Do you have a passion for writing?Join Ayra as a Writertoday and start earning.

ಬಣ್ಣ ಬಣ್ಣದ ಲೋಕ...

ಬಣ್ಣಿಸಲು ಸಾಲದು..!!

ProfileImg
22 Mar '24
5 min read


image

ಬಣ್ಣಗಳ ಹಬ್ಬವೆಂದೇ ಪ್ರಖ್ಯಾತವಾಗಿರುವ ‘ಹೋಳಿ ಹಬ್ಬ’ ಇನ್ನೇನು ಸಮೀಪಿಸುತ್ತಿದೆ. ಬಿಳಿ ಬಟ್ಟೆಯ ಮೇಲೆ ಚಿತ್ತಾರ ಮೂಡಿಸುವ ಹೋಳಿ ಹಬ್ಬ ದಕ್ಷಿಣ ಭಾರತೀಯರಿಗಿಂತಲೂ ಉತ್ತರ ಭಾರತೀಯರಲ್ಲಿ ಆಚರಣೆ ಹೆಚ್ಚು. ಕಾಮನ ಹಬ್ಬವೆಂದೂ ಕರೆಯಲ್ಪಡುವ ಈ ಹಬ್ಬವನ್ನು ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಇನ್ನೇನು ಹೋಳಿ ಹಬ್ಬ ಸನ್ನಿಹಿತವಾಗುತ್ತಿದೆ. ಈ ಸಂದರ್ಭದಲ್ಲಿ ಬಣ್ಣಗಳ ಮೇಲೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ.

ಮನುಷ್ಯನಿಗೂ ಬಣ್ಣಗಳಿಗೂ ಬಿಡಲಾರದ ಒಂದು ನಂಟಿದೆ. ಆಗತಾನೇ ಹುಟ್ಟಿದ ಮಗು ನಾಲ್ಕು ತಿಂಗಳು ಆಗುವವರೆಗೆ ಬಣ್ಣಗಳನ್ನು ಗುರುತಿಸಲು ಆಗುವುದಿಲ್ಲವಂತೆ. ಕ್ರಮೇಣ ಬಣ್ಣಗಳ ವ್ಯತ್ಯಾಸವನ್ನು ಕಂಡು ಹಿಡಿಯುತ್ತವೆಯಂತೆ. ಮಗು ದೊಡ್ಡದಾದಂತೆ, ಸಾಮಾನ್ಯವಾಗಿ ಮೂರು ವರ್ಷ ಸಮೀಪಿಸುತ್ತಿದ್ದಂತೆ ಬಣ್ಣಗಳನ್ನು ಗುರುತಿಸಿ, ಬಣ್ಣಗಳ ಹೆಸರನ್ನು ಹೇಳಲು ಶುರು ಮಾಡುತ್ತದೆ. ಆ ಘಳಿಗೆಯಿಂದ ಹಿಡಿದು ವಯಸ್ಸಾಗುವವರೆಗೂ, ಆ ಮಗು ನೋಡುವ ವಸ್ತುಗಳಲ್ಲಿ, ವ್ಯಕ್ತಿಗಳಲ್ಲಿ, ತನ್ನ ಸುತ್ತಮುತ್ತ ಇರುವ ಹಸಿರೆಲೆ, ಹಸಿರು ಗಿಣಿ, ಚೆಂಗುಲಾಬಿ, ಬೆಳ್ಳನೆಯ ಚಂದಿರ, ನೀಲಾಗಸ, ನೀಲಿ ಬಾನು, ಹೀಗೆ ಸುತ್ತಲಿನ ಪರಿಸರದ ಕಣಕಣದಲ್ಲೂ ಬಣ್ಣಗಳನ್ನು ಕಾಣುತ್ತದೆ.

ಏಳು ಬಣ್ಣಗಳಿಂದ ಕೂಡಿದ ಕಾಮನಬಿಲ್ಲನ್ನು ನೋಡಲು ಯಾರಿಗೆ ತಾನೇ ಇಷ್ಟವಿರುವುದಿಲ್ಲ?! ಸೃಷ್ಟಿಯ ಅತ್ಯದ್ಭುತ ಸೊಬಗಿನ ದೃಶ್ಯಗಳಲ್ಲಿ ಅದೂ ಸಹ ಒಂದು. ಮಳೆ ಹನಿಗಳ ಮೇಲೆ ಸೂರ್ಯನು ಬೆಳಗಿದಾಗ ಬಹುವರ್ಣದ  ಮಳೆಬಿಲ್ಲು ಅಥವಾ ಕಾಮನಬಿಲ್ಲು ಆಕಾಶದಲ್ಲಿ ಮೂಡುತ್ತದೆ. ಎಲ್ಲರಿಗೂ ನೋಡಲು ಇಷ್ಟವಾದ ಈ ಕಾಮನಬಿಲ್ಲು ಹೊರಗಿನ ಭಾಗದಲ್ಲಿ ಕೆಂಪು ಬಣ್ಣವನ್ನು ಮತ್ತು ಒಳಗಿನ ಭಾಗದಲ್ಲಿ ನೇರಳೆ ಬಣ್ಣವನ್ನು ಹೊಂದಿರುತ್ತದೆ.

ಕಪ್ಪು ಬಿಳಿ ಚಲನಚಿತ್ರ, ಕಪ್ಪು ಬಿಳಿ ಬಣ್ಣದ ಟಿವಿ, ಕಪ್ಪು ಬಿಳಿ ಬಣ್ಣದ ಫೋಟೋ ಇಲ್ಲಿಂದ ಶುರುವಾದ ಪಯಣ, ಇಂದು ಜಗವೇ ವರ್ಣಮಯ ಎನ್ನುವಂತೆ ಎಲ್ಲೆಲ್ಲೂ ಬಣ್ಣಗಳದ್ದೇ ಹಾವಳಿ ಎಂಬಂತಾಗಿದೆ. ಬಣ್ಣಗಳಿರದ ಪ್ರಪಂಚವನ್ನು ಊಹಿಸಿಕೊಳ್ಳಲು ಕಷ್ಟ. ಒಬ್ಬೊಬ್ಬರಿಗೂ ಒಂದೊಂದು ಬಣ್ಣ ಇಷ್ಟ. ಕೆಲವೊಮ್ಮೆ ಬಣ್ಣಕ್ಕೂ ಭಾವನೆಗಳಿಗೂ ಹೊಂದಿಸಿ ಮಾತನಾಡುವುದುಂಟು. ಬಿಳಿ ಎಂದರೆ ಪರಿಶುದ್ಧ ಮತ್ತು ಸತ್ಯ, ಕೆಂಪು ಎಂದರೆ ಒಲವು ಮತ್ತು ಶಕ್ತಿ, ಹಸಿರು ಎಂದರೆ ಸಮೃದ್ಧಿ ಮತ್ತು ನಂಬಿಕೆ, ಕೇಸರಿ ಅಂದರೆ ತ್ಯಾಗ ಮತ್ತು ಧೈರ್ಯ, ಹಳದಿ ಎಂದರೆ ಸ್ನೇಹ ಹೀಗೆ ಒಂದೊಂದಕ್ಕೂ ಒಂದೊಂದು ಬಣ್ಣವನ್ನು ಹೋಲಿಸಿ ಮಾತನಾಡುವುದಿದೆ.

ಅಷ್ಟೇ ಅಲ್ಲ, ಹೆಣ್ಣು ಮಕ್ಕಳೆಂದರೆ ಗುಲಾಬಿ ಬಣ್ಣ ಮತ್ತು ಗಂಡು ಮಕ್ಕಳೆಂದರೆ ನೀಲಿ ಬಣ್ಣವೆಂದು ಪ್ರತ್ಯೇಕಿಸಿ, ಅವರಿಗೆ ಕೊಡಿಸುವ ಬಟ್ಟೆಗಳನ್ನೆಲ್ಲ ಆದಷ್ಟು ಅದೇ ಬಣ್ಣಗಳಲ್ಲಿ ಕೊಡಿಸುತ್ತಾರೆ ಅಪ್ಪ ಅಮ್ಮಂದಿರು. ಈ ಗುಲಾಬಿ ಮತ್ತು ನೀಲಿ ಬಣ್ಣದ ಕಥೆ ಇಲ್ಲಿಗೆ ಮುಗಿಯದೇ, ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸುವಾಗ ಎರಡು ಬಣ್ಣಗಳು ಅಂದರೆ ಗುಲಾಬಿ ಮತ್ತು ನೀಲಿ ಬಣ್ಣದಲ್ಲಿ ಮಕ್ಕಳ ಪುಟ್ಟ ಬಟ್ಟೆ, ಪುಟ್ಟ ಶೂಸ್, ಬಲೂನ್ಗಳನ್ನು ಹಿಡಿದು ಫೋಟೋಶೂಟ್ ಮಾಡಿಸಿ, ಮಗು ಹುಟ್ಟಿದ ಬಳಿಕ "Its a baby boy! It's a baby girl!" ಎಂದು ಹುಟ್ಟಿದ ಮಗುವಿಗೆ ತಕ್ಕಂತೆ ಗುಲಾಬಿ ಅಥವಾ ನೀಲಿ ಬಣ್ಣವಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪೋಷಕರು ಖುಷಿಪಡುತ್ತಾರೆ.

'ಬಣ್ಣ ನನ್ನ ಒಲವಿನ ಬಣ್ಣ' ಎಂದು ತಮಗೆ ಇಷ್ಟವಾದ ಬಣ್ಣಗಳಲ್ಲೇ ಹೆಚ್ಚು ಹೆಚ್ಚು ಬಟ್ಟೆ, ಪಾದರಕ್ಷೆ, ಬ್ಯಾಗುಗಳನ್ನು ಖರೀದಿಸುತ್ತಾರೆ ಕೆಲವರು. ಪ್ರತಿದಿನವೂ ಬಟ್ಟೆಗೆ ತಕ್ಕಂತೆ ಮ್ಯಾಚಿಂಗ್ ಓಲೆ, ಬಳೆ, ಚಪ್ಪಲಿ ಧರಿಸಲು ಇಷ್ಟಪಡುವಲ್ಲಿ ಹೆಣ್ಣುಮಕ್ಕಳು ಮುಂಚೂಣಿಗರು.

ಬಣ್ಣಗಳ ಬಗ್ಗೆ ಮಾತಾಡುವಾಗ 'ಬಾಯಿ ಬಿಟ್ಟರೆ ಬಣ್ಣಗೇಡು' ಎಂಬ ನಾಣ್ಣುಡಿ ನೆನಪಾಗುತ್ತದೆ. ವ್ಯಕ್ತಿಯ ನಿಜವಾದ ಪರಿಚಯವಾಗುವುದು ಅವರ ಮಾತು ಮತ್ತು ನಡವಳಿಕೆಯಿಂದಲೇ ಹೊರತು, ಬರಿ ಅವರ ತಳಕು ಬಳುಕಿನ ಹೊರ ವ್ಯಕ್ತಿತ್ವದಿಂದ ಅಲ್ಲ. ಅವರ ಜೊತೆ ಒಂದಷ್ಟು ಹೊತ್ತು ವ್ಯವಹರಿಸಿದಾಗಲೇ ನಿಜ ಪರಿಸ್ಥಿತಿ ಅರಿವಾಗುವುದು, ಅವರ ವ್ಯಕ್ತಿತ್ವ ಹೇಗೆಂದು ತಿಳಿಯುವುದು. ಹೊರ ನೋಟಕ್ಕೆ ಮಾತ್ರ ಚೆನ್ನಾಗಿ ಕಂಡರೆ ಸಾಕಾಗುವುದಿಲ್ಲ. ಬಾಹ್ಯ ರೂಪಕ್ಕಿಂತ ಆಂತರಿಕ ಸೌಂದರ್ಯ ವ್ಯಕ್ತಿಯು ಹೇಗೆಂದು ನಿರ್ಧರಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಈ ಗಾದೆ ಮಾತು ನಿರೂಪಿಸುತ್ತದೆ.

ಎಲ್ಲಾ ಬಣ್ಣಗಳನ್ನು ಪರಿಗಣಿಸಿದಾಗ ಪ್ರಮುಖವಾಗಿ ಎಲ್ಲರ ಮನಸೆಳೆಯುವುದು ಎಂದರೆ ಕೆಂಪು ಬಣ್ಣ ಎನ್ನಬಹುದು. ಈ ಕೆಂಪು ಬಣ್ಣಕ್ಕೂ ಬಟ್ಟೆಗೂ ಒಂದೊಳ್ಳೆಯ ನಂಟಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಎಲ್ಲರ ಹತ್ತಿರವೂ ಒಂದಲ್ಲ ಒಂದು ಕೆಂಪು ಬಣ್ಣದ ಬಟ್ಟೆ ಇದ್ದೇ ಇರುತ್ತದೆ. ಗೌರ ವರ್ಣದವರಿಗೆ ಕೆಂಪು ಬಣ್ಣದ ಬಟ್ಟೆ ಚೆಂದವೆಂದು, ಕೃಷ್ಣ ವರ್ಣದವರಿಗೆ ತಿಳಿ ಬಣ್ಣವು ಒಪ್ಪುತ್ತದೆ ಎಂದು ಹಲವರು ಹೇಳುತ್ತಿರುತ್ತಾರೆ.

ಬಟ್ಟೆಯ ಆಯ್ಕೆ ಮತ್ತು ಹಾಕುವ ಸ್ವಾತಂತ್ರ್ಯ ತೊಡುವವರಿಗೆ ಬಿಟ್ಟದ್ದು. ಕನ್ನಡಿ ಮುಂದೆ ನಿಂತಾಗ ಯಾವುದು ಚೆನ್ನ ಅಥವಾ ಅಲ್ಲ ಎನ್ನುವುದು ತಿಳಿಯುತ್ತದೆ. ಹಾಗಾಗಿ ಬಟ್ಟೆಯ ಬಣ್ಣದ ಬಗ್ಗೆ ಬೇರೆಯವರು ಸಲಹೆ ನೀಡುವುದು ಏಕೋ ಸರಿಯಲ್ಲ ಅನಿಸುತ್ತದೆ.

ಡಿಸೆಂಬರ್ ತಿಂಗಳು ಬಂತೆಂದರೆ ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಆಚರಿಸುತ್ತೇವೆ. ಕ್ರಿಶ್ಚಿಯನ್ನರಿಗೆ ಮಾತ್ರ ಈ ಹಬ್ಬಗಳು ಸೀಮಿತವಾಗದೆ, ಎಲ್ಲಾ ಜನರು ಒಟ್ಟುಗೂಡಿ ಆಚರಿಸುವುದು ಈ ಹಬ್ಬಗಳ ವಿಶೇಷ. ಈ ಸಮಯದಲ್ಲಿ ಹಲವು ಮನೆಗಳಲ್ಲಿ 'ಕ್ರಿಸ್ಮಸ್ ಟ್ರೀ' ಇಟ್ಟು ನಕ್ಷತ್ರವನ್ನು ಹೊರಗಡೆ ನೇತು ಹಾಕುತ್ತಾರೆ.

ಕೆಂಪು ಬಣ್ಣದ 'ಸಾಂತಾ ಕ್ಲಾಸ್' ಕ್ಯಾಪ್ ಗಳನ್ನು ಚಿಕ್ಕವರಿಂದ ಹಿಡಿದು ದೊಡ್ಡವರೂ ಸಹ ಧರಿಸಿ ಸಂಭ್ರಮದಿಂದ ಕೇಕ್ ತಿಂದು, ಚರ್ಚ್ ಗಳಿಗೆ ತೆರಳಿ ಹಬ್ಬ ಆಚರಿಸುತ್ತಾರೆ. ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಎದ್ದು ಕಾಣುವುದು ಹಸಿರು ಮತ್ತು ಕೆಂಪು ಬಣ್ಣಗಳೇ. ಕೆಂಪು ಬಣ್ಣದ ಬೆರ್ರೀಗಳು ಹಾಗೂ ಹಸಿರು ಬಣ್ಣದ ಕ್ರಿಸ್ಮಸ್ ಮರ ಕಂಗೊಳಿಸುತ್ತದೆ. ಇಷ್ಟು ಮಾತ್ರವಲ್ಲದೇ ‘ಕ್ರಿಸ್ಮಸ್ ತಾತ’ ಸಾಂತಾ ಕ್ಲಾಸ್ ಕೂಡ ಧರಿಸುವುದು ಕೆಂಪು ಬಣ್ಣದ ಬಟ್ಟೆಯನ್ನೇ! ಚಿಕ್ಕ ಮಕ್ಕಳು ಕ್ರಿಸ್ಮಸ್ ವೇಳೆಯಲ್ಲಿ ಕೆಂಪು ಬಣ್ಣದ ಬಟ್ಟೆ ಹಾಗೂ ಕೆಂಪು ಬಣ್ಣದ ಟೋಪಿಯನ್ನು ಧರಿಸಿ ಓಡಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬದಂತೆನಿಸುತ್ತದೆ.

ಹೆಣ್ಣಿಗೂ ಕೆಂಪು ಬಣ್ಣಕ್ಕೂ ಅವಿನಾಭಾವ ಸಂಬಂಧವಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಹದಿವಯಸ್ಸಿನ ಹುಡುಗಿಯು ಪ್ರೌಢಾವಸ್ಥೆಯನ್ನು ತಲುಪಿ 'ಹೆಣ್ಣಾದಳು' ಎಂಬುದನ್ನು ಸೂಚಿಸುವುದು ಈ ಕೆಂಪು ಬಣ್ಣವೇ. ಮದುವೆಯಾಗಿ ಮಕ್ಕಳಾಗುವುದು, ಅದರಿಂದ ಆ ಮನೆಯ ವಂಶ ಬೆಳೆಯುವುದು ಈ ಕೆಂಪು ಬಣ್ಣದ ಮೇಲೆಯೇ ನಿಂತಿದೆ ಎಂದರೆ ತಪ್ಪಿಲ್ಲ. ಆದರೆ ಕೆಲವು ಕಡೆಗಳಲ್ಲಿ ಈಗಲೂ ಋತುಸ್ರಾವವಾದ ಹೆಣ್ಣು ಮಕ್ಕಳನ್ನು ಮುಟ್ಟಿಸಿಕೊಳ್ಳದೆ ಮೈಲಿಗೆ ಎಂದು ನೋಡುವುದುಂಟು. ತಿಂಗಳ ಮುಟ್ಟಾದಾಗ ಅವಳನ್ನು ಮುಟ್ಟಿಸಿಕೊಳ್ಳಬಾರದೆಂದು, ಅವಳು ಯಾವುದೇ ಕೆಲಸ ಮಾಡಬಾರದೆಂದು 'ಮಡಿ-ಮೈಲಿಗೆ' ಎನ್ನುವವರುಂಟು. ಪ್ರತಿಯೊಬ್ಬ ಹೆಣ್ಣುಮಗಳ ಅಸ್ತಿತ್ವವೇ ಈ ಕೆಂಪು ಮುಟ್ಟಿನ ಮೇಲೆ ನಿಂತಿದೆ ಎಂದರೆ ಅತಿಶಯೋಕ್ತಿ ಏನಲ್ಲ. ಆದರೂ ಇಂತಹ ಮೂಢನಂಬಿಕೆ ಕೆಲವು ಕಡೆ ಇನ್ನೂ ಚಾಲ್ತಿಯಲ್ಲಿದೆ ಎಂಬುದೇ ಬೇಸರದ ಸಂಗತಿ.

ಜನರಲ್ಲಿ ಬೀಡು ಬಿಟ್ಟಿರುವ ಇಂತಹ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು 2015 ನೇ ಇಸವಿಯಲ್ಲಿ "ಹ್ಯಾಪಿ ಟು ಬ್ಲೀಡ್" ಎಂಬ ಅಭಿಯಾನ ಇಡೀ ದೇಶದಲ್ಲೇ ಸಂಚಲನವನ್ನು ಸೃಷ್ಟಿ ಮಾಡಿತ್ತು. ಶಬರಿಮಲೆಗೆ ಹೆಣ್ಣು ಮಕ್ಕಳ ಪ್ರವೇಶದ ಕುರಿತು ಈ ಪ್ರಚಾರ ಹುಟ್ಟಿಕೊಂಡರೂ ನಂತರದ ದಿನಗಳಲ್ಲಿ ಬೇರೆಯದೇ ಸ್ವರೂಪವನ್ನು ಪಡೆದುಕೊಂಡು ದೇಶದ ಅನೇಕ ಹೆಣ್ಣು ಮಕ್ಕಳು ಈ ಅಭಿಯಾನದ ಪರವಾಗಿ ನಿಂತರು. ಹೆಣ್ಣು ಯಾವ ಕಾರಣಕ್ಕೂ ಋತುಸ್ರಾವದ ಬಗ್ಗೆ ಅಂಜಿಕೆ, ಹೆದರಿಕೆ, ಕೀಳರಿಮೆ ಪಡಬಾರದು. ಅದು ಅವಳು ತಾಯಿಯಾಗಬಲ್ಲಳು ಎಂಬುದರ ಸಂಕೇತವಾಗಿದೆ. "ಸ್ತ್ರೀ ಎಂದು ಹೇಳಲು ಭಯವೇಕೆ?" ಎಂದು ಇಡೀ ದೇಶದ ಮಹಿಳೆಯರು ಬೆಂಬಲಿಸಿದರು.

ಮನುಷ್ಯನನ್ನು ಒಳಗೊಂಡ ಸಕಲ ಜೀವರಾಶಿಗಳು ತಾವು ಬದುಕಿದ್ದೇವೆ ಎಂಬುದನ್ನು ಸಾಬೀತು ಪಡಿಸುವುದು ಈ ಕೆಂಪು ಬಣ್ಣದಿಂದಲೇ. ಮೂಳೆ ಮಾಂಸದಿಂದ ಕೂಡಿದ ಮಾನವನ ದೇಹ 'ರಕ್ತದ' ನಿರಂತರ ಹರಿಯುವಿಕೆಯಿಂದ ಮಾತ್ರ ಜೀವಿಸಲು ಸಾಧ್ಯ. ಈ ರಕ್ತವು ಇರುವ ಬಣ್ಣ ಸಹ ಕೆಂಪೇ ಆಗಿದೆ.

ಕೆಂಪು ಬಣ್ಣದ ಕಥೆ ಇಲ್ಲಿಗೆ ನಿಲ್ಲುವುದಿಲ್ಲ!! ಕೆಂಪು ಬಣ್ಣವು ಎಲ್ಲರನ್ನೂ ಎಷ್ಟು ಮೋಡಿ ಮಾಡಿದೆ ಎಂದರೆ 'ಸೆವೆನ್ ರಾಜ್' ಎಂಬುವವರ ಕುಟುಂಬ ತಾವು ಧರಿಸುವ ಬಟ್ಟೆ ಮಾತ್ರವಲ್ಲದೆ, ಇರುವ ಮನೆ, ಓಡಿಸುವ ಕಾರು, ಗೋಡೆಯ ಬಣ್ಣ, ಮನೆಯ ಒಳಾಂಗಣ, ಕುರ್ಚಿ, ಟೇಬಲ್ ಹೀಗೆ ಎಲ್ಲವೂ ಕೆಂಪು ಮತ್ತು ಬಿಳಿಯ ಬಣ್ಣದಿಂದ ಕೂಡಿದೆ ಎಂದು ವರದಿಯಾಗಿದೆ. ಆ ಮಟ್ಟಿಗೆ ಅವರ ಕುಟುಂಬಕ್ಕೆ ಕೆಂಪು ಮತ್ತು ಬಿಳಿ ಬಣ್ಣಗಳು ಇಷ್ಟವಾಗಿ ಹೋಗಿವೆಯಂತೆ!

ಶಾಲಾ ದಿನಗಳನ್ನು ನೆನಪಿಸಿಕೊಂಡರೆ, ಆ ದಿನಗಳಲ್ಲಿ ನಡೆಯುವ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಲ್ಲಿ, ಒಂದಾದರೂ ಮಗು "ಲಿಟ್ಟಲ್ ರೆಡ್ ರೈಡಿಂಗ್ ಹುಡ್" ಆಗಿ ಅಲಂಕರಿಸಿಕೊಂಡು ಬಂದಿರುತ್ತಿತ್ತು. ಲಿಟ್ಟಲ್ ರೆಡ್ ರೈಡಿಂಗ್ ಹುಡ್ ಎಂಬುದು ಒಂದು ಮಕ್ಕಳ ಕಥೆಯಾಗಿದ್ದು, ಅದರಲ್ಲಿ ಬರುವ ಬಾಲೆಯು ಕೆಂಪು ಟೋಪಿ ಮತ್ತು ಕೆಂಪು ಬಣ್ಣದ ಫ್ರಾಕ್ ಧರಿಸಿರುತ್ತಾಳೆ. ಈ ಕಥೆಯು ಆ ಬಾಲೆ, ಅವಳ ಅಜ್ಜಿ ಮತ್ತು ಕಪಟ ತೋಳದ ಸುತ್ತ ನಡೆಯುತ್ತದೆ. ಬಿಡುವಿದ್ದಾಗ ಮಕ್ಕಳಿಗೆ ಹೇಳುವಂತಹ ಕಾಲ್ಪನಿಕ ಕಥೆ ಇದಾಗಿದೆ.

Little Red Riding Hood ಕಥೆಯು ಮಕ್ಕಳು ಮಾತ್ರವಲ್ಲದೇ ಹಿರಿಯರು ಸಹ ಓದಿ ತಿಳಿಯಬಹುದಾದಂತಹ ಆಸಕ್ತಿಕರವಾದ fairy tale ಕಥೆಯಾಗಿದೆ.

ಲಿಟಲ್ ರೆಡ್ ರೈಡಿಂಗ್ ಹುಡ್ ಕಥೆ ಕನ್ನಡದಲ್ಲಿ 'ಕೆಂಪು ಟೋಪಿಯ ಬಾಲೆ' ಎಂಬ ಹೆಸರಿನಿಂದ ಪ್ರಖ್ಯಾತವಾಗಿದ್ದು,  ಮಕ್ಕಳಿಗೆ ಖುಷಿ ಕೊಡುವ ಮತ್ತು ಅಪರಿಚಿತರ ಬಗ್ಗೆ ಜಾಗರೂಕರಾಗಿರಬೇಕೆಂದು ತಿಳಿಸುವ ಮಕ್ಕಳ ನೀತಿಯುಕ್ತ ಕಥೆ ಇದಾಗಿದೆ.

ಸಾಹಸ ಕ್ರೀಡೆಯಾದ 'ಬುಲ್ ಫೈಟಿಂಗ್' ಸ್ಪರ್ಧೆಯನ್ನು ಟಿವಿಯಲ್ಲಾದರೂ ಒಮ್ಮೆ ನೋಡಿರುತ್ತೇವೆ. ಆ ಸ್ಪರ್ಧೆಯಲ್ಲಿ ಗೂಳಿಯನ್ನು ಪಳಗಿಸಲು ಕೆಂಪು ಬಟ್ಟೆಯನ್ನ ಉಪಯೋಗಿಸುತ್ತಾರೆ. ಈ ಕೆಂಪು ಬಣ್ಣದ ಬಟ್ಟೆಯಿಂದ ಗೂಳಿಯು ರೊಚ್ಚಿಗೇಳುತ್ತದೆ ಎಂದು ನಂಬಲಾಗಿದೆ. ಆದರೆ ಇದು ನಿಜವಲ್ಲ. ಗೂಳಿಯನ್ನು ಪಳಗಿಸುವ ಹುಡುಗ ಉಪಯೋಗಿಸುವ ಬಟ್ಟೆಯ ಚಲನವಲನದಿಂದ ಅದು ರೊಚ್ಚಿಗೇಳುತ್ತದೆಯೇ ಹೊರತು ಕೆಂಪು ಬಣ್ಣದಿಂದಲ್ಲ ಎಂದು ಸಾಬೀತಾಗಿದೆ. ಹಾಗಾಗಿ ಗೂಳಿಗಳಿಗೆ ಕೆಂಪು ಬಣ್ಣ ಆಗುವುದಿಲ್ಲ ಎಂಬ ಮಾಹಿತಿ ಸುಳ್ಳು, ಅದು ಕೇವಲ ತಪ್ಪು ಕಲ್ಪನೆ ಮಾತ್ರ ಎಂದು ಹೇಳಬಹುದು.

ಕೆಂಪು ಒಲವಿನ ಸಂಕೇತವೂ ಹೌದು, ಆಘಾತದ ಸಂಕೇತವೂ ಹೌದು. ಶಕ್ತಿ, ಸಾಹಸ, ಹಿಂಸೆಯನ್ನು ನಿರೂಪಿಸುವುದು ಸಹ ಕೆಂಪು ಬಣ್ಣವೇ. ಕಾಮನಬಿಲ್ಲಿನ ಏಳು ಬಣ್ಣಗಳಲ್ಲಿ ಒಂದಾದ ಕೆಂಪು ಬಣ್ಣವು ಕಣ್ಣಿಗೆ ತಂಪಲ್ಲದಿದ್ದರೂ, ಆ ಬಣ್ಣದ ಬಟ್ಟೆ ಧರಿಸಿದವರು ಎಲ್ಲರ ಮಧ್ಯೆ ಎದ್ದು ಕಾಣಿಸುತ್ತಾರೆ ಎಂಬುದಂತೂ ಸತ್ಯ. ಅಂತಹ ಆಕರ್ಷಕವಾದ ಬಣ್ಣ ಕೆಂಪು!

ಧರಿಸುವ ಬಟ್ಟೆಯ ಬಣ್ಣ ಯಾವುದೇ ಆದರೂ ಸಹ ಅದರಿಂದ ಅಷ್ಟೇನೂ ವ್ಯತ್ಯಾಸ ಆಗುವುದಿಲ್ಲ. ನೋಡುವವರ ಕಣ್ಣಿಗೆ ಕೆಲವೊಮ್ಮೆ ಚೆನ್ನಾಗಿ ಕಾಣದೇ ಇರಬಹುದು ಅಷ್ಟೇ. ಆದರೆ ಮನುಷ್ಯನಾದವನು 'ಬಣ್ಣದ ಮುಖವಾಡ' ಧರಿಸಿ ಒಳಗೊಂದು ರೀತಿ ಹೊರಗೊಂದು ರೀತಿ ನಡೆದುಕೊಂಡರೆ, ಆಗ ಮಾತ್ರ ಮನೆ-ಸಂಸಾರದಲ್ಲಿ ಮಾತ್ರವಲ್ಲ ಇಡೀ ಸಮಾಜದಲ್ಲೇ ನಕಾರಾತ್ಮಕ ಬೆಳವಣಿಗೆ ಉಂಟಾಗಬಹುದು. ಬದುಕು ಅಲ್ಲೋಲ ಕಲ್ಲೋಲವೂ ಆಗಬಹುದು!!

✍️ ಅಚಲ ಬಿ ಹೆನ್ಲಿ 

 

 

Category : World


ProfileImg

Written by Achala B.Henly