ಅನುಮಾನನೇ ಬೇಡ, ಆ ಐದಾರು ಹುಡುಗರ ಗುಂಪು ಬಂದಿತ್ತಲ್ಲ ಅವರಲ್ಲೇ ಒಬ್ಬ ಕದಿದ್ದು. ಅದೂ ಮದುವೆ ಮನೆಯಲ್ಲಿ ಇದ್ದ ಅಷ್ಟೂ ಜನರ ಎದುರೇ ಕದಿದ್ದಾನೆ ಅಂದರೆ ಅವನು ಸಾಮಾನ್ಯನಲ್ಲ. ಅವನಿಗೆ ಸುಮ್ಮನೆ ಬಿಡಬಾರದು....
ಕಾಯೋದೇಕೆ ನಡಿ ಪೋಲಿಸ್ ಕಂಪ್ಲೆಂಟ್ ಕೊಡೋಣ.
ಬೇಡ, ಅಲ್ಲಿಗೆ ಹೋದರೆ ನಿಮಗೆ ಜವಾಬ್ದಾರಿ ಇಲ್ಲವೇ, ನೀವು ಕಳೆದುಕೊಂಡಿದ್ದು ನಾವೇಕೆ ಹುಡುಕಬೇಕು ಎಂದು ಹಂಗಿಸಿದರೆ....
ಅದಕ್ಕೆ?
ಕಳೆದುಕೊಂಡಿದ್ದು ನಾನು, ನಾನೇ ಹುಡುಕುತ್ತೇನೆ ಆದರೆ ಅದಕ್ಕೆ ನಿಮ್ಮ ಸಹಾಯವೂ ಬೇಕು.
ಸರಿ, ನಾವೇನು ಮಾಡಬೇಕು ಈಗ?
ಮೊದಲು ಆ ಹುಡುಗರು ಯಾರು? ಎಲ್ಲಿಂದ ಬಂದಿದ್ದು ತಿಳಿದುಕೊಳ್ಳಬೇಕು.
ಅದು ಹೇಗೆ ಸಾಧ್ಯ?
ಸಿಂಪಲ್, ಮದುವೆ ಪೋಟೋ ವಿಡಿಯೋ ಎರಡೂ ಇದೆ. ಅದನ್ನು ನೋಡಿ ನಮ್ಮ ಗೆಳತಿ ಮಧುಮಗಳಿಗೆ ಕೇಳೋಣ ಅಲ್ಲವೇ?
ಅವಳಿಗೆ ಗೊತ್ತಿಲ್ಲ ಎಂದರೆ.....
ಅವಳ ಗಂಡನಿಗೆ ಕೇಳೋಣ.
ಅವನಿಗೂ ಗೊತ್ತಿಲ್ಲ ಎಂದರೆ...
ಇಲ್ಲ, ಖಂಡಿತಾ ಇಬ್ಬರಲ್ಲಿ ಒಬ್ಬರಿಗೆ ಗೊತ್ತಿರುತ್ತದೆ.
ಹೌದು, ಅವರಿಗೆ ಆಮಂತ್ರಣ ಕೊಟ್ಟು ಕರೆದಿರುತ್ತಾರೆ.
ಮತ್ತೆ?
ಮತ್ತೇನು, ಕಳ್ಳರಿಗೆ ಯಾರು ಆಮಂತ್ರಣ ಕೊಟ್ಟು ಕರಿತಾರೆ ಬಂದು ಕಳ್ಳತನ ಮಾಡಿ ಎಂದು?
ಥೂ ಹೋಗೆ, ಅಪಶಕುನ ಹೇಳಬೇಡ.
ಅಪಶಕುನ ಅಲ್ಲ ಸತ್ಯ ಹೇಳಿದ್ದು.
ಸರಿ, ಈಗ ನೀವು ನನಗೆ ಸಹಾಯ ಮಾಡ್ತಿರೋ ಇಲ್ಲವೋ ಅಷ್ಟು ಹೇಳಿ ಸಾಕು.
ಖಂಡಿತಾ ಮಾಡ್ತೀವಿ.
ಹಾಗಿದ್ರೆ ಬನ್ನಿ ಆ ಪೋಟೋ ವೀಡಿಯೋ ತೆಗೆದವರು ಯಾರು ಕೇಳೋಣ.
ಏಕೆ?
ಆ ಹುಡುಗರ ಪೋಟೋ ಬೇಕಲ್ಲಾ.....
ನಾವು ಮಾತನಾಡುತ್ತಾ ಕುಳಿತಾಗ ನಮ್ಮ ಹಿಂದೆಯೇ ನಿಂತಿದ್ದರು. ನಾನು ಮೊಬೈಲಲ್ಲಿ ತೆಗೆದ ಫೋಟೋದಲ್ಲಿ ಬಹುಶಃ ಅವರು ಇರಬೇಕು.
ಹಾಗಿದ್ರೆ ಮೊದಲು ನೋಡು....
ಊಂ.... ಇವರೇನಾ ನೋಡು
ಹೌದು ಇವರೇ
ಇವರಲ್ಲಿ ಯಾರು ಇದ್ದಿರಬಹುದು
ಈ ನೀಲಿ ಅಂಗಿಯವನು
ಇವನೇ ಅಂತ ಹೇಗೆ ಹೇಳ್ತಿಯಾ?
ಡೌಟೇ ಬೇಡ ಅವನೇ, ಇವಳ ಅನುಮಾನ ಸರಿಯಿದೆ. ಏಕೆಂದರೆ ಎರಡು ಸಾರಿ ಬೇಕಂತ ನನ್ನ ಮೇಲೆ ಬೀಳುವಂತೆ ಬಂದಿದ್ದ.
ಸರಿ ಮುಂದೆ ಏನ್ ಮಾಡೋದು?
ಸಿಂಪಲ್, ಈ ಪೋಟೋನ ಮದುಮಗಳಿಗೆ ವಾಟ್ಸಪ್ ಮಾಡಿ ಇದರಲ್ಲಿ ಇರುವ ಹುಡುಗರು ಗೊತ್ತಾ ಕೇಳೋದು. ಅವಳಿಗೆ ಗೊತ್ತಿಲ್ಲ ಅಂದರೆ ಅವಳ ಹುಡುಗನಿಗೆ ಗೊತ್ತಾ ಕೇಳು ಅನ್ನೋದು.
ಅವನಿಗೂ ಗೊತ್ತಿಲ್ಲ ಅಂದ್ರೆ....
ನೀನು ಬಾಯಿ ಮುಚ್ಚಿಕೊಂಡು ಹೇಳಿದಷ್ಟು ಮಾಡು. ಅವನಿಗೂ ಗೊತ್ತಿಲ್ಲ ಅಂದ್ರೆ ಬೇರೆ ಏನು ಮಾಡಬೇಕು ಯೋಚನೆ ಮಾಡೋಣ.
ಸರಿ.
----**----
ಏಯ್, ಈ ಹುಡುಗ್ರೆಲ್ಲಾ ಅವಳ ಗಂಡನ ಫ್ರೆಂಡ್ಸ್ ಅಂತೆ. ಅದರಲ್ಲೂ ನೀಲಿಯಂಗಿಯವನು ಸಹಪಾಠಿ ಸಹೋದ್ಯೋಗಿ ಎಲ್ಲಾ ಅಂತೆ.
ಗುಡ್, ನಮ್ಮವರಿಗೆ ಪರಿಚಯ ಎಂದ ಮೇಲೆ ಒಳ್ಳೆಯದೇ ಆಯಿತು.
ಅವಳು ಯಾಕೆ ಅಂತ ಕೇಳ್ತಿದ್ದಾಳೆ.
ಈಗ ಏನು ಹೇಳುವುದು ಬೇಡ.
ಏಕೆ?
ಬರುವ ಭಾನುವಾರ ನಾವು ಅಲ್ಲಿಗೆ ಹೋಗೋಣ.
ಹೋಗಿ!?
ಅವರನ್ನೆಲ್ಲಾ ಇವರ ಮನೆಗೆ ಕರೆಸಿ ಮಾತಾಡೋಣ, ಏನಂತೀರಾ?
ಆಯ್ತು, ನೀನು ಹೇಳಿದಂತೆ.
--- * ---
ಏನ್ರೇ ಎಲ್ಲಾ ಹೀಗೆ ನಮ್ಮನೆಗೆ ಧಿಡೀರ್ ದಾಳಿ ಇಟ್ಟಿದ್ದೀರ? ಏನು ಸಮಾಚಾರ?
ಕೆಲಸ ಇತ್ತು ಬಂದ್ವಿ.
ಅಂದರೆ ನನ್ನನ್ನು ನೋಡಲು ಬಂದಿಲ್ಲ!?
ಎರಡೂ ಕೆಲಸಕ್ಕೂ ಬಂದಿರೋದು ಆಯ್ತಾ, ಮೊದಲು ನಿನ್ನ ಗಂಡನಿಗೆ ಹೇಳಿ ಅವತ್ತು ಮದುವೆಗೆ ಬಂದಿದ್ದ ಅವರ ಗೆಳೆಯರನ್ನು ಕರೆಸಲು ಹೇಳು. ಅದರಲ್ಲೂ ಅವತ್ತು ನೀಲಿ ಅಂಗಿ ಹಾಕಿದವನು ಯಾವುದೇ ಕಾರಣಕ್ಕೂ ತಪ್ಪಿಸದೆ ಕರೆಸಲು ಹೇಳು.
ಯಾಕೆ, ಏನಾಯ್ತು?
ಅವರು ಬರಲಿ ನಿನಗೇ ತಿಳಿಯುತ್ತೆ.
ನೀನು ಹೆಮ್ಮಾರಿ ಇದ್ದಹಾಗೆ ಅದಕ್ಕೆ ಕೇಳ್ತಿದ್ದೀನಿ ಏನು ವಿಷಯ ಅಂತ ಹೇಳು. ಮನೆಯಲ್ಲಿ ಒಬ್ಬಳೇ ಮಗಳೆಂದು ನಿನ್ನ ಮುದ್ದಿನಿಂದ ಬೆಳೆಸಿ ಎಲ್ಲರ ಮೇಲೂ ಸವಾರಿ ಮಾಡುವಂತೆ ಮಾಡಿದ್ದಾರೆ.
ಹೆದರಬೇಡ ಕಣೆ ಅವರನ್ನು ಕರೆಸು.
ನನ್ನ ಗಂಡನಿಗೆ ನೀನೆ ಹೇಳು .
ಇಲ್ಲ ನೀನೇ ಹೇಳು, ನಿನ್ನ ಮಾತು ಕೇಳಿಲ್ಲ ಅಂದ್ರೆ ಅವರಿಗೆ ನಾನೇ ಹೇಳ್ತೀನಿ ಆಯ್ತಾ.
ಏನ್ರಿ ನೀವು ನನ್ನ ಗೆಳೆಯರನ್ನು ಕರೆಸೋಕೆ ಹೇಳಿದ್ರಂತೆ, ಯಾರನ್ನ? ಯಾಕೆ? ಅಂತ.....
ನೋಡಿ ಈ ಫೋಟೋದಲ್ಲಿ ನಮ್ಮ ಹಿಂದೆ ನಿಂತಿದ್ದರಲ್ಲಾ ಅವರನ್ನ
ಅದೇ ಯಾಕೆ ಅಂತ...
ಅವರ ಜೊತೆ ಮಾತನಾಡಬೇಕು.
ಏನು ಮಾತನಾಡಬೇಕು?
ಅವರು ಬಂದ್ರೆ ನಿಮಗೇ ಗೊತ್ತಾಗುತ್ತೆ.
ಹಾಗಿದ್ರೆ ನಾನು ಯಾರನ್ನು ಕರೆಸೊಲ್ಲ...
ಹಾಗಿದ್ರೆ ನನ್ನ ಫ್ರೆಂಡ್ ಅವರ ಮೇಲೆ ಕಂಪ್ಲೆಂಟ್ ಕೊಡಬೇಕಾಗುತ್ತೆ.
ಏನಂತ?
ಮದುವೆ ಮನೆಗೆ ಬಂದವರು ಹಾಡಹಗಲೇ ಎಲ್ಲರೆದುರು ಕಳ್ಳತನ ಮಾಡಿದ್ದಾರೆ ಅಂತ.
ಖಂಡಿತಾ ನನ್ನ ಗೆಳೆಯರು ಅಂತವರಲ್ಲ.
ಹಾಗಿದ್ರೆ ಅವರನ್ನು ಬರಲು ಹೇಳಿ ಎಲ್ಲಾ ವಿಷಯ ಇಲ್ಲೇ ಮಾತನಾಡಿ ಬಗೆಹರಿಸಿಕೊಳ್ಳೋಣ. ಅದೂ ಆ ನೀಲಿ ಅಂಗಿಯವನು ಬರಲೇಬೇಕು.
ನೋಡಿ ಅವತ್ತು ನೀಲಿ ಅಂಗಿ ತೊಟ್ಟವನು ಇವನೇ...
ಏನ್ರಿ ನೋಡ್ಲಿಕ್ಕೆ ಡಿಸೆಂಟ್ ಆಗಿದ್ದೀರಿ, ಇಂತಹ ಕೆಲ್ಸನಾ ಮಾಡೋದು....
ನೋಡ್ಲಿಕ್ಕೆ ಚೆನ್ನಾಗಿದ್ರೆ ಸಾಲ್ದು, ನಡವಳಿಕೆನೂ ಚೆನ್ನಾಗಿರಬೇಕು..
ಕೈತುಂಬಾ ಸಂಬಳ ಬರೋ ಕೆಲಸದಲ್ಲಿ ಇದ್ದು ಇಂತಹ ಕೆಲಸ ಮಾಡಿದ್ರೆ...
ಸಾಕು ಸುಮ್ನಿರ್ರೇ, ಎಲ್ಲಾ ಸೇರಿ ಹೀಗೆ ದಾಳಿ ಮಾಡಿದ್ರೆ ಪಾಪ ಅವರು ಎಲ್ಲಿ ಹೋಗಬೇಕು, ಎಲ್ಲಾ ನಾನೇ ಕೇಳ್ತಿನಿ....
ಏನ್ರೀ ಮಿಸ್ಟರ್ , ನನ್ನ ನೋಡಿದ್ರೆ ಏನು ಅನಿಸುತ್ತೆ?
ಒಳ್ಳೆಯವರಂತೆ ಇದ್ದೀರಿ
ಅಷ್ಟೇನಾ?
ಒಳ್ಳೆಯ ಫ್ಯಾ ಮಿ ಲಿ ಯ ವ ರಂ ತೆ..
ಅದಕ್ಕೆ ಇಷ್ಟು ದಿನ ಜೋಪಾನವಾಗಿ ಇಟ್ಟುಕೊಂಡಿದ್ದನ್ನು ಕದ್ದು ಬಿಡೋದಾ?
ಮೇಡಂ ನಾನು ಕಳ್ಳ ಅಲ್ಲ, ನಾನು ನಿಮ್ಮದೇ ಅಲ್ಲಾ ಯಾರ ವಸ್ತುವನ್ನು ಕದ್ದಿಲ್ಲ. ನಿಮಗೆ ಏನೋ ಎಡವಟ್ಟಾಗಿದೆ ಅನಿಸುತ್ತೆ.
ಅಂದ್ರೆ ನಾನು ಎಡವಟ್ಟಾ!?
ನಾನು ಹೇಳಿದ್ದು ಹಾಗಲ್ಲ.
ಹಾಗಿದ್ರೆ ನಾನು ಸುಳ್ಳು ಹೇಳ್ತಿನಾ?
ನೋಡಿ, ನನ್ನ ಫ್ರೆಂಡ್ ಖಂಡಿತಾ ಕಳ್ಳ ಅಲ್ಲಾ. ದೇವರು ಅವನಿಗೆ ಎಲ್ಲಾ ಅನುಕೂಲ ಕೊಟ್ಟಿದ್ದಾನೆ. ನಮಗೆಲ್ಲ ಸಹಾಯ ಮಾಡುವವನು ಇವನು. ಬೇರೆ ಯಾರೋ ಕದ್ದಿದ್ದು ನೀವು ತಪ್ಪಾಗಿ ಇವನೆಂದು ಭಾವಿಸರಬೇಕು ಅಷ್ಟೇ....
ಖಂಡಿತವಾಗಿ ನೂರಕ್ಕೆ ನೂರು ಸತ್ಯ, ಇವರೇ ಕದ್ದಿದ್ದು, ಬೇರೆಯವರಲ್ಲ.
ಅಯ್ಯೋ ಮೇಡಂ ನೀವು ಹೀಗೆ ಹೇಳಿಬಿಟ್ಟರೆ ಹೇಗೆ? ನನ್ನ ಪರಿಸ್ಥಿತಿ ಏನು?
ಪರಿಸ್ಥಿತಿ ಏನು ಅಂತ ಕೇಳ್ತಿರಲ್ಲ, ನಿಮಗೆ ಹೆಂಡತಿ ಮಕ್ಕಳು ಇದ್ದಾರಾ?
ಇಲ್ಲ
ಲವರ್?
ಇಲ್ಲ
ಹಾಗಿದ್ರೆ ಕೇಳಿ, ಅವತ್ತು ಆ ತುಂಬಿದ ಮದುವೆ ಮನೆಯಲ್ಲಿ, ಜೊತೆಗಿದ್ದ ನನ್ನ ಗೆಳತಿಯರಿಗೂ ಗೊತ್ತಾಗದಂತೆ ನನ್ನ ಹೃದಯ ಕದ್ದಿದ್ದು ನೀವೇ. ಹೃದಯನೇ ಇಲ್ಲದೆ ನಾನು ಬದುಕೊದಾದ್ರು ಹೇಗೆ. ಅದಕ್ಕೆ ಹುಡುಕಿಕೊಂಡು ಬಂದಿದ್ದೇನೆ, ನಿಮ್ಮ ಮನೆಲಿ ನೀವು ಹೇಳಿ, ನಮ್ಮ ಮನೆಲಿ ನಾನು ಹೇಳ್ತಿನಿ. ಎರಡು ಮನೆಯಲ್ಲಿ ಒಪ್ಪಿಸಿ ಮದುವೆ ಆಗಿ ಬಿಡೋಣ. ನನ್ನ ಹೃದಯ ಕದಿದ್ದಕ್ಕೆ ನಿಮಗೆ ಇದೇ ಶಿಕ್ಷೆ.
ಜಿ. ಹರೀಶ್ ಬೇದ್ರೆ
0 Followers
0 Following