ಗೆದ್ದು ಬೀಗುವ ಸೋತ ಜಗತ್ತು ಇದು..

ನೆನಪೆಂಬ ಬುತ್ತಿ ಬಿಚ್ಚುವ ಸಮಯ

ProfileImg
26 Feb '24
6 min read


image

ಕಾಲ ಬದಲಾಗಬಹುದು, ಭಾವನೆಗಳು ಬದಲಾಗುವುದಿಲ್ಲ. ಎಷ್ಟೇ ನೆನಪುಗಳನ್ನು ಮರೆತಿದ್ದೇವೆಂದುಕೊಂಡರೂ ದಟ್ಟ ಮೋಡಗಳ ಮರೆಯಿಂದ  ಶಾಪಗ್ರಸ್ತ ಚಂದ್ರ ಇಣುಕುವಂತೆ , ಕಡಲ ಅಲೆಗಳು ತೀರದ ಬೆನ್ನೇರಿ ಕುಳಿತಂತೆ , ಗದ್ದೆ ಬದುವಲ್ಲಿ ಬಕವು ಹೊಳೆಯ ಮೀನುಗಳ ಕುಕ್ಕಿ ತಿನ್ನುವಂತೆ ಹೊತ್ತು  ಗೊತ್ತಿಲ್ಲದೆ ನೆನಪುಗಳು ದಾಂಗುಡಿ ಇಟ್ಟು ನಮ್ಮ ಹುಟ್ಟಡಗಿಸಿ ಬಿಡುತ್ತವೆ. ಭೂಮಿ- ಆಗಸಗಳ  ಹಿಡಿತ ಸಾಧಿಸಿದವರೂ ಕೂಡಾ ಭಾವನೆಗಳ ಹಿಡಿತಕ್ಕೊಳಗಾದಾವರೇ..ಭಾವನೆಗಳನ್ನು ಕೊಳ್ಳಲಾಗುವುದಿಲ್ಲ..ಒಂದು ವೇಳೆ ಕೊಳ್ಳುವಂತಿದ್ದರೆ ಆಗುವ ಅನಾಹುತಗಳೆಷ್ಟಿತ್ತೋ ? ನೆನಪುಗಳ ದಟ್ಟ ಮೋಡ ಹೆಪ್ಪುಗಟ್ಟಿ  ಮನದೊಳಗೆ ಘರ್ಜಿಸಿ ತಗ್ಗು- ದಿಣ್ಣೆಗಳಲ್ಲಿ  ಧುಮ್ಮಿಕ್ಕುವ ಗಂಗೆಯಂತೆ ಒಮ್ಮೆಲೇ ಹರಿದು ದಿಂಬು - ಹಾಸಿಗೆಗಳನು ಒದ್ದೆ ಮುದ್ದೆಯಾಗಿಸಬಹುದು. ನೆನಪುಗಳಿಂದ ಮುಕ್ತವಾಗುವುದು ಅಷ್ಟು ಸುಲಭವಲ್ಲ, ಕಾಲದೊಂದಿಗೆ ತಳಕು ಹಾಕಿಕೊಳ್ಳುವುದೇ ನೆನಪುಗಳ ಖಯಾಲಿ. ಅದರಲ್ಲೂ ಅಜ್ಜ-ಅಜ್ಜಿಯರ ಜೊತೆಗಿದ್ದ ನೆನಪುಗಳಿಗೆ ಬೆಲೆ ಕಟ್ಟಲಾಗದು. ಆ ನೆನಪುಗಳನ್ನಳೆಯಲು ಮಾಪನವೇ ಇಲ್ಲಬಹುದೇನೋ.ನನಗೂ ಅಜ್ಜನೆಂದರೆ ಬಲು ಪ್ರೀತಿ.


ಅವಿಭಕ್ತ ಕುಟುಂಬದಲಿ ಮೊದಲ ಮಗುವೇ ನಾನಾಗಿದ್ದರಿಂದ ಅಜ್ಜನ ಬಿಟ್ಟರೆ ಅಡಲು ನನಗೆ ಬೇರಾರಿರಲಿಲ್ಲ. ಅವನು ಕಥೆ ಹೇಳುತ್ತಿದ್ದ. ನಾನು ಹೂಂ ಗುಟ್ಟುತ್ತಿದ್ದೆ. ಅವನ ಬಾಲದಂತೆ ಎಲ್ಲಿ ಹೋದರೂ ಅಲ್ಲಿ ಹೋಗುತ್ತಿದ್ದೆ. ಕೆಲಸದವರಂತೆ ಕಂಬಳಿಯನ್ನು ಹೊದ್ದುಕೊಂಡು ಚಾಲಿ ಸುಲಿದ ದುಡ್ಡು ಕೊಡಿ ಹೆಗಡೇರೆ ಎನ್ನುತ್ತಿದ್ದೆ. ನನ್ನ ಧ್ವನಿ ಗುರುತು ಹಿಡಿಯುತ್ತಿದ್ದ ಅಜ್ಜ ಹುಡುಗಿ ನಾಳೆ ಬಾ ಇಂದು ದುಡ್ಡಿಲ್ಲ ಎಂದು ನಗುತ್ತಿದ್ದ. ಊಟ ಮಾಡಿದ ನಂತರ ಕಲ್ಲುಸಕ್ಕರೆ ತಿನ್ನುವ ಹವ್ಯಾಸ  ಅವನದಾಗಿತ್ತು. ತಾನೂ ತಿಂದು ನನಗೂ ಕೊಡುತ್ತಿದ್ದ. ಬಿಸಿಲು ಕುದುರೆ ಬರುವ ಸಮಯವಾಯ್ತು ಮಲಗು ಕೂಸೆ. ನಾನು ಸ್ವಲ್ಪ ಮಲಗಿ ಏಳ್ತೀನಿ ಎನ್ನುತ್ತಿದ್ದ.  ಈ ಬಿಸಿಲು ಕುದುರೆಗೆ ನಾನು ತುಂಬಾ ಹೆದರುತ್ತಿದ್ದೆ. ಅಜ್ಜ ಅದರ ವಿಪರೀತ ವರ್ಣನೆ ಮಾಡಿಬಿಟ್ಟಿದ್ದ. ಸುಡು ಬಿಸಿಲ ದಿನಗಳಲ್ಲಿ ಮನೆಯ ಹೊರಗಡೆ ಕಟ್ಟೆಯ ಮೇಲೆ ಕೂತಿದ್ದರೆ ತೋಟದ ಪಕ್ಕ ಏನೋ ಥಳ-ಥಳ ಹೊಳೆಯುತಿತ್ತು. ಅದನ್ನು ತೋರಿಸಿ ಅದೇ ನೋಡು ಬಿಸಿಲ ಕುದುರೆ.. ಹಠ ಮಾಡುವ ಮಕ್ಕಳನ್ನು ಹೊತ್ತೊಯ್ಯುತ್ತದೆ ಎನ್ನುತ್ತಿದ್ದ. ನಿಜವೆಂದು ನಂಬಿದ ನಾನು ಮನೆಯ ಒಳಗಡೆಯೇ  ಮರಿ ಹಾಕಿದ ಬೆಕ್ಕಂತೆ ಅತ್ತಿತ್ತ ಓಡಾಡಿಕೊಂಡಿರುತ್ತಿದ್ದೆ. ಅದು ಮರೀಚಿಕೆಯೆಂಬುದು ಎಷ್ಟೋ ವರುಷಗಳ ನಂತರ ನನಗೆ ತಿಳಿದಿತ್ತು. ನನ್ನ ಯಾಮಾರಿಸಿದೆಯಾ ಅಜ್ಜಾ! ಎಂದು ಕೆಂಗಣ್ಣು ಬಿಡಲು ಅಜ್ಜನಿರಲಿಲ್ಲ. ಒಂದು ದಿನ  ಊಟ ಮಾಡಿ ಮಲಗಿದ ಅಜ್ಜ ಮತ್ತೆ ಮೇಲೇಳಲಿಲ್ಲ. ಅಪ್ಪನ ಹೊಡೆತದಿಂದ ತಪ್ಪಿಸಿಕೊಳ್ಳಲು , ರಾತ್ರಿ ಭಯವಾದಾಗ, ಚಳಿಯಲ್ಲಿ ಬೆಂಕಿ ಕಾಯಿಸುವಾಗ, ಕೆಲಸದವರಿಗೆ ಹಣ ಕೊಡುವಾಗ ಹೀಗೆ ಅವನ ಹಿಂದೆ ಮುಂದೆ ಸುಳಿಯುತ್ತಾ ಇರುತ್ತಿದ್ದೆ..ಅವನ ಕನ್ನಡಕ ಕೊಡಲು, ಎಲೆ-ಅಡಿಕೆಗೆ ಸುಣ್ಣ ಹಚ್ಚಲು,ನೀರು ತರಲು  ಹೀಗೆ ಒಂದಲ್ಲಾ ಒಂದು ಕೆಲಸಕ್ಕೆ ನನ್ನ ಕರೆಯತ್ತಿದ್ದ.  ಅವನಿಗೆ ಹೇಳುವ ಕಥೆಗಳು ಬಹಳಷ್ಟಿತ್ತು .ಆದರೆ ಕೇಳುವ ಕಿವಿ , ಸ್ಪಂದಿಸುವ ದೇಹ ಕೊನೆ ಕೊನೆಗೆ ಅವನದಾಗಿರಲಿಲ್ಲ.
ಈ ಆಧುನಿಕ ಯುಗದ ಅತಿರೇಕ,ಅವಾಂತರಗಳನ್ನು ನೋಡಿ ನನಗೆ ಅಸಹ್ಯವೆನಿಸಿತ್ತು. ಅಜ್ಜನಷ್ಟು ಒಳ್ಳೆಯ ನಂಬಿಕಸ್ಥ ಗೆಳೆಯರಾರೂ ನನಗಿರಲಿಲ್ಲ. ಅವನೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಬೇಕೆನಿಸಿತು.  ಅಜ್ಜನಿಗೊಂದು ಪತ್ರ ಬರೆದಿದ್ದೆ. 
ಅಜ್ಜಾ..ನೀನು ನಮ್ಮನ್ನೆಲ್ಲಾ ಬಿಟ್ಟುಹೋದೆ. ನೀನು ಹೋದಮೇಲೆ ಆದ ಬದಲಾವಣೆಗಳನನ್ನು ಹೇಳುತ್ತಾ ಹೋದರೆ ನೀನು ನಂಬುವುದಿಲ್ಲ. ಆಧುನಿಕ ಯುಗ ಬಂದುಬಿಟ್ಟಿತು . ಸೋಗೆ ಹಾಸಿದ ಮನೆಗಳಲ್ಲಿ ಹಂಚುಗಳು ಕಾಣತೊಡಗಿದವು. ಸೋಗೆಯಡಿಯಲ್ಲಿ ಕಟ್ಟಿದ್ದ ಗುಬ್ಬಿಗಳ ಗೂಡು  ಮಣ್ಣು ಪಾಲಾಯಿತು. ತಂಪಾಗಿದ್ದ ಮಣ್ಣಿನ ಮನೆಗಳ ಬದಲಿಗೆ ಸಿಮೆಂಟ್‌ ಮನೆಗಳ ದರ್ಬಾರು ಜೋರಾಯಿತು.  ಅವಿಭಕ್ತ ಕುಟುಂಬಗಳ ಕುಣಿಕೆ ಕಳಚುತ್ತಾ ೩೦-೪೦ ಜನರಿದ್ದ ಮನೆಗಳಲ್ಲಿ ೨-೩ ಜನ ಮಾತ್ರಾ ಇರತೊಡಗಿದರು.ದೊಡ್ಡ ಹಂಡೆಯಲ್ಲಿ ಸ್ನಾನಕ್ಕೆ ಬಿಸಿನೀರು ಕಾಯಿಸಲಾಗುತಿತ್ತು. ದೊಡ್ಡ-ದೊಡ್ಡ ಪಾತ್ರೆಗಳಲ್ಲಿ ಅನ್ನ ಮಾಡಲಾಗುತಿತ್ತು. ರಾಶಿ- ರಾಶಿ ಸಾಮಾನುಗಳು ಸೋಮನ  ಗಾಡಿಯಲ್ಲಿ ಮನೆಗೆ ಬಂದು ಬೀಳುತ್ತಿದ್ದವು. ಆದರೀಗ ೨ ಲೋಟ ಅಕ್ಕಿ ಹಾಕಿ ಮಾಡಿದ ಅನ್ನವು ಹಾಗೇ ಉಳಿದಿರುತ್ತದೆ. ಬಾಳೆ ಎಲೆಯ ಮೇಲೆ  ಊಟ ಬಡಿಸಿ ಮನೆಮಂದಿಯೆಲ್ಲಾ ನೆಲದ ಮೇಲೆ   ಕೂತು ಊಟ ಮಾಡುವುದಿಲ್ಲ. ಅವರವರಿಗೆ ಬೇಕಾದಾಗ ಟಿವಿ ನೋಡುತ್ತಾ ಊಟ ಮಾಡುತ್ತಾರೆ . ಬಾಳೆ ಎಲೆಯ ಬದಲಿಗೆ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತದೆ. ನಂತರ ಅಲ್ಲಿ ಇಲ್ಲಿ ಎಸೆದು ಅದು ಪ್ರಾಣಿಗಳ ಹೊಟ್ಟೆ ಸೇರಿ ಅವು ಪ್ರಾಣ ಕಳೆದುಕೊಳ್ಳುತ್ತಿವೆ. ಚಿನ್ನಿ-ದಾಂಡು, ಗೋಲಿ-ಬುಗುರಿ ಯಾವ ಆಟವೂ ಇಲ್ಲ. ಎಲ್ಲರೂ ಎಲ್ಲವೂ ಮೊಬೈಲ್‌ ಮಾಂತ್ರಿಕನ ಕೈವಶ! ಬೇಸಾಯದ ಉಪಕರಣಗಳೂ ಉಪಯೋಗಿಸುವವರಿಲ್ಲದೇ ಅವಶೇಷಗಳಾಗಿ ಅಟ್ಟ ಸೇರಿವೆ. ಮಾಗಿ ಮಲ್ಲಿಗೆ ಮುಡಿಯುವವರಿಲ್ಲ. ಅಂಗಳದ ಕಳೆ ತೆಗೆಯುವವರಿಲ್ಲ.
ಹಿತ್ತಲಿನಲ್ಲಿ ಪಾತಿ ಮಾಡಿ, ಮಣ್ಣು ಹದಮಾಡಿ, ಬೀಜಗಳನ್ನುದುರಿಸಿದ ಮೇಲೆ ಒಣಗಿದ ಹುಲ್ಲನ್ನು ಅದರ ಮೇಲೆಹಾಸಿ  ಮೇಲಿಂದ ಬೂದಿಯನ್ನು ಉದುರಿಸಿ ನೀರ ಹನಿಸುತ್ತಿದ್ದರೆ ಹದವಿದ್ದ ನೆಲದಿಂದ ಗಿಡವು ಸೊಂಪಾಗಿ  ಬೆಳೆದು  ಸೊಪ್ಪು ಸಿಗುತಿತ್ತು. ನಾವೇ ಬೆಳೆದ ತರಕಾರಿಯ ರುಚಿಯೇ ಬೇರೆ. ಈಗಿನ ತರಕಾರಿ ಕೂಡಾ ಮೊದಲಿನಂತೆ ರುಚಿಸುವುದಿಲ್ಲ. ಬೆಳೆಯಲು ಇದ್ದ-ಬದ್ದ ರಾಸಾಯನಿಕಗಳ ಬಳಕೆಯಾಗುತ್ತಿದೆ. ಮೊದಲಿನಂತೆ ಕೊಟ್ಟಿಗೆ ಗೊಬ್ಬರ ಬಳಸುವವರ ಸಂಖ್ಯೆ ಈಗಿಲ್ಲ. ಹಿಂದೆಲ್ಲಾ ಗೊಬ್ಬರಕ್ಕೆಂದು ಒಂದು ಗುಂಡಿ ತೋಡಿ ಅದರಲ್ಲಿ ತರಕಾರಿ ಸಿಪ್ಪೆ, ತರಗೆಲೆಗಳು. ಸಗಣಿ, ಹೀಗೆ ಎಲ್ಲವನ್ನು ಒಟ್ಟುಗೂಡಿಸಿ ಗೊಬ್ಬರ ತಯಾರಿಸಲಾಗುತಿತ್ತು. ಆರೋಗ್ಯವೂ ಚೆನ್ನಾಗಿಯೇ ಇರುತಿತ್ತು. ಇಂದು ಹಸಿರು ಹಾಸುವ ಬೆಳ್ಳಕ್ಕಿಗಳಿಂದಾವೃತ್ತವಾದ ಗದ್ದೆಗಳು ಮಾಯವಾಗಿವೆ. ಕಬ್ಬುಗಳನ್ನು ಕೂಡಾ ಬೆಳೆಯುತ್ತಿಲ್ಲ, ಆಲೆಮನೆ,ಬಿಸಿಬೆಲ್ಲದ ಘಮ. ಕಬ್ಬಿನಹಾಲು,ಆಲೇ ಬಡಗಿಯ ಹಾಡು ಇವೆಲ್ಲವೂ ಇಂದಿನ ಜನಾಂಗದ ಕಲ್ಪನೆಗೂ ನಿಲುಕದ್ದಲ್ಲ.
ಮೊದಲಿನ ಹಾಗೆ ಬಳೆಗಾರ ಮನೆಗೆ ಬರುವುದಾಗಲೀ, ಹೆಂಗಳೆಯರು ಬಳೆ ಇಡುವುದಾಗಲೀ ಯಾವುದೂ ಇಲ್ಲ, ಮನೆಗಳಲ್ಲಿ ಕೈ ಬಳೆಗಳ ಸದ್ದು, ಕಾಲ್ಗೆಜ್ಜೆಯ ನಾದ ಬಿರುಕುಬಿಟ್ಟ ಗೋಡಗಳಲ್ಲೇ ಅಡಗಿಹೋಗಿವೆ. ಗಡಿಯಾರದ ಶಬ್ಧ ಬಿಟ್ಟರೆ ಇಡೀ ಮನೆಯಲ್ಲಿ ಶೂನ್ಯ ಭಾವವಾವರಿಸಿ ಮರಳುಗಾಡ ಮೌನ ಆವರಿಸಿರುತ್ತದೆ. ಐಸ್‌ಕ್ಯಾಂಡಿಯವನು ಡಬ್ಬದಲ್ಲಿ ತಣ್ಣನೆಯ ಬಣ್ಣ-ಬಣ್ಣದ ಕ್ಯಾಂಡಿ ತುಂಬಿ ತರುತ್ತಿದ್ದ.. ಬಾಯಲ್ಲಿಟ್ಟರೆ ಕರಗುವ ಇದು ನಮಗೆ ಹೊಸ ಲೋಕದ ಪರಿಚಯವನ್ನೇ ಮಾಡಿಬಿಟ್ಟಿತ್ತು. ಬಚ್ಚ ಬಾಯಿಯ ಅಜ್ಜ ಸ್ವಚ್ಛ ನಗುತ್ತಾ ನಮಗೆಲ್ಲಾ ಕ್ಯಾಂಡಿ ತೆಗೆದು ಕೊಡುತ್ತಿದ್ದ. ಅಂದು ನೀನು ಮನೆ-ಮಂದಿಗೆಲ್ಲಾ ಕೊಡಿಸಿ ಎಲ್ಲರ ಮನ  ತುಂಬಿದ್ದರೆ  ಐಸ್‌ಕ್ಯಾಂಡಿ ಅಜ್ಜನ ಡಬ್ಬಿ ಬರಿದಾಗಿ  ಜೇಬು ತುಂಬಿರುತಿತ್ತು. ಈಗಲೂ ಕ್ಯಾಂಡಿಯ ದೊಡ್ಡ-ದೊಡ್ಡ ಅಂಗಡಿಗಳೇ ಇವೆ.. ಕೊಡಿಸಲು ನೀನೂ ಇಲ್ಲ. ತಿನ್ನಲು ಮನಸೂ ಇಲ್ಲ. 
ಊರಿನಲ್ಲಿ ಮೊದಲಿನ ಹಾಗೆ ದಟ್ಟ ಕಾಡಾಗಲೀ, ಭಾನುವಾರದ ಬೇಟೆಯಾಗಲೀ ಇಲ್ಲ.  ಎಲ್ಲೆಡೆ ಕಾಡು ಕಡಿದು ಅಗಲವಾದ ರಸ್ತೆಗಳು , ಪೆಟ್ರೋಲ್‌ಬಂಕ್‌, ಟೀ ಅಂಗಡಿಗಳು ಎದ್ದು ನಿಂತಿವೆ. ಕಾಂಕ್ರೀಟ್‌ ಕಾಡುಗಳಿಂದ  ಮಳೆ ಸುರಿಯುವುದಾದರೂ ಹೇಗೆ?  ಚಂದಿರನ ಬಿಂಬವನು ಇನ್ನಷ್ಟು ಚಂದಗಾಣಿಸಿ ಕನ್ನಡಿಯಂತೆ ಹೊಳೆಯುತ್ತಿದ್ದ ಕೆರೆ-ಕಟ್ಟೆಗಳೆಲ್ಲಾ ಕೊಳಕು ಕೂಪವಾಗಿವೆ. ಎಲ್ಲೆಡೆ ಕೊಳಕು ತ್ಯಾಜ್ಯ  , ಕಸ- ಕಡ್ಡಿಗಳನ್ನು ನದಿಗೆ ಸುರಿಯುತ್ತಾರೆ.. ಪೂಜಿಸುವ ನದಿಗಳೆಲ್ಲಾ ಗಬ್ಬು ನಾರುತ್ತಿವೆ. ಕಾರ್ಖಾನೆಯ ರಾಸಾಯನಿಕ ಮಿಶ್ರಿತ ನೀರು , ಅದನು ಕುಡಿದು ರೋಗ ರುಜಿನದಿಂದ ನರಳುವ ಮನುಷ್ಯರು ಮತ್ತು ಪ್ರಾಣಿ-ಪಕ್ಷಿ ಗಳು. ಮಲೆನಾಡ ಕೆರೆ-ಕಟ್ಟೆಗಳು ಬತ್ತುವುದು ಇನ್ನೂ ನೋವಿನ ಸಂಗತಿ ಅಜ್ಜಾ...
ಮನೆಯ ಹಿತ್ತಲಿನ ಬೇಲಿ ಸಾಲುಗಳಲ್ಲಿ  ನೀನು ಬೆಳೆಸಿದ್ದ ಹಲಸು ,ಮಾವು ,ಸೀಬೆಯ ಮರಗಳೆಲ್ಲ ನೆಲಕಚ್ಚಿವೆ. ಅದೇನೋ ಹೆದ್ದಾರಿ ಮಾಡುತ್ತಾರಂತೆ. ಹೊಸದು ಬಂದಾಗ ಹಳೆಯದಕ್ಕೆಲ್ಲಿಯ ಜಾಗ? ಮನದ ಮೂಲೆಯಲ್ಲೊಂದು ಮಾಯದ ಗಾಯ ಮಾಡಿ ಹೋದದ್ದು ಹೋಯಿತಷ್ಟೆ!. ರಜಾ ದಿನಗಳಲ್ಲಿ ಗೆಳೆಯರೊಂದಿಗೆ ಮರದಡಿಯಲಿ ಮನದಣಿಯೇ ಆಟವಾಡಿದ್ದು, ಮರ ಹತ್ತಿ ಮಾವು ಕಿತ್ತು ತಿಂದದ್ದು, ಊರವರಿಗೆಲ್ಲಾ ಹಂಚಿದ್ದು ಹೇಗೆ ಮರೆಯಲಿ ಅಜ್ಜಾ? 
ಮೊದಲು ಸುಗ್ಗಿಯೆಂದರೆ ಹಬ್ಬವಿದ್ದಂತೆ. ಅಟ್ಟ ಹಾಕಿದ ಅಂಗಳದಲ್ಲಿ ಹಸಿ ಅಡಕೆಯ ರಾಶಿ. ಅಡಕೆ ಸುಲಿಯುವ ಜನರು.ಅವರ ಹಾಡು-ಹರಟೆ, ಹಾಸ್ಯ , ಹಬ್ಬದ ವಾತಾವರಣವದು. ಈಗ ಅಡಕೆ ಸುಲಿಯುವ ಯಂತ್ರಗಳು ಬಂದುಬಿಟ್ಟಿವೆ. ಹಿಂದಿನ ಸುಗ್ಗಿಯ ಸಂಭ್ರಮ ಇಂದು ಕಾಣುತ್ತಿಲ್ಲ. ಎಲ್ಲಾ ಯಂತ್ರಮಯ. ರಾತ್ರಿ-ಹಗಲು ಅವುಗಳದ್ದೇ ಕರ್ಕಶ ಸದ್ದು.
ಪಕ್ಕದೂರಿನ ಜಾತ್ರೆಗೆ ಎತ್ತಿನ ಗಾಡಿಯಲ್ಲಿ ಹೋಗಿ ಬೆಂಡು-ಬತ್ತಾಸು ,ಮಂಡಕ್ಕಿ ,ಬಣ್ಣದ ಪುಗ್ಗೆಗಳನ್ನು ತರುವುದು ಖುಷಿಯೆನಿಸುತಿತ್ತು. ಎತ್ತಿನ ಕೊರಳಿನ ಘಂಟೆಯ ಶಬ್ಧ ಕೇಳುತ್ತಾ ಊರಿನ ರಸ್ತೆಯ ಮೇಲೆ ಒಂದರ ಹಿಂದೊಂದು ಗಾಡಿಯಲ್ಲಿ ಸಾಗುವಾಗ ನಿನ್ನ ಕಥೆಯಲ್ಲಿ ಬರುತ್ತಿದ್ದ ರಾಣಿ ಸಾರೋಟಿನಲ್ಲಿ ಹೋಗುವುದನ್ನ ನೆನಪಿಸುತ್ತಿತ್ತು. ಕೊಟ್ಟಿಗೆಯಲ್ಲಿ ಹಸು-ಕರುಗಳಿಲ್ಲ,ಭತ್ತವನ್ನು ತುಂಬಲಿದ್ದ ಪಣತ ಹೆಗ್ಗಣದ ಗೂಡಾಗಿದೆ. 


ಹಿಂದಿನಂತೆ  ದೀಪಾವಳಿಯ ಆಚರಣೆಗಳಿಲ್ಲ. ಮೊದಲು ಒಂದೊಂದು ಜಾನುವಾರಿಗೂ ಜೇಡಿ-ಕೆಮ್ಮಣ್ಣಿನ ಪಟ್ಟಿ ಬಳಿದು ಅಡಕೆ-ಚೆಂಡು ಹೂವಿನ ಮಾಲೆ ಹಾಕಿ ಎತ್ತುಗಳಿಗೆ ಬಾಸಿಂಗ ಕಟ್ಟಿ ಮೆರವಣಿಗೆ ಮಾಡಲಾಗುತಿತ್ತು. ಇಂದೆಲ್ಲಾ ಯಾಂತ್ರಿಕವಾಗಿದೆ. ಮನಸುಗಳಿಂದು ಮುಗ್ಧವಾಗಿಲ್ಲ. ಅಹಂಕಾರದ ಪೆಟ್ಟಿಗೆಯಲ್ಲಿ ಮುದುಡಿ ಮಲಗಿವೆ ಅಷ್ಟೆ. ಎಲ್ಲಾ ಸಂಬಂಧಗಳನ್ನು ಹಣದ ತಕ್ಕಡಿಯಲ್ಲಿಟ್ಟು ತೂಕ ಹಾಕುವ ಅಸ್ವಸ್ಥ ಮನಸುಗಳಿರುವ ಕಾಲ. 
ಈಗ ಮೊಬೈಲ್‌ಎಂಬ ಮಾಂತ್ರಿಕ ಬಂದಿದ್ದಾನೆ. ಅವನಿಗೆ ಅಪ್ಪಣೆ ಮಾಡಿದರಾಯಿತು. ನಮ್ಮ ಅಳತೆಯದೇ ಬಟ್ಟೆ, ಬೇಕಾದ ಊಟ. ದಿನಸಿ,ಹಣ್ಣು- ಹಂಪಲುಗಳು,ಔಷಧಿ ಹೀಗೆ  ಬೇಡಿಕೆಯಿಟ್ಟಿದ್ದೆಲ್ಲಾ ಮನೆಯ ಮುಂದೆ ಬಂದು ಬೀಳುತ್ತವೆ. ವಿದೇಶದಲ್ಲಿರುವವರ ಜೊತೆಗೆ ಕೂಡಾ ಅವರ ಮುಖ ನೋಡಿ ಮಾತನಾಡಬಹುದು. ಇದರಿಂದಾಗಿ ಯಾರ ಅವಶ್ಯಕತೆಯಾಗಲೀ, ಅವಲಂಭನೆಯಾಗಲೀ ಯಾರಿಗೂ ಇಲ್ಲ. ಹಳ್ಳಿ- ಹಳ್ಳಿಗೂ ರಸ್ತೆಯಾಗಿದೆ. ವಾಹನ ಸಂಚಾರ ದಟ್ಟವಾಗಿವೆ. ಎಲ್ಲೆಡೆ ಹೊಗೆ, ವಿಷಪೂರಿತ ಗಾಳಿ. ಹಲವಾರು ರೀತಿಯ ರೋಗ-ರುಜಿನ. 
ಕೋವಿಡ್‌ಎಂಬ ಕಾಯಿಲೆ ಬಂದು ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತ್ತು. ಮನೆಯ ಬಾಗಿಲು ತೆರೆಯುವಂತಿರಲಿಲ್ಲ,ಹೊಸಿಲು ದಾಟದಂತೆ ಲಕ್ಷ್ಮಣ ರೇಖೆ ಹಾಕಲಾಗಿತ್ತು. ಮುಖಕ್ಕೆ ಮುಖಗವಸು ಧರಿಸಬೇಕಿತ್ತು, ಇಡೀ ಜಗತ್ತೇ ಸ್ಥಬ್ಧವಾಗಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ಸಂಬಂಧಿಗಳು ಸತ್ತರೂ ಯಾರೂ ನೋಡಲು ಹೋಗುತ್ತಿರಲಿಲ್ಲ. ಬೀದಿ ಬದಿಯ ಜನರು ಪರದಾಡುವಂತಾಗಿತ್ತು. ಯಾರೋ ಕೊಟ್ಟರೆ ಮಾತ್ರ ಊಟ. ಇಂತಹಾ ಸಂದರ್ಭದಲ್ಲೂ ಮಾನವತೆ ಮೆರೆದವರು ಬಹುಮಂದಿ ಇದ್ದಾರೆ. ಎಲ್ಲೆಡೆ ಸ್ಮಶಾನ ಮೌನ,  ರಸ್ತೆಗಳು ನೀರವತೆ ಹೊದ್ದು ಮಲಗಿದ್ದವು.. ಹಕ್ಕಿ-ಪಕ್ಷಿಗಳ ಕೂಗು ಬಿಟ್ಟರೆ ಉಳಿದಿದ್ದೆಲ್ಲವೂ ಸ್ಥಬ್ಧ. ಶವಗಳನ್ನು ರಾಶಿ ರಾಶಿ ಸುಡುತ್ತಿದ್ದರು. ಯುದ್ಧಭೂಮಿಯ ರೌದ್ರವತೆ, ಸ್ಮಶಾನದ ಮೌನ ಮಿಳಿತವಾಗಿ ಆ ದಿನಗಳು ನೋಡಲು ಭಯಾನಕವಾಗಿತ್ತು. ಆ ಕಾಯಿಲೆ ಬಂದವರನ್ನು ಮನೆಯವರೂ  ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಹೊರಗಡೆಯವರು ಬಾರದಂತೆ ಊರ ಗಡಿಗೇ ಬೇಲಿ ಹಾಕಲಾಗಿತ್ತು. ನಾಲ್ಕು ಗೋಡೆಯೊಳಗಿನ ಬದುಕು ಎಲ್ಲರನ್ನೂ ಸುಟ್ಟು ತಿಂದಿತ್ತು.ನಾಳೆಯ ಭರವಸೆಯಿಲ್ಲದೆ ಬದುಕು ಭಾರವಾಗಿತ್ತು. ಆಧುನೀಕತೆಯ ಮದವೇರಿದ್ದ ಪ್ರಪಂಚಕ್ಕೆ ಪ್ರಕೃತಿ ತನ್ನಿರುವ ತೋರಿಸಿತ್ತು .
ಮನೆಗೆ ನೆಂಟರು ಬಂದಿದ್ದಾರೆ ಬಜ್ಜಿ-ಬೋಂಡಾ ಮಾಡಿ ಎನ್ನುತ್ತಿದ್ದೆ ನೀನು. ನೆಂಟರು ಬಂದಿರುವುದು ನಿನ್ನ  ತಿಂಡಿ ತಿನ್ನಲು ಸಿಕ್ಕಿರುವ ಒಂದು ನೆಪ ಅಷ್ಟೆ. ಮೊದಲಿನಂತೆ ನೆಂಟರು ಬರುವುದು, ಊಟ-ಉಪಚಾರ ,ಹರಟೆ ಎಲ್ಲಾ ಕಡಿಮೆಯಾಗಿದೆ 

 ಬಾನಂಗಳದ ಚಂದಿರನಾಗಲೀ , ಹೊಳೆವ ಚುಕ್ಕಿಗಳಾಗಲೀ  ಯಾವುದೂ ಸೋಜಿಗವೆನಿಸುವುದಿಲ್ಲ. ಮನವ ತಣಿಸುವುದಿಲ್ಲ. ಈಗಿನ ಬಣ್ಣದ ಲೋಕದಲಿ ಅವು ಎದ್ದು ಹೊಳೆಯುವ ಬಗೆಯಾದರೂ ಹೇಗೆ?   ಗೆದ್ದು ಬೀಗುವ ಸೋತ ಜಗತ್ತು ಇದು . ಆ ದಿನಗಳೇ ಸುಂದರವಾಗಿದ್ದವು ಅಜ್ಜಾ! ಕೋಗಿಲೆಯ ಕೂಗು ,ಹಕ್ಕಿಗಳ ಹಾಡು.  ಅಂಗಳದ ಸೇವಂತಿಗೆ, ಮುಡಿತುಂಬಾ ಮಲ್ಲಿಗೆ..   
ನೆನಪಿನಂಗಳವೀಗ ಖಾಲಿ.  ಬೇಸರವೆನಿಸುತಿದೆ ಅಜ್ಜಾ...
                                                                   ಸೌಮ್ಯ ಜಂಬೆ. ಮೈಸೂರು.
                                                                   

 

Category:Personal Experience



ProfileImg

Written by Soumya Jambe