ಅಂದು - ಇಂದು
ಸಮಯ ಎನ್ನುವುದು ಸದಾ ಸರಿಯುತ್ತಲೇ ಇರುತ್ತದೆ. ಕಾಲ ಬದಲಾಗುತ್ತಿರುತ್ತದೆ. ದಿನದಿಂದ ದಿನಕ್ಕೆ ವಿಚಾರಗಳು , ವಿಷಯಗಳು ಬದಲಾಗುತ್ತಿರುತ್ತವೆ. ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಹಲವಾರು ವಿಚಾರಗಳಲ್ಲಿ ಬಹಳ ವ್ಯತ್ಯಾಸ ಇದೆ. ಆ ಕಾಲ ಮತ್ತು ಈ ಕಾಲಕ್ಕೆ ಇರುವ ಕೆಲವು ವ್ಯತ್ಯಾಸಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ.
ಮೊತ್ತ ಮೊದಲನೆಯದಾಗಿ ಹೇಳಬೇಕಾದರೆ ಕಾಲಗಳಲ್ಲಿ ಹವಾಮಾನಕ್ಕೆ ಅನುಗುಣವಾಗಿ ಮೂರು ರೀತಿಯ ಕಾಲಗಳು ಇವೆ . ಬೇಸಿಗೆ ಕಾಲ, ಮಳೆಗಾಲ , ಚಳಿಗಾಲ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲ, ಅಕ್ಟೋಬರ್ ನಿಂದ ಜನವರಿಯವರೆಗೆ ಚಳಿಗಾಲ , ಫೆಬ್ರವರಿಯಿಂದ ಮೇ ತಿಂಗಳವರೆಗೆ ಬೇಸಿಗೆಕಾಲ ಎಂದು ವಿಂಗಡಣೆಯಾಗಿದೆ. ಮೊದಲು ಇದೇ ಪ್ರಕಾರದಲ್ಲಿ ಕಾಲಗಳು ಸರಿಯುತ್ತಿದ್ದವು . ಜೂನ್ ತಿಂಗಳು ಬಂತಂದರೆ ಸಾಕು ಮಳೆ ಆರಂಭವಾಗುತ್ತಿತ್ತು. ಶಾಲೆಗೆ ಹೋಗುವ ಮಕ್ಕಳು ಕೊಡೆ ಹಿಡಿದು ಹೋಗುವುದನ್ನು ನೋಡಲು ತುಂಬಾ ಸುಂದರವಾಗಿ ಕಾಣುತ್ತಿತ್ತು. ಮಳೆ ಕೂಡ ಆ ಕಾಲಕ್ಕೆ ಹೊರತು ಉಳಿದ ಕಾಲದಲ್ಲಿ ಬಂದು ಅಷ್ಟಾಗಿ ತೊಂದರೆ ಕೊಡುತ್ತಿರಲಿಲ್ಲ . ಮಳೆಗಾಲ ಸೆಪ್ಟೆಂಬರ್ ನಲ್ಲಿ ಕೊನೆಗೊಳ್ಳುತ್ತಿದ್ದು ಅಕ್ಟೋಬರ್ ನಲ್ಲಿ ಕೆಲವೊಮ್ಮೆ ಒಂದೆರಡು ಮಳೆ ಬಂದು ಹೋಗುತ್ತಿತ್ತು . ನವೆಂಬರ್, ಡಿಸೆಂಬರ್ , ಜನವರಿ ಈ ತಿಂಗಳುಗಳಲ್ಲಿ ವಿಪರೀತ ಚಳಿಯ ವಾತಾವರಣ ಇರುತ್ತಿತ್ತು . ಸಂಜೆಯಾಗುತ್ತಲೇ ಜನರು ಚಳಿಯಲ್ಲಿ ನಡುಗುತ್ತಿದ್ದರು. ದೀಪಾವಳಿ ಹಬ್ಬದ ಸಮಯದಲ್ಲಿ ವಿಪರೀತ ಚಳಿ ಇರುತ್ತಿತ್ತು. ಮನೆಯ ಹೊರಗೆ ಬೆಂಕಿ ಹಾಕಿ ಅದರ ಸುತ್ತ ಕುಳಿತುಕೊಂಡು ಚಳಿಯಿಂದ ಮುಕ್ತಿ ಪಡೆಯುತ್ತಿದ್ದರು. ನಂತರ ಫೆಬ್ರವರಿಯ ಬಳಿಕ ಬೇಸಿಗೆ ಕಾಲ ಆರಂಭವಾಗುತ್ತಿತ್ತು. ವಿಪರೀತ ಬಿಸಿಲು ಇದ್ದರೆ ಜನಸಾಮಾನ್ಯರಿಗೆ ಹೊರಗೆ ಹೋಗುವಷ್ಟು ಸಮಸ್ಯೆ ಇರುತ್ತಿರಲಿಲ್ಲ. ಆದರೆ ಕೆಲವೊಮ್ಮೆ ನೀರಿಗೆ ಮಾತ್ರ ಸಮಸ್ಯೆ ಆಗುತ್ತಿತ್ತು. ಏನೇ ಇದ್ದರೂ ಆಯಾ ಕಾಲಕ್ಕೆ ಆಯಾ ವಾತಾವರಣ ಇರುತ್ತಿತ್ತು. ಆದರೆ ಇತ್ತೀಚೆಗೆ ತುಂಬಾ ಬದಲಾವಣೆಯಾಗಿದೆ. ಯಾವುದೋ ಕಾಲದಲ್ಲಿ ಮಳೆ ಬರುತ್ತದೆ, ಯಾವುದೋ ಎಂದು ಕಾಲದಲ್ಲಿ ಚಳಿಯಾಗುತ್ತದೆ ಎಂದು ಗೊತ್ತಾಗುವುದಿಲ್ಲ . ಕೆಲವೊಮ್ಮೆ ಒಂದೇ ದಿನದಲ್ಲಿ ಮೂರು ಕಾಲಗಳು ಬಂದುಬಿಡುತ್ತವೆ . ಬೆಳಗ್ಗೆ ಮಂಜು ಸುರಿಯುತ್ತಿದ್ದರೆ , ಮಧ್ಯಾಹ್ನ ಬೇಸಿಗೆಯ ರೀತಿ ಬಿಸಿಲು ಸಂಜೆ ಆಗುವಾಗ ಮಳೆ ಈ ರೀತಿಯ ವಾತಾವರಣ ಇತ್ತೀಚಿಗೆ ನಮ್ಮ ಅನುಭವಕ್ಕೆ ಬರುತ್ತಿದೆ. ಇದಕ್ಕೆಲ್ಲಾ ಪ್ರಕೃತಿಯ ವೈಪರೀತ್ಯಗಳು ಕಾರಣ ಎನ್ನಬಹುದು.
ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಇರುವ ವ್ಯತ್ಯಾಸಗಳು ತಂತ್ರಜ್ಞಾನಗಳಲ್ಲೂ ಕೂಡ ಕಂಡು ಬರುತ್ತವೆ.
ಮೊದಲು ಮೊಬೈಲ್ ಬಳಕೆ ಇರಲಿಲ್ಲ. ದೂರದಲ್ಲಿ ಇರುವವರ ಜೊತೆ ಪತ್ರದ ಮೂಲಕ ವ್ಯವಹಾರ ಮಾಡಲಾಗುತ್ತಿತ್ತು. ಯಾವುದೇ ಸುದ್ದಿ ತಲುಪಿಸಲು ಕೆಲವು ದಿನಗಳು ಬೇಕಾಗುತ್ತಿದ್ದವು. ಬಳಿಕ ಸ್ಥಿರ ದೂರವಾಣಿ ಬಂತು. ಯಾರಾದರೂ ಒಬ್ಬರ ಮನೆಯಲ್ಲಿ ಇದ್ದರೆ ಊರಿನವರಿಗೆ ಎಲ್ಲಾ ಅದರ ಉಪಯೋಗ ಆಗುತಿತ್ತು. ಅಂತಹ ಕಾಲ. ಹೋಗಿ ಈಗ ಮೊಬೈಲ್ ಬಂದಿದೆ . ಮನೆಯಲ್ಲಿ ಇರುವ ಪ್ರತಿಯೊಬ್ಬರಿಗೂ ಒಂದೊಂದು ಮೊಬೈಲ್ ಇದೆ . ಈ ಮೊಬೈಲ್ ಸಂಬಂಧಗಳನ್ನು ಎಷ್ಟು ಹತ್ತಿರ ತಂದಿದೆಯೋ ಅಷ್ಟೇ ಸಂಬಂಧಗಳನ್ನು ದೂರ ಮಾಡಿದೆ ಎನ್ನಬಹುದಯ . ಮೊದಲು ರಜಾ ಬಂದರೆ ಅಜ್ಜಿ ಮನೆಗೆ ಹೋಗುವುದು ಒಂದು ಖುಷಿ. ಆದರೆ ಈಗ ರಜೆ ಬಂದರೆ ಮಕ್ಕಳು ಮೊಬೈಲ್ ಹಿಡಿದು ರೂಮಿಗೆ ಹೋಗಿ ಬಾಗಿಲು ಹಾಕಿ ಕುಳಿತು ಕೊಳ್ಳುತ್ತಾರೆ. ಒಬ್ಬರಿಗೊಬ್ಬರು ಸಮಯ ಕೂಡ ಕೊಡುವುದಿಲ್ಲ. ಅಕ್ಕ ಪಕ್ಕದ ಜನರ ಜೊತೆ ಮಾತುಕತೆ ಕೂಡ ಈಗ ಕಡಿಮೆಯಾಗಿದೆ . ಹಿಂದೆ ಸಂಜೆ ಹೊತ್ತಲ್ಲಿ ಅಕ್ಕ ಪಕ್ಕದ ಜನರು ಹರಟೆ ಹೊಡೆಯುತ್ತಿದ್ದರು. ಆದರೆ ಈಗ ಅದೆಲ್ಲಾ ಕಾಣಲು ಸಿಗುವುದಿಲ್ಲ.
ಆಹಾರ ಪದ್ಧತಿ ಕೂಡ ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ತುಂಬಾ ವ್ಯತ್ಯಾಸ ಇದೆ. ಹಿಂದೆ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ಇರುವ ಆಹಾರ ಸೇವನೆ ಮಾಡುತ್ತಿದ್ದರು. ಆದರೆ ಈಗ ಅಂತಹ ಆಹಾರ ಯಾರಿಗೂ ರುಚಿಸುವುದಿಲ್ಲ. ಎಲ್ಲರಿಗೂ ಈಗ ಬೀದಿ ಬದಿಯಲ್ಲಿ ಸಿಗುವ ಪಾನಿ ಪೂರಿ, ಮಸಾಲೆ ಪೂರಿ , ಗೋಬಿ ಮಂಚೂರಿ ಹೀಗೆ ನಾಲಗೆಗೆ ರುಚಿ ಕೊಡುವ ಆಹಾರದ ಕಡೆಗೆ ಮಾರು ಹೋಗುತ್ತಾರೆ. ಮಕ್ಕಳಿಗೆ ಕೂಡ ದೊದೆ ಇಡ್ಮಿ ಎಲ್ಲಾ ಈಗ ಬೇಡ ನೂಡಲ್ಸ್ , ಮ್ಯಾಗಿಯಂತಹ ಆಹಾರವೇ ಬೇಕು. ಇದರಿಂದ ಮನುಷ್ಯರು ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತದೆ. ನಮ್ಮ ಹಿರಿಯರು ಕಾಡಿನಲ್ಲಿ ಸಿಗುತ್ತಿದ್ದ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದರು ಎಂದು ಹೇಳುವಾಗ ನಿಜವಾಗಿಯೂ ಆಶ್ಚರ್ಯ ಎನಿಸುತ್ತದೆ. ಅಂತಹ ಆಹಾರ ಸೇವಿಸಿ ಅವರು ಆರೋಗ್ಯವಾಗಿ ಇದ್ದರು. ಆದರೆ ಈಗಿನ ಪೀಳಿಗೆಗೆ ಆ ಆರೋಗ್ಯ ಇಲ್ಲ.
ಹಾಗೇಯೇ ಅಂದಿಗೂ ಇಂದಿಗೂ ವ್ಯತ್ಯಾಸ ಇರುವುದು ವಸ್ತುಗಳ ಮೌಲ್ಯಗಳ ಬಗ್ಗೆ . ಹಿಂದೆ ನೂರು ರೂಪಾಯಿ ಇದ್ದರೆ ಮನೆಗೆ ಬೇಕಾಗುವ ವಸ್ತುಗಳನ್ನು ತೆಗೆದುಕೊಂಡು ಬರಬಹುದಿತ್ತು . ಆದರೆ ಈಗ ಆ ನೂರು ರೂಪಾಯಿ ಯಾವುದಕ್ಕೂ ಸಾಕಾಗುವುದಿಲ್ಲ . ವಸ್ತುಗಳ ಬೆಳೆಗಳು ವಿಪರೀತ ಏರಿಕೆಯಾಗಿವೆ. ಹಿಂದೆ ನಾಲ್ಕಾಣೆ , ಎಂಟಾಣೆಗಳಿಗೆ ಬೆಲೆ ಇತ್ತು . ಈಗ ಆ ಮೌಲ್ಯದ ಹಣಗಳನ್ನು ಕಾಣಲು ಸಾಧ್ಯವಾಗುತ್ತಿಲ್ಲ .
ಜನರು ಬದುಕುವ ರೀತಿಯಲ್ಲಿಯೂ ವ್ಯತ್ಯಾಸ ಇದೆ ಅಂದಿಗೂ ಇಂದಿಗೂ. ಮಕ್ಕಳನ್ನು ಬೆಳೆಸುವ ರೀತಿಗೆ ಬಹಳ ವ್ಯತ್ಯಾಸ ಕಾಣುತ್ತಿದೆ . ಹಿಂದೆ ಮಕ್ಕಳನ್ನು ಕಲಿಕೆಗೆ ಬಹಳ ಒತ್ತಡ ಪಡಿಸುತ್ತಿರಲಿಲ್ಲ . ಮಕ್ಕಳು ಅವರಿಷ್ಟದ ವಿಷಯ ಕಲಿಯುತ್ತಿದ್ದರು . ಆದರೆ ಈಗ ತಂದೆ ತಾಯಿ ಕಡೆಯಿಂದ ಬಹಳಷ್ಟು ಒತ್ತಡ ಸಿಗುತ್ತಿದೆ . ನೂರಕ್ಕೆ ನೂರು ಅಂಕಗಳನ್ನು ಪಡೆಯಲೇಬೇಕೆಂಬ ಒತ್ತಡ , ತನ್ನ ಮಗು ಎಲ್ಲದರಲ್ಲೂ ಮುಂದೆ ಬರಬೇಕು ಎಂಬ ಒತ್ತಡ ಹೆಚ್ಚಾಗುತ್ತದೆ . ಇದಯ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ.
ನಮ್ಮ ಹಿರಿಯರು ಮಾತನಾಡುವಾಗ ನಮ್ಮ ಕಾಲವೇ ಚೆನ್ನಾಗಿತ್ತು ಎಂದಾಗ ನಮಗೂ ಆ ಕಾಲ ಸಿಗಬೇಕಿತ್ತು . ನಾವು ಆ ಕಾಲದಲ್ಲಿ ಹುಟ್ಟಬೇಕಿತ್ತು ಎಂದು ಅನಿಸದೆ ಇರಲಾರದು. ಹಿಂದೆ ಹಳ್ಳಿ ಜೀವನ ಎಲ್ಲರೂ ಇಷ್ಟ ಪಡುತ್ತಿದ್ದರು. ಹಳ್ಳಿಯಲ್ಲಿ ಸಿಗುವ ಸಂಭ್ರಮ ಸಂತೋಷ , ಹಿತವಾದ ವಾತಾವರಣ ತುಂಬಾ ಖುಷಿ ಕೊಡುತ್ತಿತ್ತು. ಆದರೆ ಈಗಿನ ಪೀಳಿಗೆಯವರಿಗೆ ಹಳ್ಳಿ ಜೀವನ ಬೇಡ. ಪೇಟೆಯ ಯಾಂತ್ರಿಕ ಜೀವನಕ್ಕೆ ಮಾರು ಹೋಗುತ್ತಿದ್ದಾರೆ. ಯಂತ್ರಗಳೊಂದಿಗೆ ನೀರಸವಾಗಿ ಬದುಕು ಸಾಗಿಸುತ್ತಿದ್ದರೆ.
ಮೊದಲು ಇರುತ್ತಿದ್ದ ತುಂಬು ಕುಟುಂಬ ಈಗ ಕಾಣಲು ಸಿಗುವುದಿಲ್ಲ. ತುಂಬು ಕುಟುಂಬದಲ್ಲಿ ಪ್ರೀತಿ ಹಂಚಿಬದುಕುತ್ತಿದ್ದರು. ಆದರೆ ಈಗ ಅಂತಹ ಕುಟುಂಬಗಳು ಕಾಣ ಸಿಗುವುದಿಲ್ಲ. ತಂದೆ , ತಾಯಿ ಒಂದು ಅಥವಾ ಎರಡು ಮಕ್ಕಳು ಅಷ್ಟೇ . ಹಿರಿಯರು ಇರುವುದಿಲ್ಲ ಇದ್ದರೂ ಆಶ್ರಮ ಸೇರಿರುತ್ತಾರೆ.
ಹೀಗೆ ಕಾಲಕ್ಕೆ ತಕ್ಕಂತೆ ಕೋಲ ಎಂಬ ಹಾಗೆ ಕಾಲ ಬದಲಾದಂತೆ ಎಲ್ಲಾ ಬದಲಾಗುತ್ತದೆ. ಏನೇ ಆದರೂ ಮನುಷ್ಯತ್ವ ಅನ್ನೋದು ಮನುಷ್ಯರ ಮನಸಲ್ಲಿ ಉಳಿದರೆ ಸಾಕು.
Teacher writer
0 Followers
0 Following