ಹಿಂತಿರುಗಿ ನೋಡದ ಹೊಳೆ..

ProfileImg
09 May '24
5 min read


image

                                      

ಹಿಂತಿರುಗಿ ನೋಡದೇ ಹೊಳೆ ....(ಮಿನುಗು,ಸಾಧಿಸು)

ನೆನಪುಗಳ ನೆರಳ ಕೆಳಗೆ ಬದುಕುವ ನಾವು ಅದರಿಂದ ಆಚೆ ಬರುವ ಪ್ರಯತ್ನವನ್ನೇ ಮಾಡುವುದಿಲ್ಲ. ಅದರಿಂದಾಗಿ ಹೊರಗಿನ ಪ್ರಪಂಚವನ್ನು ಎದುರಿಸುವಲ್ಲಿ ಸೋಲುತ್ತೇವೆ. ಬರುವ ಅವಕಾಶವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗುತ್ತೇವೆ. ಇಲ್ಲ-ಸಲ್ಲದನ್ನು ಅಪೇಕ್ಷಿಸುತ್ತೇವೆ. ಅದು ಸಿಗದಾದಾಗ ಪರಿತಪಿಸುತ್ತೇವೆ. ಕೊರಗುತ್ತೇವೆ, ಮರುಗುತ್ತೇವೆ. ಊಟ-ನಿದ್ದೆ ತೊರೆಯುತ್ತೇವೆ. ಪರಿಹಾರಗಳು ನಮ್ಮ ಬಳಿಯಲ್ಲೇ ಇದ್ದರೂ ಮನದ ಹತಾಷೆಯ ನಡುವೆ ಅದು ಕಾಣುವುದೇ ಇಲ್ಲ. ಬಲೆಯಲ್ಲಿ ಸಿಲುಕಿದ ಮೀನಿನಂತೆ ಎಲ್ಲವನ್ನೂ ಗೋಜಲು ಮಾಡಿಕೊಂಡು ತಡವರಿಸುತ್ತೇವೆ. ಮುಂದೆ ಬದುಕೇ ಇಲ್ಲವೇನೋ ಎನ್ನುವಂತೆ ಕೈ ಚೆಲ್ಲಿ ಕುಳಿತುಬಿಡುತ್ತೇವೆ.. ತಾಳ್ಮೆ ಎನ್ನುವುದು ಇಂದಿನ ಪೀಳಿಗೆಯಲ್ಲಿ ಇಲ್ಲವೇ ಇಲ್ಲ. ಬಯಸಿದ್ದು ದಕ್ಕಬೇಕು. ಇಲ್ಲದಿದ್ದರೆ ಸಾವೇ ಪರಿಹಾರ. ಎಷ್ಟೊಂದು ಭಾವುಕರಾಗಿಬಿಟ್ಟಿದ್ದಾರೆ ಇಂದಿನ ಮಕ್ಕಳು. ನಾವು ಚಿಕ್ಕವರಿದ್ದಾಗ ಒಂದು ಗಾದೆಯಿತ್ತು. ಕಲ್ಲು ತಿಂದು ಜಯಿಸಬೇಕು ಎಂದು. ಅಂದರೆ ಎಂತಹಾ ಕಷ್ಟವೇ ಬರಲಿ ಎಲ್ಲವನ್ನೂ ಎದುರಿಸಬೇಕು ಎಂದು. ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಬೇಕೇ ವಿನಃ ಇನ್ನಷ್ಟು ಗೋಜಲು ಮಾಡಿಕೊಳ್ಳಲು ಹೋಗಬಾರದು.ಏನೇ ಇರಲಿ ದೊಡ್ಡವರೊಂದಿಗೆ ಕೂತು ಮಾತನಾಡಬೇಕು. ಪರಿಹಾರ ಆ ಕ್ಷಣಕ್ಕೆ ಸಿಗದೇ ಇರಬಹುದು. ಮನಸ್ಸಂತೂ ಹಗುರವಾಯಿತಲ್ಲಾ. ಹಿರಿಯರಿಗೆ ವಿಷಯ ತಿಳಿದಿದೆ ಎಂಬ ನೆಮ್ಮದಿ ಇದ್ದೇ ಇರುತ್ತದೆ. ಅವರು ನಮ್ಮೊಡನಿದ್ದಾಗ ಯೋಚಿಸುವ ಅಗತ್ಯವೇ ಇಲ್ಲ.

ಮನೆಯ ಕಿಟಕಿಯಿಂದ ಒಂದಷ್ಟು ದೂರದಲ್ಲಿ ಒಂದು ನದಿ ಹರಿಯುತಿತ್ತು. ಅದರ ಬದುಗಳಲ್ಲಿ ಹಳದಿ ಹೂಗಳು ಅರಳಿ ನಗುತ್ತಿದ್ದವು. ಅವುಗಳ ರಸ ಹೀರಲು ದುಂಬಿಗಳು ಹಾತೊರೆಯುತ್ತಿದ್ದವು. ಹಸಿರ ಮೇಯಲು ದನ-ಕರುಗಳ ಹಿಂಡು ಕಾದಿತ್ತು. ಹೊಳೆಯ ಪಕ್ಕದ ಕಟ್ಟೆಯ ಮೇಲೆ ಒಬ್ಬ ಮುದುಕ ಗಾಳ ಇಳಿಬಿಟ್ಟುಕೊಂಡು ಮೀನುಗಳಿಗೆ ಬಲೆ ಬೀಸಿದ್ದನು. ಬರುವ ಮೀನುಗಳೆಲ್ಲಾ ಬಲೆಗೆ ಬೀಳುತ್ತಿರಲಿಲ್ಲ. ಬಾಲ ತಿರುಗಿಸಿಕೊಂಡು ನಡೆದುಬಿಡುತ್ತಿದ್ದವು. ನೀರ ಹಕ್ಕಿಗಳು ತಣ್ಣನೆಯ ನೀರಿನ ಮೇಲೆ ತೇಲುತ್ತಿದ್ದರೆ ಉಳಿದ ಹಕ್ಕಿಗಳು ಬಂದು ನೀರು ಕುಡಿದು ಅಲ್ಲಿರುವ ಮೀನು ತಿಂದು ಒಂದೆರಡು ಕೊಕ್ಕಿಗೆ ಸಿಕ್ಕಿಸಿ ಹೊರಟುಬಿಡುತ್ತಿದ್ದವು.  ಇದೆಲ್ಲಾ ನೋಡುತ್ತಿದರೆ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ. ಎಂತಹಾ ಸೋಜಿಗ ಎನ್ನುತ್ತಾ ಕಿಟಕಿಯನ್ನು ಸ್ವಚ್ಛವಾಗಿ ಒರೆಸಿ ಬರುತ್ತಿದ್ದೆ. ಅಲ್ಲಿ ಅದೇ ಘಟನೆ ಪದೇ ಪದೇ ಸಂಭವಿಸುತ್ತಿದ್ದರೂ ಅದೇನೋ ನೋಡಲು ಬೇಸರವೆನಿಸುತ್ತಿರಲಿಲ್ಲ. ಮನೆಯಲ್ಲಿ ಒಂಟಿಯಾಗಿರುತ್ತಿದ್ದ ನನ್ನ ಮನಸ್ಸಿಗೆ ಮುದ ಕೊಡುತ್ತಿತ್ತು. ಹಾಗೇ ಒಂದು ಕ್ಷಣ ಗೋಡೆಗೆ ಆತು ನೋಡುತ್ತಾ ನಿಂತುಬಿಡುತ್ತಿದ್ದೆ. ಹೊರಗಿನ ಪ್ರಪಂಚ ಅದೆಷ್ಟು ಸುಂದರ. ಒಮ್ಮೆಯಾದರೂ ಅಲ್ಲಿಗೆ ಹೋಗಬೇಕೆನಿಸುತಿತ್ತು. ಆದರೆ ಹೋಗುವ ಪ್ರಯತ್ನ ಮಾಡಿರಲಿಲ್ಲ. ಅದೊಂದು ಹೊಸ ಜಗತ್ತು ಎಂದೇ ಅನಿಸಿಬಿಟ್ಟಿತ್ತು. ಎಲ್ಲರಿಗೂ ಅದು ಸಹಜ ಅನಿಸಿರಬಹುದು. ಯಾವಾಗಲೂ ನಾಲ್ಕು ಗೋಡೆಗಳ ಮದ್ಯೆ ಇರುತಿದ್ದ ನನಗೆ ಅದು ಹೊಸ ರೀತಿಯಲ್ಲೇ ಕಾಣಿಸಿರಬೇಕು.

ಇದರಿಂದ ತಿಳಿಯುವುದೇನೆಂದರೆ ಒಬ್ಬರಿಗೊಬ್ಬರು ಎಷ್ಟು ಅವಲಂಭಿತರಾಗಿದ್ದೇವೆ ಎಂದು. ಇಲ್ಲಿ ಯಾರು ಯಾರ ಮೇಲೆ ಅವಲಂಭಿತರಾಗಿದ್ದೇವೆ ಎಂದು ಊಹಿಸುವುದು ಕಷ್ಟ. ಒಟ್ಟಿನಲ್ಲಿ ಅವಲಂಬನೆ ಅಂತೂ ಇದ್ದಧ್ದೇ..

ಒಮ್ಮೆ ಕಿಟಕಿಯ ಪಕ್ಕದ ಗೋಡೆಗೆ ಕಾಡು ಬಳ್ಳಿ ಹಬ್ಬಲಾರಂಭಿಸಿತು ನೋಡಿ. ಕಾಣುವ ದೃಶ್ಯಗಳೆಲ್ಲ ಅಸ್ಪ಼ಷ್ಟವಾಗತೊಡಗಿತು. ಹಾಗೆ ಅದರ ಸಂದಿಯಲ್ಲೇ ಇಣುಕುತಿದ್ದೆ. ಅಷ್ಟಿಷ್ಟು ಚಿತ್ರಣ ಮಾತ್ರ ಕಾಣಿಸುತ್ತಿತ್ತು. ಕ್ರಮೇಣ ಬಳ್ಳಿಯ ಹಬ್ಬುವಿಕೆ ಇನ್ನಷ್ಟು ಹೆಚ್ಚುತ್ತಾ ಹೋಯ್ತು..ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಭಾರವಾದ ಮನಸ್ಸಿನಿಂದ ಹೋಗಿ ಮೂಲೆಯಲ್ಲಿ ಕುಳಿತೆ . ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಎತ್ತಿ ಬಿಸಾಡಿದೆ. ತಲೆ ಕೆದರಿಕೊಂಡೆ. ಕಣ್ನಲ್ಲಿ ನೀರು ಧಾರಾಳವಾಗಿ ಸುರಿಯುತ್ತಾ ಹೋಯ್ತು. ಅತ್ತೂ ಅತ್ತೂ ಸುಸ್ತಾಗಿ ನಿದ್ದೆಯಾವರಿಸಿತು. ಅಲ್ಲೇ ನೆಲಕ್ಕೊರಗಿದೆ .ಎಚ್ಚರವಾದಾಗ ಕೆದರಿದ ಕೂದಲನ್ನು ಸರಿಪಡಿಸಿಕೊಂಡೆ . ಗಡಿಯಾರ ೬ ತೋರಿಸುತಿತ್ತು. ಹೋಗಿ ಮುಖ ತೊಳೆದು ಬಂದೆ. ತಂದೆ- ತಾಯಿ ಆಸ್ಪತ್ರೆ ಡ್ಯೂಟಿ ಮುಗಿಸಿ ಬರುವ ಹೊತ್ತಾಗಿತ್ತು. ಏನೂ ಆಗಿಲ್ಲದವಳಂತೆ ಪುಸ್ತಕ ಹಿಡಿದು ಕುಳಿತಿದ್ದೆ. ಅಮ್ಮ ಬಂದು ತಲೆ ಸವರಿ ಹೋದರು. ಕೆಲಸದವಳು ಬಂದು ಬೋರ್ನ್ವಿಟ ಕೊಟ್ಟು ಹೋದಳು. ಕುಡಿದು ಲೋಟ ಬದಿಗಿಟ್ಟೆ. ಹಾಗೆ ಹೋಂವರ್ಕ್‌ಮುಗಿಸಿ ಊಟ ಮಾಡಿ ಮಲಗಿದೆ . ತಂದೆ- ತಾಯಿ ರಾತ್ರಿ ಡ್ಯೂಟಿಗೆ ಮತ್ತೆ ಆಸ್ಪತ್ರೆಗೆ ತೆರಳಿದರು. ಕೋಣೆ ಬಾಗಿಲು ಹಾಕಿದೆ. ಮತ್ತದೇ ಕಿಟಕಿಯ ನೋಡುತ್ತಾ ಕುಳಿತೆ . ಅದೇ ಹೊಳೆ. ಚಂದಿರನ ಬೆಳಕಿಗೆ ಹೊಳೆಯುತ್ತ ಬೇಸರವಿಲ್ಲದೇ ಹರಿಯುತಿತ್ತು. ಪಕ್ಕದ ಮರದ ಮೇಲೆ ವಾಸವಿದ್ದ ಹಕ್ಕಿ ಆಗಾಗ ಗರಿ ಬಡಿಯುತಿತ್ತು. ಎಲ್ಲೋ ಗೂಬೆ ಹೂಂಕರಿಸುತಿತ್ತು. ಗಾಳಿಯ ಶಬ್ದ ಅಂತಹಾ ಜೋರಾಗೇನೂ ಇರಲಿಲ್ಲ. ಉಳಿದಂತೆ ಬೇರೇನೂ ಕಾಣಲಿಲ್ಲ. ಯಾರೋ ಲಾಟೀನ್‌ಹಿಡಿದು ಕೆಮ್ಮುತ್ತಾ ಬೆಳದಿಂಗಳ ನೆರಳಿನಲ್ಲಿ ನಡೆಯುತಿದ್ದರು. ನಾಯಿಗಳು ಪೆರೇಡ್‌ಹೊರಟಂತಿತ್ತು. ಉಳಿದಂತೆ ಎಲ್ಲಾ ಮಸುಕಾಗಿತ್ತು. ಬಹುಷಃ ರಾತ್ರಿಯ ಗುಟ್ಟು ಗೊತ್ತಿರುವುದು ಚಂದಿರನೊಬ್ಬನಿಗೇ..ಆ ಗುಟ್ಟನ್ನು ಅದು ಹೇಗೆ ಬಚ್ಚಿಡುತ್ತಾನೋ? ಆ ಕಾಡು ಬಳ್ಳಿ ಗಾಳಿಗೆ ಅತ್ತಿತ್ತ ಒನೆದು ಇನ್ನೂ ಸಿಟ್ಟು ತರಿಸುತಿತ್ತು. ಬೆಡ್ ಶೀಟ್‌ತಲೆಯವರೆಗೂ ಎಳೆದು ಮುದುಡಿ ಮಲಗಿಬಿಟ್ಟೆ . ಬೆಳಿಗ್ಗೆ ಎದ್ದಾಗ ಸೂರ್ಯನ ಕಿರಣಗಳು ನನ್ನ ಮೈ ಮುಚ್ಚಿದ್ದವು. ದಿನಕ್ಕಿಂತ ಜಾಸ್ತಿಯ ಬೆಳಕು ಅಂದಿತ್ತು. ಬಾಗಿಲು,ಗೋಡೆ ಎಲ್ಲದರ ಮೇಲೂ ಹೊಳಪಿನ ಬೆಳಕು. ಅರೆ ! ಇದೇನಾಯಿತು ಎಂದುಕೊಂಡೆ . ಕಿಟಕಿಯ ಕಡೆ ನೋಡಿದೆ. ಅದ್ಭುತವಾಗಿತ್ತು. ಎಲ್ಲಾ ಗುಟ್ಟುಗಳ ಮೂಟೆ ಕಟ್ಟಿ ಚಂದಿರ ತನ್ನೂರ ಸೇರಿದ್ದ. ಹಕ್ಕಿಗಳ ಗಾನ ಮುಂದುವರಿದಿತ್ತು.  ಆ ಹೊಳೆ ದಣಿವಿಲ್ಲದೆ ಹರಿಯುತ್ತಲೇ ಇತ್ತು. ನಿನ್ನೆ ಅರಳಿದ ಹೂವಿಗೂ ದುಂಬಿಗಳು ಮುತ್ತಿದ್ದವು. ದನ-ಕರುಗಳಿಗೆ ಮನೆಯಿಂದ ಬಿಡುಗಡೆ ಸಿಕ್ಕಿರಲಿಲ್ಲವೇನೋ ..ಅವು ಅಲ್ಲಿ ಕಾಣಿಸಲಿಲ್ಲ. ಲಾಟೀನು ಹಿಡಿದು ಹೋದ ಮುದುಕ ನಗುಮುಖದಿಂದ ಬರುತ್ತಿದ್ದ. ಎನೋ ಹೊಸತಾಗಿ ಕಾಣಿಸಿತು..ಅರ್ಥವಾಗಲಿಲ್ಲ. ಮತ್ತೊಮ್ಮೆ ಕಿಟಕಿಯ ಕಡೆ ನೋಡಿದೆ . ಕಾಡುಬಳ್ಳಿ ಅಲ್ಲಿರಲಿಲ್ಲ. ಹಿಂದಿನ ದಿನ ಅಷ್ಟೊಂದು ಅಳಿಸಿದ್ದ ಕಾಡುಬಳ್ಳಿ ಇಂದೆಲ್ಲಿ ಹೋಯಿತು? ಬಾಗಿಲು ತೆಗೆದು ಆಚೆಗೋಡಿದೆ. ಅಲ್ಲಿ ಹೋಗಿ ನೋಡಿದಾಗ ಲಾನ್‌ಸ್ವಚ್ಛಗೊಳಿಸಲಾಗಿತ್ತು. ಆ ಕಳೆಗಳ ಜೊತೆಗೆ ಕಾಡುಬಳ್ಳಿಯೂ ಹೊರಟುಹೋಗಿತ್ತು. ಇಷ್ಟು ಚಿಕ್ಕ ಕೆಲಸಕ್ಕೆ ನಾನು ಅಷ್ಟೆಲ್ಲಾ ಅತ್ತೆನೆ? ನಾನೇ ಬಂದು ಅದನ್ನು ಕಿತ್ತು ಬಿಸುಡಬಹುದಿತ್ತು. ಕೆಲಸದವರ ಹತ್ತಿರ ಕೀಳಿಸಬಹುದಿತ್ತು. ಅದ್ಯಾವುದೂ ನನ್ನ ತಲೆಗೆ ಹೊಳೆಯಲಿಲ್ಲವೇಕೆ? ಬುದ್ದಿ ಮನಸಿನ ಹಿಡಿತದಲ್ಲಿದ್ದಾಗ ಏನು ಮಾಡಬೇಕೆಂದು ತೋಚುವುದಿಲ್ಲ. ಎಷ್ಟೋ ಅನಾಹುತಗಳು ಆಗುವುದೇ ಹೀಗೆ . ನನಗೆ ನಾಚಿಕೆಯಾದಂತೆನಿಸಿತು. ಫೋನ್‌ಕಿರ್ಗುಟ್ಟುತಿತ್ತು. ಹೋಗಿ ದನಿ ಆಲಿಸಿದೆ . ನಿಮ್ಮ ತಂದೆ-ತಾಯಿಗೆ ವೈದ್ಯಕೀಯ ಸೇವೆಗೆ ಪ್ರಶಸ್ತಿ ಲಭಿಸಿದೆ. ಇದೇ ಭಾನುವಾರ ಸನ್ಮಾನವಿದೆ . ಅದೃಷ್ಟವಂತ ಮಗಳಮ್ಮ ನೀನು..ಅವರ ಹಾದಿಯಲ್ಲೇ ನಡಿ ಎಂದಿತೊಂದು ಹಿರಿಯ ದನಿ . ಮೊಬೈಲ್‌ಕೆಳಗಿಟ್ಟು ತಲೆ ತಗ್ಗಿಸಿದೆ . 

ಅಪ್ಪ-ಅಮ್ಮ  ನನ್ನ ಬಿಟ್ಟು ಮಜಾ ಮಾಡಲು ಹೋಗಿಲ್ಲವಲ್ಲ. ರಾತ್ರಿ- ಹಗಲೆನ್ನದೆ ಅಸಹಾಯಕರ ಸೇವೆ ಮಾಡುತ್ತಿದ್ದರು. ನನ್ನ ಸಂತೋಷ ಕಳೆದುಹೋಗಿದೆ ಎಂದು ಅವರಿಂದ ದೂರವಿದ್ದೆ. ಅವರನ್ನು ದ್ವೇಷಿಸುತ್ತಿದ್ದೆ. ಆದರೆ ಅವರು ಅವರ ಜೀವನವನ್ನೂ ವೃತ್ತಿಗಾಗೇ ತ್ಯಜಿಸಿರುವರಲ್ಲ. ಎಷ್ಟೋ ಮಕ್ಕಳಿಗೆ ತಂದೆ-ತಾಯಿ ಯನ್ನು ಉಳಿಸಿಕೊಟ್ಟರೆ, ಎಷ್ಟೋ ತಂದೆ-ತಾಯಿಯರಿಗೆ ಮಕ್ಕಳನ್ನು, ಅಜ್ಜ-ಅಜ್ಜಿಯರನ್ನು ಉಳಿಸಿಕೊಟ್ಟ ದೇವರುಗಳಲ್ಲವೇ ಅವರು. ಚಿಕ್ಕಂದಿನಿಂದ ಜೊತೆಗಿದ್ದ ಅಮ್ಮ ಇತ್ತೀಚಿಗೆ ಸೇವೆ ಶುರುಮಾಡಿದಳಲ್ಲ. ಈಗ ನಾನು ವಿದ್ಯಾವಂತೆ. ನಾನೂ ಅವರಿಗೆ ಸಹಕರಿಸಬೇಕು. ಅದು ಬಿಟ್ಟು ಸಿಟ್ಟಿನ ಕೈಗೆ ಮನದ ಹಿಡಿತ ಕೊಟ್ಟಿದ್ದೆನಲ್ಲಾ?  ಈ ತಪ್ಪು ಮುಂದಾಗದಂತೆ ನೋಡಿಕೊಳ್ಳುತ್ತೇನೆಂದು ನಿರ್ಧಾರ ಮಾಡಿದೆ. ಕೆಲಸದವಳಿಗೆ ಅಂದು ಒಂದಿಷ್ಟು ಹಣ ಕೊಟ್ಟು ಕೈಗೆ ಚಾಕ್ಲೇಟ್‌ಪೊಟ್ಟಣ ಕೊಟ್ಟು ಮನೆಗೆ ಕಳಿಸಿದೆ . ದಿನಾ ದುಡಿದು ದಣಿದಿದ್ದ ಜೀವ ಖುಷಿಯಾಗಿ ಹೊರಟುಹೋಯಿತು. ಮನೆ ನಾನೇ ಸ್ವಚ್ಛ ಮಾಡಿದೆ. ಮನೆಗೆ ಬಂದ ಪೋಷಕರು ನನ್ನಲ್ಲಾದ ಬದಲಾವಣೆ ನೋಡಿ ಖುಷಿಪಟ್ಟರು. ಕ್ಷಮೆ ಕೋರಿದ ನನಗೆ ಹರಸಿದ ಅವರ ಕಣ್ಣಂಚಿನಲ್ಲಿ ನೀರಿತ್ತು. ಎಲ್ಲವನ್ನೂ ವಿವರಿಸಿದೆ. ಮನವು ಹಗುರಾಗಿತ್ತು.

ಮರುದಿನ ಬೆಳಿಗ್ಗೆ . ಬೆಳಕು ಹರಿದಿತ್ತು . ದಾರಿಯಲ್ಲಿ ಹೋಗುತ್ತಿದ್ದ ಲಾಟೀನು ಅಜ್ಜನ ಕರೆದು ಆ ಹೊಳೆಯ ಹತ್ತಿರ ಹೋಗಿ ಬರೋಣ ಎಂದೆ. ಅಲ್ಲೀ ಏನೈತವ್ವಾ ? ಎಂದ ಅವನು. ಬಿಸಿ ಕಾಫಿ ಕುಡಿಸಿ ಹೋಗಿ ನೋಡೋಣ ನಡೆ ಎಂದೆ. ಕಾಫಿ ಹೀರುತ್ತಾ ನಗುತ್ತಾ ಹಿಂಬಾಲಿಸಿದ. ಸ್ವಲ್ಪ ದೂರ ನಡೆದಾಗ ಹೊಳೆ ಸಿಕ್ಕಿತು. ಮನೆಯಿಂದ ತುಂಬಾ ದೂರವೇನೂ ಇರಲಿಲ್ಲ. ಹೊಳೆಯ ಪಕ್ಕದಲ್ಲಿ ಸುಮ್ಮನೆ ಕುಳಿತೆ . ಒಮ್ಮೆಲೆ ನೂರು ಭಾವಗಳ ಹೊಳೆ ನನ್ನೊಳು ಹರಿದಂತಾಯಿತು. ಲಾಟೀನು ಪಕ್ಕಕ್ಕಿಟ್ಟು ಅಜ್ಜ ಕಟ್ಟಿಗೆ ಆಯತೊಡಗಿದ. ಅವನ ಜೀವನ ಪ್ರೀತಿ ನೋಡಿ.,ಬದುಕಿನ ಜಂಜಾಟಗಳ ಮರೆಯಬೇಕೆಂದರೆ ಇಂತಹಾ ಜಾಗಗಳಿಗೆ ಬರಬೇಕು. ಹಳೆಯದನ್ನು ಮರೆಮಾಚಿ ಹೊಸ ಬದುಕ ಕಟ್ಟಿಕೊಡುತ್ತವೆ. ಎಲ್ಲವೂ ಅದೇ. ಆದರೂ ಹೊಳೆ ಹರಿಯುವುದ ನಿಲ್ಲಿಸಿಲ್ಲ. ಜೇನು ಮಕರಂದ ಹೀರುವುದ ಬೇಸರಿಸಲಿಲ್ಲ. ಹೂವುಗಳು ಅರಳುವುದ ಮರೆಯಲಿಲ್ಲ. ನಿನ್ನೆ ಇದ್ದದ್ದೇ ಇವತ್ತೂ ಇದೆ. ಆದರೂ ಬೇಸರವೆನಿಸುವುದಿಲ್ಲ. ಅಲ್ಲಿ ಬಹುಮುಖ್ಯವಾಗಿ ಜಡತ್ವ ಎನ್ನುವುದಿಲ್ಲ. ಸದಾ ಚಟುವಟಿಕೆ. ಹೊಸತನ. ಹಾಗಾದಾಗ ಬೇಸರ ಬರಲು ಹೇಗೆ ಸಾದ್ಯ? ಸಂಜೆ ರಂಗ ತುಂಬಿಕೊಂಡು ಹೊಳೆ ಭಾವುಕವಾಗಿ ಹರಿಯುತಿತ್ತು. ನಾನು ಹೊಸದೊಂದು ಪಾಠವನ್ನೇ ಕಲಿತಿದ್ದೆ. ನಾನು ಮೊದಲೇ ಇಲ್ಲಿಗೆ ಬಹಳಷ್ಟು ಬಾರಿ ಬರಬಹುದಿತ್ತು. ಇರಲಿ, ಮತ್ತೆ ಮತ್ತೆ ಬರುತ್ತೇನೆ.. ಜೀವಂತಿಕೆಯನ್ನು ಮರಳಿ ಪಡೆಯಲು.

ಯಾವಾಗ ಬೇಸರವೆನಿಸಿದರೂ ಹರಿಯುವ ಹೊಳೆಯನ್ನೊಮ್ಮೆ ನೆನಪಿಸಿಕೊಳ್ಳುತ್ತೇನೆ. ನಾನೂ ಗಮ್ಯದೆಡೆಗೆ ಪಯಣ ಆರಂಭಿಸುತ್ತೇನೆ.

ಪ್ರಕೃತಿ ಕಲಿಸುವ ಪಾಠವೇ ಬಹಳಷ್ಟಿದೆ. ಕಲಿತುಕೊಳ್ಳುವ ಮನಸ್ಸು ನಮ್ಮ ನಿಮ್ಮಲ್ಲಿರಬೇಕು ಅಷ್ಟೆ!

  • ಸೌಮ್ಯ ಜಂಬೆ
Category:Fiction



ProfileImg

Written by Soumya Jambe