Do you have a passion for writing?Join Ayra as a Writertoday and start earning.

ಬೆಂಗಳೂರಿನ ಆ ದಿನಗಳು.

ProfileImg
30 Apr '24
4 min read


image

 

ಮಲೆನಾಡಿನ ಪುಟ್ಟ ಪಟ್ಟಣದಲ್ಲಿ(ಆಗ) ಹುಟ್ಟಿ ಬೆಳೆದ ನಾನು, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದು ಎಪ್ಪತ್ತರ ದಶಕದ ಅಂತ್ಯದಲ್ಲಿ.

ಹಸಿರು ವನಸಿರಿ, ಗಿರಿ-ಜಲಪಾತಗಳಿಂದ ಸುತ್ತುವರಿದ  ನಮ್ಮೂರನ್ನು ತುಂಬಾ ಪ್ರೀತಿಸುತ್ತಿದ್ದ ನಾನು ಮೊದಲಬಾರಿ ಬೆಂಗಳೂರಿಗೆ ಬಂದಿದ್ದೆ. ನಿಸರ್ಗವನ್ನು ಹೆಚ್ಚು ಇಷ್ಟಪಡುವ ನನಗೆ, ನಗರದ ಆಕರ್ಷಣೆಯೇನೂ ಇರಲಿಲ್ಲ.

ಬೆಂಗಳೂರು ಎಂದರೆ ದೊಡ್ಡ ದೊಡ್ಡ ಕಟ್ಟಡಗಳೇ ತುಂಬಿರುವ ನಗರವೆನ್ನುವ ಕಲ್ಪನೆ ನನಗಿತ್ತು. ಆದರೆ ನನ್ನ ಕಲ್ಪನೆ ಸುಳ್ಳಾಗಿತ್ತು. ನಗರದ ಎಲ್ಲ ರಸ್ತೆಗಳ ಇಕ್ಕೆಲಗಳಲ್ಲಿ ಹಚ್ಚಹಸಿರಿನಿಂದ ಕೂಡಿದ ವೃಕ್ಷಗಳೇ ಇದ್ದು ಉದ್ಯಾನ ನಗರಿ ಎನ್ನುವ ಹೆಸರು ಆಗ ಅನ್ವರ್ಥವಾಗಿತ್ತು. ಹೆಚ್ಚುಕಡಿಮೆ ಮಲೆನಾಡಿನಂತಹ ತಂಪು ಹವಾಗುಣವನ್ನು ಹೊಂದಿದ್ದ ಬೆಂಗಳೂರು  ಆಗ ನಿತ್ಯಹಸಿರಿನ ಗಿರಿಧಾಮದಂತಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ.

ಬೆಂಗಳೂರಿನ ಬೇಸಿಗೆಯ ದಿನಗಳ ಹಗಲಿನ ಉಷ್ಣತೆ ಮೂವತ್ಮೂರು ಡಿಗ್ರಿ ದಾಟುತ್ತಿರಲಿಲ್ಲ ಎಂದು ನನ್ನ ನೆನಪು. ನಗರದ ಬಡಾವಣೆಗಳು ಈಗಿನಷ್ಟು ದಟ್ಟವಾಗಿರದ ಕಾರಣ, ಎಲ್ಲಕಡೆಗಳಲ್ಲಿ ಖಾಲಿ ನಿವೇಶನಗಳು, ಮಣ್ಣಿನ ರಸ್ತೆಗಳು ಸಾಮಾನ್ಯವಾಗಿದ್ದವು.  

ಇಂದು ನಾವು ಬಳಸುವ ಯೂಸ್ ಎಂಡ್ ಥ್ರೋ ಎನ್ನುವ ಪ್ಲಾಸ್ಟಿಕ್‌ನ ಪಾರ್ಸಲ್ ಬಾಕ್ಸ್, ಸ್ಟ್ರಾ ಮುಂತಾದ ಅಡಿಯಿಂದ ಮುಡಿಯವರೆಗೆ  ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಪ್ಲಾಸ್ಟಿಕ್ ಬಳಕೆಯೂ ವ್ಯಾಪಕವಾಗಿರಲಿಲ್ಲವಾದ್ದರಿಂದ ಕಸ ವಿಲೇವಾರಿಯ ಸಮಸ್ಯೆ ಗೌಣವಾಗಿತ್ತು.  

ನಾನಾಗ ವಾಸವಿದ್ದದ್ದು ಹೈಗ್ರೌಂಡ್ಸ್ ಪ್ರದೇಶದಲ್ಲಿ. ಅಲ್ಲಿಂದ ಮಹಾರಾಣಿ ಕಾಲೇಜಿಗೆ ನಡೆದು ಹೋಗುವುದೆಂದರೆ ನನಗಂತೂ ಬಹಳ ಖುಷಿಯ ವಿಚಾರವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಕೆಂಪು, ಹಳದಿ, ಗುಲಾಬಿ... ಬಣ್ಣಗಳ ಹೂಗಳು ಅರಳುವ ಬೃಹತ್ ವೃಕ್ಷಗಳು. ಹೂಗಳನ್ನು ತುಳಿಯಲು ಇಷ್ಟವಿಲ್ಲದಿದ್ದರೂ ರಸ್ತೆಯಮೇಲೆ ಸದಾ ಹಾಸಿದಂತಿರುತ್ತಿದ್ದ ಬಣ್ಣದ ಹೂಗಳ ಹಾಸಿಗೆಯಮೇಲೆ ವಿಧಿ ಇಲ್ಲದೇ ನಡೆಯಬೇಕಿತ್ತು.

ಇನ್ನು ನಗರದ ರಸ್ತೆಗಳ ಸೌಂದರ್ಯವಂತೂ ಬಣ್ಣಿಸಲಸದಳ. ಹೌಗ್ರೌಂಡ್ಸ್‌ಗೆ ಸೇರಿದ ರೇಸ್ ಕೋರ್ಸ್ ರಸ್ತೆಯ ಸಾಲುಮರಗಳು ಬೃಹದಾಕಾರದ ಸರ್ವೆ (ಗಾಳಿ ಮರ) ಮರಗಳಾಗಿದ್ದವು. ಅವುಗಳ ನೆರಳಿನಲ್ಲಿ, ತಂಗಾಳಿಯ ಆಹ್ಲಾದತೆಯಲ್ಲಿ ಉದ್ದಕ್ಕೂ ನಡೆಯುವುದೇ ಸೊಗಸು. ಆ ಮರಗಳಿಂದಾಗಿ ಕಾರವಾರದ ಕಡಲತೀರ ನೆನಪಾಗುತ್ತಿತ್ತು.  ಮಹಾತ್ಮಾಗಾಂಧಿ ರಸ್ತೆಯ ಎಡಬದಿಯಲ್ಲಿ ರಸ್ತೆಯುದ್ದಕ್ಕೂ ಇದ್ದ ಬಣ್ಣಬಣ್ಣದ ಬೋಗನ್ ವಿಲ್ಲೆಯ ಕಾಲುಹಾದಿಯಲ್ಲಿ ನಡೆದಾಡಿದ ಅಂದಿನ ಪ್ರೇಮಿಗಳಿಲ್ಲವೆಂದೇ ಹೇಳಬಹುದು.

ಆಗ ಯಾವ ರಸ್ತೆಯಲ್ಲಿಯೂ ರಸ್ತೆವಿಭಜಕಗಳಿರಲಿಲ್ಲ. ಪಾದಚಾರಿ ಮಾರ್ಗಗಳು ಸಿಮೆಂಟ್ ಟೈಲ್ಸ್‌ನಿಂದ ಮುಕ್ತವಾಗಿದ್ದ ಕಾಲ. ಹಾಗಾಗಿ.....ಮಳೆಗಾಲದ ನೀರು ರಸ್ತೆಯಲ್ಲಿಯೇ ಹಿಂಗಿಹೋಗುತ್ತಿತ್ತು. ಪ್ಲಾಸ್ಟಿಕ್ ಅಸುರ ಹೆಚ್ಚು ಪ್ರವರ್ಧಮಾನಕ್ಕೆ ಬಂದಿರಲಿಲ್ಲವಾದ್ದರಿಂದ  ರಸ್ತೆ, ಮನೆಗಳಿಗೆ ಮಳೆಯ ನೀರು ನುಗ್ಗಿ ಆವಾಂತರವಾಗಿದ್ದನ್ನು ಕೇಳಿದ ನೆನಪಿಲ್ಲ.

ರಾಜಭವನದ ಸುತ್ತಮುತ್ತಲೂ ಇದ್ದ ಹೊಟೆಲ್ ಅವಿನಾಶ್, ಶ್ರೀರಾಜ್ ಲಸ್ಸಿ ಬಾರ್, ಹೊಟೆಲ್ ಶ್ಯಾಂಪ್ರಕಾಶ್, ಹೊಟೆಲ್ ಏರ್‌ಲೈನ್ಸ್ ಮುಂತಾದವುಗಳು ವಿಶಾಲವಾದ ಉದ್ಯಾನಗಳನ್ನು ಹೊಂದಿದ್ದವು. ಮಕ್ಕಳು ಆಟವಾಡುತ್ತಾ ಉದ್ಯಾನದಲ್ಲಿ ಕುಳಿತೇ ಊಟ, ತಿಂಡಿಯನ್ನು ಸವಿಯಬಹುದಾಗಿತ್ತು!

ವಿಧಾನಸೌಧ, ಹೈಕೋರ್ಟ್‌ಗಳ ಬೇಲಿಯರದ  ಆವರಣಗಳಲ್ಲಿ ಸಾರ್ವಜನಿಕರಿಗೆ  ಮುಕ್ತ ಪ್ರವೇಶವಿತ್ತು. ಹಾಗಾಗಿ ಶನಿವಾರ, ಭಾನುವಾರಗಳಲ್ಲಿ  ಅವುಗಳು ಪಿಕ್‌ನಿಕ್ ತಾಣವಾಗಿ ರೂಪಾಂತರ ಹೊಂದುತ್ತಿದ್ದವು. ವಿಧಾನಸೌಧದ ಮುಂಬಾಗಿಲಿನ ಕಟ್ಟೆಯಮೇಲೆ ಕುಳಿತು ಅಲ್ಲಿಯೇ ಮಾರುತ್ತಿದ್ದ ಉತ್ತರ ಕರ್ನಾಟಕದ ಬಿಸಿ ಮಂಡಕ್ಕಿ, ಹುರಿದ ಜೋಳ, ಚುರುಮುರಿ ತಿನ್ನುವ ಆನಂದವೇ ಬೇರೆಯಾಗಿತ್ತು. ಕಬ್ಬನ್ ಪಾರ್ಕ್ ಮತ್ತು ಈ ಪ್ರದೇಶಗಳು ಯುವಪ್ರೇಮಿಗಳಿಗೆ ತಮ್ಮದೇ ಲೋಕದಲ್ಲಿ ವಿಹರಿಸುತ್ತ ಮೈಮರೆಯಲು ಪ್ರಶಸ್ತವಾದ ಸ್ಥಳಗಳಾಗಿದ್ದವು.

ಮಹಾತ್ಮಾಗಾಂಧಿ ರಸ್ತೆಯ ಕೊನೆಯಲ್ಲಿರುವ ಯುಟಿಲಿಟಿ ಬಿಲ್ಡಿಂಗ್ ಒಂದೇ ಅತಿ ಎತ್ತರದ ಕಟ್ಟಡವಾಗಿ ಅಂದಿನ ಬೆಂಗಳೂರು ನಗರದ ಮುಖ್ಯ ಆಕರ್ಷಣೆಯಾಗಿತ್ತು!

ನಾನು ವಿವಾಹಿತೆಯಾಗಿ ಬೆಂಗಳೂರಿನಲ್ಲಿಯೇ ಖಾಯಂ ಆಗಿ ಉಳಿದುಬಿಟ್ಟಮೇಲೆ ಪತಿಯ ಸಾರಥ್ಯದಲ್ಲಿ ಬೆಂಗಳೂರಿನ ಎಲ್ಲ ಪ್ರದೇಶಗಳ ಪರಿಚಯವಾಗತೊಡಗಿತು. ನಗರದ ಉತ್ತರದ ಮೇಖ್ರಿ ಸರ್ಕಲ್ ಆಚೆಗೆ ಆಗ ಹಳ್ಳಿಯಂತಿದ್ದ ಗಂಗೇನಹಳ್ಳಿ, ಹೆಬ್ಬಾಳ ಮುಂತಾದ ಪ್ರದೇಶಗಳು ನಿಜಕ್ಕೂ ಹಳ್ಳಿಗಳೇ ಆಗಿದ್ದವು. ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ನಗರದ ಹೊರವಲಯದಲ್ಲಿತ್ತು.  ನಮ್ಮ ಕುಟುಂಬವು ಜಕ್ಕೂರಿನಲ್ಲಿ  ಒಂದು ತೋಟವನ್ನು ಹೊಂದಿತ್ತು. ವಾರಾಂತ್ಯದಲ್ಲಿ ಹೆಬ್ಬಾಳ ಕೆರೆಯಮೇಲೆ ಹಾದು ಅಲ್ಲಿಗೆ ಹೋಗುವುದು ದೂರ ಪ್ರಯಾಣದ ಅನುಭವವಾಗಿರುತ್ತಿತ್ತು.  ಈಗ ಬಡಾವಣೆಗಳ ರೂಪ ತಾಳಿರುವ ಅಮೃತಹಳ್ಳಿ, ಬ್ಯಾಟರಾಯನಪುರ ಮುಂತಾದವುಗಳು ಪ್ರತ್ಯೇಕ ಹಳ್ಳಿಗಳಾಗಿದ್ದವು. ಸಹಕಾರನಗರ, ಡಾಲರ್ಸ್ ಕಾಲೋನಿ, ಸಂಜಯ ನಗರಗಳು ಆಗ ಇರಲೇಇಲ್ಲ.

ನಗರದ ಪೂರ್ವ ವಲಯದ ಕೃಷ್ಣರಾಜಪುರದ ದೇವಸ್ಥಾನಕ್ಕೆ ಹೋಗುವ ವಾಡಿಕೆ ನಮ್ಮಲ್ಲಿತ್ತು.  ನಗರದ ಹೊರವಲಯದಲ್ಲಿದ್ದ ಆ ಸ್ಥಳಕ್ಕೆ ಹೋಗುವುದು  ಸಹ 'ಪ್ರಯಾಣ' ಎನಿಸಿಕೊಳ್ಳುತ್ತಿತ್ತು.

ಬೆಂಗಳೂರು ದಕ್ಷಿಣದಲ್ಲಿರುವ ಬೆಂಗಳೂರು ಡೈರಿ ಆಗ ಇದ್ದಿದ್ದು ನಗರದ ಹೊರವಲಯದಲ್ಲಿ. ಡೈರಿಯ ವೃತ್ತವನ್ನು ದಾಟಿ ಮುಂದೆ ಹೋದರೆ ಎಡಬದಿಯಲ್ಲಿತ್ತು ಡ್ರೈವ್‌ಇನ್ ಥಿಯೇಟರ್. ಎಂಭತ್ತರ ದಶಕದ ಹೊಸ ಆವಿಷ್ಕಾರವಾದ ಡ್ರೈವ್‌ಇನ್ ಥಿಯೇಟರ್  ಚಲನಚಿತ್ರವನ್ನು ವೀಕ್ಷಿಸುವ ಹೊಸ ಆಯಾಮವನ್ನು ತಂದುಕೊಟ್ಟಿತು.

ಕಾರಿನಲ್ಲಿ ಕುಳಿತೇ ದೊಡ್ಡ ಪರದೆಯಲ್ಲಿ ಚಿತ್ರವನ್ನು ವೀಕ್ಷಿಸಲು ಅನುವಾಗುವಂತೆ ಪಾರ್ಕಿಂಗ್ ವ್ಯವಸ್ಥೆ ಅಲ್ಲಿತ್ತು. ಪ್ರತಿಯೊಂದು ಕಾರಿನ ಬಳಿ ಸ್ಪೀಕರ್‌ಗಳಿದ್ದು ಚಿತ್ರದ ಶಬ್ದಗ್ರಹಣಕ್ಕೆ ಕಿಂಚಿತ್ ತೊಂದರೆಯೂ ಆಗುತ್ತಿರಲಿಲ್ಲ. ವಾಹನದಲ್ಲಿ ಕುಳಿತು ಚಿತ್ರ ವೀಕ್ಷಿಸಲು ಬಯಸದವರು ಗ್ಯಾಲರಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಅಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್, ವರ್ಲ್ಡ್ ಕಪ್ ಫುಟ್ಬಾಲ್ ಮುಂತಾದವುಗಳನ್ನು ವೀಕ್ಷಿಸಲು ಹೊಟೆಲ್, ರೆಸಾರ್ಟ್‌ಗಳಲ್ಲಿ ದೊಡ್ಡ ಪರದೆಯನ್ನು ಅಳವಡಿಸುವರಾದರೂ  ಡ್ರೈವ್‌ಇನ್ ಥಿಯೇಟರ್‌ನ  ಸಂಜೆ ಏಳರ ಶೋ ಅನುಭವವೇ ಬೇರೆ.

ಹಲವಾರು ಹಳ್ಳಿಗಳು ಸೇರಿ ನಗರವಾದ ಬೆಂಗಳೂರಿನಲ್ಲಿ ಪ್ರತಿಯೊಂದು ಹಳ್ಳಿಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿತ್ತು. ಬಸವನಗುಡಿಯ ಕಡಲೆಕಾಯಿ ಪರಿಶೆ, ನಡುರಾತ್ರಿಯಲ್ಲಿ ನಡೆಯುವ ಬೆಂಗಳೂರು ಕರಗ, ಹಲಸೂರು ಜಾತ್ರೆ, ಗ್ರಾಮದೇವತೆಗಳ ತೇರುಗಳು ಬೆಂಗಳೂರಿನ ‌ಸಂಸ್ಕೃತಿಯ ಭಾಗವಾಗಿತ್ತು. (ಈಗಲೂ ನಡೆಯುತ್ತದೆಯಾದರೂ ಹಿಂದಿನ ಉತ್ಸಾಹ ಇಂದಿಲ್ಲ.)

ನಾವಿರುವ  ಉತ್ತರ ಭಾಗದಿಂದ ದಕ್ಷಿಣದ ಜಯನಗರಕ್ಕೆ ಹೋಗಲು ಹದಿನೈದು ನಿಮಿಷ ಸಾಕಾಗುತ್ತಿತ್ತು ಎಂದರೆ ಈಗ ಅಚ್ಚರಿಯ ವಿಷಯ. ಮನಸ್ಸು ಬಂದಾಗ ಸದಾಶಿವನಗರದಿಂದ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಲೇಕ್ ವ್ಯೂಗೆ ಐಸ್‌ಕ್ರೀಂ ತಿನ್ನಲು  ಹೋಗುತ್ತಿದ್ದದ್ದು ಐದೇ ನಿಮಿಷದಲ್ಲಿ!

'ಬದಲಾವಣೆ ಜಗದ ನಿಯಮ' ಎನ್ನುವ ಮಾತನ್ನು ಎಲ್ಲರೂ ಒಪ್ಪಲೇಬೇಕು,  ಅನುಸರಿಸಬೇಕೆನ್ನುವುದು ಅನಿವಾರ್ಯ ಸತ್ಯ. ಬೆಂಗಳೂರು ನಗರವು ಆಧುನಿಕತೆಯ ಪ್ರವಾಹದಲ್ಲಿ ಮುನ್ನುಗ್ಗಿ ಸಾಗುತ್ತಿದೆ. ಅತ್ಯಂತ ವೇಗವಾಗಿ ಅಭಿವೃದ್ಧಿಯಲ್ಲಿ ಮತ್ತು ಆಧುನಿಕ ತಂತ್ರಜ್ಞಾನದ  ಬಳಕೆಯಲ್ಲಿ  ಮಂಚೂಣಿಯಲ್ಲಿರುವುದು ಜಗತ್ತಿನ ಕೆಲವು ನಗರಗಳಲ್ಲಿ  ಬೆಂಗಳೂರು ನಗರವೂ ಒಂದಾಗಿರುವುದು ಹೆಮ್ಮೆಯ ವಿಷಯ. ಬೆಂಗಳೂರು ನಗರವು ಬೃಹತ್ ಬೆಂಗಳೂರು ಆಗಿ ರೂಪಾಂತರ ಹೊಂದಿರುವ ವರ್ತಮಾನದ ಸ್ಥಿತಿಗೆ ಅತಿವೇಗವಾಗಿ ತೆರೆದುಕೊಂಡಿರುವ  ವಿಸ್ಮಯದ  ಹಿಂದೆ  ಅನೇಕ ಸಂಗತಿಗಳು ತಳಕುಹಾಕಿಕೊಂಡಿವೆ.

ಶಿಕ್ಷಣ, ವಾಣಿಜ್ಯ, ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ....ಇಂತಹ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ವೇಗದಲ್ಲಿ ಅಭಿವೃದ್ಧಿಯೆಡೆಗೆ ಸಾಗುತ್ತಿರುವ ಬೆಂಗಳೂರು ನಗರವು ವರ್ಷ ವರ್ಷಕ್ಕೂ ತನ್ನ  ರೂಪವನ್ನು ಬದಲಿಸಿಕೊಳ್ಳುತ್ತಿದೆ. ಇದರ ಜೊತೆಗೆ ದೇಶ, ವಿದೇಶಗಳಿಂದ   ವಿವಿಧ ಕಾರಣಗಳಿಗೆ ಬರುವ ವಲಸಿಗರೂ ಬೆಂಗಳೂರಿನ ರೂಪಾಂತರಕ್ಕೆ ತಮ್ಮ ಕೊಡುಗೆಯನ್ನು ಕೊಡುತ್ತಿರುವುದು ನಿಜ.  ಯಾರು, ಹೇಗೆಯೇ ಬಂದರೂ ಕೈ ಚಾಚಿ ಸ್ವಾಗತಿಸಿ ಬದುಕುವ ದಾರಿ ತೋರಿಸುವ ಬೆಂಗಳೂರು, ತನ್ನನ್ನು ನಂಬಿ ಬಂದವರಿಗೆ ಎಂದೂ ಕೈ ಬಿಡುವುದಿಲ್ಲ. 
ಆದರೆ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರು ಹೆಚ್ಚಿದ ಜನಸಂಖ್ಯೆ, ಕಾಂಕ್ರೀಟ್ ಕಟ್ಟಡಗಳಿಂದ ಮತ್ತು ಅತಿ ಕಡಿಮೆಯಾದ ಹಸಿರಿನಿಂದ ತನ್ನ  ಮೂಲರೂಪ, ಗುಣ ಎಲ್ಲವನ್ನು ಕಳೆದುಕೊಂಡಿದೆ ಎನ್ನುವ ಕಟುಸತ್ಯವನ್ನು ಅರಗಿಸಿಕೊಳ್ಳಲೇಬೇಕಾದ ಸ್ಥಿತಿಗೆ ತಲುಪಿಬಿಟ್ಟಿದ್ದೇವೆ.   ಚಿರಯೌವನೆಯಂತೆ ಕಾಣುವ ಬೆಂಗಳೂರಿನ ಇಂದಿನ ಕೃತಕ ಸೌಂದರ್ಯಕ್ಕಾಗಿ ಅಸಂಖ್ಯಾತ ವೃಕ್ಷಗಳ ಆತ್ಮಾಹುತಿಯ ತ್ಯಾಗವನ್ನು ಮರೆಯುವಂತಿಲ್ಲ.

ನಗರದ ರೂಪ, ಗಾತ್ರ, ನಿಯಮ, ಯಾವುದೇ ಬದಲಾದರೂ 'ಹಳೆ ಬೇರು ಹೊಸ ಚಿಗುರು' ಹೊತ್ತ ಮರದಂತೆ ಬೆಂಗಳೂರು ತನ್ನತನವನ್ನು ಎಂದಿಗೂ ಕಳೆದುಕೊಳ್ಳದಿರಲಿ. ನಗರವಾಸಿಗಳಿಗೆ ಸಕಲ ಮೂಲಭೂತ ಸೌಕರ್ಯವನ್ನು ಒದಗಿಸುವ ಭರದಲ್ಲಿ ವೈಪರೀತ್ಯಗಳ ಭೂತವನ್ನು  ಆಹ್ವಾನಿಸದಿರಲಿ.

ಶೋಭಾ.  

 

 

 

 

 

Category : World


ProfileImg

Written by shobha murthy