ಫ್ರೆಂಚ್ ಓಪನ್ ಟೂರ್ನಿಯಲ್ಲಿ ನೊವಾಕ್ ಜೋಕೋವಿಕ್ ಗಾಯಗೊಂಡು ನಿರ್ಗಮಿಸುವುದರೊಂದಿಗೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಟೆನಿಸ್ ಜಗತ್ತಿನಲ್ಲಿ ಆಳುತ್ತಿದ್ದ ಅನಭಿಷಿಕ್ತ ಸಾಮ್ರಾಜ್ಯವೊಂದರ ಅವನತಿಗೆ ಅಧಿಕೃತವಾಗಿ ಮುನ್ನುಡಿ ಬರೆದಂತಾಗಿದೆ. ಟೆನಿಸ್ ಜಗತ್ತಿನಲ್ಲಿ ಇಂಥದ್ದೊಂದು ನಿರಂಕುಶ ಪ್ರಭುತ್ವ ಈ ಹಿಂದೆಂದೂ ಇರಲಿಲ್ಲ ಎನ್ನುವುದು ಅಂಕಿ ಅಂಶಗಳೇ ಸಾರಿಹೇಳುವ ಸತ್ಯ. ಮುಕ್ತಯುಗ ಆರಂಭವಾದ ಮೇಲೆ ರಾಡ್ ಲೇವರ್, ಬೋರ್ನ್ ಬೋರ್ಗ್, ಜಿಮ್ಮಿ ಕಾನರ್ಸ್, ಜಾನ್ ಮೆಕೆನ್ರೋ, ಮ್ಯಾಟ್ಸ್ ವಿಲಾಂಡರ್, ಇವಾನ್ ಲೆಂಡ್ಲ್, ಬೋರಿಸ್ ಬೆಕರ್, ಸ್ಟೀಫನ್ ಎಡ್ಬರ್ಗ್, ಪೀಟ್ ಸಾಂಪ್ರಾಸ್, ಆಂಡ್ರೆ ಅಗಾಸ್ಸಿ ಹೀಗೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದ ಆಟಗಾರರಿದ್ದರು. ಆದರೆ ಆ ಯಾವ ಕಾಲದಲ್ಲೂ ಕಳೆದ ಎರಡು ದಶಕಗಳಿಂದ ಕಂಡುಬಂದ ಏಕಚಕ್ರಾಧಿಪತ್ಯ (ಬಹುಶಃ ಅದನ್ನು ತ್ರಿಚಕ್ರಾಧಿಪತ್ಯ ಎಂದರೆ ಹೆಚ್ಚು ಸೂಕ್ತವಾದೀತೇನೋ) ಕಂಡುಬಂದಿರಲಿಲ್ಲ ಎನ್ನುವುದ ಅಷ್ಟೇ ಸತ್ಯ. ಆದರೆ “ಆಲ್ ಥಿಂಗ್ಸ್ ಗುಡ್ ಆರ್ ಬ್ಯಾಡ್ ಮಸ್ಟ್ ಕಮ್ ಟು ಆನ್ ಎಂಡ್” ಎಂಬ ಆಂಗ್ಲ ನಾಣ್ಣುಡಿಯಂತೆ ಈ ಅನಭಿಷಿಕ್ತ ಸಾಮ್ರಾಜ್ಯದ ಕೊನೆಯ ಕೊಂಡಿಯೂ ಕಳಚುವ ದಿನಗಳು ಹತ್ತಿರವಾಗುತ್ತಿವೆ. ಹಾಗಾದರೆ ಯಾವುದೀ ಸಾಮ್ರಾಜ್ಯ?
ಇದು ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ನೊವಾಕ್ ಜೋಕೋವಿಕ್ ಅವರನ್ನೊಳಗೊಂಡ ಸಾಮ್ರಾಜ್ಯ. ಈ ಮೂವರ ಸಾಮ್ರಾಜ್ಯ ಎರಡು ದಶಕಗಳಿಂದ ಟೆನಿಸ್ ಜಗತ್ತಿನಲ್ಲಿ ಎಂಥ ಹಿಡಿತ ಹೊಂದಿತ್ತು ಎನ್ನುವುದನ್ನು ಅಂಕಿ ಅಂಶಗಳೇ ಸಾರಿಹೇಳುತ್ತವೆ. ಏಕೆಂದರೆ ಜೋಕೋವಿಕ್ 24, ನಡಾಲ್ 22 ಹಾಗೂ ಫೆಡರರ್ 20 ಗ್ರ್ಯಾಂಡ್‌ಸ್ಲಾಮ್‌ಗಳನ್ನು ಗೆದ್ದಿದ್ದಾರೆ. ಅಂದರೆ ಮೂವರೂ ಸೇರಿ 66 ಗ್ರ್ಯಾಂಡ್‌ಸ್ಲಾಮ್ ಗೆದ್ದಿದ್ದಾರೆ. 2003ರಲ್ಲಿ ಫೆಡರರ್ ವಿಂಬಲ್ಡನ್ ಗೆಲ್ಲುವುದರಿಂದ ಈ ಪಯಣ ಆರಂಭವಾಯಿತು. ಅಲ್ಲಿಂದ ಹಿಡಿದು ಈ ವರ್ಷದ ಆಸ್ಟ್ರೇಲಿಯನ್ ಓಪನ್‌ವರೆಗೆ ಒಟ್ಟು 82 ಗ್ರ್ಯಾಂಡ್‌ಸ್ಲಾಮ್‌ಗಳು ನಡೆದಿವೆ. ಈ ಅವಧಿಯಲ್ಲಿ ಆಡಿರುವ ಆಟಗಾರರ ಸಂಖ್ಯೆ ಸಾವಿರಾರು. ಆದರೆ ನಡೆದಿರುವ ಟೂರ್ನಿಗಳಲ್ಲಿ ಮುಕ್ಕಾಲುಭಾಗಕ್ಕಿಂತ ಹೆಚ್ಚಿನ ಪ್ರಶಸ್ತಿಗಳನ್ನು ಕೇವಲ ಮೂರು ಜನ ಹಂಚಿಕೊಂಡಿದ್ದಾರೆ ಎಂದರೆ ಅವರ ಹಿಡಿತ ಹೇಗಿತ್ತೆಂಬುದಕ್ಕೆ ಒಂದು ಸಣ್ಣ ಅಂದಾಜು ನಿಮಗೆ ಸಿಗಬಹುದು. ಫೆಡರರ್ ಅವರಿಂದ ಸ್ಥಾಪನೆಯಾದ ಈ ಸಾಮ್ರಾಜ್ಯಕ್ಕೆ 2005ರಲ್ಲಿ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ರಾಫೆಲ್ ನಡಾಲ್ ಕಾಲಿಟ್ಟರು. ಮುಂದೆ 2008ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ನೊವಾಕ್ ಜೋಕೋವಿಕ್ ಸಹ ಅವರನ್ನು ಸೇರಿಕೊಂಡರು. ಆದರೆ ಅವರು ಕೊನೆಯವರಾಗಿ ಸೇರಿಕೊಂಡರೂ ಉಳಿದವರನ್ನೆಲ್ಲ ಹಿಂದೆ ಹಾಕಿ ಮುನ್ನಡೆದಿದ್ದಾರೆ. ಸದ್ಯಕ್ಕಂತೂ ಅವರ 24 ಗ್ರ್ಯಾಂಡ್ ಸ್ಲಾಮ್‌ಗಳ ದಾಖಲೆಯನ್ನು ಮುರಿಯುವ ಆಟಗಾರ ಕಾಣಿಸುತ್ತಿಲ್ಲ. ಸ್ಪೇನಿನ ಯುವಕ ಕಾರ್ಲೋಸ್ ಅಲ್ಕರಾಜ್ ಭವಿಷ್ಯದ ದೊರೆಯಾಗಿ ಕಾಣಿಸಿಕೊಂಡಿದ್ದಾನೆ. ಅವನ ಜೊತೆಗೆ ಯಾನಿಕ್ ಸಿನ್ನರ್, ಡ್ಯಾನಿಲ್ ಮೆಡ್ವೆಡೇವ್ ಮುಂತಾದ ಹೊಸಬರ ಆಗಮನವಾಗಿದೆ. ಆದರೆ ಈ ಮೂವರು ಫೆಡರರ್, ನಡಾಲ್ ಮತ್ತು ಜೋಕೋವಿಕ್ ಆಳಿದಂತೆ ಟೆನಿಸ್ ಜಗತ್ತನ್ನು ಆಳುತ್ತಾರಾ? ಆ ಸಾಧ್ಯತೆ ಕಡಿಮೆ ಎನ್ನಿಸುತ್ತದೆ. ಏಕೆಂದರೆ ಆ ಮೂವರೂ ಟೆನಿಸ್ ಜಗತ್ತು ಕಂಡ ಸರ್ವಶ್ರೇಷ್ಠ ಆಟಗಾರರಾಗಿದ್ದರು. ಮೂವರು ಸರ್ವಶ್ರೇಷ್ಠರು ಒಂದೇ ಕಾಲಘಟ್ಟದಲ್ಲಿ ಆಡುವುದು ಅಪರೂಪದಲ್ಲಿ ಅಪರೂಪದ ವಿದ್ಯಮಾನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ನಮ್ಮ ಜೀವಮಾನದ ಅವಧಿಯಲ್ಲಿ ಇಂಥದ್ದೊಂದು ವಿದ್ಯಮಾನವನ್ನು ನೋಡುತ್ತಿದ್ದೇವೆ ಎನ್ನುವುದು ನಿಜಕ್ಕೂ ಅದೃಷ್ಟದ ಸಂಗತಿಯೇ ಸರಿ.
ಬ್ರಿಟನ್ನಿನ ಆಂಡಿ ಮರ್ರೆ ಸಹ ಆರಂಭದಲ್ಲಿ ಇವರೊಂದಿಗೆ ಪೈಪೋಟಿ ನೀಡುತ್ತಿದ್ದರು. ಆ ಕಾಲದಲ್ಲಿ ಈ ನಾಲ್ವರನ್ನು ಬಿಗ್ ಫೋರ್ ಎಂದು ಕರೆಯಲಾಗುತ್ತಿತ್ತು. ಆದರೆ ಕ್ರಮೇಣ ಮರ್ರೆ ಈ ಪೈಪೋಟಿಯಲ್ಲಿ ಮೂವರಿಗಿಂತ ಬಹಳ ಹಿಂದೆ ಬಿದ್ದರು. ಹಾಗಾಗಿ ಬಿಗ್ ಫೋರ್ ಹೋಗಿ ಈಗ ಬಿಗ್ ತ್ರೀ ಎಂದು ಕರೆಯಲಾಗುತ್ತಿದೆ. ಆದರೆ ಈ ಸಲ ಆಸ್ಟ್ರೇಲಿಯನ್ ಓಪನ್‌ನಲ್ಲಿ ನೊವಾಕ್ ಜೋಕೋವಿಕ್ ಸೆಮಿಫೈನಲ್‌ನಲ್ಲಿ ಯಾನಿಕ್ ಸಿನ್ನರ್ ಅವರಿಗೆ ಮಣಿದರು. ಸಿನ್ನರ್ ಫೈನಲ್‌ನಲ್ಲೂ ಗೆದ್ದು ಪ್ರಶಸ್ತಿ ಗೆದ್ದರು. ಇದೀಗ ಫ್ರೆಂಚ್ ಓಪನ್‌ನಲ್ಲಿ 14 ಸಲದ ಚಾಂಪಿಯನ್ ನಡಾಲ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಮೇಲೆ ಕ್ವಾರ್ಟರ್‌ಫೈನಲ್‌ನಲ್ಲಿ ಜೋಕೋವಿಕ್ ಗಾಯಗೊಂಡು ಪಂದ್ಯ ಆಡದೇ ಹೊರನಡೆಯುವುದರೊಂದಿಗೆ 2003ರ ನಂತರ ಕೇವಲ ಎರಡನೇ ಬಾರಿಗೆ ಸತತ ಎರಡು ಗ್ರ್ಯಾಂಡ್‌ಸ್ಲಾಮ್‌ಗಳಲ್ಲಿ ಬಿಗ್ ತ್ರೀಗಳನ್ನು ಹೊರತುಪಡಿಸಿ ಬೇರೆ ಆಟಗಾರ ಪ್ರಶಸ್ತಿ ಗೆಲ್ಲುವುದು ಖಾತ್ರಿಯಾಯಿತು. (ಈ ಮೊದಲು 2016ರ ವಿಂಬಲ್ಡನ್‌ನಲ್ಲಿ ಆಂಡಿ ಮರ್ರೆ ಮತ್ತು ಯುಎಸ್ ಓಪನ್‌ನಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕಾ ಗೆದ್ದಿದ್ದು ಈ ಮೊದಲ ಉದಾಹರಣೆ) ಜೊತೆಗೆ ನಡಾಲ್ ಅಂತೂ ಈಗಲೇ ಗಾಯದಿಂದ ಚೇತರಿಸಿಕೊಂಡಿಲ್ಲ ಎನ್ನುವುದು ಖಚಿತವಾಗಿರುವ ಸಂದರ್ಭದಲ್ಲೇ ಜೋಕೋವಿಕ್ ಸಹ ತಾನು ಎಷ್ಟರಮಟ್ಟಿಗೆ ಫಿಟ್ ಆಗಿದ್ದೇನೆಂದು ಗೊತ್ತಿಲ್ಲ ಎಂದಿರುವುದರಿಂದ ಸದ್ಯದಲ್ಲೇ ಆರಂಭವಾಗುವ ವಿಂಬಲ್ಡನ್‌ನಲ್ಲೂ ಬಿಗ್ ತ್ರೀಗಳ ಹೊರತು ಇನ್ನೊಬ್ಬ ವ್ಯಕ್ತಿ ಗೆಲ್ಲುವ ಸಾಧ್ಯತೆಯೇ ಹೆಚ್ಚು ಎನ್ನಿಸುತ್ತಿದೆ. (ಫೆಡರರ್ ಈಗಾಗಲೇ ನಿವೃತ್ತರಾಗಿರುವುದರಿಂದ ನಡಾಲ್ ಮತ್ತು ಜೋಕೋವಿಕ್ ಇಬ್ಬರೇ ಉಳಿದಿದ್ದಾರೆ.) ಇನ್ನು 2003ರಿಂದ 2023ರವರೆಗಿನ 21 ವರ್ಷಗಳ ಕಾಲ ಈ ಮೂವರಲ್ಲಿ ಒಬ್ಬರಾದರೂ ಒಂದಾದರೂ ಗ್ರ್ಯಾಂಡ್‌ಸ್ಲಾಂ ಗೆದ್ದಿದ್ದಾರೆ.
ಇನ್ನು ಅಗ್ರಶ್ರೇಯಾಂಕದ ವಿಷಯದಲ್ಲೂ ಈ ಮೂವರು ತಮ್ಮ ಕಾಲಘಟ್ಟದ ಬೇರೆಲ್ಲ ಆಟಗಾರರನ್ನು ಮೀರಿಸಿದ್ದಾರೆ. ಜೋಕೋವಿಕ್ ದಾಖಲೆಯ 428 ವಾರಗಳ ಕಾಲ, ಫೆಡರರ್ 310 ವಾರಗಳ ಕಾಲ ಹಾಗೂ ನಡಾಲ್ 209 ವಾರಗಳ ಕಾಲ, ಅಂದರೆ ಮೂವರೂ ಸೇರಿ ಒಟ್ಟು 937 ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದರು. ಫೆಬ್ರವರಿ 2, 2004ರಿಂದ ಫೆಬ್ರವರಿ 28, 2022ರವರೆಗಿನ ಹದಿನೆಂಟು ವರ್ಷಗಳ ಕಾಲದಲ್ಲಿ ಈ ಮೂವರನ್ನು ಬಿಟ್ಟರೆ ಅಗ್ರಶ್ರೇಯಾಂಕವನ್ನು ಅಲಂಕರಿಸಿದ್ದ ಇನ್ನೊಬ್ಬನೇ ಒಬ್ಬ ವ್ಯಕ್ತಿಯೆಂದರೆ ಆಂಡಿ ಮರ್ರೆ. 2005ರ ಜುಲೈ 25ರಿಂದ 2021ರ ಮಾರ್ಚ್ 14ರವರೆಗೆ ಮೊದಲ ಎರಡು ಶ್ರೇಯಾಂಕಗಳನ್ನು ಈ ನಾಲ್ವರೇ ಹಂಚಿಕೊಂಡಿದ್ದರು. ಹದಿನೆಂಟು ವರ್ಷಗಳಷ್ಟು ಸುದೀರ್ಘಕಾಲ ಕೇವಲ ನಾಲ್ಕು ಆಟಗಾರರು ಅಗ್ರಪಟ್ಟ ಹಂಚಿಕೊಂಡ ಉದಾಹರಣೆ ಇತಿಹಾಸದಲ್ಲಿ ಹಿಂದೆಂದೂ ಇರಲಿಲ್ಲ.
ಈ ಮೂವರು ಸೇರಿ ಗೆದ್ದ ಒಟ್ಟು ಪ್ರಶಸ್ತಿಗಳ ಸಂಖ್ಯೆ 293. ವರ್ಷಾಂತ್ಯದ ಅಗ್ರಶ್ರೇಯಾಮಕವನ್ನು 2004ರಿಂದ 2023ರ ಅವಧಿಯಲ್ಲಿ ಕೇವಲ ಎರಡು ಸಲ ಮಾತ್ರ (2016 ಮತ್ತು 2022) ಈ ಮೂವರನ್ನು ಬಿಟ್ಟು ಬೇರೆ ಆಟಗಾರ ಪಡೆದಿದ್ದಾರೆ. ಇನ್ನು ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದ ಸಾಧನೆ ಮಾಡಿರುವ ಜಗತ್ತಿನ ಕೆಲವೇ ಕೆಲವು ಆಟಗಾರರ ಪೈಕಿ ಈ ಮೂವರೂ ಇದ್ದಾರೆ. ಈ ಹಿಂದೆಂದೂ ಇಂಥ ಸಾಧನೆ ಮಾಡಿದ ಮೂವರು ಆಟಗಾರರು ಒಟ್ಟಾಗಿ ಆಡಿದ ಉದಾಹರಣೆ ಇರಲಿಲ್ಲ. ಜೊತೆಗೆ ಜೋಕೋವಿಕ್ ಅವರು ಡಾನ್ ಬಜ್ ಮತ್ತು ರಾಡ್ ಲೇವರ್ ನಂತರ ನಾಲ್ಕೂ ಗ್ರ್ಯಾಂಡ್‌ಸ್ಲಾಂಗಳನ್ನು ಏಕಕಾಲಕ್ಕೆ ಗೆದ್ದ ಸಾಧನೆ ಮಾಡಿದ ಮೊದಲ ಆಟಗಾರ ಎನ್ನಿಸಿಕೊಂಡರು.
ರಾಫೆಲ್ ನಡಾಲ್ ಅವರ ಫ್ರೆಂಚ್ ಓಪನ್‌ನ ಏಕಚಕ್ರಾಧಿಪತ್ಯದ ಬಗ್ಗೆ ಹೇಳುತ್ತ ಹೋದರೆ ಅದರದ್ದೇ ಒಂದು ದೊಡ್ಡ ಕಥೆಯಾದೀತು. 2003-04ರಲ್ಲಿ ರೋಜರ್ ಫೆಡರರ್ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತು. ಫ್ರೆಂಚ್ ಓಪನ್ ಹೊರತುಪಡಿಸಿ ಉಳಿದ ಮೂರೂ ಗ್ರ್ಯಾಂಡ್‌ಸ್ಲಾಂಗಳನ್ನು ಗೆದ್ದು ಆಗಲೇ ಟೆನಿಸ್ ಜಗತ್ತನ್ನು ಆಳುವ ಸೂಚನೆ ನೀಡಿದ್ದರು. ಅಂಥ ಸಂದರ್ಭದಲ್ಲಿ ಆ ವರ್ಷದ ಫ್ರೆಂಚ್ ಓಪನ್‌ನಲ್ಲಿ ಬದಲಾವಣೆಯ ಗಾಳಿ ಬೀಸಿತು. ಹದಿನೆಂಟು ವರ್ಷದ ಹುಡುಗ ನಡಾಲ್ ಸೆಮಿಫೈನಲ್‌ನಲ್ಲಿ ಫೆಡರರ್‌ಗೆ ಸೋಲುಣಿಸಿದ್ದಲ್ಲದೆ ಫೈನಲ್‌ನಲ್ಲೂ ಗೆದ್ದು ಬೀಗಿದರು. ಆದರೆ ಆ ಗಾಳಿ ಬಿರುಗಾಳಿಯಾಗಿ ಮಾರ್ಪಡಲು ಹೆಚ್ಚು ಕಾಲ ಬೇಕಾಗಲಿಲ್ಲ. ಮುಂದೆ ನಡಾಲ್ ರೋಲಂಡ್ ಗ್ಯಾರೋಸ್‌ನಲ್ಲಿ ಫೆಡರರ್ ಅವರ ಪ್ರಭುತ್ವಕ್ಕೆ ಬಲುದೊಡ್ಡ ಸವಾಲಾಗಿ ನಿಂತರು. ಫೆಡರರ್‌ಗೆ ನಾಲ್ಕೂ ಗ್ರ್ಯಾಂಡ್‌ಸ್ಲಾಂ ಗೆದ್ದ ಸಾಧನೆ ಮಾಡಲು ಇದ್ದ ಬಲುದೊಡ್ಡ ಅಡ್ಡಿಯೇ ನಡಾಲ್. ಆದರೆ 2009ರಲ್ಲಿ ನಡಾಲ್ ನಾಲ್ಕನೇ ಸುತ್ತಿನಲ್ಲೇ ರಾಬಿನ್ ಸೋಡರ್ಲಿಂಗ್ ಎದುರು ಸೋಲನುಭವಿಸಿದಾಗ ಫೆಡರರ್ ಭಾಗ್ಯದ ಬಾಗಿಲು ತೆರೆಯಿತು. ಆ ಸಲ ಫ್ರೆಂಚ್ ಓಪನ್ ಗೆದ್ದು ನಾಲ್ಕೂ ಗ್ರ್ಯಾಂಡ್‌ಸ್ಲಾಂ ಗೆದ್ದವರ ಸಾಲಿಗೆ ಫೆಡರರ್ ಸೇರಿದರು. ಆದರೆ ಆ ವರ್ಷದ ಸೋಲಿಗೂ ಮುಂಚೆ ನಡಾಲ್ ಸತತ ನಾಲ್ಕು ವರ್ಷ ಚಾಂಪಿಯನ್ ಆಗಿದ್ದರು. ಅದರ ನಂತರ ಸತತ ಐದು ವರ್ಷ ಚಾಂಪಿಯನ್ ಆದರು. ಆದರೆ 2015ರಲ್ಲಿ ಅವರು ಗೆಲ್ಲಲಿಲ್ಲ. ಆ ವರ್ಷ ಸ್ಟಾನಿಸ್ಲಾಸ್ ವಾವ್ರಿಂಕಾ ತಮ್ಮ ಚೊಚ್ಚಲ ಫ್ರೆಂಚ್ ಓಪನ್ ಕಿರೀಟ ಗೆದ್ದರು. ಅದರ ಮರುವರ್ಷ ನೊವಾಕ್ ಜೋಕೋವಿಕ್ ಗೆಲ್ಲುವ ಮೂಲಕ ತಮ್ಮ ಗ್ರ್ಯಾಂಡ್‌ಸ್ಲಾಂ ಸಾಧನೆಯನ್ನು ಸಂಪೂರ್ಣಗೊಳಿಸಿದರು.
ಅದಾದ ಬಳಿಕ ಮತ್ತೆ ನಡಾಲ್ ತಮ್ಮ ಅಲ್ಪವಿರಾಮವನ್ನು ತೆಗೆದುಹಾಕಿ ಗೆಲುವಿನ ಹಳಿಗೆ ಮರಳಿದರು. ಮತ್ತೆ ಐದು ಫ್ರೆಂಚ್ ಓಪನ್‌ಗಳನ್ನು ಗೆದ್ದರು. ಅವರ ಒಟ್ಟು ಹದಿನಾಲ್ಕು ಫ್ರೆಂಚ್ ಓಪನ್ ಕಿರೀಟಗಳ ಸಾಧನೆ ಸಹ ನ ಭೂತೋ ನ ಭವಿಷ್ಯತಿ ಎನ್ನಲಡ್ಡಿಯಿಲ್ಲ. ಅವರು ಗೆದ್ದಿರುವ ಕೇವಲ ಫ್ರೆಂಚ್ ಓಪನ್‌ಗಳ ಸಂಖ್ಯೆಗಿಂತ ಹೆಚ್ಚಿನ ಗ್ರ್ಯಾಂಡ್‌ಸ್ಲಾಂಗಳನ್ನು (ನಾಲ್ಕೂ ಸೇರಿ) ಗೆದ್ದಿರುವವರೆಂದರೆ ಫೆಡರರ್ ಮತ್ತು ಜೋಕೋವಿಕ್ ಮಾತ್ರ. ಅಂದರೆ ಬೇರೆ ಯಾವುದೇ ಆಟಗಾರ ನಾಲ್ಕೂ ಗ್ರ್ಯಾಂಡ್‌ಸ್ಲಾಂಗಳನ್ನು ಸೇರಿಸಿ ಗೆದ್ದಿರುವುದಕ್ಕಿಂತ ಹೆಚ್ಚಿನ ಟ್ರೋಫಿಗಳನ್ನು ನಡಾಲ್ ಕೇವಲ ಫ್ರೆಂಚ್ ಓಪನ್‌ನಲ್ಲಿ ಗೆದ್ದಿದ್ದಾರೆ! (ಕೇವಲ ಪೀಟ್ ಸಾಂಪ್ರಾಸ್ ಮಾತ್ರ ಹದಿನಾಲ್ಕು ಗ್ರ್ಯಾಂಡ್‌ಸ್ಲಾಂಗಳನ್ನು ಗೆದ್ದಿದ್ದಾರೆ).
ಮುಕ್ತ ಯುಗ ಆರಂಭವಾದ ಬಳಿಕ ಜೋಕೋವಿಕ್ ಹತ್ತು ಆಸ್ಟ್ರೇಲಿಯನ್ ಓಪನ್, ನಡಾಲ್ ಹದಿನಾಲ್ಕು ಫ್ರೆಂಚ್ ಓಪನ್ ಹಾಗೂ ಫೆಡರರ್ ಎಂಟು ವಿಂಬಲ್ಡನ್ ಹಾಗೂ ಐದು ಯುಎಸ್ ಓಪನ್‌ಗಳನ್ನು ಗೆಲ್ಲುವ ಮೂಲಕ ಈ ವಿಭಾಗಗಳಲ್ಲಿ ಅತಿಹೆಚ್ಚು ಸಲ ಚಾಮಪಿಯನ್ ಆದ ಸಾಧನೆ ಮಾಡಿದ್ದಾರೆ. (ಯುಎಸ್ ಓಪನ್‌ನಲ್ಲಿ ಜಿಮ್ಮಿ ಕಾನರ್ಸ್ ಹಾಗೂ ಪೀಟ್ ಸಾಂಪ್ರಾಸ್ ಸಹ ಐದು ಸಲ ಗೆದ್ದಿದ್ದು, ಫೆಡರರ್ ಜೊತೆ ಜೋಡಿಯಾಗಿ ಈ ಸಾಧನೆ ಮಾಡಿದ್ದಾರೆ.)
ಈ ಮೂವರ ಪೈಕಿ ಕೊನೆಯವರಾಗಿ ಆಗಮಿಸಿದ ಜೋಕೋವಿಕ್ ಸಾಧನೆಯ ಹಾದಿಯಲ್ಲಿ ರೋಜರ್ ಮತ್ತು ರಾಫೆಲ್ ಇಬ್ಬರನ್ನೂ ಹಿಂದಿಕ್ಕಿ ಮುನ್ನಡೆದಿದ್ದಾರೆ. ಅತಿಹೆಚ್ಚು ಗ್ರ್ಯಾಂಡ್‌ಸ್ಲಾಂ ಗೆದ್ದಿರುವುದರಲ್ಲಿ, ಅತಿಹೆಚ್ಚು ವಾರಗಳ ಕಾಲ ನಂಬರ್ ಒನ್ ಆಗಿರುವುದರಲ್ಲಿ ಮತ್ತು ಕನಿಷ್ಠ ಮೂರು ಸಲ ಎಲ್ಲಾ ನಾಲ್ಕು ಗ್ರ್ಯಾಂಡ್‌ಸ್ಲಾಂ ಗೆದ್ದಿರುವ ಸಾಧನೆ ಮಾಡುವ ಮೂಲಕ ನಡಾಲ್ ಮತ್ತು ಫೆಡರರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ನಡೆದಿರುವ ಜೋಕೋವಿಕ್ ಟೆನಿಸ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಹೇಳಲು ಹೆಚ್ಚು ಅನುಮಾನವೇನೂ ಬೇಕಿಲ್ಲ.
ಈ ಮೂವರ ಸಾಧನೆಗಳಲ್ಲಿ ಎದ್ದುಕಾಣುವ ಇನ್ನೊಂದು ಮುಖ್ಯ ವಿಷಯವೆಂದರೆ ಇವರ ಅಸಾಧಾರಣ ದೈಹಿಕ ಕ್ಷಮತೆ. ಟೆನಿಸ್ ಎನ್ನುವುದು ಅತ್ಯಂತ ಹೆಚ್ಚು ದೈಹಿಕ ಕ್ಷಮತೆಯನ್ನು ಬೇಡುವ ಆಟ. ಅದಕ್ಕೆ ಹೋಲಿಸಿದರೆ ಕ್ರಿಕೆಟ್ ಏನೇನೂ ಅಲ್ಲ ಎಂದರೆ ಖಂಡಿತ ಅತಿಶಯೋಕ್ತಿಯಲ್ಲ. ಏಕೆಂದರೆ ಕ್ರಿಕೆಟ್ ಒಂದು ತಂಡವಾಗಿ ಆಡುವ ಆಟ ಮತ್ತು ಕ್ರಿಕೆಟ್‌ನಲ್ಲಿ ತಮ್ಮ ತಂಡ ಬ್ಯಾಟಿಂಗ್ ಮಾಡುವಾಗ ಆ ಇಬ್ಬರು ಆಟಗಾರರನ್ನು ಹೊರತುಪಡಿಸಿ ಉಳಿದವರಿಗೆಲ್ಲ ವಿಶ್ರಾಂತಿ ಸಿಗುತ್ತದೆ. ಇನ್ನು ಫುಟ್ಬಾಲ್ ಮತ್ತು ಹಾಕಿ ಆಟಗಳಿಗೆ ಹೆಚ್ಚಿನ ಕ್ಷಮತೆ ಬೇಕಿದ್ದರೂ ಆ ಆಟಗಳು ಗರಿಷ್ಠ ಒಂದೂವರೆ ಗಂಟೆಗಳಲ್ಲಿ ಮುಗಿದುಹೋಗುತ್ತದೆ. ಆದರೆ ಟೆನಿಸ್ ಪಂದ್ಯಗಳು, ಅದರಲ್ಲೂ ಪುರುಷರ ಗ್ರ್ಯಾಂಡ್‌ಸ್ಲಾಂ ಪಂದ್ಯಗಳು ಒಂದೂವರೆ ಗಂಟೆಗಳಲ್ಲಿ ಮುಗಿಯುವ ಸಾಧ್ಯತೆ ಬಹಳ ಕಡಿಮೆ. ಸಂಪೂರ್ಣ ಏಕಪಕ್ಷೀಯವಾದ ಕೆಲವೇ ಕೆಲವು ಪಂದ್ಯಗಳನ್ನು ಹೊರತುಪಡಿಸಿ ಉಳಿದವೆಲ್ಲ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ನಡೆಯುತ್ತವೆ. ದಾಖಲೆಯ ಹನ್ನೊಂದು ಗಂಟೆಗಳ ಕಾಲ ನಡೆದ ಪಂದ್ಯವೂ ಇದೆ. ಹಾಗಾಗಿ ಇಬ್ಬರೂ ಆಟಗಾರರು ಸದಾಕಾಲ ಮೈಯೆಲ್ಲ ಕಣ್ಣಾಗಿರಬೇಕಾಗುತ್ತದೆ. ಅಂಗಳದ ಒಂದು ತುದಿಯಿಂದ ಇನ್ನೊಂದು ತುದಿಗೆ ಜಿಂಕೆಯಂತೆ ಓಡಾಡುತ್ತಲೇ ಇರಬೇಕಾಗುತ್ತದೆ. ಹೀಗಿರುವಾಗ ಮೂವತ್ತು ದಾಟಿದವರೆಲ್ಲ ಟೆನಿಸ್ ಪರಿಭಾಷೆಯಲ್ಲಿ ಮುದುಕರೇ. ಅದರಲ್ಲೂ ಮೂವತ್ತೈದು ದಾಟಿದವರಂತೂ ಹಣ್ಣುಹಣ್ಣು ಮುದುಕರೆಂದೇ ಪರಿಗಣಿಸಲ್ಪಡುವುದು ಸುಳ್ಳಲ್ಲ! ಆದರೆ ಈ ಮೂವರೂ ಸಹ ಮೂವತ್ತೈದು ದಾಟಿದ ಬಳಿಕವೂ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
ಆದರೆ ಕಾಲ ಎನ್ನುವುದು ಯಾವುದಕ್ಕೂ ಕಾಯುವುದಿಲ್ಲ. ಎರಡು ದಶಕಗಳ ಈ ಅಭೇದ್ಯ ಸಾಮ್ರಾಜ್ಯ ಕೊನೆಗೊಳ್ಳುವ ಕಾಲ ಬಂದಿದೆ. ಇದು ಇವತ್ತು ಅಥವಾ ನಾಳೆಯೇ ಮುಗಿಯುತ್ತದೆ ಎಂದಲ್ಲ. ಏಕೆಂದರೆ ನಡಾಲ್ ಆಗಲೀ ಜೋಕೋವಿಕ್ ಆಗಲಿ ಸಾಮಾನ್ಯ ಆಟಗಾರರಲ್ಲ. ಇವತ್ತು ಅವರು ಶಕ್ತಿಗುಂದಿದಂತೆ ಕಾಣುತ್ತಿದ್ದಾರೆ ಎಂದಮಾತ್ರಕ್ಕೆ ಅವರ ಕಾಲ ಮುಗಿದೇ ಹೋಯಿತೆಂದು ಅರ್ಥವಲ್ಲ. ಆದರೆ ಇಪ್ಪತ್ತೊಂದು ವರ್ಷಗಳ ಇತಿಹಾಸದಲ್ಲಿ ಬಿಗ್ ತ್ರೀಗಳ ಪೈಕಿ ಯಾರೊಬ್ಬರೂ ಸತತ ಎರಡನೇ ಸಲ ಫೈನಲ್‌ಗೆ ಬರದೇ ಇರುವುದು ಇದೇ ಮೊದಲು. ಈ ಸಲ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಡಾಲ್ ಅಥವಾ ಜೋಕೋವಿಕ್ ಇಬ್ಬರೂ ಫೈನಲ್‌ಗೆ ಬಂದಿರಲಿಲ್ಲ. ಫ್ರೆಂಚ್ ಓಪನ್‌ನಲ್ಲೂ ಇದೇ ಪುನರಾವರ್ತನೆಯಾಗಿದೆ.
ಪ್ರಶಸ್ತಿ ಗೆಲ್ಲುವಲ್ಲಿ ಮಾತ್ರವಲ್ಲ, ಫೈನಲ್ ತಲುಪುವುದರಲ್ಲೂ ಈ ಮೂವರ ಪಾರಮ್ಯ ಮುಂದುವರೆದಿದೆ. ಜೋಕೋವಿಕ್ ಒಟ್ಟು ಮೂವತ್ತಾರು ಸಲ, ಫೆಡರರ್ ಮೂವತ್ತೊಂದು ಸಲ ಹಾಗೂ ನಡಾಲ್ ಮೂವತ್ತು ಸಲ ಗ್ರ್ಯಾಂಡ್‌ಸ್ಲಾಂ ಫೈನಲ್‌ಗೆ ತಲುಪಿದ್ದಾರೆ. ಅಂದರೆ ಈ ನಡುವೆ ನಡೆದ 82 ಫೈನಲ್‌ಗಳ 164 ಜನ ಫೈನಲಿಸ್ಟ್‌ಗಳ ಪೈಕಿ ಈ ಮೂವರೇ 97 ಸಲ ಫೈನಲ್‌ನಲ್ಲಿ ಆಡಿದ್ದಾರೆ! ಅಂದರೆ ಈ ಮೂವರ ಪೈಕಿ ಕನಿಷ್ಠ ಒಬ್ಬರಾದರೂ ಇಲ್ಲದ ಫೈನಲ್‌ಗಳನ್ನು ಊಹಿಸಿಕೊಳ್ಳುವುದೂ ಕಷ್ಟ.
ಒಟ್ಟಿನಲ್ಲಿ ಇದೇ ವರ್ಷ, ಅಥವಾ ಇನ್ನೊಂದೆರಡು ವರ್ಷಗಳಲ್ಲಿ ಈ ಮಹಾನ್ ಸಾಮ್ರಾಜ್ಯ ಅಸ್ತಂಗತವಾಗುವುದಂತೂ ಸತ್ಯ. ನಡಾಲ್ ಈ ಸಲವೇ ಇದೇ ತಮ್ಮ ಕೊನೆಯ ಫ್ರೆಂಚ್ ಓಪನ್ ಆಗಿರಬಹುದು ಎನ್ನುವ ಸುಳಿವು ಕೊಟ್ಟಿದ್ದಾರೆ. ಜೋಕೋವಿಕ್ ಸಹ ತಾನು ಎಷ್ಟರಮಟ್ಟಿಗೆ ಫಿಟ್ ಆಗಿದ್ದೇನೆಂದು ಗೊತ್ತಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿರುವುದರಿಂದ ಈ ವರ್ಷದ ವಿಂಬಲ್ಡನ್ ಮತ್ತು ಯುಎಸ್ ಓಪನ್‌ಗಳಲ್ಲಿ ಸಹ ಇವರ ಭಾಗವಹಿಸುವಿಕೆಯ ಬಗ್ಗೆ ಸಂಶಯದ ಕಾರ್ಮೋಡಗಳು ದಟ್ಟವಾಗಿ ಆವರಿಸಿಕೊಂಡಿವೆ. ಆದರೆ ಎರಡು ದಶಕಗಳ ಕಾಲ ಇವರು ನೀಡಿದ ಭರಪೂರ ಮನರಂಜನೆಯನ್ನು ಟೆನಿಸ್ ಪ್ರೇಮಿಗಳು ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ. ಏನಂತೀರಿ?
0 Followers
0 Following