ಒಮ್ಮೆ ತಪ್ಪದೇ ಕಣ್ತುಂಬಿಕೊಳ್ಳಿ ಮೈಸೂರಿನ ಈ ಮ್ಯೂಸಿಯಂ !

ಅಪ್ಪಟ ಹಿತ್ತಾಳೆಯ ಆಕರ್ಷಕ ವಸ್ತುಗಳ ಪ್ರದರ್ಶನ



image

ಮೈಸೂರಿನ ಈ ವಸ್ತು ಸಂಗ್ರಹಾಲಯ ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ. ಇಲ್ಲಿ ಮನೆಯಲ್ಲಿ ಇಡಬಹುದಾದ ಅಲಂಕಾರಿಕ ವಸ್ತುಗಳು, ವಿಗ್ರಹಗಳು, ಆಕರ್ಷಕ ಸಾಮಗ್ರಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಸಿಗುತ್ತವೆ.

ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ. ಹೌದು, ಇದು ಇರುವುದು ಮೈಸೂರಿನ ಹೃದಯ ಭಾಗದಲ್ಲಿ. ಸಬ್ ಅರ್ಬನ್ ಬಸ್ ನಿಲ್ದಾಣಕ್ಕೆ ಅಂಟುಕೊಂಡಿರುವ ಇರ್ವಿನ್ ರಸ್ತೆಯಲ್ಲಿರುವ ದೊಡ್ಡ ಗುಜರಿ ಪಕ್ಕದ ವೆಲ್ಲಿಂಗ್ಟನ್ ಕಟ್ಟಡದಲ್ಲಿ. ಈ ಸಂಗ್ರಹಾಲಯ ಭಾರತೀಯ ಸಂಪ್ರಾದಾಯಿಕತೆಯನ್ನು ರಕ್ಷಿಸುವ ಉದ್ದೇಶ ಹೊಂದಿದೆ.

ಮೈಸೂರಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬಂದು ಹೋಗುತ್ತಾರೆ. ಅರಮನೆ ನಗರಿಯಲ್ಲಿ ವಾರಗಟ್ಟಲೆ ಉಳಿದು ಹಲವಾರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ಹೆಚ್ಚಿನವರಿಗೆ ಹತ್ತಿರದಲ್ಲೇ ಇರುವ ಈ ಸ್ಥಳದ ಬಗ್ಗೆ ಮಾಹಿತಿಯಿಲ್ಲ.

ಇಲ್ಲಿ ನಮ್ಮ ಪೂರ್ವಜರು ಪುರಾತನ ಕಾಲದಲ್ಲಿ ಬಳಸುತ್ತಿದ್ದ ಕರಕುಶಲ ವಸ್ತುಗಳು ನೋಡಲು ಸಿಗುತ್ತವೆ. ಇದು ನಿಜಕ್ಕೂ ಆನಂದದ ಜೊತೆ ನಮ್ಮನ್ನು ಹಳೆಯ ಲೋಕಕ್ಕೆ ಕರೆದೊಯ್ಯುತ್ತದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ಇಲ್ಲಿಂದ ಏನಾದರೊಂದು ವಸ್ತು ಖರೀದಿಸಲೇಬೇಕು ಎನಿಸದೆ ಇರದು. ಅದರಲ್ಲೂ ಇಲ್ಲಿ ದೊರೆಯುವ ಅಪ್ಪಟ ಹಿತ್ತಾಳೆಯ ವಸ್ತುಗಳು ಬೇರೆ ಕಡೆ ಸಿಗುವುದು ಕಷ್ಟ ಸಾಧ್ಯ. ಅಲ್ಲದೇ ದುಬಾರಿಯೂ ಇರುವುದಿಲ್ಲ‌ ಎನ್ನುವುದು ಮತ್ತೊಂದು ಖುಷಿ.

ಈ‌ ಸಂಗ್ರಹಾಲಯವು ಭಾರತ ದೇಶದ ಶ್ರೀಮಂತ ಪರಂಪರೆಯನ್ನು ತೆರದಿಡುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ಹಿಂದಿನ ಕಾಲದ ಜನರು ಬಳಸುತ್ತಿದ್ದ ವಸ್ತುಗಳು ಅತ್ಯಂತ ಆಕರ್ಷಣೀಯ. ಅಷ್ಟೇ ಅಲ್ಲದೇ ಆಗಿನ ಉಡುಪುಗಳು ಹಾಗೂ ಅಲಂಕಾರಿಕ ಸಾಮಗ್ರಿಗಳು ನೋಡಲು ಚೆಂದದ ಅನುಭವ ನೀಡುತ್ತವೆ. ವರ್ಣಚಿತ್ರಗಳು ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ.

ಈ ವಸ್ತು ಸಂಗ್ರಹಾಲಯದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಕಲೆಗಳ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ‌. ಇಡೀ ದೇಶದ ಎಲ್ಲಾ ಸಾಂಪ್ರದಾಯಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಗಾಗ ಬದಲಾದ ಸಂಗ್ರಹಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

ಈ ವಿಭಿನ್ನ ಸಂಗ್ರಹಾಲಯದ ಬಗ್ಗೆ ಕೇವಲ ಬರವಣಿಗೆಯಲ್ಲಿ ಓದುವುದಕ್ಕಿಂತ ಪ್ರಾಯೋಗಿಕವಾಗಿ ಕಾಣುವುದು ಮತ್ತು ತಿಳಿಯುವುದು ಉತ್ತಮವಾಗಿದೆ. ರಜಾ ದಿನಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಅಲ್ಲದೇ ಇಲ್ಲಿ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಇಲ್ಲಿ ನಮ್ಮ ದೇಶದ ಗ್ರಾಮೀಣ ಕಲೆ ಮತ್ತು ಕರಕುಶಲ ವಸ್ತುಗಳು, ಬುಡಕಟ್ಟು ಸಮುದಾಯಗಳಿಂದ ನಿರ್ಮಿತ ವಸ್ತುಗಳು, ಕಸೂತಿ ಹಾಗೂ ಬಿದಿರಿನ ಕಲಾಕೃತಿಗಳಲ್ಲದೇ ಇತರ ಕಲೆಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬಹುದು. ಮಕ್ಕಳೊಂದಿಗೆ ಇಲ್ಲಿ ಭೇಟಿ ನೀಡುವುದು ಸೂಕ್ತ. ಇದರಿಂದ ಮಕ್ಕಳಿಗೂ ಪ್ರಾಚೀನ ಕಸುಬುಗಳ ಪರಿಚಯ ಮತ್ತು ಜ್ಞಾನ ಸಿಗುತ್ತದೆ.

ಇಲ್ಲಿನ ಪರಿಸರ ಮನಸ್ಸನ್ನು ಶಾಂತಗೊಳಿಸುತ್ತದೆ. ಅಂಗಳದಲ್ಲೇ ಇರಿಸಲಾಗಿರುವ ವಿವಿಧ ಪ್ರಾಣಿಗಳ ಕೆತ್ತನೆಯ ಮಾದರಿಗಳು ಹೆಚ್ಚಾಗಿ ಯುವ ಸಮುದಾಯವನ್ನು ಸೆಲ್ಫಿ ತೆಗೆದುಕೊಳ್ಳುವಂತೆ ಆಕರ್ಷಿಸುತ್ತದೆ. ಕಟ್ಟಡದ ಒಳಾಂಗಣವು ತಣ್ಣನೆಯ, ಶಾಂತಿಯುತ ವಾತಾವರಣದಿಂದ ಕೂಡಿದ್ದು ಇದು ಸಂಗ್ರಹಾಲಯದಲ್ಲಿ ಹೆಚ್ಚು ಸಮಯ ಕಳೆದು ಸಾಕಷ್ಟು ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಿದೆ.

Category:Travel



ProfileImg

Written by ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ