ದೇವಸ್ಥಾನದ ಮಹತ್ವ

ProfileImg
23 Jul '24
4 min read


image

ನಾವುಗಳು ದೇವರ ದರ್ಶನ ಪಡೆಯಲು ಪ್ರತಿ ದಿನ ದೇವಸ್ಥಾನಕ್ಕೆ ಹೋಗುತ್ತೇವೆ. ಆದರೆ ನಮ್ಮಲ್ಲಿರುವ ಬಹಳಷ್ಟು ಜನರಿಗೆ ದೇವಸ್ಥಾನದ ಮಹತ್ವವೇನು ಎಂಬುದು ಸರಿಯಾಗಿ ತಿಳಿದಿಲ್ಲ. ಭಕ್ತಿ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯು ದೇವಸ್ಥಾನದ ಮಹತ್ವವನ್ನು ತಿಳಿದುಕೊಳ್ಳುವುದು ಅಷ್ಟೇ ಅವಶ್ಯಕವಾಗಿದೆ. ದೇವಸ್ಥಾನಕ್ಕೆ ಅದರದೇ ಆದ ಮಹತ್ವವನ್ನು ಹೊಂದಿದ್ದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳವಾಗಿದೆ ಮತ್ತು ಅನೇಕ ಧರ್ಮಗಳ ನಂಬಿಕೆಯ ಪ್ರಕಾರ ದೇವರು ನೆಲೆಸಿರುವ ಸ್ಥಳವು ಕೂಡ ಆಗಿದೆ. ಎಲ್ಲರೂ ದೇವಸ್ಥಾನಗಳಿಗೆ ಯಾಕೆ ಭೇಟಿ ನೀಡುತ್ತಾರೆ? ಎನ್ನುವ ಪ್ರಶ್ನೆಗೆ ಹಲವಾರು ಉತ್ತರಗಳು ದೊರೆಯುತ್ತವೆ. ದೇವಸ್ಥಾನಗಳ ತವರೂರು ಎಂದು ಪ್ರಸಿದ್ದಿ ಪಡೆದ ತಮಿಳುನಾಡಿನ ರಾಜ್ಯದಲ್ಲಿರುವ ದೇವಸ್ಥಾನಗಳನ್ನು ನೋಡಲು ಇರುವ ಎರಡು ಕಣ್ಣುಗಳು ಸಾಲದು. ಅದರಲ್ಲೂ ಕಂಚಿಯಲ್ಲಿರುವ ಕಾಮಾಕ್ಷಿ ದೇವಸ್ಥಾನ,ಬಂಗಾರದ ಹಲ್ಲಿ, ಇಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಸುಮಾರು ೬೦೦ ವರ್ಷಗಳಿಂದ ಇರುವ ಬಂಗಾರದ ಹಲ್ಲಿಯನ್ನು ಮುಟ್ಟಿಯೇ ಬರುತ್ತಾರೆ.
ಚಿತ್ರಗುಪ್ತನ ದೇವಸ್ಥಾನ,ಮಧುರೈಯಲ್ಲಿರುವ ಮೀನಾಕ್ಷಿ ದೇವಸ್ಥಾನ, ಚೆನ್ನೈನಲ್ಲಿ ೮ ದೇವತೆಗಳು ಒಂದೇ ಕಡೆ ನೆಲೆಸಿರುವ ಅಷ್ಟ ಲಕ್ಷ್ಮಿ ದೇವಸ್ಥಾನ, ಮುರುಗನ್ ದೇವಸ್ಥಾನ, ಚಿದಂಬರಂ ನಲ್ಲಿರುವ ನಟರಾಜನ ದೇವಸ್ಥಾನ ಹೀಗೆ ಹೆಸರುಗಳನ್ನು ಹೇಳುತ್ತ ಹೋದರೆ ಇದಕ್ಕೆ ಕೊನೆಯಿಲ್ಲ. ಇದಲ್ಲದೆ ಭಾರತ ದೇಶದಲ್ಲಿರುವ ದೇವಸ್ಥಾನಗಳು ಒಂದಲ್ಲ ಒಂದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿವೆ. ದೇವಸ್ಥಾನಗಳಲ್ಲಿ ಕಂಡು ಬರುವ ವಿಭಿನ್ನ ಶೈಲಿಯಲ್ಲಿ ರಚಿಸಿದ ಸ್ಮಾರಕಗಳು,ಹಿಂದು ದೇವಸ್ಥಾನಗಳ ದೈವ ಸನ್ನಿಧಿಗೆ ಆಭರಣ ಭೂಷಣವಾಗಿ  ನಿರ್ಮಿಸಲಾಗಿರುವ ಗೋಪುರದ ಬಗ್ಗೆಯಾಗಲಿ ವರ್ಣಿಸಲು ಪದಗಳೇ ಸಾಲುವುದಿಲ್ಲ. ಅಲ್ಲದೆ ಕೇರಳ ರಾಜ್ಯದಲ್ಲಿರುವ ದೇವಸ್ಥಾನದ ಗೋಪುರಗಳನ್ನು ವಿಶಿಷ್ಟ ರೀತಿಯಲ್ಲಿ ತಯಾರಿಸಲಾಗಿದೆ. ಇವುಗಳು ನಿತ್ಯವೂ ದೇಶ, ವಿದೇಶಗಳಿಂದ ಬರುವ ಭಕ್ತರನ್ನು, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿವೆ. ದೇವಸ್ಥಾನ ಎಂದರೆ ಸಾತ್ವಿಕ ಕಂಪನವಿರುವ ಸ್ಥಳ. ನಿಮಗೆ ಒಂದು ವಿಷಯ ತಿಳದಿದಿಯೋ ಇಲ್ಲವೋ ನನಗೆ ಗೊತ್ತಿಲ್ಲ. ನನಗೂ ಕೂಡ ಆ ವಿಷಯ ಗೊತ್ತಿರಲಿಲ್ಲ. ಈ ಲೇಖನವನ್ನು ಬರೆಯುವ ಮುಂಚೆ ಮಾಹಿತಿಯನ್ನು ತಿಳಿಯಲು ಹಲವು ಧಾರ್ಮಿಕ ಪುಸ್ತಕಗಳನ್ನು ಅಧ್ಯಯನ ಮಾಡಿದಾಗ
ದೇವಸ್ಥಾನಗಳಲ್ಲಿಯು ೪ ವಿಧಗಳು ಇರುವ ವಿಷಯ ತಿಳಿದ ನನಗೆ ಆಶ್ಚರ್ಯವಾಯಿತು. ಇದರಿಂದ ತಿಳಿಯಬೇಕಾದ ವಿಷಯಗಳು ಬಹಳಷ್ಟಿವೆ ಎನ್ನುವ ಸತ್ಯದ ಅರಿವು ನನಗಾಯಿತು.
ನಾಲ್ಕು ವಿಧದ ದೇವಸ್ಥಾನಗಳು ಈ ರೀತಿಯಿವೆ.
೧) ಧರ್ಮ ಸ್ಥಾಪನೆಗಾಗಿ,ಭಕ್ತರ ಶ್ರೇಯಸ್ಸಿಗಾಗಿ,ಲೋಕ ಕಲ್ಯಾಣಕ್ಕಾಗಿ ಉದ್ಭವಿಸಿ ಅಲ್ಲೇ ನೆಲೆ ನಿಂತು ಪೂಜೆಯನ್ನು ಸ್ವೀಕರಿಸುವುದು.
ಉದಾಹರಣೆಗೆ ಪಂಡರಾಪುರದ ಪಾಂಡುರಂಗ,
ತಿರುಪತಿ ತಿರುಮಲದ ಶ್ರೀನಿವಾಸ,
ಉಜ್ಜಯಿನಿಯ ಮಹಾಕಾಲ
೨) ಯುಗಪುರುಷರು ಪ್ರತಿಷ್ಟಾಪನೆ ಮಾಡಿದ ದೇವಸ್ಥಾನಗಳು.
ಉದಾಹರಣೆಗೆ ಕೃಷ್ಣ,ರಾಮ
೩) ದೇವತೆಗಳು ಪ್ರತಿಷ್ಟಾಪನೆ ಮಾಡಿದ ದೇವಸ್ಥಾನಗಳು
ಉದಾಹರಣೆಗೆ ನಾರದ, ಇಂದ್ರಾದಿ ದೇವತೆಗಳು
೪) ಮಾನವರು ಪ್ರತಿಷ್ಠಾಪಿಸಿದ ದೇವಸ್ಥಾನಗಳು
   ಇದರಲ್ಲಿ ಉದ್ಭವ ಪ್ರತ್ಯಕ್ಷ, ಯುಗಪುರುಷರು ಮತ್ತು ದೇವತೆಗಳು ಪ್ರತಿಷ್ಠಾಪನೆ ಮಾಡಿರುವ ದೇವಸ್ಥಾನಗಳು ಹೆಚ್ಚು ಶ್ರೇಷ್ಠತೆಯನ್ನು ಹೊಂದಿವೆ. ಕಾರಣವೇನೆಂದರೆ ಅಲ್ಲಿ ಹೆಚ್ಚಿನ ರೀತಿಯ ಸಾತ್ವಿಕ ಕಂಪನಗಳು ಇದ್ದು ಪ್ರಾರ್ಥನೆಯು ಬೇಗ ಫಲಿಸುತ್ತದೆ. ಯಾವುದೇ ಒಂದು ದೇವಸ್ಥಾನ ಪ್ರತಿಷ್ಠಾಪನೆ ಮಾಡುವ ಮುಂಚಿತವಾಗಿ ಅಲ್ಲಿ ಸಾತ್ವಿಕ ಶಕ್ತಿಯ ವೃದ್ಧಿಗಾಗಿ ನಿರಂತರವಾಗಿ ಲೋಕೋದ್ದಾರಕ ಯಾಗಗಳು ನಡೆದಿವೆ.  ಮಾನವರು ದೇವಸ್ಥಾನಗಳನ್ನು ಹೆಚ್ಚಾಗಿ ಕಾಂತೀಯ ಮತ್ತು ವಿದ್ಯುತ್ ತರಂಗಗಳು ಇರುವ ಕಡೆಯೇ ಕಟ್ಟುತ್ತಾರೆ. ಕಾರಣ ಈ ತರಂಗಗಳು ದೇವಸ್ಥಾನದಲ್ಲಿ ಧನಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ. ಈ ಭಾಗದಲ್ಲಿ ಕಾಂತೀಯ ಶಕ್ತಿ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಮತ್ತು ಗರ್ಭಗಹದಲ್ಲಿ ಧನಾತ್ಮಕ ಶಕ್ತಿ ಹೆಚ್ಚು ಇರುತ್ತದೆ. ಆದ್ದರಿಂದ ದೇವರ ಮೂರ್ತಿಯನ್ನು  ದೇವಸ್ಥಾನ ಇರುವ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಇದನ್ನು ಮೂಲ ಸ್ಥಳ, ಗರ್ಭಗುಡಿ ಎನ್ನುವರು. ದಿನ ನಿತ್ಯ ದೇವಸ್ಥಾನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ವಿಕತೆಯನ್ನು ಗುರುತಿಸಲು ಸಾಧ್ಯವಾಗುವುದಲ್ಲದೆ ಅಲ್ಲಿಯ ಸಾತ್ವಿಕ ವಾತಾವರಣದಿಂದ ದೇವರ ಬಗ್ಗೆ ಭಕ್ತಿ ಹೆಚ್ಚಾಗುತ್ತದೆ. ದೇವಸ್ಥಾನದಲ್ಲಿ ಪೂಜೆ, ಅಭಿಷೇಕ ಮತ್ತು ಆರತಿಯ ಸಮಯದಲ್ಲಿ ದೇವರ ಸೂಕ್ಷ್ಮ ಚೈತನ್ಯ ಕಣಗಳು ದೇವರ ಮೂರ್ತಿಯ ಕಡೆಗೆ ಹೆಚ್ಚು ಆಕರ್ಷಿತವಾಗಿರುತ್ತವೆ. ಇಂತಹ ಸಮಯದಲ್ಲಿ ದೇವಸ್ಥಾನದಲ್ಲಿ ಇರುವುದರಿಂದ ನಮಗೆ ಅನೇಕ ರೀತಿಯಲ್ಲಿ ಲಾಭಗಳು ಉಂಟಾಗುತ್ತವೆ. ಇಷ್ಟೆಲ್ಲ ಅದ್ಭುತಗಳನ್ನು ಹೊಂದಿರುವ ದೇವಸ್ಥಾನವನ್ನು ಮನೆ ಬಂದ ರೀತಿಯಲ್ಲಿ ಪ್ರವೇಶಿಸಿ ತಿಳಿದೋ,ತಿಳಿಯದೋ ಅನೇಕ ತಪ್ಪುಗಳನ್ನು ಮಾಡಿದ್ದೇವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಪರಾಧ ಮಾಡುತ್ತಿದ್ದೇವೆ ಎನ್ನುವುದು ದುರದೃಷ್ಟಕರ
ಸಂಗತಿಯಾಗಿದೆ. ಇನ್ನಾದರೂ ನಾವು ಪುನಃ ಅದೇ ತಪ್ಪುಗಳನ್ನು ಮಾಡುವುದು ಬೇಡ. ದೇವಸ್ಥಾನ ಪ್ರವೇಶಿಸುವುದರಿಂದ ಹೊರಗೆ ಬರುವವರೆಗೂ ಕೆಲವು ನಿಯಮಗಳಿದ್ದು ಪ್ರತಿಯೊಬ್ಬ ಭಕ್ತನಾದವನು ಪಾಲಿಸಬೇಕಾದ  ಆದ್ಯ ಕರ್ತವ್ಯ ಕೂಡ ಆಗಿದೆ. 
ಮಾಡುತ್ತಿರುವ ಅಪರಾಧಗಳು
೧) ದೇವಾಲಯದೊಳಗೆ ಚರ್ಮದ ಬೆಲ್ಟ್, ಕೈ ಚೀಲ ಧರಿಸಿಕೊಂಡು ಹೋಗುವುದು.
೨) ದೇವಾಲಯದಲ್ಲಿ ಭಕ್ತರಿಂದ ಹಣ ಪಡೆದು ಕಡಿಮೆ ಗುಣಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುವುದು.
೩) ದೇವಾಲಯಕ್ಕೆ ಅರ್ಪಿಸಿದ ಸಾಮಗ್ರಿಗಳನ್ನು ಅಂಗಡಿಗೆ ಮಾರಿ ಅದೇ ಸಾಮಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.
೪) ದೇವರಿಗೆ ಸಂಬಂಧಿಸಿದ ಉತ್ಸವ, ರಥಯಾತ್ರೆ ಗಳಲ್ಲಿ ಭಾಗವಹಿಸದೇ ಇರುವುದು.
೫) ದೈಹಿಕವಾಗಿ, ಆರ್ಥಿಕವಾಗಿ  ಸಾಮರ್ಥ್ಯವಿದ್ದರೂ ಯಾವುದೇ ಸೇವೆಯನ್ನು ಮಾಡದೇ ಇರುವುದು.
೬) ದೇವಾಲಯದ ಆಸ್ತಿಗಳನ್ನು ಪರಭಾರ ಮಾಡುವುದು,ದೇವರ ಹುಂಡಿಯ ಕಾಣಿಕೆ, ಹಣವನ್ನು ದುರುಪಯೋಗ ಮಾಡುವುದು.
೭) ದೇವಾಲಯಕ್ಕೆ ದಾನ ಕೊಟ್ಟ ದಾನಿಗಳು ದೇವಾಲಯದಲ್ಲಿ ತಮ್ಮ ಹೆಸರನ್ನು ಹಾಕಿಸಿಕೊಳ್ಳುವುದು.
೮) ದೇವರ ಸಮ್ಮುಖದಲ್ಲಿ ಆಕಳಿಸುವುದು,ಅಧೋವಾಯುವನ್ನು ತ್ಯಜಿಸುವುದು.
೯) ಯಾವ ಋತುವಿನ ಫಲವೇ ಆಗಿರಲಿ ದೇವರಿಗೆ ಅರ್ಪಿಸದೇ ಇರುವುದು.
೧೦) ದೇವರ ಪ್ರಸಾದವನ್ನು ಸ್ವೀಕರಿಸದೇ ಬರುವುದು.
೧೧) ದೇವರ ವಿಗ್ರಹಕ್ಕೆ ಬೆನ್ನು ತೋರಿಸಿ ಕೂಡುವುದು.
೧೨) ಒಂದೇ ಹಸ್ತದಿಂದ ನಮಸ್ಕರಿಸುವುದಲ್ಲದೆ ಎರಡು ಕೈಗಳಿಂದ ಮಂಗಳಾರತಿ ತೆಗೆದುಕೊಳ್ಳುವುದು.
೧೩) ದೇವಾಲಯದಲ್ಲಿ ನೀಡಿದ ಪ್ರಸಾದ ರೂಪದ ಹಣ್ಣು,ಹಣ ಇತ್ಯಾದಿಗಳನ್ನು ಪ್ರತಿಷ್ಠೆಗಾಗಿ ಅಲ್ಲಿಯೇ  ಭಿಕ್ಷುಕರಿಗೆ ಭಿಕ್ಷೆ ನೀಡಿ ಭಿಕ್ಷಾವೃತ್ತಿಯನ್ನು ಪ್ರೋತ್ಸಾಹಿಸುವುದು.
೧೪) ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆಗೆಸಿ ದರ್ಶನ ಪಡೆಯುವುದು.
೧೫) ದೇವಾಲಯದ ಗರ್ಭಗುಡಿಯ ಮೂರ್ತಿಯನ್ನು  ಮಡಿ ಉಡದೇ ಮುಟ್ಟುವುದು ಮತ್ತು ಅದಕ್ಕೆ ಸಹಕರಿಸುವುದು.
  ಇತ್ಯಾದಿ 
ಪಾಲಿಸಬೇಕಾದ ನಿಯಮಗಳು
೧) ದೇವಾಲಯದಲ್ಲಿ ಪ್ರವೇಶಿಸುವ ಮುನ್ನ ಕೈ ಕಾಲು ತೊಳೆದು ಪ್ರವೇಶಿಸಬೇಕು.
೨) ಬೀಡಿ, ಸಿಗರೇಟು, ಸಾರಾಯಿ, ಮಾಂಸವನ್ನು ಸೇವಿಸಿ ದೇವಾಲಯವನ್ನು ಪ್ರವೇಶಿಸಬಾರದು.
೩) ದೇವಾಲಯದ ಹೊಸ್ತಿಲಲ್ಲಿ,ಕಿಟಕಿಯ ಹತ್ತಿರ ಕರ್ಪೂರ ಹಚ್ಚಬಾರದು.
೪) ದೇವಾಲಯದಲ್ಲಿ ದೇವರ ಎದುರು ಕಾಲು ಚಾಚಿ ಕುಳಿತುಕೊಳ್ಳಬಾರದು.
೫) ದೇವಾಲಯದಲ್ಲಿ ದೇವರ ಸಮ್ಮುಖದಲ್ಲಿ ದರ್ಶನ ಮಾಡಬೇಕು ಮತ್ತು ತಪ್ಪದೇ ಪ್ರದಕ್ಷಣೆ ಹಾಕಬೇಕು.
೬) ದೇವಾಲಯದಲ್ಲಿ ಅಸತ್ಯ ನುಡಿಯುವುದಾಗಲಿ ಅನಗತ್ಯ ಚರ್ಚೆ ಮಾಡುವುದಾಗಲಿ, ಜೋರಾಗಿ ಮಾತನಾಡುವುದಾಗಲಿ ಮಾಡಬಾರದು.
೭) ದೇವಾಲಯದಲ್ಲಿ ಯಾರಿಗೂ ಕೇಡು ಬಯಸಬಾರದು.
೮) ದೇವರ ಸಮ್ಮುಖದಲ್ಲಿ ಭೋಜನ ಮಾಡಬಾರದು.
೯) ದೇವರ ಸಮ್ಮುಖದಲ್ಲಿ ನಿಂತಲ್ಲಿಯೇ ಪ್ರದಕ್ಷಣೆ ಮಾಡದೇ ನೆಲಕ್ಕೆ ಬಿದ್ದು ನಮಸ್ಕರಿಸಬೇಕು.
೧೦) ದೇವರ ಸಮ್ಮುಖದಲ್ಲಿ ದೇವರಿಗೆ ನಮಸ್ಕರಿಸಬೇಕು ಹೊರತು ಇನ್ನೊಬ್ಬರಿಗೆ ಎಂದು ನಮಸ್ಕರಿಸಬಾರದು.
   ಇನ್ನು ಮುಂದೆಯಾದರೂ ಈ ಅಂಶಗಳನ್ನು ಎಚ್ಚರಿಕೆಯಿಂದ ಎಲ್ಲ ದೇವಸ್ಥಾನಗಳಲ್ಲಿ ಪ್ರಚಾರ ಮಾಡಿ ನಮ್ಮ ಸಂಸ್ಕೃತಿ ಮತ್ತು ದೇವಸ್ಥಾನದ ಪವಿತ್ರತೆಯನ್ನು ಉಳಿಸಿಕೊಳ್ಳೋಣ.
( ವಿಶೇಷ ಸೂಚನೆ: ಈ ಲೇಖನದಿಂದ ಯಾರ ಮನಸ್ಸಿನ ಭಾವನೆಯನ್ನು ನೋಯಿಸುವ ಉದ್ದೇಶ ಇಲ್ಲ. ನನಗೆ ನಮ್ಮ ಸಂಸ್ಕೃತಿ,ಧರ್ಮ ಮತ್ತು ದೇವಸ್ಥಾನದ ಪವಿತ್ರತೆಯನ್ನು ಉಳಿಸಿಕೊಳ್ಳಬೇಕೆಂಬುದೆ ಪ್ರಮುಖ ಉದ್ದೇಶವಾಗಿದೆ. ಇಲ್ಲವಾದರೆ ನಮ್ಮ ದೇಶದ ಸಂಸ್ಕೃತಿ,ಧರ್ಮ ಮತ್ತು ದೇವಸ್ಥಾನದ ಪವಿತ್ರತೆಯನ್ನು ನಾವುಗಳಲ್ಲದೆ ಇನ್ಯಾರು ಕಾಪಾಡಲು ಸಾಧ್ಯ? ನೀವೇ ಉತ್ತರಿಸಿ.
ಸರ್ವೋಜನಾ ಸುಖಿನೋ ಭವಂತು
 


 

Category:Spirituality



ProfileImg

Written by Sandeep Joshi

I am always king in my World.Writer, short movie producer and director.