ಅದೊಂದು ಪುಟ್ಟ ಊರು ,ಅತ್ತ ಹಳ್ಳಿಯೂ ಅಲ್ಲದ ಇತ್ತ ಪೇಟೆಯೂ ಅಲ್ಲದ ಪ್ರದೇಶ ,ಅಲ್ಲಿಂದ ಅನೇಕ ಮಹಿಳೆಯರು ಸ್ವಲ್ಪ ದೂರದ ಪೇಟೆಯಲ್ಲಿ ಕೆಲಸಕ್ಕೆ ಹೋಗಿ ಬರುತ್ತಾರೆ .ಒಂದು ದಿನ ದೂರದಿಂದ ಓಡಿ ಬಂದ ಮಹಿಳೆ ಏದುಸಿರು ಬಿಟ್ಟು ಕೊಂಡು ಬಸ್ಸು ಹತ್ತಿದರು ,ಸುತ್ತ ಮುತ್ತ ನೋಡಿದರೆಎಲ್ಲ ಸೀಟ್ ಗಳೂ ಭರ್ತಿಯಾಗಿದ್ದವು.
ಓಡಿಬಂದು ಸುಸ್ತಾಗಿದ್ದ ಮಹಿಳೆಗೆ ಗಂಡಸೊಬ್ಬರು ಮಹಿಳೆಗಾಗಿ ಮೀಸಲಿರಿಸಿದ್ದ ಸೀಟಿನಲ್ಲಿ ಕುಳಿತುಕೊಂಡದ್ದು ಕಾಣಿಸಿತು ,ನಿರ್ವಾಹಕರಲ್ಲಿ ಅವರನ್ನು ಎಬ್ಬಿಸಿ ಕೊಡುವಂತೆ ಕೇಳಿದರು .ನೀವೇ ಕೇಳಿ ಎಂದಾತ ನುಣುಚಿಕೊಂಡು ಮುಂದೆ ಹೋಗಿ ನಿಂತ .ಈ ಮಹಿಳೆ ಕುಳಿತಿದ್ದ ಆ ಗಂಡಸಲ್ಲಿ ಎದ್ದು ಸೀಟು ಕೊಡುವಂತೆ ಹೇಳಿದರು.ಅವರ ಎದುರೆ ನಿರ್ವಾಹಕ ತನಗೂ ಅದಕ್ಕೂ ಸಂಬಂಧ ಇಲ್ಲದಂತೆ ಎದ್ದು ಹೋದದ್ದು ಅವರಿಗೆ ಕುಮ್ಮಕ್ಕು ಕೊಟ್ಟಿತು.
”ನಾನು ಪ್ರಾರಂಭದಿಂದಲೇ ಕುಳಿತಿದ್ದೇನೆ ಏಳಲ್ಲ” ಎಂದರು ,ಅವರಿಗೆ ತುಸು ವಯಸ್ಸೂ ಆಗಿತ್ತು .'ವಯಸ್ಸಾದವರನ್ನು ಏಳು ಅಂತ ಹೇಳೋಕೆ ನಾಚಿಕೆ ಆಗಲ್ವ?ಅಂತ ಯಾರೋ ಗಂಡಸರು ಹಿಂದಿನಿಂದ ಹೇಳಿದರು .ಈ ಮಹಿಳೆಗೂ ಆಗ ಸಿಟ್ಟು ಬಂತು .ವಯಸ್ಸಾಗಿದ್ರೆ ಹಿರಿಯ ನಾಗರಿಕರ ಸೀಟು ಇದೆ ಅಲ್ಲಿ ಕುಳಿತುಕೊಳ್ಳಿ ಎಂದರು .ಆ ಸೀಟಿನಲ್ಲಿ ಇಬ್ಬರು ಯುವಕರು ಕುಳಿತಿದ್ದರು.ಆ ಮಹಿಳೆ ಮತ್ತು ಆ ಗಂಡಸಿನ ನಡುವೆ ಚಕ ಮುಕಿ ನಡೆಯಿತು.
ಬಸ್ಸಿನಲ್ಲಿದ್ದ ಕೆಲವು ಗಂಡಸರು ಆ ಗಂಡಸಿನ ಪರ ಸೇರಿ ಮಾತಾಡಿದರು.
ಆಗ ಮಹಿಳೆ ನಿರ್ವಾಹಕನಲ್ಲಿ ಆತನನ್ನು ಎಬ್ಬಿಸಿಕೊಡುವಂತೆ ಹೇಳಿದರು .ಮಾತಿಗೆ ಮಾತು ಬೆಳೆಯಿತು .ನಿರ್ವಾಹಕನೊಂದಿಗೆ ಚಾಲಕನೂ ಸೇರಿಕೊಂಡು ಆ ಮಹಿಳೆಗೆ ಹೊಡೆಯಲು ಬಂದರು. ಆ ಬಸ್ಸಿನಲ್ಲಿ ಅನೇಕ ಸ್ತ್ರೀಯರೂ ಇದ್ದರು .ಅಷ್ಟೆಲ್ಲ ಆದರೂ ಆ ಬಸ್ಸಿನಲ್ಲಿದ್ದ ಒಂದೇ ಒಂದು ಸ್ತ್ರೀ ಕೂಡ ತುಸುವಾದರೂ ಆ ಮಹಿಳೆ ಪರ ಧ್ವನಿ ಎತ್ತಲಿಲ್ಲ .
ಅಷ್ಟು ಹೊತ್ತಿಗಾಗುವಾಗ ಇನ್ನೋರ್ವ ಮಹಿಳೆ ಬಸ್ಸನ್ನು ಏರಿದರು .ಅಲ್ಲಿನ ಗಲಾಟೆ ತಿಳಿದು ಆ ಮಹಿಳೆಯನ್ನು ಎಲ್ಲರು ಸೇರಿ ಹೊಡೆದು ಹಾಕಿಯಾರೆಂದು ಕೂಡಲೇ ತಮ್ಮ ಮೊಬೈಲ್ ಮೂಲಕ ಹತ್ತಿರದ ಪೋಲಿಸ್ ಸ್ಟೇಷನ್ ಗೆ ಮಾಹಿತಿ ನೀಡಿದರು ,ಮುಂದಿನದು ಎಲ್ಲರಿಗೂ ಗೊತ್ತಿರುವದ್ದೆ !ಬಸ್ಸನ್ನು ಸ್ಟೇಷನ್ ಗೆ ಕೊಂಡೊಯ್ದರು
.ಆಗ ಅಲ್ಲಿದ್ದ ಮಹಿಳೆಯರಿಗೆ ಗಂಟಲಲ್ಲಿ ಸ್ವರ ಬಂತು ."ಅಯ್ಯೋ ಇವಳಿಂದಾಗಿ ನಮಗೆ ಆಫೀಸ್ ಗೆ ತಡ ಆಗುತ್ತದೆ" ಅಂತ ಅವರನ್ನೇ ಬಯ್ಯಲು ಆರಂಭ ಆಯಿತು .ಮುಂದೆ ಆ ನಿರ್ವಾಹಾಕ ಚಾಲಕ ಮತ್ತು ಕುಳಿತಿದ್ದ ಗಂಡಸು ಮೇಲೆ ದೂರು ದಾಖಲಾಯಿತು .ಇಷ್ಟಕ್ಕೂ ಆದದ್ದೇನು ?ಆ ಮಹಿಳೆ ನ್ಯಾಯವಾದದ್ದನ್ನೇ ಕೇಳಿದ್ದರು ! ಆಗ ನಿರ್ವಾಹಕ ಹಿರಿಯ ನಾಗರೀಕರ ಸೀಟಿನಲ್ಲಿ ಕುಳಿತಿದ್ದ ಯುವಕರನ್ನು ಎಬ್ಬಿಸಿ ,ಮಹಿಳೆಯರ ಸೀಟಿನಲ್ಲಿ ಕುಳಿತಿದ್ದವರಿಗೆ ಕೊಡಿಸಿ ಆ ಸೀಟನ್ನು ಆ ಮಹಿಳೆಗೆ ಕೊಡಿಸುತ್ತಿದ್ದರೆ ಯಾವ ಸಮಸ್ಯೆಯೇ ಆಗುತ್ತಿರಲಿಲ್ಲ.
ಅಲ್ಲೊಂದು ಪುಟ್ಟ ಸಂಸ್ಥೆ ,ಇಪ್ಪತ್ತೈದು ಮೂವತ್ತು ಮಂದಿ ಕೆಲಸ ಮಾಡುತ್ತಾರೆ.ಹತ್ತು ಹನ್ನೆರಡು ಮಂದಿ ಅದರಲ್ಲಿ ಮಹಿಳೆಯರೂ ಇದ್ದಾರೆ .ಎರಡು ಶೌಚಾಲಯಗಳೂ ಇವೆ .ನಮಗೆ ಬೇರೆ ಟಾಯ್ಲೆಟ್ ಬೇಕು ಎಂಬ ಅಹವಾಲು ಮಹಿಳೆಯರದ್ದು.ಬಾಹ್ಯವಾಗಿ ಹೇಳಲು ಯಾರೂ ತಯಾರಿಲ್ಲ .ಅಂತು ಇಂತೂ ಒಂದು ಮೀಟಿಂಗ್ ನಲ್ಲಿ ಓರ್ವ ಮಹಿಳೆ ಈ ಬಗ್ಗೆ ಪ್ರಸ್ತಾಪ ಮಾಡಿದರು .ಕೂಡಲೇ ಬೇರೆ ಒಂದು ವ್ಯವಸ್ಥೆ ಮಾಡಲು ಫಂಡ್ ಇಲ್ಲ ಅನ್ನುವ ಸಿದ್ಧ ಉತ್ತರ ಎದುರಾಯಿತು .ಐವತ್ತು ವರ್ಷದಿಂದ ಈ ಸಂಸ್ಥೆ ನಡೆಯುತ್ತಾ ಬಂದಿದೆ ,ಇಷ್ಟರ ತನಕ ಯಾರಿಗೂ ಏನೂ ತೊಂದರೆ ಆದ ಬಗ್ಗೆ ಯಾರೂ ಹೇಳಿಲ್ಲ ,ಈಗೇನು ತಕರಾರು ?ಇಷ್ಟು ಇಲ್ಲದ ಸಂಸ್ಥೆಗಳು ಎಷ್ಟಿಲ್ಲ ಇತ್ಯಾದಿಯಾಗಿ ತಲೆಗೊಂದರಂತೆ ಮಾತಾಡಿದರು ಅಲ್ಲಿನ ಪುರುಷ ಸಹೋದ್ಯೋಗಿಗಳು .ನಿತ್ಯ ಕಿರಿ ಕಿರಿ ಅನುಭವಿಸುವ ಮಹಿಳೆಯರು ತುಟಿ ಪಿಟಕ್ಕೆನ್ನಲಿಲ್ಲ!.ಮತ್ತೆ ಎಂದಿನಂತೆ ದಿನಗಳು ಉರುಳಿದವು !ಅಲ್ಲಿ ಬಹಳ ಸುಲಭದ ಪರಿಹಾರೋಪಾಯ ಇತ್ತು .ಎರಡರಲ್ಲಿ ಒಂದನ್ನು ಮಹಿಳೆಯರು ,ಇನ್ನೊಂದನ್ನು ಪುರುಷರು ಬಳಸಿದರಾಯಿತು .ಆದರೆ ಅಷ್ಟರ ಮಟ್ಟಿನ ಉದಾರತೆಯೂ ಅಲ್ಲಿರಲಿಲ್ಲ . ಆ ವಿಷಯ ಪ್ರಸ್ತಾಪಿಸಿದ ಮಹಿಳೆ ಎಲ್ಲರ ಕೆಂಗಣ್ಣಿಗೆ ಪಾತ್ರರಾಗ ಬೇಕಾಯಿತು . ಮಾತು ಮಾತಿಗೆ ಅವರನ್ನು ಹಂಗಿಸುವುದು ಭಂಗಿಸುವುದು ಶುರು ಆಯ್ತು .ಅವರ ಬದುಕು ಅಲ್ಲಿ ನರಕ ಸದೃಶವಾಯಿತು.
ಇಂತಹಾದ್ದೆ ಇನ್ನೊಂದು ಊರು.ಅಲ್ಲೊಂದು ಶಾಲೆ. ಮುಖ್ಯೋಪಾಧ್ಯಾಯರು ಬಹಳ ಶಿಸ್ತಿನ ಸಿಪಾಯಿ .ಶಾಲೆಯಲ್ಲಿ ಒಳ್ಳೆ ಫಲಿತಾಂಶ ಇತ್ತು ಶಾಲೆಗೆ ಒಳ್ಳೆ ಹೆಸರಿತ್ತು .ಹತ್ತು ಹನ್ನೆರಡು ಮಂದಿ ಶಿಕ್ಷಕರಿದ್ದರು .ಅದರಲ್ಲಿ ಒಬ್ಬರು ಶಿಕ್ಷಕಿಯೂ ಇದ್ದರು !ಹೆಚ್ಚಾಗಿ ಎಲ್ಲರೂ ಸಮಯಕ್ಕೆ ಸರಿಯಾಗಿಯೇ ಬರುತ್ತಿದ್ದರು.ಆದರೆ ಶಿಕ್ಷಕರು ನಡುವೆ ಫ್ರೀ ಇದ್ದಾಗ ಕಾಫಿಗೆ ಉಟಕ್ಕೆ ತಿಂಡಿಗೆ ಅಂತ ಹೊರ ಹೋಗಿ ತಿರುಗಾಡಿ ಬರುತ್ತಿದ್ದರು. ಮನೆ ದೂರ ಇರುವ ಶಿಕ್ಷಕರು ಕೊನೆ ಅವಧಿ ತರಗತಿ ಇಲ್ಲದಿದ್ದರೆ ಬೇಗ ಮನೆಗೆ ಹೋಗುತ್ತಿದ್ದರು .ಅಲ್ಲಿದ್ದ ಶಿಕ್ಷಕಿಯ ಮನೆ ಶಾಲೆಗೆ ಹತ್ತಿರದಲ್ಲೇ ಇತ್ತು .ಮನೆಯಿಂದಲೇ ಬುತ್ತಿ ತರುವ ಕಾರಣ ಇವರು ಶಾಲೆಗೆ ಬಂದ ಮೇಲೆ ಮುಗಿಯುವ ತನಕ ಹೊರ ಹೋಗುತ್ತಿರಲಿಲ್ಲ .ಒಂದಿನ ಏನೋ ಕಾರಣಕ್ಕೆ ಆ ಶಿಕ್ಷಕಿ ಒಂದಿನ ಶಾಲೆಗೆ ಬರುವಾಗ ಅರ್ಧ ಗಂಟೆ ತಡ ಆಯಿತು!ಮುಖ್ಯೋಪಾಧ್ಯಾಯರು ಜೋರು ಮಾಡಿ ಸಿ ಎಲ್ ಬರೆದು ಕೊಡಿ ಎಂದರು !ದುರದೃಷ್ಟವಶಾತ್ ಅವರ ಖಾತೆಯಲ್ಲಿ ಸಿ ಎಲ್ ,ಇ ಎಲ್ ಗಳು ಖಾಲಿಯಾಗಿದ್ದವು !
ಆಗ ಅವರು “ಬೇರೆ ಶಿಕ್ಷಕರು ನಡು ನಡುವೆ ಹೊರಗೆ ಹೋಗಿ ಬರುವುದಿಲ್ಲವೇ ?ಅನೇಕರು ಸಂಜೆ ಬೇಗ ಮನೆಗೆ ಹೊಗುವುದಿಲ್ಲವೇ ? ಎಂದು ಪ್ರಶ್ನಿಸಿದರು.ಆಗ ಬೇರೆಯವರ ವಿಷಯ ನಿಮಗೆ ಬೇಡ ಎಂದು ದಬಾಯಿಸಿದರು !ಅವರ ಒಂದು ದಿನದ ವೇತನವನ್ನು ತಡೆ ಹಿಡಿಯಲಾಯಿತು !ಒಂದು ದಿನ ತಪ್ಪದಂತೆ ಬಂದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ಬಹಳ ನೋವಾಯಿತು. ಈ ನಡುವೆ ಅವರು ಇತರ ಶಿಕ್ಷಕರು ಮನೆಗೆ ಬೇಗ ಹೋಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದು ಇತರ ಶಿಕ್ಷಕರ ಕಣ್ಣು ಕೆಂಪಗಾಗಲು ಕಾರಣವಾಯಿತು .ಅದರ ಪರಿಣಾಮ ಉತ್ತಮ ಶಿಕ್ಷಕಿಯಾಗಿದ್ದ ಅವರು ಬೇರೆಡೆಗೆ ವರ್ಗಾವಣೆ ಪಡೆದು ಹೋದರು !ಆ ಶಾಲೆಯಲ್ಲಿ ಆ ಹುದ್ದೆ ಖಾಲಿಯಾಗಿಯೇ ಉಳಿಯಿತು !ಗಣಿತಕ್ಕೆ ಶಿಕ್ಷಕರಿಲ್ಲದೆ ಆ ಶಾಲೆಯ ಮಕ್ಕಳು ಒದ್ದಾಡಿದರು ಪಾಪ ! ಇಷ್ಟಕ್ಕೂ ಇಲ್ಲಿ ಆದದ್ದೇನು ?ಮಹಿಳೆಗೊಂದು ,ಪುರುಷನಿಗೊಂದು ನೀತಿ ಅನುಸರಿಸಿದ್ದು ಅಷ್ಟೇ !
ಹೀಗೆ ಇನ್ನೊಂದು ಶಾಲೆ ,ಅಲ್ಲೋರ್ವ ಬಡ ವಿದ್ಯಾರ್ಥಿನಿ ಓದುತ್ತಿರುತ್ತಾಳೆ. ಅಲ್ಲಿಯ ಶಿಕ್ಷಕನೊಬ್ಬ ಆಕೆಗೆ ಮೈ ಕೈ ಮುಟ್ಟಿ ಕಿರುಕುಳ ಕೊಡ್ತಾನೆ .ಬೇರೆ ದಾರಿ ಇಲ್ಲದಾದಾಗ ಅವಳು ತನ್ನ ತಂದೆ ತಾಯಿಯಲ್ಲಿ ಹೇಳುತ್ತಾಳೆ .ಅವರು ಆತನ ವಿರುದ್ಧ ದೂರು ನೀಡುತ್ತಾರೆ .ಆತ ಅವಳು ಓದಿ ಬರೆದು ಮಾಡದ್ದಕ್ಕೆ ಜೋರು ಮಾಡಿದ್ದಕ್ಕೆ ಹಾಗೆ ಹೇಳುತ್ತಿದ್ದಾಳೆ ಅಂತ ಹೇಳುತ್ತಾನೆ .ಮುಗಿಯಿತು ಅಲ್ಲಿಗೆ ಆತ ಹೇಳಿದ್ದೇ ಸರಿ !ಪರಿಣಾಮ ಆ ಬಡ ಹುಡುಗಿಯ ವಿದ್ಯಾಭ್ಯಾಸ ಅಲ್ಲಿಗೇ ನಿಂತು ಹೋಯಿತು ,ಅವಳದ್ದು ಮಾತ್ರ ಅಲ್ಲ ಅದೇ ಶಾಲೆಯಲ್ಲಿ ಓದುತ್ತಿದ್ದ ಅವಳ ತಮ್ಮ ತಂಗಿಯರದು ಕೂಡಾ .ಯಾರೊಬ್ಬರೂ ಅವಳು ಹೇಳಿದ್ದೇಕೆ ಸತ್ಯ ಇರಬಾರದೆಂದು ಒಂದು ಕ್ಷಣವೂ ಯೋಚಿಸಲಿಲ್ಲ !ಯಾಕೆಂದರೆ ಅವಳು ಹೆಣ್ಣು ,ಆ ಶಿಕ್ಷಕ ಗಂಡು !
ಇನ್ನೊಂದು ಸರ್ಕಾರಿ ಸಂಸ್ಥೆಯ ಇಬ್ಬರಿಗೆ ಒಂದೇ ವರ್ಷದಲ್ಲಿ ಅವರವರ ಸಾಧನೆಗಳಿಗಾಗಿ ಪ್ರಶಸ್ತಿ ಬಂದಿರುತ್ತದೆ .ಅವರಲ್ಲಿ ಒಬ್ಬರು ಮಹಿಳೆ ,ಇನ್ನೊಬ್ಬರು ಪುರುಷ .ಮಹಿಳೆಗೆ ಪ್ರಶಸ್ತಿ ಬಂದು ಒಂದೆರಡು ತಿಂಗಳ ನಂತರ ಅದೇ ರೀತಿಯ ಪ್ರಶಸ್ತಿ ಪುರುಷನಿಗೆ ಬಂತು .ಮಹಿಳೆಗೆ ಬಂದಾಗ ಬಾಯಲ್ಲಿ ಕೂಡ ಅಭಿನಂದನೆ ಹೇಳಲಿಲ್ಲ ,ಪುರುಷನಿಗೆ ಬಂದಾಗ ಭಾರೀ ಸನ್ಮಾನ ಸತ್ಕಾರಗಳು ನಡೆದವು ! ಈ ಬಗ್ಗೆ ಆ ಮಹಿಳೆ ಪ್ರಶ್ನಿಸಿದರೆ “ಗೌರವವನ್ನು ಕೇಳಿ ಪಡೆಯಲು ಆಗುವುದಿಲ್ಲ ಅದು ನಮ್ಮಿಷ್ಟ ನೀವು ಯಾರು ನಮ್ಮನ್ನು ಕೇಳಲು ?ಹೇಳುವ ಅಹಂಕಾರದ ಉತ್ತರ ಕಾದಿರುತ್ತದೆ , ಸರಕಾರೀ ಸಂಸ್ಥೆಯಲ್ಲಿಯೇ ಕೆಲಸ ಮಾಡುವಲ್ಲಿ ಇಷ್ಟು ಲಿಂಗ ತಾರ ತಮ್ಯ ಇರುವಾಗ ಇನ್ನು ಖಾಸಗಿ ಸಂಸ್ಥೆಗಳ ಬಗ್ಗೆ ಹೇಳಲಿಕ್ಕೆ ಏನಿದೆ ?
ಇದೇ ತರ ಇನ್ನೊಂದು ಊರು ಅಲ್ಲೊಂದು ಹೊಸ ಖಾಸಗಿ ಕಾಲೇಜು ಪ್ರಾರಂಭ ಆಯಿತು ,ಆರಂಭದ ದಿನಗಳಲ್ಲಿ ಉಪನ್ಯಾಸಕ /ಉಪನ್ಯಾಸಕಿಯರು ಬೇರೆ ಬೇರೆ ಶಾಲೆಗಳಿಗೆ ಹೋಗಿ ತಮ್ಮ ಕಾಲೇಜ್ ಬಗ್ಗೆ ತಿಳಿಸಿ ,ಬಹಳ ಪರಿಶ್ರಮ ಪಟ್ಟು ಒಳ್ಳೆಯ ಫಲಿತಾಂಶ ತಂದು ಕೊಟ್ಟರು ,ಕಾಲ ಕ್ರಮೇಣ ಆ ಕಾಲೇಜ್ ಗೆ ವಿದ್ಯಾರ್ಥಿಗಳ ಸಂಖ್ಯೆ ಏರಿತು .ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ,ಆದ್ದರಿಂದ ಎಲ್ಲರಿಗೂ ಕಡಿಮೆ ವೇತನ ಇತ್ತು .ವಿದ್ಯಾರ್ಥಿಗಳ ಸಂಖ್ಯೆ ಏರಿದಂತೆ ಪುರುಷ ಉಪನ್ಯಾಸಕರ ವೇತನ ಏರುತ್ತಾ ಸಾಗಿತು .ಉಪನ್ಯಾಸಕಿಯರ ವೇತನ ಇದ್ದಲ್ಲೇ ಇತ್ತು ! ಈ ತಾರತಮ್ಯದ ಬಗ್ಗೆ ನೊಂದ ಉಪನ್ಯಾಸಕಿಯೊಬ್ಬರು ಒಂದಿನ ಎಲ್ಲ ಬರೆದಿಟ್ಟು ಆತ್ಮ ಹತ್ಯೆಗೆ ಯತ್ನಿಸಿದರು !
ಇನ್ನೊಂದೆಡೆ ಓರ್ವ ಮಹಿಳೆ , ಗಂಡ, ಒಂದು ಮಗು ಇರುವ ಪುಟ್ಟ ಸಂಸಾರ ಅವರದು .ಅವರಿಗೊಂದು ಮನೆ ಮತ್ತು ಸ್ವಲ್ಪ ಜಾಗ ಇತ್ತು .ಬದುಕುವುದಕ್ಕೊಂದು ಉದ್ಯೋಗವೂ ಇತ್ತು .ಇವರ ಮನೆ ರಸ್ತೆಗೆ ಹೊಂದಿಕೊಂಡಂತಿತ್ತು, ಈ ಜಾಗದ ಮೇಲೆ ಒಬ್ಬ ಮರಿ ಪುಡಾರಿಯ ಕಣ್ಣು ಬಿತ್ತು .ಅದರ ಪಕ್ಕದ ಜಾಗವನ್ನಾತ ಖರೀದಿಸಿದ್ದ .ಇವರ ಮನೆ ಜಾಗವನ್ನು ನಂಗೆ ಕೊಡಿ ಖರೀದಿಸುತ್ತೇನೆ ಎಂದು ಹೇಳಿದ ,ಇವರು ಮಾರಲು ಒಪ್ಪಲಿಲ್ಲ !ಆಗ ಆತ ಇವರ ಮನೆ ಇರುವ ಜಾಗ ತನ್ನದು ಅಂತ ಸುಮ್ಮನೇ ಇವರ ಮೇಲೆ ಕೇಸು ಹಾಕಿ ಸತಾಯಿಸಲು ಆರಂಭಿಸಿದ .ಅದಕ್ಕೂ ಇವರು ಕ್ಯಾರೆ ಅನ್ನಲಿಲ್ಲ .
ಒಳ್ಳೆಯ ವಕೀಲರನ್ನು ಗೊತ್ತು ಮಾಡಿ ಹೋರಾಟ ಮಾಡಿದರು !ಇವರು ಸುಲಭಕ್ಕೆ ಬಗ್ಗುವವರಲ್ಲ ಅಂತ ಬೇರೆ ರೀತಿಯ ಕಿತಾಪತಿ ಶುರು ಮಾಡ ಹತ್ತಿದ , ಆ ಮಹಿಳೆ ಮನೆಯಿಂದ ಹೊರ ಕಾಲಿಟ್ಟ ತಕ್ಷಣ ಕಾಡು ಕುಳಿತು ಮೈ ಕೈ ಸವರಿಕೊಂಡು ಹೋಗುವುದು ,ಅವಳಿಗೂ ತನಗೂ ಸಂಬಂಧ ಇದೆ ಎಂದು ಹೇಳುವುದು ಮಾಡ ತೊಡಗಿದ . ಈ ಬಗ್ಗೆ ಮಹಿಳೆ ದೂರು ನೀಡಿದರು.
ಆದರೆ ಆತ ಹೇಳಿದ ಜಾಗದ ವಿಷಯದಲ್ಲಿ ಅವರ ಮೇಲೆ ಕೇಸ್ ಹಾಕಿದ್ದೇನೆ ,ಅದಕ್ಕೆ ಹಾಗೆ ದೂರು ನೀಡಿದ್ದಾರೆ ಎಂದ .ಜನ ಆತನನ್ನೇ ನಂಬಿದರು ,ಬೆಂಬಲಿಸಿದರು !ಕೆಲವರು ಸತ್ಯ ಗೊತ್ತಿರುವವರೂ ನಮಗೇಕೆ ಅಂತ ಸುಮ್ಮನಾದರು ,ಪರಿಣಾಮ ಘೋರವಾದುದು ! ಆ ಸಾತ್ವಿಕ ದಂಪತಿಗಳು ವಿಷ ಸೇವನೆ ಮಾಡಿ ಆತ್ಮ ಹತ್ಯೆ ಮಾಡಿ ಕೊಂಡರು!ಅವರ ಮಗು ಅನಾಥವಾಯಿತು !ಒಂದು ಕ್ಷಣ ಆ ಮಹಿಳೆ ಹೇಳುವುದೂ ಸತ್ಯವಿರ ಬಹುದೆಂದು ಯೋಚಿಸಿದ್ದರೆ ,ಆತ ಕೇಸ್ ಹಾಕಿರುವುದೂ ಸತಾಯಿಸುವ ಸಲುವಾಗಿಯೇ ಎಂದು ಗೊತ್ತಾಗುತ್ತಿತ್ತು !ಒಂದಿನಿತು ಬೆಂಬಲ ಸಿಕ್ಕಿದ್ದರೆ ಅವರು ಚೆನ್ನಾಗಿ ಬದುಕಿ ಬಾಳುತ್ತಿದ್ದರು ಅವರು !
ಇಂತಹ ಅನೇಕ ಸುದ್ಧಿಗಳನ್ನು ನಾವು ದಿನ ನಿತ್ಯ ಕೇಳುತ್ತೇವೆ.ನೋಡುತ್ತೇವೆ ,ನೋಡಿಯೂ ಸುಮ್ಮನಾಗುತ್ತೇವೆ !ಇವೆಲ್ಲ ಬೇರೆಯವರಿಗೆ ಸಣ್ಣ ಪುಟ್ಟ ವಿಷಯಗಳು. ಆದರೆ ಲಿಂಗ ತಾರತಮ್ಯ ಎದುರಿಸಿ ಅವಹೆಳನಕ್ಕೆ ಒಳಗಾದವರ ಪಾಲಿಗೆ ಇವು ಬದುಕನ್ನೇ ನುಂಗುವಷ್ಟು ಬಲವಾಗಿರುತ್ತವೆ. ಅನೇಕ ಸಂದರ್ಭಗಳಲ್ಲ್ಲಿ ಅತ್ಯಾಚಾರ ಎಸಗಿದ ವ್ಯಕ್ತಿ ಅದಕ್ಕೂ ಮೊದಲು ಬೇರೆವರ ಅತ್ಯಾಚಾರಕ್ಕೆ ಯತ್ನಿಸಿರುವುದು ,ಲೈಂಗಿಕ ಕಿರುಕುಳ ನೀಡಿರುವುದು ತಿಳಿದು ಬರುತ್ತದೆ .ಅಲ್ಲೇ ಅವರಿಗೆ ಸರಿಯಾದ ಶಿಕ್ಷೆ ಆಗುತ್ತಿದ್ದರೆ ಅವರು ಅಷ್ಟು ಮುಂದುವರಿಯುತ್ತಿರಲಿಲ್ಲ ಎಂಬುದು ಗಮನಾರ್ಹವಾದದ್ದು . ಹಾಡು ಹಗಲೇ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಂದು ಬಿಸಾಕುವ ವರೆಗೂ ಯಾರೂ ಆ ಬಗ್ಗೆ ಸುದ್ಧಿ ಚಕಾರ ಎತ್ತುವುದಿಲ್ಲ. ಆ ಬಗ್ಗೆ ಮಹಿಳೆ ದೂರು ಏನಾದರೂ ಕೊಟ್ಟರೆ ಅವಳನ್ನೇ ಸಂಶಯದ ದೃಷ್ಟಿಯಿಂದ ನೋಡುತ್ತಾರೆ!ಒಂದಿನಿತಾದರೂ ಅನುಕಂಪ ಒಳ್ಳೆಯ ಮಾತುಗಳು ಬರಬೇಕಾದರೆ ಅವಳು ಸಾಯಲೇ ಬೇಕು !ಎನ್ನುವುದು ನಮ್ಮ ಸಮಾಜದ ದುರಂತ.
“.ಎಷ್ಟೋ ಜನರಿಗೆ; ಹೆಂಗಸರಿಗೆ ಕೂಡಾ ಆ ಬಗ್ಗೆ ಮಾತನಾಡುವುದೇ ತಮ್ಮ ಘನತೆಗೆ ಕುಂದು ಬರುವ ವಿಚಾರ” ಎಂಬುದನ್ನು ನಾವು ಅನೇಕ ಬಾರಿ ಗಮನಿಸುತ್ತೇವೆ . ಅದಕ್ಕೆ ಹೆಣ್ಣು ಮಕ್ಕಳ ವೇಷ ಭೂಷಣ ,ಹೊರಗೆ ಓಡಾಡುವುದೇ ಕಾರಣಗಳನ್ನು ಹೇಳಿ ಅದಕ್ಕೆ ಹೆಣ್ಣು ಮಕ್ಕಳೇ ಕಾರಣ ಎಂಬಂತೆ ಮಾತಾಡುತ್ತಾರೆ. ಹಾಗಿರುವಾಗ ಅನುಭವಿಸುವ ಹೆಣ್ಣು ಮಕ್ಕಳ ಪಾಲಿಗೆ ಬೆಟ್ಟವಾಗಿ ಕಾಡುವ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ತಲೆ ಕೆಡಿಸುವರು ಯಾರಿದ್ದಾರೆ ?ಆದರೆ ಯಾರೂ ಇಂಥ ವಿಚಾರಗಳ ಬಗ್ಗೆ ಅನ್ಯಾಯಗಳ ಬಗ್ಗೆ ಪ್ರಶ್ನಿಸದೇ ಇರುವುದರಿಂದ ಇಂಥವೇ ಸಣ್ಣ ಪುಟ್ಟ ವಿಷಯಗಳು ಬೆಟ್ಟದಂತೆ ಬೆಳೆದು ಅನೇಕ ಹೆಣ್ಣು ಮಕ್ಕಳ ಬದುಕನ್ನು ನುಂಗಿ ಹಾಕುತ್ತವೆ ,ಅವು ನಮ್ಮ ಮನೆಯ ಮಗಳು ,ತಾಯಿ ಹೆಂಡತಿ ಅಕ್ಕ ತಂಗಿಯರನ್ನೂ ಕೂಡಾ ನುಂಗ ಬಹುದು ಎನ್ನುವುದನ್ನು ಎಲ್ಲರೂ ನೆನಪಿನಲ್ಲಿಟ್ಟು ಕೊಳ್ಳ ಬೇಕಾಗಿದೆ