ಬಣ್ಣಬಣ್ಣದ ಈ ಲೋಕ

ಬಣ್ಣಗಳ ಲೋಕದಲ್ಲೊಂದು ಬೆಡಗಿನ ವಿಹಾರ

ProfileImg
22 Mar '24
11 min read


image

     ಬಣ್ಣ ಎಂದೊಡನೆ ಎಲ್ಲರ ಮನಸ್ಸು ಅರಳುತ್ತದೆ. ಬಣ್ಣಗಳು ಮನುಷ್ಯರ ಬದುಕಿನ ಅವಿಭಾಜ್ಯ ಅಂಗಗಳೆಂದರೆ ತಪ್ಪಾಗಲಾರದು. ಬಣ್ಣಗಳ ಬಗೆಗೆ ಮನುಷ್ಯರ ಮೋಹ ಇಂದುನಿನ್ನೆಯದಲ್ಲ. ಬಣ್ಣಗಳನ್ನು ಎರಚಾಡಿ ಸಂಭ್ರಮಿಸುವ ಒಂದು ಹಬ್ಬವೇ ನಮ್ಮಲ್ಲಿದೆ. ಹೋಳಿಹಬ್ಬ ಎಂದರೆ ಚಿಕ್ಕಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಹಾಗಾದರೆ ಬಣ್ಣಗಳು ಎಂದರೇನು? ಮೇಲ್ನೋಟಕ್ಕೆ ಎಂಥ ಬಾಲಿಶ ಪ್ರಶ್ನೆ ಎನ್ನಬಹುದು. ಆದರೆ ಬಣ್ಣವನ್ನು ಹೀಗೇ ಎಂದು ವರ್ಣಿಸುವುದು ನಿಜಕ್ಕೂ ಕಷ್ಟದ ಕೆಲಸ. ಸರಳವಾಗಿ ಅದನ್ನು ನಮ್ಮ ಕಣ್ಣಿನಲ್ಲಿ ಬೇರೆಬೇರೆ ವಸ್ತುಗಳು ಅಥವಾ ಬೇರೆಬೇರೆ ತರಂಗಾಂತರದ ಬೆಳಕು ಉಂಟುಮಾಡುವ ಸಂವೇದನೆ ಎನ್ನಬಹುದು. ಬಣ್ಣ ಎಂಬುದು ನಿಜಕ್ಕೂ ಎಲ್ಲಿದೆ? ನಾವು ನೋಡುವ ವಸ್ತುವಿನಲ್ಲಿದೆಯಾ? ಅಥವಾ ಆ ವಸ್ತುವಿನ ಮೇಲೆ ಬೀಳುವ ಬೆಳಕಿನಲ್ಲಿದೆಯಾ? ಅಥವಾ ಅದನ್ನು ನೋಡುವ ನಮ್ಮ ಕಣ್ಣಿನಲ್ಲಿದೆಯಾ? ಕೆಲವು ಬಣ್ಣಗಳು ಮಾತ್ರ ನಮಗೆ ಆನಂದ ಉಂಟುಮಾಡುವುದೇಕೆ ಮತ್ತು ಇನ್ನು ಕೆಲವು ಬಣ್ಣಗಳು ನಮ್ಮ ಕಣ್ಣಿಗೆ ಕಿರಿಕಿರಿ ಉಂಟುಮಾಡುವುದೇಕೆ?

      ಸೂರ್ಯನಿಂದ ಕೇವಲ ಬೆಳಕು ಮಾತ್ರ ಹೊರಹೊಮ್ಮುವುದಿಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ವಿದ್ಯುದಯಸ್ಕಾಂತೀಯ ರೋಹಿತದಲ್ಲಿ ಅತ್ಯಂತ ಶಕ್ತಿಶಾಲಿಯಾದ ಗಾಮಾ ಕಿರಣಗಳಿಂದ ಹಿಡಿದು ಕಡಿಮೆ ಶಕ್ತಿಯ ರೇಡಿಯೋ ಕಿರಣಗಳವರೆಗೆ ಅನೇಕ ಬೇರೆಬೇರೆ ರೀತಿಯ ಕಿರಣಗಳು ಸೂರ್ಯನಿಂದ ಪ್ರತಿಕ್ಷಣವೂ ಹೊರಹೊಮ್ಮುತ್ತಿರುತ್ತವೆ. ಆದರೆ ನಮ್ಮ ಕಣ್ಣುಗಳು ಮಾತ್ರ ಅದರ ಪೈಕಿ ಸುಮಾರು ೪೦೦ ನ್ಯಾನೋಮೀಟರ್‌ಗಳಿಂದ ಹಿಡಿದು ೭೦೦ ನ್ಯಾನೋಮೀಟರ್‌ವರೆಗಿನ ಕಿರಣಗಳನ್ನು ಮಾತ್ರ ಗ್ರಹಿಸುವ ಶಕ್ತಿ ಹೊಂದಿದೆ. ಅಂದರೆ ನಮ್ಮ ಕಣ್ಣುಗಳ ಸಾಮರ್ಥ್ಯ ಸೀಮಿತ. ಈ ವ್ಯಾಪ್ತಿಯಿಂದ ಈಚೆಯಾಗಲೀ ಆಚೆಯಾಗಲೀ ಇರುವ ವಿಕಿರಣಗಳನ್ನು ನಮ್ಮ ಕಣ್ಣು ಗ್ರಹಿಸಲಾರದು. ಏಕೆಂದರೆ ನಮ್ಮ ಕಣ್ಣಿನಲ್ಲಿರುವ ಜೀವಕೋಶಗಳಿಗೆ ಆ ವಿಕಿರಣಗಳನ್ನು ಗ್ರಹಿಸುವ ಶಕ್ತಿಯಿಲ್ಲ. ಈ ವ್ಯಾಪ್ತಿಯನ್ನೇ ನಾವು ದೃಗ್ಗೋಚರ ಬೆಳಕು ಎನ್ನುತ್ತೇವೆ. ಈ ವ್ಯಾಪ್ತಿಯ ನಡುಮಧ್ಯ÷ದಲ್ಲಿ, ಅಂದರೆ ೫೫೦ ನ್ಯಾನೋಮೀಟರ್‌ಗಳ ಆಚೀಚೆ ನಮ್ಮ ಕಣ್ಣುಗಳ ಸಾಮರ್ಥ್ಯ ಗರಿಷ್ಠ ಮಟ್ಟದಲ್ಲಿರುತ್ತದೆ. ಕಣ್ಣುಗಳು ಅದಕ್ಕೆ ಅತ್ಯುತ್ತಮವಾಗಿ ಸ್ಪಂದಿಸುತ್ತದೆ. ಈ ವ್ಯಾಪ್ತಿಯಲ್ಲಿರುವುದು ಹಸಿರು. ಆದ್ದರಿಂದಲೇ ಎಲ್ಲರಿಗೂ ಹಸಿರು ಎಂದರೆ ಬಹಳ ಆನಂದದಾಯಕ, ಕಣ್ಣುಗಳಿಗೆ ತಂಪನ್ನೀಯುವ ಬಣ್ಣವೆಂದೇ ಹಸಿರು ಪ್ರಸಿದ್ಧವಾಗಿದೆ. (ಈ ವ್ಯಾಪ್ತಿಯನ್ನು ನಿಖರವಾಗಿ ೪೦೦ರಿಂದ ೭೦೦ ನ್ಯಾನೋಮೀಟರ್ ಎಂದು ಹೇಳಲಾಗುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಕೆಲವು ನ್ಯಾನೋಮೀಟರ್‌ಗಳಷ್ಟು ವ್ಯತ್ಯಾಸ ಬರಬಹುದು. ಆದರೆ ಇದನ್ನು ಒಂದು ಸರಾಸರಿಯಾಗಿ ಪರಿಗಣಿಸಲು ಅಡ್ಡಿಯಿಲ್ಲ).

      ನಮ್ಮ ಕಣ್ಣಿನಲ್ಲಿ ಎರಡು ರೀತಿಯ ಜೀವಕೋಶಗಳಿವೆ. ಅವುಗಳನ್ನು ದಂಡಕೋಶಗಳು ಮತ್ತು ಶಂಕುಕೋಶಗಳು ಎನ್ನುತ್ತಾರೆ. ದಂಡಕೋಶಗಳು ಬೆಳಕಿನ ತೀವ್ರತೆಗೆ ಸ್ಪಂದಿಸುತ್ತವೆ ಹಾಗೂ ಶಂಕುಕೋಶಗಳು ಬಣ್ಣಗಳಿಗೆ ಸ್ಪಂದಿಸುತ್ತವೆ. ಶಂಕುಕೋಶಗಳಲ್ಲಿ ಮೂರು ವಿಧಗಳಿವೆ. ಇವುಗಳು ಬೇರೆಬೇರೆ ತರಂಗಾಂತರದ ಬೆಳಕಿಗೆ ಸ್ಪಂದಿಸುತ್ತವೆ. ಈ ಪೈಕಿ ಒಂದು ವಿಧದ ಶಂಕುಕೋಶ ಇಲ್ಲವಾದರೆ ಅಂಥವರು ಕೆಲವು ಬಣ್ಣಗಳನ್ನು ಗುರುತಿಸಲಾರರು. ಕೆಲವರು ಕೆಂಪು ಮತ್ತು ಹಸಿರು ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲಾರರು ಹಾಗೂ ಇನ್ನು ಕೆಲವರು ನೀಲಿ ಮತ್ತು ಹಳದಿ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲಾರರು. ಎರಡು ವಿಧದ ಶಂಕುಕೋಶಗಳಿಲ್ಲದಿದ್ದರೆ ಆ ವ್ಯಕ್ತಿಗೆ ಸಂಪೂರ್ಣ ಬಣ್ಣಗುರುಡು ಉಂಟಗುತ್ತದೆ. ಅಂದರೆ ಅಂಥವರದ್ದು ಕೇವಲ ಕಪ್ಪುಬಿಳುಪಿನ ಪ್ರಪಂಚ. ಆದರೆ ಇಂಥ ಬಣ್ಣಗುರುಡು ತುಂಬಾ ಅಪರೂಪ. ಬಣ್ಣಗುರುಡು ಇದ್ದವರೆಲ್ಲ ಸಾಮಾನ್ಯವಾಗಿ ಕೆಲವೊಂದು ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿರುತ್ತಾರೆ ಹಾಗೂ ಯಾವ ಬಣ್ಣಗಳನ್ನು ಸರಿಯಾಗಿ ಗುರುತಿಸಲಾರರೋ ಆ ಬಣ್ಣಗಳನ್ನು ಸಹ ಗುರುತಿಸುವ ಶಕ್ತಿಯನ್ನು ಅಲ್ಪಮಟ್ಟಿಗೆ ಹೊಂದಿರುತ್ತಾರೆ. ದಂಡಕೋಶಗಳ ಸಂಖ್ಯೆ ಕಡಿಮೆಯಿದ್ದರೆ ಅಂಥವರ ಸಮಸ್ಯೆಯೇ ಬೇರೆ. ಹಗಲುಹೊತ್ತಿನ ಪ್ರಕಾಶಮಾನವಾದ ಬೆಳಕಿನಲ್ಲಿ ಅವರು ಸಾಮಾನ್ಯವಾಗಿಯೇ ಎಲ್ಲರಂತೆಯೇ ನೋಡಬಲ್ಲರು. ಆದರೆ ರಾತ್ರಿಯಾಗುತ್ತಿದ್ದಂತೆ ಮಂದಬೆಳಕಿನಲ್ಲಿ ಅವರಿಗೆ ನೋಡಲು ಕಷ್ಟವಾಗುತ್ತದೆ. (ಆದರೆ ಇದು ವಿಟಮಿನ್ ಎ ಕೊರತೆಯಿಂದ ಉಂಟಾಗುವ ಇರುಳುಗುರುಡುತನವಲ್ಲ. ಅದು ಸಂಪೂರ್ಣ ಬೇರೆಯೇ ಆದ ಸಮಸ್ಯೆ). 

      ಚಂದ್ರನ ಬೆಳಕಿನಲ್ಲಿ ಬಣ್ಣಗಳು ಕಾಣುವುದಿಲ್ಲ. ಎಂದಾದರೂ ನೀವು ರಾತ್ರಿಯಲ್ಲಿ ಕಾಡಿನಲ್ಲಿ ನಡೆದಾಡಿದ್ದರೆ ಮರಗಳೆಲ್ಲ ಹಸಿರಿನ ಬದಲಾಗಿ ಕಪ್ಪಾಗಿ ಕಾಣುವುದನ್ನು ಗಮನಿಸಿರುತ್ತೀರಿ. ಹಗಲಿನಲ್ಲಿ ಅಚ್ಚಹಸಿರಾಗಿರುವ ಮರಗಳು ರಾತ್ರಿಯಲ್ಲಿ ಕಪ್ಪಾಗಿದ್ದು ಹೇಗೆ ಎಂದು ಅಚ್ಚರಿಪಟ್ಟಿದ್ದೀರಾ? ಇದಕ್ಕೆ ವಿಶೇಷ ಕಾರಣವೇನೂ ಇಲ್ಲ. ಚಂದ್ರನ ಬೆಳಕಿನಲ್ಲಿ ಬಣ್ಣಗಳಿಲ್ಲ ಎಂಬುದೂ ಇದರರ್ಥವಲ್ಲ. ಅದು ಕೇವಲ ನಮ್ಮ ಶಂಕುಕೋಶಗಳ ಮಿತಿಯಷ್ಟೇ. ಬಣ್ಣಗಳನ್ನು ಗುರುತಿಸುವ ಶಂಕುಕೋಶಗಳಿಗೆ ಬೆಳಕಿನ ತೀವ್ರತೆ ಒಂದು ಗೊತ್ತಾದ ಮಟ್ಟದಲ್ಲಿರಬೇಕು ಅಥವಾ ಅದಕ್ಕಿಂತ ಜಾಸ್ತಿ ಇರಬೇಕು. ಅದಕ್ಕಿಂತ ಕಡಿಮೆ ತೀವ್ರತೆಯ ಬೆಳಕಿಗೆ ಶಂಕುಕೋಶಗಳು ಸ್ಪಂದಿಸುವುದಿಲ್ಲ. ಚಂದ್ರನ ಬೆಳಕಿನ ಪ್ರಕಾಶ ಆ ಗೊತ್ತಾದ ಪ್ರಕಾಶಕ್ಕಿಂತ ಕಡಿಮೆ ಇರುತ್ತದೆ. ಹಾಗಾಗಿ ಚಂದ್ರನ ಬೆಳಕಿನಲ್ಲಿ ಬಣ್ಣಗಳು ಕಾಣಿಸುವುದಿಲ್ಲ ಅಷ್ಟೆ. 

      ಮಳೆಬಿಲ್ಲು ಎಲ್ಲರಿಗೂ ಗೊತ್ತು. ಅದನ್ನು ಶೃಂಗಾರ ರಸಕವಿಗಳು ಕಾಮನಬಿಲ್ಲು ಎಂದೇ ಕರೆದರು. ಏಳು ಬಣ್ಣಗಳಿಂದ ಕಂಗೊಳಿಸುವ ಕಾಮನಬಿಲ್ಲು ನಮಗೆ ಬಿಲ್ಲಿನಂತೆ ಕಾಣುತ್ತದೆಯಾದರೂ ಅದು ವಾಸ್ತವವಾಗಿ ಸಂಪೂರ್ಣ ವೃತ್ತಾಕಾರವಾಗಿರುತ್ತದೆ. ಆದರೆ ಈ ವೃತ್ತದ ಇನ್ನರ್ಧ ಭಾಗಕ್ಕೆ ಮರಗಿಡಗಳು ಅಡ್ಡವಾಗಿರುತ್ತವೆ ಅಥವಾ ದಿಗಂತ ಅಡ್ಡವಾಗಿರುತ್ತದೆ. ಆದ್ದರಿಂದ ನಮಗೆ ಅದು ಬಿಲ್ಲಿನಾಕಾರದಲ್ಲಿ ಕಾಣುತ್ತದೆ ಅಷ್ಟೆ. ಎತ್ತರದ ಗುಡ್ಡ ಅಥವಾ ಪರ್ವತದ ನೆತ್ತಿಯಮೇಲೆ ನಿಂತು ನೋಡಿದರೆ ಅದು ಬಿಲ್ಲಲ್ಲ, ಸಂಪೂರ್ಣವೃತ್ತ ಎಂಬುದು ನಮಗೆ ಗೊತ್ತಾಗುತ್ತದೆ. ಅದರ ಏಳು ಬಣ್ಣಗಳ ಮನಮೋಹಕ ಸೌಂದರ್ಯಕ್ಕೆ ಮಾರುಹೋಗಿಯೇ ಕವಿಗಳು ಅದನ್ನು ಕಾಮನಬಿಲ್ಲು ಎಂದು ಕರೆದರು. ಇಂದಿಗೂ ಕೂಡ ಮಳೆಬಿಲ್ಲು ಎಂಬ ಪದಕ್ಕಿಂತ ಕಾಮನಬಿಲ್ಲು ಎಂಬ ಪದವೇ ಹೆಚ್ಚು ಪ್ರಸಿದ್ಧವಾಗಿದೆ.

      ಕಾಮನಬಿಲ್ಲು ಉಂಟಾಗಲು ಕೆಲವು ಸಂದರ್ಭಗಳಿರಬೇಕು. ಮಳೆಬಂದು ಬಿಟ್ಟ ಸ್ವಲ್ಪಹೊತ್ತಿನ ನಂತರ ಸೂರ್ಯನ ಬಿಸಿಲಿದ್ದರೆ ಆಗ ಕಾಮನಬಿಲ್ಲು ಕಾಣುತ್ತದೆ. ಆದರೆ ಅದು ಯಾವಾಗಲೂ ಆಗಸದಲ್ಲಿ ಸೂರ್ಯನ ವಿರುದ್ಧ ದಿಕ್ಕಿಗೆ ಕಾಣುತ್ತದೆ. ಅದೇನೋ ಸರಿ, ಆದರೆ ಈ ಏಳು ಬಣ್ಣಗಳು ಎಲ್ಲಿಂದ ಬಂದವು ಎಂದು ಎಂದಾದರೂ ಯೋಚಿಸಿದ್ದೀರಾ? ಅವು ಎಲ್ಲಿಂದಲೂ ಬರಲಿಲ್ಲ. ಸೂರ್ಯನ ಬಿಳಿಯ ಬೆಳಕಿನಲ್ಲಿ ವಿವಿಧ ತರಂಗಾಂತರದ ಕಿರಣಗಳಿರುತ್ತವೆ. ಆ ಬೆಳಕನ್ನು ಒಂದು ಪಟ್ಟಕದ ಮೂಲಕ ಹಾಯಿಸಿದಾಗ ಅದರ ಬೇರೆಬೇರೆ ತರಂಗಾಂತರದ ಅಲೆಗಳ ಬಾಗುವಿಕೆ ಬೇರೆಬೇರೆಯಾಗಿರುತ್ತದೆ. ಹಾಗಾಗಿ ಎಲ್ಲ ಬಣ್ಣಗಳು ವಿಭಜನೆಗೊಂಡು ನಯನಮನೋಹರ ದೃಶ್ಯವನ್ನು ಸೃಷ್ಟಿಸುತ್ತವೆ. ಇದನ್ನು ಮೊದಲಬಾರಿಗೆ ತೋರಿಸಿಕೊಟ್ಟಿದ್ದು ಗುರುತ್ವ ನಿಯಮವನ್ನು ರೂಪಿಸಿ ಪ್ರಖ್ಯಾತನಾದ ವಿಜ್ಞಾನಿ ಸರ್ ಐಸಾಕ್ ನ್ಯೂಟನ್. ಮಳೆ ಬಂದು ನಿಂತಮೇಲೆ ಮೋಡಗಳ ಮೇಲೆ ಉಳಿದಿರುವ ಮಳೆಹನಿಗಳು ಪಟ್ಟಕಗಳಂತೆ ವರ್ತಿಸುತ್ತವೆ. ಹಾಗಾಗಿ ಕಾಮನಬಿಲ್ಲು ಮೂಡುತ್ತದೆ. ಇದು ಕೇವಲ ಮಳೆ ಬಂದು ನಿಂತಮೇಲೆ ಮಾತ್ರವಲ್ಲ, ಅನೇಕ ಜಲಪಾತಗಳ ಬಳಿಯಲ್ಲೂ ಬೀಳುತ್ತಿರುವ ನೀರಿನ ಹನಿಗಳು ಇದೇ ಕೆಲಸ ಮಾಡುವುದರಿಂದ ಅಲ್ಲೇ ಸನಿಹದಲ್ಲಿ ಕಾಮನಬಿಲ್ಲಿನ ದರ್ಶನ ಆಗುತ್ತದೆ. 

      ನಾವು ದೃಗ್ಗೋಚರ ಬೆಳಕು ಎಂದು ಕರೆಯುವ ಬೆಳಕು ಕೇವಲ ನಮ್ಮ ದೃಷ್ಟಿಯಲ್ಲಿ ದೃಗ್ಗೋಚರವಷ್ಟೇ. ೪೦೦ ನ್ಯಾನೋಮೀಟರ್‌ಗಳಿಂದ ಹಿಡಿದು ೭೦೦ ನ್ಯಾನೋಮೀಟರ್ ತರಂಗಾಂತರ ನಮ್ಮ ಕಣ್ಣುಗಳಿಗೆ ಗೋಚರವಾಗುವ ಬೆಳಕಿನ ಅಂತರ. ಆದರೆ ಅನೇಕ ಪ್ರಾಣಿಪಕ್ಷಿಗಳು ಅತಿನೇರಳೆ ಕಿರಣಗಳನ್ನೂ ನೋಡಬಲ್ಲವು. ಕೆಸ್ಟ್ರೆಲ್ ಎಂಬ ಒಂದು ಜಾತಿಯ ಬೇಟೆಹಕ್ಕಿಗಳು ಅತಿನೇರಳೆ ಕಿರಣಗಳನ್ನು ನೋಡಬಲ್ಲ ಹಕ್ಕಿಗಳ ಪೈಕಿ ಪ್ರಮುಖವಾದವು. ಅದರಿಂದ ಇವಕ್ಕೇನು ಪ್ರಯೋಜನ ಎಂಬ ಪ್ರಶ್ನೆ ಅನೇಕ ವರ್ಷಗಳ ಕಾಲ ವಿಜ್ಞಾನಿಗಳನ್ನು ಕಾಡುತ್ತಿತ್ತು. ಕೊನೆಗೂ ಸಮಸ್ಯೆ ಪರಿಹಾರವಾಯಿತು. ಈ ಹಕ್ಕಿಗಳು ವೋಲ್ ಎಂಬ ಒಂದು ಜಾತಿಯ ಮೂಷಿಕದಂಥ ಸಸ್ತನಿಗಳನ್ನು ಬೇಟೆಯಾಡುತ್ತವೆ. ಇವು ತಾವು ಸಾಗಿದ ದಾರಿಯಲ್ಲೆಲ್ಲ ಮೂತ್ರವಿಸರ್ಜಿಸುತ್ತ ಹೋಗುತ್ತವೆ. ಎತ್ತರದಿಂದ ಇವು ಸಾಗಿರುವ ದಾರಿಯನ್ನು ಗಮನಿಸುವ ಕೆಸ್ಟ್ರೆಲ್‌ಗಳಿಗೆ ವೋಲ್‌ಗಳ ಮೂತ್ರ ಅತಿನೇರಳೆ ಕಿರಣಗಳ ಪ್ರಕಾಶದಲ್ಲಿ ಹಳದಿಯಾಗಿ ಕಾಣುತ್ತದೆ. ಆದ್ದರಿಂದ ಅವು ಸಾಗಿದ ಹಾದಿಯನ್ನು ಕಂಡುಹಿಡಿದು ಕೆಸ್ಟ್ರೆಲ್‌ಗಳು ಬೇಟೆಯಾಡುತ್ತವೆ.

      ಸಾಮಾನ್ಯವಾಗಿ ಬೇರೆಲ್ಲ ಪ್ರಾಣಿಗಳ ಕಣ್ಣಿಗೆ ಹೋಲಿಸಿದರೆ ಮಾನವನ ಕಣ್ಣುಗಳು ಅತ್ಯಂತ ಪರಿಪೂರ್ಣವಾದವು ಎಂದೇ ಹೇಳಬಹುದು. ಬೈನಾಕ್ಯುಲರ್ ವಿಷನ್ ಎಂದು ಕರೆಯಲಾಗುವ ಮೂರು ಆಯಾಮಗಳ ದೃಷ್ಟಿಯಲ್ಲಿ ಮಾನವ ಮತ್ತು ಇತರ ಪ್ರೈಮೇಟ್‌ಗಳು ಬೇರೆಲ್ಲ ಪ್ರಾಣಿಗಳನ್ನು ಹಿಂದೆ ಹಾಕುತ್ತವೆ. ಜೊತೆಗೆ ಈ ಪ್ರಾಣಿಗಳದ್ದು ಅತ್ಯುತ್ತಮ ವರ್ಣದೃಷ್ಟಿ. ಆದರೆ ಬೇರೆ ಸಸ್ತನಿಗಳಿಗೆ ವರ್ಣದೃಷ್ಟಿಯಿಲ್ಲ. ಹುಲಿ, ಸಿಂಹ, ಚಿರತೆ ಇತ್ಯಾದಿ ಬೇಟೆಗಾರ ಬೆಕ್ಕುಗಳ ದೃಷ್ಟಿಶಕ್ತಿ ನಮಗಿಂತ ತೀಕ್ಷ್ಣವಾಗಿರುತ್ತದೆ. ಅಂದರೆ ರಾತ್ರಿಯ ವೇಳೆ ಅವು ಅತ್ಯಂತ ಕಡಿಮೆ ಬೆಳಕಿನಲ್ಲೇ ನೋಡಬಲ್ಲವು. ನಾವು ವಸ್ತುಗಳನ್ನು ನೋಡಲು ಎಷ್ಟು ಬೆಳಕು ಅಗತ್ಯವೋ ಆ ಬೆಳಕಿನ ಏಳರಲ್ಲಿ ಒಂದಂಶದಷ್ಟೇ ಬೆಳಕು ಈ ಪ್ರಾಣಿಗಳಿಗೆ ಸಾಕಾಗುತ್ತದೆ. ಏಕೆಂದರೆ ಅವುಗಳ ಕಣ್ಣುಗಳಲ್ಲಿ ಬೆಳಕನ್ನು ಗ್ರಹಿಸುವ ದಂಡಕೋಶಗಳ ಸಂಖ್ಯೆ ನಮಗಿಂತ ಹೆಚ್ಚಿರುತ್ತದೆ. ಜೊತೆಗೆ ಕಣ್ಣುಗುಡ್ಡೆಗಳೂ ನಮ್ಮ ಕಣ್ಣುಗುಡ್ಡೆಗಳಿಗಿಂತ ದೊಡ್ಡದಗಿದ್ದು ಹೆಚ್ಚು ಬೆಳಕನ್ನು ಗ್ರಹಿಸುತ್ತವೆ. ಗೂಬೆಗಳ ಕಣ್ಣುಗಳೂ ಸಹ ಇದೇ ರೀತಿ ಕಾರ್ಯನಿರ್ವಹಿಸುತ್ತವೆ. ಈ ಪ್ರಾಣಿಗಳು ರಾತ್ರಿದೃಷ್ಟಿಗಾಗಿ ವರ್ಣದೃಷ್ಟಿಯನ್ನು ತ್ಯಾಗಮಾಡಿವೆ. ಆದರೆ ಗೂಬೆಗಳನ್ನು ಹೊರತುಪಡಿಸಿ ಹಗಲಿನಲ್ಲಿ ಕ್ರಿಯಾಶೀಲವಾಗಿರುವ ಇನ್ನೆಲ್ಲ ಹಕ್ಕಿಗಳೂ ಅತ್ಯುತ್ತಮ ವರ್ಣದೃಷ್ಟಿಯನ್ನು ಹೊಂದಿವೆ.

      ರಾತ್ರಿಯ ಆಗಸದಲ್ಲಿ ನಾವೆಲ್ಲ ನಕ್ಷತ್ರಗಳನ್ನು ನೋಡಿರುತ್ತೇವೆ. ನಮ್ಮ ಬರಿಗಣ್ಣಿಗೆ ಸುಮಾರು ಆರುಸಾವಿರ ನಕ್ಷತ್ರಗಳು ಕಾಣುತ್ತವೆ. ಆ ಪೈಕಿ ಮೂರುಸಾವಿರ ನಕ್ಷತ್ರಗಳು ದಿಗಂತದ ಇನ್ನೊಂದು ಭಾಗದಲ್ಲಿ ಮರೆಯಾಗಿರುತ್ತವೆ. ಹಾಗಾಗಿ ನಮಗೆ ಇನ್ನುಳಿದ ಮೂರುಸಾವಿರ ನಕ್ಷತ್ರಗಳು ಮಾತ್ರ ಯಾವಾಗಲೂ ದೃಷ್ಟಿಗೆ ಲಭ್ಯ. (ನಗರೀಕರಣ ಮತ್ತು ದ್ಯುತಿಮಾಲಿನ್ಯದ ಪರಿಣಾಮ ಇಂದು ನಿತ್ಯ ನಾವು ನೋಡಬಹುದಾದ ನಕ್ಷತ್ರಗಳ ಸಂಖ್ಯೆ ಇಳಿಮುಖವಾಗುತ್ತಿದೆ ಅದು ಬೇರೆ ವಿಚಾರ). ಮೇಲ್ನೋಟಕ್ಕೆ ಈ ಎಲ್ಲ ನಕ್ಷತ್ರಗಳೂ ಬಿಳಿಯಾಗಿ ಕಂಡರೂ ಸೂಕ್ಷö್ಮವಾಗಿ ಅವಲೋಕಿಸಿದರೆ ಇವುಗಳ ಬಣ್ಣದಲ್ಲಿ ವ್ಯತ್ಯಾಸಗಳಿರುವುದು ನಮ್ಮ ಗಮನಕ್ಕೆ ಬರುತ್ತದೆ. ಕೆಲವು ಕೆಂಬಣ್ಣ ಹೊಂದಿದ್ದರೆ ಇನ್ನು ಕೆಲವು ನೀಲಿಬಣ್ಣ ಹೊಂದಿರುತ್ತವೆ, ಇನ್ನೂ ಕೆಲವು ಹಳದಿ, ಮತ್ತೆ ಕೆಲವು ಕಿತ್ತಳೆ ಬಣ್ಣ ಹೀಗೆ ಬೇರೆಬೇರೆ ಬಣ್ಣಗಳಲ್ಲಿರುತ್ತವೆ. ಇದಕ್ಕೆಲ್ಲ ಕಾರಣವೇನೆಂದು ಸುಮಾರು ಇನ್ನೂರು ವರ್ಷಗಳ ಹಿಂದೆ ವಿಜ್ಞಾನಿಗಳು ಕಂಡುಹಿಡಿದರು. ನಕ್ಷತ್ರಗಳ ಬೆಳಕಿನ ಬಣ್ಣಕ್ಕೂ ಅವುಗಳ ಮೇಲ್ಮೈ ಉಷ್ಣತೆಗೂ ನೇರ ಸಂಬಂಧವಿದೆ ಎಂದು ಕಂಡುಹಿಡಿದರು. ನಮಗೀಗಾಲೇ ತಿಳಿದಿರುವಂತೆ ನಕ್ಷತ್ರಗಳ ದ್ರವ್ಯರಾಶಿ ಬೇರೆಬೇರೆಯಾಗಿರುತ್ತದೆ. ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳು ಅತ್ಯಂತ ಕಡಿಮೆ ಇಂಧನವನ್ನು ಉರಿಸುತ್ತ ಬಿಲಿಯಾಂತರ ವರ್ಷಗಳವರೆಗೆ ಬಾಳಿಬದುಕುತ್ತವೆ. ಅದರ ಪರಿಣಾಮವಾಗಿ ಅವುಗಳದ್ದು ತೀರಾ ಮಂದವಾದ ಪ್ರಕಾಶ, ಅತಿ ಕಡಿಮೆ ಮೇಲ್ಮೈ ಉಷ್ಣತೆ. ಹಾಗಾಗಿ ಅವುಗಳ ಮೇಲ್ಮೈ ಕೆಂಪಾಗಿರುತ್ತದೆ. ಇನ್ನು ಸ್ವಲ್ಪ ಹೆಚ್ಚಿನ ಉಷ್ಣತೆ ಇದ್ದರೆ ಕಿತ್ತಳೆ ಬಣ್ಣ ಬರುತ್ತದೆ. ಮತ್ತೂ ಸ್ವಲ್ಪ ಹೆಚ್ಚಿನ ಉಷ್ಣತೆಯಿದ್ದರೆ ಹಳದಿ ಬಣ್ಣ ಬರುತ್ತದೆ. ಉಷ್ಣತೆ ಐವತ್ತುಸಾವಿರ ಡಿಗ್ರಿ ಸೆಲ್ಷಿಯಸ್ ಮೀರಿದರೆ ಅಂಥ ನಕ್ಷತ್ರಗಳ ಶಕ್ತಿಯೆಲ್ಲ ನೀಲಿ ತರಂಗಾಂತರದಲ್ಲಿ ಹೆಚ್ಚಾಗಿ ಬಿಡುಗಡೆಯಾಗುತ್ತದೆ. ಆದ್ದರಿಂದ ಅಂಥ ನಕ್ಷತ್ರಗಳು ನೀಲಿಬಣ್ಣದಲ್ಲಿ ಕಂಗೊಳಿಸುತ್ತವೆ.

      ವಿಶ್ವವು ವಿಸ್ತರಿಸುತ್ತಿದೆ ಎಂಬುದನ್ನು ಕಂಡುಹಿಡಿದು, ಅದರ ಆಧಾರದ ಮೇಲೆ ಮಹಾಸ್ಫೋಟ ಸಿದ್ಧಾಂತವನ್ನು (ಬಿಗ್‌ಬ್ಯಾಂಗ್ ಥಿಯರಿ) ಪ್ರತಿಪಾದಿಸಿದ ಎಡ್ವಿನ್ ಹಬಲ್ ತನ್ನ ಸಿದ್ಧಾಂತಕ್ಕೆ ಪುರಾವೆ ಒದಗಿಸಲು ಬಣ್ಣಗಳನ್ನೇ ಅವಲಂಬಿಸಿದ್ದ ಎಂದರೆ ನಂಬುತ್ತೀರಾ? ಆದರೆ ಇದು ನಿಜ. ವಿಶ್ವದಲ್ಲಿರುವ ನೂರಾರು, ಸಾವಿರಾರು ಕೋಟಿ ನಕ್ಷತ್ರಗಳೆಲ್ಲ ಒಂದರಿಂದ ಒಂದು ದೂರ ಸರಿಯುತ್ತಿವೆ ಎಂದು ಹಬಲ್ ಕಂಡುಹಿಡಿದ. ಸಾವಿರಾರು, ಲಕ್ಷಾಂತರ ಮತ್ತು ಇನ್ನು ಕೆಲವು ಕೋಟ್ಯಾಂತರ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ತಾರೆಗಳು ದೂರ ಸರಿಯುತ್ತಿರುವುದನ್ನು ನಾವು ಬರಿಗಣ್ಣಿನಿಂದ ಅಥವಾ ದೂರದರ್ಶಕಗಳ ಸಹಾಯದಿಂದಲೂ ನೋಡಿ ಗುರುತಿಸಲು ಸಾಧ್ಯವಿಲ್ಲ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಭೂಮಿಯ ಮೇಲೆಯೇ ನಿಮ್ಮಿಂದ ಹತ್ತು ಮೀಟರ್ ದೂರದಲ್ಲಿರುವ ವಾಹನವೊಂದನ್ನು ಗಮನಿಸಿದರೆ ಅದು ನಿಮ್ಮತ್ತ ಬರುತ್ತಿದೆಯೋ ದುರ ಹೋಗುತ್ತಿದೆಯೋ ಎಂದು ಸುಲಭವಾಗಿ ಹೇಳಬಲ್ಲಿರಿ. ಆ ದೂರ ನೂರು ಮೀಟರ್ ಆದಾಗಲೂ ಹೇಳಬಲ್ಲಿರಿ. ಆದರೆ ದೂರ ಒಂದು ಕಿಲೋಮೀಟರ್ ಆಗಿದ್ದರೆ ನಿಮಗೆ ಇದನ್ನು ಹೇಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ವಾಹನದ ದೂರ ಹೆಚ್ಚಿದಂತೆಲ್ಲ ಅದು ನಿಜಕ್ಕೂ ನಮ್ಮತ್ತ ಬರುತ್ತಿದೆಯೋ, ದೂರ ಹೋಗುತ್ತಿದೆಯೋ ಅಥವಾ ನಿಂತಲ್ಲೇ ನಿಂತಿದೆಯೋ ಎಂಬುದನ್ನೆಲ್ಲ ಹೇಳುವುದು ಕಷ್ಟವಾಗುತ್ತ ಹೋಗುತ್ತದೆ. ಇನ್ನು ನಕ್ಷತ್ರಗಳಂತೂ ನಮ್ಮಿಂದ ಕಲ್ಪನಾತೀತ ದೂರದಲ್ಲಿವೆ. ಅವುಗಳ ಚಲನೆಯನ್ನು ಹಾಗೆ ಗುರುತಿಸುವುದು ಸಾಧ್ಯವೇ ಇಲ್ಲ. ಅದಕ್ಕೆ ಹಬಲ್ ಕಂಡುಕೊAಡ ಉಪಾಯವೆಂದರೆ ಆ ನಕ್ಷತ್ರಗಳ ರೋಹಿತಗಳನ್ನು ಅಭ್ಯಾಸ ಮಾಡುವುದು. ಇಲ್ಲಿ ಡಾಪ್ಲರ್ ಎಂಬ ಇನ್ನೊಬ್ಬ ವಿಜ್ಞಾನಿಯ ಸಿದ್ಧಾಂತ ನೆರವಿಗೆ ಬರುತ್ತದೆ.

      ಡಾಪ್ಲರ್ ಪರಿಣಾಮ ಎಂಬ ಪರಿಣಾಮವೊಂದನ್ನು ನೀವು ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲೆಯ ವಿಜ್ಞಾನ ತರಗತಿಗಳಲ್ಲಿ ಓದಿರಬಹುದು. ಕಾರೊಂದು ನಿಮ್ಮಿಂದ ದೂರದಲ್ಲಿ ಅಲಾರಂ ಮೊಳಗಿಸುತ್ತ ನಿಮ್ಮತ್ತ ಬರುತ್ತಿದ್ದರೆ ಅದು ಹತ್ತಿರ ಬರುವಾಗ ಅದರ ಶಬ್ದದ ಆವರ್ತನೆ ಹೆಚ್ಚುತ್ತಿದ್ದಂತೆ ಭಾಸವಾಗುತ್ತದೆ ಮತ್ತು ಕಾರು ನಿಮ್ಮನ್ನು ದಾಟಿ ದೂರದೂರ ಹೋಗುತ್ತಿದ್ದಂತೆ ಶಬ್ದದ ಆವರ್ತನಾಂಕ ಕಡಿಮೆಯಾಗುತ್ತ ಹೋಗುತ್ತದೆ. ಶಬ್ದವು ಒಂದು ಬಗೆಯ ಅಲೆ. ಹಾಗಾದರೆ ಬೆಳಕೂ ಕೂಡ ಅಲೆಯೇ ಅಲ್ಲವೇ? ಶಬ್ದಕ್ಕೆ ಅನ್ವಯಿಸಬಹುದಾದ ಡಾಪ್ಲರ್ ಪರಿಣಾಮವನ್ನು ಬೆಳಕಿಗೆ ಕೂಡ ಅನ್ವಯಿಸಬಹುದಲ್ಲವೇ ಎಂದು ಹಬಲ್ ಯೋಚಿಸಿದ. ಆದ್ದರಿಂದ ಬೇರೆಬೇರೆ ನಕ್ಷತ್ರಗಳ ರೋಹಿತವನ್ನು ಅವನು ಅಭ್ಯಾಸಮಾಡಲು ಆರಂಭಿಸಿದ. ಶಬ್ದದ ಆವರ್ತನಾಂಕವನ್ನು ಕಂಡುಹಿಡಿದಂತೆ ಬೆಳಕಿನ ಆವರ್ತನಾಂಕವನ್ನೂ ಕಂಡುಹಿಡಿಯುವುದು ಇದಕ್ಕೆ ಅತ್ಯಂತ ಸರಳವಾದ ಪರಿಹಾರ. ಆದರೆ ಬೆಳಕಿನಲ್ಲಿ ನಾವು ಈಗಾಗಲೇ ಏಳು ಬೇರೆಬೇರೆ ಬಣ್ಣಗಳ (ವಾಸ್ತವವಾಗಿ ಇವು ಕೇವಲ ಏಳಲ್ಲ, ಅದಕ್ಕಿಂತಲೂ ಹೆಚ್ಚು ಬೇರೆಬೇರೆ ಬಣ್ಣಗಳನ್ನು ಗುರುತಿಸಬಹುದು. ನಮ್ಮ ಕಣ್ಣುಗಳ ಸೀಮಿತ ಸಾಮರ್ಥ್ಯದಲ್ಲಿ ನಾವು ಅವುಗಳನ್ನು ಏಳು ಬಣ್ಣಗಳನ್ನಾಗಿ ವಿಭಜಿಸಿದ್ದೇವೆ ಅಷ್ಟೆ) ಅಲೆಗಳಿವೆ ಎಂದು ತಿಳಿದಿದ್ದೇವೆ. ಈ ಪೈಕಿ ಅತ್ಯಂತ ಕಡಿಮೆ ಆವರ್ತನಾಂಕದ ಅಲೆಗಳು ಕೆಂಪಾಗಿದ್ದರೆ ಅತ್ಯಂತ ಹೆಚ್ಚಿನ ಆವರ್ತನಾಂಕದ ಅಲೆಗಳು ನೀಲಿ ಬಣ್ಣದ್ದಾಗಿರುತ್ತವೆ. ಡಾಪ್ಲರ್ ಪರಿಣಾಮದ ಪ್ರಕಾರ ನಕ್ಷತ್ರಗಳು ನಮ್ಮಿಂದ ದೂರ ಸರಿಯುತ್ತಿದ್ದರೆ ಅವುಗಳ ಬೆಳಕಿನ ಆವರ್ತನಾಂಕ ನಿಧಾನವಾಗಿ ಕಡಿಮೆಯಾಗುತ್ತ ಹೋಗಬೇಕಲ್ಲ? ಹಾಗಾದರೆ ಅವುಗಳ ಬೆಳಕಿನ ರೋಹಿತ ನಿಧಾನವಾಗಿ ಕೆಂಬಣ್ಣದತ್ತ ಸರಿಯುತ್ತದೆ. ಇದನ್ನೇ ರೆಡ್‌ಶಿಫ್ಟ್ ಎನ್ನುತ್ತಾರೆ. ಹಬಲ್ ತಾನು ಗಮನಿಸಿದ ಎಲ್ಲ ನಕ್ಷತ್ರಗಳ ರೋಹಿತವೂ ಕೆಂಪಿನತ್ತ ಸರಿಯುತ್ತಿರುವುದನ್ನು ಗಮನಿಸಿದ. ಇನ್ನೂ ಹೆಚ್ಚುಹೆಚ್ಚು ನಕ್ಷತ್ರಗಳನ್ನು ಗಮನಿಸಿದಂತೆ ಅವೆಲ್ಲವುಗಳ ರೋಹಿತ ಕೆಂಪಿನತ್ತಲೇ ಸರಿಯುತ್ತಿರುವುದನ್ನು ಗಮನಿಸಿದ. ಇದರಿಂದ ಅವನಿಗೆ ಒಂದು ವಿಷಯ ಸ್ಪಷ್ಟವಾಯಿತು. ಅಂದರೆ ಎಲ್ಲ ನಕ್ಷತ್ರಗಳೂ ನಮ್ಮಿಂದ ದೂರ ಸರಿಯುತ್ತಿವೆ ಎಂದು. ಈ ಮಹತ್ವದ ಆವಿಷ್ಕಾರವೇ ಬಿಗ್‌ಬ್ಯಾಂಗ್ ಎಂಬ ಅತ್ಯದ್ಭುತ ಸಿದ್ಧಾಂತಕ್ಕೆ ದಾರಿಯಾಗಿ ವಿಶ್ವದ ಹುಟ್ಟಿನ ಬಗ್ಗೆ ನಮಗೆ ತಿಳುವಳಿಕೆ ಮೂಡಿಸಿತು. 

      ಮನುಷ್ಯನ ಕಣ್ಣುಗಳ ಸಾಮರ್ಥ್ಯ ನಿಜಕ್ಕೂ ಅಪರಿಮಿತ. ನಮ್ಮ ಕಣ್ಣು ಸುಮಾರು ಒಂದು ಕೋಟಿ ಬೇರೆಬೇರೆ ಬಣ್ಣಗಳನ್ನು ನೋಡುವ ಮತ್ತು ಪ್ರತ್ಯೇಕವಾಗಿ ಗುರುತಿಸುವ ಸಾಮರ್ಥ್ಯ ಹೊಂದಿದೆ ಎಂದರೆ ನಂಬುವುದು ಕಷ್ಟ. ಇನ್ನೂ ಕೆಲವು ವಿಜ್ಞಾನಿಗಳು ಇದನ್ನು ಒಪ್ಪುವುದಿಲ್ಲ. ನಮ್ಮ ಕಣ್ಣುಗಳು ಸುಮಾರು ಮೂವತ್ತು ಬಣ್ಣಗಳನ್ನಷ್ಟೆ ನೋಡಬಲ್ಲದು ಹಾಗೂ ಗುರುತಿಸಬಲ್ಲದು ಎಂದು ಅವರು ಹೇಳುತ್ತಾರೆ. ಇವೆರಡರಲ್ಲಿ ಯಾವುದು ನಿಜ ಎಂದು ಪರೀಕ್ಷೆ ಮಾಡುವುದು ಸುಲಭದ ಕೆಲಸವಂತೂ ಅಲ್ಲ. ಏಕೆಂದರೆ ಅನೇಕ ಬಣ್ಣಗಳ ನಡುವಿನ ವ್ಯತ್ಯಾಸ ತೀರಾ ಗೌಣವಾಗಿದ್ದು ಅವುಗಳನ್ನು ನೋಡುವ ಸಾಮರ್ಥ್ಯ ಎಲ್ಲರಲ್ಲೂ ಒಂದೇರೀತಿ ಇರುವುದಿಲ್ಲ. ಕೆಲವರು ಕೆಲವು ಬಣ್ಣಗಳನ್ನು ಸ್ಪಷ್ಟವಾಗಿ ಕಾಣಬಲ್ಲರು ಹಾಗೂ ಇನ್ನು ಕೆಲವು ಬಣ್ಣಗಳನ್ನು ಅಷ್ಟೊಂದು ಸ್ಪಷ್ಟವಾಗಿ ಕಾಣಲಾರರು. ಈ ವಿಷಯದ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತಾಭಿಪ್ರಾಯ ಇಲ್ಲ. ಲಕ್ಷಾಂತರ ಬಣ್ಣಗಳನ್ನು ನೋಡುವುದು ಹಾಗಿರಲಿ, ಕಲ್ಪಿಸಿಕೊಳ್ಳುವುದಾದರೂ ನಮ್ಮ ಮನಸ್ಸಿನಲ್ಲಿ ಸಾಧ್ಯವೇ ಎಂಬ ಸಂಶಯ ಯಾರಿಗಾದರೂ ಬಂದರೆ ಅದು ಸಹಜವೇ. 

      ವಿದ್ಯುದಯಸ್ಕಾಂತೀಯ ರೋಹಿತದಲ್ಲಿ ಕೂಡ ಬಣ್ಣಗಳ ಬೇರೆಬೇರೆ ತರಂಗಾಂತರದ ಅಲೆಗಳ ನಡುವೆ ನಿಖರವಾದ ಸೀಮಾರೇಖೆ ಇರುವುದಿಲ್ಲ. ಅಂದರೆ ೪೦೦ ನ್ಯಾನೋಮೀಟರ್ ತರಂಗಾಂತರದಿಂದ ಹಿಡಿದು ೭೦೦ ನ್ಯಾನೋಮೀಟರ್ ತರಂಗಾಂತರದ ಅಲೆಗಳನ್ನು ಏಳು ಸಮಭಾಗ ಮಾಡಿ ನೇರಳೆಯಿಂದ ಕೆಂಪಿನವರೆಗೆ ಎಲ್ಲ ಬಣ್ಣಗಳಿಗೂ ಪ್ರಕೃತಿ ಸಮನಾಗಿ ಹಂಚಿದೆ ಎಂದು ಅರ್ಥವಲ್ಲ. ನೇರಳೆ ೪೦೦ ನ್ಯಾನೋಮೀಟರ್‌ನಿಂದ ಪ್ರಾರಂಭವಾಗಿ ಒಂದೆಡೆ ನಿಧಾನವಾಗಿ ನೀಲಿಗೆ ತಿರುಗುತ್ತದೆ. ಹೀಗೆ ಬೇರೆಬೇರೆ ಬಣ್ಣಗಳ ನಡುವೆ ಯಾವುದೇ ಸೀಮಾರೇಖೆ ಇಲ್ಲದೆ ಒಂದರಿಂದ ಒಂದಕ್ಕೆ ನಿಧಾನವಾಗಿ ಲೀನವಾಗುತ್ತವೆ. ಎರಡರ ನಡುವೆ ಅತ್ತ ನೀಲಿಯೂ ಅಲ್ಲದ, ಇತ್ತ ನೇರಳೆಯೂ ಅಲ್ಲದ ಪ್ರದೇಶವೂ ಇರುತ್ತದೆ. 

      ಬಣ್ಣಗಳ ಪೈಕಿ ಕೆಂಪು, ನೀಲಿ ಮತ್ತು ಹಸಿರನ್ನು ಪ್ರಾಥಮಿಕ ಬಣ್ಣಗಳು (ಪ್ರೈಮರಿ ಕಲರ್ಸ್) ಎನ್ನುತ್ತಾರೆ. ಇದಕ್ಕೆ ಕಾರಣವೇನೆಂದರೆ ಈ ಮೂರು ಬಣ್ಣಗಳನ್ನು ಬೇರೆಬೇರೆ ಪ್ರಮಾಣದಲ್ಲಿ ಮಿಶ್ರಮಾಡಿ ನಮಗೆ ಬೇಕಾದ ಯಾವುದೇ ಬಣ್ಣವನ್ನು ಪಡೆಯಬಹುದು. ಮಿಶ್ರಮಾಡುವುದೆಂದರೆ ಇದು ನಾವು ಬಣ್ಣಗಳ ದ್ರಾವಣವನ್ನು ತೆಗೆದುಕೊಂಡು ಪಾತ್ರೆಗೆ ಸುರಿದು ಮಿಶ್ರಮಾಡುವ ಪ್ರಕ್ರಿಯೆಯಲ್ಲ. ಇದು ಆಯಾ ಬಣ್ಣಗಳ ಬೆಳಕನ್ನು ಮಿಶ್ರಮಾಡಿ ನಮಗೆ ಬೇಕಾದ ಬಣ್ಣಗಳನ್ನು ಪಡೆಯುವ ಪ್ರಕ್ರಿಯೆ. ನಾವೆಲ್ಲ ನೋಡುವ ದೂರದರ್ಶನ, ಗಣಕಯಂತ್ರ, ಮೊಬೈಲ್ ಎಲ್ಲವುಗಳ ಪರದೆಯೂ ಇದೇ ತತ್ವವನ್ನಾಧರಿಸಿ ಕೆಲಸ ಮಾಡುತ್ತವೆ. ಮೂರೂ ಬಣ್ಣಗಳ ಬೆಳಕನ್ನು ಒಂದೇ ಪ್ರಮಾಣದಲ್ಲಿ ಮಿಶ್ರಮಾಡಿದಾಗ ಅದು ಬಿಳಿಬಣ್ಣವನ್ನು ಕೊಡುತ್ತದೆ. 

      ಬಣ್ಣ ಎಂದರೆ ನಿಜವಾಗಿ ಹೇಳಬೇಕೆಂದರೆ ಅದು ನಮ್ಮ ಕಣ್ಣಿನಲ್ಲಿ ಬೆಳಕು ಉಂಟುಮಾಡುವ ಮತ್ತು ಅದನ್ನು ನಮ್ಮ ಮೆದುಳು ಅರ್ಥಮಾಡಿಕೊಳ್ಳುವ ಒಂದು ಸಂವೇದನೆ. ಹಾಗಾದರೆ ಯಾವುದೇ ಒಂದು ವಸ್ತುವಿನ ಬಣ್ಣ ನಿಜವಾಗಿ ಎಲ್ಲಿದೆ? ಅದು ಆ ವಸ್ತುವಿನಲ್ಲಿದೆಯೋ ಅಥವಾ ಅದರ ಮೇಲೆ ಬೀಳುವ ಬೆಳಕಿನಲ್ಲಿದೆಯೋ ಅಥವಾ ಅದನ್ನು ನೋಡುವ ನಮ್ಮ ಕಣ್ಣಿನಲ್ಲಿದೆಯೋ? ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ನಾವು ಯಾವುದೇ ವಸ್ತುವಿನ ಬಣ್ಣಕ್ಕೆ ಕಾರಣವೇನೆಂದು ಅರ್ಥಮಾಡಿಕೊಳ್ಳಬೇಕು. ಒಂದು ವಸ್ತು ಹಸಿರಾಗಿದ್ದರೆ ಅದಕ್ಕೆ ಕಾರಣ ಅದು ತನ್ನ ಮೇಲೆ ಬೀಳುವ ಬೆಳಕಿನಲ್ಲಿ ಹಸಿರನ್ನು ಮಾತ್ರ ಪ್ರತಿಫಲಿಸಿ ಇನ್ನೆಲ್ಲ ಬಣ್ಣಗಳ ಬೆಳಕನ್ನೂ ಹೀರಿಕೊಳ್ಳುತ್ತದೆ. ವಸ್ತುವು ತನ್ನ ಮೇಲೆ ಬಿದ್ದ ಎಲ್ಲ ಬಣ್ಣಗಳ ಬೆಳಕನ್ನೂ ಪ್ರತಿಫಲಿಸಿದರೆ ಆಗ ಅದು ಬಿಳಿಯಾಗಿ ಕಾಣುತ್ತದೆ. ಹಾಗಲ್ಲದೆ ಎಲ್ಲ ಬಣ್ಣಗಳನ್ನೂ ಹೀರಿಕೊಂಡರೆ ಆಗ ಅದು ಕಪ್ಪಾಗಿ ಕಾಣಿಸುತ್ತದೆ. ಒಂದು ಕೆಂಬಣ್ಣದ ವಸ್ತುವಿದ್ದರೆ ಅದು ಪ್ರತಿಫಲಿಸುವುದು ಕೆಂಬಣ್ಣವನ್ನು ಮಾತ್ರ. ಆದ್ದರಿಂದಲೇ ಕೆಂಬಣ್ಣದ ವಸ್ತುವಿನ ಮೇಲೆ ನೀಲಿ ಬೆಳಕು ಹಾಯಿಸಿದರೆ ಅದು ಕಪ್ಪಾಗಿ ಕಾಣಿಸುತ್ತದೆ. ಏಕೆಂದರೆ ಅದು ನೀಲಿ ಬೆಳಕನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. 

      ಹಾಗಾದರೆ ಒಂದು ವಸ್ತುವಿನ ನಿಜಬಣ್ಣ ಯಾವುದು? ಬಿಳಿ ಬೆಳಕು ಎಲ್ಲ ಬಣ್ಣಗಳ ಬೆಳಕನ್ನೂ ಒಳಗೊಂಡಿರುವುದರಿಂದ ಬಿಳಿ ಬೆಳಕಿನಲ್ಲಿ ಯಾವುದೇ ವಸ್ತು ತೋರುವ ಬಣ್ಣವನ್ನೇ ಅದರ ನಿಜಬಣ್ಣ ಎಂದು ಕರೆಯಬಹುದು. ಆದರೂ ಅದು ಯಾವ ಬೆಳಕನ್ನು ಪ್ರತಿಫಲಿಸುತ್ತದೆ ಎಂಬುದು ಮಾತ್ರ ಇದರಿಂದ ಗೊತ್ತಾಗುತ್ತದೆ. ಹಾಗಾಗಿ ಆ ಬಣ್ಣ ವಾಸ್ತವವಾಗಿ ಆ ವಸ್ತುವಿನದ್ದಲ್ಲ, ಅದು ಯಾವ ಬೆಳಕನ್ನು ಪ್ರತಿಫಲಿಸುತ್ತದೋ ಆ ಬೆಳಕಿನದ್ದು ಎಂದರೆ ಇನ್ನೂ ಹೆಚ್ಚು ಸೂಕ್ತವಾದೀತು. ಜೊತೆಗೆ ನಮ್ಮ ಮೆದುಳು ಬಣ್ಣಗಳನ್ನು ಗ್ರಹಿಸುವುದಕ್ಕೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ. ಆ ಅಂಶಗಳ ಆಧಾರದ ಮೇಲೆ ನಾವು ನೋಡುತ್ತಿರುವ ಬಣ್ಣದ ತೀವ್ರತೆಯೂ ವ್ಯತ್ಯಾಸವಾಗುತ್ತದೆ. ನಮ್ಮ ಕಣ್ಣು, ಅದರಲ್ಲಿರುವ ಶಂಕುಕೋಶಗಳು, ಇತ್ಯಾದಿ ಆಂತರಿಕ ಕಾರಣಗಳನ್ನು ಬಿಟ್ಟುಬಿಡಿ. ಬಾಹ್ಯಕಾರಣಗಳಿಂದಲೂ ನಾವು ನೋಡುವ ಬಣ್ಣಗಳ ಪರಿಣಾಮ ನಿರ್ಧಾರವಾಗುತ್ತದೆ. ಬೆಳಕಿನ ತೀವ್ರತೆ ಇದರಲ್ಲಿ ಒಂದು ಅಂಶವಾದರೆ ಇನ್ನೊಂದು ಅಂಶ ಆ ಬಣ್ಣವು ಯಾವ ಹಿನ್ನೆಲೆಯಲ್ಲಿದೆ ಎಂಬುದು. ಒಂದನೆಯ ಚಿತ್ರದಲ್ಲಿ ಎರಡು ಹಳದಿ ವೃತ್ತಗಳಿರುವುದನ್ನು ಗಮನಿಸಿ. (ಅದು ನೋಡಲು ಅಂಡಾಕಾರವಾಗಿ ಕಾಣುತ್ತಿದೆ, ಆದರೆ ಅದು ವಾಸ್ತವವಾಗಿ ವೃತ್ತ, ನಾವು ಅದನ್ನು ನೇರವಾಗಿ ನೋಡದೆ ಓರೆಯಾಗಿ ನೋಡುತ್ತಿರುವುದರಿಂದ ಅಂಡಾಕಾರವಾಗಿ ಕಾಣುತ್ತದೆ). ಈ ವೃತ್ತಗಳೆರಡೂ ಒಂದೇ ಹಳದಿ ಬಣ್ಣವನ್ನು ಹೊಂದಿವೆ. ಅವುಗಳ ಹಳದಿಯ ತೀವ್ರತೆಯೂ ಒಂದೇ ಆಗಿದೆ. ಅವುಗಳೆರಡನ್ನೂ ಅಕ್ಕಪಕ್ಕ ಬಿಳಿಯ ಹಿನ್ನೆಲೆಯಲ್ಲಿಟ್ಟರೆ ನೋಡಲು ಅವು ಒಂದೇ ರೀತಿ ಕಾಣುತ್ತವೆ. ಆದರೆ ಇಲ್ಲಿ ಈ ಚಿತ್ರದಲ್ಲಿ ಮೇಲಿನ ಹಳದಿವೃತ್ತವು ಕಪ್ಪು ಹಿನ್ನೆಲೆಯಲ್ಲಿದ್ದರೆ ಕೆಳಗಿನ ವೃತ್ತವು ಬಿಳಿಯ ಹಿನ್ನೆಲೆಯಲ್ಲಿದೆ ಮತ್ತು ಅದರ ಮೇಲೆ ಪಕ್ಕದಲ್ಲಿರುವ ಸಿಲಿಂಡರಿನ ನೆರಳು ಬೀಳುತ್ತಿದೆ. ಆದ್ದರಿಂದ ಅವೆರಡರ ಹಳದಿಯ ತೀವ್ರತೆಯಲ್ಲಿ ವ್ಯತ್ಯಾಸ ಕಾಣುತ್ತಿದೆ. ಆದರೆ ಅದು ಅವುಗಳಲ್ಲಿರುವ ವ್ಯತ್ಯಾಸವಲ್ಲ, ನಮ್ಮ ಕಣ್ಣುಗಳು ಅವನ್ನು ಗುರುತಿಸುತ್ತಿರುವ ವ್ಯತ್ಯಾಸವಷ್ಟೆ. ಇದು ಒಂದು ವಿಧದ ದೃಷ್ಟಿಭ್ರಮೆ. ಬಣ್ಣಗಳ ದೃಷ್ಟಿಭ್ರಮೆಗಳು ತುಂಬಾ ಇವೆ. 

      ಆಕಾಶ ಹಗಲಿನಲ್ಲಿ ನೀಲಿಯಾಗಿ ಕಾಣುತ್ತದೆ. ಮುಂಜಾನೆ ಸೂರ್ಯೋದಯದಲ್ಲಿ ಮತ್ತು ಸಂಜೆ ಸೂರ್ಯಾಸ್ತದಲ್ಲಿ ಕೆಂಪಾಗಿ ಕಾಣುತ್ತದೆ. ಇದಕ್ಕೆಲ್ಲ ಕಾರಣವೇನು? ಇಷ್ಟಕ್ಕೂ ಆಕಾಶ ನೀಲಿಯಾಗಿ ಕಾಣುವುದು ನಮ್ಮ ಭೂಮಿಯ ಮೇಲಿನಿಂದ ಮಾತ್ರ. ಚಂದ್ರ ಅಥವಾ ಬುಧಗ್ರಹದ ಮೇಲಿನಿಂದ ಆಕಾಶ ಹಗಲಿನಲ್ಲಿ ಸಹ ಕಪ್ಪಾಗಿಯೇ ಕಾಣಿಸುತ್ತದೆ. ಏಕೆಂದರೆ ಆ ಕಾಯಗಳಿಗೆ ವಾತಾವರಣದ ಕವಚವಿಲ್ಲ. ಹಾಗಾಗಿ ಅವುಗಳ ಆಗಸದಲ್ಲಿ ಬೆಳಕನ್ನು ಚದುರಿಸಬಲ್ಲ ಯಾವ ಮಾಧ್ಯಮವೂ ಇಲ್ಲ. ನಮ್ಮ ಆಗಸದಲ್ಲಿ ವಾತಾವರಣವು ಹಗಲಿನಲ್ಲಿ ಸೂರ್ಯನ ಬೆಳಕಿನ ನೀಲಿಯನ್ನು ಗರಿಷ್ಠಪ್ರಮಾಣದಲ್ಲಿ ಚದುರಿಸುತ್ತವೆ. ಮುಂಜಾನೆ ಮತ್ತು ಸಂಜೆಯ ವೇಳೆ ಸೂರ್ಯ ದಿಗಂತದ ಅಂಚಿನಲ್ಲಿರುವಾಗ ಬೆಳಕು ನೇರವಾಗಿ ನಮ್ಮ ಮೇಲೆ ಬೀಳುವುದಿಲ್ಲ. ಅದರ ಬದಲು ಓರೆಯಾಗಿ ಬೀಳುತ್ತದೆ. ಅಂದರೆ ಬೆಳಕು ನಮ್ಮನ್ನು ತಲುಪಲು ಹೆಚ್ಚುಕಾಲ ತೆಗೆದುಕೊಳ್ಳುತ್ತದೆ. ಹಾಗಾಗಿ ಬೆಳಕಿನ ಕೆಂಪು-ಕಿತ್ತಳೆ ಭಾಗಗಳಷ್ಟೇ ಹೆಚ್ಚಾಗಿ ಚದುರುತ್ತವೆ ಮತ್ತು ಅದರಿಂದಾಗಿ ಆಗಸದಲ್ಲಿ ಕಿತ್ತಳೆಗೆಂಪು ಓಕುಳಿ ಹರಡುತ್ತದೆ. ಆ ಸಂದರ್ಭದಲ್ಲಿ ನೀಲಿಬೆಳಕು ನಮ್ಮ ದೃಷ್ಟಿಯ ನೇರಕ್ಕೆ ಇರುವುದಿಲ್ಲ. 

      ಜೀವಲೋಕದಲ್ಲಿ ಬಣ್ಣಗಳಿಗೆ ಬಹಳ ಮಹತ್ವದ ಸ್ಥಾನವಿದೆ. ಅನೇಕ ಜೀವಿಗಳು ಬಣ್ಣಗುರುಡಾಗಿದ್ದರೂ ಅತ್ಯುತ್ತಮ ವರ್ಣದೃಷ್ಟಿ ಪಡೆದಿರುವ ಜೀವಿಗಳೂ ಇವೆ. ಕೆಲವು ಜೀವಿಗಳಂತೂ ಮನುಷ್ಯರಿಗಿಂತಲೂ ಉತ್ತಮವಾದ ವರ್ಣದೃಷ್ಟಿ ಹೊಂದಿವೆ. ಹಕ್ಕಿಗಳು ಇದರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತವೆ. ಹಕ್ಕಿಗಳು ವರ್ಣವೈವಿಧ್ಯದಲ್ಲಿ ಬಹುಶಃ ಜೀವಲೋಕದಲ್ಲೇ ಮೊದಲ ಸ್ಥಾನದಲ್ಲಿರುವ ಜೀವಿಗಳು. ಹಕ್ಕಿಗಳಷ್ಟು ವರ್ಣವೈವಿಧ್ಯ ಸಸ್ತನಿಗಳಲ್ಲಾಗಲೀ ಅಥವಾ ಉರಗಗಳಲ್ಲಾಗಲೀ ಇಲ್ಲ. ಅವುಗಳ ವರ್ಣವೈವಿಧ್ಯದಲ್ಲಿ ಎರಡು ವಿಧಗಳಿವೆ. ಒಂದು ಗರಿಗಳಲ್ಲಿರುವ ವರ್ಣದ್ರವ್ಯದಿಂದಾಗಿ ಸಹಜವಾಗಿಯೇ ಇರುವ ಬಣ್ಣಗಳು, ಇನ್ನೊಂದು ಅವುಗಳ ಗರಿಗಳ ಮೇಲೆ ಬೇರೆಬೇರೆ ಕೋನದಲ್ಲಿ ಬೆಳಕು ಬಿದ್ದಾಗ ಅದರ ಪರಿಣಾಮ ಬೇರೆಬೇರೆ ಬಣ್ಣಗಳು ಗೋಚರಿಸುತ್ತವೆ. ಸಾಮಾನ್ಯವಾಗಿ ಗಿಳಿಗಳ ಹಸಿರು, ಮಕಾಗಳ ನೀಲಿ, ಹಳದಿ, ಕೆಂಪು ಇತ್ಯಾದಿ ಬಣ್ಣಗಳು ಅವುಗಳ ವರ್ಣದ್ರವ್ಯದಿಂದ ಬಂದಿದ್ದರೆ ಫೇರಿ ಬ್ಲೂಬರ್ಡ್, ಮಲಬಾರ್ ಟ್ರೋಜನ್, ಸಿಳ್ಳಾರಗಳು (ವಿಸ್ಲಿಂಗ್ ಥ್ರಷ್), ಹೂಕುಡುಕಗಳು (ಸನ್‌ಬರ್ಡ್), ಝೇಂಕಾರದ ಹಕ್ಕಿಗಳು (ಹಮ್ಮಿಂಗ್ ಬರ್ಡ್) ಇತ್ಯಾದಿ ಹಕ್ಕಿಗಳ ಉಜ್ವಲ ವರ್ಣಗಳು ಅವುಗಳ ಗರಿಗಳ ಮೇಲೆ ಸೂರ್ಯನ ಬೆಳಕು ಬಿದ್ದು ಪ್ರತಿಫಲಿಸುವುದರಿಂದ ಉಂಟಾಗುತ್ತವೆ. ಆದ್ದರಿಂದಲೇ ಆ ಹಕ್ಕಿಗಳು ನೆರಳಿನಲ್ಲಿದ್ದಾಗ ಸಾಮಾನ್ಯವಾಗಿ ಕಾಣುತ್ತವೆ, ಆದರೆ ಬಿಸಿಲಿಗೆ ಬಂದಕೂಡಲೇ ಫಳಫಳನೆ ಹೊಳೆಯುತ್ತವೆ. 

      ಹಕ್ಕಿಗಳ ಈ ಬಣ್ಣಬಣ್ಣದ ಉಡುಗೆಗಳ ಮುಖ್ಯ ಉದ್ದೇಶ ಸ್ವಪ್ರಭೇದವನ್ನು ಪತ್ತೆ ಮಾಡುವುದು ಮತ್ತು ಹೆಣ್ಣನ್ನು ಆಕರ್ಷಿಸುವುದು. ಆದ್ದರಿಂದಲೇ ಬಹುತೇಕ ಹಕ್ಕಿಗಳು ಅತ್ಯುತ್ತಮ ವರ್ಣದೃಷ್ಟಿ ಹೊಂದಿವೆ. ಆದರೆ ರಾತ್ರಿಯ ವೇಳೆಯಲ್ಲೇ ಚಟುವಟಿಕೆಯಿಂದಿರುವ ನಿಶಾಚರ ಹಕ್ಕಿಗಳ ಮೈಬಣ್ಣವೆಲ್ಲ ಮಂಕು. ಗೂಬೆ ಮತ್ತು ಕುರುಡುಗಪ್ಪಟ (ನೈಟ್‌ಜಾರ್) ಹಕ್ಕಿಗಳನ್ನೇ ಗಮನಿಸಿ, ಅವುಗಳ ಮೈಬಣ್ಣ ಸಾಮಾನ್ಯ ಬೂದುಬಣ್ಣಕ್ಕಿದ್ದು ಯಾವುದೇ ಆಕರ್ಷಣೆ ಇರುವುದಿಲ್ಲ. ಅವು ರಾತ್ರಿಯಷ್ಟೇ ಚಟುವಟಿಕೆಯಿಂದಿರುವುದರಿಂದ ಅವಕ್ಕೆ ಬಣ್ಣಬಣ್ಣದ ಉಡುಗೆಗಳಿಂದ ಯಾವ ಪ್ರಯೋಜನವೂ ಇಲ್ಲ.

      ಬಣ್ಣಗಳ ಲೋಕವೆಂಬುದು ನಿಜಕ್ಕೂ ಒಂದು ಸುಂದರವಾದ ಲೋಕ. ಇದರಲ್ಲಿ ವಿಹರಿಸುತ್ತಿದ್ದರೆ ಹೊರಬರಲು ಮನಸ್ಸೇ ಬಾರದು. ಒಂದುವೇಳೆ ಮನುಷ್ಯರಿಗೂ ವರ್ಣದೃಷ್ಟಿ ಇಲ್ಲದೆ ಕೇವಲ ಕಪ್ಪು-ಬಿಳುಪು ದೃಷ್ಟಿಯಷ್ಟೇ ಇದ್ದಿದ್ದರೆ ಹೇಗಿರುತ್ತಿತ್ತು? ಇದನ್ನು ಯೋಚಿಸುವುದು ಸ್ವಲ್ಪ ಕಠಿಣವೇ. ಇಂದು ನೂರಾರು ಬಣ್ಣಗಳನ್ನು ನೋಡಿ ಆನಂದಿಸುತ್ತಿರುವ ನಾವು ಕಪ್ಪುಬಿಳುಪಿನ ಪ್ರಪಂಚ ಇದಕ್ಕಿಂತ ನೀರಸವಾಗಿರುತ್ತಿತ್ತೆಂದು ಭಾವಿಸಬಹುದು. ಆದರೆ ನಮಗೆ ಬಣ್ಣಗಳ ಬಗ್ಗೆ ಯಾವುದೇ ಅರಿವಿರದಿದ್ದರೆ, ಅಂದರೆ ಕಪ್ಪು-ಬಿಳುಪೇ ನಮ್ಮ ಪ್ರಪಂಚವಾಗಿದ್ದರೆ ಆಗಲೂ ನಾವು ಆನಂದವಾಗಿಯೇ ಇರುತ್ತಿದ್ದೆವು. ಏಕೆಂದರೆ ಬಣ್ಣಗಳು ಇವೆಯೆಂಬ ಕಲ್ಪನೆಯೇ ನಮಗಿರುತ್ತಿರಲಿಲ್ಲ. ಆದ್ದರಿಂದ ನಮಗೆ ವರ್ಣದೃಷ್ಟಿ ಇಲ್ಲವೆಂದು ಕೊರಗುವ ಪ್ರಮೇಯವೇ ಇರುತ್ತಿರಲಿಲ್ಲ ಅಲ್ಲವೇ?

Category:Science and Innovation



ProfileImg

Written by Srinivasa Murthy

Verified