾವಾಗ್ಲೂ ಆ ಮೊಬೈಲ್ ಹಿಡ್ಕೊಂಡು ಕೂರ್ತಿಯ ಪ್ರವಾಹ ಬಂದ್ರು ಗೊತ್ತಾಗಲ್ಲ ನಿಂಗೆ" ಅಮ್ಮನ ಬೈಗುಳ ಕೇಳಿ ಮೊಬೈಲ್ ಸೋಫಾದ ಮೇಲೆ ಎಸೆದು ಅಂಗಳಕ್ಕೆ ಓಡಿ ಬಟ್ಟೆಗಳನ್ನೆಲ್ಲ ತಂತಿಯಿಂದ ತೆಗೆಯೋ ವೇಳೆಗಾಗಲೇ ಅರ್ಧ ಒದ್ದೆಯಾಗಿಬಿಟ್ಟಿದ್ದೆ.. ಇನ್ನಷ್ಟು ಮಳೆಯಲ್ಲಿ ನೆನೆಯುವ ಆಸೆಯಾದರು ಎರಡು ದಿನಗಳ ಹಿಂದೆಯಷ್ಟೇ ನನ್ನ ಬಿಟ್ಟು ಹೋಗಿದ್ದ ಜ್ವರದ ನೆನಪಾಗಿ ಜೊತೆಗೆ ಅಮ್ಮನ ಕೈಯಿಂದ ಇನ್ನಷ್ಟು ಬೈಗುಳ ತಿನ್ನಬೇಕಲ್ಲ ಎಂದೆನಿಸಿ ಸುಮ್ಮನೆ ಒಳ ಬಂದು ಮತ್ತೆ ಮೊಬೈಲ್ ಹಿಡಿದು ಕುಳಿತೆ.. "ಅಕ್ಕಾ ಅಕ್ಕಾ ಬಾ ನಿಂಗೇನೋ ತೋರಿಸ್ಬೇಕು " ನನ್ನ ಚಿಕ್ಕಪ್ಪನ ಮಗ ಐದು ವರ್ಷದ ಪೋರ ಅವನ ಪುಟ್ಟ ಕೊಡೆ ಹಿಡಿದು ಅದನ್ನ ಅಲ್ಲೇ ಅಂಗಳದಲ್ಲಿ ಎಸೆದು ಬಂದಿದ್ದ ಮೊಬೈಲ್ ಹಿಡಿಯೋಕು ಬಿಡದೆ ಒಂದೇ ಸಮನೆ ತಲೆ ತಿಂತಾ ಇದ್ದ ಏನು ಎಂದರೆ ಬಾ ಅಕ್ಕಾ ತೋರಿಸ್ತೀನಿ ಎನ್ನುತಿದ್ದ.. ಕೊನೆಗೂ ಅವನ ಕಾಟಕ್ಕೆ ಮಣಿದು ಮೊಬೈಲ್ ಹಿಡಿದು ಅಮ್ಮನಿಗೆ ತಿಳಿಸಿ ಅಂಗಳಕ್ಕೆ ಕಾಲಿಟ್ಟಿದ್ದೆ ಕೊಡೆ ತಮ್ಮನ ಕೈಗಿಟ್ಟು ಮಳೆಯಲ್ಲಿ ಸ್ವಲ್ಪವೇ ನೆನೆಯುತ್ತ ಅರ್ಧ ದಾರಿ ತಲುಪುವ ವೇಳೆಗಾಗಲೇ ತಿಳಿದುಬಿಟ್ಟಿತು ಮನೆಯಿಂದ ಸ್ವಲ್ಪವೇ ದೂರವಿರುವ ಗದ್ದೆ ಉಳುಮೆ ಮಾಡುವ ಯಂತ್ರ ಬಂದಿದೆಯೆಂದು ಅವನ ಹೆಜ್ಜೆಗೆ ಸರಿಯಾಗಿ ನಡೆಯುತ್ತಾ ಹೋದೆ.. ತಮ್ಮ ಗದ್ದೆ ಉಳುಮೆ ಮಾಡುವುದನ್ನೇ ನೋಡುತ್ತಾ ನಿಂತ ಅವನಿದು ಎರಡನೇ ಬಾರಿ ನೋಡುತ್ತಿರುವುದು.. ನನ್ನ ಸ್ಮೃತಿಯಲ್ಲಿ ಬಾಲ್ಯದ ಚಿತ್ರಣ ಹಾದುಹೋಯಿತು ನಾನು ಬಾಲ್ಯದಲ್ಲಿ ಅದೆಷ್ಟು ಖುಷಿಯಿಂದ ಕಾದಿದ್ದೆ ಈ ದಿನಕ್ಕಾಗಿ ಆಗೆಲ್ಲ ಗದ್ದೆ ಉಳುಮೆ ಮಾಡುವುದು ನೋಡುವುದೇ ಒಂದು ಖುಷಿ ಪೈರು ನಾಟಿ ಮಾಡುವಾಗಲಂತೂ ಅದೆಷ್ಟು ಪೈರು ಹಾಳು ಮಾಡಿದ್ದೇವೋ ಏನೋ..  ಗದ್ದೆ ತೋಟದ ಬದಿಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುವ ಖುಷಿ ಈಗ ಫೈವ್ ಸ್ಟಾರ್ ಹೋಟೆಲಿನಲ್ಲಿ ಕುಳಿತು ಊಟ ಮಾಡಿದರು ಸಿಗಲಾರದು.. ಗದ್ದೆಯ ಎಲ್ಲ ಕೆಲಸಗಳಲ್ಲೂ ಹಿರಿಯರನ್ನು ಅನುಸರಿಸುತ್ತಿದ್ದೆವು.. ಒಂದಷ್ಟು ಬೈಗುಳಗಳ ಜೊತೆಗೆ.. ಆಗೆಲ್ಲ ಆ ಕೆಲಸಗಳು ಅಷ್ಟೇ ಖುಷಿ ಕೊಡುತಿದ್ದವು.. ಈಗ ಆ ಗದ್ದೆಯ ಜಾಗದಲ್ಲಿ ಅಡಿಕೆ ಮರಗಳು ಎದ್ದು ನಿಂತಿವೆ. ಒಂದು ಮೂಲೆಯಲ್ಲಿ ಬೇಸರವಂತೂ ಇದ್ದೆ ಇದೆ ನಮ್ಮ ಇಡೀ ಊರಿನಲ್ಲಿ ಒಂದೆರಡು ಕಡೆ ಗದ್ದೆ ತೋಟ ಇದೆ ಅಷ್ಟೇ. ಈಗೇನಿದ್ದರೂ ಪೂರ್ತಿ ಕೆಲಸಗಳು ಯಂತ್ರದ ಮೂಲಕವೇ ನಡೆಯುತ್ತಿದೆ ಎಲ್ಲೊ ಒಂದೆರಡು ಕಡೆ ಬಿಟ್ಟರೆ.  ತಮ್ಮ ಕೈ ಹಿಡಿದು "ಅಕ್ಕಾ ಹೋಗೋಣ ಮನೆಗೆ " ಎಂದಾಗ  ಯೋಚನ ಲಹರಿಯಿಂದ ಹೊರಬಂದು ಅವನ ಕೈ ಹಿಡಿದು ಮನೆ ಸೇರಿದ್ದೇ.

Category:Personal ExperienceProfileImg

Written by Vidyashree

Love to read