2020 ರ ಎಪ್ರಿಲ್ ತಿಂಗಳ ಇಪ್ಪತ್ತೊಂಭತ್ತನೆಯ ತಾರೀಖು.ಕೋವಿಡ್ ಲಾಕ್ ಡೌನಿನ ದಿನಗಳವು...ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವ ರೀತಿ ಪತ್ರಕರ್ತನಾಗಿ ಪರಕಾಯ ಪ್ರವೇಶ ಮಾಡಿದ ಬಳಿಕ ಲಾಕ್ ಡೌನ ವರದಿ ಮಾಡಲು ಅಂತ ಹೊರಟು ಬಿಡುತ್ತಿದ್ದೆ.ಸಾಮಾಜಿಕ ಜವಾಬ್ದಾರಿ ಅನ್ನುವ ಭೂತವನ್ನ ಹೆಗಲೇರಿಸಿಕೊಂಡು ಮನೆಯಿಂದ ಅನವಶ್ಯಕ ಹೊರಗೆ ಬರಬೇಡಿ,ಮಾಸ್ಕ್ ಹಾಕಿಕೊಳ್ಳಿ,ಸ್ಯಾನಿಟೈಜರ ಬಳಸಿ ಅಂತ ಕಂಡವರಿಗೆಲ್ಲ ಹೇಳುತ್ತ ಪತ್ರಕರ್ತನೆಂಬ ಐಡಿ ಸಿಕ್ಕಿಸಿಕೊಂಡು ಅಲೆದಾಡುತ್ತಿದ್ದ ದಿನಗಳವು.....
ಅದಕ್ಕೂ ಮೊದಲ ದಿನವೇ ರಾತ್ರಿ ಮನೆಗೆ ಬಂದು ಮಲಗಿದ್ದವನಿಗೆ ಬೆಳಗಿನ ಒಂಭತ್ತು ಹದಿನೈದರ ವೇಳೆಗೆ ನನ್ನ ಮೊಬೈಲು ರಿಂಗಣಿಸಿದ್ದು ಅಣ್ಣನ ಪೋನು...ಅವ್ವಾ ಹ್ವಾದ್ಲು ಅಂತ ಬಿಕ್ಕಿದ ಅಣ್ಣನಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ... ಏ ಅಂಗಿ ಕೊಡು ಅಂತ ಹೆಂಡತಿ ಕೊಟ್ಟ ಹಾಪ್ ಟೀ ಶರ್ಟು ಸಿಕ್ಕಿಸಿಕೊಂಡವನೆ ಎದ್ದು ಗಡಿಬಿಡಿಯಿಂದ ಬೈಕು ಹತ್ತಿಕೊಂಡು ಹೋದರೆ ಖಾಸಗಿ ಆಸ್ಪತ್ರೆಯ ಐ ಸಿ ಯು ನಲ್ಲಿ ಅವ್ವ ಆಗಷ್ಟೇ ಚಿರ ನಿದ್ರೆಗೆ ಜಾರಿದ್ದಳು...
ಅದಕ್ಕೂ ಮೊದಲು ಹನ್ನೆರಡು ದಿನಗಳ ಹಿಂದಷ್ಟೇ ಸಣ್ಣದಾಗಿ ಜ್ವರ ಮೈ ಕೈ ನೋವು ಅಂತ ನನ್ನೊಂದಿಗೆ ಆಸ್ಪತ್ರೆಗೆ ಬಂದಿದ್ದ ಅವ್ವ ಅಡ್ಮಿಟ್ ಮಾಡಬೇಕು ಅಂತ ಡಾಕ್ಟರ್ ಹೇಳಿದ ದಿನವೇ ಯಾಕೋ ನನ್ನ ಮುಖ ನೋಡಿದವಳೆ ಮಕ್ಕಳ ಕಡೆ ಲಕ್ಷ ಕೊಡು ಹೊರಗ ಬಿಡಬ್ಯಾಡ ಅಂತ ಕಾಳಜಿ ತೋರಿಸಿದಾಗಲೇ ನನ್ನ ತುಂಬಿ ಬಂದ ಕಣ್ಣುಗಳಿಂದ ನೀರು ಜಾರಿದರೆ ಅವ್ವ ಮತ್ತಷ್ಟು ದಿಗಿಲುಗೊಂಡಾಳು ಅಂತ ಅತ್ತ ಹೊರಳಿ ಹಾಂ ಆಯ್ತು ಅಂದಿದ್ದೆ..
ಆದರೆ ಹತ್ತು ಹನ್ನೆರಡು ದಿನಗಳಲ್ಲಿ ಆ ಕಾಲದಲ್ಲಿ ಕಟ್ಟಿಗೆಯ ಒಲೆ ಊದುತ್ತ ಹಾಸ್ಟೇಲು ಮಕ್ಕಳಿಗೆ ಅಡುಗೆ ಮಾಡಿ ಹಾಕಿದ್ದ ಅವ್ವ ರಿಟೈರ್ ಆದ ಬಳಿಕ ಅವಳ ನ್ಯುಮೋನಿಯಾ ಉಲ್ಬಣಗೊಳುತ್ತ ಹೋಗಿ ಎಪ್ಪತ್ತರ ಆಸು ಪಾಸಿನಲ್ಲಿ ಇದ್ದ ಅವ್ವನ ದೇಹ ಚಿಕಿತ್ಸೆಗೆ ಸ್ಪಂದಿಸಲಾಗದೆ ಕೃಷವಾಗುತ್ತ ಹೋಗಿ ಐಸಿಯುಗೆ ಸೇರಿಸಿದಾಗ ಅಕ್ಕ ಪಕ್ಕದ ಬೆಡ್ಡುಗಳಲ್ಲಿ ದಾಖಲಾಗಿದ್ದ ಮಧ್ಯ ವಯಸ್ಕ ಪೇಷಂಟುಗಳು ತೀರಿ ಹೋದ ಸುದ್ದಿ ಕೇಳಿದಾಗೆಲ್ಲ ಅದು ಯಾಕೋ ಆಕಾಶ ನೋಡುತ್ತಿದ್ದ ಅವ್ವ ನನ್ನ ಕಡೆಗೆ ನೋಡಿ ಕಣ್ಣು ತುಂಬಿ ಕೊಳ್ಳತೊಡಗಿದ್ದಳು.
ಅಲ್ಲಿಯೇ ಉಳಿದುಕೊಂಡು ಅವ್ವನ ಆರೈಕೆಗೆ ಅಂತ ನಿಂತವನಿಗೆ ಸ್ವಲ್ಪ ಸದ್ದಾದರೂ ಎಚ್ಚರಗೊಳ್ಳುತ್ತಿದ್ದ ನನ್ನನ್ನು ನೋಡಿ ಏನಿಲ್ಲ ಮಲಕೋ ಅಂತ ಕೈ ಹಿಡಿಯಲು ಹೋದರೂ ಬಿಡಿಸಿಕೊಂಡು ತಾನೇ ನಿತ್ಯದ ಕರ್ಮಗಳನ್ನು ಮುಗಿಸಿ ಟಾಯ್ಲೆಟ್ಟಿಗೆ ನೀರು ಸುರುವುತ್ತಿದ್ದವಳಿಗೆ ಅಶಕ್ತಿ ಬಂದು ಎರಡು ದಿನದಿಂದ ಎದ್ದು ಕೂಡಲಾಗದ ಪರಿಸ್ಥಿತಿ ತಲುಪಿದಾಗ ಡಾಕ್ಟರ್ ಹೇಳಿದ್ದು ಶಿಂಧೇ ಅವರ....ನಿಮ್ಮ ತಾಯಿ ಅವರಿಗೆ ಏಜ್ ಭಾಳ ಆಗ್ಯಾವು,ಟ್ರೀಟ್ ಮೆಂಟಿಗೆ ಬಾಡಿ ರಿಯಾಕ್ಟ ಮಾಡವಲ್ತು...ನಾವು ನಮ್ಮ ಪ್ರಯತ್ನ ಮಾಡ್ತೀವಿ ಉಳಿದಿದ್ದು ದೇವರ ಇಚ್ಚೆ ಅಂತ ಅಷ್ಟೇ...
ಅದಾದ ಬಳಿಕ ಆಸ್ಪತ್ರೆಗೆ ಊಟ ಕೊಡಲು ಬಂದಿದ್ದ ಅಣ್ಣ ನೀ ಮನಿಗಿ ಹೋಗು ನಾವ್ ಇರ್ತೀವಿ ಅಂದಾಗ ಒಲ್ಲದ ಮನಸ್ಸಿನಿಂದಲೇ ಮನೆಗೆ ಹೋಗಿ ಮಲಗಿದ್ದವನಿಗೆ ಬರಸಿಡಿಲಿನಂತೆ ಬಂದು ಎರಗಿದ್ದು ಅವ್ವನ ಸಾವಿನ ಸುದ್ದಿ..
ಹೆತ್ತು,ಹೊತ್ತು ಬೆಳೆಸಿ ದೊಡ್ಡವನಾಗಿಸಿ ನಾನು ತಪ್ಪು ಮಾಡಿದಾಗ ಗದರಿದ, ಸಿಟ್ಟು ಬಂದಾಗ ಸುಧಾರಿಸುದಿಲ್ಲ ಭಾಡ್ಯಾ ನೀ ಅಂತ ಬೈಯ್ಯುತ್ತಲೇ ಕಸಬರಿಗೆ(ಪೊರಕೆ)ಯಿಂದ ಬಾರಿಸಿದ ಮತ್ತು ನನಗೆ ಹುಷಾರು ತಪ್ಪಿದಾಗ ದೇವರಿಗೆ ಹರಕೆ ಹೊರುತ್ತಿದ್ದ ಅದೇ ಅವ್ವ, ನನ್ನ ತಪ್ಪಿಲ್ಲದೆ ಯಾರೋ ನನ್ನ ಅವಮಾನ ಮಾಡಿದಾಗ ಕಣ್ಣೀರು ಹಾಕುತ್ತಲೇ ಅವರ ಜೊತೆಗೆ ಜೋರು ಬಾಯಲ್ಲಿ ಜಗಳ ಕಾಯ್ದಿದ್ದ ನನ್ನ ಅವ್ವ ಹೀಗೆ ಅಸಹಾಯಕ ಸ್ಥಿತಿಯಲ್ಲಿ ಹೊರಡುವ ಮುನ್ನ ಮತ್ತೆ ನನ್ನತ್ತ ನೋಡಿದ್ದು ಅದೇ ಕನಿಕರದ ಭಾವದಿಂದ..
ಅಪ್ಪ ತೀರಿದ ಕೆಲ ವರ್ಷಗಳ ವೈಧವ್ಯದ ಬಳಿಕ ದೇವರ ಹತ್ತಿರ ಹೊರಟಿದ್ದು ನ್ಯುಮೋನಿಯಾ ಅನ್ನುವ ಕಾಯಿಲೆಯ ನೆಪ ಹೊತ್ತು ಕೊಂಡು ಆದರೂ ಅವಳು ಯಾವ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ನಮ್ಮನ್ನು ಬೆಳೆಸಿದ್ದು.......ಕೈಯ್ಯಲ್ಲಿ ಇರುವ ಅರ್ಧ ರೊಟ್ಟಿಯನ್ನೇ ಚೂರು ಮಾಡಿ ಹಂಚಿಕೊಂಡು ತಿನ್ನಲು ಕಲಿಸಿದ್ದು ಎಂತಹ ಕಷ್ಟಗಳು ಎದುರಾದರೂ ಆತ್ಮಸ್ಥೈರ್ಯದಿಂದ ಬದುಕುವಂತೆ ಬೆನ್ನೆಲುಬಾಗಿ ನಿಂತದ್ದು ಹೆಸರಿಗೆ ಹಾಸ್ಟೇಲ್ ಕುಕ್ ಅನ್ನುವ ಸರ್ಕಾರಿ ನೌಕರಿಯಲ್ಲಿ ಇದ್ದರೂ ಆರಕ್ಕೆ ಏರದ ಮೂರಕ್ಕೆ ಇಳಿಯದ ಬದುಕಿನ ನಡುವೆಯೇ ನನ್ನ ಇಬ್ಬರು ಅಕ್ಕಂದಿರು ಒಬ್ಬ ಅಣ್ಣ ಮತ್ತು ನನ್ನ ಮದುವೆ ಮಾಡಿದ್ದು ನನ್ನ ಮಕ್ಕಳು ಇನ್ನೂ ಐದು ವರ್ಷ ತುಂಬದ ಎಳವೆಯಲ್ಲಿ ಇರುವಾಗಲೇ ನಮ್ಮನ್ನು ಬಿಟ್ಟು ಹೊರಟಿದ್ದು ಎಲ್ಲವೂ ದೈವದ ಇಚ್ಚೆಯಷ್ಟೇ...
ನಾನು ಹೆಂಡತಿಯೊಂದಿಗೆ ಸಿಟ್ಟಿನಿಂದ ಮಾತನಾಡುವಾಗೆಲ್ಲ ನೋಡು ಬೇಕಂತ ಕಟಗೊಂಡ ಬಂದೀದಿಪಾ ಚಂದ ಅಂಗಿ ಕಾಯಕೊಂಡು ಹೋಗು ಅಂತಷ್ಟೆ ಕಿವಿ ಮಾತು ಹೇಳಿದ್ದ ಅವ್ವ ಕಡೆಗೂ ನನ್ನ ಬದುಕು ಇನ್ನೂ ಅಭದ್ರವಾಗಿರುವಾಗಲೇ ಎದ್ದು ಹೊರಟದ್ದನ್ನ ನೆನಪಿಸಿಕೊಂಡರೆ ಒಂದೇ ಬಳ್ಳಿಯ ಹೂಗಳು ಚಿತ್ರದ ಗೀತಪ್ರಿಯ ಸಾಹಿತ್ಯ ಮತ್ತು ಸತ್ಯಂ ಅವರ ಸಂಗೀತದಲ್ಲಿ ಸುಮಧುರ ಕಂಟದ ಗಾಯಕ ಮಹ್ಮದ್ ರಫಿಯ ಧ್ವನಿಯಲ್ಲಿ ಮೂಡಿಬಂದ ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ ಈ ಲೋಕವೆಲ್ಲ ಘೋರ ಎಲ್ಲೆಲ್ಲೂ ಶೋಕವೇ ಹಾಡು ಇಂದಿಗೂ ನೆನಪಾಗಿ ನನ್ನ ಕಣ್ಣಾಲೆಗಳು ಮಂಜಾಗುತ್ತವೆ.
ತಮ್ಮ ಮಕ್ಕಳು ಕೊನೆಗೂ ಭದ್ರವಾದ ಭವಿಷ್ಯ ಕಟ್ಟಿಕೊಂಡರು ಅನ್ನುವದನ್ನೇ ಜೀವನದಲ್ಲಿ ಆತ್ಮ ಸಂತೃಪ್ತಿಯನ್ನಾಗಿಸಿಕೊಳ್ಳುವ, ತಾವು ಅನುಭವಿಸಿದ ನೋವು ಮಕ್ಕಳು ಅನುಭವಿಸದಿರಲಿ ಅಂತ ದಣಿವರಿಯದೇ ದುಡಿಯುತ್ತ ಮನೆಯೆ ಮೊದಲ ಪಾಠ ಶಾಲೆ ತಾಯಿ ತಾನೆ ಮೊದಲ ಗುರುವು ಅಂತ ಅನ್ನಿಸಿಕೊಳ್ಳುವ ಮತ್ತು ಇನ್ಯಾರೋ ನಮ್ಮ ಮೇಲಿನ ಸಿಟ್ಟಿಗೆ ನಿನ್ನಮ್ಮನ ಅಂತ ಬೈಯ್ಯುವಾಗೆಲ್ಲ ಧಾರಾಳವಾಗಿ ಅವರ ಬಾಯಿಯ ಅವಾಚ್ಯ ಪದಗಳಿಗೆ ಸಿಲುಕಿ ನೋಯುವ....... ಹಾಗೂ ಸ್ವತಃ ಹೆತ್ತ ಮಕ್ಕಳೇ ಮಡದಿಯ ಮಾತು ಕೇಳಿ ಮನೆಯಿಂದ ಹೊರಗೆ ಹಾಕಿದಾಗ ಎದೆಯೊಳಗೆ ಸಾವಿರ ಚೂರಿಗಳನ್ನು ಏಕಕಾಲಕ್ಕೆ ಇರಿದಷ್ಟು ನೋವಿದ್ದರೂ ಯಾರಿಗೂ ತೋರಗೊಡದೆ ಚೆನ್ನಾಗಿರು ಮಗನೇ ಅಂತ ಮನದುಂಬಿ ಹಾರೈಸುವ ತಾಯಿ ಕರುಳು ಜಗತ್ತಿನ ಎಲ್ಲ ಬೆಲೆಬಾಳುವ ವಸ್ತುಗಳ ಎದುರಿನಲ್ಲೂ ನನಗೆ ಇಂದಿಗೂ ಬೆಲೆ ಕಟ್ಟಲಾಗದ ವಸ್ತುವಾಗಿಯೇ ಕಾಣಿಸುತ್ತದೆ.
ಮಕ್ಕಳಾಗಲಿ ಅಂತ ದೇವರಿಗೆ ಹರಕೆ ಕಟ್ಟಿ,ಅಂಗಾತ ಮಲಗಿಸಿದ್ದಾಗ ಬೋರಲು ಹೊರಳಲಾಗದ ಅಸಹಾಯಕತೆಯ ನಡುವೆ ನಮ್ಮನ್ನು ಎತ್ತಿಕೊಂಡು ಎದೆಯ ರಕ್ತವನ್ನೆ ಹಾಲಾಗಿ ಬಸಿದು ಮೊಲೆಯುಡಿಸುತ್ತ...
ಬೆಳೆಸಿದ ಮಕ್ಕಳು ದೊಡ್ಡವರಾದ ಮೇಲೆ ಯಾವಾಗಲೋ ಒಮ್ಮೆ ಕೊಡಿಸಿದ ಮತ್ತು ಅಷ್ಟೇನೂ ಬೆಲೆ ಬಾಳದ ಸೀರೆಯನ್ನೇ ಇದು ನನ್ನ ಮಗ ಕೊಡಸಿದ್ದು ಅಂತ ಅಷ್ಟೇ ಜತನದಿಂದ ಕಾಪಿಟ್ಟುಕೊಂಡು ತನ್ನ ಓರಗೆಯವರಿಗೆ ಹೆಮ್ಮೆಯಿಂದ ತೋರಿಸುವ ಹೆತ್ತವರಿಗೆ ಹೆಗ್ಗಣವೂ ಮುದ್ದು ಅನ್ನುವಂತೆ ತಮ್ಮ ಮಕ್ಕಳನ್ನು ಬದುಕಿನುದ್ದಕ್ಕೂ ಪ್ರೀತಿಸುವ ಹಾಗೂ ತನ್ನ ಕರುಳ ಬಳ್ಳಿಗಳೇ ತನಗೆ ಕೇಡು ಬಯಸಿದರೂ ಸದಾಕಾಲ ಅವರ ಒಳಿತಿಗೆ ಶ್ರಮಿಸುತ್ತ ಹರಸುವ ಹಾರೈಸುವ ಅಮ್ಮನಂತಹ ವ್ಯಕ್ತಿತ್ವ ಈ ಜಗತ್ತಿನಲ್ಲಿ ಸಿಗುವದು ಬಹಳವೇ ಅಪರೂಪ.
ಈವತ್ತು ಅಮ್ಮ ಬದುಕಿದ್ದರೆ ಅಮ್ಮಾ ಐ ಲವ್ ಯೂ ಅಂತಲೋ ಯು ಆರ್ ಮೈ ಗಾಢ್ ಪಾಧರ್ ಅಂತಲೋ ಹೇಳಬೇಕಿತ್ತು ಅಂದುಕೊಳ್ಳುವ ಅದೆಷ್ಟೋ ಮಕ್ಕಳಿಗೆ ಇಂದು ಅಮ್ಮನಿಲ್ಲದ ಅನಾಥ ಭಾವ ನನ್ನನ್ನು ಕಾಡಿದಂತೆಯೇ ಅದೆಷ್ಟು ಪರಿ-ಪರಿಯಾಗಿ ಕಾಡುತ್ತದೆಯೋ ಬಲ್ಲವರಾರು??
ಅದಕ್ಕೆ ಹೇಳೋದು ವ್ಯಕ್ತಿಯಾಗಲಿ ವಸ್ತುವಾಗಲಿ ನಮ್ಮ ಹತ್ತಿರ ಇಲ್ಲವಾದಾಗ ಅದರ ಬೆಲೆ ತಿಳಿದುಕೊಳ್ಳುವದಕ್ಕಿಂತ ಇರುವಾಗಲೇ ಅವರನ್ನು ಪ್ರೀತಿಸಿ,ಗೌರವಸಿದರೆ ನಮಗೂ ಒಂದಷ್ಟು ಆತ್ಮ ಸಂತೃಪ್ತಿ ಅನ್ನುವದು ನಮ್ಮ ಬದುಕಿನ ಕೊನೆಗಾಲಕ್ಕೆ ಉಳಿದೀತು..ಅಲ್ಲವಾ??
ಆಟವಾಡುವ ಮಗುವೊಂದು ಎಡವಿ ಬಿದ್ದಾಗ ತನ್ನ ಮಗುವಲ್ಲದಿದ್ದರೂ ಓಡಿ ಬಂದು ಎತ್ತುವ ,ತರಚಿದ ಗಾಯಗಳಿಗೊಂದು ಮಾಯೆಯ ಊದು ಹಾಕುತ್ತ ಅಳುವ ಮಗುವಿನ ಅಳು ನಿಲ್ಲಿಸುವ,ಆಸ್ಪತ್ರೆಯ ರೋಗಿಗಳನ್ನೂ ಮಕ್ಕಳಂತೆ ಪೊರೆಯುವ ದಾದಿಯರು ಸೇರಿದಂತೆ,ಎಲ್ಲ ಹೆಣ್ಣು ಮಕ್ಕಳಲ್ಲೂ ಇರುವ ತಾಯಿಯ ಗುಣಕ್ಕೆ ಶಿರಸಾ ನಮಿಸುತ್ತ
ಎಲ್ಲ ತಾಯಂದಿರಿಗೂ ವಿಶ್ವ ತಾಯಂದಿರ ಹಾಗೂ ಪರಿಚಾರಿಕಾ ದಿನದ ಹಾರ್ದಿಕ ಶುಭಾಷಯಗಳು...