ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ದಂಪತಿಗಳು ಹವ್ಯಾಸವಾಗಿ ಆರಂಭಿಸಿದ ಕೊಕ್ಕೊ ಚಾಕಲೇಟ್ ಈಗ ಉದ್ಯಮವಾಗಿ ಬೆಳೆದು ದೇಶಾದ್ಯಂತ ಮನೆ ಮಾತಾಗಿದೆ.
ಹೌದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಚ್ಚಿಮಲೆಯ ಕೇಶವ ಮೂರ್ತಿ ಮತ್ತು ಪೂರ್ಣಶ್ರೀ ದಂಪತಿಯ ಯಶೋಗಾಥೆ ಇದು.
ಪ್ರಪಂಚಾದ್ಯಂತ ಕೋವಿಡ್ ಸಂಕಷ್ಟ ಎದುರಾದಾಗ ಎಲ್ಲರೂ ಪೇಟೆಯಿಂದ ಹಳ್ಳಿಯತ್ತ ಬಂದರು.ಅದೇ ರೀತಿ ಇವರೂ ಕೂಡ ವರ್ಕ್ ಫ್ರಂ ಹೋಂ ಗೆ ಬೆಂಗಳೂರಿನಿಂದ ಮಚ್ಚಿಮಲೆಗೆ ಬಂದರು.
ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆಯೂ ಸ್ತಬ್ಧವಾಗಿತ್ತು. ಮಚ್ಚಿಮಲೆಯ ತೋಟದಲ್ಲಿ ಕೊಕ್ಕೋ ಬೆಳೆಯೂ ಸಾಕಷ್ಟಿತ್ತು. ಮಾರುಕಟ್ಟೆ ಇಲ್ಲದೆ ವ್ಯರ್ಥವಾಗುತ್ತಿತ್ತು.
ಇದನ್ನು ಗಮನಿಸಿದ ಈ ದಂಪತಿ , ಕೊಕ್ಕೋದಿಂದ ಚಾಕೋಲೇಟ್ ಮಾಡುವ ಯೋಚನೆಯಲ್ಲಿ ತೊಡಗಿದರು. ಆದರೆ ಅದನ್ನು ತಯಾರಿಸುವುದು ಹೇಗೆ ಎನ್ನುವುದು ಗೊತ್ತಿರಲಿಲ್ಲ.ಇಂಟರ್‌ನೆಟ್ ಮೂಲಕ ಯೂಟ್ಯೂಬ್, ಬ್ಲಾಗ್‌ಗಳು, ವೆಬ್‌ಸೈಟ್‌ಗಳ ಮಾಹಿತಿ ಆಧರಿಸಿ ಚಾಕಲೇಟ್ ತಯಾರಿಗೆ ಆರಂಭಿಸಿದರು.ಇವರ ಚಾಕಲೇಟ್ ಸ್ಯಾಂಪಲ್‌ಗೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಯಿತು.
ಅವರ ಯೋಚನೆಯಂತೆ ಉತ್ತಮ ಚಾಕಲೇಟ್ ತಯಾರಾಯಿತು.ಅದೇ ಮುಂದೆ ದೊಡ್ಡ ಪ್ರಮಾಣದಲ್ಲಿ ಚಾಕಲೇಟ್ ತಯಾರಿಸಲು ಪ್ರೇರಣೆ ನೀಡಿತು.ಇಂದು ಅದೇ `ಕೋಕೊ ಪಾಡ್ಸ್' ಎಂಬ ಬ್ರ‍್ಯಾಂಡ್ ನೇಮ್‌ನೊಂದಿಗೆ ವಿವಿಧ ಫ್ಲೇವರ್‌ನೊಂದಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿದೆ.
ಈ ಚಾಕಲೇಟ್ ವಿಶೇಷತೆ ಎಂದರೆ ಯಾವುದೇ ರಾಸಾಯನಿಕ ಬಳಸದೇ ಸಾವಯವ ಉತ್ಪನ್ನಗಳನ್ನೇ ಬಳಸಿಕೊಂಡು ತಮ್ಮ ಕೈಯಾರೇ ತಯಾರಿಸುವುದು.ಈಗ ಚಾಕಲೇಟ್ ತಯಾರಿ ಹಾಗೂ ಪ್ಯಾಕಿಂಗ್ ಇತ್ಯಾದಿಗಳಿಗೆ ಅಗತ್ಯವಾಗಿ ಬೇಕಾದ ಉಪಕರಣಗಳನ್ನು ಖರೀದಿಸಿ ಉದ್ಯಮ ಬೆಳೆಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದ ಫ್ಲಾಟ್‌ಫಾರಂ ಆಗಿರುವ ಇನ್‌ಸ್ಟಾಗ್ರಾಂ, -ಫೇಸ್‌ಬುಕ್‌ನಲ್ಲಿ ಖಾತೆ ತೆರೆದು,ಆರಂಭದಲ್ಲಿ ತಿಂಗಳಿಗೆ 10-15 ಚಾಕಲೇಟ್‌ಗಳು ಮಾರಾಟವಾಗುತ್ತಿತ್ತು.
ಈಗ ಏನಿಲ್ಲವೆಂದರೂ 200-250 ಚಾಕಲೇಟ್‌ಗಳಿಗೆ ದೇಶಾದ್ಯಂತ ಬೇಡಿಕೆ ಬರುತ್ತಿದೆ. ಕೆಲವೊಮ್ಮ ಮಾಸಿಕ 500ಕ್ಕೂ ಅಧಿಕ ಚಾಕಲೇಟ್‌ಗಳನ್ನು ತಯಾರಿಸಿ, ಮಾರಿದ್ದಾರೆ. ದೇಶದ ಎಲ್ಲಾ ರಾಜ್ಯಗಳ ಜನರಿಗೆ ಚಾಕಲೇಟ್ ರವಾನೆ ಮಾಡಿದ್ದೇವೆ ಎಂದು ಕೇಶವಮೂರ್ತಿ ಹೇಳುತ್ತಾರೆ.
`ಕೊಕೊ ಪಾಡ್ಸ್' ಚಾಕಲೇಟ್‌ಗಳಲ್ಲಿ ಯಾವುದೇ ರಾಸಾಯನಿಕ ಬಳಕೆ ಮಾಡದೇ ಬಾಳೆಹಣ್ಣು, ಆರೇಂಜ್, ಬಾದಾಮ್, ಪೈನಾಪಲ್, ಶುಂಠಿ ಸೇರಿದಂತೆ14 ಫ್ಲೇವರ್ಸ್‌ಗಳಲ್ಲಿ ತಯಾರಿಸಲಾಗುತ್ತದೆ.ಇವೆಲ್ಲಕ್ಕೂ ಆಯಾ ಹಣ್ಣು ಅಥವಾ ಬೀಜಗಳನ್ನೇ ಬಳಸಿ ನೈಸರ್ಗಿಕ -ಫ್ಲೇವರ್ಸ್‌ನೊಂದಿಗೆ ತಯಾರಿಸುತ್ತೇವೆ ಎಂದು ಪುಣ್ಯಶ್ರೀ ಹೇಳುತ್ತಾರೆ.
ಚಾಕಲೇಟ್ ಉತ್ಪನ್ನಗಳಲ್ಲಿ ಕೊಕ್ಕೊ ಪ್ರಮಾಣವನ್ನು ಶೇ.60ರಿಂದ ಶೇ. 100ರವರೆಗೆ ಬಳಸಿ ವಿವಿಧ ಬಗೆಯ ಚಾಕಲೇಟ್‌ಗಳು, ಸಕ್ಕರೆ ಹಾಗೂ ಬೆಲ್ಲ ಮಿಶ್ರಣ ಬಳಸುತ್ತಿದ್ದಾರೆ. ಹಾಗಾಗಿ ಈ ಸಾವಯವ ಚಾಕಲೇಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಈ ದಂಪತಿ ಲಾಕ್‌ಡೌನ್ ಮುಕ್ತಾಯದ ಬಳಿಕ ಬೆಂಗಳೂರಿಗೆ ಉದ್ಯೋಗಕ್ಕೆ ಮರಳಿದ್ದಾರೆ. ಬಿಡುವಿದ್ದಾಗ ಆಗಾಗ ಊರಿಗೆ ಬಂದು ಚಾಕೋಲೇಟ್ ತಯಾರಿಸಿ ಕೊಂಡೊಯ್ಯುತ್ತಾರೆ. ಸ್ಟಾಕ್ ಖಾಲಿಯಾದಾಗ ಮತ್ತೆ ಊರಿಗೆ ಬಂದು ಚಾಕಲೇಟ್ ತಯಾರಿಸುತ್ತಾರೆ.
ಕೊಕ್ಕೊ ಹಣ್ಣನ್ನು ಕಿತ್ತ ಬಳಿಕ ಬೀಜ ತೆಗೆದು ಸಂಸ್ಕರಿಸಿ, ಐದಾರು ದಿನ ಒಣಗಿಸಿ, ಹುರಿದು ಮತ್ತಿತರ ಪ್ರಕ್ರಿಯೆಗಳನ್ನು ಮುಗಿಸಿ ಚಾಕಲೇಟ್ ಮಾಡಲು 20 ದಿನಗಳ ಕೆಲಸವಾದರೂ ಇದೆ. ಈ ಕೆಲಸಗಳಿಗೆ ಕೇಶವಮೂರ್ತಿ ಅವರ ತಂದೆ, ತಾಯಿ ಸಹಾಯ ಮಾಡುತ್ತಾರೆ. ತಮ್ಮದೇ ಬೆಳೆಯನ್ನು ಮೌಲ್ಯವರ್ಧನೆಗೊಳಿಸಿ ಸ್ಟಾರ್ಟ್ಅಪ್ ಉದ್ಯಮವಾಗಿಸಲು ಬಯಸುವ ಯುವಕರಿಗೆ ಕೇಶವಮೂರ್ತಿ-ಪುಣ್ಯಶ್ರೀ ದಂಪತಿ ಪ್ರೇರಣೆ.ಸಂಪರ್ಕ - 8431925537