1857ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯ ನೇತೃತ್ವದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಅದಕ್ಕೂ ಮೊದಲು ಬ್ರಿಟಿಷರ ದಬ್ಬಾಳಿಕೆಯನ್ನು ಯಾರೂ ಪ್ರಶ್ನಿಸಿಲ್ಲ ಎಂದರ್ಥವಲ್ಲ.
ಅದಕ್ಕೂ 20 ವರ್ಷಗಳ ಮೊದಲೇ ಸುಳ್ಯ ರೈತಾಪಿ ಜನರು ಕಲ್ಯಾಣ ಸ್ವಾಮಿಯ ನೇತೃತ್ವದಲ್ಲಿ ಒಂದು ಹೋರಾಟ ನಡೆಸಿದ್ದರುಇದನ್ನು ಬ್ರಿಟಿಷರು ಕಲ್ಯಾಣ ಸ್ವಾಮಿಯ ದರೋಡೆ (ಕಾಟುಕಾಯಿ ) ಎಂದು ಕರೆದು ಹೋರಾಟಗಾರರನ್ನು ಸೆರೆ ಹಿಡಿದು ಗಲ್ಲಿಗೇರಿಸಿ ಹೋರಾಟದ ಧ್ವನಿ ಯನ್ನು ಹತ್ತಿಕ್ಕಿದರು
ಬ್ರಿಟಿಷ್ ಗವರ್ನರ್ ಜನರಲ್ ಡಾಲ್‍ಹೌಸಿ ಬಳಕೆಗೆ ತಂದ ನಿಯಮಾವಳಿಯ ಪ್ರಕಾರ ಮಕ್ಕಳಿಲ್ಲದ ಭಾರತೀಯ ರಾಜರುಗಳು ಬ್ರಿಟಿಷರ ಅನುಮತಿ ಇಲ್ಲದೆ ದತ್ತು ತೆಗೆದುಕೊಳ್ಳುವಂತಿರಲಿಲ್ಲ.
ದತ್ತು ತೆಗೆದುಕೊಳ್ಳುವುದಕ್ಕೆ ಮೊದಲೇ ರಾಜನು ಸತ್ತರೆ ಅಥವಾ ಆತನಿಗೆ ದತ್ತು ತೆಗೆದುಕೊಳ್ಳಲು ಅನುಮತಿ ಸಿಗದೆ ಇದ್ದರೆ ಆ ರಾಜನ ರಾಜ್ಯವು ಬ್ರಿಟಿಷರಿಗೆ ಸೇರುತ್ತಿತ್ತು. ಡಾಲ್‍ಹೌಷಿ ತಂದ ನಿಯಮದಿಂದಾಗಿ ಕೊಡಗು ರಾಜ್ಯ ಕೂಡ ಬ್ರಿಟಿಷರ ಪಾಲಾಗಬೇಕಾಗುತ್ತದೆ.
ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನು ಆಡಳಿತ ನಡೆಸುತ್ತಿದ್ದಾಗ ಸಮಯವನ್ನು ಹೊಂಚುಹಾಕುತ್ತಿದ್ದ ಬ್ರಿಟಿಷರು ಚಿಕ್ಕವೀರ ರಾಜೇಂದ್ರವನ್ನು ಪದಚ್ಯುತಗೊಳಿಸುತ್ತಾರೆ.
ಕೊಡಗಿನ ಅರಸರ ವಂಶಕ್ಕೆ ಸೇರಿದವರು ಯಾರು ಇಲ್ಲದ್ದರಿಂದ ಕೊಡಗು ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಳ್ಳುತ್ತಾರೆ.
ಆ ಸಮಯದಲ್ಲಿ ಬೆಳ್ಳಾರೆ, ಸುಳ್ಯ ಸೇರಿದಂತೆ ಪಂಜ ಸೀಮೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು.
ಕೊಡಗಿನ ಭಾಗವಾಗಿದ್ದ ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿದ್ದು ಸುಳ್ಳದ ಜನತೆಗೆ ಇಷ್ಟದ ವಿಚಾರವಾಗಿರಲಿಲ್ಲ. ಕೊಡಗರಸರ ಕಾಲದಲ್ಲಿ ಭತ್ತ, ತೆಂಗಿನಕಾಯಿ ಮೊದಲಾದ ವಸ್ತುಗಳ ರೂಪದಲ್ಲಿದ್ದ ಭೂಕಂದಾಯವನ್ನು ಬ್ರಿಟಿಷರು ನಗದಿನ ರೂಪದಲ್ಲಿ ಕೊಡಬೇಕೆಂದು ನಿಯಮ ತಂದರು. ಇದರಿಂದಾಗಿ ಸುಳ್ಯದ ರೈತಾಪಿಜನರು ತೀವ್ರವಾಗಿ ಅಸಮಾಧಾನಗೊಂಡರು. ಸುಳ್ಯದ ಜನರು ಬ್ರಿಟಿಷರನ್ನು ತೊಲಗಿಸಿ ಕೊಡಗನ್ನು ವಶಪಡಿಸಿಕೊಂಡು ಕೊಡಗಿನ ಆಡಳಿತವನ್ನು ಪುನರಾರಂಭಿಸಬೇಕೆಂದು ಒಮ್ಮತದಿಂದ ನಿರ್ಧರಿಸಿದರು.
ಇದರ ಫಲವಾಗಿ ಸುಳ್ಯ ಬೆಳ್ಳಾರೆ ಪರಿಸರದಲ್ಲಿ ಒಂದು ಸ್ವಾತಂತ್ರ್ಯ ಸಮರ ಆರಂಭವಾಗಿ 1837 ಎಪ್ರಿಲ್ 5ರಂದು ಮಂಗಳೂರಿನ ಕಲೆಕ್ಟರನ ಆಫೀಸಿನ ಎದುರು ಸ್ವತಂತ್ರ ಧ್ವಜವನ್ನು ಊರಿ, ಹದಿಮೂರು ದಿನಗಳ ಕಾಲ ಕೊಡಗು, ಕಾಸರಗೋಡು, ದ.ಕ.ಜಿಲ್ಲೆಯನ್ನೊಳಗೊಂಡ ಪ್ರದೇಶವು ಸ್ವಾತಂತ್ಯದ ಸಿಹಿಯನ್ನು ಅನುಭವಿಸಿತು.
ಇದರ ಫಲವಾಗಿ ಸ್ವತಂತ್ರ ನೆಲಕ್ಕಾಗಿ, ತಾಯ್ನಾಡಿಗಾಗಿ ಮೊದಲ ಸ್ವಾತಂತ್ರ್ಯ ಹೋರಾಟ ನಡೆಯಿತು.
ಆದರೆ ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ( ದರೋಡೆ) ಎಂದು ಕರೆದರು.
ಡಿ. ಎನ್. ಕೃಷ್ಣಯ್ಯನವರು ಹೇಳುವ ಪ್ರಕಾರ 1833ರಲ್ಲಿ ಅಪರಂಪರನೆಂಬ ಜಂಗಮನೊಬ್ಬ ತಾನು ಕೊಡಗಿನ ಲಿಂಗರಾಜೇಂದ್ರ ಒಡೆಯರ ಅಣ್ಣ ಅಪ್ಪಾಜಿಯ ಮಗ ವೀರಪ್ಪ ಒಡೆಯ ಎಂದು ಹೇಳಿಕೊಂಡಾಗ ಕೊಡಗಿನ ಜನರು ಅದನ್ನು ನಂಬುತ್ತಾರೆ. ಆದರೆ ಬ್ರಿಟಿಷರು ಆತನು ರಾಜವಂಶದವನಲ್ಲವೆಂದು ತಿಳಿದು 1835ರಲ್ಲಿ ಆತನನ್ನು ಬಂಧಿಸುತ್ತಾರೆ.
ಅಪರಂಪರನನ್ನು ಬಂಧಿಸಿದಾಗ ಕಲ್ಯಾಣಸ್ವಾಮಿ ಎಂಬಾತನು ತಾನು ಅಪ್ಪಾಜಿಯ ಎರಡನೇ ಮಗ ನಂಜುಂಡಪ್ಪ ಎಂದು ಹೇಳಿಕೊಂಡು ಸುಳ್ಯದಲ್ಲಿ ಜನರು ದಂಗೆ ಏಳುವ ಲಕ್ಷಣ ಕಾಣಿಸಿಕೊಂಡಾಗ ಅವನು ಕೊಡಗಿನವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದನು.ಬ್ರಿಟಿಷರಿಗೆ ಇದು ತಿಳಿದು ಆತನನ್ನು 1837ರಲ್ಲಿ ಬಂಧಿಸಿದರು.
ಸುಳ್ಯದ ರೈತಾಪಿ ಜನರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಹೇಳಿ ನಂಬಿಸಿ ಕೆದಂಬಾಡಿ ರಾಮಗೌಡರ ಮನೆಗೆ ಕರೆತಂದು ಆತನನ್ನು ಕಲ್ಯಾಣಸ್ವಾಮಿ ಎಂದು ಬಿಂಬಿಸಿದರು.
ರಾಮಗೌಡರಿಗೆ ಓರ್ವ ಬ್ರಿಟಿಷ್ ಅಮಲ್ದಾರನೊಡನೆ ದ್ವೇಷವಿದ್ದು ಆತನನ್ನು ರಾಮಗೌಡರು ಕೊಲ್ಲುತ್ತಾರೆ. ಇದನ್ನೇ ಮಹತ್ಕಾರ್ಯವೆಂದು ಭಾವಿಸಿದ ಸುಳ್ಯದ ಜನರು ದಂಗೆಯೇಳುವುದಕ್ಕೆ ಬೆಂಬಲಿಸಿದರು 1837 ಮಾರ್ಚ್ 30ರಂದು ಹೋರಾಟ ಆರಂಭವಾಯಿತು. ರಾಮಗೌಡರಿಗೆ ಕೂಜಗೋಡು ಮಲ್ಲಪ್ಪಗೌಡರ ಬೆಂಬಲ ದೊರೆಯಿತು. ಇಡೀ ಗೌಡ ಸಮುದಾಯ ಹೋರಾಟಕ್ಕೆ ಬೆಂಬಲ ನೀಡಿತು.
1837ರ ಮಾರ್ಚ್ 30ರಂದು ರಾಮಗೌಡರು ಬೆಳ್ಳಾರೆಗೆ ಕಲ್ಯಾಣಸ್ವಾಮಿಯನ್ನು (ಪುಟ್ಟ ಬಸಪ್ಪ) ಕರೆ ತರುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣ ಸ್ವಾಮಿಗೆ ಪಟ್ಟಕಟ್ಟುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡರು.
ಅಲ್ಲಿ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸುತ್ತ್ತಾರೆ . ಕೊಡಗಿನ ಬೇರೆ ಬೇರೆ ಭಾಗಗಳಿಗೆ ನಿರೂಪ ಕಳಿಸಿ ಬೆಂಬಲ ಕೇಳಿದರು. ಬೆಳ್ಳಾರೆಯ ಬೀರಣ್ಣ ಬಂಟರ ನೇತೃತ್ವದಲ್ಲಿ ಒಂದು ಗುಂಪು ಸುಬ್ರಹ್ಮಣ್ಯ ಕಡೆಗೆ ಹೋಯಿತು. ಶ್ರೀ. ಕೆ.ಆರ್. ವಿದ್ಯಾಧರ ಮಡಿಕೇರಿ ಅವರು ‘ಕಂಚುಡ್ಕ ರಾಮಗೌಡ ಹಾಗೂ ಕುಡಕಲ್ಲು ಪುಟ್ಟಗೌಡರ ನೇತೃತ್ವದಲ್ಲಿ ಸೈನ್ಯವನ್ನು ಕುಂಬಳೆ ಕಾಸರಗೋಡಿಗೆ ಕಳುಹಿಸಲಾಯಿತು.
ಇನ್ನೊಂದು ತಂಡ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮತ್ತೊಂದು ತಂಡ ಉಪ್ಪಿನಂಗಡಿ ಬಿಸಲೆಗೆ ಹೋಯಿತೆಂದು’ ಅಭಿಪ್ರಾಯ ಪಟ್ಟಿದ್ದಾರೆ. ಡಿ.ಎನ್. ಕೃಷ್ಣಯನವರ ಪ್ರಕಾರ ಪುತ್ತೂರು, ಪಾಣೆ ಮಂಗಳೂರು ಮತ್ತು ಮಂಗಳೂರಿಗೆ ರಾಮಗೌಡ ಹಾಗೂ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ದಂಡು ಹೊರಟಿತು.
ಪುತ್ತೂರನ್ನು ವಶಪಡಿಸಿಕೊಂಡು ಪಾಣೆಮಂಗಳೂರಿಗೆ ಬಂದಾಗ ನಂದಾವರದ ಲಕ್ಷ್ಮಪ್ಪ ಬಂಗರಸನು ಕೂಡಿಕೊಂಡನು. 1837 ಎಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿಕೊಂಡು ಬಾವುಟಗುಡ್ಡದಲ್ಲಿ ಧ್ವಜ ಹಾರಿಸಿದರು ಇಲ್ಲಿ 13 ದಿನ ಆಡಳಿತ ನಡೆಸಿದರು.
ಕೊಡಗಿನಲ್ಲಿ ಗುಡ್ಡೆಮನೆ ಅಪ್ಪಯ್ಯ ಹೋರಾಟಕ್ಕೆ ಬೆಂಬಲ ನೀಡಿದರಾದರೂ ಬ್ರಿಟಿಷರ ಕುಮ್ಮಕ್ಕಿನಿಂದಾಗಿ ಇತರರಿಂದ ಬೆಂಬಲ ಸಿಗಲಿಲ್ಲ ಜೊತೆಗೆ ತಲಚೇರಿ-ಕಣ್ಣನ್ನೂರುಗಳಿಂದ ಬ್ರಿಟಿಷ್ ಸೈನ್ಯ ಮಂಗಳೂರು ತಲುಪಿತು. ಇವರಲ್ಲಿ ಸಾವಿರಾರು ಜನರು ಇದ್ದರೂ ಕೂಡ ಕೋವಿಯಂಥ ಮಾರಕಾಯುಧಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಆದ್ದರಿಂದ ಕಲ್ಯಾಣಸ್ವಾಮಿ ತಪ್ಪಿಸಿಕೊಂಡು ಕಡಬದತ್ತ ಸಾಗಿದನು. ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾದ ಬ್ರಿಟಿಷ್ ಪರವಾದ ಹಿಂದುಗಳೇ ಇದ್ದ ಸೈನ್ಯವನ್ನು ಎದುರಿಸಲು ಆಗದೆ ಸೋಲಬೇಕಾಯಿತು. ನಾಲ್ಕು ನಾಡಿನ ಉತ್ತು, ಶಾಂತಳ್ಳಿ ಮಲ್ಲಯ್ಯ ಗುಡ್ಡೆಮನೆ ಅಪ್ಪಯ್ಯ, ಚೆಟ್ಟಿಕುಡಿಯ, ಕುರ್ತುಕುಡಿಯ, ಲಕ್ಷ್ಮಣ ಬಂಗರಸ ಮೊದಲಾದವರು ಸೆರೆ ಸಿಕ್ಕಿದರು.
1837 ಮೇ ತಿಂಗಳ ಎರಡನೇ ವಾರದಲ್ಲಿ ಕಲ್ಯಾಣಸ್ವಾಮಿಯನ್ನು ಬ್ರಿಟಿಷ್ ಸೈನಿಕರು ಸೆರೆಹಿಡಿದು ಆತನನ್ನು ಮಡಿಕೇರಿಗೆ ಕರೆತರುತ್ತಾರೆ ಬ್ರಿಟಿಷರು ಕಲ್ಯಾಣಸ್ವಾಮಿ(ಪುಟ್ಟ ಬಸಪ್ಪ) ಮತ್ತು ಲಕ್ಷ್ಮಪ್ಪ ಬಂಗರಸ ಇವರನ್ನು ಮಂಗಳೂರಿನ ಬೀರ್ನಕಟ್ಟೆಯಲ್ಲಿ ಗಲ್ಲಿಗೇರಿಸಿದರು.
ಗುಡ್ಡೆ ಮನೆ ಅಪ್ಪಯ್ಯರನ್ನು ಮಡಿಕೇರಿಯಲ್ಲಿ ಗಲ್ಲಿಗೇರಿಸುತ್ತಾರೆ. ಚೆಟ್ಟಿಕುಡಿಯ, ಕುರ್ತುಕುಡಿಯ ಮತ್ತು ಕೃಷ್ಣಯ್ಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಶಾಂತಯ್ಯ ಮಲ್ಲಳ್ಳಿ ಮೊದಲಾದವರಿಗೆ 7-14 ವರ್ಷಗಳ ತನಕ ಸೆರೆಮನೆವಾಸದ ಶಿಕ್ಷೆಯಾಯಿತು. ಡಾ ಪ್ರಭಾಕರ ಶಿಶಿಲರು ಹೇಳಿದಂತೆ ``ಸ್ವಾತಂತ್ರ್ಯ ಸಂಗ್ರಾಮವೆಂದಾಗ ಬೇಕಿದ್ದ ಈ ಹೋರಾಟವನ್ನು ಕಲ್ಯಾಣಪ್ಪನ ಕಾಟುಕಾಯಿ(ದರೋಡೆ) ಎಂದು ಬ್ರಿಟಿಷರು ಕರೆದರು.
ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡದ್ದು ಬಿಟ್ಟರೆ ಬೇರೆಯಾರ ಸಂಪತ್ತನ್ನು ಈ ಹೋರಾಟಗಾರರ ಗುಂಪು ದೋಚಲಿಲ್ಲ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಳ್ಳುವ ತನಕ ಬ್ರಿಟಿಷರಿಗೆ ಹೋರಾಟಕ್ಕಾಗಿ ಜನರ ಗುಂಪೊಂದು ಸಂಘಟಿತವಾದದ್ದು ತಿಳಿಯಲಿಲ್ಲ. ಖಜಾನೆಯನ್ನು ವಶಪಡಿಸಿಕೊಂಡಾಗ ಕೂಡ ದರೋಡೆ ಎಂದು ತಿಳಿದರೇ ಹೊರತು, ಅಲ್ಲೊಂದು ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ಧವಾದುದ್ದು ಬ್ರಿಟಿಷರ ಗಮನಕ್ಕೆ ಬರಲಿಲ್ಲ. ಅಷ್ಟರ ಮಟ್ಟಿಗಿನ ಮುಂಜಾಗರೂಕತೆಯನ್ನು ವಹಿಸಲಾಗಿತ್ತು. ಬೆಳ್ಳಾರೆಯ ಹಿರಿಯರ ಪ್ರಕಾರ ಪುತ್ತೂರು, ಸುಬ್ರಹ್ಮಣ್ಯ ಹಾಗೂ ಇತರೆಡೆಗೆ ದಂಡು ಸಾಗುವಾಗ ಮದುವೆ ದಿಬ್ಬಣದ ರೂಪದಲ್ಲಿ ಸಾಗುತ್ತಿತ್ತು. ಹೀಗೆ ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣನ್ನು ತಿನ್ನಿಸಿದ್ದರು. ಈ ಹೋರಾಟಗಾರರು ತೆಂಗಿನ ಮಡಲಿನ ಕೊತ್ತಲಿಂಗೆಯ ಮಂಡೆಯನ್ನು ಆಯುಧವಾಗಿ ಉಪಯೋಗಿಸಿಕೊಂಡಿದ್ದರು. ಈ ಹೋರಾಟಗಾರರ ಕೆಚ್ಚೆದೆಗೆ ಸಾಹಸಕ್ಕೆ ಸಾಕ್ಷಿಯಾದ ಬೆಳ್ಳಾರೆಯ ಕೋಟೆ ಈಗ ಕೂಡ ಇದೆ. ಇವರು ವಶಪಡಿಸಿಕೊಂಡ ಬ್ರಿಟಿಷರ ಖಜಾನೆ ಕೂಡ ಇದೆ. ಬೆಳ್ಳಾರೆಯ ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಸೇರಿಕೊಂಡು ಬೆಳ್ಳಾರೆಯ ಕೋಟೆ ಇದೆ. ಈ ಪ್ರದೇಶವನ್ನು ಈಗ ಬಂಗ್ಲೆಗುಡ್ಡೆ ಎಂದು ಕರೆಯುತ್ತಾರೆ. ಬ್ರಿಟಿಷರ ಖಜಾನೆ ಇದ್ದ ಬಂಗಲೆಯ ಕಾರಣಕ್ಕೆ ಇಲ್ಲಿಗೆ ಬಂಗ್ಲೆಗುಡ್ಡೆ ಎಂ ಬ ಹೆಸರು ಬಂದಿದೆ.
ಸ್ವತಂತ್ರ ಧ್ವಜ ಹಾರಾಡಿದ ಬೆಳ್ಳಾರೆಯ ಈ ಕೋಟೆಯನ್ನು ಸ್ಮಾರಕವಾಗಿ ರಕ್ಷಿಸಬೇಕಾಗಿದೆ .ಜೊತೆಗೆ ಇಲ್ಲಿ ಸ್ವತಂತ್ರ ಧ್ವಜ ಹಾರಿಸಿದ ನೆನಪಿಗಾಗಿ ಇದೇ ಜಾಗದಲ್ಲಿ ಪ್ರತಿ ಸ್ವಾತಂ ತ್ರ್ಯ ದಿನಾಚರಣೆಯಂದು ಇಲ್ಲಿ ನಮ್ಮ ದೇಶದ ಧ್ವಜವನ್ನು ಹಾರಿಸಿ ಈ ಸ್ವಾತಂ ತ್ರ್ಯ ಹೋರಾಟವನ್ನು ಮತ್ತು ಹುತಾತ್ಮರಾದ ಕಲ್ಯಾಣ ಸ್ವಾಮೀ ಹಾಗು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವ ಸೂಚಿಸುವ ಕಾರ್ಯ ಅಗತ್ಯವಾಗಿ ಆಗ ಬೇಕಾಗಿದೆ .
ಡಾ.ಲಕ್ಷ್ಮಿ ಜಿ ಪ್ರಸಾದ
ಕಲ್ಯಾಣ ಸ್ವಾಮಿ ಸ್ವತಂತ್ರ ಧ್ವಜ ಹಾರಿಸಿದ ಕೋಟೆ
ಆದಾರ
ಅಮರ ಸುಳ್ಯದ ಕ್ರಾಂತಿ - ಲೇ ದೇವಿ ಪ್ರಸಾದ್
ಸ್ಥಳೀಯ ವಕ್ತೃಗಳು ನೀಡಿದ ಮೌಖಿಕ ಮಾಹಿತಿ