ಹೆಸರನ್ನೇ ಕೆ ಬದಲಾಯಿಸಲಿಲ್ಲ?

ಮೂಲೆಮನೆ ತಾಯಮ್ಮ

ProfileImg
26 Apr '24
3 min read


image


"ತೇಜು ..ಸಾಯಂಕಾಲ ಆ ಮೂಲೆಮನೆ ತಾಯವ್ವ ಬರ್ತಾರಂತೆ. ನಿನ್ನ ಸೊಸೆಯನ್ನು ನೋಡಬೇಕು ಅಂತ  ಹೇಳಿದ್ದಾರೆ. ಮದುವೆಗೆ ಅವರಿಗೆ ಬರಲಿಕ್ಕಾಗಲಿಲ್ಲ" ಅತ್ತೆ  ಸುಗಂಧಿ ಹೇಳಿದಾಗ ತೇಜಸ್ವಿನಿ 'ಹ್ಞೂಂ' ಅಂತ ಹೇಳಿ  "ಯಾರವರು? ನೆರೆಮನೆಯವರಾ?ಏನಾದರೂ ಸ್ಪೆಷಲ್ ಮಾಡಬೇಕಾ?"ಅಂತ ಕೇಳಿದಳು ತೇಜು.


ಈ ಮೂಲೆ ಮನೆ, ಹಳೆಮನೆ ,ನಡುಮನೆ ,ದೊಡ್ಡಮನೆ , ಬೆಣ್ಣೆ ಮನೆ ,ದೋಸೆಮನೆ ,ಉಂಡೆಮನೆ ,ಹೊಸಮನೆ , ಕೆಳಮನೆ ,ಮೇಲಿನ ಮನೆ ..ಆಹಾ.ಎಲ್ಲಾ ಊರಲ್ಲೂ ಈ ಹೆಸರಿರುವ‌ ಮನೆಗಳಿವೆ.ಹೊಸಮನೆ ಕಟ್ಟಿದಾಗ ಹೊಸದಾಗಿದ್ದುದರಿಂದ ಹೊಸಮನೆ ಅಂತ ಎಲ್ಲರೂ ಹೇಳುವಾಗ ಅದೇ ಹೆಸರು ಶಾಶ್ವತವಾಯಿತು. ಇರಲಿ..ಈ ಮೂಲೆಮನೆ ತಾಯಮ್ಮ ಹೇಗಿದ್ದಾರೋ .ಏನೋ..
ಈ ಹಳ್ಳಿಯವರು ಅಂದರೆ  ಹೊಸದಾಗಿ ಬಂದಿರುವ ಸೊಸೆಯಂದಿರನ್ನು ತಲೆಯಿಂದ ಕಾಲಿನ ತನಕ ಪರೀಕ್ಷಿಸುವವರೇ .ಆಮೇಲೆ ಏನಾದರೂ ಕೊಂಕು ಮಾತಾಡದೆ ಹೋಗುವುದಿಲ್ಲ. ಆ ಬಗ್ಗೆ ಅತ್ತೆಯನ್ನು ಕೇಳಲೂ ಸಂಕೋಚ. ಎಲ್ಲರೂ ಅಂಥವರೇ ಇರಬೇಕೆಂದಿಲ್ಲವಲ್ಲ.
ತಾನು ಜೀನ್ಸ್ ಹಾಕಿಕೊಂಡು ತಿರುಗಾಡುವವಳು. ಇಲ್ಲಿ ಹಳ್ಳಿಯಲ್ಲಿ ನೈಟಿಯಾದರೂ ನಡೆಯುತ್ತದೆ. ಜೀನ್ಸ್ , ಬರ್ಮುಡಾ ಹಾಕಿದರೆ ಗಮನಿಸುವವರು ಜಾಸ್ತಿ. ಇರಲಿ. 
" ತಾಯಮ್ಮನವರಿಗೆ ಏನಾದರೂ ಸ್ಪೆಷಲ್ ಮಾಡಬೇಕಾ . ಯಾರವರು ಅತ್ತೆ? "
"ಮೈಸೂರು ಪಾಕ್,  ಮಿಕ್ಸ್ಚ ರ್ ಎಲ್ಲಾ ಇದೆಯಲ್ಲಾ. ಅವರು ಬಂದ ಮೇಲೆ ಕಾಫಿ ಮಾಡಿದರಾಯಿತು.ಯೋಚನೆ ಬೇಡ."ಎಂದಳು ಸುಗಂಧಿ‌.
ಇನ್ನು ತಾನು ಸೀರೆ ಉಡಬೇಕಾ. ಅಥವಾ ಮೋಡರ್ನ್ ಆಗಿರಬೇಕಾ. ಆಮೇಲೆ  ಅತ್ತೆಗೆ. ' ಆ ಸುಗಂಧಿಯ ಸೊಸೆಯ ಅವತಾರ ನೋಡಿ' ಅಂತ ಟೀಕೆ ಮಾಡಿದರೆ ಅಂತ ಯೋಚನೆ.
ತಾಯಮ್ಮ ಎಂಥವರೋ. “ಇರಲಿ ನಾನೇನು ಇಲ್ಲಿಯೇ ಇರುವವಳಲ್ಲ .ಒಂದು ವಾರದಲ್ಲಿ ಮುಂಬೈಗೆ ಹೋಗುವವಳು.ಒಂದು ದಿನ ಈ ಊರಿಗೆ ಬೇಕಾದಂತೆ ಇದ್ದರೆ ನನಗೇನೂ ನಷ್ಟವಿಲ್ಲ. ಹಾಗೆ ನೋಡಿದರೆ ಅತ್ತೆಯವರು ತುಂಬಾ ಒಳ್ಳೆಯವರು. ನಿನಗೆ ಬೇಕಾದಂತೆ ಇರು ಅಂತ ಹೇಳಿ ಬಿಟ್ಟಿದ್ದಾರೆ. ನನ್ನ ಅದೃಷ್ಟ. ಆ ಧನುವಿನ ಅತ್ತೆಯಂಥವರು ಸಿಕ್ಕಿದ್ದರೆ...ಅಬ್ಬಾ ನಾನು ಒಂದು ದಿನವೂ ಇಲ್ಲಿ ಇರುತ್ತಿರಲಿಲ್ಲವೇನೋ..” ಅಂತ ಯೋಚಿಸುತ್ತಿದ್ದಳು ತೇಜು.


ಮಧ್ಯಾಹ್ನದ ಊಟ ಆದ ನಂತರ ತೇಜು ಅತ್ತೆಗೆ ಅಡಿಗೆಮನೆ ಕ್ಲೀನಿಂಗ್ ಗೆ ಸಹಾಯ ಮಾಡಿದಳು. ತಲೆಯಲ್ಲಿ ತಾಯಮ್ಮನೇ ತುಂಬಿಕೊಂಡಿದ್ದಳು. 
ಕಾಫಿ ಡಿಕಾಕ್ಷನ್ ಹಾಕಿಟ್ಟಳು. ಕಾಫಿಯಂತೂ ತೇಜು ಬಹಳ ಚೆನ್ನಾಗಿ ಮಾಡುತ್ತಿದ್ದಳು.
ತೇಜು ಮಧ್ಯಮ ಕುಟುಂಬದಿಂದ ಬಂದ ಹುಡುಗಿ . ಸಾಫ್ಟವೇರ್ ಇಂಜಿನಿಯರ್. ಮಾಡರ್ನ್ ಆಗಿ ಇರಲೂ ಗೊತ್ತು . ಸಂಪ್ರದಾಯವೂ ಗೊತ್ತು. ಎಲ್ಲಿಗೂ ಹೊಂದಿಕೊಳ್ಳುವವಳು.


ಆ ಹಳ್ಳಿಯಲ್ಲಿ ಮಾತ್ರ ಸುಗಂಧಿಯ ಸೊಸೆ ತುಂಬಾ ಕಲಿತವಳಂತೆ , ಚೆನ್ನಾಗಿದ್ದಾಳೆ ಆಂತೆಲ್ಲಾ ಸುದ್ದಿ ಹಬ್ಬಿತ್ತು. ಯಾಕೆಂದರೆ ಅಲ್ಲಿ ಹೆಚ್ಚು ಓದಿದವರ ಸಂಖ್ಯೆ ಕಡಿಮೆ.
ಸಾಯಂಕಾಲ ತೇಜು ತಾಯಮ್ಮನ ದಾರಿ ಕಾಯುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಗೇಟಿನ ಸದ್ದಾಯಿತು. ತೇಜುಗೆ ಬಾಯ್ ಕಟ್ ಮಾಡಿ ಜೀನ್ಸ್ ,ಟೀ ಶರ್ಟ್ ಧರಿಸಿದ  ಹಾಕಿದ ಒಬ್ಬ ಮಹಿಳೆ ನಲುವತ್ತೈದರ ಆಸು ಪಾಸಿನವಳು ಬರುವುದು ಕಾಣಿಸಿತು. ಇದ್ಯಾರಪ್ಪಾ ಈ ಊರಿನಲ್ಲಿ   ಮಾಡರ್ನ್ ವನಿತೆ ಅಂತ ಯೋಚಿಸಿದ ತೇಜು ಅತ್ತೆಯವರನ್ನು ಕೂಗಿ. 'ಅತ್ತೆ ಯಾರೋ ಒಬ್ಬರು ಹೆಂಗಸು  ಬಂದಿದ್ದಾರೆ. ಬನ್ನಿ " ಅಂತ ಹೇಳಿದಾಗ “ಇನ್ಯಾರು ,ಆ ತಾಯಮ್ಮನೇ ಬಂದಿರ್ತಾರೆ “.ಅಂದಾಗ ಅಲ್ಲಾ ಅತ್ತೆ ಮತ್ಯಾರೋ ಇರಬೆಕು. ಬನ್ನಿ ' ಅಂತ ಹೇಳುವುದಕ್ಕೂ. ಏನ್ರೀ ಸುಗಂಧಿ ,ಏನು ಮಾಡ್ತಾ ಇದ್ದೀರಿ. ? ಅಂತ ಹೇಳಿ ”ಇವಳ್ಯಾರು ? ನಿಮ್ಮ ಸೊಸೆ ಮುದ್ದು ಎಲ್ಲಿ?” ಅಂತ ಕೇಳಿದಾಗ. ತೇಜುಗೆ ಸ್ವಲ್ಪ ಸಿಟ್ಟು ಬಂತು. ನಾನೇನು ಸೊಸೆಯಂತೆ ಕಾಣುವುದಿಲ್ಲವಾ ಕೆಲಸದವಳಾ ಅಂತ ಅಂದುಕೊಂಡಳು. ಅಷ್ಟರಲ್ಲಿ ಸುಗಂಧಿ ಒಳಗಿನಿಂದ ಬಂದು , ಓ ತಾಯಮ್ಮ, ಬನ್ನಿ ಬನ್ನಿ! ಅಂತ ಒಳಗೆ ಕರೆದಳು.
ಅಂದರೆ ಇವರೇ ತಾಯಮ್ಮ!


" ಇವಳು ನೋಡಿ ನನ್ನ ಸೊಸೆ ತೇಜು".ಅಂತ  ಪರಿಚಯಿಸಿದಾಗ " ಓ, ಇವಳಾ." ಅಂತ ರಾಗ ಎಳೆದದ್ದು ನೋಡಿ ತೇಜುಗೆ ಸಿಟ್ಟು ಬಂದರೂ ತಡೆದುಕೊಂಡಳು. 'ಇವಳಾ, ಅಂತ ಹೇಳಿದ ಸ್ವರದಲ್ಲಿ ತಾತ್ಸಾರ ಇತ್ತು. ಮತ್ತೆ ಆಕೆಗೆ ಕಾಫಿ ,ತಿಂಡಿ ಕೊಡಲು ಹೋಗಲಿಲ್ಲ.ಹೆಚ್ಚು ಮಾತಾಡಲೂ ಹೋಗಲಿಲ್ಲ. 

 ಈ ತಾಯಮ್ಮ  ಎಷ್ಟೇ ಫ್ಯಾಷನ್ ಮಾಡಿದರೂ ಅವಿದ್ಯಾವಂತರು ಕೇಳುವಂತೆ ವೈಯಕ್ತಿಕ ವಿಷಯ ಕೇಳಬಹುದೆಂದು  ತೇಜು ಊಹಿಸಿ ಬಿಟ್ಟಳು. ಅವಳಿಗೆ ಅದೆಲ್ಲಾ ಇಷ್ಟವಾಗದು. ಹಾಗೆಯೇ ಅವರ ವೈಯಕ್ತಿಕ ವಿಷಯ ಕೇಳಲೂ ಇಷ್ಟವಾಗದು. ಆದರೆ ಅಲ್ಲೇ ಇದ್ದರೆ ಮತ್ತೆ ಪ್ರಶ್ನೆಗಳು ಬರುವುದು ಖಂಡಿತ ಅಂತ ತನ್ನ ಕೋಣೆಗೆ ಹೋದಳು. 

ತೇಜು ಸಾಧಾರಣ ಸೀರೆ ಉಟ್ಟಿದ್ದಳು. ನವ  ವಧು, ಹಳ್ಳಿಯೂರಲ್ಲಿ  ಸೀರೆ ಉಟ್ಟರೆ ಒಳ್ಳೆಯದು ಅಂತ ತೇಜು ಸೀರೆ ಉಟ್ಟಿದ್ದಳು. ಈಗ ನೋಡಿದರೆ ಯಾರನ್ನೋ ಮೆಚ್ಚಿಸಲು ತಾನ್ಯಾಕೆ ಸೀರೆ ಉಡಲು ಹೋದೆ ಅಂತ ಅನ್ನಿಸಿತು ಅವಳಿಗೆ. ತನ್ನ ಕೋಣೆಯಲ್ಲಿ ಮೊಬೈಲ್ ಹಿಡಿದು ಕುಳಿತ ತೇಜು ತಾಯಮ್ಮ ಯಾವಾಗ ಹಿಂದಿರುಗುತ್ತಾಳೆ ಅಂತ 

ಯೋಚಿಸುತ್ತಿದ್ದಳು.ಆದರೂ ಅವಳ ಕಿವಿ ಹೊರಗೆ ತಾಯಮ್ಮ ಮತ್ತು ಅತ್ತೆಯ ಸಂಭಾಷಣೆಯತ್ತ ಇತ್ತು.

 

 “ಎಲ್ಲಿ ಹೋದಳು ನಿನ್ನ ಸೊಸೆ..? ಅದೇನು ಹಳೇಕಾಲದವರ ಹಾಗೆ ಸೀರೆ ಉಟ್ಟಿದ್ದಾಳೆ?” 

 ಸುಗಂಧಿ ಗೆ ಸಿಟ್ಟು ಬಂದರೂ‌‌ ತಡೆದುಕೊಂಡು 

“ ಅದಾ, ನೀನು ಬರ್ತೀ ಅಂತ ಉಟ್ಟದ್ದಿರಬೇಕು.  ಯಾವಾಗಲೂ ಸೀರೆ ಉಡುವುದಿಲ್ಲ.ಹಿರಿಯರು ಎಂದರೆ ಗೌರವ ಜಾಸ್ತಿ. ಕಲಿತಿರುವೆ ಅಂತ ಜಂಭವೇ ಇಲ್ಲ ನೋಡಿ…ಈಗ ಏನೋ ಕಂಪ್ಯೂಟರ್ ನಲ್ಲಿ ಕೆಲಸ ಇರಬಹುದು. ಹಾಗಾಗಿ ರೂಮಿಗೆ ಹೋಗಿದ್ದಾಳೆ.ಅವಳು ಅಡಿಗೆ ಕೂಡ ಚೆನ್ನಾಗಿ ಮಾಡ್ತಾಳೆ. ಕಾಫಿಗೆ ಡಿಕಾಕ್ಷನ್ ಅವಳೇ ಮಾಡಿದ್ದು… ”

“ಹೌದಾ, ಪರವಾಗಿಲ್ಲವೇ..” ಹೀಗೆ  ಮಾತುಕತೆ ಸಾಗಿತ್ತು ಅವರಿಬ್ಬರದು.

 

ತಾಯಮ್ಮನೊಂದಿಗೆ ಮಾತನಾಡಿದ  ಸುಗಂಧಿ ಅವಳಿಗೆ ತಿಂಡಿ ಕಾಫಿ ಕೊಟ್ಟು ಕಳುಹಿಸುವಾಗ  ತೇಜು ರೂಮಿನಿಂದ ಹೊರಬಂದು ಅತ್ತೆ ನಾನು ಗುಡ್ಡದತ್ತ ವಾಕಿಂಗ್ ಹೋಗಿ ಬರುತ್ತೇನೆ ಅಂತ ಹೇಳಿ ಇಬ್ಬರಿಗೂ ಬಾಯ್ ಹೇಳಿ ಹೊರಟಳು. 

 

ತೇಜು ಈಗ ಬರ್ಮುಡಾ ಧರಿಸಿದ್ದಳು ಅದರ ಜೊತೆಗೆ ಸ್ಲೀವ್ ಲೆಸ್ ಟಾಪ್..  “ಅರೆ ನಿಮ್ಮ ಸೊಸೆಯನ್ನು ಗುರುತೇ ಆಗಲಿಲ್ಲ” ನೋಡಿ ಅಂತ ನಕ್ಕಳು ತಾಯಮ್ಮ. 


ವಾಕಿಂಗ್ ಹೋಗಿ ಬಂದ ತೇಜುವಿನಲ್ಲಿ‌ ಅವಳ ಅತ್ತೆ "ಈ ತಾಯಮ್ಮ ಮುಂಬೈನಲ್ಲಿ ಇದ್ದು ಬಂದವಳು.‌ಸ್ವಲ್ಪ ಜಂಭ ಜಾಸ್ತಿ.ಈ ಹಳ್ಳಿಯಲ್ಲೂ ಫ್ಯಾಷನ್  ಮಾಡುವುದು ಬಿಟ್ಟಿಲ್ಲ. ಓದಿದ್ದು ಹತ್ತನೆ ಕ್ಲಾಸ್ ತಾನು ಮಹಾ ಬುದ್ಧಿವಂತಳು ಅಂತ ತಿಳಕೊಂಡಿದ್ದಾಳೆ. ಅವಳು ಹೇಳಿದ್ದನ್ನೆಲ್ಲಾ ಮನಸಿಗೆ ಹಚ್ಚಿಕೋಬಾರದು."ಎಂದಾಗ "ಇಲ್ಲ ಅತ್ತೆ, ಅವರ ಸಿಲ್ಲಿ ವಿಷಯಗಳನ್ನು ಕೇಳಲು ಇಷ್ಟ ಆಗಲಿಲ್ಲ ಅಂತ ನಾನು ವಾಕಿಂಗ್ ನೆಪದಲ್ಲಿ ಹೊರಗೆ ಹೋದೆ. 

ಅಷ್ಟು ಫ್ಯಾಷನ್ ಮಾಡುವವರು ತಮ್ಮ ಹೆಸರನ್ನೇಕೆ ಬದಲಾಯಿಸಲಿಲ್ಲ " ಅಂತ ಹೇಳಿ ನಕ್ಕಳು ತೇಜು. 

 


✍️ಪರಮೇಶ್ವರಿ ಭಟ್ 

 


 

 

 

Category:Stories



ProfileImg

Written by Parameshwari Bhat