ಬಿಳಿ ಸೀರೆಯ ಹಿಂದೆಯೂ ಒಂದು ವ್ಯಥೆಯ ಕಥೆ ಇದೆ

ಆತ್ಮ ಕಥೆಯ ಬಿಡಿ ಭಾಗಗಳು -6

ProfileImg
05 May '24
4 min read


image

ಬಿಳಿ ಸೀರೆಯ  ಗೆಲುವಿನ ನಗುವಿನ ಹಿಂದೆಯೂ  ಒಂದು ಕಥೆ ಇದೆ..

ಈಗಲೂ ನೆನಪಾದರೆ ನನಗರಿವಿಲ್ಲದಂತೆ ಕಣ್ಣು ಹನಿಗೂಡುತ್ತದೆ

ಅದು ನಮ್ಮ ಬದುಕಿನ ಸಂಕ್ರಮಣ. ಕಾಲ..ಆಗಷ್ಟೇ ಸಂಸ್ಕೃತ ಎಂಎ ಓದು ಮುಗಿಸಿ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಟೀಚರ್ ಆಗಿ ಸೇರಿಕೊಂಡಿದ್ದೆ‌


ಆಗ ನಮ್ಮ ಎಂಎ ರಿಸಲ್ಟ್ ಬಂತು.ನಾನು ಮೊದಲ ರ‌್ಯಾಂಕ್ ಪಡೆದಿದ್ದೆ.
ಮತ್ತೆ ಸ್ವಲ್ಪ ಸಮಯ ಕಳೆದಾಗ ಘಟಿಕೋತ್ಸವ ಬಂತು.
ರ‌್ಯಾಂಕ್ ಪಡೆದವರಿಗೆ ಯುನಿವರ್ಸಿಟಿ ಯಿಂದ ವಿಶೇಷ ಆಹ್ವಾನ ಬರುತ್ತದೆ.ಹಾಗೆಯೇ ನನಗೂ ಬಂತು.

ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ ನೋಡಿ..
ರ‌್ಯಾಂಕ್ ತೆಗೆದವರು ಪ್ರಮಾಣ  ಪತ್ರ ಪಡೆಯಲು 400-500₹ ಪ್ರತ್ಯೇಕ ಶುಲ್ಕ ನೀಡಬೇಕು. ಆಗ ನನಗೆ ತಿಂಗಳಿಗೆ ಸಿಗುತ್ತಿದ್ದ ವೇತನ 750₹.
ಅದರಲ್ಲಿ ಮಂಗಳೂರಿನಿಂದ ಕಲ್ಲಡ್ಕಕ್ಕೆ ಹೋಗಿ ಬರುವ ಚಾರ್ಜ್ ಕಳೆದರೆ ನನಗೆ ಉಳಿಯುತ್ತಿದ್ದದು 300₹ .
ಪ್ರಸಾದರಿಗೂ ಸಣ್ಣ ಸಂಬಳದ ಕೆಲಸ ಇದ್ದದ್ದು.
ಸ್ನಾತಕೋತ್ತರ. ಪದವಿ ಪ್ರಮಾಣ ಪತ್ರ  ರ‍್ಯಾಂಕ್  ಪ್ರಮಾಣ ಪತ್ರ  ಮತ್ತು ಚಿನ್ನದ ಪದಕ ಪಡೆಯಕು ಪಡೆಯಲು ನಾನು 900₹ ತುಂಬಬೇಕಿತ್ತು.
ಇದನ್ನು ಹೊಂದಿಸಲು ನಾವು ಬಹಳ ಕಷ್ಟ ಪಡಬೇಕಾಯಿತು.
ಅಂತೂ ರ‌್ಯಾಂಕ್ ಪಡೆದ ಸಂಭ್ರಮದಲಿ ಈ ಕಷ್ಟವನ್ನು ಸಹಿಸಿಕೊಂಡೆವು.ಚಿನ್ನದ ಪದಕ ಪಡೆಯುವ ಸುವರ್ಣ ಕ್ಷಣವನ್ನು ಕಾಯುತ್ತಾ ಇದ್ದೆ‌.
ಘಟಿಕೋತ್ಸವಕ್ಕೆ ಒಂದು ವಾರ ಇರುವಾಗ ನನಗೆ ವಿಶೇಷ ಆಹ್ವಾನ ಪತ್ರ ಬಂತು.ಅದರಲ್ಲಿ ಬಿಳಿ ಸೀರೆ/ ಚೂಡಿದಾರ್ ಧರಿಸಿ ಬರಬೇಕು ಎಂದು ತಿಳಿಸಿದ್ದರು.
ತಲೆಗೆ ಬಂಡೆ ಕಲ್ಲು ಬಿದ್ದ ಅನುಭವ ಆಯಿತು.ಯಾಕೆಂದರೆ ನನ್ನಲ್ಲಿ ಬಿಳಿ ಸೀರೆ ಇರಲಿಲ್ಲ. ಅಮ್ಮ ಅಕ್ಕನಲ್ಲೂ ಇರಲಿಲ್ಲ. ಅನ್ಯರ ಬಳಿ ಕೇಳಲು ಸ್ವಾಭಿಮಾನ ಬಿಡಲಿಲ್ಲ.ಒಂದೊಮ್ಮೆ ಸೀರೆ ಸಿಕ್ಕರೂ  ಲಂಗ,ರವಿಕೆ ಹೊಲಿಸಿಕೊಳ್ಬೇಕು.ಅದಕ್ಕೂ ದುಡ್ಡು ಬೇಕು‌‌ ಹೊಸ ಸೀರೆ ತೆಗೆಯಲೂ ದುಡ್ಡು ಬೇಕು..ದುಡ್ಡಿಗೆ ಎಲ್ಲಿ  ಹೋಗುದು ? 
ಏನು ಮಾಡುದು ? ನನ್ನದೊಂದು ಹಳೆಯ ಸೀರೆ ಇತ್ತು.ಅದು ಬಿಳಿ ಯಲ್ಲಿ ಕಡು ಗುಲಾಬಿ ಬಣ್ಣದ ಹೂವುಗಳಿದ್ದ ಸೀರೆ.ಅದು ಎರಡು ಕಡೆ ಹರಿದಿತ್ತು.
ಸರಿ ಅದನ್ನು ಉಡುವ ಎಂದು ಹರಿದ ಭಾಗದಲ್ಲಿ ಕೈಯಿಂದ ಹೊಲಿಗೆ ಹಾಕಿದೆ.
ಅದಕ್ಕೆ ರವಿಕೆ ಕಡು ಗುಲಾಬಿ ಬಣ್ಣದ್ದೇ ಇದ್ದದ್ದು‌
ಬೇರೆ ದಾರಿ ಇಲ್ಲದೇ ಅದೇ ಸೀರೆ ರವಿಕೆ ಉಟ್ಟುಕೊಂಡು ಹೋದೆ
ಅಲ್ಲಿ ಮೊದಲು ನಾವು ಬಂದದ್ದನ್ನು ರಿಜಿಸ್ಟರ್ ಮಾಡಬೇಕಿತ್ತು.ಆಗ ಅಲ್ಲಿ ಬಿಳಿ ಸೀರೆ ಉಟ್ಟುಕೊಂಡು ಬಂದರೆ ಮಾತ್ರ ಸ್ಟೇಜ್ ಗೆ ಬಿಡುವುದು ಎಂದರು.
ನನ್ನಲ್ಲಿ ಬೇರೆ ಬಿಳಿ ಸೀರೆ ಇಲ್ಲ ಎಂದೆ.ಅದೆಲ್ಲ ನಮಗೆ ಗೊತ್ತಿಲ್ಲ.ಇದು ಯುನಿವರ್ಸಿಟಿ ನಿಯಮ ಎಂದರು.
ನಂತರ ನನ್ನ ಹೆಸರು ಅಂಟಿಸಿ ಕಾದಿರಿಸಿದ  ಕುರ್ಚಿ ಬಳಿ ಹೋದೆ.ಅಲ್ಲಿ ಮೇಲ್ವಿಚಾರಣೆ ಮಾಡುತ್ತಾ ಇದ್ದವರು.ಬಿಳಿ ಸೀರೆ ಉಡದ ಕಾರಣ. ನನ್ನನ್ನು ಅಲ್ಲಿ ಕೂರಲು ಬಿಡಲಿಲ್ಲ.


ಬಡವಾ ನೀ ಮಡುಗಿದಾಂಗೆ ಇರಬೇಕು ಎಂದು ಸಾಮಾನ್ಯರು ಹಾಕಿದ ಖುರ್ಚಿಯಲ್ಲಿ  ಹೋಗಿ ಕುಳಿತೆ.
ಹೆಸರು ಕರೆದರೆ ವೇದಿಕೆಗೆ ಹೋಗಿ ರ‌್ಯಾಂಕ್ ಸರ್ಟಿಫಿಕೇಟ್  ಮತ್ತು ಚಿನ್ನದ ಪದಕ ತಗೊಳ್ಳಲು ವೇದಿಕೆಗೆ ಹೋಗುದು ಬಿಡದೇ ಇದ್ದರೆ ಹಿಂದೆ ಬರುವುದು ಎಂದು ನಿರ್ಧಾರ ಮಾಡಿದ್ದೆ.ಆದರೂ ಗಣ್ಯರಿಂದ ಗೋಲ್ಡ್ ಮೆಡಲ್  ಪಡೆಯಲು ಆಗದೇ ಹೋಗಬಹುದು ಎಂಬ ಆತಂಕ ಇತ್ತು.
ಒಬ್ಬರಾಗಿ ಒಬ್ಬರ ರ‌್ಯಾಂಕ್ ಮತ್ತು ಚಿನ್ನದ ಪದಕ ವಿಜೇತರ ಹೆಸರು ಕರೆಯತೊಡಗಿದರು.ನನಗೆ ವೇದಿಕೆ ಏರಲು ಬಿಡಲಾರರು ಎಂಬ ಆತಂಕದಿಂದ ಎದೆ ಬಡಬಡ ಹೊಡೆದುಕೊಳ್ತಾ ಇತ್ತು.
ನನ್ನ ಹೆಸರನ್ನು ಕೂಡ ಕರೆದರು.ಕೂಡಲೇ ಕುಳಿತಲ್ಲಿಂದ ಎದ್ದು ವೇದಿಕೆ ಕಡೆಗೆ ಧಾವಿಸಿದೆ.ಅಲ್ಲಿ ವೇದಿಕೆ ಏರುವ ಜಾಗದ ಬಳಿ ಇದ್ದವರು ನನ್ನನ್ನು ಬಿಳಿ ಸೀರೆ ಯಾಕೆ ಉಟ್ಟಿಲ್ಲ ಎಂದು ತಡೆದರು.ಆಗ ನನಗೆ ನನ್ನ ಶೋಚನೀಯ ಸ್ಥಿತಿಗೆ ಅಳು ಬಂತು.ಆಗ ವೇದಿಕೆ ಮೇಲೆ ಇದ್ದ ಅತಿಥಿಗಳೊಬ್ಬರು ಇರಲಿ ಅಡ್ಡಿಯಿಲ್ಲ..ನಾವು ಸೀರೆಗೆ ಮೆಡಲ್ ಕೊಡುವುದಲ್ಲ..ಅವರ ಪರಿಶ್ರಮಕ್ಕೆ ಕೊಡುವ ಪುರಸ್ಕಾರ ..ಮೇಲೆ ಬಿಡಿ..ಎಂದರು‌


ಮೇಲೆ ಹೋದೆ.ನನಗೆ ಭಾವನೆಗಳನ್ನು ನಿಯಂತ್ರಿಸಲು ಬಹಳ ಕಷ್ಟ ಆಗುತ್ತಿತ್ತು.
ಮೆಡಲ್ ಅನ್ನು ಅಳುತ್ತಲೇ ಪಡೆದೆ..ಆಗ ನನ್ನನ್ನು ವೇದಿಕೆಗೆ ಕರೆದ ಆ ಗಣ್ಯ ವ್ಯಕ್ತಿ ಅಳುವ ಕ್ಷಣವಲ್ಲ.ಇದು ಹೆಮ್ಮೆ ಪಡಬೇಕಾದ ಘಳಿಗೆ ,ಶುಭವಾಗಲಿ ಎಂದು ಹಾರೈಸಿದರು..


ಆಗ ನಮ್ಮಲ್ಲಿ ಕೆಮರಾ ಎಲ್ಲಿ ಇತ್ತು? ಫೋಟೋ ಗ್ರಾಫರ್ ಗೆ ಮೊದಲೇ ದುಡ್ಡು ಕೊಟ್ಟು ವ್ಯವಸ್ಥೆ ಮಾಡಿದರೆ ಪೋಟೋ ತೆಗೆದು ಕಳುಹಿಸುವ ವ್ಯವಸ್ಥೆ ಅಲ್ಲಿತ್ತು.ಆದರೆ ಅದಕ್ಕೂ ದುಡ್ಡು ಬೇಕಲ್ಲ..ಹಾಗಾಗಿ ನನಗೆ ಯಾರ ಕೈಯಿಂದ ರ‌್ಯಾಂಕ್ ಸರ್ಟಿಫಿಕೇಟ್  ಮತ್ತು ಗೋಲ್ಡ್ ಮೆಡಲ್ ಪಡೆದೆ,ನನ್ನನ್ನು ಸಹೃದಯತೆಯಿಮದ ವೇದಿಕೆಗೆ ಕರೆದ ಗಣ್ಯ ವ್ಯಕ್ತಿ ಯಾರೆಂದು ನನಗೆ ತಿಳಿದಿಲ್ಲ.
ಶಿಕ್ಷಣ ಸಚಿವರಿಂದ  ಗೋಲ್ಡ್ ಮೆಡಲು ಪಡೆದದ್ದು ಎಂದು ನೆನಪು.ವೇದಿಕೆಗೆ ಕರೆದ ಗಣ್ಯ ವ್ಯಕ್ತಿ ಇವರಲ್ಲ..ಬೇರೆಯವರು..ಆದರೆ ಅವರಾರೆಂದು ನನಗೆ ಆಗಲೂ ತಿಳಿದಿರಲಿಲ್ಲ‌

ದೇವರು ದೊಡ್ಡವನು..ಮುಂದೆ ಒಳ್ಳೆಯ ಕಾಲವನ್ನು ಒದಗಿಸಿಕೊಟ್ಟ.
ಇದಾಗಿ ಹದಿಮೂರು ವರ್ಷಗಳ ನಂತರ  ಮೊದಲ ಡಾಕ್ಟರೇಟ್  ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ದಿಂದ ಪಡೆದೆ.ಆಗಲೂ ಬಿಳಿ ಸೀರೆ ಉಡಬೇಕಿತ್ತು.ಅದಕ್ಕಾಗಿ ಒಂದು ಬಿಳಿ ಸೀರೆ ಖರೀದಿಸಿ ರವಿಕೆ ಹೊಲಿಸಿ ಉಟ್ಟುಕೊಂಡು ಹೋಗಿದ್ದೆ..
ಅನೇಕರು ಡಾಕ್ಟರೇಟ್ ಹಾಗೂ ರ‌್ಯಾಂಕ್ ಗೋಲ್ಡ್ ಮೆಡಲು ಪಡೆಯಲು ಬಂದಿದ್ದರು

ಅದರಲ್ಲಿ ಅನೇಕರು ಬಿಳಿ ರೇಷ್ಮೆ ಸೀರೆ ಉಟ್ಟು ಕೊಂಡು ಅದಕ್ಕೆ ಮ್ಯಾಚಿಂಗ್ ಆಗಿ ಮುತ್ತಿನ ಬಳೆ ಸರ. ನೆಕ್ಲೆಸ್ ಧರಿಸಿ ಬಂದಿದ್ದರು..
ಆಗ ನನಗೂ ಹಾಗೆಯೆ ಮಾಡಬಹುದಿತ್ತು ಎನಿಸಿತು.. 

ಆಗ ನಾನು ಎರಡನೇ ಡಾಕ್ಟರೇಟ್  ಪದವಿಗಾಗಿ ಪ್ರಬಂಧ ಸಿದ್ಷತೆ ಮಾಡುತ್ತಾ ಇದ್ದೆ‌.
ಮುಂದಿನ ಬಾರಿ ಪಿ ಎಚ್ ಡಿ ಪಡೆಯುವಾಗ ಅದಕ್ಕಾಗಿಯೇ ಚೆಂದದ ಬಿಳಿ ರೇಷ್ಮೆ ಸೀರೆ ಖರೀದಿಸಿ,ಮುತ್ತಿನ ಬಳೆ ಮುತ್ತಿನ ಹಾರ ಧರಿಸಿಕೊಂಡು ಹೋಗಬೇಕು ಎಂದು ನಿರ್ಧರಿಸಿದೆ
ಆ ಅವಕಾಶ ನನಗೆ ತಪ್ಪಿ ಹೋಯಿತು. ಕುಪ್ಪಂ  ದ್ರಾವಿಡ ಯುನಿವರ್ಸಿಟಿ ಯ ಘಟಿಕೋತ್ಸವದ ದಿನ ನಾನು ಬಿ ಎಡ್ ಪರೀಕ್ಷೆ ಬರೆಯಬೇಕಿತ್ತು.ಹಾಗಾಗಿ ನನಗೆ ಹೋಗಲಾಗಲಿಲ್ಲ.
ನಾನು ಸಜ್ಜನ ರಾಜಕಾರಣಿ ಡಾ.ವಿ ಎಸ್ ಆಚಾರ್ಯರಿಂದ ಮೊದಲ ಡಾಕ್ಟರೇಟ್ ಪದವಿ ಪಡೆದದ್ದು,ಅವರು ನನ್ನನ್ನು ತುಳು ಭಾಷೆಯಲ್ಲಿ ಮಾತನಾಡಿಸಿದ್ದು ಇನ್ನೂ  ಕಣ್ಣಿಗೆ ಕಟ್ಟುತ್ತಿದೆ ನನಗೆ.
ಇದಾದ ನಂತರ ನಾನು ಪುನಃ ಕನ್ನಡ ಎಂಎ ಓದಿದ್ದು ನನಗೆ ನಾಲ್ಕನೇ ರ‌್ಯಾಂಕ್ ಬಂತು..ಮತ್ತೆ ರ‌್ಯಾಂಕ್ ಸರ್ಟಿಫಿಕೇಟ್ ಪಡೆಯಲು 800₹ ಶುಲ್ಕ ಕಟ್ಟಬೇಕಿತ್ತು
ಆ ಕಾಲಕ್ಕಾಗುವಾಗ ನನಗೆ ಒಳ್ಳೆಯ ಉದ್ಯೋಗ ಸಿಕ್ಕಿ ನಮಗೆ ಆರ್ಥಿಕ ಸಮಸ್ಯೆ ಇರಲಿಲ್ಲ ಆದರೆ ನಾವು ಕಷ್ಟ ಪಟ್ಟು ಪಡೆದ ರ‍್ಯಾಂಕ್ ಗೆ ಪುರಸ್ಕರಿಸುವುದು ಬಿಟ್ಟು ಅದನ್ನು ಪಡೆಯಲು ಪ್ರತ್ಯೇಕ ಶುಲ್ಕ ವಿಧಿಸಿದ್ದು ಅಂದಿನ ರ‌್ಯಾಂಕ್ ಸರ್ಟಿಫಿಕೇಟ್ ಪಡೆಯಲು ಆದ ಒದ್ದಾಟವನ್ನು ನೆನಪಿಸಿತು‌.ಈ ರ‌್ಯಾಂಕ್ ಸರ್ಟಿಫಿಕೇಟ್ ಗೆ ದುಡ್ಡು ಇನ್ಪ್ಲೂಯೆನ್ಸ್ ಎದುರು ಕವಡೆ ಕಾಸಿನ ಬೆಲೆಯಿಲ್ಲ.
ಯಾಕೋ ಸರ್ಟಿಫಿಕೇಟ್ ಪಡೆಯ ಬೇಕು ಎನಿಸಲಿಲ್ಲ..ಇಂದಿಗೂ ಅದನ್ನು ಪಡೆಯಲಿಲ್ಲ..
- ಡಾ.ಲಕ್ಷ್ಮೀ ಜಿ ಪ್ರಸಾದ

(1997 ರಲ್ಲಿ ನಡೆದ ಮಂಗಳೂರು ಯುನಿವರ್ಸಿಟಿ ಘಟಿಕೋತ್ಸವದಲ್ಲಿ ರ‌್ಯಾಂಕ್,ಗೋಲ್ಡ್ ಮೆಡಲ್ ಪಡೆದವರು ಯಾರಿದ್ದೀರಿ? ಅಂದಿನ ಫೋಟೋ ಇದೆಯಾ ? ಯಾರೆಲ್ಲ ಅತಿಥಿ ಗಳಾಗಿದ್ದರು? ನನ್ನನ್ನು ವೇದಿಕೆಗೆ ಕರೆದ ಸಜ್ಜನರು ಯಾರೆಂದು ಗುರುತಿಸಲು ಸಹಾಯ ಮಾಡಿರಿ 
🙏🙏🙏)




ProfileImg

Written by Dr Lakshmi G Prasad

Verified