ಸಾಮಾಜಿಕ ಜಾಲತಾಣದಲ್ಲಿ ಇದೇ ನನ್ನ ಚೊಚ್ಚಲ ಲೇಖನವಾಗಿದ್ದು, ನನ್ನ ಬರವಣಿಗೆಯ ಆರಂಭವನ್ನು ಕಲ್ಪನಾಲೋಕದಿಂದಲ್ಲದೆ ನನ್ನದೇ ಆದ ಸ್ವಂತ ಅನುಭವದಿಂದಲೇ ಪ್ರಾರಂಭಿಸಿದ್ದೇನೆ. ಸಣ್ಣಪುಟ್ಟ ವ್ಯಾಕರಣ ದೋಷಗಳು ಹಾಗು ಮತ್ತಿನ್ನಿತರ ಯಾವುದೇ ತಿದ್ದುಪಡಿಗಳು ಇದ್ದಲ್ಲಿ ದಯಮಾಡಿ ತಿಳಿಸಿ ಸರಿಪಡಿಸಲು ಸಹಕರಿಸಿ, ನನ್ನನ್ನು ಅನುಸರಿಸಿ ಎನ್ನುವುದು ಪ್ರಿಯ ಓದುಗರಲ್ಲಿ ನನ್ನ ಮನವಿ.
ಬಾಲ್ಯದಲ್ಲಿ ಪ್ರಾಯಶಃ ಸವಿನೆನಪು ಮೂಡುವುದೆಂದರೆ ಅಜ್ಜಿ ಮನೆ( ತಾಯಿಯ ತವರುಮನೆ) ಯಿಂದಲೇ ಎಂದರೆ ಬಹುಶಃ ತಪ್ಪಾಗಲಾರದೇನೋ ಚಿಕ್ಕಂದಿನಲ್ಲಿ ಅಲ್ಲಿ ಕಳೆದ ಅದೆಷ್ಟೋ ನೆನಪುಗಳು ಎಂದೂ ಹಿಂತಿರುಗಿಬಾರದವು ಎಂತಲೂ ಹೇಳಬಹುದು. ಎಲ್ಲರಂತೆಯೇ ನನಗೂ ನನ್ನ ತಾಯಿಯ ಮನೆಗೂ ವಿಶೇಷ ನಂಟು ಅದರಲ್ಲೂ ವಿಶೇಷವಾಗಿ ನನ್ನ ಸೋದರಮಾವ ಅಂದರೆ ನನ್ನ ತಾಯಿಯ ಅಣ್ಣನ ಮಕ್ಕಳ ಜೊತೆಗಂತೂ ಅದರಲ್ಲೂ ಕೃಷ್ಣವೇಣಿ ಮತ್ತು ಗೋವಾ ಒಡಹುಟ್ಟಿದವರಿಗಿಂತಲು ನನಗೆ ಹತ್ತಿರವಾದವರು. ಹೀಗೆ ಒಂದುಸಲ ನನ್ನ ಅಜ್ಜಿ ಮನೆಯಾದ ಕುಡುತಿನಿಗೆ ಹೋಗಿ, ಅದ್ಹೇಗೆ ಹೋಗಿದ್ದೂ ಯಾರ ಜೊತೆ ಹೋಗಿದ್ದೋ ನೆನಪಿಲ್ಲ ಆದರೆ ಹೋಗಿದ್ದಂತೂ ಹೌದು, ಕುಡುತಿನಿಯಲ್ಲಿ ಬರೀ ನನ್ನ ತಾಯಿಯ ತವರುಮನೆಯವರಷ್ಟೇ ಅಲ್ಲದೆ ನನ್ನ ಗಂಡನಮನೆಯವರ ಬಳಗವು ಅಪಾರ ನನ್ನ ಪತಿಯು ಒಂದು ರೀತಿಯಲ್ಲಿ ನನ್ನ ತಾಯಿಯ ತವರ ತಳಿ ಎನ್ನಲೂ ಬಹುದು ಆದರೆ ವಾಸ್ತವದಲ್ಲಿ ನನ್ನ ಗಂಡನಮನೆ ಕಂಪ್ಲಿ ಪಕ್ಕದ ನಂ.9 ಕಣವಿ ತಿಮ್ಮಲಾಪುರ ಎನ್ನುವ ಗ್ರಾಮ. ನಾನು ಕುಡುತಿನಿಯಲ್ಲಿದ್ದೇನೆ ಆದರೆ ನಮ್ಮ ಅಜ್ಜಿ ಮನೆಯಲ್ಲಲ್ಲದೆ ಯಾರೋ ಬೇರೊಬ್ಬರ ಮನೆಯ ಮಹಡಿಮೇಲೆ. ಅಲ್ಲಿಯೇ ನನ್ನ ಎದುರಿಗೆ ನನ್ನ ಸೋದರಮಾವನ ಮಕ್ಕಳಾದ ಕೃಷ್ಣವೇಣಿ ಹಾಗು ಗೋವಾ ಏನೋ ಮಾತನಾಡುತ್ತಾ ಯಾವುದೋ ಒಂದು ವಿಷಯವಾಗಿ ಚರ್ಚಿಸುತ್ತಾ ಮಧ್ಯಮಧ್ಯದಲ್ಲಿ ಆಫೀಸ್ ಫೋನಲ್ಲಿ ಅವಳು ಗೆಳೆಯರ ಫೋನಲ್ಲಿ ಅವನು ಬ್ಯುಸಿಯಾಗಿದ್ದಾರೆ. ಜೊತೆಗೆ ಅದ್ಯಾವುದೋ ಹಬ್ಬದ ಸಂಭ್ರಮ ಬೇರೆ ಎಲ್ಲರ ಮನೆಯಲ್ಲೂ ಯಾರೋ ಒಬ್ಬರು ಅತಿಥಿ ಅದರಲ್ಲೂ ಹಳ್ಳಿಗಳ ಕಡೆ ಮಹಡಿಯ ಮೇಲಿನ ಗಲಾಟೆಯ ಒಂತರ ವಿಶೇಷ. ಅಂತೆಯೇ ನಾವು ಸಹ ಮಹಡಿಯಮೇಲೆ ಇರುವುದಾದರೂ ನಾನೊಂದು ಮಹಡಿ ಅವರಿಬ್ಬರೊಂದು ಮಹಡಿ ಹಾಗೆಯೇ ಅಚಾನಕ್ಕಾಗಿ ಒಬ್ಬರಿಗೊಬ್ಬರ ಮುಖದರ್ಷನವಾಗಿ ಆ ಕೂಡಲೇ ಅವರಿಬ್ಬರೂ ಯಾವಾಗ ಬಂದೆ ? ಎಂದು ಬಾ ಮನೆಗೆ ಎಂದು ಸನ್ನೆಯ ಮೂಲಕ ಮಾತನಾಡಿಸಿದರು. ನಾನು ಸಹ ಅವರಂತೆಯೇ ಸನ್ನೆಯ ಮುಖಾಂತರವೇ ಉತ್ತರಿಸಿ ಬಂದೆ ಎಂದು ಹೇಳಿದೆ. ಅಷ್ಟರಲ್ಲಿ ಅಲ್ಲೊಬ್ಬ ವ್ಯಕ್ತಿ ಬಂದು, ಓ ಶ್ರೀಮಾತ! ಎಂದು ಆಶ್ಚರ್ಯದಿಂದಲೆ ಅವ್ರನ್ನು ನೋಡುತ್ತಾ ನನ ಹೆಸರು ಹೇಳಿದರು ಆ ವ್ಯಕ್ತಿ. ...
ನನಗೂ ನನ್ನ ತಾಯಿ ಮನೆಗೂ ಹಾಗೂ ನನ್ನ ಗಂಡನ ಮನೆಗೂ ಹೊರಗಿನವರೇನಲ್ಲ ಆದರೂ ನಾನಿಲ್ಲಿ ಆ ವ್ಯಕ್ತಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲೂ ಸಾದ್ಯವಿಲ್ಲ, ಇದೊಂದು ಕಾರಣದಿಂದ ಓದುಗರಲ್ಲಿ ಕ್ಷಮೆಯಿರಲೇಬೇಕಿದೆ. ಅಂದಿಗೆ ಆ ವ್ಯಕ್ತಿ ನನ್ನ ಜೀವನದಲ್ಲಿರಲು ಸರಿಸುಮಾರು ಹತ್ತುವರ್ಷ ಅಂದರೆ ನನ್ನ ಪತಿ ಪರಶಿವನ ಮುನ್ನವೇ ನನ್ನ ಬದುಕಲ್ಲಿ ಆ ವಿಶೇಷ ವ್ಯಕ್ತಿಯ ಆಗಮನವಾಗಿತ್ತಾದರು ವಿಪರ್ಯಾಸವೆಂದರೆ ಆ ವ್ಯಕ್ತಿ ನನಗೆ ವಿಶೇಷ ಎಂದು ತಿಳಿಯುವಷ್ಟರಲ್ಲಿಯೇ ಜೀವನದನ ಬಹುತೇಕ ಘಟ್ಟಗಳನ್ನು ನಾನಾಗಲೇ ತಲುಪಿದ್ದಾಗಿತ್ತು. ಆದರೂ ಅವರು ಅದ್ಯಾವುದನ್ನೂ ಲೆಕ್ಕಿಸದೇ ಅದೆಷ್ಟೋ ವಿಷಯಗಳಲ್ಲಿ ನನಗೆ ಸಹಕಾರಿಯಾಗಿ, ಮಾರ್ಗದರ್ಶಕರಾಗಿ ಒಟ್ಟಾರೆ ಹೇಳಬೇಕೆಂದರೆ ಒಬ್ಬ ಮಹಿಳೆಗೆ ತನ್ನವರೆನಿಸಿಕೊಂಡವರು ಅದೆಷ್ಟು ವಿಷಯಗಳಲ್ಲಿ ಯಾವ್ಯಾವ ರೀತಿಯಲ್ಲಿ ಜೊತೆನಿಂತು ಪ್ರೋತ್ಸಾಹಿಸಿ ಮುನ್ನಡೆಸಬೇಕೋ, ಅಕ್ಷರಶಃ ನನ್ನ ಜೊತೆಯಲ್ಲಿರದಿದ್ದರು ಸದಾಕಾಲ ನನ್ನೆಲ್ಲಾ ಯೋಚನೆ ಹಾಗು ನನ್ನ ಆಗುಹೋಗುಗಳಲ್ಲಿ ಜೊತೆಯಿದ್ದವರಾಗಿದ್ದರು. ತಮ್ಮೆಲ್ಲವನ್ನು ಅವರು ನನಗಾಗಿ ಧಾರೆಯೆರೆದವರಾದರು ಪ್ರಸ್ತುತ ಸಮಯದಲ್ಲಿ ನನ್ನ ಕೆಲ ದ್ವಂದ್ವಗಳಿಂದಾಗಿ ಅವರನ್ನು ತುಸು ದೂರವೇ ಇಟ್ಟಿದ್ದೆ ಆದರೆ ಅವರು ಯಾವತ್ತೂ ಸಹ ಇದಕ್ಕೆ ಕಾರಣ ಹುಡುಕುವ ಪ್ರಯತ್ನವೂ ಸಹ ಮಾಡಲಿಲ್ಲ ಎನ್ನುವುದು ನನ್ನ ಅಭಿಪ್ರಾಯ ಏಕೆಂದರೆ ಬಹುಶಃ ನನ್ನ ಅವರ ಆ ಬಾಂಧವ್ಯ ಅಷ್ಟು ಸುಲಭಕ್ಕೆ ವಿಭಜನೆಗೊಳ್ಳುವುದಲ್ಲ ಎಂಬ ಸತ್ಯ ಅವರಿಗೆ ಈ ಮೊದಲೇ ತಿಳಿದಿತ್ತೇನೋ. ವಿಷಯದ ವಿಶ್ಲೇಷಣೆ ಬೇರೆಡೆ ಮೂಡಿದಂತಾಯಿತು, ಪ್ರಸ್ತುತಕ್ಕೆ ಮರಳುವುದಾದರೆ, ನಾನು ಮಹಡಿಯಿಂದ ತುಸು ತೂರ್ತಾಗಿಯೇ ಕೆಳಗಿಳಿದು ಬಂದೆ ಕಾರಣ ನನ್ನ ಸೋದರ ಮಾವನ ಮಕ್ಕಳು ಕರೆದರು ಎನ್ನುವುದಕ್ಕಿಂತ ನಾನು ಬಾಯ್ತೆರೆದು ಹೇಳದಿದ್ದರೂ ಅದನರಿತು ಆ ವ್ಯಕ್ತಿ ನನಗೋಸ್ಕರ ಅಲ್ಲಿಗೆ ಬಂದರು ಎಂಬ ಖುಷಿಯೇ ನನ್ನಲ್ಲಿ ತುಳುಕಾಡುತ್ತಿತ್ತು. ಕೊನೆಗೂ ನಾವೂ ನಾಲ್ಕೂ ಜನ ಮುಖಭೇಟಿಯಾದ ಕ್ಷಣ, ಅದು ಇದು ಎಂದು ಮಾತನಾಡಿ ಯಾರಪಾಡಿಗವರು ಹೊರಟೆವಾದರು ನಾನು ಮತ್ತು ಕೃಷ್ಣವೇಣಿ ಮಾತ್ರ ಸಂಸಾರ ಸಾಗರದಲ್ಲಿ ಮುಳುಗೇಳುತ್ತಿರುವ ಕಾರಣ ನಮ್ಮದಿನ್ನು ಮಾತಿನ ಸರದಿ ಬಾಕಿ ಇತ್ತೇನೋ? ಅಥವಾ ನನಗಾಗಿ ಬಂದಿರುವ ಆ ವ್ಯಕ್ತಿಯ ಕಾರಣದಿಂದಲೇ ನಾನಿನ್ನು ಅಲ್ಲಿಯೇ ಇದ್ದೆನೋ ಏನೋ? ನಿಜಕ್ಕೂ ಯಕ್ಷಪ್ರಶ್ನೆ.
ಅಲ್ಲಿ ಮಾತನಾಡುತ್ತಿರುವುದು ನಾನು ಅವಳು ಆದರೂ, ಅದರ ಹಿಂದಿನ ಮರ್ಮ ಪ್ರಾಯಶಃ ಅವಳಿಗೆ ತಿಳಿದಿತ್ತೇನೊ ಅದಕ್ಕಾಗಿ ಅವಳು ನಮಗನುಕೂಲವಾಗುವಂತೆ ಅವಳು ಹೊರಗಡೆ ನಿಂತು ನಮ್ಮನ್ನು ಮಾತ್ರ ಒಳಗಡೆ ಇರಿಸಿದ್ದಳು. ಇಬ್ಬರೂ ದೂರದಲ್ಲಿಯೇ ಇದ್ದರೂ ಸಹ ಮಾತಲ್ಲಿ ಮಾತ್ರ ಹೇಳಲಾಗದಷ್ಟು ಮುಂದುವರೆದ ಕಾರಣ ಯಾರಾದರೂ ಬರಬಹುದೇನೋ ಎಂಬ ಭಯ ನನಗಂತೂ ತುಸು ಹೆಚ್ಚಾಗಿಯೇ ಕಾಡುತ್ತಿತ್ತು. ಅದೇ ಸಮಯಕ್ಕೆ ಸರಿಯಾಗಿ ಯಾರೋ ಬಂದಂತೆ ಭಾಸವವಾಯಿತು. ಮಾತಿನ ದಾರಿ ಅಲ್ಲಿಗೆ ಕವಲೊಡೆದು ಅದ್ಯಾರು ಬರುತ್ತಿರಬಹುದು ಎಂಬ ನಿರೀಕ್ಷಣೆಯಲ್ಲಿದ್ದೆವು. ಆಗ ಅಲ್ಲಿಗೆ ಬಂದದ್ದು, ಸಂಬಂಧದಲ್ಲಿ ನನಗೆ ಮಾವ ಹಾಗೂ ನನ್ನ ಪ್ರಾಥಮಿಕ ಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕರಾದ ಜಿ.ವೆಂಕಟೇಶ್ ಸರ್ ಅವರ ಆಗಮನವಾಯಿತು ಅವರನ್ನು ಕಂಡಕೂಡಲೇ ಯಾವುದೇ ತರಹದ ಭಾವನೆ ನನಗಾಗ ಮೂಡಲಿಲ್ಲ ಯಾಕೆಂದರೆ ಈ ಮೊದಲೇ ಹೇಳಿದಂತೆ ಅವರು ನನ್ಗೆ ಸಂಬಂಧಿಕರಾದ ಕಾರಣ ಕುಡುತಿನಿಯಲ್ಲಿ ಅವರ ಬಳಗವು ಇದ್ದುದರಿಂದ ಬಂದಿದ್ದರೇನೋ ಆದರೆ ಅವರ ಜೊತೆಗಿರುವ ವ್ಯಕ್ತಿಯನ್ನು ನೋಡಿ ನನಗಂತೂ ನಿಜಕ್ಕು ಒಂದು ಕ್ಷಣ ಮೈ ರೋಮಾಂಚನಗೊಳಗಾಯಿತು.
ತುಸು ಎತ್ತರನೆಯ ನಿಲುವು, ಸಾಧಾರಣ ಮೈಕಟ್ಟು , ಗೊದಿಬಣ್ಣ, ಗಂಭೀರದ ನಡಿಗೆ, ತಕ್ಷಣಕ್ಕನಿಸುವ ಕೋಪದ ಕಣ್ಗಳು. ಇಷ್ಟು ಆ ವ್ಯಕ್ತಿಯ ಗುಣಲಕ್ಷಣಗಳು ಎನ್ನಬಹುದೇನೋ...... ಅವರನ್ನು ನೋಡಿ ನಾನು ಸ್ವಲ್ಪ ಗಾಬರಿಗೊಂಡೆನಾದರು ಒಂದುಸಲವಾದರು ಅವರ ಜೊತೆ ಮತ್ತೊಮ್ಮೆ ಮಾತನಾಡಬೇಕಿನಿಸುವ ಹುಂಬತನವಂತೂ ಇತ್ತು ಇನ್ನೂ ಈಗಲೂ ಇದೆ ಎನ್ನಲೂಬಹುದು. ನನ್ನ, ಕೃಷ್ಣವೇಣಿ ಮತ್ತು ಆರಂಭದಲ್ಲಿ ನಾನು ಹೇಳಿದ ಆ ವ್ಯಕ್ತಿಯ ಮಾತು ಅದೆಷ್ಟೇಷ್ಟೊ ಬಾಕಿಯಿತ್ತಾದರೂ, ನನಗೆ ಅದಕ್ಕಿಂತ ಮುಖ್ಯ, ವೆಂಕಟೇಶ್ ಸರ್ ಅವರ ಜೊತೆಗೆ ಬಂದಿದ್ದ ಆ ಇನ್ನೊಬ್ಬ ವ್ಯಕ್ತಿಯ ಮೇಲಿನ ವ್ಯಾಮೋಹ ಅಪಾರವಾಗಿತ್ತು. ಆ ಕೂಡಲೇ ಇವರಿಬ್ಬರನ್ನು ಬಿಟ್ಟು ಆ ಎರಡನೆಯ ವ್ಯಕ್ತಿ ಇದ್ದಲ್ಲಿಗೆ ಹೋದೆ ಅಲ್ಲಿದ್ದ ವೆಂಕಟೇಶ್ ಸರ್ ಬಹುಶಃ ನನಗೆ ಕಾಣಲೇ ಇಲ್ಲವೇನೋ ಅದಕ್ಕಾಗಿ ನಾನು ಮೇಲೆ ವರ್ಣಿಸಿದ ಆ ವ್ಯಕ್ತಿಯೊಂದಿಗೆ ಮಾತಿಗಿಳಿದೆ.
ಮೊದಲಿಗೆ...., ಅಪ್ಪಾ.... ಎಂದು ನನ್ನ ಮಾತು ಪ್ರಾರಂಭಿಸಿದೆ ಆ ಕೂಡಲೇ ನನ್ನ ತಂದೆಯಾದ ಆ ವ್ಯಕ್ತಿ ನನ್ನಕಡೆ ತಿರುಗಿ ನೋಡಿದರು ಅವರನ್ನು ಕಂಡು ನನಗೆ ಅಳು ಒತ್ತರಿಸಿ ಬಂದಂತಾಯಿತು, ಗಂಟಲು ಕಟ್ಟಿದಂತಾಗಿ ಮಾತಾಡಲು ಆಗದಂತಾಯಿತು ಆದರೂ ಅವರ ಮುಂದೆ ಹೇಳಿ- ಕೇಳಬೇಕಾದ ಅದೆಷ್ಟೋ ವರುಷದ ಮಾತುಗಳ ಕಂತೆ ಹಾಗೆ ಉಳಿದ ಕಾರಣ, ಹಾಗೇ ಏರುಪೇರಿನ ಧ್ವನಿಯಿಂದಲೇ ನನ್ನಪ್ಪನೊಂದಿಗೆ ನನ್ನ ಮಾತಿನ ಸರದಿಯನ್ನು ಈ ರೀತಿಯಾಗಿ ಮುಂದುವರೆಸಿದೆ:
ಎಲ್ಲರೂ ತಮ್ಮ ತಮ್ಮ ಮಕ್ಕಳನ್ನು ಅದೆಷ್ಟೋ ಪ್ರೀತಿ ಮತ್ತು ಕಾಳಜಿ ಇಂದ ಬೆಳೆಸುತ್ತಾರೆ ಆದರೆ ನೀವು ಮಾತ್ರ ಯಾವ ಒಂದು ದಿನವಾದರೂ ನಮ್ಮನ್ನು ಅಕ್ಕರೆಯಿಂದ ಅಪ್ಪಿಕೊಳ್ಳಲಿಲ್ಲ, ಸಲಿಗೆಯಿಂದ ಹೆಗಲೇರಿಸಿಕೊಳ್ಳಲಿಲ್ಲ, ಒಂದೇ ತಟ್ಟೆಯಲ್ಲಿ ತಿನ್ನಲಿಲ್ಲ, ಇನ್ನೂ ಕೈತುತ್ತಂತೂ ಬಹಳ ದೂರದ ಮಾತು. ಆದರೂ ಯಾವೊಂದು ದಿನವೂ ನನಗೆ ನಿಮ್ಮ ಮೇಲೆ ಕೋಪವೇ ಬರದಿರಲು ಕಾರಣ ನಿಮ್ಮ ಮಾಡದಿಯಾದ ನನ್ನ ತಾಯಿ. ಅಂದು ಇದ್ದಕ್ಕಿಂದ್ದಂತೆ ಮಾಯವಾದಿರಿ ಇಂದು ಹೇಳಿ ಕೇಳದೆಯೇ ಪ್ರತ್ಯಕ್ಷವಾದಿರಿ ? ಏನಿದರ ಒಳಅರ್ಥ ?
ಎಂದು ಉಸಿರಾಡಲು ಅವಕಾಶವಿರದಂತೆ ಬಿಟ್ಟು ಬಿಡದೆ ಪ್ರಶ್ನಿಸಿದೆ. ಅದಕ್ಕವರ ಪ್ರತಿಕ್ರಿಯೆ ಕೇವಲ ಅವರ ಮುಗುಳ್ನಗೆ ಅಷ್ಟೇ ಆಗಿತ್ತು. ನನಗೆ ಅರಿವಿರದೆ ನಾನು ನನ್ನ ಎರಡೂ ಕಂಗಳನ್ನು ಮುಚ್ಚಿ ಏನೋ ತಲೆಭಾರವೆನ್ನುವಂತೆ ಆ ಕಡೆ ಈ ಕಡೆ ತಲೆಯಾಡಿಸುತ್ತಿದ್ದೆ.ಅಷ್ಟರಲ್ಲಿ "ಮ್ಮಾ.... ಬ್ರೂ,,, ಮ್ಮಾ.... ಬ್ರೂ,,, ಎಂಬ ಸದ್ದು ಕಿವಿಗೆ ಬಿತ್ತು, ಕೆನ್ನೆ ಮತ್ತು ಗಲ್ಲದ ಮೇಲೆ ಹೂವಿನ ಎಸಳಿನಷ್ಟೇ ಕೋಮಲವಾದ ಗರಿಗಳ ಸ್ಪರ್ಶದನುಭವ ಜೊತೆ ಜೊತೆಗೆ ಪುಟ್ಟಮಗು ನರಳುವ ಸದ್ದು ದಿಗ್ಬ್ರಮೆಗೊಂಡು ತಕ್ಷಣ ಮೇಲಕ್ಕೆದ್ದೆ, ಹದಿನೈದು ತಿಂಗಳ ನನ್ನ ಮಗ ಬಾಯಾರಿದ ಕಾರಣ ತನ್ನ ನೀರಿನ ದಾಹ ತೀರಿಸಿಕೊಳ್ಳಲು ಮಲಗಿದ್ದ ನನ್ನನ್ನು ಎಬ್ಬಿಸ್ಸಿದ್ದ. ಹೇಳಿಕೊಳ್ಳುವಷ್ಟು ಅಲ್ಲದೆ ಹೋದರು ಆಗಾಗ ನೆನೆಯುವಷ್ಟು ತುಸು ಗಾಬರಿಗೊಂಡ ನಾನು ಅಲ್ಲಿಯೇ ನನ್ನ ತಲೆದಿಂಬಿನ ಪಕ್ಕದಲ್ಲಿದ್ದ ಮೊಬೈಲ್ ನೋಡಿದಾಗ ಸಮಯ 02:44 ಆಗಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ ಆ ಸಮಯದ ಮೇಲಿದ್ದ ದಿನಾಂಕ 01.05.2024 ಎಂದು ತುಸು ಹೆಚ್ಚಾಗಿಯೇ ಒತ್ತರಿಸಿ ಕಾಣಿಸಿತು. ಅದು ಯಾಕಿರಬಹುದೆಂದು ಯೋಚಿಸುವಷ್ಟರಲ್ಲಿ ನನ್ನ ಮಗನ ಅಳು ಸ್ವಲ್ಪ ಹೆಚ್ಚಾಯಿತು. ಕಂಡ ಕನಸನ್ನು ಹಾಗು ನೋಡಿದ ಸಮಯ ಮತ್ತು ದಿನಾಂಕವನ್ನು ಪಕ್ಕಕ್ಕಿಟ್ಟು ಮಗುವಿಗೆ ನೀರು ಕುಡಿಸಿ ಸ್ವಲ್ಪ ಬೆಂತಟ್ಟಿ ಮತ್ತೆ ಮಲಗಿಸುವಷ್ಟರಲ್ಲಿ ಗಂಟೆ ನಾಲ್ಕಕ್ಕೆ ತಲುಪುವ ಹೊತ್ತು.
ನನ್ನ ತಂದೆ ನಮ್ಮನ್ನೆಲ್ಲ ಅಗಲಿದ್ದು 11-11-2011 ರಲ್ಲಿ, ಅಂದರೆ ಇಲ್ಲಿಗೆ ಬರೋಬ್ಬರಿ 13 ವರ್ಷ ಆದರೆ ಇಷ್ಟು ದಿನಗಳಲ್ಲಿ ಯಾವೊಂದು ದಿನವೂ ನನ್ನ ಕನಸಲ್ಲಾಗಲಿ ಅಥವಾ ಮನದಲ್ಲಾಗಲಿ ಅವರ ಯಾವೊಂದು ಯೋಚನೆಯೂ ಇದ್ದಿಲ್ಲ ಕಾರಣ ಇಷ್ಟೇ ಅಪ್ಪ ಎನ್ನುವ ಪದದ ಅರ್ಥ ತಿಳಿಯುವಷ್ಟರಲ್ಲಿಯೇ ನನ್ನ ಅಪ್ಪ ಇಹಲೋಕವನ್ನು ತ್ಯಜಿಸಿದ್ದರು. ನಾನವರ ಜೊತೆಯಾಡಿದ ಮಾತಾಗಲಿ ಆಟ-ಪಾಟವಾಗಲಿ ನನಗೆ ನೆನಪೇ ಇಲ್ಲ. ಇದೇ ಅವರ ಕುರಿತಾಗಿ ನಾ ಕಂಡ ಮೊದಲ ಕನಸು.
***ಮುಕ್ತಾಯ***
King's Queen