ಶಿಕ್ಷೆ, ಶಿಕ್ಷಣ ಎಂಬ ಪದಗಳಿಗೆ ಮೂಲತಃ ಒಂದೇ ಅರ್ಥವಿದೆ. ಅದು ಕಲಿಕೆ, ಜ್ಞಾನಾರ್ಜನೆ, ವಿದ್ಯಾಭ್ಯಾಸ, ತಿಳಿಯುವಿಕೆ, ತರಬೇತಿ, ಶಿಕ್ಷೆ ಎಂದರೆ ದಂಡನೆ, ದಂಡ ಎಂಬ ಅರ್ಥವೂ ನಮಗೆ ನೀಡುತ್ತದೆ.
ತಪ್ಪುಮಾಡಿದ ವ್ಯಕ್ತಿಗೆ ದಂಡನೆ ವಿಧಿಸುವದು ಕ್ರೋಧದಿಂದ ಅಥವಾ ಸೇಡುತೀರಿಸಿಕೊಳ್ಳುವ ಉದ್ದೇಶದಿಂದಲ್ಲ. ಅವನು ತನ್ನನ್ನು ತಾನೇ ತಿದ್ದಿಕೊಳ್ಳಲಿ ಎಂಬುದು ಮೂಲೋದ್ದೇಶ. ಶಿಕ್ಷಣವೂ ಒಂದು ರೀತಿಯಲ್ಲಿ ವ್ಯಕ್ತಿಯನ್ನು ತಿದ್ದುವ ಪ್ರಕ್ರಿಯೆಯೇ. ಶಿಕ್ಷೆ ಎಂಬುದರಿಂದಲೇ ಶಿಕ್ಷಣ ಪದ ಬಂದಿರಬಹುದು.
ಸಮಾಜದೊಂದಿಗೆ ವ್ಯಕ್ತಿ ಹೊಂದಿಕೊಂಡು ಬದಕುತ್ತ ತನ್ನ ಶ್ರೇಯೋಭಿವೃದ್ಧಿಗೆ ಬೇಕಾಗುವ ಸಾಮರ್ಥ್ಯ, ಕೌಶಲ ಮನೋಭಾವ ಮತ್ತು ವರ್ತನೆಗಳನ್ನು ರೂಢಿಸಿಕೊಳ್ಳಲು ಅವನಿಗೆ ನೆರವಾಗುವ ಚಟುವಟಿಕೆಗಳನ್ನುಒಳಗೊಂಡ ವ್ಯವಸ್ಥೆಯ ಸಮಗ್ರ ಪ್ರಭಾವವೇ ಶಿಕ್ಷಣ ಎಂದು ಸಾಮಾನ್ಯವಾಗಿ ಭಾವಿಸಬಹುದು.
ಸಮಾಜವೆಂಬುದು ನಿಂತ ನೀರಲ್ಲ. ಹಿಂದಿನ ತಲೆಮಾರುಗಳ ಅನುಭವದಿಂದ ರೂಪಗೊಂಡು ವ್ಯವಸ್ಥಿತವಾದ ಜ್ಞಾನವನ್ನು ಇಂದಿನ ತಲೆಮಾರಿನವರಿಗೆ ದೊರಕಿಸಿಕೊಡುವ ಕಲೆಯೇ , ವಿಧಾನವೇ ಶಿಕ್ಷಣ. ವ್ಯಕ್ತಿಯ ವಿಕಾಸಕ್ಕೆ ,ಅವನು ಪರಿಪೂರ್ಣೆನಿಸಿಕೊಳ್ಳುವದಕ್ಕೆ , ಸಮಾಜದ ಯೋಗ್ಯ ಸದಸ್ಯನಾಗಿ ವರ್ತಿಸುವದಕ್ಕೆ ಸೃಜನಾತ್ಮಕವಾಗಿ ಪ್ರಭಾವ ಬೀರುವದು ವಿದ್ಯಯೇ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಂಪದ್ಭರಿತವಾಗುವಂತೆ ಮಾಡಲು ವ್ಯಕ್ತಿಗೆ ತಕ್ಕ ಸಾಮರ್ಥ್ಯ ದೊರಕುವದು ಅವನು ಪಡೆಯುವ ಶಿಕ್ಷಣದಿಂದ.
ಬದುಕು ಸಾಧಿಸಲು ಅಗತ್ಯವಾದ ವ್ಯಕ್ತಿಯ ಕಸುಬು ಅಥವಾ ಉದ್ಯೋಗವೊಂದನ್ನು ಅನುಸರಿಸಲು ಅದು ವ್ಯಕ್ತಿಗೆ ತರಬೇತು ನೀಡುತ್ತದೆ. ಸಂಸ್ಕೃತಿಯ ಪೋಷಣೆಗೆ ನೆರವಾಗುತ್ತದೆ. ಕಲೆ, ಸಂಗೀತ, ದರ್ಶನ, ಚಿಂತನ, ಸಾಹಿತ್ಯ ಮುಂತಾದ ಎಲ್ಲ ಮಾನಸಿಕ ಚಟುವಟಿಕೆಗಳ ತಾಯಿಬೇರು ಶಿಕ್ಷಣ.
ಅದರದು ವಿಶ್ವರೂಪ. ಶಿಕ್ಷಣವೆಂಬುದು ಕಲಿಕೆ, ಇಲ್ಲದ ಜ್ಞಾನ ಪಡೆದುಕೊಳ್ಳುವದು, ಇರುವದನ್ನು ವೃದ್ಧಿಸಿಕೊಳ್ಳುವದು . ಕಲಿಕೆಯೆಂಬುದು ಬದಲಾವಣೆ; ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವದು, ಜ್ಞಾನವನ್ನು ಹೆಚ್ಚಿಸಿಕೊಳ್ಳುವದು, ಧೋರಣೆಗಳನ್ನು ಬದಲಿಸಿಕೊಳ್ಳುವದು, ಈ ಮೂರು ದಿಕ್ಕುಗಳಲ್ಲಿ ಸಾಧಿಸುವ ಬದಲಾವಣೆಯಿಂದ ವ್ಯಕ್ತಿ ಸಮಾಜಜೀವಿಯಾಗಿ ,ಸಮಾಜದೊಂದಿಗೆ ಸ್ಪಂದಿಸುತ್ತ , ಸಂವಾದ ನಡೆಸುತ್ತ, ಅದಕ್ಕೆ ತನ್ನ ಕೊಡುಗೆನೀಡುತ್ತ ಅದರಿಂದ ಪಡೆದುಕೊಳ್ಳುತ್ತ ಸಂತೃಪ್ತಿ ತಳೆಯುತ್ತಾನೆ. ಸಾರ್ಥಕತೆಯ ಭಾವ ಪಡೆಯುತ್ತಾನೆ. ಇಂತಹ ವ್ಯಕ್ತಿಗಳಿಂದ ಕೂಡಿದ ಸಮಾಜ ವಿಕಸನಶೀಲವಾಗಿರುತ್ತದೆ.
0 Followers
0 Following