ಒಂದು ಹೊಸ ವಿಷಯವನ್ನು ಆ ಕೂಡಲೇ ನಮ್ಮ ಮನಸ್ಸು ಒಪ್ಪಿಕೊಳ್ಳದು! ಒಪ್ಪಿಕೊಳ್ಳಲು ಸ್ವಲ್ಪ ಅಲ್ಲಲ್ಲ ಸ್ವಲ್ಪ ಜಾಸ್ತಿಯೇ ಸಮಯಬೇಕು!
ನನಗೆ ನಮ್ಮ ಶ್ರೀಗುರುಗಳ ಆಶೀರ್ವಚನ ಮತ್ತು ಬೇರೆ ಬೇರೆ ವಿದ್ವತ್ ಜನರ ಭಾಷಣಗಳನ್ನೋ, ವಿಚಾರ ಮಂಡನೆಗಳನ್ನೋ ವಿಮರ್ಶೆಗಳನ್ನೋ ಕೇಳುವ ತವಕವೋ,ಇಚ್ಛೆಯೋ, ಹುಚ್ಚೋ ಅದೇನೊ ಒಂದು.
ಒಮ್ಮೆ ಬ್ರಹ್ಮಕುಮಾರಿ ಶಿವಾನಿ ದೀದಿ ಅವರ ಒಂದು ಪ್ರವಚನದ ಮುಖ್ಯ ವಿಷಯ "ಆಲೋಚನೆಗಳನ್ನು ಯೋಚಿಸು ಮತ್ತು ಯೋಚನೆ ಮಾಡಿ ಯೋಚಿಸು" ಎಂಬುದಾಗಿತ್ತು.
ಹಾಂ..ಇದೇನಿದು ಹೊಸತಾಗಿದೆಯಲ್ಲಾ ಅಂತ ಯೋಚನೆ ಬಂತು...ಮುಂದಕ್ಕೆ ಅವರ ಪ್ರವಚನದ ಸಾಲುಗಳು ಎಷ್ಟು ಎನ್ನ ತಲೆಯೊಳಗೆ ಹೊಕ್ಕವೋ ಗೊತ್ತಿಲ್ಲ!
ಹೌದಲ್ಲ... ನಮ್ಮ ಆಲೋಚನೆಗಳ ಬಗ್ಗೆ ಯೋಚಿಸಬೇಕೆಂಬುದು ಗೊತ್ತೇ ಇರಲಿಲ್ಲ...ಯೋಚಿಸಿ ಯೋಚಿಸಿದಾಗ ಅದರ ಮಹತ್ವ , ಅದು ಎಷ್ಟು ಅವಶ್ಯಕ ಅಂತ ಗೊತ್ತಾಯ್ತು..
ನಾವು ಸಣ್ಣವರಿರುವಾಗ ಅಪ್ಪ "ಒಳ್ಳೊಳ್ಳೆಯ ಆಲೋಚನೆಗಳನ್ನೆ lನಾವು ಯಾವಾಗಲೂ ಮಾಡಬೇಕು" ಅಂತಿದ್ರು.
ಯಾಕೆ ?ಹೇಗೆ ? ಏನೂ ಮರಳಿ ಕೇಳುವ ಯೋಚನೆಯು ತಲೆಯೊಳಿರಲಿಲ್ಲ! ಆ ಬಗ್ಗೆ ಅರಿವಿದ್ದರೆ ತಾನೇ!?
ಹೇಳಿಕೊಟ್ಟವರೂ ಇಲ್ಲ ಬಿಡಿ...
ಮನುಷ್ಯ ಅಂದ ಮೇಲೆ ಒಳ್ಳೆಯ ಮತ್ತು ಕೆಟ್ಟ ಎರಡು ಆಲೋಚನೆಗಳೂ ಸಹಜವೆ ಹೌದು!
ಆದರೆ ನಮ್ಮ ಯೋಚನೆಗಳು ಒಳ್ಳೆಯದಾಗಿ , ಸಕಾರಾತ್ಮಕ ದೃಷ್ಟಿಯನ್ನು ಹೊಂದಬೇಕೆಂದರೆ ಶಿಸ್ತಿನ ಅಭ್ಯಾಸವೂ ಅಷ್ಟೇ ಮುಖ್ಯ ಎಂದು ಅದನ್ನು ಅಭ್ಯಸಿಸಿದಾಗಲಷ್ಟೇ ಅರಿವಾಯ್ತು.
ಯಾಕೆ ಬೇಕು ಈ ಅಭ್ಯಾಸ ಎಂದರೆ?!
ಸದ್ಯವಷ್ಟೇ ಒಂದೆಡೆ ಕೇಳಿದ್ದೆ ನಮ್ಮ ಯೋಚನಾಲಹರಿಗೆ ನಮ್ಮ ಉಸಿರಾಟಕ್ಕಿಂತ ಹೆಚ್ಚಿನ ವೇಗ ಮತ್ತು ಶಕ್ತಿಯಂತೆ!
ಯೋಚನೆ ಮಾಡಿ ಆಲೋಚನೆಗಳನ್ನು ಮಾಡಿದಾಗ ನಾವು ಮಾಡುವ ಕೆಲಸ ಕಾರ್ಯಗಳು ಉತ್ತಮೋತ್ತಮವಾಗಿ ಸಾಗುತ್ತವೆ!
ಉದಾಹರಣೆಗೆ ನಾವು ಗೃಹಿಣಿಯರು ಅದೆಷ್ಟೋ ಕೆಲಸಗಳನ್ನು ಪೂರ್ವ ತಯಾರಿಯೊಂದಿಗೆ ಅಚ್ಚುಕಟ್ಟಾಗಿ ಮಾಡುತ್ತೇವೆ!
ಕೊರತೆ ಕಂಡರೆ ಮತ್ತಿನಬಾರಿಗೆ ಅದನ್ನು ಸರಿಪಡಿಸಿ ಮತ್ತೂ ಚೆನ್ನಾಗಿ ಅಚ್ಚುಕಟ್ಟಾಗಿ ನಮ್ಮ ಕೆಲಸವನ್ನು ನಿಭಾಯಿಸುತ್ತೇವೆ!. ಅಂತೆಯೇ ಪುರುಷರೂ ..ಮಕ್ಕಳು!
ಈ ಶಿಸ್ತಿನ ಆಲೋಚನಾ ಅಭ್ಯಾಸ ನಮ್ಮ ಮನಸ್ಸಿಗಾದಾಗ ಕೆಟ್ಟ ಆಲೋಚನೆಗಳಿಗೆ ಎಡೆಇರದು!
ಯಾವುದೇ ಪರಿಸ್ಥಿತಿಯಲ್ಲೂ ಒಳಿತನ್ನೆ ಯೋಚಿಸುತ್ತಾ ,ಒಳಿತಿನ ಕಡೆ ದೃಷ್ಟಿ ಯಿಟ್ಟಾಗ,ಒಳಿತನ್ನೆ ಕಾಣುತ್ತಾ ಒಳಿತನ್ನೆ ಮಾಡುತ್ತಾ ಬದುಕನ್ನು ಸವೆಸುತ್ತೇವೆ! ಹಾಗಾದಾಗ ಬದುಕೆ ಸುಂದರವಾಗಿ ಕಾಣುವುದಕ್ಕೆ ಪ್ರಾರಂಭವಾಗುತ್ತದೆ...
ಈ ಅಭ್ಯಾಸವನ್ನು ಮಕ್ಕಳೂ ಮುನ್ನಡೆಸುವಂತೆ ಹೆತ್ತವರಾದ ನಾವು ಪ್ರೇರೇಪಿಸೋಣ.