ತಡೆಯಲಾರದ ಸೆಖೆಯ ಬೇಗೆಯಿಂದ ಬೇಸತ್ತ ಹೊತ್ತಿನಲ್ಲಿ ಬೇಸರವ ತಣಿಸಲು, ರಜೆಯ ಮಜಾವನ್ನು ಆನಂದಿಸಲು ಮನಸ್ಸು ಹಾತೊರೆಯುತಿತ್ತು.
ಆ ಕ್ಷಣಕ್ಕೆ ನಿರ್ಧರಿಸಿ ಮರುದಿನಗಳಲ್ಲಿ ಹೊರಟೇ ಬಿಟ್ಟೆವು ಸಕಲೇಶಪುರದೆಡೆಗೆ! ನೋಡಲು ಏನಿದೆ, ಎಲ್ಲಿದೆ, ಎಷ್ಟು ದೂರವಿದೆ ಎಲ್ಲವನ್ನೂ ತಿಳಿಯಲು ಇದ್ದೇ ಇರುವನು ನಮ್ಮ ಗೂಗಲ್ ಮಾಮ. ಸರಿ, ನಮಗಾಗಿ ರೂಮೊಂದನ್ನು ಕಾಯ್ದಿದಿರಿಸಿದೆವು, "ವಧವಿ" ನಾಮಧೇಯದ ಹೋಮ್ ಸ್ಟೇ ಒಂದರಲ್ಲಿ! ವಿಟ್ಲದಿಂದ ಉಪ್ಪಿನಂಗಡಿಯ ಮೂಲಕ ಕಾರು ಹೊರಟೇ ಬಿಟ್ಟಿತು ಬಿಸ್ಲೆ ಘಾಟಿಯ ಮಾರ್ಗದಲ್ಲಿ...
ಮಧ್ಯಾಹ್ನದ ಊಟ 'ವನಗೂರು' ಎಂಬಲ್ಲಿನ ಹೋಟೆಲ್ ಒಂದರಲ್ಲಿ... ತದನಂತರ ಸೀದಾ ಹೋದೆವು, ಹೋಂಸ್ಟೇ ಹೊಕ್ಕೆವು, ಪ್ರಕೃತಿ-ನಿರ್ಮಿತಿಗಳೆರಡರ ಸೌಂದರ್ಯವನ್ನೂ ಕಣ್ತುಂಬಿಕೊಂಡೆವು. ವಿಶ್ರಮಿಸಿದೆವು ಚೂರು, ಇನಿತು ಸುಸ್ತಾಗಿ! ಇನ್ನೇನು, ಮತ್ತೇನು? ಹೊಳೆಯಿತಾಗಲೇ ಮೊದಲೀಗ ಉದರಕ್ಕೆ ಬೇಕಿದೆ ಸ್ವಲ್ಪ ಚಹಾ ಎಂದು.. ಹೊರಟೆವು ಪೇಟೆಗೆ, ತಡಕಾಡಿದೆವು. ಸಿಕ್ಕಿತು ಬೇಕರಿಯೊಂದರಲ್ಲಿ ಬಿಸಿ ಬಿಸಿ ಚಹಾ! ಸಿಹಿ ಸಿಹಿ ಅನಾರ್ಕಲಿಯು ಅದರ ಜೊತೆಗೂಡಿತು, ಆಹಾ! ಪಕ್ಕದ ಗಾಡಿಯಲಿ ಮಾರುತ್ತಿದ್ದರು ಬೋಂಡಾ ಬಜ್ಜಿ, ಹೊಟ್ಟೆಯ ಪಾಲಾಯಿತು ಆ ಕುರುಕುಲು ರುಚಿ... ಮುಂದೆಲ್ಲಿಗೆನ್ನುತಲೆ ಬೇಕರಿಯೋನರು ತಿಳಿಸಿದರು, 'ಹೋಗಿ ನೋಡಿರಿ ಅನತಿ ದೂರದಲ್ಲಿರುವ ಪಟ್ಲ ಬೆಟ್ಟವನ್ನು' ಎಂದು...
ಹೋದೆವು ನೋಡಿರಲ್ಲಿಗೆ...
ವನಗೂರಿಂದ ಮತ್ತೆ ಬಿಸ್ಲೆಯ ಹಾದಿಯಲ್ಲಿ ಹೋಗುತ್ತಿದ್ದಂತೆ ರಸ್ತೆಯ ಬದಿಯಲಿ ನಿಂತಿದ್ದವು ೨-೩ ಪಿಕ್ಕಪ್ಪುಗಳು; "ಪಟ್ಲ ಬೆಟ್ಟ... ಪಟ್ಲ ಬೆಟ್ಟ..." ಬೊಬ್ಬಿರಿಯುತ್ತಿದ್ದರು ಸಾರಥಿಗಳು! ನಾವು ಕಾರಿಳಿಯುತ್ತಿದ್ದಂತೆ ಇನ್ನೊಂದು ಕಾರಿನಲ್ಲಿ ಬರುತ್ತಿದ್ದವರಿಂದ "ಎಂತ ಬೆಟ್ಟವಪ್ಪಾ ಇಲ್ಲಿ!?" ಎಂಬಂತೆ ಉದ್ಗಾರ!
ಹತ್ತಿದೆವು ನಾವೊಂದು ಪಿಕ್ಕಪ್ಪಿನ ಮೇಲೆ ಹತ್ತಿದೆವು. ಏರಿಳಿತದ ಹಾದಿಯಿದು, ಇಕ್ಕೆಲಗಳಲ್ಲಿ ಕಾಡು ಮರಗಳು. ಪಿಕ್ಕಪ್ಪೇರಿದ ನಮಗೆ ಹತ್ತುವಾಗ ಮಜವೋ ಮಜ!
ಏರಿಳಿತದ ಮಾರ್ಗದಲ್ಲಿ ಹದವಾಗಿ ಚಲಿಸಿ ನೇರ ಮಾರ್ಗದಿ ವೇಗ ಹೆಚ್ಚಿಸುವ ಚಾಲಕನ ನೈಪುಣ್ಯತೆಯೂ ನಮಗೆ ಪುಟ್ಟ ಪುಟ್ಟ ಖುಷಿಯ ಅನುಭವಗಳನ್ನು ನೀಡುವುದು!
ಬೆಟ್ಟದ ಮೇಲೆ ಹೋಗಿ ನೋಡಿದರೆ 360° ಸುತ್ತಲೂ ವೀಕ್ಷಿಸುವ ಮುಕ್ತ ಅವಕಾಶ! ಕಣ್ಣಿಗೆ ನುಣುಪಾಗಿ ಕಾಣುವ ದೂರದ ಬೆಟ್ಟಗಳು.. ಆಳದ ಪ್ರದೇಶಗಳು... ಪ್ರಕೃತಿ ವಿಸ್ಮಯ... ಗಾಳಿಯೋ, ಚಳಿ ಹುಟ್ಟಿಸುವಷ್ಟು!
ಕಂಡು, ಅನುಭವಿಸಿ ನನಗಾದ ಖುಷಿ ಹೇಳತೀರದು...
ಒಂದಷ್ಟು ಹೊತ್ತು ನಮ್ಮ ಫೋಟೋ ಸೆಷನ್ಸ್'ಗಾಗಿ! ಬೇಕಲ್ಲ? ಸವಿನೆನಪು! ಈ ಸುಂದರ ತಾಣಕ್ಕೆ ನೀಡಿದ ಭೇಟಿಯದು! ಮತ್ತೆ ಬ್ಯಾಕ್'ಗ್ರೌಂಡ್ ಕೂಡ ಪೋಟೋಕ್ಕೆ ಹೇಳಿ ಮಾಡಿಸಿದಂತೆ ಇದ್ದಿದ್ದು ಬೇರೆ! ಮತ್ತೊಂದಷ್ಟು ಹೊತ್ತು ಅಲ್ಲಿನ ಆಹ್ಲಾದಕರ ವಾತಾವರಣದ ಪೂರ್ಣಾನುಭವ ಪಡೆಯಲು...
ಈ ಮಧ್ಯೆ 'ಯಾವುದೀ ಬೆಟ್ಟ' ಎಂದು ಉದ್ಗರಿಸಿದ್ದವರೂ ಹಾಜರ್! ಅವರದ್ದೂ ಪೋಟೋ ಸೆಷನ್ಸ್ ನಡೆದವು. ಕೊನೆಗೆ ಅವರಲ್ಲೊಬ್ಬರಿಗೆ ಮನೆಯವರ ನೆನಪೂ! ಛೇ! ಅದೆಷ್ಟು ಚೆನ್ನಾಗಿದೆ, ಹೆಂಡತಿ ಮಕ್ಕಳೂ ಜೊತೆಗಿರಬೇಕಿತ್ತೆಂದು...
ಅಂತೂ ಅರ್ಧ ಗಂಟೆಯು ಕಣ್ಮುಚ್ಚಿ ಒಡೆಯುವುದರೊಳಗೆ ಮುಗಿದೇ ಬಿಟ್ಟಿತೆಂದು ಭಾಸವಾಯಿತು! ಪುಣ್ಯಕ್ಕೆ ನಮ್ಮ ಸಾರಥಿಯ ಕೃಪೆಯಿಂದ ಮತ್ತೂ ಕಾಲು ಗಂಟೆ ಹೆಚ್ಚೇ ಪಡೆದುಕೊಂಡೆವು! ಅಂತೂ ಸೂರ್ಯ ಮುಳುಗುವುದಕ್ಕೆ ಸ್ವಲ್ಪ ಮೊದಲೇ ಕೆಳ ಬಂದಾಗಿತ್ತು. ಕೆಳಗಿಳಿಯುವಾಗಲೂ ಪಿಕಪ್ ಸವಾರಿಯ ಮಜಾ ಬೇರೆಯೇ ಅದು!
ಪಟ್ಲದಲ್ಲಿನ ಬೆಟ್ಟಕ್ಕೆ ಕಾರೇನೂ ಹತ್ತದು! ಜೀಪೋ ಪಿಕ್ಕಪ್ಪೋ ಆಗಬೇಕು. ಧೈರ್ಯವಂತರು ಬೈಕು-ಸ್ಕೂಟರುಗಳೊಡನೆ ಏರುವ ಸಾಹಸ ಮಾಡಬಹುದು, ಟ್ರೆಕ್ಕಿಂಗ್ ಆಸಕ್ತರು ನಡೆದೇ ೨-೩ ಕಿ.ಮೀ ಪುಟ್ಟದೊಂದು ಟ್ರೆಕ್ಕಿಂಗಿನ ಅನುಭವ ಪಡೆಯಬಹುದು.
ಅಲ್ಲಿಂದ ಪುನಃ ಹೋಂಸ್ಟೇಗೆ ನಮ್ಮ ಪಯಣ. ರಾತ್ರಿಯೂಟ ವನಗೂರಿನ ದೀಪಿಕಾ ಹೋಟೆಲ್ ನಲ್ಲಿ, ಮರುದಿನ ಬೆಳಗಿನ ತಿಂಡಿಯೂ ಅಲ್ಲಿಯೇ. ಅಜ್ಜ, ಅಜ್ಜಿ, ಮಾವ ಸೇರಿ ಮೊಮ್ಮಗಳ ಹೆಸರಿನಲ್ಲಿ ನಡೆಸುತ್ತಿರುವ ಹೋಟೆಲ್ ಅದು. ವಿದೇಶದಲ್ಲಿ ಎಂ.ಬಿ.ಬಿ.ಎಸ್ ಓದುತ್ತಿರುವ ಅವಳ ಮೇಲಿನ ಪ್ರೀತಿ ಅವರ ಪ್ರತೀ ಮಾತುಗಳಲ್ಲಿಯೂ ವ್ಯಕ್ತವಾಗುತ್ತಿದ್ದವು!
ಉಪಾಹಾರದ ಬಳಿಕ ನಾವು ತೆರಳಿದ್ದು ಮೂಕನಮನೆ ಫಾಲ್ಸ್'ಗೆ. ಅದು ಬಂಡೆಕಲ್ಲುಗಳ ಮಧ್ಯೆ ಹರಿವ ತೋಡುಳ್ಳ ಪುಟ್ಟದೊಂದು ಜಲಪಾತ! ಜಲಪಾತವನ್ನು ನೋಡುವುದಕ್ಕಿಂತಲೂ ಕಲ್ಲುಗಳ ಏರಿಳಿತದ ಮಧ್ಯೆ ಓಡಾಡುವುದೇ ಇಲ್ಲಿ ಮುದನೀಡುವಂಥದ್ದು. ಪೇಟೆಯಲ್ಲಿರುವವರಿಗೆ ಹಳ್ಳಿಯ ಪೂರ್ಣಾನುಭವ ನೀಡಬಹುದಾದ ಪ್ರದೇಶವಿದು. ಹಳ್ಳಿಯೇ ಬೆಳೆದವರಿಗೆ, ಹಳ್ಳಿಗಳನ್ನು ಕಂಡು ತಿಳಿದವರಿಗೆ ಹೊಸದೆನಿಸದು! ಇಲ್ಲಿ ಹೋಂಸ್ಟೇ ಕೂಡ ಇದೆ...
ಹೀಗೆ ಎರಡು ವಿಭಿನ್ನ ತಾಣಗಳನ್ನು ವೀಕ್ಷಿಸಿ ಮರಳಿದೆವು;
ಮರುದಿನವೇ ಹೊಸ ನೆನಪುಗಳ ಸಂಗ್ರಹಿಸಿಕೊಂಡು...
~~~~
ಪಟ್ಲ ಬೆಟ್ಟದ ವಾಹನ ವ್ಯವಸ್ಥೆಯ ಕುರಿತು:-
₹1000 - ಒಂದು ಟ್ರಿಪ್ಪಿಗೆ.
ಬೆಟ್ಟಕ್ಕೆ ಹೋಗುವುದು, ಅರ್ಧ ಗಂಟೆಯ ಕಾಲಾವಕಾಶ ನಮಗೆ ಬೆಟ್ಟದಲ್ಲಿ, ಮತ್ತದೇ ಪಿಕಪ್ಪು ನಮ್ಮನ್ನು ವಾಪಸ್ ಕರೆದುಕೊಂಡು ಬರುವುದು!