ಸ್ನೇಹದ ಕಡಲಲ್ಲಿ

ProfileImg
29 Feb '24
9 min read


image

ಆ ರಾತ್ರಿ ಬಟ್ಟೆಗಳಿಗೆ ಇಸ್ತ್ರಿ ಮಾಡುತ್ತಿರುವಾಗ ನನ್ನ ಮೊಬೈಲ್ ರಿಂಗುಣಿಸಿತು. ಕರೆ ಮಾಡುತ್ತಿರುವವರು ಯಾರೆಂದು ಪಕ್ಕದಲ್ಲಿಟ್ಟಿದ್ದ ಮೊಬೈಲ್ ಕಡೆ ಬಗ್ಗಿ ನೋಡಿದೆ "ಉಮ್ಮಾ..!" ತಕ್ಷಣ ಇಸ್ತ್ರಿ ಪೆಟ್ಟಿಗೆ ಬದಿಗಿಟ್ಟು ಸ್ವಿಚ್ ಆಫ್ ಮಾಡಿ ಮೊಬೈಲನ್ನೆತ್ತಿ ಕರೆ ಸ್ವೀಕರಿಸಿದೆ. ಅಮ್ಮನ ಕರೆ ಬರುವಾಗಲೆಲ್ಲ ಅಮ್ಮನೇ ಕಾಣಲು ಸಿಕ್ಕಂತೆ ಅದೇನೋ ಖುಷಿ.

"ಏನು ಮಾಡುತ್ತೀದ್ದೀರಾ ?"‌ ಅಮ್ಮನದು ಎಂದಿನಂತೆ ಅಕ್ಕರೆ ತುಂಬಿದ ಕಾಳಾಜಿಯ ಪ್ರಶ್ನೆ. ಮತ್ತೆ ಅದು, ಇದೂ ಅಂತ ಒಂದೆರಡು ವಿಷಯಗಳನ್ನು ಮಾತಾಡಿ ನಿಧಾನವಾಗಿ ಕೇಳಿದರು.

'ನಿನ್ನ ಸ್ನೇಹಿತೆ ವೀಣಾಳ ಪತಿ ತೀರಿಕೊಂಡ ವಿಷಯವೇನಾದರು ನಿನಗೆ ತಿಳಿಯಿತಾ ?' ಒಮ್ಮೆಲೇ ನನಗೆ ವಿದ್ಯುತ್ ಹೊಡೆದಂತೆ ಬಾಸವಾಯಿತು. ಕ್ಷಣ ನಿಂತಲ್ಲೆ ಮರಕಟ್ಟಿದ ಅನುಭವ. "ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿವೂನ್... "('ನಿಶ್ಚಯವಾಗಿಯೂ ನಾವು ದೇವನಿಂದಲೇ ಬಂದವರು ಮತ್ತು ದೇವನೆಡೆಗೇ ಮರಳಲಿಕ್ಕಿರುವವರು"). ನುಡಿದ ನನ್ನ ಧ್ವನಿ ಹೊರಬರಲಾಗದೆ ಗಂಟಲಾಳದಿಂದಲೇ ಪಿಸುಗುಟ್ಟಿದಂತ್ತಿತ್ತು. ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತುಕೊಂಡು ಪಕ್ಕದ ಟೇಬಲ್ಲಿನ ಮೇಲಿದ್ದ ನೀರಿನ ಬಾಟಲಿಯನ್ನೆತ್ತಿ ಗುಟುಕು ಗುಟುಕಾಗಿ ನೀರನ್ನು ನೇರ ಒಣಗಿದ ಗಂಟಲಿಗೆ ಉಯ್ದುಕೊಂಡೆ. ಅಮ್ಮ ಮಾತನ್ನು ಮುಂದುವರಿಸಿದ್ದರು. ತಮಗೆ ಆ ವಿಷಯ ಯಾವಾಗ ಹೇಗೆ ತಿಳಿಯಿತೆನ್ನುವುದನ್ನೂ ವಿವರಿಸಿದರು. ನಂತರ 'ನಮಾಝಿಗೆ ಸಮಯವಾಯಿತು, ನಾನಿನ್ನು ನಾಳೆ ಕರೆ ಮಾಡುತ್ತೇನೆಂದರು. ನಾನು 'ಹೂಂ' ಎನ್ನುತ್ತಲೇ ಅವರ ಕರೆ ಕಟ್ಟಾಯ್ತು. ಅರೆ ಕ್ಷಣದಲ್ಲೇ... 'ಟಿನ್' ಎಂಬ ವಾಟ್ಸಪ್ ಸಂದೇಶದ ಗಂಟೆ ಬಾರಿಸಿತು. ಅದರತ್ತ ಕಣ್ಣಾಯಿಸಿದೆ. ಅಮ್ಮ ಇದೀಗ ವೀಣಾಳ ಪತಿಯ ಮರಣದ ಬಗ್ಗೆ ವಿವರವಾಗಿ ಪೇಪರಿನಲ್ಲಿ ಬಂದಿದ್ದ ವರದಿಯ ಚಿತ್ರವನ್ನು ನನಗೆ ಕಳುಹಿಸಿದ್ದರು. ಕರೆಮಾಡುವ ಮೊದಲೇ ನ್ಯೂಸ್ ಪೇಪರಿನ ಈ ವರದಿಯನ್ನು ಕಳಿಸಿದ್ದರೆ, ಮಗಳು ನೋಡಿ ಗಾಬಾರಿ ಗೊಳ್ಳಬಹುದೆಂದು ಯೋಚಿಸಿಯೇ.. ಅಮ್ಮ‌ ಕರೆಮಾಡಿ ನಿಧಾನಕ್ಕೆ ವಿಷಯ ತಿಳಿಸಿದ್ದು, ನಂತರವೇ ಇದನ್ನು ಕಳಿಸಿಕೊಟ್ಟಿದ್ದಾರೆ ಎನ್ನುವುದು ನನಗೆ ಅರಿವಾಯ್ತು. 'ಅಮ್ಮಾ...' ಎಂಬ ಕಾಳಾಜಿಯ ಜೀವಕ್ಕೆ ನಾನು ಮನದಲ್ಲೆ ವಂದಿಸಿದೆ.

ಇದೀಗ ವೀಣಾ ಮತ್ತವಳ ಪತಿಯ ಮುಖ ನನ್ನ ಕಣ್ಣೆದುರು ಬಂದು ನಿಂತಿತು. ಛೇ! ಇಷ್ಟು ಬೇಗನೇ ಅವರ ಮರಣ ಸಂಭವಿಸಬಾರದಿತ್ತು. ದುಃಖದಿಂದ ನನ್ನ ಮನ ಭಾರವಾಗಿ ಹಾಗೆಯೇ ಕುಳಿತ್ತಿದ್ದೆ. ನೆನಪೀಗ‌ ನನ್ನನ್ನು ಇಪ್ಪತ್ತಾರು ವರ್ಷಗಳ ಹಿಂದಕ್ಕೆ ಎಳೆದೊಯ್ಯಿತು.

ವಿವಾಹವಾಗಿ ನಾನು ಅತ್ತೆ ಮನೆಗೆ ಕಾಲಿಟ್ಟ ಮೊದಲ ದಿನವೇ ನನಗೆ ಅಲ್ಲಿ ನಾದಿನಿಯ ಸಹಪಾಠಿಯಾಗಿದ್ದ ವೀಣಾಳ ಪರಿಚಯವಾಗಿತ್ತು. ಅತ್ತೆಮನೆಯ ಬಲ ಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಅಲ್ಲಿಗೆ ಈ ಸಣ್ಣ ವಯಸ್ಸಿನ ವೀಣಾ ಸಹಾಯಕ ಶಿಕ್ಷಕಿಯಾಗಿ ಬರುತ್ತಿದ್ದು, ನಮ್ಮತ್ತೆ ಮನೆಯ ವಠಾರದಿಂದ ನೇರ ಶಾಲಾ ವಠಾರಕ್ಕೇ ಕಾಲಿರಿಸ ಬಹುದಾಗಿದ್ದರಿಂದ ವೀಣಾಳ ಬಿಡುವಿನ ಸಮಯದಲ್ಲಿ ನನ್ನ ನಾದಿನಿ ಶಾಲೆಗೆ ಹೋಗಿ ವೀಣಾಳನ್ನು ಭೇಟಿಯಾಗಿ ಒಂದಷ್ಟುಹೊತ್ತು ಹರಟೆ ಹೊಡೆಯುತ್ತಿದ್ದು ಈ ಮೂಲಕ ತನ್ನ ಬಾಲ್ಯದ ಸ್ನೇಹವನ್ನು ಜೀವಂತವಾಗಿಸಿಟ್ಟಿದ್ದಳು. ಹೀಗೆ ಅವಳು ಶಾಲೆ ಕಡೆ ಹೊರಟಾಗಲೆಲ್ಲ ನನ್ನನ್ನೂ ಕರೆಯುತ್ತಿದ್ದು, ಕೆಲವೊಮ್ಮೆ 'ಬನ್ನಿ ಬಾಬಿ' ಎಂದೆನ್ನುತ್ತಾ ಒತ್ತಾಯದಿಂದ ನನ್ನ ಕೈಹಿಡಿದು ಎಳೆದುಕೊಂಡೇ ಹೋಗುತ್ತಿದ್ದಳು. ಅಲ್ಲಿ ಅವರಿಬ್ಬರ ಮಾತುಕತೆ ಮುಗಿಯವ ತನಕ ನಾನು ಶಾಲಾ ಜಗಲಿಯಲ್ಲಿ ನಿಂತುಕೊಂಡು ಸುತ್ತಲೂ ಕಣ್ಣಾಡಿಸುತ್ತಿದ್ದೆ. ಕೆಲವೊಂದು ತರಗತಿಯಲ್ಲಿ ಸ್ಪೆಷಲ್ ಕ್ಲಾಸ್ ನಡೆಸುತ್ತಿರುವ ಶಿಕ್ಷಕಿಯರು ಪಾಠ ಮಾಡುತ್ತಿರುವುದನ್ನು ಆಲಿಸುತ್ತಾ ಬಾಲ್ಯದ ಮಧುರ ದಿನಗಳ ನೆನಪುಗಳನ್ನು ನಾನು ಮೆಲುಕು ಹಾಕುತ್ತಿದ್ದೆ. ಅದಾಗೆಲ್ಲಾ ವೀಣಾಳೊಡನೆ ನನಗೆ ಸಣ್ಣದೊಂದು ಮುಗುಳ್ನಗು ಮತ್ತು ಚೆನ್ನಾಗಿದ್ದೀಯಾ? ಅಮ್ಮ ಚೆನ್ನಾಗಿದ್ದಾರ? ಊಟ ಆಯ್ತಾ? ಇಷ್ಟೇ ಪ್ರಶ್ನೆಗಳಿಗೆ ಸೀಮಿತವಿಟ್ಟ ಪರಿಚಯವಿತ್ತು ಅಷ್ಟೆ.‌

ಒಂದು ದಿನ ನಾನು ಹೀಗೆ 'ಊಟ ಆಯ್ತಾ?' ಎಂದು ಪ್ರಶ್ನಿಸುತ್ತಲೇ.. ಎಂದಿನಂತೆ ನನ್ನ ಕಣ್ಣೋಟವನ್ನು ತಪ್ಪಿಸುತ್ತಾ 'ಹೂಂ ಆಯ್ತೆಂದು' ಆಕೆ ತಲೆಯಾಡಿಸಿದಾಗ, ನನ್ನ ನಾದಿನಿ 'ವೀಣಾ.. ಯಾಕೆ ನೀನು ಬಾಬಿಯ ಬಳಿ ಸುಳ್ಳಾಡುತ್ತಿರುವೆ ? ಇಲ್ಲ ಬಾಬಿ ಮನೆ ದೂರ ಅಂತ ಇವಳು ಊಟಕ್ಕೆ ಹೋಗಲ್ಲ, ಬೆಳಿಗ್ಗೆ ಅವಸರದಲ್ಲೇ ಬರುವ ಕಾರಣ ಹೆಚ್ಚಾಗಿ ಬುತ್ತಿನೂ ಕಟ್ಟಿಕೊಂಡು ಬರಲ್ಲ' ಅಂತ ಹೇಳುತ್ತಲೇ, ನಾನವಳನ್ನಂದು ಬಹಳ ಒತ್ತಾಯದಿಂದ ನಮ್ಮನೆಗೆ ಕರೆದೊಯ್ದಿದು, ಊಟ ಬಡಿಸಿ ಮೂವರೂ ಜತೆಯಾಗಿ ಕುಳಿತು ಉಂಡೆದ್ದಿದ್ದೆವು. 'ಅವಳ ಮನೆ ದೂರವಿದ್ದರೇನಂತೆ ನಮ್ಮ ಮನೆ ಪಕ್ಕದಲ್ಲೇ ಇದೆಯಲ್ಲಾ... ಬುತ್ತಿ ತಾರದ ದಿನ ನಮ್ಮನೆಗೇ ಅವಳನ್ನು ಕರೆದುಕೊಂಡು ಬರಬೇಕು' ಹೀಗೆಂದು ನಾನು ನಾದಿನಿಗೆ ತಾಕೀತು ಮಾಡಿದ್ದೆ. ಹೀಗೆ ನಮ್ಮಲ್ಲಿ ಬಂದಾಗಲೆಲ್ಲಾ ನಾನು ಹೇಳುತ್ತಿದ್ದ ಜೋಕುಗಳ ಸರಣಿಗೆ ತನ್ನ ಚಿಕ್ಕ ಚಿಕ್ಕ ಕಣ್ಣುಗಳನ್ನು ಪಿಳಕಿಸುತ್ತಾ ನಗುತ್ತಿದ್ದ ವೀಣಾ, ಕ್ರಮೇಣ ಮನೆಯಿಂದ ಬುತ್ತಿ ತಂದರೂ.. ಅದನ್ನು ಹಿಡಿದುಕೊಂಡು ಬಂದು ನಮ್ಮನೆಯಲ್ಲೇ ಉಂಡು ತರಗತಿಯ ಸಮಯವಾಗುವ ವರೇಗೂ ನಮ್ಮೊಂದಿಗೆ ಹರಟೆಹೊಡೆಯುತ್ತಾ ಕೂರುವುದನ್ನು ರೂಢಿಸಿಕೊಂಡಿದ್ದಳು.

'ನೀನು ಮಹಾಪುಣ್ಯವಂತೆ ನಿನಗೆ ಬಂಗಾರದಂತಾ ಬಾಬಿ ಸಿಕ್ಕಿರುವರು' ಎಂದು ನನ್ನ ನಾದಿನಿಯ ಬಳಿ ಹೇಳುತ್ತಲೇ ಇದ್ದ ವೀಣಾ, ದಿನ ಕಳೆದಂತೆ ನನಗೆ ಬಹಳ ಆತ್ಮೀಯಳಾಗಿ ಬಿಟ್ಟಳು. ಅದು ಎಷ್ಟೆಂದರೆ, ಒಂದು ದಿನ ನಮ್ಮ ಮನೆಗೆ ಬಾರದೇ ಇರಲು ಆಕೆಯಿಂದ ಆಗದಷ್ಟು ಬಲಿಷ್ಠವಾಗಿ ಅವಳಿಗೆ ನನ್ನಲ್ಲಿ ಸ್ನೇಹ ಬಲಿತಿತ್ತು. ನಮಗೂ ಆಕೆ ಬಾರದ ದಿನ ಮನೆಯೆಲ್ಲಾ ಖಾಲಿ ಖಾಲಿ ಎನಿಸುತ್ತಿತ್ತು.

ಅಂದು ಯಾಕೋ ವೀಣಾ ಬಂದಾಗ ಎಂದಿನ ಲವಲವಿಕೆ ಇಲ್ಲದೇ ಮಗುವಿನಂತಾ ಅವಳ ಮುದ್ದು ಮೊಗ ತೀರಾ ಬಾಡಿರುವುದನ್ನು ಗಮನಿಸಿದ ನಾನು ಆಶ್ಚರ್ಯಪಟ್ಟೆ. ಅವಳ ಕಣ್ಣುಗಳನ್ನೇ‌ ತೀಕ್ಷ್ಣವಾಗಿ ದಿಟ್ಟಿಸುತ್ತಾ ಕೇಳಿದೆ. 'ವೀಣಾ ಸುತ್ತು ಬಳಸದೇ ನೇರವಾಗಿ ವಿಷಯವೇನೆಂದು ತಿಳಿಸು'. ತನ್ನ ಮನದಲ್ಲಿ ತುಂಬಿಕೊಂಡಿದ್ದ ದುಗುಡವನ್ನು ನನ್ನ ಬಳಿ ಹಂಚದಿರಲು ಸಾಧ್ಯವೇ ಇಲ್ಲವೆಂಬ ಚಡಪಡಿಕೆ ಅವಳಲ್ಲೆಇ ಎದ್ದು ಕಾಣಿಸುತ್ತಿತ್ತು. ಅವಳೀಗ ತಗ್ಗಿದ ಧ್ವನಿಯಲ್ಲಿ ತಣ್ಣಗೆ ಉಸಿರಿದಳು.

'ಮನೆಯಲ್ಲಿ‌ ನನ್ನ ಮದುವೆಯ ಮಾತುಕತೆ ನಡೆಯುತ್ತಿದೆ' ಇದನ್ನು ಕೇಳಿ ಒಮ್ಮೆಲೇ ನಾನು ಖುಷಿಯಿಂದ ಜೋರಾಗೇ ಹೇಳಿದೆ 'ವಾವ್ ! ಇದಂತೂ ಬಹಳ ಸಿಹಿಯಾದ ಸುದ್ಧಿ'.

ಆಕೆಯ ಮೊಗದಲ್ಲೀಗ ನನ್ನ ಮಾತಿನ ದಾಟಿಗೆ ತುಸು ನಗು ಮೂಡಿದ್ದು, ಮೆತ್ತಗೆ ಹೇಳಿದಳು 'ಹ್ಹೂಂ.. ಇದರಲ್ಲಿ ಖುಷಿ ಒಂದೇ.... 'ಹುಡುಗ ನಿಮ್ಮ ಊರಿನವರು'. ಇದನ್ನು ಕೇಳಿದಾಗಲಂತೂ ನನ್ನ ಸಂತಸ ದ್ವಿಗುಣಗೊಂಡಿತು.

'ಎಷ್ಟೊಂದು ಮಧುರವಾದ ವಿಷಯ ತಂದಿರುವೆ ಇಂದು, ಆದರೇ ನೀನೋ.. ಇದನ್ನು ಮೊಗ ಬಾಡಿಸಿಕೊಂಡು ತಿಳಿಸುತ್ತಿರುವೆಯಲ್ಲ' ನನ್ನ ಮಾತಿನಲ್ಲೀಗ ಆಕ್ಷೇಪಣೆ ಸೇರಿತ್ತು.

'ಹಾಗಲ್ಲ ನನ್ನ ವಯಸ್ಸಿನವರಿನ್ನೂ ಕಲಿಯುತ್ತಾ ಆರಾಮವಾಗಿದ್ದಾರೆ ನನಗೋ ಕಲಿಕೆ ಮುಂದುವರಿಸಲು ಅಸಾಧ್ಯವಾಯ್ತು. ಹಾಗಂತ ಇಷ್ಟು ಬೇಗನೆ ಮದುವೆಯಾಗಬೇಕಾ...? ಹುಡುಗನ ಕಡೆಯವರಿಗೆ ಮದುವೆ ತೆಗೆಯಲು ಅವಸರವಿದೆ, ಇದು ವರನ ವಯಸ್ಸಿನ ಕಾರಣವಿರಲೂ ಬಹುದು. ಆದರೆ ನನಗಿನ್ನೂ ಸಣ್ಣ ವಯಸ್ಸಲ್ವಾ? ತಲೆತಗ್ಗಿಸಿ ಕುಳಿತು ಕೈ ಬೆರಳುಗಳ ಜತೆ ಆಟವಾಡುತ್ತಾ ನೀರಸ ರಾಗವೆಳೆದಿದ್ದಳು. ಮದುವೆಯಾಗಲಿರುವ ಹುಡುಗನನ್ನು ನೋಡಿಯೇ ಇವಳು ಈ ಮಾತು ಹೇಳುತ್ತಿರುವುದರಿಂದ, ಯಾಕೋ.. ಇವಳಿಗೆ ಈ ಮದುವೆ ಇಷ್ಟವಿಲ್ಲವೆನ್ನುವುದು ನನಗೀಗ ಅರ್ಥವಾಯ್ತು.

ಹೌದು! ಮದುವೆ ಯಾವತ್ತೂ ಬಲವಂತವೂ ಆಗಬಾರದಲ್ಲಾ, ಕೆಲವು ಕ್ಷಣ ನಾನೂ ಮೌನದ ಮೊರೆ ಹೋದೆ.

ನನ್ನ ಮೌನ ಕಂಡವಳೇ ವೀಣಾ ತಟ್ಟನೇ ಹೇಳಿದಳು. 'ನಿಮಗೆ ಈ ವಿಷಯದಲ್ಲಿ ನನಗೊಂದು ಸಹಾಯ ಮಾಡಬಹುದು. ಎಷ್ಟಾದರೂ ಅವರು ನಿಮ್ಮೂರಿನವರೇ ಅಲ್ವಾ... ನೀವು ಈ ಮದುವೆಯನ್ನು ತಪ್ಪಿಸಿಬಿಡಿ.'

ವೀಣಾಳ ಮಾತಿಗೆ ಕಕ್ಕಾಬಿಕ್ಕಿಯಾದ ನಾನು ಅವಳನ್ನು ಸಿಟ್ಟಿನಿಂದ ಕೆಕ್ಕರಿಸಿ ನೋಡಿದೆ. ಯಾಕೋ ಏನೋ ಆಕೆಯ ಆ ಆಕರ್ಷಕ ಚಿಕ್ಕಚಿಕ್ಕ ಕಂಗಳಲಿ ತೆಳುವಾಗಿ ಕಣ್ಣೀರ ಪರೆ ಕಾಣಿಸಿತು. ವಿಷಯವನ್ನು ತಿಳಿಯಾಗಿಸಲು ನಾನೀಗ ಮೇಲೇಳುತ್ತಾ‌ ನುಡಿದೆ 'ಇರು ಮೊದಲು ನಾವು ಹಾರ್ಲಿಕ್ಸ್ ಕುಡಿಯೋಣ ಹೊಟ್ಟೆ ಯಾಕೋ ಬಹಳ ಚುರುಗುಟ್ಟುತ್ತಿದೆ'. ನಾದಿನಿ ಮದುವೆಯಾಗಿ ಅತ್ತೆ ಮನೆ ಸೇರಿದ್ದು ಅಂದು ಅತ್ತೆ ಮತ್ತು ನಾನು ಇಬ್ಬರೇ ಮನೆಯಲ್ಲಿದ್ದುದ್ದರಿಂದ ಮೂರು ಲೋಟ ಹಾರ್ಲಿಕ್ಸ್ ಮಾಡಿ ತಂದು ಒಂದನ್ನು ಅತ್ತೆಯ ಕೈಗಿತ್ತು, ಉಳಿದೆರಡನ್ನು ಹಿಡಿದುಕೊಂಡು ವೀಣಾಳ ಬಳಿ ಬಂದೆ. ಆಕೆ ಅದಾಗತಾನೇ ನಿದ್ದೆಯಿಂದೆದ್ದಿದ್ದ ನನ್ನ ಪುಟ್ಟ ಮಗನನ್ನೆತ್ತಿ ಮುದ್ದಿಸುತ್ತಾ ಮಾತಾಡಿಸುತ್ತಿದ್ದಳು.

ಉತ್ತಮ ಆರೋಗ್ಯಕ್ಕೆ, ಉಲ್ಲಾಸಕರ ಮನಸ್ಸಿಗೆ.. ಕುಡಿಯಿರಿ ಹಾರ್ಲಿಕ್ಸ್ ಟಿನ್ ಟ್ಟಿಡಿನ್! ಎಂದೆನ್ನುತ್ತಾ ನಾನು ಹಾರ್ಲಿಕ್ಸ್ ಲೋಟ ವೀಣಾಳ ಕೈಗಿತ್ತೆ. ಅವಳ ಮುಖದಲ್ಲಿನ ಕಾರ್ಮೋಡ ಮಾಯವಾಗಿ ತಿಳಿಯಾದ ನಗುವರಳಿತು. ಹಾರ್ಲಿಕ್ಸ್ ಕುಡಿದಾದ ನಂತರ ಅವಳೆರಡು ಕೈಗಳನ್ನಿಡಿದು ನಿಧಾನವಾಗಿ ನುಡಿದೆ.

'ನೋಡು ವೀಣಾ ನಿನ್ನ ಮನೆಯವರು ಈ ವರನನ್ನು ನೋಡಿ ಅವರ ಬಗ್ಗೆ ಚೆನ್ನಾಗಿ ಅರಿತುಕೊಂಡು ಇಷ್ಟಪಟ್ಟು ನಿನ್ನನ್ನು ಕೊಡಲು ಒಪ್ಪಿಕೊಂಡಿರುವರು ತಾನೇ...? ಅವರು ನಿನಗೆ ಉತ್ತಮವಾದ ವರನನ್ನೇ ಹುಡಿಕಿರುತ್ತಾರೆ. ಈಗಿನ ಕಾಲದಲ್ಲಿ ಎಲ್ಲಾದರಲ್ಲೂ ಸರಿಯಾಗಿರುವ ಸೂಕ್ತವಾದ ವರನನ್ನು ಆರಿಸುವುದು ಬಹಳ ಕಷ್ಟದ ಕೆಲಸ. ಆದರೇ ಹುಡುಗ-ಹುಡುಗಿಯ ಮನೆಯವರು ಕಷ್ಟಪಟ್ಟು ಹುಡುಕಿ ಕೂಡಿಸಿದ ಸಂಬಂಧವನ್ನು ತಪ್ಪಿಸುವುದೋ ಯಾರಿಗಾದರೂ ಬಹಳ ಸುಲಭದ ಕೆಲಸ. ನನ್ನಿಂದ ನೀನಿದನ್ನು ನಿರೀಕ್ಷಿಸಬೇಡ, ಛೇ! ನನ್ನ ಬಳಿ ಇಂತಾ ಸಹಾಯ ಕೇಳುವಾ ಎಂದು ನೀನು ಯೋಚಿಸಿದೆಯಾದರು ಹೇಗೆ ? ಈ ಯೋಚನೆ ಬಿಟ್ಟುಬಿಡು. ನೀನು ಇನ್ನೊಮ್ಮೆ ಮನೆಯವರ ಬಳಿ ಮಾತನಾಡು. ನೀನು ತಾನೇ ಮದುವೆ ಯಾಗಲಿಕ್ಕಿರುವವಳು ನಿನಗೆ ಆ ಹಕ್ಕು ಇದೆ! ನಾಚಿಕೆ ಪಡದೇ ಮನೆಯವರಲ್ಲಿ ವರನ ಬಗ್ಗೆ ಕೂಲಂಕಷವಾಗಿ ವಿಚಾರಿಸಿಕೋ. ಅವರು ನಿನಗೆ ವರನ ಕುರಿತು ಎಲ್ಲಾ ವಿವರವನ್ನೂ ನೀಡಬಹುದು. ನನ್ನ ಮನಸ್ಸು ಯಾಕೋ ಹೇಳುತ್ತಿದೆ ಹುಡುಗ ಒಳ್ಳೆಯವರೇ ಇರಬಹುದೆಂದು' ಎಂದು ದೃಢವಾಗಿ ನುಡಿದೆ. ತಕ್ಷಣ ವೀಣಾಳೆಂದಳು 'ಮನೆಯಲ್ಲೆಲ್ಲರೂ ಬಹಳ ಇಷ್ಟಪಟ್ಟು ಒಪ್ಪಿಕೊಂಡಿದ್ದಾರೆ. ಹುಡುಗ ಒಳ್ಳೆಯವರು, ಹಾಗಿದ್ದಾರೆ, ಹೀಗಿದ್ದಾರೆ ಅಂತೆಲ್ಲಾ ಹೊಗಳ್ತಿದ್ದಾರೆ'. ಅವಳ ಮನದ ಮೂಲೆಯಲ್ಲಿ ಇನ್ನೂ ಭಯ ಅಡಗಿರುವುದು ಅವಳ ಮಾತುಗಳಲ್ಲಿ ಸ್ಪಷ್ಟವಾಗಿ ತಿಳಿಯುತ್ತಿತ್ತು.

ನಾನು ಒಂದಷ್ಟು ತಮಾಷೆಯಾಡಿ ಅವಳನ್ನು ನಗಿಸಲು ಪ್ರಯತ್ನಿಸಿದೆ. ಅಲ್ಲ, ನೀನಿನ್ನೂ ಸಣ್ಣ ವಯಸ್ಸಿನವಳು ಎಂದು ಅವರು ಪ್ರೀತಿಯ ಜತೆಗೇ ಹೆಚ್ಚೇ ಮುದ್ದಿನಿಂದ ನಿನ್ನನ್ನು ನೋಡಿಕೊಳ್ಳಬಹುದು. ಇನ್ನು ಹುಡುಗ ಅಷ್ಟು ಒಳ್ಳೆಯವರಾಗಿದ್ದಾರೆಂದರೇ ಮ್ಯಾಡಂಗೆ ಆಮೇಲೆ ನಮ್ಮ ನೆನಪು ಇರಬಹುದೋ.. ಹ್ಮ್..... ಹೇಗೆ? ನೋಡಮ್ಮಾ ಮತ್ತೊಮ್ಮೆ ಕೇಳಿಸಿಕೊ ಯಾವುದಕ್ಕೂ ನಾಚಿಕೊಳ್ಳದೇ ಮನೆಯಲ್ಲಿ ನಿಂಗೆ ತೀರ ಆತ್ಮೀಯರಾಗಿರುವವರ ಬಳಿ ಹುಡುಗನ ಬಗ್ಗೆ ಸರಿಯಾಗಿ ಕೇಳಿ ವಿಚಾರಿಸಿಕೋ.... ಒಂದೊಮ್ಮೆ ನೀನವರನ್ನು 'ಬೇಡಾ' ಎಂದು ತಿರಸ್ಕರಿಸಿ, ಅವರು ನಿಜವಾಗಿಯೂ ಒಳ್ಳೆಯವರೇ ಆಗಿದ್ದರೆ..?, ಅದು ಬಿಡು, ಮುಂದೆ ನಿನ್ನನ್ನು ಬೇರೆ ಯಾರೋ ಮದುವೆಯಾಗುತ್ತಾರೆ ಅಂತ ತಿಳಿದುಕೋ.. ಅವರು ಇವರಿಗಿಂತ ಹೆಚ್ಚು ಒಳ್ಳೆಯವರಿರ ಬಹುದೆಂದು ಹೇಗೆ ಹೇಳ್ತೀಯಾ? ನನಿಗಂತೂ ಈ ವರ ನನ್ನೂರಿನವರು ಅಂತ ಹೇಳುತ್ತಲೇ ಸಕತ್ತ್ ಖುಷಿಯಾಯ್ತು. ನನ್ನ ಮಾತುಗಳೀಗ ಸರಿಯಾಗೇ ವರ್ಕೌಟ್ ಆಗ್ತಿದೆ ಅನ್ನೋದು ಆ ಮೌನದಲ್ಲೂ ಅವಳ ಮುಖಭಾವವನ್ನು ಓದಿ ಅರ್ಥೈಸಿಕೊಂಡೆ.

'ಈಗೇನು ನಿಮಗೆ ನಾನು 'ಹೂಂ' ಅನ್ಬೇಕು ಅಷ್ಟೇ ತಾನೇ ? ಸರಿ ಹಾಗಾದ್ರೆ 'ನೀನು ಅವರನ್ನೇ  ಮದುವೆಯಾಗು' ಅಂತ ನೀವು ಹೇಳುವುದಾದರೇ ನಾನು ಕಣ್ಣುಮುಚ್ಚಿ ಅವರನ್ನೇ ವರಿಸುವೆ' ಪಟ್ಟಕ್ಕನೆ ನುಡಿದಳು.

ಹುಡುಗಿ ಈಗ ನನ್ನನ್ನೇ ಅಡಕತ್ತರಿಯಲ್ಲಿ ನಿಲ್ಲಿಸಿಬಿಟ್ಟಳು. ಆದರೂ ನಾನು ಉದುರಿಸಿದ ಮಾತು ಹಿಂಪಡೆದುಕೊಳ್ಳದೇ 'ಹೂಂ' ಎನ್ನುತ್ತಾ ಪ್ರೀತಿಯಿಂದ ಅವಳ ಭುಜದ ಸುತ್ತ ಕೈಹಾಕಿ ಅವಳಲ್ಲಿ ಧೈರ್ಯ ತುಂಬಿದೆ.

ಅವಳು ಹೊರಟು ಹೋದ ಮೇಲೂ ನನ್ನನ್ನು ಅವಳ ನುಡಿಗಳೇ ಕಾಡುತ್ತಿದ್ದವು. ನಾನೇನಾದರೂ ಒತ್ತಡ ಹಾಕಿ ಅವಳನ್ನು ಕಟ್ಟಿಹಾಕಿದೆನೇ ? ಮನಸ್ಸು ಪದೇ ಪದೇ ಪ್ರಶ್ನಿಸುತ್ತಿತ್ತು. ನಾನೀಗ ನಿತ್ಯ ಪ್ರಾರ್ಥಿಸತೊಡಗಿದೆ 'ಅವಳ ಮನೆಯವರ ಮಾತು, ನನ್ನ ನಂಬಿಕೆ' ಸುಳ್ಳಾಗದಿರಲಿ ದೇವಾ.. ಎಂದು.

ವಿವಾಹದ ತಯಾರಿ ಜೋರಾಗೇ ನಡೆಯುತ್ತಿತ್ತು. ಬಟ್ಟೆಬರೆಗಳನ್ನು ಕೊಂಡುಕೊಳ್ಳುವಲ್ಲಿಂದ ಹಿಡಿದು ಎಲ್ಲಾ ವಿಷಯಗಳನ್ನು ನನ್ನ ಬಳಿ ಬಂದೂ ಬಂದೂ ವಿಚಾರಿಸುತ್ತಾ ನನ್ನ ಅಭಿಪ್ರಾಯದಂತೆ ತಯಾರಿ ಮಾಡಿಕೊಳ್ಳುತ್ತಿದ್ದಳು. ಈಗ ಕೆಲವೊಮ್ಮೆ ಅವಳ ಮನೆಯಿಂದ ಅವಳ ಇಬ್ಬರು ಚಿಕ್ಕಪ್ಪನವರ ಪತ್ನಿಯರೂ.. ಅವರ ಮಕ್ಕಳೂ ಅವಳ ಜತೆಗೆ ನಮ್ಮನೆಗೆ ಬರುತ್ತಿದ್ದು ಅವರುಗಳೂ ನನ್ನನ್ನು ಬಹಳ ನೆಚ್ಚಿಕೊಂಡಿದ್ದರು.

ಅಂದು ವೀಣಾ ಆಮಂತ್ರಣ ಪತ್ರಿಕೆ ಹಿಡಿದುಕೊಂಡು ಬಂದವಳೇ ನುಡಿದಳು 'ನೋಡಿ ಒಂದು ಮಾತು ಮಾತ್ರಾ ಸರಿಯಾಗಿ ನೆನಪಿಟ್ಕೊಳ್ಳಿ, ಮದುವೆ ದಿನವೇ ಸಾಯಂಕಾಲ ರಿಸೆಪ್ಷನ್ ನೀವು ಅದಕ್ಕೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದೀರಾ, ನೀವು ಮದುವೆ ಮುಗಿವವರೆಗೂ ನನ್ನ ಜತೆಗೇ ಇರಬೇಕು, ಇಲ್ಲದಿದ್ದರೇ ರಿಸೆಪ್ಷನ್ ಮುಗಿದಾದ ನಂತರ ನಾನು ಅತ್ತೆ ಮನೆಗೆ ಹೋಗಲಾರೆ ಇದು ನೆನಪಿರಲಿ'.  ಅವಳು ತುಸು ಹೆಚ್ಚಿನ ಹಟವಾದಿಯೇ ಆಗಿದ್ದರಿಂದ ಜತೆಗಿದ್ದ ಅವಳ ಚಿಕ್ಕಮ್ಮ ಕೂಡ ನನ್ನ ಬಳಿ ಹೇಳಿದರು. ಹೌದು! ನೀವು ಮದುವೆಯ ದಿನಪೂರ್ತಿ ನಮ್ಮೊಡನೇ ಇದ್ದುಬಿಡಿ. ಇಲ್ಲದಿದರೆ ಇವಳು ಹೇಳಿದಾಗೆ ಮಾಡಿಯಾಳೇ...

 ಅವಳ ಮದುವೆಯ ಆ ಸುದಿನ ಸಾಯಂಕಾಲ ರಿಸೆಪ್ಷನ್ ಸಮಯಕ್ಕೆ ಸರಿಯಾಗಿ ನಾನು ಪತಿಯೊಡನೆ ಬೈಕಲ್ಲಿ ಹೊರಟೆ. ಅಲ್ಲಿ ಸೇರಿದ ಅಷ್ಟು ಜನರಾಶಿಯ ಮಧ್ಯೆ ಬುರ್ಕಾ ತೊಟ್ಟಿದ್ದ ಏಕೈಕ ವ್ಯಕ್ತಿಯಾದ ನನ್ನನ್ನು ಕಾಣುತ್ತಲೇ.. ನನ್ನ ಬರವಿಗಾಗೇ ಕಾಯುತ್ತಿದ್ದ ನಾಲ್ಕೈದು ಹೆಣ್ಣುಮಕ್ಕಳು ಓಡೋಡಿ ಬಂದರು. ಸುಂದರವಾಗಿ ಅಲಂಕರಿಸಿದ ಮಂಟಪದಲ್ಲಿ ಕುಳ್ಳಿರಿಸಿದ್ದ ಜೋಡಿಗಳನ್ನು ದೂರದಿಂದಲೇ ನೋಡಿ ಖುಷಿಯಿಂದ ನಾನು ಕಣ್ಣುಗಳಲ್ಲಿ ತುಂಬಿಕೊಂಡೆ. ಮೊದಲೇ ಮುದ್ದಾದ ಮೊಗದ ಚೆಂದದ ಹೆಣ್ಣು ವೀಣಾ ಈಗ ಮತ್ತಷ್ಟು ಸುಂದರವಾಗಿ ಮಿಂಚುತ್ತಿದ್ದಳು. ನನ್ನ ಪತಿಯವರಿಗೋ ಅಲ್ಲೆಲ್ಲಾ ಪರಿಚಯಸ್ಥರೇ ಇದ್ದು, ಯಾರೋ ಕರೆದರೆಂದು ಅವರು ಅತ್ತನಡೆದರು. ನನ್ನನ್ನು ಆ ಹೆಣ್ಣುಮಕ್ಕಳು ನೇರಾ ಮನೆಯೊಳಗೇ ಕರೆದೊಯ್ದು ರೂಮೊಂದರಲ್ಲಿ ಕೂರಿಸಿದ್ದೇ ತಡ ತಿರುಗಿ ನೋಡುವೆ ಸ್ಟೇಜ್‌ ಮೇಲೆ ಮದುಮಗನ ಪಕ್ಕ ಕುಳಿತಿದ್ದ ಮದುಮಗಳು ನಮ್ಮ ಹಿಂದಿಂದೆಯೇ ಕೂಲ್ ಡ್ರಿಂಕ್ಸ್ ಇಡ್ಕೊಂಡು ಬಂದಿದ್ದು ನನ್ನತ್ತ ಚಾಚಿದಳು. ಗಾಬಾರಿಗೊಂಡ ನಾನು ಪಕ್ಕನೇ ಅವಳ ಕೈಯಿಂದ ಅದನ್ನು ಕಸಿದುಕೊಂಡಾಗ ಪಕ್ಕದಲ್ಲೇ ಕುಳಿತಳು. ಮದುಮಗಳ ಅಲಂಕಾರದಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿರುವ ನನ್ನ ಪ್ರೀತಿಯ ಗೆಳತಿಯನ್ನು ಕಂಡು, ಅವಳ ಅಗಾಧ ಪ್ರೀತಿಗೆ ನನ್ನ ಮನಸ್ಸು ಸಂತೋಷತುಂಬಿ ಭಾರವಾಯ್ತು. ನಾನವಳಿಗೀಗ ಮೆಲ್ಲನೇ ಗದರಿಸಿದೆ 'ಹೋಗಮ್ಮಾ ನೀನಿಂದು ಮಂಟಪದಲ್ಲಿರಬೇಕು ಮದುಮಗ ಒಬ್ಬರೇ ಕುಳಿತಿರುವುದು ಚೆನ್ನಾಗಿರಲ್ಲ, ನೋಡುಗರು ಏನು ತಿಳ್ಕೊಬಹುದು. ಮತ್ತೆ ಪಾಪ ಅವರಿಗೂ ಬೇಜಾರಾಗಬಹುದು. ಇಂದು ನಿನ್ನ‌ ಮದುವೆ ರಿಸೆಪ್ಷನ್ ಅಲ್ವಾ.. ನೀನವರ ಜತೆಯಾಗಿ ಕೂರಬೇಕು' ಅಂದೆ.

ಈಗವಳ ಹಟ ಒಂದೇ.. 'ನೀವೂ ಬಂದು ನಮ್ಮ ಜತೆಗೆ ಕೂರಬೇಕು, ಇಲ್ಲಾ ಅಂದ್ರೆ ನಾನು ಹೋಗಲ್ಲಾ' ಗಾಬಾರಿಯಾದ ನಾನು ಅದೆಷ್ಟೇ ಹೇಳಿದರೂ ಕೇಳಿಸದವಳಂತೆ ಕುಳಿತ್ತಿದ್ದು, ಇದೀಗ ಅಲ್ಲಿ ಕಿಟಕಿ ಪಕ್ಕ ಇಟ್ಟಿದ್ದ ಪುಟ್ಟ ರೇಡಿಯೊವನ್ನು ಕೈಗೆತ್ತಿ ಮಡಿಲಲ್ಲಿರಿಸಿ ತಿರುಗಿಸಿ ಕನ್ನಡ ಹಾಡು ಬರುತ್ತಲೇ ಟ್ಯೂನ್ ಕೊಟ್ಟು 'ನೋಡಿ ನಿಮ್ಮ ಇಷ್ಟದ ಹಾಡು' ಕಣ್ಣರಳಿಸಿ ಖುಷಿಯಿಂದ ಹೇಳುವ ಅವಳನ್ನು ನೋಡಿ ನನಗೆ ನಗಬೇಕೋ ಅಳಬೇಕೋ ಅರಿಯದಾಯ್ತು.

ಅವಳ ತಾಯಿ ಹಾಗೂ ಚಿಕ್ಕಮ್ಮಂದಿರೂ ನನ್ನನ್ನು ಒತ್ತಾಯಿಸತೊಡಗಿದರು ಹೌದು! ನೀವು ಹೋಗಿ ಅವರ ಜತೆಗೆ ಕುಳಿತುಕೊಳ್ಳಿ ಎಂದು. ಎಲ್ಲಾರ ಒತ್ತಾಯಕ್ಕೆ ಕೊನೆಗೂ ಮಣಿದ ನಾನೀಗ ಅವಳ ಜತೆ ಮಂಟಪದತ್ತ ಹೊರಟೆ. ನನ್ನನ್ನು ಕಾಣುತ್ತಲೇ ಎದ್ದುನಿಂತು ತುಸು ಬಗ್ಗಿ ನಮಸ್ಕರಿಸಿದ ಅಜಾನುಬಾಹು ಮದುಮಗನ ಆ ವಿನಯತೆ ಒಂದೇ ನೋಟದಲ್ಲಿ ನನಗೆ ಬಹಳ ಹಿಡಿಸಿತು. ನಾನೂ 'ನಮಸ್ತೆ' ಎನ್ನುತ್ತಾ ಮದುವೆಯ ಶುಭ ಹಾರೈಸಿದೆ. ನನಗೆ ಕೂರಲೆಂದು ವೀಣಾಳ ಅಣ್ಣ ಕುರ್ಚಿಯೊಂದನ್ನು ತಂದಿಟ್ಟಾಗ ಮುಂದುಗಡೆ ನೆರೆದಿದ್ದ ಜನರಿಗೆ ಎದುರಾಗಿ ಕಾಣದಂತೆ ಕುರ್ಚಿಯನ್ನು ಒಂದು ಸ್ವಲ್ಪ ಜರುಗಿಸಿಟ್ಟು ಕುಳಿತೆ. ಮದುಮಗ ನಗು ಮೊಗದೊಂದಿಗೆ ಆತ್ಮೀಯರಾಗಿ.. ನನ್ನ ತಂದೆ ಹಾಗೂ ಕುಟುಂಬಸ್ಥರ ಬಗ್ಗೆ ವಿಚಾರಿಸಿದಾಗ ನಾನು ಹೆಸರು ತಿಳಿಸುತ್ತಲೇ‌ 'ಓ ಅವರಾ... ನನಗೆ ಬಹಳ ಚೆನ್ನಾಗಿ ಪರಿಚಯವಿದೆ' ಎಂದು ಇನ್ನಷ್ಟು ಖುಷಿ ಹಾಗೂ ಗೌರವದಿಂದ ಮಾತಿಗಿಳಿದರು. ನಾನು ವೀಣಾಳ ಕಡೆ ಬಗ್ಗಿ ಅವಳ ಕಿವಿಯಲ್ಲಿ ಮೆಲ್ಲನುಸುರಿದೆ 'ಬಾವ ತುಂಬಾ ಒಳ್ಳೆಯ ಮನುಷ್ಯ, ನೀನು ನಿಜವಾಗಲೂ ತುಂಬಾ ಲಕ್ಕಿ ಕಣಮ್ಮಾ.. ಇನ್ನು ನಿನ್ನ ಹಟ ಕಡಿಮೆಮಾಡಿ ಪ್ರೀತಿಯಿಂದ ಅವರೊಂದಿಗೆ ಹೊಂದಿಕೊಂಡು ಖುಷಿ ಖುಷಿಯಾಗಿ ಬಾಳಬೇಕು ಆಯ್ತಾ'.

ಅವಲೋ‌ ನನ್ನ ಮಾತು ತನ್ನ ಕಿವಿಯೊಳಕ್ಕೆ ನುಗ್ಗಿಯೇ ಇಲ್ಲವೆನ್ನುವಂತೆ ಮಕ್ಕಳಂತೆ ನನ್ನ ಕೈಯ್ಯನ್ನು ತನ್ನ ಮಡಿಲಲ್ಲಿರಿಸಿಕೊಂಡು ನನ್ನ ಬಳೆಗಳನ್ನು ಎಣಿಸುತ್ತಾ ಆಟವಾಡುತ್ತಿದ್ದಳು. ನಾನೀಗ ಮದುಮಗನ ಬಳಿ ನುಡಿದೆ 'ಬಾವಾ.. ಇವಳಿಗೆ ಹೀಗೆ ಮಕ್ಕಳಾಟ ಜಾಸ್ತಿ, ಮುಂದೆ ಇವಳ ಯಾವುದೇ ವಿಷಯಕ್ಕೂ ನೀವು ಬೇಜಾರಾಗಬಾರದು ಮತ್ತು ಯಾವತ್ತೂ ಇವಳ ಮೇಲೆ ಸಿಟ್ಟಾಗುವುದೋ ಗದರುವುದೂ‌ ಮಾಡದೇ ಇವಳನ್ನು ಪ್ರೀತಿಯಿಂದ ನೋಡಿಕೊಳ್ಳಿ‌. ನನಗರಿವಿಲ್ಲದೇ ನನ್ನ ಧ್ವನಿ ಗದ್ಗದಿತವಾಯಿತು.

ಅವರು ತಕ್ಷಣ ನುಡಿದರು ನೀವು ಈ ಕುರಿತು ಯಾವುದೇ ಟೆನ್ಸನ್ ಮಾಡ್ಕೋಬೇಡಿ. ನಿಮ್ಮ ಸ್ನೇಹಿತೆಯನ್ನು ನಾನು ತುಂಬಾ ಚೆನ್ನಾಗಿ ನೋಡಿಕೊಳ್ಳುವೆನು. ಅವರ ಆ ನುಡಿಯಿಂದ ನನ್ನ ಮನಕ್ಕೆ ಪನ್ನೀರೆರೆದಂತೆ ಬಾಸವಾಯಿತು. ನಾನೀಗ ನೆಮ್ಮದಿಯ ನಗು ಬೀರಿದೆ. ಹ್ಯಾಂಡ್ ಬ್ಯಾಗಿನಿಂದ ಹಿಂದಿನ ದಿನ ಖರೀದಿಸಿದ್ದ ಉಂಗುರದ ಕೆಂಪು ಬಣ್ಣದ ಮಕಮಲಿನ ಬಾಕ್ಸನ್ನು ಹೊರತೆಗೆದು ಅದರಲ್ಲಿನ ಉಂಗುರವನ್ನೆತ್ತಿ ಮದುಮಗನ ಕೈಗಿತ್ತು ನುಡಿದೆ 'ಬಾವ ಇದನ್ನು ನೀವೇ ವೀಣಾಳ ಕೈಗೆ ತೊಡಿಸಿ'. ಅವರು ಅವಳ ಕೈಗೆ ತೊಡಿಸುತ್ತಲೇ. ನಾನು ಎದ್ದು ನಿಂತೆ ಸಂಜೆಯ ಮಗರಿಬ್ ನಮಾಝಿನ ಹೊತ್ತಾಗುತ್ತಾ ಬಂತು ನಾನಿನ್ನು ಹೊರಡಬೇಕೆಂದೆ. ತಕ್ಷಣ ತಬ್ಬಿಕೊಂಡು ವೀಣಾಳಿಗೆ ಶುಭಹಾರೈಸಿ ಎಲ್ಲರಿಗೂ ಹೇಳಿ ನಾನಲ್ಲಿಂದ ಹೊರಟೆ. ಅಂದು ಎಂಟು ಗಂಟೆಗೆ ರಾತ್ರಿಯೂಟ ಮುಗಿಸಿದ ಅತ್ತೆ ಮನೆಗೆ ಹೊರಡುವುದೆಂದು ವೀಣಾ ಹೇಳಿದಳು.

ವೀಣಾಳ ಮದುವೆ ಕಳೆದೀಗ ದಿನವೊಂದು ಉರುಳಿತು. ನನಗೋ ಆಗಾಗ ನೆನಪಾಗಿ ಕಾಡುತ್ತಿದ್ದಳು. ಅತ್ತೆ ಮನೆಯಲ್ಲಿ ಹೊಸ ಜಾಗ, ಹೊಸ ಜನ ಹೇಗಿದ್ದಾಳೊ ಏನೋ ಎಂದು. ಅದರ ಮಾರನೇಯ ದಿನ ಸಾಯಂಕಾಲದ ಹೊತ್ತು ನಮ್ಮ ಮನೆಯ ಮುಂದೆ ಬೈಕೊಂದು ಬಂದು ನಿಂತ ಸದ್ದು ಕೇಳಿಸಿತು. ಯಾರಿರಬಹುದೆಂದು ಯೋಚಿಸಿತ್ತಾ ಮಗುವನ್ನೆತ್ತಿಕೊಂಡು ನಾನು ವೆರಾಂಡಕ್ಕೆ ಬರುತ್ತಲೇ ಬೈಕಿನಿಂದಿಳಿದ ಮದುಮಕ್ಕಳು ಮನೆಯೊಳಗೆ ಪ್ರವೇಶಿಸಿದ್ದರು. ಆಶ್ಚರ್ಯ ಸಂತಸದಿಂದ ಜೋರಾಗಿ ಅತ್ತೆಗೆ ಕರೆದೆ 'ಉಮ್ಮಾ ನೋಡಿ ವೀಣಾ ಮತ್ತು ಮದುಮಗ ಬಂದಿದ್ದಾರೆ'. ನನ್ನನ್ನು ಕಂಡವಳೇ ವೀಣಾ ಹಾರಿದಂತೆ ಬಳಿಬಂದು ಖುಷಿಯಿಂದ ಮಗವನ್ನೆತ್ತಿ ತಬ್ಬಿಹಿಡಿದುಕೊಂಡು ಎಷ್ಟೋ ದಿನಗಳಾದ ಹಾಗೆ ಆಗ್ತದೆ ನಿಮ್ಮನ್ನು ನೋಡದೇ ಎಂದೆನ್ನುತ್ತಾ... ಹಾಗೆಯೇ ನನ್ನನ್ನು ಡೂಡುತ್ತಾ ನನ್ನ ರೂಮಿಗೆ ಬಂದು ಮಂಚದ ಮೇಲೆ ಕುಳಿತಳು. ತಡಿ, ಕುಡಿಯೋಕೆ ತರುವೆನೆಂದು ಬೋರ್ನ್‌ವಿಟಾ ಜತೆಗೆ ಸ್ವೀಟ್ಸ್ ಮತ್ತು ಖಾರ ಟ್ರೇಯಲ್ಲಿಟ್ಟು ತಂದು ಹಾಲಿನಲ್ಲಿ ಇದ್ದ ಟೇಬಲ್ಲಿನ ಮೇಲಿಟ್ಟು ತಗೊಳ್ಳಿ ಬಾವ ಎನ್ನುತ್ತಾ ವೀಣಾಳಿಗೂ ಕರೆದೆ. ಅತ್ತೆ ಮತ್ತು ಮೈದುನನವರು ಮದುಮಗನ ಬಳಿ ಕುಳಿತು ಮಾತಾಡುತ್ತಿದ್ದರು. ವೀಣಾ ಒಳಗಿಂದ ಬಂದವಳೇ.. ಬೋರ್ನ್‌ವಿಟಾದ ಲೋಟವನ್ನೆತ್ತಿಕೊಂಡು ನನ್ನ ಕೈಹಿಡಿದು ದರದರನೆ ಮತ್ತೆ ಎಳೆಯುತ್ತಾ ರೂಮಿಗೆ ಬಂದು ಕುಳಿತಳು. ಅವಳ ತುರ್ತು ಕಂಡು ನಾನು "ಏನು ?" ಎಂದು ಪ್ರಶ್ನಾರ್ತಕವಾಗಿ ಅವಳ ಮೊಗವನ್ನೇ ನೋಡತೊಡಗಿದೆ. ನನ್ನ ನೋಟದಲ್ಲಿದ್ದ ಪ್ರಶ್ನೆಯನ್ನು ಗಮನಿಸಿ ತನ್ನ ಕೆಂಪಾದ ಮುಖವನ್ನು ಕೈಯ್ಯಿಂದ ಉಜ್ಜುತ್ತಾ ನಾಚಿಕೆಯಿಂದ ಮೆಲ್ಲನುಸುರಿದಳು 'ನಿಮಗೆ ಒಂದು ವಿಷಯ ಹೇಳಬೇಕಿತ್ತು‌'. ಒಂದು ಯಾಕೆ ಎಲ್ಲಾ ಹೇಳು ಎಂದೆ. 'ಅಲ್ಲಾ.. ಅದೂ.. ಅದೂ.. ನೀವು ಹೇಳಿದಂತೆ ನಾನು ಲಕ್ಕಿಯಲ್ಲಾ, ತುಂಬಾ ತುಂಬಾ ಲಕ್ಕಿ ಎಂದಳು. ನಿಮ್ಮ ಮಾತುಗಳೆಲ್ಲಾ ನಿಜವಾಗಿವೆ. ಅವರು ತುಂಬಾ ಒಳ್ಳೆಯವರು. ಎಲ್ಲಾಕಿಂತ ಹೆಚ್ಚು ನನ್ನ ಇಷ್ಟದ ಮಾನವೀಯ ಗುಣವಿರುವವರು. ಈ ಮದುವೆ ಬೇಡವೆಂದು ನಾನು ತಿರಸ್ಕರಿಸಿದ್ದರೇ... ನನಗೆ ನಾನೇ ತುಂಬಾ ಲಾಸ್ ಮಾಡಿಕೊಳ್ಳುತ್ತಿದ್ದೆ. ಅವಳ ಸಂತಸ ಸಂಭ್ರಮ ತುಂಬಿ ಮಿನುಗುವ ಆ ಎರಡು ಮೀನುಗಣ್ಣುಗಳನ್ನು ನೋಡುತ್ತಾ ಮನದಲ್ಲೇ ನಾನು ದೇವನಿಗೆ ಸಾವಿರ ಸ್ತುತಿಸಿದೆ. ನನ್ನ ಕೈಗಳನ್ನು ಭದ್ರವಾಗಿ ಹಿಡಿದಿದ್ದ ಅವಳ ಅಂಗೈಯ್ಯನ್ನು ಇನ್ನಷ್ಟು ಒತ್ತಿ ಹಿಡಿದು ಅತ್ಯಂತ ಖುಷಿ, ನೆಮ್ಮದಿಯಿಂದ ನಾನು ಮುಗುಳ್ನಕ್ಕೆ. ಅತ್ತೆ ಮನೆಯಿಂದ ನೇರ ನಮ್ಮನೆಗೇ ಬಂದಿದ್ದ ಅವರು ಸ್ವಲ್ಪ ಹೊತ್ತು ಇದ್ದು ಆಮೇಲೆ ವೀಣಾಳ ತಾಯಿಮನೆ ಕಡೆ ಹೊರಟರು. ಇವರ ಈದಿನ ಖುಷಿ, ಸಂಭ್ರಮವನ್ನು ಇವರ ಜೀವನದ ಕೊನೆಯವರೆಗೂ ಹೀಗೆ ಉಳಿಸಿಕೊಡು ದೇವಾ.. ಎಂದು ನಾನು ಮನದಲ್ಲೇ ಪ್ರಾರ್ಥಿಸಿದೆ.

ದಿನಗಳು ವರುಷಗಳಾಗಿ ಒಂದರ ಹಿಂದೆ ಒಂದರಂತೆ ಎರಡು ಮುದ್ದಾದ ಗಂಡುಮಕ್ಕಳ ತಾಯಿಯಾಗಿದ್ದಳು‌ ವೀಣಾ. ಎಲ್ಲವೂ ನಿನ್ನೆ ಮೊನ್ನೆ ನಡೆದದ್ದೆಂಬಂತೆ ಬಾಸವಾಗುತ್ತಿದ್ದು, ಇದೀಗ ದಿಡೀರನೆ ಬಂದ ವೀಣಾಳ ಪತಿಯ ಮರಣ ವಾರ್ತೆಯನ್ನು ನಾನು ಅರಗಿಸಿಕೊಳ್ಳದಾದೆ.

Category:Stories



ProfileImg

Written by Heart Beat