ಬಾಗಿಲು ಮತ್ತು ಅವನು

ಇದು ಮಲೆನಾಡಿನ ಮನೆಮನೆಯ ಕತೆ.

ProfileImg
12 Jul '24
2 min read


image

ಬಾಗಿಲು

  ಸರಿಸುಮಾರು ನೂರಾ ಇಪ್ಪತ್ತು ವರ್ಷಗಳು ಆಗಿರಬಹುದು ಆ ಬಾಗಿಲಿಗೆ. ತೆಗೆಯುವಾಗ ಹಾಕುವಾಗ ಕಿರ್ರರ್ರೋ... ಅಂತ ಸದ್ದು ಮಾಡುತ್ತಿತ್ತು.  ಹೊನ್ನೆಯೋ, ಹುಣಾಲೋ‌‌, ಬಿಲ್ಕಂಬಿಯ ಮರದ್ದೋ ಆಗಿರಬೇಕು ಅಂತ‌ ಮರದ ಮಾಹಿತಿಯುಳ್ಳವರು ತರ್ಕಿಸುತ್ತಲಿದ್ದರೆ ವಿನಹ ತೀರ್ಮಾನಕ್ಕೆ ಬರಲಾಗಿರಲಿಲ್ಲ. 
  ಸರಿಸುಮಾರು ಎಪ್ಪತ್ಮೂರು ವರ್ಷಗಳು ಆಗಿರಬಹುದು ಆ ಯಜಮಾನರಿಗೆ, ಕೂರುವಾಗ ಏಳುವಾಗ ಕಟಕ್ ಕಟಕ್ ಅಂತ ಸದ್ದು ಹೊರಡುತ್ತಿತ್ತು,  ಒಳ್ಳೆಯವರೋ ಕೆಟ್ಟವರೋ ಅಂತ ಮನುಷ್ಯರ ಅಳೆಯುವವರು ತರ್ಕಿಸುತ್ತಲಿದ್ದರೆ ವಿನಹ ತೀರ್ಮಾನಕ್ಕೆ ಬರಲಾಗಿರಲಿಲ್ಲ. 
  ಈ ಮನುಷ್ಯ ಮತ್ತು ಆ ಮರದ ಬಾಗಿಲು ಎರಡೂ ವಯಸ್ಸಿನಲ್ಲಿ ತುಸು ವ್ಯತ್ಯಯವಿದ್ದರೂ ಅವಿನಾಭಾವ ಸಂಬಂಧ ಹೊಂದಿದ್ದವು.  ಈತ‌ ಅಂಬೆಗಾಲಿಡುತ್ತ ಹೊಸಲು‌ ಮೊದಲಬಾರಿ ದಾಟಿದ ಬಾಗಿಲು ಇದುವೆ, ಆತನ ಹೆಂಡತಿ‌ ಹೊಸಲಿನ‌ ಮೇಲೆ ಅಕ್ಕಿ ತುಂಬಿದ ಸಿದ್ದೆಯನಿಟ್ಟು ಒದ್ದಾಗ  ಅಕ್ಕಿ‌ ಚಲ್ಲಾಪಿಲ್ಲಿಯಾಗಿ ಬಿದ್ದದ್ದು ಈ‌ ಬಾಗಿಲ ಬಳಿಯೆ. 
   ನಿಜ ಬಾಗಿಲುಗಳಿಗೆ ಜೀವ ಇತ್ತು  ಈಗ ಇಲ್ಲ, ಆದರೆ ಆದರೆ ನೆನಪುಗಳಿವೆ, ಮನುಷ್ಯನ ಮನಸಿನ ಭಾವನೆಗಳನ್ನು ತನ್ನೊಳಗೆ ಮೇಲ್ಮೈ‌ಪದರದಲ್ಲಿ ಸಣ್ಣದಾಗಿ ಶೇಖರಿಸಿಟ್ಟುಕೊಳ್ಳುವ ಪದರಗಳಿವೆ, ಅದನ್ನು ಗಮನಿಸುವ ಮನಸ್ಸುಗಳಿರಬೇಕಷ್ಟೆ. 
  ಆತ ಜಗುಲಿಯ ಯಜಮಾನಿಕೆ ಖುರ್ಚಿಯಲ್ಲಿ ಕುಡಗೋಡು ಪಂಚೆಯನ್ನುಟ್ಟು ಕುಳಿತುಕೊಂಡಿದ್ದಾಗ ಇದೇ ಬಾಗಿಲ‌ ಬಳಿ ನಿಂತು ಆಕೆ ತನ್ನಾಸೆ ಹೇಳಿದ್ದು ಬಾಗಿಲಿಗೂ ಗೊತ್ತಿದೆ, ಅಷ್ಟೊಂದು ಬಂಗಾರಕ್ಕೆ ದುಡ್ಡೆಲ್ಲಿಂದ ತರಲಿ‌ ಎಂದು ದೊಡ್ಡ ದನಿಯಲ್ಲಿ ಗದರಿದಾಗ ಬಾಗಿಲೂ ಬೆಚ್ಚಿಬಿದ್ದಿದೆ ಹಾಗಾಗಲು ಆಕೆ‌ ಬಾಗಿಲು ಹಿಡಿದುಕೊಂಡದ್ದೂ ಕಾರಣ, ಆಕೆಯ ಕಣ್ಣೀರ ಹನಿ ಈ ಬಾಗಿಲಿಗೆ ತಾಕಿದೆ, ಮತ್ತದು ಅಲ್ಲೇ ಹೆಪ್ಪುಗಟ್ಟಿದೆ. ಆತನೂ ಅಸಾಹಾಯಕ ಕಾಲ ಎಲ್ಲವೂ ಒಂದೇ ತರಹ, ವರ್ತಮಾನದಲ್ಲಿ ಹಣದ ಸಮಸ್ಯೆ ಆ ಸಮಯಕ್ಕೆ ತಕ್ಕಂತೆ ಇರುತ್ತದೆ ಎಂಬ ಕಾರಣ ಆಕೆಗೆ ಕಾರಣವಲ್ಲದಿದ್ದರೂ ಆತನಿಗೆ ಸಕಾರಣವೇ...
   ಹುಟ್ಟು ಬಡತನದಲ್ಲಾಗಬಹುದು ಸಾವು ಶ್ರೀಮಂತವಾಗಿ‌ ಬರುವಂತೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎನ್ನುವುದು ಹಣ‌ ಇದ್ದವರು ಹೇಳುವ ಮಾತಷ್ಟೆ. ಹಣಕ್ಕೂ ದಿನಗಳಿಗೂ ಸಂಬಂದವೇ‌ ಇಲ್ಲ.‌ ಅದು ಯಾವಾಗ ಬರುತ್ತೋ ಯಾಕಾಗಿ ಬರುತ್ತೋ ಹೇಗೆ ಬರುತ್ತೋ ಹೇಗೆ ಹೋಗುತ್ತೋ ಅನ್ನೋದು ಯಾರಿಗೂ ಯಾವತ್ತೂ ತಿಳಿಯದ ಸಂಗತಿ. ಆತನ ವಿಷಯದಲ್ಲೂ ಹಾಗೆ ಆಯಿತು.

   ಆತ ಯಜಮಾನನಾಗಿ ಈ ಮನೆಯ ಅಧಿಕಾರ ವಹಿಸಿಕೊಂಡಾಗ ಬರೋಬ್ಬರಿ ಸಾಲ, ಹತ್ತೆಂಟು ವರ್ಷದೊಳಗೆ ಎಲ್ಲಾ ತರಹದ ವ್ಯವಹಾರದಿಂದ ಸಾಲ ತೀರಿ‌ ಮೂಲ ಏರಿತ್ತು. ಬಟ್ಟೆ ಬಂಗಾರಕ್ಕೆ ಕೊರತೆಯಿಲ್ಲ,‌ಮನೆ ತುಂಬಾ ಜನರ ಸಂತೆ,

   ಕಾಲ ದಾಟುತ್ತಾ ಹೋದಂತೆ ಮನೆಯ‌ ಸದಸ್ಯರು ಹಣದಹಿಂದೆ ಹೋಗಲು ಊರ ಗಡಿ ದಾಟಿದರು. ತೋಟ ತುಡುವೆ ನೋಡಿಕೊಳ್ಳೊರಿಲ್ಲದೆ ನಿಧಾನ ಅವ್ಯವಸ್ಥೆಯತ್ತ ಜಾರತೊಡಗಿತು. ಜನರಿಲ್ಲದ ಮನೆ ದನಗಳಿಲ್ಲದ‌ ಕೊಟ್ಟಿಗೆ ಸಸಿಗಳಿಲ್ಲದ ತೋಟ, ನಾಟಿಯಿಲ್ಲದ ಗದ್ದೆ ಎಲ್ಲವೂ ಬಣಬಣ. ಈಗ ಬಾಗಿಲು ಬೆಳಗ್ಗೆ ನಿಧಾನವಾಗಿ ಕೀಂ....ಕುರ್ರೋ ಅಂತ ತೆರೆದುಕೊಳ್ಳುತ್ತಿತ್ತು. ಮತ್ತು ರಾತ್ರಿ ಅಷ್ಟೆ‌ ನಿಧಾನವಾಗಿ ಮುಚ್ಚಿಕೊಳ್ಳುತ್ತಿತ್ತು. 
 ಹಣದ ಓಘ, ದೇಹದ ರಕ್ತ ಎರಡೂ ಇಳಿಮುಖವಾಗುತ್ತಿದ್ದ ಒಂದು ದಿನ ಆತನ ಪತ್ನಿ‌ ಇಹ ಲೋಕ ಬಿಟ್ಟಾಯಿತು. ಈಗ ಮೂರಂಕಣದ ಇಡೀ‌ ಮನೆಗೆ ಆತನೋಬ್ಬನೆ. ಆದರೂ ಬಾಗಿಲು ತನ್ನ ಸದ್ದನ್ನು ಮಾಡುತ್ತಿತ್ತು. 
ಆಮೇಲೆ ಒಂದು ಮುಂಜಾನೆ . ಆತನಿಗೆ ಚಲಿಸುವ ಆಸೆಯಿತ್ತಾದರೂ ಚಲಾಯಿಸುವವನು ಇರಲಿಲ್ಲ.ಮರದ ಬಾಗಿಲಿಗೆ ಸದ್ದು‌ ಮಾಡುವ ಆಸೆ ಇತ್ತಾದರೂ ಸದ್ದು ಮಾಡಿಸುವವರು ಇರಲಿಲ್ಲ.

 

Category:Parenting and Family



ProfileImg

Written by R Sharma

0 Followers

0 Following