ಇಬ್ಬನಿ ಕರಗಿತು

ಇಬ್ಬನಿ ಕರಗಿತು

ProfileImg
02 Jan '24
6 min read


image

ಇಬ್ಬನಿ ಕರಗಿತು

ಅದೊಂದು ಸುಂದರವಾದ ಹಳ್ಳಿ. ಸುತ್ತಲೂ ಹಸಿರಿನಿಂದ ಕೂಡಿದ ಪ್ರದೇಶ. ಅಲ್ಲೊಂದು ಸುಂದರವಾದ ಚಿಕ್ಕ ಕುಟುಂಬ. ಗಂಡ ಸುರೇಶ್ ಹೆಂಡತಿ ಸೌಮ್ಯ ಹಾಗೂ ಸುರೇಶ್ ತಾಯಿ ಜಾನಕಿ‌ ಆ ಕುಟುಂಬದಲ್ಲಿ ವಾಸಿಸುತ್ತಿದ್ದರು. ಸುರೇಶ್ ಹಾಗೂ ಸೌಮ್ಯ ಇವರದು ಪ್ರೇಮ ವಿವಾಹ. ಸರಳ ಸ್ವಭಾವದ ಸೌಮ್ಯಳನ್ನು‌ ಸುರೇಶ್ ಯಾವುದೋ ಮದುವೆಯಲ್ಲಿ‌ ಮೆಚ್ಚಿ ಮದುವೆಯಾಗಿದ್ದ. ಸುರೇಶ್ ಗೆ ಪ್ರೀತಿಯ ಮಡದಿ ಜಾನಕಿಗೆ ಮುದ್ದಿನ ಸೊಸೆಯಾಗಿ ಮನೆ ಬೆಳಗಿದ್ದಳು ಸೌಮ್ಯ. ಮಧ್ಯಮ ವರ್ಗದ ಕುಟುಂಬದಲ್ಲಿ ಪ್ರೀತಿಗೆ ಯಾವ ಕೊರತೆಯೂ ಇರಲಿಲ್ಲ.
      ಸೌಮ್ಮ ಹಾಗೂ ಸುರೇಶ್ ಮದುವೆಯಾಗಿ ಎರಡು ವರ್ಷದ ಬಳಿಕ ಸೌಮ್ಯ ಗರ್ಭಿಣಿಯಾಗುತ್ತಾಳೆ. ವಿಷಯ ತಿಳಿದ ಅತ್ತೆ ಹಾಗೂ ಗಂಡ ಸಂತೋಷದಲ್ಲಿ ಕುಣಿದಾಡುತ್ತಾರೆ. ಹಾಗೆಯೇ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಏಳನೇ ತಿಂಗಳಿಗೆ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಮಾಡುತ್ತಾರೆ. ಸೌಮ್ಯ ತವರು ಮನೆಯವರು ಅವಳನ್ನು ಕರೆದುಕೊಂಡು ಹೋಗುತ್ತಾರೆ. ಆದರೆ ಅವಳಿಗೆ ತಾಯಿ ಇಲ್ಲದ ಕಾರಣ ಅತ್ತೆ ಜಾನಕಿ ಬಾಣಂತನ ಮಾಡುತ್ತೇನೆಂದು ಹೇಳುತ್ತಾರೆ.

   ವೈದ್ಯರು ಕೊಟ್ಟ ದಿನಾಂಕ ಇನ್ನೇನು ಹತ್ತಿರ ಬರುತ್ತಿದೆ; ಒಂದು ದಿನ ಸೌಮ್ಯ ಗಂಡನ ಬಳಿ, " ರೀ ನನಗೇಕೋ ತುಂಬಾ ಭಯವಾಗುತ್ತಿದೆ; ಒಂದು ವೇಳೆ ನನಗೆ ಹೆರಿಗೆ ವೇಳೆ ಏನಾದರೂ ಆದರೆ ನೀವು ನಮ್ಮ ಮಗುವಿಗಾಗಿ ಇನ್ನೊಂದು ಮದುವೆ ಆಗಲೇ ಬೇಕು" ಎಂದು ಹೇಳುತ್ತಾಳೆ. ಸೌಮ್ಯ, ಯಾಕೆ ಏನೇನೋ ಮಾತನಾಡುತ್ತಿದ್ದೀಯಾ? ನಿನಗೆ ಏನು ಆಗಲ್ಲ. ನೀನು ಹೀಗೆಲ್ಲಾ ಮಾತನಾಡಬಾರದು. ಎಂದು ಹೇಳಿ ಅವಳನ್ನು ಎದೆಯಲ್ಲಿ ಮಲಗಿಸಿಕೊಳ್ಳುತ್ತಾನೆ. 
      ಮಧ್ಯರಾತ್ರಿಯ ಸಮಯದಲ್ಲಿ ಸೌಮ್ಯ ಜೋರಾಗಿ ಅಳುವುದು ಕೇಳಿ ಸುರೇಶ್ ಎದ್ದು ಲೈಟ್ ಹಾಕಿ ನೋಡಿದಾಗ ಸೌಮ್ಯ ಹೊಟ್ಟೆ ನೋವು ತಡೆಯಲಾಗುತ್ತಿಲ್ಲ ಎಂದ ಹೇಳುತ್ತಾಳೆ. ಕೂಡಲೇ ಸುರೇಶ್‌ ಪಕ್ಕದ ಮನೆಯ ಆಟೋಗೆ ಹೇಳಿ ಸೌಮ್ಯಳನ್ನು ಆಸ್ಪತ್ರೆಗೆ ‌ಸೇರಿಸುತ್ತಾನೆ. ಬೆಳಿಗ್ಗೆ ಆರು ಗಂಟೆಗೆ ಸೌಮ್ಯ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ ಅಧಿಕ ರಕ್ತ ಸ್ರಾವದಿಂದ ಮರಣ ಹೊಂದಿತ್ತಾಳೆ.
      ವಿಷಯ ತಿಳಿದ ಸುರೇಶ್ ಹುಚ್ಚನಂತಾಗುತ್ತಾನೆ. ಆದರೆ ಅವನು ಮಗುವಿಗಾಗಿ ಎಲ್ಲಾ ಸಹಿಸಿಕೊಂಡು ‌ವಿಧಿವಿಧಾನ ಮುಗಿಸುತ್ತಾನೆ. ದಿನಗಳು ಉರುಳುತ್ತಿವೆ, ಮಗಳು‌ ಚಂದನಾ ಈಗ ಎರಡು‌ ವರ್ಷದ ಮಗು. ಅಜ್ಜಿ ಹಾಗೂ ತಂದೆಯ ಪ್ರೀತಿಯಿಂದ ಮುದ್ದು ಮುದ್ದಾಗಿ ಬೆಳೆಯುತ್ತಿದ್ದಾಳೆ. ಆದರೆ ಜಾನಕಿಗೆ ಒಂದೇ ಒಂದು ನೋವು ಏನೆಂದರೆ, ಮಗ ಹೆಂಡತಿ ಸತ್ತರೂ ಇನ್ನೊಂದು ಮದುವೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ ಎಂಬುದು. 
   ಹೀಗಿರುವಾಗ ಒಂದು ದಿನ ತಾಯಿ ಜಾನಕಿಗೆ ರಕ್ತದ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆಗ ಮಗ ಸುರೇಶ್ ಚಿಕಿತ್ಸೆ ಕೊಡಿಸಿ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಆಗ ತಾಯಿ ಕಣ್ಣೀರು ಹಾಕುತ್ತಾ ಮಗನಲ್ಲಿ, ನೋಡು ‌ಸುರೇಶ್ ನೀನು ಇನ್ನೊಂದು ಮದುವೆ ಮಾಡಿಕೊ‌; ನಿನಗೋಸ್ಕರ ಅಲ್ಲದೆ ‌ಇದ್ದರೂ ಚಂದನಳಿಗೋಸ್ಕರ ಆದರೂ‌ ಮದುವೆ ‌ಮಾಡಿಕೊಳ್ಳಲೇ ಬೇಕು; ಇಲ್ಲದೇ ಇದ್ದರೆ ನನಗೆ ಯಾವ ಮಾತ್ರೆ ಬೇಡ ಎನ್ನುತ್ತಾಳೆ. ಅವಳ ಒತ್ತಾಯಕ್ಕೆ ಮಣಿದು ದೂರದ ಸಂಬಂಧಿಯಾದ ಹೇಮಾಳನ್ನು ಮದುವೆಯಾಗುತ್ತಾನೆ.
    ಹೇಮಾಳಿಗೆ ಮೊದಲು ಮದುವೆಯಾಗಿದ್ದು ಗಂಡ ತೀರಿಹೋಗಿರುತ್ತಾನೆ. ಒಂದು ಗಂಡು ಮಗುವಿದ್ದು, ಅದನ್ನು ಅವಳ ತಾಯಿ ನೋಡಿಕೊಳ್ಳುತ್ತಿದ್ದರು. ಮೊದಲು ಹೇಮಾ ಚಂದನಾಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಮದುವೆಯಾಗಿ ಎರಡು ವರ್ಷದ ಬಳಿಕ ಹೇಮಾ ಕೂಡ ತಾಯಿಯಾಗುತ್ತಾಳೆ. ಅವಳಿಗೂ‌ ಹೆಣ್ಣು ಮಗುವಾಗುತ್ತದೆ. ಅವಳಿಗೆ ಸ್ನೇಹ ಎಂದು ನಾಮಕರಣ ಮಾಡುತ್ತಾರೆ. ಇದೇ ಸಮಯದಲ್ಲಿ ಸುರೇಶ್ ಗೆ ವಿದೇಶದಲ್ಲಿ ಕೆಲಸ ಸಿಗುತ್ತದೆ. ಇಷ್ಟು ಸಮಯ ಚಂದನಾಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಹೇಮಾ ಅವಳ‌ ಮಲತಾಯಿ ಬುದ್ಧಿಯನ್ನು ತೋರಿಸುತ್ತಾಳೆ.
         ಅಜ್ಜಿ ಜಾನಕಿಗೂ ಈಗ ವಯಸ್ಸಾಗಿದೆ,ಮೊಮ್ಮಗಳಿಗೆ ಆಶ್ರಯ ಅಜ್ಜಿ ಮಾತ್ರ. ಅತ್ತೆ ಜಾನಕಿಯಲ್ಲಿ ಕೂಡ ಹೇಮಾ ಸಿಡಿಮಿಡಿಗೊಳ್ಳುತ್ತಾಳೆ. ತನ್ನ ಮಗುವಿಗೆ ಹಾಗೂ ತನಗೆ ಬಿಸಿ ಬಿಸಿ ಊಟ ಮಾಡಿಕೊಂಡರೆ, ಅತ್ತೆ ಹಾಗೂ ಚಂದನಾಳಿಗೆ ತಂಗಳನ್ನ ಬಡಿಸುತ್ತಿದ್ದಳು. ಈಗ ಜಾನಕಿಗೆ ತನ್ನ ಮಗನಿಗೆ ಇನ್ನೊಂದು ಮದುವೆ ಮಾಡಿ‌ ತಪ್ಪು ಮಾಡಿದೆ ಅಂದುಕೊಳ್ಳುತ್ತಾಳೆ.‌ಅದೇ ಕೊರಗಲ್ಲಿ ಒಂದು ದಿನ ಈ ಲೋಕವನ್ನು ಬಿಟ್ಟು ಹೊರಟು ‌ಹೋಗುತ್ತಾಳೆ. ಈಗ ಚಂದನಾ ಅಕ್ಷರಶಃ ಒಂಟಿಯಾಗುತ್ತಾಳೆ. ತಾಯಿಯ ಅಂತ್ಯ ಕ್ರಿಯೆಗೆ ಬಂದ ಮಗ ಸುರೇಶ್ ಹೆಂಡತಿಯ ಮೇಲೆ ಮಗಳ‌ ಜವಾಬ್ದಾರಿ ಬಿಟ್ಟು ವಿದೇಶಕ್ಕೆ ಹಿಂದಿರುಗುತ್ತಾನೆ.
ಹೋಗುವ ಮೊದಲು ಹೇಮಾಳ ಮೊದಲ ಮಗನನ್ನು ಕರೆಸಿಕೊಳ್ಳುತ್ತಾನೆ.
   ಈಗ ಚಂದನಾಳಿಗೆ ಆರು ವರ್ಷ. ಹತ್ತಿರದ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಆದರೆ ಹೇಮಾಳ ಮೊದಲ ಮಗ ಸತ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂರನೇ ತರಗತಿ ಓದಿತ್ತಿದ್ದನು. ಮಗ ಶಾಲೆಯಿಂದ ಬಂದು ಹೋಮ್ ವರ್ಕ್ ಮಾಡಿದರೆ ಚಂದನಾ ಮಾತ್ರ ಮನೆಯ ಕೆಲಸ ಮಾಡಬೇಕಿತ್ತು. ತಾಯಿ ಪ್ರೀತಿಯಿಂದ ವಂಚಿತಳಾದ ಚಂದನಾಳಿಗೆ ನೆಮ್ಮದಿಯಂತು ಮರೀಚಿಕೆಯಾಗಿತ್ತು.
      ತಂದೆ ಮಗಳಿಗೆ ಕರೆ ಮಾಡಿದರೆ ಹೇಮಾ ಏನಾದರೂ ಕಾರಣ ಹೇಳಿ ಮಾತನಾಡಲು ಬಿಡುತ್ತಿರಲಿಲ್ಲ. ಚಂದನಾ ಈಗ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪ್ರತಿ ದಿನ ಶಾಲೆಗೆ ತಡಮಾಡಿ ಬರುತ್ತಿದ್ದಳು. ಶಿಕ್ಷಕರು ವಿಚಾರಿಸಿದಾಗ ತನ್ನ ಚಿಕ್ಕಮ್ಮನ ಬಗ್ಗೆ ಯಾವ ವಿಚಾರ ಬಾಯಿ ಬಿಡುವುದಿಲ್ಲ. ಒಂದು ದಿನ ಶಾಲೆಗೆ ಬರುವುದು ತಡವಾಗುತ್ತದೆ. ಆಗ ಶಿಕ್ಷಕರು ವಿಚಾರಿಸುವ ಸಮಯದಲ್ಲಿ ಅವಳ ಕೆನ್ನೆಯ ಮೇಲೆ ಅಚ್ಚು ಮೂಡಿರುವುದು ಕಾಣುತ್ತದೆ. ಏನೆಂದು ಕೇಳಿದಾಗ ಅವಳು ಏನು ಹೇಳುವುದಿಲ್ಲ.
  ಆಗ ಅವಳ ಮನೆಯ ದಾರಿಯಲ್ಲಿ ಬರುವ ಅವಳ ಸಹಪಾಠಿ ಎದ್ದು ನಿಂತು, " ಸರ್, ನಾನು ಶಾಲೆಗೆ ಬರುವಾಗ ಅವಳ ಚಿಕ್ಕಮ್ಮ ಅವಳಿಗೆ ಸರಿ ಹೊಡೆಯುತ್ತಿದ್ದರು. ಅವಳು ನೆಲದ ಮೇಲೆ ಬಿದ್ದಿದ್ದರು ಬಿಡದೇ ಹೊಡೆಯುತ್ತಿದ್ದರು". ಎಂದು ಹೇಳುವಾಗ ಶಿಕ್ಷಕರು ಅವಳನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಕಾರಣ ತಿಳಿಯಲು ಪ್ರಯತ್ನ ಮಾಡುತ್ತಾರೆ.
    ಚಂದನಾಳ ಚಿಕ್ಕಮ್ಮ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಹಣ ತಂದು ಕಪಾಟಿನಲ್ಲಿ ಇಟ್ಟಿದ್ದಳು. ಆದರೆ ಪಾಸ್ ಪುಸ್ತಕ ಮಾತ್ರ ಇದ್ದು ಹಣ ಕಾಣುವುದಿಲ್ಲ ಎಂದು . ಹೊಡೆದಿರುತ್ತಾಳೆ. ಕೊನೆಗೆ ನಾನು ತೆಗೆದುಕೊಂಡಿಲ್ಲ ಎಂದು ಚಂದನಾ ಹೇಳುವಾಗ ಮತ್ತೊಂದು ಬಾರಿ ಹುಡುಕುವಾಗ ಅಲ್ಮಾರಿಯ ಬಟ್ಟೆಯ ಅಡಿಯಲ್ಲಿ ಸಿಗುತ್ತದೆ. ಇಟ್ಟದ್ದು ಮರೆತು ಇಷ್ಟೆಲ್ಲಾ ರಂಪ ನಡೆಯಿತೆಂದು ಚಂದನಾ ಶಿಕ್ಷಕರಲ್ಲಿ ಹೇಳುತ್ತಾಳೆ. ಆದರೆ ಶಿಕ್ಷಕರು‌ ಪ್ರೀತಿಯಿಂದ ನಡೆದುಕೊಳ್ಳುವುದು ಬಿಟ್ಟು ಬೇರೇನೂ ಮಾಡುವಂತಿರಲಿಲ್ಲ.
  ಸುರೇಶ ಪ್ರತಿ ಎರಡು ವರ್ಷಕ್ಕೊಮ್ಮೆ ‌ಮನೆಗೆ ಬಂದು ಒಂದು ತಿಂಗಳು ಇದ್ದು ಹೋಗುತ್ತಿದ್ದ. ಅವನು ಬಂದಾಗ ಚಂದನಾಳಲ್ಲಿ ಪ್ರೀತಿಯ ನಾಟಕವಾಡುತ್ತಿದ್ದಳು. ಅವಳು ಹೋದ ಮೇಲೆ ಹಳೆಯ ಚಾಳಿ ಮುಂದುವರೆಸುತ್ತಿದ್ದಳು. ಆದರೆ ಸುರೇಶನಿಗೆ ಕೆಲವು ವಿಚಾರಗಳು ಬೇರೆಯವರಿಂದ ಗೊತ್ತಾಗಿದ್ದರೂ ಅವನು ಏನೂ ಮಾಡುವಂತಿರಲಿಲ್ಲ. 
   ಹೇಗೂ ಚಂದನಾ ಪಿಯುಸಿ ಪಾಸ್ ಮಾಡಿ ಮುಗಿಸಿದ್ದಳು. ಮುಂದೆ ಓದು ಮುಂದುವರೆಸಲು ಚಿಕ್ಕಮ್ಮ ಬಿಡಲಿಲ್ಲ. ಏಕೆಂದರೆ ಅವಳಿಗೆ ಮನೆ ಕೆಲಸಕ್ಕೆ ಒಂದು ಆಳು ಬೇಕಿತ್ತು. ತಂದೆ ಜೊತೆಗೆ ನನಗೆ ಇನ್ನು ಓದುವುದು ಇಷ್ಟ ಇಲ್ಲ ಎಂದು ಹೇಳಿದಳು. ತಂದೆಗೆ ಮಗಳ ಸೂಕ್ಷ್ಮ ಅರ್ಥವಾಗಿ ತುಂಬಾ ನೊಂದುಕೊಂಡರು.
     ತಂಗಿ ಆರಾಮವಾಗಿ ಓದುತ್ತಿದ್ದರೆ ಇವಳು ಆಳಿಗಿಂತಲೂ ಹೆಚ್ಚಾಗಿ ದುಡಿಯುತ್ತಿದ್ದಳು. ಸುರೇಶ ಊರಿಗೆ ಬಂದಾಗ ಒಮ್ಮೆ ಮಗಳನ್ನು ಕರೆದುಕೊಂಡು ಅವನ ಚಿಕ್ಕಮ್ಮ ಅಂದರೆ ತಾಯಿ ಜಾನಕಿಯ ತಂಗಿ ವಸುಧಾ ಮನೆಗೆ ಕರೆದುಕೊಂಡು ಹೋಗುತ್ತಾನೆ. ಹೇಮಾ ಬರುವುದಿಲ್ಲ ಎಂದಾಗ ತಂದೆ ಮಗಳು ಮಾತ್ರ ಹೋಗುತ್ತಾರೆ. 
    ವಸುಧಾ ಮನೆಯಲ್ಲಿ ಚಂದನಾ ಸಂತೋಷದಿಂದ ಇರುತ್ತಾಳೆ ಅಲ್ಲದೆ ಇದ್ದ ನಾಲ್ಕು ದಿನ ಮನೆ ಕೆಲಸ ಮಾಡುವುದು ರುಚಿಯಾದ ಅಡುಗೆ ಮಾಡುವುದು ನೋಡಿ ಮನೆಯವರೆಲ್ಲರಿಗೂ ತುಂಬಾ ಇಷ್ಟವಾಗುತ್ತಾಳೆ. 
    ವಸುಧಾ ಮನೆಯ ಪಕ್ಕದ ಮನೆಯಲ್ಲಿ ಚಂದ್ರಶೇಖರ್ ಕುಟುಂಬ. ಹೋಟೆಲ್ ಉಧ್ಯಮಿಯಾದ ಚಂದ್ರಶೇಖರ್ ಪತ್ನಿ ಸರಯೂ, ಮಗ ಚರಣ್. ವಸುಧಾ ಮಗ ಹಾಗೂ ಚರಣ್ ಆತ್ಮೀಯ ಸ್ನೇಹಿತರು. ಚರಣ್ ಬ್ಯಾಂಕ್ ಉದ್ಯೋಗಿ ಆದರೂ ರಜಾ ದಿನಗಳಲ್ಲಿ ಹೆಚ್ಚಾಗಿ ವಸುಧಾ ಮೊಮ್ಮಗ ಸುದೀಪ್ ಜೊತೆ ಅವರ ಮನೆಯಲ್ಲಿ ಇರುತ್ತಿದ್ದ. ಚಂದನಾ ಬಂದಾಗ ಕೂಡ ಅವನು ಅಲ್ಲೇ ಇದ್ದು ಚಂದನಾ ಮಾಡುವ ಕೆಲಸ, ಮಾತನಾಡುವ ರೀತಿ, ಸ್ವಭಾವ ಎಲ್ಲಾ ನೋಡಿ ಅವಳು ಇಷ್ಟ ಆಗಯತ್ತಾಳೆ. ಗೆಳೆಯ ಸುದೀಪ್ ಬಳಿ ಚಂದನಾ ಬಗ್ಗೆ ವಿಚಾರಿಸುತ್ತಾನೆ. ಆಗ ಗೆಳೆಯ ಎಲ್ಲಾ ಹೇಳಿ ಕೊನೆಗೆ ಏನು ವಿಷಯ? ಎಂದು ತಮಾಷೆ ಮಾಡುತ್ತಾನೆ. ಆಗ ಏನಿಲ್ಲ‌ ಹೀಗೆ ವಿಚಾರಿಸಿದೆ ಎಂದು ಸುಮ್ಮನಾಗುತ್ತಾನೆ. 
            ನಾಲ್ಕು ದಿನ ನಿಂತು ತಂದೆ ಮಗಳು ಊರಿಗೆ ಹೊರಟಾಗ ಚರಣ್ ತುಂಬಾ ನೊಂದುಕೊಳ್ಳುತ್ತಾನೆ. ಎಲ್ಲರನ್ನೂ ತಮ್ಮ ಮನೆಗೆ ಬರುವಂತೆ ಹೇಳಿ ಸುರೇಶ್ ಹಾಗೂ ಚಂದನಾ ಹೊರಡುತ್ತಾರೆ. ಚಂದನಾ ಕೂಡ ಚರಣ್ ಹಾಗೂ ಅವನ ತಾಯಿಯಲ್ಲಿ ಹೋಗಿ ಬರುವುದಾಗಿ ಹೇಳುತ್ತಾಳೆ.
          ಮನೆಗೆ ಬಂದ ಚರಣ್ ಒಂದು ರೀತಿ ಮಂಕಾಗಿದ್ದು ನೋಡಿ ತಾಯಿ ಸರಯೂ ಏನಾಯಿತು? ಎಂದು ಕೇಳುತ್ತಾಳೆ. ಆಗ ಚರಣ್, " ಅಮ್ಮ, ಚಂದನಾ ಬಗ್ಗೆ ನಿನ್ನ ಅಭಿಪ್ರಾಯ ಏನು?" ಎಂದು ಕೇಳುತ್ತಾನೆ. ಆಗ ತಾಯಿ‌, " ಬಂಗಾರದಂತಹ ಹುಡುಗಿ ಕಣೋ " ಎಂದು ಹೇಳಿದಾಗ, ನನಗೆ ಅವಳು ಇಷ್ಟ ಆದರೆ ನೀನು ಅಪ್ಪ ಇದಕ್ಕೆ ಒಪ್ಪುವಿರಾ?. ಎಂದಾಗ ತಾಯಿ ನಿಜ ಹೇಳುತ್ತಿದ್ದೀಯಾ?. ನನಗಂತು ಅವಳು ಒಪ್ಪಿಗೆ. ಇನ್ನು ಅಪ್ಪ ಯಾವತ್ತು ಬೇಡ ಅನ್ನಲ್ಲ. ಎಂದಾಗ ಚರಣ್ ಗೆ ಖುಷಿಯಿಂದ ಕುಣಿಯಬೇಕೆನಿಸುತ್ತದೆ.
           ಚಂದ್ರಶೇಖರ್, ಸರಯೂ ಹಾಗೂ ಚರಣ್ ಒಂದು ದಿನ ವಸುಧಾ ಮನೆಗೆ ಬರುತ್ತಾರೆ. ಬಂದು ಚರಣ್ಗೆ ಚಂದನಾ ಇಷ್ಟ ಆದ ವಿಷಯ, ಅವಳನ್ನು ಸೊಸೆ ಮಾಡಿಕೊಳ್ಳಲು ಒಪ್ಪಿಕೊಂಡ ವಿಷಯ ಹೇಳಿದಾಗ ವಸುಧಾ ಮನೆಯವರಿಗೆ  ತುಂಬಾ ಸಂತೋಷವಾಗುತ್ತದೆ. ವಸುಧಾ ನಾಳೆಯೆ ಸುರೇಶ್ ಮನೆಗೆ ಹೋಗೋಣ ಎಂದು ಹೇಳುವಾಗ ಎಲ್ಲರೂ ಒಪ್ಪಿಕೊಳ್ಳುತ್ತಾರೆ.
        ಸುರೇಶ್ಗೆ ಕರೆಮಾಡಿ ಬರುವ ವಿಷಯ ತಿಳಿಸುತ್ತಾರೆ. ಆದರೆ ಹೆಣ್ಣು ನೋಡಲು ಬರುವುದು ಎಂದು ಮಾತ್ರ ಹೇಳುವುದಿಲ್ಲ. 
         ಮರುದಿನ ಎಲ್ಲಾ ಸುರೇಶ್ ಮನೆಗೆ ಬರುತ್ತಾರೆ. ಅವರ ಜೊತೆ ಚರಣ್ ಮನೆಯವರನ್ನು ನೋಡಿ ಆಶ್ಚರ್ಯವಾಗುತ್ತದೆ. ಚಂದನಾ ಎಲ್ಲರಿಗೂ ಜ್ಯೂಸ್ ಕೊಡುತ್ತಾಳೆ. ಚರಣ್ ಅವಳನ್ನೆ ನೋಡುವುದು ಕಂಡು ನಾಚುತ್ತಾಳೆ ಜೊತೆಗೆ ಚಿಕ್ಕಮ್ಮ ಏನಾದರೂ ಹೇಳುವಳೆಂಬ ಭಯ ಬೇರೆ.  
        ಈಗ ಚಂದ್ರಶೇಖರ್ ನೇರವಾಗಿ, ನೋಡಿ ಮಿಸ್ಟರ್ ಸುರೇಶ್, ನನ್ನ ಮಗ ನಿಮ್ಮ ಮಗಳನ್ನು ಇಷ್ಟ ಪಟ್ಟಿದ್ದಾನೆ.  ನಮಗೂ ಒಪ್ಪಿಗೆ ಆದ ಕಾರಣ ಹೆಣ್ಣು ಕೇಳಲು ಬಂದಿದ್ದೇವೆ ಎಂದಾಗ, ಸುರೇಶ್ ತುಂಬಾ ಸಂತೋಷಪಡುತ್ತಾರೆ. ಕೊನೆಗೂ ಮಗಳಿಗೆ ಒಳ್ಳೆಯ ಜೀವನ ಸಿಕ್ಕಿತು ಎಂದು ತಿಳಿದು.
    ಆಗ ಮಧ್ಯ ಬಾಯಿ ಹಾಕಿದ ಹೇಮಾ, ನಾವು ಅವಳಿಗೆ ಈಗ ಮದುವೆ ಮಾಡುವುದಿಲ್ಲ. ಅಲ್ಲದೇ ಹೆಚ್ಚು ಓದದ ಅವಳು ನಿಮ್ಮ ಮನೆಗೆ ಸರಿಯಾದವಳಲ್ಲ. ಸಾಧಾರಣ ಹುಡುಗ ಇದ್ದರೆ ಹೇಳಿ. ನಿಮಗೆ ನಮ್ಮ ಚಿಕ್ಕ ಮಗಳು ಸ್ನೇಹ ಸರಿಯಾದ ಸೊಸೆ ಆಗಬಹುದು. ಓದಿದ್ದಾಳೆ ಮಾಡರ್ನ್ ಇದ್ದಾಳೆ. ಆಗ ಚರಣ್ ನೋಡಿ ನಾನು ಇಷ್ಟಪಟ್ಟಿದ್ದು ಚಂದನಾಳನ್ನು. ಮದುವೆ ಆದರೆ ಅವಳನ್ನು ಮಾತ್ರ. ಇಲ್ಲದಿದ್ದರೆ ಮದುವೆಯೇ ಬೇಡ ಎಂದಾಗ, ಸುರೇಶ್ ಖಂಡಿತ ಒಪ್ಪಿಗೆ ಇದೆ. ನೀವು ಏನೂ ಚಿಂತೆ ಮಾಡಬೇಡಿ ಎಂದಾಗ ಎಲ್ಲರಿಗೂ ಸಮಾಧಾನ ಆಗುತ್ತದೆ. ಆದರೆ ಚಂದನಾಳನ್ನು ಒಂದು ಮಾತು ಕೇಳ ಬೇಕು ಎಂದಾಗ ಚಂದನಾ ನಾಚಿ ಕೋಣೆಗೆ ಹೋದಾಗ ಎಲ್ಲರೂ ನಗುತ್ತಾರೆ.
     ಸುರೇಶ್ ಹೇಮಾಳಿಗೆ ಒಳಗೆ ಕರೆದುಕೊಂಡು ಹೋಗಿ ಸರಿ ಬೈತಾನೆ. ಅವನ ಕೋಪ ನೋಡಿ ಹೇಮಾ ಭಯದಲ್ಲಿ ಏನು ಮಾತನಾಡಲು ಹೋಗುವುದಿಲ್ಲ.
    ಚಂದ್ರಶೇಖರ್ ನಿಶ್ಚಿತಾರ್ಥ ಯಾವಾಗ ಇಟ್ಟುಕೊಳ್ಳುವ? ಎಂದಾಗ ಸುರೇಶ್ ಇನ್ನು ಒಂದುವರೇ ತಿಂಗಳು ನಾನು ಇದ್ದೇನೆ. ಮತ್ತೆ ಹೋದರೆ ಒಂದು ವರ್ಷದ ನಂತರ ಬರುವುದು ಎಂದಾಗ, ಹಾಗಾದರೆ ಇನ್ನು ಹತ್ತು ದಿನದಲ್ಲಿ ನಿಶ್ಚಿತಾರ್ಥ ಮಾಡಿ  ನೀವು ಹೋಗುವ ಮೊದಲು ಮದುವೆ ಮಾಡಿ ಮುಗಿಸುವ ಎನ್ನುತ್ತಾರೆ ಚಂದ್ರಶೇಖರ್.
     ಸರಯೂ ಚಂದನಳಿಗೆ ತಂದ ಕಾಂಜೀವರಂ ಸೀರೆ ಹಾಗೂ ಮುಡಿಗೆ ಮಲ್ಲಿಗೆ ಹೂವು ಮುಡಿಸಿ ಕರೆದುಕೊಂಡು ಬಂದಾಗ ಚರಣ್ ಅವಳ ಸೌಂದರ್ಯವನ್ನು ಕಣ್ಣಲ್ಲೇ ಸೆರೆ ಹಿಡಿಯುತ್ತಾನೆ. 
      ಆದಿನ ಸಂಜೆ ಎಲ್ಲರೂ ಹಿಂದಿರುಗಿ ನಿಶ್ಚಿತಾರ್ಥಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ. ಹತ್ತು ದಿನದಲ್ಲಿ ನಿಶ್ಚಿತಾರ್ಥ ನಡೆಯುತ್ತದೆ. ಸುರೇಶ್ ವಿದೇಶಕ್ಕೆ ಹೋಗುವ ಒಂದು  ವಾರಕ್ಕೆ ಮೊದಲು‌ ಶುಭಮುಹೂರ್ಥದಲ್ಲಿ ಮದುವೆ ಕೂಡ ಅದ್ಧೂರಿಯಾಗಿ ನಡೆಯುತ್ತದೆ. ಚಂದನಾ ಆ ಮನೆಯ ದೀಪ ಬೆಳಗುತ್ತಾಳೆ. ಪ್ರೀತಿಯ ಅತ್ತೆ ಮಾವ, ಮುದ್ದಿನ ಗಂಡನ ಜೊತೆ ಮಹಾರಾಣಿಯಂತೆ ಬಾಳುತ್ತಾಳೆ.
     ಕೆಲವು ವರ್ಷದಲ್ಲಿ ಹೇಮಾಳ ಮಗಳ ಹಾಗೂ ಮೊದಲ ಮಗನ( ಮೊದಲ ಮದುವೆ ಯಲ್ಲಿ ಜನಸಿದ ಮಗ) ಮದುವೆ ಕೂಡ ನಡೆಯುತ್ತದೆ. ಆದರೆ ಹೇಮಳ‌ ಸೊಸೆ ಅವಳನ್ನು ಕೀಳಾಗಿ ನೋಡಿಕೊಳ್ಳುತ್ತಾಳೆ. ಮಗ ಸೊಸೆ ಬೇರೆ ಮನೆ ಮಾಡಿಕೊಂಡು ವಾಸಿಸುತ್ತಾರೆ. ಇಲ್ಲಿ ಹೇಮಾ ಒಬ್ಬಂಟಿ ಆಗ ಗಂಡನಿಗೆ ಹೇಳಿ ಅಳುತ್ತಾಳೆ. ವಿದೇಶದಲ್ಲಿ ದುಡಿದದ್ದು ಸಾಕು ನಾನು ಇಲ್ಲಿ ಒಂಟಿ. ನಿಮ್ಮ ಆಸರೆ‌ ಬೇಕು ಎಂದಾಗ ಅವನೂ ಕೆಲಸ ಬಿಟ್ಟು ‌ಊರಿಗೆ ಬಂದು ಟ್ಯಾಕ್ಸಿ ತೆಗೆದು ದುಡಿಯುತ್ತಾನೆ.
     ಹೇಮಾ ಈಗ ಬದಲಾಗಿದ್ದಾಳೆ. ತಾನು ಮಾಡಿದ ತಪ್ಪಿಗೆ ಚಂದನಾಳಲ್ಲಿ ಕ್ಷಮೆ ಕೇಳಿ ಅವಳ‌ ಮನೆಗೆ ಹೋಗಿ ಬರುತ್ತಿದ್ದಾಳೆ. ನಾನು ಎಷ್ಟು ಕಷ್ಟ ಕೊಟ್ಟರೂ‌ ಮನಸಲ್ಲಿ ಇಟ್ಟುಕೊಳ್ಳದ ಚಂದನಾ ಅವಳಿಗೆ ದೇವತೆಯಂತೆ ಕಾಣುತ್ತಿದ್ದಾಳೆ.

          ನ್ಯಾನ್ಸಿ ಲಿಝಿ
    
 


 

Category:Fiction



ProfileImg

Written by Nancy Nelyady

Teacher writer

0 Followers

0 Following