ಇಪ್ಪತ್ತರ ಬದಲು ಐವತ್ತರ ಗುರಿ ನೀಡಬೇಕಾಗಿತ್ತು ಛೆ!

ಆತ್ಮ ಕಥೆಯ ಬಿಡಿ ಭಾಗಗಳು:ಕೊನೆಗೂ ಇಪ್ಪತ್ತರ ಗಡಿ ದಾಟಿದೆ

ProfileImg
26 May '24
7 min read


image

ಇಪ್ಪತ್ತರ ಬದಲು ಐವತ್ತರ ಗುರಿ ನೀಡಬೇಕಾಗಿತ್ತು ಛೆ! ಹೌದು ಈ ಮಾತನ್ನು ನಾನು ಸಾವಿರಕ್ಕೂ ಹೆಚ್ಚು ಬಾರಿ ಮನಸಿನಲ್ಲೇ ಅಂದುಕೊಂಡಿದ್ದೇನೆ ..

ಏನು ಇಪ್ಪತ್ತು ಯಾವ ಐವತ್ತು ಎಂದು ಕುತೂಹಲ ಇದೆಯೇ ಹಾಗಾದರೆ ಮುಂದೆ ಓದಿ..

ನಾನು ಸುಮಾರು ಇಪ್ಪತ್ತನ ಲ್ಕು ವರ್ಷಗಳ ಹಿಂದೆ ತುಳು ಸಂಸ್ಕೃತಿ ಜನಪದದ ಕಡೆಗೆ ಆಸಕ್ತಳಾದೆ,ಹಾಗಾಗಿಯೇ ನಾನು ಎಂ ಫಿಲ್ ಪದವಿಯನ್ನು ಈಜೋ ಮಂಜೊಟ್ಟಿಗೋಣ - ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ಪಡೆದೆ .
ಇದು ಗದ್ದೆಯಲ್ಲಿ ಆರಾಧನೆ ಗೊಳ್ಳುವ ಉರವ ಮತ್ತು ಎರು ಬಂಟ ಎಂಬ ದೈವಗಳಿಗೆ ಸಂಬಂಧಿಸಿದ್ದು.

ನನ್ನ ತಂದೆ ಮನೆ ಕೋಳ್ಯೂರು ದೇವರ ಕಂಬಳ ಗದ್ದೆಯಲ್ಲಿ ಪ್ರತಿವರ್ಷ ಪೂಕರೆ ಆಗುತ್ತದೆ.ಅಲ್ಲಿ ಆಗ ಭೂತ ಕೋಲ ಕೂಡ ಆಗುತ್ತಾ ಇತ್ತು.ಅಲ್ಲಿ ಆರಾಧನೆ ಹೊಂದುವ ಎರಡು ಭೂತಗಳು ಯಾರು ಎಂದು ಹೆಸರು ಕೂಡ ನಮಗೆ ಗೊತ್ತಿರಲಿಲ್ಲ .
ನಾನು ನನ್ನ ಎಂ ಫಿಲ್ ಥೀಸಿಸ್ ಗಾಗಿಯೇ ಅಲ್ಲಿ ಮೊದಲಿಗೆ ಭೂತ ಕೋಲವನ್ನು ರೆಕಾರ್ಡ್ ಮಾಡಿ ಮಾಹಿತಿ ಸಂಗ್ರಹಿಸಿದೆ.
ಅಲ್ಲಿ ಭೂತ ಕಟ್ಟುವ ಅಪ್ಪಣ್ಣ ಅವರು ಅದು ಉರವ ಮತ್ತು ಎರು ಬಂಟ ಭೂತಗಳು ಎಂದು ತಿಳಿಸಿದರು.ಆದರೆ ಆ ದೈವಗಳ ಹಿನ್ನೆಲೆಯಾಗಲಿ ಕಥನವಾಗಲಿ ಅವರಿಗೆ ತಿಳಿದಿರಲಿಲ್ಲ.ಹಾಗಾಗಿ ನಾನು ತುಳು ವಿದ್ವಾಂಸರ ಸಂಶೋಧನಾ ಕೃತಿಗಳಲ್ಲಿ ಈ ದೈವಗಳ ಬಗ್ಗೆ ಮಾಹಿತಿಗಾಗಿ ಹುಡುಕಾಡಿದೆ .
ಆಗ ನನಗೆ ಒಂದು ಅಚ್ಚರಿ ಕಾದಿತ್ತು ,ಆ ಎರಡು ದೈವಗಳ ಹೆಸರು ಕೂಡ ವಿದ್ವಾಂಸರ ತುಳುನಾಡಿನ ಭೂತಗಳ ಪಟ್ಟಿಯಲ್ಲಿ ದಾಖಲಾಗಿರಲಿಲ್ಲ !ಆಗ ಮೊದಲ ಬಾರಿಗೆ ನನಗೆ ಇನ್ನು ಕೂಡ ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡುವ ವಿಚಾರಗಳು ತುಂಬಾ ಇವೆ ,ಈ ದೈವಗಳಂತೆ ಇನ್ನೂ ಕೂಡ ನೆಕ ದೈವಗಳ ಹೆಸರು ಕೂಡ ಸಂಗ್ರಹ ಆಗಿರಲಿಕ್ಕಿಲ್ಲ ಎಂದು ಮನವರಿಕೆಯಾಯಿತು .
ಮುಂದೆ ಎಂ ಫಿಲ್ ಅನಂತರ ಡಾಕ್ಟರೇಟ್ ಗಾಗಿ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರ ಕಾರ್ಯಕ್ಕಾಗಿ ತುಳುನಾಡಿನಾದ್ಯಂತ ಅಲೆದಾಡಿದೆ .ಆಗೆಲ್ಲ ಈ ತನಕ ಅಧ್ಯಯನವಾಗದ ಹೆಸರು ಕೂಡ ದಾಖಲಾಗದ ಅನೇಕ ದೈವಗಳ ಹೆಸರು ಸಿಕ್ಕಿದ್ದು ,ಈ ಬಗ್ಗೆ ಎಂದಾದರೂ samagra ಮಾಹಿತಿ ಸಂಗ್ರಹಿಸಬೇಕು ಎಂದು ಕೊಂಡಿದ್ದೆ .ಆಗ ನನ್ನ ಪಿಎಚ್ ಡಿ ಥೀಸಿಸ್ ಕಡೆಗೆ ಹೆಚ್ಚು ಗಮನ ಕೊಡಬೇಕಾದ ಅನಿವಾರ್ಯತೆ ಇದ್ದ ಕಾರಣ ಇಂಥ ದೈವಗಳ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ .ಆದರೆ ಎಂದಾದರೂ ಈ ಬಗ್ಗೆ ಅಧ್ಯಯನ ಮಾಡಬೇಕು ಎಂಬ ಹಂಬಲವಿತ್ತು .
2009 ರಲ್ಲಿ ನಾನು ಪದವಿ ಪೂರ್ವ ಕಾಲೇಜ್ ಉಪನ್ಯಾಸಕಿಯಾಗಿ ಆಯ್ಕೆಯಾದಾಗ ನನ್ನ ಹಂಬಲ ಮತ್ತೆ ಗರಿಗೆದರಿತು .ಹಾಗಾಗಿಯೇ ನಾನು ಬೆಳ್ಳಾರೆ ಯನ್ನು ಆಯ್ಕೆಮಾಡಿಕೊಂಡು ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗೆ ಕನ್ನಡ ಉಪನ್ಯಾಸಕಿಯಾಗಿ ಹೋದೆ .
ಅಲ್ಲಿಗೆ ಹೋದ ತುಸು ಸಮಯದಲ್ಲಿಯೇ ನನಗೆ ನನ್ನ ಮೊದಲ ಡಾಕ್ಟರೆಟ್ ಪದವಿ ಸಿಕ್ಕಿತು .
ಅದೇ ಸಮಯದಲ್ಲಿಯೇ(2010 ಫೆಬ್ರುವರಿ ತಿಂಗಳಲ್ಲಿ ಎಂದು ನೆನಪು )ಕರ್ಣಾಟಕ ತುಳು ಅಕಾಡೆಮಿ ಯು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಮ್ಮ ಬೆಳ್ಳಾರೆ ಕಾಲೇಜ್ ನಲ್ಲಿ ತುಳು ಮಿನದನ ಎಂಬ ಸುಳ್ಯ ತಾಲೂಕು ಮಟ್ಟದ ಕಾರ್ಯಕ್ರಮ ಏರ್ಪಡಿಸಿತು .
ಅದಾಗಲೇ ನಾನು ಸ್ಥಳಿಯರಿಗೆ  ಮಾತ್ರವಲ್ಲ ತುಳು ವಿದ್ವಾಂಸರ ಅರಿವಿಗೆ ಬಾರದೆ ಇದ್ದ ಬೆಳ್ಳಾರೆ ಸುತ್ತ ಮುತ್ತಲಿನ ಅಜ್ಜಿ ಭೂತ ,ಮೂವ,ಮಾಲಿಂಗರಾಯ,ದಾಲ್ಸುರಾಯ,ಅಡ್ಯಂತಾಯ ,ಕುಕ್ಕೆತ್ತಿ ಬಳ್ಳು ಮೊದಲಾದ ಅಪರೂಪದ ದೈವಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದ್ದೆ .ಅದನ್ನು ಬೆಳ್ಳಾರೆಯ ಜನತೆಗೆ ತಿಳಿಸಲು ಹಾಗೂ ಈ ರೀತಿಯ ಅಲಕ್ಷಿತ ಅಪರೂಪದ ಉಪದೈವಗಳ ಅಧ್ಯಯನ ಮಾಡುವಂತೆ ಪ್ರೇರೇಪಿಸಲು ಇದು ಸರಿಯಾದ ಸರಿಯಾದ ಅವಕಾಶ ಎಂದು ಅರಿತ ನಾನು ಆ ಕಾರ್ಯಕ್ರಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತುಳು ನಾಡಿನ ಬಹುಶ್ರುತ ವಿದ್ವಾಂಸರೂ ನನಗೆ ಸಂಶೋಧನೆಗೆ ಪ್ರೇರಣೆ ಕೊಟ್ಟು ಮಾರ್ಗ ದರ್ಶನ ಮಾಡಿರುವ ನನ್ನ ಆತ್ಮೀಯರೂ ಆಗಿದ್ದ ಡಾ.ಅಮೃತ ಸೋಮೇಶ್ವರ ಅವರಲ್ಲಿ "ನನಗೆ ಒಂದು ಪ್ರಬಂಧ ಮಂಡನೆಗೆ ಅವಕಾಶವನ್ನು ಕೊಡುವಂತೆ ಕೇಳಿದೆ .
ಆಗ ಅವರು ತುಳು ಅಕಾಡೆಮಿ ಅಧ್ಯಕ್ಷರಾದ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು .
ಮರುದಿವಸ ನಾನು ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಫೋನ್ ಮಾಡಿದೆ .ಆಗ ಅವರು ನಿಮ್ಮನ್ನು ಕವಿ ಗೋಷ್ಠಿಗೆ ಹಾಕಿದ್ದೇವೆ ಎಂದರು !
ನನಗೆ ಹೃದಯಘಾತ ಆಗಲು ಸ್ವಲ್ಪ  ಮಾತ್ರ ಬಾಕಿ ಇತ್ತು ,ಅಷ್ಟು ಗಾಬರಿಯಾದೆ !ಯಾಕೆಂದರೆ ನನಗೆ ಮಾತೃ ಭಾಷೆ ಕನ್ನಡದಲ್ಲಿಯೇ  ಕವಿತೆ ಬರೆಯಲು ತಿಳಿದಿಲ್ಲ !ಇನ್ನು ತುಳುವಿನಲ್ಲಿ ..!
ಅಂತೂ ಹೇಗೋ ಸುಧಾರಿಸಿಕೊಂಡು ನನಗೆ ಕವಿ ಗೋಷ್ಠಿ ಬೇಡ ,ನನಗೆ ವಿಚಾರ ಗೋಷ್ಠಿಯಲ್ಲಿ ಅವಕಾಶ ಕೊಡಿ ಎಂದು ಕೇಳಿದೆ .
ಆಗ ಅವರು ಕೊಟ್ಟದ್ದನ್ನು ಮಾಡಬೇಕು ಎಂದು ಹೇಳಿದರು !ಅಯ್ಯೋ ದೇವರೇ ಇವರು ತುಳು ಮಿನದನ ಮಾಡುತ್ತಿದ್ದಾರೆಂದು ನಾನು ಇದ್ದಕ್ಕಿದ್ದಂತೆ ಕವಿಯಾಗಲು ಸಾಧ್ಯವೇ !
ಅದಾಗದು ಎಂದು ಹೇಳಿದೆ .ನೀವು ಅವಕಾಶ ಕೊಡುವುದಾದರೆ ವಿಚಾರ ಸಂಕಿರಣದಲ್ಲಿ ಕೊಡಿ ಎಂದು ಹೇಳಿದೆ .
ಆಗ ಅವರು ಅದರಲ್ಲಿ ವಿಚಾರ ಸಂಕಿರಣದಲ್ಲಿ ಸ್ಥಳಿಯರಿಗೆ ಅವಕಾಶವಿಲ್ಲ ಎಂದು ಹೇಳಿದರು !

ಹೀಗೂ ಉಂಟೆ ?ತುಳು ಭಾಷೆ ಸಂಸ್ಕೃತಿ ಜಾನಪದ ಗಳ ಅಭಿವೃದ್ಧಿಗೆಂದೇ ಸ್ಥಾಪಿತವಾದ ತುಳು ಅಕಾಡೆಮಿ ಯ ಅಧ್ಯಕ್ಷರು ಸ್ಥಳಿಯರಿಗೆ ಅವಕಾಶ ಇಲ್ಲವೆಂದು ಹೇಳಿದರೆ ಅದಕ್ಕೆ ಅರ್ಥವಿದೆಯೇ ?

ನನಗೂ ಛಲ ಬಂತು !ಆ ಕಾರ್ಯಕ್ರಮದಲ್ಲಿ ಸ್ಥಳೀಯ ವಿದ್ವಾಂಸರಾದ ಡಾ.ನರೇಂದ್ರ ರೈ ದೇರ್ಲರು ಇದ್ದಿದ್ದು ನನಗೆ ಗೊತ್ತಿತ್ತು .ಹಾಗಾಗಿ ನಾನು ನರೇಂದ್ರ ರೈ ದೆರ್ಲರು ಸ್ಥಳೀಯರಲ್ಲವೇ ?ಎಂದು ಕೇಳಿದೆ .

ಅದಕ್ಕೆ ಪಾಲ್ತಾಡಿಯವರು "ಅವರೆಲ್ಲಿ ನೀವೆಲ್ಲಿ ?ಅವರು ಇಪ್ಪತ್ತು ಪುಸ್ತಕ ಬರೆದಿದ್ದಾರೆ ಗೊತ್ತಿದೆಯ? "ಎಂದು ಕೇಳಿದರು.
ಹೌದು ಅದು ಒಪ್ಪಿಕೊಳ್ಳಬೇಕಾದ ಮಾತು ,ದೇರ್ಲರ ವಿದ್ವತ್ ಮಟ್ಟಿಗೆ ಎರಡು ಮಾತು ನನ್ನಲ್ಲೂ ಇಲ್ಲ .ಆದರೆ ಸುಳ್ಯ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡನೆ ಮಾಡಲು ನನ್ನ ಅರ್ಹತೆ ಧಾರಾಳ ಸಾಕಿತ್ತು ,ಯಾಕೆಂದರೆ ಅದಾಗಲೇ ನಾನು ಮೊದಲ  ಡಾಕ್ಟರೇಟ್ ಪಡೆದಿದ್ದು ಎರಡನೇ ಡಾಕ್ಟರೇಟ್ ಪದವಿಗೆ ಥೀಸಿಸ್ ಸಿದ್ಧ ಪಡಿಸಿದ್ದೆ ಅಲ್ಲದೆ ಸುಮಾರು ಹತ್ತು-ಹನ್ನೆರಡು ಪುಸ್ತಕಗಳೂ ,ಸುಮಾರು 20-30 ಲೇಖನಗಳೂ ಪ್ರಕಟವಾಗಿದ್ದವು .9-1೦ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲೂ ಪ್ರಬಂಧ ಮಂಡಿಸಿದ ಅನುಭವವಿತ್ತು .
ಹಾಗಾಗಿ ನಾನು ಅದನ್ನೇ ಹೇಳಿದೆ ,"ನಾನು ಅವರಷ್ಟು ವಿದ್ವಾಂಸೆ ಅಲ್ಲವಾದರೂ ಈ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸುವಷ್ಟು ಅರ್ಹತೆ ಹಾಗೂ  ಸಾಮರ್ಥ್ಯ ನನ್ನಲ್ಲಿದೆ ಈಗಾಗಲೇ ನಾನು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ ಅನುಭವವಿದೆ" ಎಂದು ಹೇಳಿದೆ .ಆಗ ಅವರು "ನಿಮಗೆ ಹೆಂಗಸರಿಗೆ ರೇಷ್ಮೆ ಸೀರೆ ಉಟ್ಟು ಮೆರೆಯಲು ಸ್ಟೇಜ್ ಬೇಕು ಅಷ್ಟೇ ತಾನೇ !ಬೇಕಾದರೆ ಕವಿಗೋಷ್ಠಿಗೆ ಬನ್ನಿ" ಎಂದು ಹೇಳಿದರು ,ಅದಕ್ಕೆ ನಾನು ಇಲ್ಲ ನಾನು ಕವಿ ಗೋಷ್ಠಿಗೆ ಬರುವುದಿಲ್ಲ ,ನಾನು ಇನ್ನು ಐದು ವರ್ಷಸಮಯ ಕೊಡಿ  , 20 ಪುಸ್ತಕ ಬರೆದು ಪ್ರಕಟಿಸಿ ಬರುತ್ತೇನೆ ,ಆಗ ಬೆಳ್ಳಾರೆ ಯಲ್ಲಿ ಮತ್ತೆ ತುಳು ಮಿನದನ ಮಾಡುತ್ತೀರಾ ?ಅಥವಾ ನೀವು ಆಗಲೂ ಅಧ್ಯಕ್ಷರಾಗಿರುತ್ತೀರಾ? ಮನಸಿಲ್ಲದಿದ್ದರೆ ಕೊಡುವುದಿಲ್ಲ ಎಂದು ಹೇಳಿ ಅದು ಬಿಟ್ಟು ಬೇರೆ ಮಾತು ಬೇಡ "ಎಂದು ಕೇಳಿ ಫೋನ್ ಕಟ್ ಮಾಡಿದ್ದೆ .



ಅದು ಇರಲಿ  ಅಂದು ಪಾಲ್ತಾಡಿಯವರಲ್ಲಿ ನಾನು 20 ಪುಸ್ತಕ ಬರೆದು ಪ್ರಕಟಿಸುತ್ತೇನೆ ಐದು ವರ್ಷದ ಒಳಗೆ ಎಂದಿದ್ದೆ !ಹೌದು ಅಂದು ಹೇಳಿದಂತೆಯೇ ಮಾಡಿದೆ ನಂತರ 3 ವರ್ಷಗಳ ಒಳಗೆ ನನ್ನ 20 ಪುಸ್ತಕಗಳೂ ಪ್ರಕಟವಾದವು !

 2013 ನವೆಂಬರ್ನಲ್ಲಿ ನನ್ನ 20 ನೆಯ ಪುಸ್ತಕ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ (ಪಿಎಚ್ ಡಿ ಮಹಾ ಪ್ರಬಂಧ ) ಪ್ರಕಟವಾಯಿತು

ಪಾಲ್ತಾಡಿ ಯವರು ಹೇಳಿದ ಗುರಿ 20 ರ ಗುರಿ ಈಡೇರುವ ತನಕ ನಿಲ್ಲಿಸದೆ ಒಂದಿನಿತೂ ವಿರಮಿಸದೆ ಕ್ಷೇತ್ರ ಕಾರ್ಯ ಮಾಡಿದೆ ಬರೆದೆ ಪ್ರಕಟಿಸಿದೆ .
 ,ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡುತ್ತಿರುವ ನನಗೆ ಅವಕಾಶ ನೀಡಿ  ಬೆಂಬಲಿಸುವುದನ್ನು  ತುಳು ಅಕಾಡೆಮಿ ಮಾಡಬೇಕಾಗಿತ್ತು ,ಅದನ್ನು ಮಾಡದೇ ಇದ್ದದ್ದು ಯಾರಿಗೂ ತಪ್ಪು ಎನಿಸಲೇ ಇಲ್ಲ  ,ಆದರೆ  ಈ ಬೆಳ್ಳಾರೆ ಯಲ್ಲಿ ನಾನು ಒಂದು ಅವಕಾಶ ಕೇಳಿದ್ದು ಆಗ ಅವಮಾನಿಸಿ ಮಾತಾಡಿದ್ದಕ್ಕೆ ಪ್ರತಿ ಉತ್ತರ ನೀಡಿದ್ದು ದೊಡ್ಡ ಅಪರಾಧ ಎನಿಸಿತು !
ಅದರ ಪರಿಣಾಮ ನಾನು ಸಂಶೋಧಕಿಯಾಗಿ ಗುರುತಿಸಲ್ಪಡಲಿಲ್ಲ,ಬದಲಿಗೆ ಅಹಂಕಾರಿಯಾಗಿ ಪರಿಗಣಿಸಲ್ಪಟ್ಟು,ತುಳು ಅಕಾಡೆಮಿಯ ಎಲ್ಲ ಕಾರ್ಯಕ್ರಮಗಳಿಂದಲೂ ಹೊರಗೆ ಉಳಿಯಬೇಕಾಯಿತು ಅಥವಾ ಹೊರಗೆ ಇರಿಸಿದರು ಎಂಬುದು ಹೆಚ್ಚ್ಚು ಸರಿ !
ಜೊತೆಗೆ ನನ್ನ ತುಳು ಸಂಶೋಧನಾ ಕಾರ್ಯಕ್ಕೆ ಮನ್ನಣೆ ಸಿಗದ ಕಾರಣ ನಾನು ಕೆಲಸ ಮಾಡುವ ಸಂಸ್ಥೆಯಲ್ಲೂ ಅವಗಣನೆಗೆ ಒಳಗಾದೆ !

ಹಾಗೆ ನೋಡಿದರೆ ಪಾಲ್ತಾಡಿಯವರು ಕೆಟ್ಟ ವ್ಯಕ್ತಿ ಏನೂ ಅಲ್ಲ ಅನೇಕರಿಗೆ ಬೆಂಬಲ ಕೊಟ್ಟ ಸಹೃದಯರೇ ಆಗಿದ್ದರು .ಇದೆಲ್ಲ ಆಗಿ ಐದು ವರ್ಷಗಳ ನಂತರ ಇತ್ತೀಚೆಗೆ ನಾನು ಭಾಗವಹಿಸಿದ್ದ ಮಂಗಳೂರು ತಾಲೂಕು ತುಳು ಮಿನದನ ಕಾರ್ಯಕ್ರಮಕ್ಕೆ ಬಂದಿದ್ದ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಪಾಲ್ತಾಡಿಯವರು ನನಗೆ ಮಾತಿಗೆ ಸಿಕ್ಕರು ,ಆಗ ನಾನು ಹಿಂದೆ ಬೆಳ್ಳಾರೆಯಲ್ಲಿ ನೀವು ಯಾಕೆ ಅವಕಾಶ ಕೊಡಲಿಲ್ಲ ?ತುಳು ಅಧ್ಯಯನ ಆಸಕ್ತರಿಗೆ ಬೆಂಬಲ ಕೊಡಬೇಕಾದ್ದು ಅಕಾಡೆಮಿಯ ಜವಾಬ್ದಾರಿ ಕೂಡ  ತಾನೇ ಎಂದು ಕೇಳಿದೆ .ಆಗ ಅವರು ಆಗ ಆದ ಪ್ರಮಾದವನ್ನು ಒಪ್ಪಿಕೊಂಡು ಹಾಗೆ ಆಗಬಾರದಿತ್ತು ಆದರೆ ಅಲ್ಲಿ ನಿಮಗೆ ಅವಕಾಶ ಕೊಡದೆ ಇರುವುದಕ್ಕೆ  ನಿಮ್ಮ್ಮ ಸಂಸ್ಥೆಯ ಸಹೋದ್ಯೋಗಿಗಳ ಬಲವಾದ ವಿರೋಧವೂ ಕಾರಣವಾಗಿತ್ತು ಎಂದು ಹೇಳಿ ನಂತರ ನಮಗೆ ಬಂಟ್ವಾಳ ದಲ್ಲಿ ಆಗುವಾಗ ಅವಕಾಶ ಕೊಟ್ಟಿದ್ದೆವು ಅಲ್ವ ಎಂದು ಹೇಳಿದರು !
ಆದರೆ ಬಂಟ್ವಾಳದಲ್ಲಿಯೂ ಅವರು ವಿರೋಧ ವ್ಯಕ್ತ ಪಡಿಸಿದ್ದರು ,ಅದರ ಹಿನ್ನೆಲೆ ಹೀಗಿದೆ
ಅದಾಗಿ ಸ್ವಲ್ಪ ಸಮಯದ ನಂತರ ಬಂಟ್ವಾಳ ತಾಲೂಕಿನಲ್ಲಿ ತುಳು ಅಕಾಡೆಮಿ ದ್ರಾವಿಡ ಜಾನಪದ ಮೇಳ ಎಂಬ ಒಂದು ಕಾರ್ಯಕ್ರಮ ಆಯೋಜಿಸಿತು ,ಆಗ ಮತ್ತೆ ಅಲ್ಲ್ಲಿನ ಸಂಘಟಕರನ್ನು ಸಂಪರ್ಕಿಸಿ ನನಗೆ ಒಂದು ಅವಕಾಶ ಕೊಡಿ ಎಂದು ಕೋರಿದೆ .
ಆಗ ಕೂಡ ಅಕಾಡೆಮಿ ಅಧ್ಯಕ್ಷರಾದ ಪಾಲ್ತಾಡಿಯವರು ಬಲವಾಗಿ ವಿರೋಧಿಸಿದ ಬಗ್ಗೆ ಆಗ ಅಕಾಡೆಮಿ ಸದಸ್ಯರಾಗಿದ್ದ ಅಶೋಕ ಶೆಟ್ಟಿ ಅವರು ತಿಳಿಸಿದ್ದರು ,ನಂತರ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಕಾರಣಕ್ಕೆ ಮನಸಿಲ್ಲದ ಮನಸಿನಲ್ಲಿ ಅಲ್ಲಿ "ಪಾಡ್ದನೊಡು ಮೂಡಿ ಬತ್ತಿ ಪೊಣ್ಣು" ಎಂಬ ವಿಷಯದಲ್ಲಿ ಪ್ರಬಂಧ ಮಂಡನೆ ಮಾಡಲು ಅವಕಾಶ ಕೊಟ್ಟರು .ಅದನ್ನು ಬಳಸಿಕೊಂಡು ಅತ್ಯುತ್ತಮವಾಗಿ ಪ್ರಬಂಧ ಮಂಡನೆ ಮಾಡಿ ಸೈ ಎನಿಸಿಕೊಂಡೆ ಆದರೂ ಮುಂದೆ ನನಗೆ ಅವಕಾಶ ನೀಡಲಿಲ್ಲ

2013 ರಲ್ಲಿ ಸವಣೂರಿನಲ್ಲಿ ಅಖಿಲ ಭಾರತ ತುಳು ಸಮ್ಮೇಳನ ಆಯಿತು ,ಅದಕ್ಕೆ ಒಂದು ಅಹ್ವಾನ ಪತ್ರ ಕೂಡ ನನಗೆ ಕಳುಹಿಸಿಲ್ಲ. ಅದಕ್ಕೆ ಎಂದಲ್ಲ ಇಂದಿನ ತನಕವೂ ಯಾವುದೇ ಒಂದು ತುಳು ಅಕಾಡೆಮಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಪತ್ರಿಕೆ ಕಳುಹಿಸುವುದೇ ಇಲ್ಲ ಯಾಕೆಂದರೆ ಇನ್ನೂ ನಾನು ತುಳು ಅಕಾಡೆಮಿ ಪದಾಧಿಕಾರಿಗಳ ದೃಷ್ಟಿಯಲ್ಲಿ ತುಳು ಸಂಶೋಧಕಿಯಲ್ಲ !
ಇದಕ್ಕೆ ಕೇವಲ ಪಾಲ್ತಾಡಿಯವರು ಕಾರಣರಲ್ಲ ಖಂಡಿತ ಎಂಬುದು ನನಗೆ ಈಗ ಮನವರಿಕೆಯಾಗಿದೆ .ಯಾಕೆಂದರೆ ಅವರ ನಂತರ ಬೇರೆ ಅಧ್ಯಕ್ಷರು ಬಂದಾಗಲೂ ನನಗೆ ಯಾವ ಬೆಂಬಲವೂ ಸಿಗಲಿಲ್ಲ.ಅದರಲ್ಲಿಯೇ ಸ್ಪಷ್ಟವಾಗುತ್ತದೆ ಇದರಲ್ಲಿ ಬೇರೆ ಪದಾಧಿಕಾರಿಗಳ ಕೈವಾಡ ಇದೆಯೆಂಬುದು !
ಇದರೊಟ್ಟಿಗೆ ಇನ್ನೊಂದು ವಿಚಾರವೂ ನೆನಪಾಗುತ್ತದೆ !
2012 ಅಥವಾ 2013 ರಲ್ಲಿ ಇರಬೇಕು ,ತುಳು ಅಕಾಡೆಮಿಯು ತುಳು ಭಾಷೆ ಸಂಸ್ಕೃತಿಗೆ ಸಂಬಂಧಿಸಿ ಸಂಶೋಧನೆ ಮಾಡಲು ಇಚ್ಚಿಸುವ ಐವರಿಗೆ ಒಂದು ಲಕ್ಷ ರು ಸಂಶೋಧನಾ ಸಹಾಯ ಧನ ಕೊಡುವ ಬಗ್ಗೆ ತಿಳಿಸಿ ಆಸಕ್ತರು ಅರ್ಜಿ ಸಲ್ಲಿಸಲು ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದರು ,ಆಗ ನಾನು ಅರ್ಜಿ ಸಲ್ಲಿಸಲು ಇಚ್ಚಿಸಿ ಆ ಬಗ್ಗೆ ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಗಳಿಗೆ ಫೋನ್ ಮಾಡಿದೆ ಆಗ ಅವರು ಅವರು ಅಧ್ಯಕ್ಷರಾದ ಪಾಲ್ತಾಡಿ ಯವರಿಗೆ ಫೋನ್ ಕೊಟ್ಟರು .ಆಗ ಅವರು ಸರ್ಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಹೇಳಿದರು ,ಹಾಗಾಗಿ ನಾನು ಅರ್ಜಿಸಲ್ಲಿಸಲಿಲ್ಲ !
ಒಂದು ಗಮ್ಮತ್ತು ನೋಡಿ ..ಒಂದೆರಡು ತಿಂಗಳು ಕಳೆದು ಪತ್ರಿಕೆಯಲ್ಲಿ ಪೆರುವಾಜೆ ಸರ್ಕಾರಿ ಪದವಿ ಕಾಲೇಜ್ ಉಪನ್ಯಾಸಕ ದ.ನರೇಂದ್ರ ರೈ ದೇರ್ಲ ಸೇರಿದಂತೆ ಐವರಿಗೆ ತಲಾ ಒಂದು ಲಕ್ಷ ಸಂಶೋಧನಾ ಸಹಾಯ ಧನ ಸಿಕ್ಕಿದ ವಿಚಾರ ಬಂತು !
ನಾನು ವಿಚಾರಿಸುವಾಗ ಸರ್ಕಾರಿ ಉದ್ಯೋಗಿಗಳಿಗೆ ಅವಕಾಶವಿಲ್ಲ ಎಂದವರು ನನ್ನಂತೆಯೇ  ಸರ್ಕಾರಿ ಉದ್ಯೋಗಿ ಯಾಗಿರುವ ದೇರ್ಲರಿಗೆ  ಸಂಶೋಧನಾ ಸಹಾಯ ಧನ ನೀಡಿದ್ದರು !

ಈಗ ಇಪ್ಪತ್ತರ ಗುರಿ ತಲುಪಿದ್ದೇನೆ,ಅಕಾಡೆಮಿ ಅಧ್ಯಕ್ಷರು ಬದಲಾದರು, ಮತ್ತೆ ಬೆಳ್ಳಾರೆಯಲ್ಲಿ ತುಳು ಅಕಾಡೆಮಿ ಯ ಕಾರ್ಯಕ್ರಮಗಳು ಆಗಿವೆ ಅದರಿಂದಲೂ ನನ್ನನ್ನು ಹೊರಗೆ ಇರಿಸಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ ?  ಇಂದಿನವರೆಗೂ ತುಳು ಅಕಾಡೆಮಿ ನನಗೆ ನನ್ನ ಸಂಶೋಧನೆಯ ಆಸಕ್ತಿಯ ವಿಚಾರವಾದ ಉಪದೈವಗಳ ಬಗ್ಗೆ ಮಾತನಾಡಲು ಕರೆದಿಲ್ಲ,ತುಳು ವಿದ್ವಾಂಸರ ಪಟ್ಟಿಯಲ್ಲಿ ನಾನಿನ್ನೂ ಸೇರಿಲ್ಲ ,ಯಾಕೆಂದರೆ ನಾನು ಯಾರ ಚೀಲವನ್ನೂ ಹಿಡಿದುಕೊಂಡು ಓಲೈಸಿಕೊಂದು ಹೋಗಲಾರೆ !ಹಾಗಾಗಿ ಅಂದಿನಿಂದ ಇಂದಿನವರೆಗೂ ನಾನು ನನ್ನ ಸಂಶೋಧನೆಗೆ ಯಾರ ಸಹಾಯವನ್ನೂ ಆಶಿಸಲಿಲ್ಲ ,ನಾನು ಸ್ವತಂತ್ರವಾಗಿಯೇ ಅಧ್ಯಯನ ಮಾಡಿದೆ !
 (ಅಧ್ಯಕ್ಷೆಯಾಗಿ ಜಾನಕಿ ಬ್ರಹ್ಮಾವರ ಅವರು ಬಂದಮೇಲೆ ಒಂದು ಮಂಗಳೂರು ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಡಿ ಕೆ ಚೌಟರ ಮಿತ್ತ ಬೈಲು ಯಮುನಕ್ಕೆ ಕಾದಂಬರಿ ಬಗ್ಗೆ ಮಾತನಾಡಲು ಕರೆದಿದ್ದು ನಾನು ಹೋಗಿ ಮಾತನಾಡಿ ಬಂದಿದ್ದೇನೆ )


ಅಂದು ಸ್ಥಳಿಯರಿಗೆ ಅವಕಾಶವಿಲ್ಲ ಎಂದು ಅವರು ಹೇಳಲು ಕಾರಣವೇನು ಇಂದು ನನಗೆ ಅರಿವಾಗಿದೆ ,ಅಲ್ಲಿ ನನಗೆ ಅವಕಾಶ ಕೊಡಬಾರದು ಎಂಬ ನಿರ್ಬಂಧ ನನ್ನ  ಸಹೋದ್ಯೋಗಿ ಗಳಿಂದ ಉಂಟಾಗಿತ್ತು ಅಂತೆ !ಹೊಟ್ಟೆ ಕಿಚ್ಚು ಏನೆಲ್ಲಾ ಮಾಡಿಸುತ್ತದೆ ಎಂಬುದಕ್ಕೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆನೆ !ಅಂದು ಆರಂಭಿಸಿದ ಕಿರುಕುಳ ಮುಂದು ವರಿಯುತ್ತಲೇ ಬಂದಿದೆ,ಇಂದಿನ ವರೆಗೂ ,ಅದನ್ನು ಇನ್ನೊಂದು ದಿನ ಬರೆಯುತ್ತೇನೆ ..

ಅದಿರಲಿ ,ಇಪ್ಪತ್ತರ ಗುರಿ ತಲುಪಿ ನಾಲ್ಕು ವರ್ಷಗಳು ಆಗುತ್ತಾ ಬಂದಾಗ ,ಒಂದೇ ಒಂದು ಪುಸ್ತಕ ಬರೆದಿಲ್ಲ ಪ್ರಕಟಿಸಿಲ್ಲ ,ಯಾಕೋ ಏನೋ ಬರೆಯುವ ಪ್ರಕಟಿಸುವ ಮೂಡ್ ಹೊರಟು ಹೋಗಿದೆ ,ಹಾಗಾಗಿ ಈಗ ನನಗೆ ಅವರು ಇಪ್ಪತ್ತರ ಬದಲು ಐವತ್ತರ ಗುರಿ ನೀಡಿರುತ್ತಿದ್ದರೆ ಛೆ !ಎಂದೆನಿಸುತ್ತದೆ ,ಹಾಗೊಂದು ವೇಳೆ ಅವರು ಹೇಳಿರುತ್ತಿದ್ದರೆ ನಾನು ಖಂಡಿತವಾಗಿಯೂ 50 ಪುಸ್ತಕ ಪ್ರಕಟವಾಗುವ ವರೆಗೂ ವಿರಮಿಸುತ್ತ ಇರಲಿಲ್ಲ!ಖಂಡಿತ !

ಹಾಗೆಂದು ನನ್ನ ಕಾರ್ಯವನ್ನು ನಾನು ನಿಲ್ಲಿಸುತ್ತೇನೆ ಎಂದಲ್ಲ ,ಸಂಶೋಧನೆಯನ್ನು ನಾನು ನಂತರವೂ ಮುಂದುವರಿಸಿದ್ದೇನೆ ,ಪುಸ್ತಕ ಬರೆಯುದು ಪ್ರಕಟಿಸುವ ಬದಲು ಬ್ಲಾಗ್ ನಲ್ಲಿ ಬರೆದು ಎಲ್ಲರಿಗೂ ಸಿಗುವ ಹಾಗೆ ಮಾಡಿದ್ದೇನೆ ,ಮುಂದೆ ಸಂದರ್ಭ ಸಿಕ್ಕಾಗ ಪ್ರಕಟಿಸಬೇಕು ಎಂದು ಇದೆ


ನನ್ನ ಸಂಶೋಧನಾ ಸಾಹಿತ್ಯಿಕ ಕೃತಿಗಳುಗಳು ಇನ್ನು ಪ್ರಕಟವಾಗುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಮುಂದೆ ಒಂದಿನ ನನ್ನ ಆತ್ಮ ಚರಿತ್ರೆ ಖಂಡಿತ ಬರೆದು ಪ್ರಕಟಿಸುತ್ತೇನೆ ಯಾಕೆಂದರೆ ನನ್ನ ಕಾಲೇಜ್ ಸಹೋದ್ಯೋಗಿ ಗಳು ,ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ,ತುಳು ಅಕಾಡೆಮಿ ಬೆಳ್ಳಾರೆ ಚೊಕ್ಕಾಡಿ ಪಂಜ ಸೀಮಾ ಹವ್ಯಕ ಪರಿಷತ್ ನ ಅಧ್ಯಕ್ಷರುಗಳು,ನನ್ನ ಸಂಬಂಧಿಕರು ಹೀಗೆ ಹತ್ತು ಹಲವು ಜನರು ಅದರ ಪುಟಗಳನ್ನೂ ತುಂಬಲು ಸಾಕಷ್ಟು ವಸ್ತುಗಳನ್ನು ಕೊಟ್ಟಿದ್ದಾರೆ !!ಅದಕ್ಕಾಗಿಯಾದರೂ ಬರೆಯಬೇಕು ಎಂದುಕೊಂಡಿದ್ದೇನೆ !

ಇದು 2018 ರಲ್ಲಿ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಇದು.
ನಂತರ ಹೇಗೋ ಇಪ್ಪತ್ತರ ಗಡಿ ದಾಟಿದೆ 

ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು-ಪುಸ್ತಕ ನನ್ನ 26 ನೆಯ ಪುಸ್ತಕ ಆಗಿದೆ 

© ಡಾ.ಲಕ್ಷ್ಮೀ ಜಿ ಪ್ರಸಾದ

Category:Stories



ProfileImg

Written by Dr Lakshmi G Prasad

Verified