ಈ ಸಂಭಾಷಣೆ
" ನಗು ಬರ್ತಾ ಇದೆ ನಂಗೆ ನಿಮ್ಮ ಮಾತು ಕೇಳಿ"....
" ನಗು ಬರುವಂತಹದ್ದು ಏನು ಹೇಳಿದೆನೇ ನಾನು'
" ಏನಿಲ್ಲಾ... ಈ ಕಾಲದಲ್ಲೂ 50 ವರ್ಷದ ಹಿಂದಿನ ಮಾತುಗಳನ್ನು ಆಡ್ತಾ ಇದೀರಲ್ಲ "
" ನಾನು ಹೇಳಿದ್ದು ಸಾರ್ವಕಾಲಿಕ ಸತ್ಯ ಕಣೇ....ಹೆಣ್ಣು ಹೆತ್ತ ತಂದೆಯರೆಲ್ಲ ಆಲೋಚಿಸುವುದೇ ಹೀಗೇ . ಜನರಿಗೆ ತಕ್ಕಂತೆ ನಾವು ಆಲೋಚನೆ ಮಾಡಬೇಕಾಗತ್ತೆ. ಮನೆಯ ಹಿರಿಯರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗತ್ತೆ. "
" ನೀವು ಊರಿನವರ, ಹಿರಿಯರ ಮರ್ಜಿಗೆ ತಕ್ಕಂತೆ ಆಲೋಚಿಸುತ್ತ ಕೂರುವುದಾದರೆ ನಿಮ್ಮ ಮಗಳ ಬಗ್ಗೆ ಯೋಚಿಸುವವರು ಯಾರು? "
" ನೀನಿದ್ದೀಯಲ್ಲ ನಿನ್ನ ಮಗಳ ಬಗ್ಗೆ ಆಲೋಚನೆ ಮಾಡುವುದಕ್ಕೆ"
" ಇಷ್ಟು ವರ್ಷ ಅದನ್ನೇ ಮಾಡಿದ್ದಲ್ಲವೇ ನಾನು..ನಿಮ್ಮಂಥ ಸಿಟ್ಟಿನ ಅಪ್ಪನ ಹತ್ತಿರ ಮಾತಾಡಕ್ಕೆ 23 ವರ್ಷ ಆದ್ರೂ ಅವಳಿನ್ನೂ ಹೆದರ್ತಾಳೆ...ಎಲ್ಲ ನನ್ನ ಮುಖೇನವೇ ನಿಮ್ಮಿಬ್ಬರ ಮಾತುಕತೆ...ಆದ್ರೆ ಈಗ ನಡೀತಾ ಇರೋದು ಅವಳ ಮದುವೆಯ ವಿಷಯ....ಅದಕ್ಕೆ ನಮ್ಮಿಬ್ಬರ ಸಂಪೂರ್ಣ ಒಪ್ಪಿಗೆ, ಆಶೀರ್ವಾದ ಎರಡೂ ಅತಿ ಅವಶ್ಯ ಅವಳಿಗೆ. ಇಲ್ಲದಿದ್ದರೆ ಅವಳು ಮುಕುಂದನ ಬಗ್ಗೆ ಮುಂದುವರೆಯುವುದೇ ಇಲ್ಲವಂತೆ. ನಾವೀಗ ಮಹಿಮಾ ಮತ್ತು ಮುಕುಂದರ ಮದುವೆಯ ಸಾಧಕ ಬಾಧಕಗಳ ಬಗ್ಗೆ ಒಟ್ಟಾಗಿ ಆಲೋಚಿಸಿ ನಮ್ಮ ಒಪ್ಪಿಗೆಯನ್ನೋ ನಿರಾಕರಣೆಯನ್ನೋ ಸೂಚಿಸಿದರೆ ಅದರ ಪ್ರಕಾರ ನಡೆಯುತ್ತಾಳೆ ಅವಳು. ನಿಮ್ಮ ಅನಿಸಿಕೆ ಅಭಿಪ್ರಾಯ ಅತೀ ಮುಖ್ಯ ಆವಳಿಗೆ. "
" ನನ್ನ ಅಭಿಪ್ರಾಯ ನಾನು ಅವತ್ತೇ ಹೇಳಿ ಆಯ್ತು ಅವಳಿಗೆ. ಅವಳು ಒಬ್ಬ ಬ್ರಾಹ್ಮಣನನ್ನು ಆರಿಸಿಕೊಂಡಿದ್ದ ಪಕ್ಷದಲ್ಲಿ ಕಣ್ಣು ಮುಚ್ಚಿಕೊಂಡು
ಮದುವೆ ಮಾಡಿ ಕೊಡ್ತಿದ್ದೆ. ನಮ್ಮ ಸಂಸ್ಕಾರ , ಸಂಪ್ರದಾಯ ಬೇರೆ....ಅವರದ್ದು ಬೇರೆ. ಹೊಂದಿಕೊಳ್ಳಕ್ಕೆ ಅವಳಿಗೆ ತಾನೇ ಕಷ್ಟ... ಅವಳಿಗೆ ಮುಂದಕ್ಕೆ ಕಷ್ಟ ಆಗಬಾರದು ಅಂತ ತಾನೇ ನಾನು ಈ ಸಂಬಂಧ ಬೇಡ ಅಂತಾ ಇರೋದು?"
" ನಿಮ್ಮ ಮಾತು ನಿಜ. ನಿಮ್ಮ ಆಲೋಚನೆಯೂ ನಿಜ. ಆದರೆ ನೀವಿಲ್ಲಿ ಮರೀತಾ ಇರೋದು ಮುಕುಂದನ ಬಗ್ಗೆ ಅವಳೆಷ್ಟು ಆಸಕ್ತಳು, ಬದ್ಧಳು ಅನ್ನೋದು.... ನಾವು ಅವಳಿಗೆ ಕಟ್ಟಿಕೊಟ್ಟಿರುವ ಪ್ರೀತಿ ವಾತ್ಸಲ್ಯದ ಬುನಾದಿ ಬಹಳ ಗಟ್ಟಿಯಾಗಿದೆ ಕಣ್ರೀ... ಮನೆಯಲ್ಲಿನ ಪ್ರೀತಿ, ಗಮನಗಳ ಕೊರತೆಯಿಂದ ಯಾವುದೋ ಬೇಕಾಬಿಟ್ಟಿ ಹುಡುಗನಿಗೆ ಮನ ಸೋಲುವವಳಲ್ಲ ನಮ್ಮ ಮಹಿಮಾ...ತರ್ಕಬದ್ಧವಾಗಿ ಆಲೋಚಿಸಬಲ್ಲ ವಿದ್ಯಾವಂತೆ, ವಿಚಾರವಂತೆ. ಎರಡು ವರ್ಷಗಳ ಮುಕುಂದನ ಜೊತೆಗಿನ ಒಡನಾಟದಲ್ಲಿ ಅವನ ಗುಣ ದೋಷಗಳನ್ನೆಲ್ಲ ಗ್ರಹಿಸಿರುವ ಜಾಣ ಹುಡುಗಿ ಅವಳು. ಪೂರ್ವಾಪರ ಆಲೋಚಿಸದೆ ದುಡುಕಿನ ನಿರ್ಧಾರಕ್ಕೆ ಬಂದವಳಲ್ಲ. ನೀವು ಒಮ್ಮೆ ಅವಳ ಜೊತೆ ಕುಳಿತು ಮಾತನಾಡಿ ನೋಡಿ. ಅದೆಷ್ಟು ಆತ್ಮವಿಶ್ವಾಸದಿಂದ ಇದಾಳೆ, ಅದೆಷ್ಟು ವಿಶ್ವಾಸ ಅವನ ಬಗ್ಗೆ ಬೆಳೆಸಿಕೊಂಡಿದ್ದಾಳೆ ಅಂತ. ನಿಮ್ಮ ಅಭಿಪ್ರಾಯ ಅವಳ ಮೇಲೆ ಹೇರಬೇಡಿ. ಅಷ್ಟಕ್ಕೂ ಹುಡುಗನ ತಂದೆ ಹಿಂದು ಧರ್ಮದವರೇ. ತಾಯಿ ಬ್ರಾಹ್ಮಣರೇ ತಾನೇ. ಸ್ವತಃ ಅಂತರ್ಜಾತೀಯ ವಿವಾಹಿತರಾದವರು ಅವರ ಮಗನ ಇಚ್ಛೆಯನ್ನು ಗೌರವಿಸುವುದು ಸಹಜವೇ ತಾನೇ? ನಮ್ಮನ್ನು ಕೇಳಿದವರಿಗೆ ಹಾಗೇ ಹೇಳಿದರಾಯ್ತು. "
" ಅದೇ ಮತ್ತೆ....ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಒಂದು ಸಾರಿ ಒಪ್ಪಿಬಿಟ್ಟರೆ ಮುಗಿಯಿತು. ಅದೇ ನಿಜವನ್ನೇ ಕೇಳಿದವರಿಗೆ ಹೇಳುವುದು"
" ಹಾಗಿದ್ದರೆ ನಿಮಗೆ ಈ ಸಂಬಂಧ ಇಷ್ಟ ಇದೆ ಅಂತಲಾ?"
" ನಾ ಎಲ್ಲಿ ಹೇಳಿದೆ ಹಾಗಂತ? ಒಪ್ಪಿದ ಮೇಲೆ ಹಾಗೆ ಅಂದೆ ಅಷ್ಟೇ"
" ಏನ್ರೀ ನೀವು? ಮಗಳು ಬಾಯಿ ತೆಗೆದು ಏನನ್ನಾದರೂ ಕೇಳುವಷ್ಟರಲ್ಲಿ ತಂದು ಮುಂದೆ ಇಡ್ತಿದ್ರಿ.... ಈಗ ಅವಳು ಅವಳ ಜೀವನ ಸಂಗಾತಿಯನ್ನು ಆರಿಸಿಕೊಂಡಿದ್ದಾಳೆ ಅಂದ್ರೆ ನಿಮಗ್ಯಾಕೆ ಅದನ್ನು ಒಪ್ಪಿಕೊಳ್ಳಕ್ಕೆ ಆಗ್ತಿಲ್ಲ ?"
" ನೀನು ಒಪ್ಪಿಕೊಂಡಿದ್ದೀಯ ಹಾಗಿದ್ರೆ? ಮುಂದಾಲೋಚನೆ ಒಂದು ಚೂರೂ ಇಲ್ಲ ನಿಂಗೆ. ಅವಳು ಹೇಳ್ತಾಳೆ ಅಂತ ಕುಣಿಯಬೇಕೇನು ನಾವು?"
" ಕುಣಿಯುವುದೇನೂ ಬೇಡ..ಅವಳ ಮನಸ್ಸನ್ನು ಅರ್ಥ ಮಾಡಿಕೊಂಡರೆ ಸಾಕು. "
" ಅರ್ಥ ಆಗಿದೆ ಕಣೇ... ಆದ್ರೂ...."
" ನೀವೇ ಅಲ್ಲವೇನ್ರೀ ಅವಳಿಗೆ ಆಯ್ಕೆಯ ಸ್ವಾತಂತ್ರ್ಯ ಕೊಟ್ಟಿದ್ದು?......ಅವಳಿಗಿಷ್ಟ ಆದ ಹುಡುಗನ್ನ ಕರೆದುಕೊಂಡು ಬಂದರೆ ನೀವೇ ಮುಂದೆ ನಿಂತು ಮದುವೆ ಮಾಡ್ತೀನಿ ಅಂತ? ಒಂದುವೇಳೆ ಅವಳಿಗೆ ಯಾರೂ ಇಷ್ಟ ಆಗದ ಪಕ್ಷದಲ್ಲಿ ನೀವು ಆರಿಸಿದ ಹುಡುಗನನ್ನೇ ಅವಳು ಮದುವೆ ಆಗ್ತೀನಿ ಅಂತ ಅವಳೂ ಹೇಳಿದ್ದಳಲ್ಲ."
" ಅದೆಲ್ಲ ಸರಿ ಕಣೇ.... ಆದ್ರೂ ಅವಳೊಬ್ಬ ಬ್ರಾಹ್ಮಣನನ್ನು ಆರಿಸಿಬಿಟ್ಟಿದ್ದರೆ........'
" ರೀ....ಅವಳು ಮುಕುಂದನನ್ನು ಮನಸಾರೆ ಮೆಚ್ಚಿದಾಳೆ............ ಹಚ್ಚಿಕೊಂಡಿದ್ದಾಳೆ...........ಅವರಿಬ್ಬರೂ ಈ ವಿಷಯದಲ್ಲಿ ಮುಂದೆ ಬರಬಹುದಾದ ಎಲ್ಲ ಬಗೆಯ ಪರಿಣಾಮಗಳನ್ನೂ, ಸಮಸ್ಯೆಗಳನ್ನೂ ಕೂಲಂಕುಷವಾಗಿ ಚರ್ಚಿಸಿ ಆಗಿದೆ... ಇಬ್ಬರೂ ಪ್ರಬುದ್ಧರು...ತರ್ಕಬದ್ಧವಾಗಿ ಆಲೋಚನೆ ಮಾಡುವವರು....ಆತುರದ ನಿರ್ಧಾರ ತೆಗೆದುಕೊಳ್ಳುವವರಲ್ಲ..... ಅವರಿಬ್ಬರ ಹೊಂಗನಸು ಒಂದೇ. ಎರಡೂ ಕಡೆಯ ಅಪ್ಪ ಅಮ್ಮಂದಿರ ಪೂರ್ಣ ಒಪ್ಪಿಗೆ, ಸಂಪೂರ್ಣ ಆಶೀರ್ವಾದ ಬೇಕು ಅಂತ. ನನ್ನದಂತೂ ಸಂಪೂರ್ಣ ಒಪ್ಪಿಗೆ, ಹೃತ್ಪೂರ್ವಕ ಆಶೀರ್ವಾದ ಇದೆ. ನೀವೂ ಹಾಗೆ ಮಾಡಿದ್ದರೆ ಒಳ್ಳೆಯದಿತ್ತು ರೀ.. ನಾನು ನೀವು ಒಂದೇ ಮನಸ್ಸಿನಿಂದ ಒಪ್ಪಿ ಈ ಮದುವೆ ನಡೆಸಿದರೆ ಊರವರ, ನೆಂಟರಿಷ್ಟರ ಮಾತುಗಳನ್ನು ಆರಾಮವಾಗಿ ಎದುರಿಸಬಹುದು. ನಮ್ಮಲ್ಲೇ ಭಿನ್ನ ಚಿತ್ತವಿದ್ದರೆ ಆಡಿಕೊಳ್ಳುವವರಿಗೆ ನಾವೇ ಆಹ್ವಾನ ನೀಡಿದಂತೆ. ಹೌದೋ ಅಲ್ಲವೋ ನೀವೇ ಯೋಚನೆ ಮಾಡಿ. "
" ಅದು ಸರಿ ಕಣೇ. ಈ ಮನೆಯ ಸಂಸ್ಕಾರ ಪಡೆದವಳಿಗೆ ಅಲ್ಲಿ ಹೊಂದಿಕೊಳ್ಳುವುದು ಕಷ್ಟ ಆಗಲ್ಲವೇನೇ?'
" ಅವಳು ಯಾವ ಹುಡುಗನನ್ನು ಮದುವೆಯಾದರೂ ಈ ಹೊಂದಾಣಿಕೆ ಮಾಡಿಕೊಳ್ಳೋದು ತಪ್ಪಲ್ಲ ಕಣ್ರೀ... ಅದೂ ಅಲ್ಲದೆ ಅವಳು ಮಾನಸಿಕವಾಗಿ ಸಿದ್ಧವಾಗಿರುವಾಗ ಯಾವುದೇ ಹಿಂಜರಿಕೆ ಇರಲ್ಲ ಕಣ್ರೀ. ಅವಳು ಹೇಳೋದನ್ನು ಕೇಳಿದರೆ ನಮ್ಮ ಮನೆಯ ಪದ್ಧತಿಗಳಿಗೂ, ಮೌಲ್ಯಗಳಿಗೂ , ಹಾಗೂ ಅವರ ಮನೆಯದಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ. ಹಾಗಾಗಿ ಅವಳು ಅಷ್ಟು ಭರವಸೆಯಿಂದ ಇದಾಳೆ. "
" ನೀನು ಎಷ್ಟೇ ಹೇಳಿದ್ರೂ ನನಗ್ಯಾಕೋ ಇದು ಸರಿ ಅನ್ನಿಸ್ತಿಲ್ಲ ಕಣೇ..."
" ರೀ...ಅವಳು ಈ ಕಾಲಘಟ್ಟಕ್ಕೆ ಸೇರಿದವಳು. ಅವಳಿಗೇನು ಬೇಕು, ಹೇಗೆ ಬೇಕು ಅನ್ನುವುದಕ್ಕೆ ತಕ್ಕಂತೆ ಅವಳ ಜೀವನ ರೂಪಿಸಿಕೊಳ್ತಾಳೆ. ಮುಕುಂದನನ್ನೇ ನಾವು ಒಪ್ಪಿದರೆ ಇಬ್ಬರೂ ಸಂತೋಷದಿಂದ ಇರ್ತಾರೆ..ಒಂದುವೇಳೆ ನಾವು ನಿರಾಕರಿಸಿದರೆ ನಿಮ್ಮ ಮಗಳ ಸಂಕಟ, ದುಃಖ, ನೋವನ್ನು ದಿನನಿತ್ಯ ನೋಡಿ ಸಹಿಸೋಕೆ ಸಾಧ್ಯವೇ?...ಒಂದುವೇಳೆ ನಾವು ಬಲವಂತವಾಗಿ ಬೇರೆ ಹುಡುಗನ ಜೊತೆ ಮದುವೆ ಮಾಡಿಸಿದರೆ ಇವರಿಬ್ಬರ ಜೊತೆ ಆ ಹುಡುಗನ ಜೀವನವೂ ಹಾಳಾಗಲು ನಾವು ಕಾರಣ ಆಗ್ತೀವಲ್ರೀ?? ಈಗ ಎಲ್ಲಾ ವಿಷಯದಲ್ಲೂ ಸಂಪೂರ್ಣ ಹೊಂದಿಕೆಯಾಗತ್ತೆ ಮಹಿಮಾ ಮುಕುಂದರದ್ದು. ಇಷ್ಟೊಂದು ತಕ್ಕುನಾದ ಹುಡುಗ ಬೇರೆ ಹುಡುಕಲು ನಮ್ಮಿಂದ ಸಾಧ್ಯವೇ? ."
" ಅದೇನೋ ನಿಜ. ನಮ್ಮ ಕೈಲಿ ಅಷ್ಟು ಅನುರೂಪನಾದ ಹುಡುಗನನ್ನು ಹುಡುಕಲು ಸಾಧ್ಯವಿಲ್ಲ. "
" ಮತ್ತೇನು ಅನುಮಾನ ನಿಮಗೆ? ಅವನನ್ನೊಮ್ಮೆ ನೋಡೋಣ. ಮಾತಾಡೋಣ. ಅವನ ಮನೆಯವರನ್ನೂ ನೋಡೋಣ. ನಮಗೆ ಎಲ್ಲವೂ ಸಮಾಧಾನ ಅನ್ನಿಸಿದ ಪಕ್ಷದಲ್ಲಿ ನಮ್ಮ ಒಪ್ಪಿಗೆ ತಿಳಿಸೋಣ. ಒಂದು ಸಣ್ಣ ವಿಚಾರದಲ್ಲಿ ಅಸಮಾಧಾನವಿದ್ದರೂ ಅವಳಿಗೆ ತಿಳಿಸಿಬಿಡೋಣ. ಬೇಡಮ್ಮ. ನಮಗೆ ಒಪ್ಪಿಗೆಯಿಲ್ಲ ಅಂತ. ಅದಕ್ಕೂ ಮುಂಚೆ ಅವಳ ಹತ್ತಿರವೇ ವಿಚಾರಣೆ ನಡೆಸಿ ಅವಳದೆಷ್ಟು ದೃಢ ನಿರ್ಧಾರ ಎನ್ನುವುದನ್ನು ನೀವೇ ಮನದಟ್ಟು ಮಾಡಿಕೊಳ್ಳಿ."
" ನನಗೂ ಮುಕುಂದ ಇಷ್ಟ ಕಣೇ. ಒಂದು ದುಶ್ಚಟವಿಲ್ಲ...ಒಂದು ಬೇಡದ ಹವ್ಯಾಸವಿಲ್ಲ......ತಂದೆ ತಾಯಿ ಅಂದರೆ ಅದೆಷ್ಟು ಗೌರವ, ವಿಧೇಯತೆ...ಎಷ್ಟು ಸರಳ ಸ್ವಭಾವ, ಎಷ್ಟು ಸಭ್ಯ, ಎಂಥ ನೇರ ನಡೆ ನುಡಿ, ಸಹಾಯ ಮಾಡುವ ಗುಣ......"
" ಅರೇ ಏನ್ರೀ ಇದು....ಮುಕುಂದನ ಬಗ್ಗೆ ಇಷ್ಟೆಲ್ಲ ಹೇಗೆ ಗೊತ್ತು ನಿಮಗೆ? "
" ಅದೂ.....ಅದೂ....ಅದೂ....ಮಹಿಮಾ ನಿನ್ನ ಹತ್ತಿರ ಹೇಳುವಾಗ ನಾನು ಎಲ್ಲ ಕೇಳಿಸಿಕೊಂಡೇ ಕಣೇ... ನಿದ್ದೆ ಮಾಡಿರಲಿಲ್ಲ ಕಣೇ ನಾನು"....
" ಭಾರಿ ಇದೀರಿ ಕಣ್ರೀ ನೀವು...ನಾ ಏನೋ ಅಂತ ಇದ್ದೆ. ನಿಮ್ಮ ಬಾಯಲ್ಲಿ ಈ ಸಕಾರಾತ್ಮಕ ಮಾತುಗಳು ಬಂತಲ್ಲ...ನಮಗಷ್ಟೇ ಸಾಕು. "
" ಮಹಿಮಾ".....
" ಏನಪ್ಪಾ? ಕರೆದ್ರಾ? "
" ಹೂಂ ಕಂದಾ. ನಾನು ಅಮ್ಮ ಮಾತಾಡಿದ್ವಿ ನಿನ್ನ ವಿಷಯ.. ಮುಕುಂದನಿಗೆ ತಿಳಿಸು. ನಾವು ಮುಂದಿನವಾರ ಅವನ ಮನೆಗೆ ಬರ್ತೀವಿ ಅವನ ತಾಯಿ ತಂದೆಯರನ್ನು ಭೇಟಿ ಆಗಕ್ಕೆ ಅಂತ...."
" ನೋಡ್ರೀ ನೋಡ್ರೀ, ಅವಳ ಮುಖ ಎಷ್ಟು ಅರಳಿತು ಅಂತ. "
" ನಮ್ಮ ಮಗಳ ಸಂತೋಷವೇ ನಮ್ಮ ಸಂತೋಷ ಅಲ್ಲವೇನೇ?"
---------------------------
❤❤❤❤❤❤❤❤❤❤❤
❤❤❤❤❤❤❤❤❤❤❤
0 Followers
0 Following