ವೃಷ್ಟಿವನ ಅಥವಾ ಮಳೆಕಾಡು. ನಮ್ಮ ಭೂಮಿಯ ಮೇಲೆ ಅತ್ಯಂತ ಕಡಿಮೆ ಪ್ರದೇಶವನ್ನು ಆಕ್ರಮಿಸಿಕೊಂಡಿರುವ, ಆದರೆ ಅಷ್ಟೇ ಅಧಿಕ ಮಹತ್ವವನ್ನು ಹೊಂದಿರುವ ಭೌಗೋಳಿಕ ಪ್ರದೇಶಗಳು ಈ ಮಳೆಕಾಡುಗಳು. ಇಡೀ ಧರೆಯ ಮೇಲ್ಮೈ ವಿಸ್ತೀರ್ಣದ ಶೇಕಡಾ ಆರಕ್ಕಿಂತ ಕಡಿಮೆ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಈ ಮಳೆಕಾಡುಗಳು ಶೇಕಡಾ ನಲವತ್ತಕ್ಕಿಂತ ಹೆಚ್ಚು ಜೀವಿಪ್ರಭೇದಗಳಿಗೆ ಆಶ್ರಯತಾಣಗಳಾಗಿವೆ ಎಂದರೆ ಅವುಗಳ ಮಹತ್ವ ಎಂಥವರಿಗೂ ಅರಿವಾಗುತ್ತದೆ. ಜೊತೆಗೆ ಇಂಗಾಲದ ಡೈ ಆಕ್ಸೈಡನ್ನು ದ್ಯುತಿ ಸಂಶ್ಲೇಷಣೆಯ ಮೂಲಕ ಆಮ್ಲಜನಕವಾಗಿ ಪರಿವರ್ತಿಸುವ ಕ್ರಿಯೆಯಲ್ಲಿ ಈ ಕಾಡುಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದಲೇ ಇವುಗಳನ್ನು ಧರೆಯ ಶ್ವಾಸಕೋಶಗಳು ಎಂದು ಕರೆಯುತ್ತಾರೆ. ಮಳೆಕಾಡುಗಳು ನಾಶವಾದರೆ ಇಡೀ ಧರೆಯ ಪರಿಸರ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿ ಕುಸಿದುಬೀಳುತ್ತದೆ.
ಮಳೆಕಾಡುಗಳೆಂದರೆ ವರ್ಷದಲ್ಲಿ ಸರಾಸರಿ ನೂರು ಇಂಚುಗಳಿಗಿಂತಲೂ ಅಧಿಕ ಮಳೆ ಬೀಳುವ ಪ್ರದೇಶಗಳು. ಭೂಮಿಯ ಮೇಲೆ ಎರಡು ರೀತಿಯ ಮಳೆಕಾಡುಗಳಿವೆ. ಒಂದು ಉಷ್ಣವಲಯದ ಮಳೆಕಾಡುಗಳು, ಇನ್ನೊಂದು ಸಮಶೀತೋಷ್ಣವಲಯದ ಮಳೆಕಾಡುಗಳು. ಉಷ್ಣವಲಯದ ಮಳೆಕಾಡುಗಳು ಹೆಸರಿಗೆ ತಕ್ಕಂತೆ ಅಧಿಕ ಉಷ್ಣತೆಯ ಪ್ರದೇಶಗಳು. ಈ ಕಾಡುಗಳು ಸಮಭಾಜಕ ವೃತ್ತದ ಆಸುಪಾಸಿನಲ್ಲೇ ಕಂಡುಬರುತ್ತವೆ. ಸಮಶೀತೋಷ್ಣ ವಲಯದ ಕಾಡುಗಳು ವರ್ಷದ ಉದ್ದಕ್ಕೂ ಹೆಚ್ಚುಕಡಿಮೆ ಒಂದೇ ರೀತಿಯ ಉಷ್ಣಾಂಶ ಹೊಂದಿದ್ದು ಉಷ್ಣವಲಯದ ಕಾಡುಗಳಿಗಿಂತ ಕಡಿಮೆ ಉಷ್ಣಾಂಶ ಹೊಂದಿರುತ್ತವೆ. ಆದರೆ ಜೀವವೈವಿಧ್ಯದ ವಿಷಯಕ್ಕೆ ಬಂದರೆ ಯಾವ ಮಳೆಕಾಡುಗಳೂ ಕಡಿಮೆಯಿಲ್ಲ. ವಿಜ್ಞಾನ ಇದುವರೆಗೂ ಕಂಡುಕೇಳರಿಯದಂಥ ಹೊಸಹೊಸ ಜೀವಿಪ್ರಭೇದಗಳು ಪ್ರತಿದಿನ ಪತ್ತೆಯಾಗುತ್ತಲೇ ಇರುತ್ತವೆ. ಭಾರತದ ಪಶ್ಚಿಮ ಘಟ್ಟಗಳಲ್ಲೇ ಪ್ರತಿವರ್ಷ ಹೊಸಹೊಸ ಪ್ರಭೇದದ ಕಪ್ಪೆಗಳು ಬೆಳಕಿಗೆ ಬರುತ್ತಿವೆ. ಬಹುಶಃ ಮಳೆಕಾಡಿನಲ್ಲಿರುವ ಎಲ್ಲ ಜೀವಿಪ್ರಭೇದಗಳನ್ನೂ ಗುರುತಿಸಿ ಹೆಸರಿಸುವ ಕೆಲಸ ಮನುಷ್ಯರಿಂದ ಯಾವತ್ತೂ ಸಂಪೂರ್ಣವಾಗಿ ಮಾಡಲು ಸಾಧ್ಯವೇ ಇಲ್ಲವೆಂದರೆ ಅತಿಶಯೋಕ್ತಿಯಾಗುವುದಿಲ್ಲ, ಏಕೆಂದರೆ ಈ ಕಾಡುಗಳ ಜೀವವೈವಿಧ್ಯವೇ ಅಂಥದ್ದು.
ಉಷ್ಣವಲಯದ ಮಳೆಕಾಡುಗಳಲ್ಲಿ ಮೊದಲು ನೆನಪಿಗೆ ಬರುವುದೇ ಅಮೆಜೋನಿಯಾ ಮಳೆಕಾಡು. ದಕ್ಷಿಣ ಅಮೆರಿಕದಲ್ಲಿ ಜಗತ್ತಿನ ಅತಿದೊಡ್ಡ ನದಿ ಅಮೆಜಾನ್ ಹರಿಯುತ್ತದೆ. ಸುಮಾರು ನಾಲ್ಕುಸಾವಿರ ಮೈಲಿ ಉದ್ದದ ಮತ್ತು ಜಗತ್ತಿನಲ್ಲೇ ಅತಿಹೆಚ್ಚು ನೀರನ್ನು ಸಾಗರಕ್ಕೆ ಸೇರಿಸುವ ನದಿಯೆಂದೇ ಹೆಸರಾಗಿರುವ ಅಮೆಜಾನ್ ನದಿ ತನ್ನ ಹರಿವಿನ ಎರಡೂ ಬದಿಗಳಲ್ಲಿ ಜಗತ್ತಿನ ಅತಿದೊಡ್ಡ ಮತ್ತು ಅತಿ ಶ್ರೀಮಂತವಾದ ಅಮೆಜೋನಿಯಾ ಮಳೆಕಾಡನ್ನು ಪೋಷಿಸುತ್ತಿದೆ. ಇಲ್ಲಿ ಕಾಣಸಿಗುವ ಜೀವಿಪ್ರಭೇದಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಪ್ರಭೇದಗಳು ಜಗತ್ತಿನ ಬೇರೆಲ್ಲೂ ಕಂಡುಬರುವುದಿಲ್ಲ. ಆದ್ದರಿಂದ ಇವುಗಳ ಸಂರಕ್ಷಣೆಗೆ ಅತೀವ ಮಹತ್ವವಿದೆ. ಸಸ್ತನಿಗಳು, ಹಕ್ಕಿಗಳು, ಉರಗಗಳು, ಉಭಯವಾಸಿಗಳು, ಮತ್ಸ್ಯಗಳು, ಮೃದ್ವಂಗಿಗಳು, ಸಂಧಿಪದಿಗಳು, ಹೀಗೆ ಇಲ್ಲಿ ಇಲ್ಲ ಎನ್ನುವಂಥ ಜೀವಿವರ್ಗವೇ ಇಲ್ಲ. ಕೊಂಚ ಮೈಗೆ ತಾಗಿದರೂ ಪಾರ್ಶ್ವವಾಯು ಉಂಟಾಗಿ ಕೆಲವೇ ಕ್ಷಣಗಳಲ್ಲಿ ಸಾವನ್ನುಂಟುಮಾಡುವಂಥ ಘನಘೋರ ವಿಷ ಹೊಂದಿದ ಕಪ್ಪೆಗಳು, ನಾಲ್ಕಾರು ಮೈಲು ದೂರಕ್ಕೆ ಕೇಳಿಸುವಂತೆ ಬೊಬ್ಬಿರಿಯುವ ಹೌಲರ್ ಮಂಗಗಳು, ಉದ್ದುದ್ದ ಕೈಕಾಲುಗಳ ಜೇಡಕೋತಿಗಳು, ಇಲಿಯಷ್ಟೇ ಚಿಕ್ಕ ಗಾತ್ರದ ಪಿಗ್ಮಿ ಮಾರ್ಮೋಸೆಟ್ ಮಂಗಗಳು, ಅಂಗೈಯಗಲದ ಭಯಾನಕ ಟ್ಯಾರಂಟುಲಾ ಜೇಡಗಳು, ಭಾರೀ ಗಾತ್ರದ ಕೇಮ್ಯಾನ್ ಎಂಬ ಮೊಸಳೆಗಳು, ಆ ಮೊಸಳೆಗಳನ್ನೇ ಹಿಡಿದು ನುಂಗುವ ಬೃಹತ್ ಅನಕೊಂಡಾಗಳು, ದಕ್ಷಿಣ ಅಮೆರಿಕದ ಅತಿದೊಡ್ಡ ಬೆಕ್ಕು ಜಾಗ್ವಾರ್ ಇವೆಲ್ಲ ಈ ಕಾಡಿನಲ್ಲಿರುವ ಅಪರೂಪದ ಜೀವಿಗಳಿಗೆ ಕೆಲವು ಉದಾಹರಣೆಗಳಷ್ಟೆ.
ಏಷ್ಯಾ ಖಂಡದಲ್ಲೂ ಮಳೆಕಾಡುಗಳು ಹೇರಳವಾಗಿವೆ. ಇಂಡೋನೇಷ್ಯಾ, ಮಲೇಷ್ಯಾ, ಪಾಪುವಾ ನ್ಯೂಗಿನಿ, ಶ್ರೀಲಂಕಾ, ಫಿಲಿಪ್ಪೀನ್ಸ್ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ಆಗಸಕ್ಕೆ ಛತ್ರಿ ಹಿಡಿದಂತೆ ಬೃಹತ್ ಮಳೆಕಾಡುಗಳಿವೆ. ಪಾಪುವಾ ನ್ಯೂಗಿನಿಯ ಸ್ವರ್ಗದ ಹಕ್ಕಿಗಳಂತೂ ತಮ್ಮ ಸ್ವರ್ಗಸದೃಶ ಸೌಂದರ್ಯದಿಂದ ಇಡೀ ಜಗತ್ತಿನಲ್ಲೇ ಪ್ರಸಿದ್ಧವಾಗಿವೆ. ಆ ಸೌಂದರ್ಯದಿಂದಾಗಿಯೇ ಮನುಷ್ಯರ ಆಕ್ರಮಣಕ್ಕೆ ತುತ್ತಾಗಿ ಅಳಿವಿನ ಹಾದಿಯನ್ನೂ ಹಿಡಿದಿವೆ! ಕಗ್ಗತ್ತಲೆಯ ಖಂಡ ಆಫ್ರಿಕಾದಲ್ಲಿ ಸಹ ಕಾಂಗೋ ಮತ್ತು ಕ್ಯಾಮರೂನ್ ದೇಶಗಳಲ್ಲಿ ಭಾರೀ ಮಳೆಕಾಡುಗಳಿವೆ.
ಎಲ್ಲ ಮಳೆಕಾಡುಗಳ ಪ್ರಧಾನ ಲಕ್ಷಣವೆಂದರೆ ನೆಲಕ್ಕೆ ಸೂರ್ಯರಶ್ಮಿಯೇ ಸೋಕದಂಥ ಬೃಹತ್ ಮರಗಳ ಛತ್ರಿ. ಅಲ್ಲಿನ ಆಗಸದಲ್ಲಿ ಮರಗಳ ಛಾವಣಿ ಎಷ್ಟು ದಟ್ಟವಾಗಿರುತ್ತದೆ ಎಂದರೆ ಮನೆಗೆ ಮಾಡು ಇರುವಂತೆಯೇ ಎಲೆಗಳ ಛತ್ರಿ ಇರುತ್ತದೆ. ಹಾಗಾಗಿ ಅಲ್ಲಿ ನಡುಮಧ್ಯಾಹ್ನದಲ್ಲೂ ಸಂಜೆಗತ್ತಲು ಕವಿದಿರುತ್ತದೆ. ಎಂಥ ಬಿರುಸಾದ ಮಳೆಯಲ್ಲೂ ಅಲ್ಲಿ ನೀರು ನೇರವಾಗಿ ನೆಲದ ಮೇಲೆ ಬೀಳುವುದಿಲ್ಲ. ಏಕೆಂದರೆ ಮರದ ಮೇಲೆ ಬಿದ್ದ ನೀರು ತೊಟ್ಟಿಕ್ಕಿಕೊಂಡು ನೆಲದ ಮೇಲೆ ಬೀಳಬೇಕು. ಜೊತೆಗೆ ಅಲ್ಲಿ ಮರಗಳ ಛಾವಣಿ ವಿವಿಧ ಹಂತಗಳಲ್ಲಿರುತ್ತದೆ. ಎಲ್ಲ ಮರಗಳ ಉದ್ದೇಶವೂ ಸಾಧ್ಯವಾದಷ್ಟು ಹೆಚ್ಚು ಸೂರ್ಯರಶ್ಮಿಗೆ ತೆರೆದುಕೊಳ್ಳುವುದು. ಆದ್ದರಿಂದ ಎಲ್ಲ ಮರಗಳೂ ಎತ್ತರೆತ್ತರ ಬೆಳೆಯುವುದಕ್ಕೇ ಪೈಪೋಟಿ ನಡೆಸುತ್ತವೆ. ಮಳೆಕಾಡುಗಳ ವೈವಿಧ್ಯ ಎಷ್ಟಿರುತ್ತದೆ ಎಂದರೆ ಪ್ರತಿ ಎಕರೆಗೆ ನೂರೈವತ್ತರಿಂದ ಇನ್ನೂರು ಬೇರೆಬೇರೆ ಜಾತಿಯ ಮರಗಳಿರುತ್ತವೆ! ಅಲ್ಲಿನ ಮರಗಳ ಸರಾಸರಿ ಎತ್ತರವೂ ನೂರೈವತ್ತರಿಂದ ಇನ್ನೂರು ಅಡಿ! ಮರಗಳ ನೆತ್ತಿಯಲ್ಲಿ ಒಂದು ರೀತಿಯ ಜೀವಿಗಳು ವಾಸಿಸಿದರೆ ಸ್ವಲ್ಪ ಕೆಳಗೆ ಇನ್ನೊಂದು ರೀತಿಯ ಜೀವಿಗಳು. ಮರದ ಕಾಂಡದಲ್ಲಂತೂ ನೂರಾರು ಜಾತಿಯ ಕೀಟಗಳು ಮತ್ತು ಪೊಟರೆಗಳ ಒಳಗೆ ಮರಕುಟುಕದಂಥ ಹಕ್ಕಿಗಳು. ನೆಲಮಟ್ಟದಲ್ಲಿ ಸಹ ಜೀವಜಂತುಗಳು ಕಿಕ್ಕಿರಿದಿರುತ್ತವೆ. ಒಟ್ಟಿನಲ್ಲಿ ಮಳೆಕಾಡುಗಳೆಂದರೆ ಅದೊಂದು ಕಿನ್ನರಲೋಕವೇ ಸರಿ.
ಇನ್ನು ಸಮಶೀತೋಷ್ಣವಲಯದ ಮಳೆಕಾಡುಗಳ ವಿಷಯಕ್ಕೆ ಬಂದರೆ ಅವು ವಿಸ್ತೀರ್ಣದಲ್ಲಿ ಉಷ್ಣವಲಯದ ಮಳೆಕಾಡುಗಳಿಗಿಂತ ಕಡಿಮೆ ಇವೆ. ಅವು ಭೂಮಿಯ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿವೆ. ಉತ್ತರ ಅಮೆರಿಕಾ, ಯೂರೋಪ್, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾ ಖಂಡಗಳ ಕೆಲವೇ ಪ್ರದೇಶಗಳಲ್ಲಿ ಮಾತ್ರ ಈ ಮಳೆಕಾಡುಗಳು ಕಾಣಸಿಗುತ್ತವೆ. ಬ್ರಿಟಿಷ್ ದ್ವೀಪಗಳು, ಅಮೆರಿಕಾದ ಕೆಲವು ಭಾಗಗಳು, ಚಿಲಿ ಮತ್ತು ಅರ್ಜೆಂಟೀನಾ, ನ್ಯೂಜಿಲೆಂಡ್, ಜಪಾನ್ ಮತ್ತು ಕೊರಿಯಾ ಇವೇ ಈ ಪ್ರದೇಶಗಳು.
ಮಳೆಕಾಡುಗಳಲ್ಲಿ ಜೀವಿಗಳ ವಾಸಕ್ಕೆ ಯೋಗ್ಯವಲ್ಲದ ಸ್ಥಳಗಳೇ ಇಲ್ಲ ಎಂದರೆ ತಪ್ಪಾಗಲಾರದು. ಮರಗಳ ಮೇಲ್ಭಾಗದಲ್ಲಿ ವಿಧವಿಧದ ಪಕ್ಷಿಗಳು, ಮಂಗಗಳು, ವಾನರಗಳು ಮತ್ತು ಇತರ ಪ್ರೈಮೇಟುಗಳು ವಾಸಿಸುತ್ತವೆ. ಮರಗಳ ಕಾಂಡಗಳಲ್ಲಂತೂ ಮೇಲಿನಿಂದ ಕೆಳಗಿನವರೆಗೆ ನೂರಾರು ರೀತಿಯ ಕೀಟಗಳು ಮತ್ತು ಪೊಟರೆಗಳೊಳಗೆ ಗಿಳಿ, ಮರಕುಟುಕ ಮತ್ತಿತರ ಹಕ್ಕಿಗಳು ವಾಸಿಸುತ್ತವೆ. ನೆಲದ ಮೇಲೆ ಸಹ ಹುಲ್ಲು, ಪೊದೆಗಿಡಗಳು ದಟ್ಟವಾಗಿ ಬೆಳೆದಿರುವುದರಿಂದ ಅಲ್ಲಿ ಸಹ ಅಸಂಖ್ಯ ಜೀವಿಗಳು ವಾಸಿಸುತ್ತವೆ. ಒಂದು ಅಂದಾಜಿನ ಪ್ರಕಾರ ಇಲ್ಲಿ ವಾಸಿಸುವ ಅರ್ಧದಷ್ಟು ಪ್ರಭೇದಗಳು ಬೇರೆ ಎಲ್ಲೂ ಕಾಣಸಿಗುವುದಿಲ್ಲ. ಅಂಥ ಕೆಲವು ಜೀವಿಗಳ ಬಗೆಗೆ ತಿಳಿದುಕೊಳ್ಳೋಣ.
ನಾವೆಲ್ಲ ನಮ್ಮ ಮನೆಯ ಸುತ್ತಮುತ್ತ ಹಸಿರು, ನೀಲಿ ಬಣ್ಣದ ಗಿಳಿಗಳನ್ನು ಮಾತ್ರ ನೋಡಿದ್ದೇವೆ. ಅದರಲ್ಲೇ ಕೆಂಪು ಕೊಕ್ಕಿನ ಮತ್ತು ಕೆಂಪು ತಲೆಯ ಕೆಲವು ಪ್ರಭೇದಗಳನ್ನು ನೋಡಿರಬಹುದಾದರೂ ನಾವು ನೋಡಿರುವುದೆಲ್ಲ ಪ್ರಧಾನವಾಗಿ ಹಸಿರುಬಣ್ಣ ಇರುವ ಗಿಳಿಗಳನ್ನೇ. ಆದರೆ ಅಮೆಜೋನಿಯಾ ಮಳೆಕಾಡಿನ ಮಕಾಗಳನ್ನು ನೋಡಿದರೆ ಎಂಥವರೂ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಡುತ್ತಾರೆ. ಈ ಪ್ರಭೇದದ ಗಿಳಿಗಳಲ್ಲಿ ಈ ಪ್ರಪಂಚದಲ್ಲಿರುವ ಎಲ್ಲ ಬಣ್ಣಗಳೂ ಇವೆ! ನೀವೊಮ್ಮೆ ಮಕಾಗಳ ಚಿತ್ರಗಳನ್ನು ನೋಡಿದರೆ ಇದು ಅತಿಶಯೋಕ್ತಿಯಲ್ಲ ಎಂದು ಸ್ಪಷ್ಟವಾಗುತ್ತದೆ. ಹೈಸಿಂತ್ ಮಕಾ ಎಂಬ ಗಿಳಿ ಸುಮಾರು ಮೂರು-ನಾಲ್ಕು ಅಡಿ ಉದ್ದವಿರುತ್ತದೆ. ಮೈಯೆಲ್ಲ ಕಡುನೀಲಿ ಬಣ್ಣದ ಈ ಗಿಳಿ ಗಿಳಿಗಳ ವರ್ಗದಲ್ಲೇ ಅತಿದೊಡ್ಡ ಪ್ರಭೇದವೆಂದು ಹೆಸರಾಗಿದೆ. ಜೊತೆಗೆ ಹಳದಿ-ನೀಲಿ ಮಕಾ, ಕೆಂಪು ಬಾಲದ ಹಳದಿ-ನೀಲಿ ಮಕಾ, ಸ್ಕಾರ್ಲೆಟ್ ಮಕಾ, ದೈತ್ಯ ಹಸಿರು ಮಕಾ, ಮಿಲಿಟರಿ ಮಕಾ, ನೀಲಿ ತಲೆಯ ಮಕಾ, ನೀಲಿ ಕತ್ತಿನ ಮಕಾ, ಚಿನ್ನದ ಕಾಲರ್ ಇರುವ ಮಕಾ ಹೀಗೆ ಬೇರೆಬೇರೆ ಬಣ್ಣಗಳ ಕಣ್ಣು ಕೋರೈಸುವ ಉಡುಗೆಗಳ ವಿವಿಧ ಪ್ರಭೇದದ ಮಕಾಗಳು ಅಸ್ತಿತ್ವದಲ್ಲಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಗಿಳಿಗಳ ವರ್ಗದಲ್ಲೇ ಮಕಾಗಳು ಅತ್ಯಧಿಕ ವರ್ಣವೈವಿಧ್ಯ ಹೊಂದಿರುವ ಹಕ್ಕಿಗಳು ಎಂದರೆ ತಪ್ಪಾಗಲಾರದು. ಮಕಾಗಳು ವಾಸಿಸುವುದು ಭಾರೀ ಹೆಮ್ಮರಗಳ ಪೊಟರೆಗಳೊಳಗೆ. ಆದ್ದರಿಂದ ಸತ್ತ ಮರಗಳು ಸಹ ಅವುಗಳ ಪಾಲಿಗೆ ಅತ್ಯಮೂಲ್ಯ ಆಸ್ತಿಯಾಗಬಲ್ಲವು. ಜೊತೆಗೆ ಅವು ಸಂಪೂರ್ಣ ಫಲಾಹಾರಿ ಪಕ್ಷಿಗಳು. ಆದ್ದರಿಂದ ಸದಾ ಹಣ್ಣುತುಂಬಿದ ಮರಗಳು ಅವುಗಳಿಗೆ ಅತ್ಯವಶ್ಯಕ. ಮಳೆಕಾಡುಗಳಲ್ಲಿ ವರ್ಷದ ಹನ್ನೆರಡು ತಿಂಗಳೂ ಒಂದಲ್ಲ ಒಂದು ಜಾತಿಯ ಮರಗಳು ಹಣ್ಣು ಕೊಡುತ್ತಲೇ ಇರುವುದರಿಂದ ಅವುಗಳಿಗೆ ಆಹಾರ ಸಮಸ್ಯೆ ಎದುರಾಗುವುದಿಲ್ಲ.
ಹೊಸ ಪ್ರಪಂಚದ ಮಂಗಗಳು ಅಮೆಜೋನಿಯಾ ಮಳೆಕಾಡಿನ ಬಹುಮುಖ್ಯ ಸಸ್ತನಿಗಳು. ಇವು ಅನೇಕ ರೀತಿಯಲ್ಲಿ ಹಳೆ ಪ್ರಪಂಚದ ಮಂಗಗಳಿಗಿಂತ ವಿಭಿನ್ನವಾಗಿವೆ. ಬಹುಮುಖ್ಯ ವ್ಯತ್ಯಾಸವೆಂದರೆ ಈ ಮಂಗಗಳ ಬಾಲಕ್ಕೆ ಹಿಡಿಪು ಇರುತ್ತದೆ. ಅಂದರೆ ಅವು ತಮ್ಮ ಬಾಲದಿಂದ ಮರಗಳ ಕೊಂಬೆಗಳನ್ನು ಸುತ್ತಿಹಿಡಿಯಬಲ್ಲವು. ಆದರೆ ಹಳೆ ಪ್ರಪಂಚದ (ಅಂದರೆ ಏಷ್ಯಾ, ಆಫ್ರಿಕಾ ಮತ್ತು ಯೂರೋಪಿನ ಮಂಗಗಳು) ಯಾವ ಮಂಗಗಳಿಗೂ ಈ ಸಾಮರ್ಥ್ಯ ಇಲ್ಲ. ಜೊತೆಗೆ ಹೊಸ ಪ್ರಪಂಚದ ಮಂಗಗಳ ಮೂಗು ಚಪ್ಪಟೆಯಾಗಿರುತ್ತದೆ. ಹೌಲರ್ ಮಂಗ, ಸ್ಪೈಡರ್ ಮಂಗ, ಅಳಿಲು ಮಂಗ, ಕಪುಚಿನ್ ಮಂಗ, ಮಾರ್ಮೋಸೆಟ್ ಮಂಗ, ಉವಕಾರೀ ಇತ್ಯಾದಿಗಳು ಹೊಸ ಪ್ರಪಂಚದ ಮಂಗಗಳ ಪ್ರಭೇದಗಳು.
ಹೌಲರ್ ಮಂಗಗಳಿಗೆ ಆ ಹೆಸರು ಬಂದಿದ್ದು ಅವುಗಳ ಕರ್ಣಕಠೋರವಾದ ಕಿರುಚಾಟದಿಂದ. ನಾಲ್ಕಾರು ಕಿಲೋಮೀಟರ್ ದೂರಕ್ಕೆ ಕೇಳಿಸುವಂತೆ ಅವು ಕೂಗುತ್ತವೆ. ಸಾಮಾನ್ಯವಾಗಿ ಬೆಳಗಿನ ಜಾವ ಸೂರ್ಯೋದಯವಾಗುತ್ತಿದ್ದಂತೆ ಇಡೀ ಕಾಡನ್ನೇ ಎಚ್ಚರಿಸುವಂತೆ ಇವು ಕೂಗಲು ಪ್ರಾರಂಭಿಸುತ್ತವೆ. ಈ ಕೂಗು ಒಂದರೊಡನೆ ಒಂದು ಸಂಪರ್ಕ ಏರ್ಪಡಿಸಿಕೊಳ್ಳುವ ಮಾಧ್ಯಮವೂ ಹೌದು. ಸಾಮಾನ್ಯವಾಗಿ ಈ ಮಂಗಗಳು ಬೇರೆ ಮಂಗಗಳಿಗೆ ಹೋಲಿಸಿದರೆ ಕಡಿಮೆ ಚಟುವಟಿಕೆಯಿಂದಿರುತ್ತವೆ. ಇದಕ್ಕೆ ಇವುಗಳ ಆಹಾರಕ್ರಮವೇ ಕಾರಣ. ಇವುಗಳ ಪ್ರಧಾನ ಆಹಾರ ಎಲೆಗಳು. ಎಲೆಗಳನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಅವುಗಳಲ್ಲಿರುವ ಸೆಲ್ಯುಲೋಸ್ ಅನ್ನು ಜೀರ್ಣಿಸಿಕೊಳ್ಳಲು ಬ್ಯಾಕ್ಟೀರಿಯಾಗಳ ನೆರವು ಪಡೆಯಬೇಕಾಗುತ್ತದೆ. ಜೊತೆಗೆ ಈ ಎಲೆಗಳಲ್ಲಿ ಟ್ಯಾನಿನ್, ಸ್ಟ್ರಿಕ್ನಿನ್ ನಂಥ ವಿಷಕಾರಕಗಳು ಸಹ ಇರುತ್ತವೆ. ಆದ್ದರಿಂದ ಯಾವುದೇ ಒಂದು ಜಾತಿಯ ಎಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದೆ ಬೇರೆಬೇರೆ ಎಲೆಗಳನ್ನು ಸೇವಿಸುವ ಮೂಲಕ ಯಾವುದೇ ಒಂದು ರೀತಿಯ ವಿಷ ಓವರ್ ಡೋಸ್ ಆಗದಂತೆ ಈ ಮಂಗಗಳು ಎಚ್ಚರಿಕೆ ವಹಿಸುತ್ತವೆ. ಆದರೆ ಈ ಎಲೆಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರಣ ಅವು ದೈಹಿಕವಾಗಿ ಚಲನಶೀಲತೆ ಇಲ್ಲದೆ ಸೋಮಾರಿಗಳಂತೆ ಕಾಣುತ್ತವೆ.
ಜೇಡಕೋತಿಗಳಿಗೆ ಆ ಹೆಸರು ಬರಲು ಕಾರಣ ಅವುಗಳ ಅಸಾಧಾರಣ ಉದ್ದದ ಕೈಕಾಲುಗಳು. ಸಾಮಾನ್ಯವಾಗಿ ಬೇರೆಲ್ಲ ಮಂಗಗಳಿಗಿಂತ ಉದ್ದವಾದ ಕೈಕಾಲುಗಳನ್ನು ಈ ಮಂಗಗಳು ಹೊಂದಿವೆ. ಇವುಗಳ ಲಾಭವೆಂದರೆ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುವುದು ಇವಕ್ಕೆ ಬಹಳ ಸುಲಭವಾಗುತ್ತದೆ. ಒಮದು ಮರದ ಕೊಂಬೆಯನ್ನು ಹಿಡಿದು ಒಮ್ಮೆ ಜೀಕಿದರೆ ಸಾಕಷ್ಟು ದೂರದಲ್ಲಿರುವ ಇನ್ನೊಂದು ಮರದ ಕೊಂಬೆಯನ್ನೂ ಸಹ ಹಿಡಿಯಬಹುದು.
ಮಾರ್ಮೋಸೆಟ್ ಕೋತಿಗಳು ಸಹ ಹೊಸ ಪ್ರಪಂಚದ ಮುಖ್ಯವಾದ ಮಂಗಪ್ರಭೇದಗಳು. ಇವುಗಳಲ್ಲಿ ಪಿಗ್ಮಿ ಮಾರ್ಮೋಸೆಟ್ ಎಂಬ ಕೋತಿಯಿದೆ. ಒಬ್ಬ ಪ್ರೌಢ ಮನುಷ್ಯನ ಹೆಬ್ಬೆರಳ ಮೇಲೆ ಆರಾಮವಾಗಿ ಕೂರಬಲ್ಲಷ್ಟು ಚಿಕ್ಕ ಮಂಗಗಳಿವು. ಜಗತ್ತಿನಲ್ಲೇ ಅತಿಚಿಕ್ಕ ಮಂಗಪ್ರಭೇದಗಳು ಇವೇ. ಜೊತೆಗೆ ಬೋಳು ತಲೆಯಿಂದಲೇ ಪ್ರಸಿದ್ಧವಾದ ಉವಕಾರೀ ಮಂಗ, ಭಾರೀ ಮೀಸೆಯಿಂದ ಪ್ರಸಿದ್ಧವಾಗಿ ಚಕ್ರವರ್ತಿ ಟ್ಯಾಮರಿನ್ ನ ಹೆಸರನ್ನು ಪಡೆದ ಎಂಪರರ್ ಟ್ಯಾಮರಿನ್ ಮಂಗ, ಸಿಂಹದಂತೆ ಮುಖವನ್ನು ಹೊಂದಿದ ಗೋಲ್ಡನ್ ಲಯನ್ ಟ್ಯಾಮರಿನ್ ಇತ್ಯಾದಿ ಮಂಗಗಳ ಪ್ರಭೇದದಿಂದ ಈ ಮಳೆಕಾಡುಗಳು ಪ್ರಸಿದ್ಧವಾಗಿವೆ.
ಮಳೆಕಾಡುಗಳ ಖಾಯಂ ನಿವಾಸಿ ಮತ್ತು ಇಲ್ಲಿನ ಉನ್ನತ ಬೇಟೆಗಾರ ಪ್ರಾಣಿಯಾದ ಜಾಗ್ವಾರ್ ಹೊಸ ಪ್ರಪಂಚದ ಅತಿದೊಡ್ಡ ಬೆಕ್ಕೆಂದೇ ಹೆಸರಾಗಿದೆ. ಹುಲಿ ಮತ್ತು ಸಿಂಹಗಳ ನಂತರ ಜಗತ್ತಿನ ಮೂರನೇ ಅತಿದೊಡ್ಡ ಬೆಕ್ಕಾದ ಜಾಗ್ವಾರ್ ನಲ್ಲಿ ಗಂಡುಗಳು ಸರಾಸರಿ ನೂರು ಕಿಲೋ ತೂಗುತ್ತವೆ. ಭಾರೀ ಗಾತ್ರದ ಗಂಡುಗಳು 150 ಕಿಲೋ ಮೀರುವುದೂ ಇದೆ. ಬೆಕ್ಕುಗಳಲ್ಲೆಲ್ಲ ಜಾಗ್ವಾರ್ ಗಳು ಅತ್ಯಂತ ಗಿಡ್ಡವಾದ ಕಾಲು ಮತ್ತು ಬಾಲವನ್ನು ಹೊಂದಿವೆ. ಆದರೆ ಇವುಗಳ ದೈಹಿಕ ಸಾಮರ್ಥ್ಯದ ಬಗ್ಗೆ ಎರಡು ಮಾತೇ ಇಲ್ಲ. ಏಕೆಂದರೆ ಇವುಗಳ ದವಡೆ ಎಷ್ಟು ಬಲಿಷ್ಠವಾಗಿರುತ್ತದೆ ಎಂದರೆ ಇವು ಬಲಿಪ್ರಾಣಿಯ ತಲೆಬುರುಡೆಯನ್ನೇ ಕಚ್ಚಿ ಸೀಳಬಲ್ಲವು. ಇಂಥ ಸಾಮರ್ಥ್ಯ ಬೇರಾವುದೇ ಬೆಕ್ಕಿಗೆ ಇಲ್ಲ. ಆದ್ದರಿಂದಲೇ ಜಾಗ್ವಾರ್ ಗಳು ಟಾಪಿರ್, ಕ್ಯಾಪಿಬಾರಾ, ಕೇಮ್ಯಾನ್ ನಂಥ ಭಾರೀ ಪ್ರಾಣಿಗಳನ್ನು ಸಹ ಸುಲಲಿತವಾಗಿ ಬೇಟೆಯಾಡಬಲ್ಲವು. ಮೇಲ್ನೋಟಕ್ಕೆ ನಮ್ಮ ಚಿರತೆಗಳಂತೆಯೇ ಕಾಣುವ ಜಾಗ್ವಾರ್ ಗಳು ಚಿರತೆಗಳಿಗಿಂತಲೂ ದಷ್ಟಪುಷ್ಟವಾಗಿರುತ್ತವೆ.
ಟಾಪಿರ್‌ಗಳು ಘೇಂಡಾಮೃಗಗಳ ಸಮೀಪದ ಸಂಬಂಧಿಗಳು. ಇಂದು ಭೂಮಿಯ ಮೇಲೆ ಐದು ಪ್ರಭೇದದ ಟಾಪಿರ್‌ಗಳು ಅಸ್ತಿತ್ವದಲ್ಲಿವೆ. ಈ ಎಲ್ಲ ಐದು ಪ್ರಭೇದಗಳೂ ಅಳಿವಿನಂಚಿನಲ್ಲಿರುವ ಪ್ರಭೇದಗಳಾಗಿವೆ. ಕುಗ್ಗುತ್ತಿರುವ ಮಳೆಕಾಡುಗಳ ವಿಸ್ತೀರ್ಣ, ಕಳ್ಳಬೇಟೆ ಮುಂತಾದ ಕಾರಣಗಳಿಂದ ಟಾಪಿರ್ ಗಳು ಸಂಕಷ್ಟದಲ್ಲಿವೆ. ಬ್ರೆಜಿಲ್ ದೇಶದಲ್ಲಿರುವ ಬ್ರೆಜಿಲಿಯನ್ ಟಾಪಿರ್‌ಗಳು ಜಾಗ್ವಾರ್‌ಗಳ ಪ್ರಮುಖ ಆಹಾರ. ಹಾಗಾಗಿ ಇವುಗಳ ವಂಶನಾಶವು ಜಾಗ್ವಾರ್‌ಗಳ ಮೇಲೂ ಪರಿಣಾಮ ಬೀರುವುದು ಖಂಡಿತ. ಆಹಾರ ಸರಪಳಿಯಲ್ಲಿ ಹೇಗೆ ಒಂದನ್ನೊಂದು ಅವಲಂಬಿತವಾಗಿರುತ್ತವೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಅದೇ ರೀತಿ ಮಲೇಷ್ಯಾದ ಮಳೆಕಾಡುಗಳಲ್ಲೂ ಮಲಯನ್ ಟಾಪಿರ್‌ಗಳು ಪ್ರಸಿದ್ಧವಾಗಿವೆ.
ಆಫ್ರಿಕಾ ಖಂಡದಲ್ಲಿ ಕಾಂಗೋ ನದಿ ಅತ್ಯಂತ ಪ್ರಸಿದ್ಧವಾದ ನದಿ. ಕಾಂಗೋ ನದಿ ಕೂಡ ಭಾರೀ ಮಳೆಕಾಡುಗಳನ್ನು ತನ್ನೊಡಲಲ್ಲಿ ಪೋಷಿಸುತ್ತಿದೆ. ಈ ನದಿಯ ಸುತ್ತೆಲ್ಲ ಹರಡಿರುವ ಈ ಕಾಡುಗಳು ವಿಸ್ತೀರ್ಣದಲ್ಲಿ ಅಮೆಜೋನಿಯಾಗೆ ಸಾಟಿಯಾಗದಿದ್ದರೂ ಜೀವವೈವಿಧ್ಯದಲ್ಲಿ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಈ ಕಾಡುಗಳ ಬಹುಮುಖ್ಯ ಜೀವಿಗಳೆಂದರೆ ಗೋಸುಂಬೆಗಳು. ಭೂಮಿಯ ಮೇಲೆ ಇದುವರೆಗೆ ಸುಮಾರು ನೂರಾಅರವತ್ತು ಪ್ರಭೇದದ ಗೋಸುಂಬೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕಾಂಗೋ ಮಳೆಕಾಡುಗಳಲ್ಲಿ ಮತ್ತು ಮಡಗಾಸ್ಕರ್ ದ್ವೀಪಗಳಲ್ಲೇ ಅನೇಕ ಗೋಸುಂಬೆಗಳನ್ನು ಪತ್ತೆ ಹಚ್ಚಲಾಗಿದೆ. ಅವುಗಳ ಪೈಕಿ ಕೇವಲ ಒಂದೇ ಇಂಚು ಉದ್ದವಿರುವ ಒಂದು ಗ್ರೌಂಡ್ ಕೆಮೀಲಿಯನ್ ಜಗತ್ತಿನ ಅತಿಚಿಕ್ಕ ಕೆಮೀಲಿಯನ್ ಎಂದು ಹೆಸರಾಗಿದೆ.
ಪಾಪುವಾ ನ್ಯೂಗಿನಿ ದ್ವೀಪಗಳು ಸಹ ಮಳೆಕಾಡುಗಳಿಗೆ ಪ್ರಸಿದ್ಧವಾಗಿವೆ. ಈ ಕಾಡುಗಳಂತೂ ಮೊದಲೇ ಹೇಳಿದಂತೆ ಸ್ವರ್ಗದ ಹಕ್ಕಿಗಳಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿ ಈ ಕುಟುಂಬಕ್ಕೆ ಸೇರಿದ ಸುಮಾರು ನಲವತ್ತು ಪ್ರಭೇದಗಳಿವೆ. ಕಣ್ಣು ಕೋರೈಸುವ ವರ್ಣವೈವಿಧ್ಯದ ಗರಿಗಳಿಂದಾಗಿಯೇ ಸುಪ್ರಸಿದ್ಧವಾದ ಈ ನತದೃಷ್ಟ ಹಕ್ಕಿಗಳು ತಮ್ಮ ಸ್ವರ್ಗೀಯ ಸೌಂದರ್ಯದಿಂದಾಗಿಯೇ ವಿನಾಶದತ್ತ ಸಾಗುತ್ತಿವೆ. ಅದಕ್ಕೆ ಕಾರಣ ಮನುಷ್ಯರ ವಿಕೃತ ಆಸೆ-ದುರಾಸೆಗಳು. ಈ ಹಕ್ಕಿಗಳ ಗರಿಗಳನ್ನು ಕಿರೀಟದಂತೆ ಸಿಕ್ಕಿಸಿಕೊಳ್ಳುವ, ಮನೆಯ ಶೋಕೇಸಿನಲ್ಲಿ ಅಲಂಕಾರಕ್ಕಾಗಿ ಇಟ್ಟುಕೊಳ್ಳುವ ಖಯಾಲಿ ಕೆಲವು ಶ್ರೀಮಂತರಿಗೆ. ಆ ಕಾರಣಕ್ಕಾಗಿಯೇ ಅಲ್ಪಸಂಖ್ಯಾತವಾಗಿದ್ದ ಈ ಹಕ್ಕಿಗಳು ಇದೀಗ ಸರ್ಕಾರದ ರಕ್ಷಣೆಯಲ್ಲಿ ಕೊಂಚ ಉಸಿರಾಡುತ್ತಿವೆ.
ಮಳೆಕಾಡುಗಳಲ್ಲಿ ಅಕಶೇರುಕಗಳ ವೈವಿಧ್ಯ ಕೂಡ ಹೇರಳವಾಗಿದೆ. ಕೀಟಗಳು, ಜೇಡಗಳು, ಶತಪದಿಗಳು, ಸಹಸ್ರಪದಿಗಳು, ಏಡಿಗಳು ಹೀಗೆ ಅಕಶೇರುಕಗಳಲ್ಲಿ ಸಹ ಸಾವಿರಾರು ವೈವಿಧ್ಯಮಯ ಜೀವಿಗಳಿವೆ. ಅಕಶೇರುಕಗಳ ವೈವಿಧ್ಯ ಕಶೇರುಕಗಳ ವೈವಿಧ್ಯಕ್ಕೆ ಹೋಲಿಸಿದರೆ ತುಂಬಾ ಜಾಸ್ತಿ. ಇಡೀ ಭೂಮಿಯ ಮೇಲೆ ಶೇಕಡಾ ತೊಂಬತ್ತಾರರಷ್ಟು ಜೀವಿಪ್ರಭೇದಗಳು ಅಕಶೇರುಕಗಳೇ ಆಗಿವೆ. ಅದೇ ರೀತಿಯ ವೈವಿಧ್ಯವನ್ನು ಮಳೆಕಾಡುಗಳಲ್ಲಿ ಸಹ ಕಾಣಬಹುದು. ಹೇರಳ ಪ್ರಭೇದದ ಚಿಟ್ಟೆಗಳು, ದುಂಬಿಗಳು, ನೊಣಗಳು, ಜೇನುಹುಳಗಳು, ಇರುವೆಗಳು, ಜೇಡಗಳು ಇತ್ಯಾದಿಗಳನ್ನು ಹೆಜ್ಜೆಹೆಜ್ಜೆಗೂ ಕಾಣಬಹುದು. ಮಳೆಕಾಡುಗಳ ಅತಿ ಭಯಾನಕ ಕೀಟಗಳೆಂದರೆ ಡ್ರೈವರ್ ಇರುವೆಗಳು ಮತ್ತು ಸೈನಿಕ ಇರುವೆಗಳು. ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದ ಅನೇಕ ಮಳೆಕಾಡುಗಳಲ್ಲಿ ಈ ಇರುವೆಗಳನ್ನು ಕಾಣಬಹುದು. ಒಂದು ಶಾಶ್ವತವಾದ ಕಾಲೋನಿಯನ್ನು ಎಂದೂ ನಿರ್ಮಿಸದ ಈ ಭಯಾನಕ ಇರುವೆಗಳು ಸೈನ್ಯದಂತೆಯೇ ಮುನ್ನುಗ್ಗುತ್ತ ಕಂಡಕಂಡವನ್ನೆಲ್ಲ ಹಿಡಿದು ಕೊಂದು ತಿನ್ನುತ್ತ ಸಾಗುತ್ತವೆ. ಚೇಳು, ಜೇಡಗಳಂಥ ಸಾಮಾನ್ಯ ಕೀಟಗಳ ಬೇಟೆಗಾರರು ಕೂಡ ಈ ಇರುವೆಗಳ ಮುಂದೆ ಸೋತು ಕೈಚೆಲ್ಲುತ್ತವೆ.
ಮಳೆಕಾಡುಗಳ ವಿಶಿಷ್ಟ ಜೀವಿಗಳ ಬಳಿ ಡಾರ್ವಿನ್ ದುಂಬಿ ಅಥವಾ ಚಿಲಿಯನ್ ಸ್ಟ್ಯಾಗ್ ಬೀಟಲ್ ಎಂಬ ಒಂದು ಜಾತಿಯ ದುಂಬಿ ಪ್ರಸಿದ್ಧವಾಗಿದೆ. ಪ್ರಖ್ಯಾತ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಈ ದುಂಬಿಗಳನ್ನು ಸಂಗ್ರಹಿಸಿ ಅವುಗಳ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿದ. ಆದ್ದರಿಂದಲೇ ಅವುಗಳಿಗೆ ಡಾರ್ವಿನ್ ದುಂಬಿಗಳು ಎಂದು ಹೆಸರು ಬಂದಿತು. ಆದರೆ ಇವು ಪ್ರಸಿದ್ಧವಾಗಿದ್ದು ಇವುಗಳ ಉದ್ದವಾದ ಕೊಂಬಿನಿಂದ. ನೋಡಿದೊಡನೆಯೇ ಭಯ ಹುಟ್ಟಿಸುವಂತಿರುವ ಈ ಭಾರೀ ಕೊಂಬುಗಳು ಅಷ್ಟೇನೂ ಭಯಾನಕವಲ್ಲ. ಏಕೆಂದರೆ ಇವು ಕಚ್ಚಿದರೂ ಹೆಚ್ಚು ನೋವೇನೂ ಆಗುವುದಿಲ್ಲ ಎಂದು ಡಾರ್ವಿನ್ ಹೇಳುತ್ತಾನೆ. ಈ ಬೃಹತ್ ಕೊಂಬುಗಳು ಗಂಡುಗಳಿಗೆ ಮಾತ್ರ ಇರುವಂಥದ್ದು. ಹೆಣ್ಣಿಗಾಗಿ ಇನ್ನೊಂದು ಗಂಡಿನ ಜೊತೆ ಕಾದಾಡಲು ಇವು ಉಪಯೋಗವಾಗುತ್ತವೆ. ಕಾದಾಡುವುದೆಂದರೆ ಪ್ರತಿಸ್ಪರ್ಧಿ ಗಂಡನ್ನು ತನ್ನ ಕೊಂಬುಗಳಿಂದ ಎತ್ತಿ ಮರದಿಂದ ಕೆಳಕ್ಕೆ ಎಸೆಯುವುದು ಅಷ್ಟೆ. ಸಾಮಾನ್ಯವಾಗಿ ಇವು ಇರುವುದು ಭಾರೀ ಮರಗಳ ಕಾಂಡದ ಮೇಲೆ. ನೂರಾರು ಅಡಿ ಎತ್ತರದ ವೃಕ್ಷಗಳಲ್ಲೇ ಇವುಗಳ ವಾಸ. ಆದರೆ ಅಷ್ಟು ಎತ್ತರದ ಮರದಿಂದ ಕೆಳಕ್ಕೆ ಬಿದ್ದರೂ ಇವಕ್ಕೆ ಏನೂ ಆಗುವುದಿಲ್ಲ. ರಬ್ಬರ್ ಚೆಂಡಿನಂತೆ ಪುಟನೆಗೆದು ಮತ್ತೆ ಇನ್ನೊಂದು ಮರ ಹತ್ತಲು ಸಜ್ಜಾಗುತ್ತವೆ.
ಮಳೆಕಾಡುಗಳು ಇಷ್ಟೊಂದು ಫಲವತ್ತಾಗಿರಲು ಅನೇಕ ಕಾರಣಗಳಿವೆ. ಮೊಟ್ಟಮೊದಲ ಕಾರಣವೆಂದರೆ ಅಲ್ಲಿ ವರ್ಷಪೂರ್ತಿ ಸುರಿಯುವ ಧಾರಾಕಾರ ಮಳೆ ಮತ್ತು ಅಧಿಕ ಉಷ್ಣಾಂಶ. ಈ ಕಾರಣಗಳಿಂದಾಗಿ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ. ಜೊತೆಗೆ ಅಲ್ಲಿನ ಮಣ್ಣು ಸಹ ಫಲವತ್ತಾದ ಮಣ್ಣು. ಆದರೆ ಅದರ ಫಲವತ್ತತೆಯೆಲ್ಲ ಮೇಲ್ಪದರಕ್ಕೇ ಸೀಮಿತವಾಗಿರುತ್ತದೆ. ಸತ್ತ ಮತ್ತು ಕೊಳೆಯುತ್ತಿರುವ ಪ್ರಾಣಿ ಹಾಗೂ ಸಸ್ಯಗಳಿಂದ ಮೇಲ್ಮಣ್ಣು ಫಲವತ್ತಾಗಿರುತ್ತದೆ. ಆದ್ದರಿಂದ ಮರಗಳೆಲ್ಲ ತಮ್ಮ ಬೇರುಗಳನ್ನು ಮೇಲ್ಮಟ್ಟದಲ್ಲೇ ಹರಡಿರುತ್ತವೆ. ಕೆಲವು ಇತ್ತೀಚೆಗೆ ಜನ್ಮತಾಳಿದ ದ್ವೀಪಗಳಲ್ಲಿ ಹೆಚ್ಚಿನ ಜ್ವಾಲಾಮುಖಿ ಚಟುವಟಿಕೆಗಳಿದ್ದರೆ ಅಲ್ಲಿನ ಮಣ್ಣಿನ ಫಲವತ್ತತೆಯೂ ಹೆಚ್ಚಾಗಿಯೇ ಇರುತ್ತದೆ. ಏಕೆಂದರೆ ಜ್ವಾಲಾಮುಖಿಗಳು ಹೇರಳ ಖನಿಜಲವಣಗಳನ್ನು ಭೂಮಿಯ ಒಡಲಿನಿಂದ ಹೊರತೆಗೆದು ಭೂಮಿಯ ಮೇಲೆ ಸುರಿಯುತ್ತವೆ. ಆದ್ದರಿಂದ ಅಲ್ಲಿ ಫಲವತ್ತತೆ ಜಾಸ್ತಿ ಇರುತ್ತದೆ.
ಇಷ್ಟೆಲ್ಲ ಮಹತ್ವವನ್ನು ಹೊಂದಿದ್ದರೂ ಇಂದು ಮಳೆಕಾಡುಗಳ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿಯೇ ಇದೆ. ಇಪ್ಪತ್ತನೇ ಶತಮಾನದಲ್ಲಿ ಕಾಡುಗಳ ನಾಶ ಭರದಿಂದ ಸಾಗಿತು. ಹೆದ್ದಾರಿಗಳ ನಿರ್ಮಾಣ, ನಗರಗಳ ನಿರ್ಮಾಣ, ಮರಮುಟ್ಟುಗಳು, ಸೌದೆ ಇತ್ಯಾದಿ ಕಾರಣಗಳಿಗಾಗಿ ಮಳೆಕಾಡುಗಳಲ್ಲಿ ಸಾವಿರಾರು ವರ್ಷಗಳಿಂದ ಬೆಳೆದುನಿಂತಿರುವ ಮಹಾವೃಕ್ಷಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದುರುಳಿಸಲಾಗುತ್ತಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಸಾವಿರ ವರ್ಷಗಳಿಂದ ಬೆಳೆದು ನಿಂತ ಮಹಾವೃಕ್ಷಗಳನ್ನು ಮನುಷ್ಯರ ರಾಕ್ಷಸಾಕಾರದ ಆಧುನಿಕ ಉಪಕರಣಗಳು ಕೆಲವೇ ನಿಮಿಷಗಳಲ್ಲಿ ಬೀಳಿಸುತ್ತವೆ. ಮಳೆಕಾಡುಗಳ ನಾಶವೆಂದರೆ ಅವುಗಳಲ್ಲಿ ವಾಸವಿರುವ ಜೀವಿಗಳ ನಾಶವೂ ಸೇರಿದೆ ಎಂದೇ ಅರ್ಥ.
ಭಾರತದಲ್ಲಿ ಕೂಡ ಸಮಶೀತೋಷ್ಣವಲಯದ ಮಳೆಕಾಡುಗಳಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪಶ್ಚಿಮ ಘಟ್ಟಗಳು ಮತ್ತು ಅಸ್ಸಾಂ, ಮೇಘಾಲಯಗಳಲ್ಲಿ ಮಳೆಕಾಡುಗಳಿವೆ. ಆದರೆ ಭಾರತದಲ್ಲಿ ಜನಸಂಖ್ಯೆಯ ಒತ್ತಡ ಆಫ್ರಿಕಾ ಮತ್ತು ಅಮೆರಿಕಾಗಳಿಗಿಂತ ವಿಪರೀತ ಹೆಚ್ಚು. ಜೊತೆಗೇ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿರುವುದೂ ಈ ಕಾಡುಗಳ ವಿನಾಶಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಗಿಯಾದ ಕಾನೂನುಗಳ ಮೂಲಕ ಇವುಗಳನ್ನು ಸಂರಕ್ಷಿಸುವ ಪ್ರಯತ್ನ ನಡೆಯುತ್ತಿರುವುದು ಸಮಾಧಾನಕರ ಸಂಗತಿ. ಇಲ್ಲಿ ಸಹ ಇದೇ ಕಾಡುಗಳಿಗೆ ಸೀಮಿತವಾದ ಕೆಲವು ಅಪರೂಪದ ಪ್ರಾಣಿಗಳಿವೆ. ಅವುಗಳ ಸಂರಕ್ಷಣೆ ದೃಷ್ಟಿಯಿಂದ ಈ ಕಾಡುಗಳು ಬಹಳ ಮಹತ್ವ ಹೊಂದಿವೆ. ಇವುಗಳಲ್ಲಿ ಅತಿ ಮುಖ್ಯವಾದವೆಂದರೆ ಹೂಲಾಕ್ ಗಿಬ್ಬನ್ ಮತ್ತು ಮೋಡ ಚಿರತೆ. ಚಿರತೆಗಳಿಗಿಂತ ಗಾತ್ರದಲ್ಲಿ ಚಿಕ್ಕದಾದ ಮತ್ತು ಮೈಯೆಲ್ಲ ದೊಡ್ಡದೊಡ್ಡ ಮಚ್ಚೆಗಳ ಚಿತ್ತಾರ ಹೊಂದಿರುವ ಈ ದೊಡ್ಡ ಬೆಕ್ಕುಗಳ ಇನ್ನೊಂದು ಪ್ರಭೇದ ಸುಮಾತ್ರದ ಮಳೆಕಾಡುಗಳಲ್ಲಿ ವಾಸಿಸುತ್ತಿದೆ. ಹೂಲಾಕ್ ಗಿಬ್ಬನ್ ಎಂಬುದು ಒಂದು ಜಾತಿಯ ವಾನರ ಪ್ರಭೇದ. ವಾನರರಲ್ಲೆಲ್ಲ ಗಿಬ್ಬನ್ ಗಳದ್ದೇ ಅತಿಚಿಕ್ಕ ಗಾತ್ರ. ಆದರೆ ಅವು ಉದ್ದವಾದ ಕೈಕಾಲುಗಳ ನೆರವಿನಿಂದ ಮರದಿಂದ ಮರಕ್ಕೆ ಲೀಲಾಜಾಲವಾಗಿ ಹಾರುತ್ತ ಸರ್ಕಸ್ ಮಾಡುತ್ತವೆ.
ವಾನರರಲ್ಲಿ ದೊಡ್ಡ ಗಾತ್ರದ ಗೋರಿಲ್ಲ, ಒರಾಂಗೊಟಾನ್ ಮತ್ತು ಚಿಂಪಾಂಜಿಗಳೂ ಸಹ ಮಳೆಕಾಡುಗಳಲ್ಲೇ ವಾಸಿಸುವ ಪ್ರಭೇದಗಳು. ಗೋರಿಲ್ಲಾಗಳಲ್ಲಿ ಮೌಂಟನ್ ಗೋರಿಲ್ಲಾಗಳು ಪರ್ವತ ಪ್ರದೇಶಗಳಲ್ಲಿ ವಾಸಿಸಿದರೆ ಲೋಲ್ಯಾಂಡ್ ಗೋರಿಲ್ಲಾಗಳು ಮಳೆಕಾಡುಗಳಲ್ಲಿ ವಾಸಿಸುತ್ತವೆ. ಚಿಂಪಾಂಜಿಗಳು ಮತ್ತು ಅವುಗಳ ಹತ್ತಿರದ ಸಂಬಂಧಿಗಳಾದ ಬೋನೋಬೋಗಳು ಸಹ ಕಾಂಗೋ ಮಳೆಕಾಡುಗಳಲ್ಲಿ ವಾಸಿಸುತ್ತವೆ. ಒರಾಂಗೊಟಾನ್ ಗಳು ಏಷ್ಯಾದ ಮಳೆಕಾಡುಗಳಲ್ಲಿ ವಾಸಿಸುತ್ತವೆ.
ಮಳೆಕಾಡುಗಳಲ್ಲಿ ಅಳಿವಿನಂಚಿಗೆ ಸರಿದಿರುವ ಇನ್ನೊಂದು ಪ್ರಸಿದ್ಧ ಪ್ರದೇಶವೆಂದರೆ ಯಾಸೂನಿ. ಈಕ್ವೆಡಾರ್ ದೇಶದ ಈ ಪ್ರದೇಶ ಸುಮಾರು ಒಂಬತ್ತುಸಾವಿರದ ಎಂಟುನೂರು ಚದರ ಕಿಲೋಮೀಟರ್ ವಿಸ್ತಾರದ ಪ್ರದೇಶ. ಇಲ್ಲಿ ನೂರಾರು ಪ್ರಭೇದದ ಹಕ್ಕಿಗಳು, ಪ್ರಾಣಿಗಳು, ಕೀಟಗಳು, ಉಭಯವಾಸಿಗಳು ಕಿಕ್ಕಿರಿದಿವೆ. ಅಮೆಜೋನಿಯಾ ಮಳೆಕಾಡುಗಳ ಒಂದು ಭಾಗವೇ ಆಗಿರುವ ಯಾಸೂನಿಯ ದುರದೃಷ್ಟವೆಂದರೆ ಇಲ್ಲಿ ಈಗ ತೈಲದ ನಿಕ್ಷೇಪಗಳು ಪತ್ತೆಯಾಗಿವೆ. ಹತ್ತಿರ ಹತ್ತಿರ ಐವತ್ತುಸಾವಿರ ಕೋಟಿ ರೂಪಾಯಿಗಳ ಭಾರೀ ಮೊತ್ತದ ಈ ತೈಲ ದಾಸ್ತಾನು ಸಹಜವಾಗಿಯೇ ಯಾವುದೇ ರಾಷ್ಟ್ರದ ಆಸೆಯನ್ನಾದರೂ ಕೆರಳಿಸುತ್ತದೆ. ಈಕ್ವೆಡಾರ್ ಮೊದಲೇ ಬಡರಾಷ್ಟ್ರವಾದ್ದರಿಂದ ಈ ಸಂಪತ್ತು ಅದಕ್ಕೆ ಭಾರಿಯಾಗಿಯೇ ಕಂಡಿತು. 2007ರಲ್ಲಿ ಈಕ್ವೆಡಾರ್ ನ ಅಧ್ಯಕ್ಷ ರಾಫೆಲ್ ಕೊರಿಯಾ ಅವರು ಒಂದು ಘೋಷಣೆಯನ್ನು ಹೊರಡಿಸಿದರು. ಅದೇನೆಂದರೆ ಇಡೀ ತೈಲದಾಸ್ತಾನಿನ ಬೆಲೆಯ ಅರ್ಧದಷ್ಟನ್ನು ಶ್ರೀಮಂತ ರಾಷ್ಟ್ರಗಳು ದೇಣಿಗೆಯಾಗಿ ಕೊಟ್ಟರೆ ಆ ತೈಲದ ತಂಟೆಗೆ ಹೋಗುವುದಿಲ್ಲವೆಂದು ಅದರ ಸಾರಾಂಶ. ಆದರೆ ಐದು ವರ್ಷಗಳು ಕಳೆದರೂ ಅದಕ್ಕಾಗಿ ಸಂಗ್ರಹವಾದ ಹಣದ ಮೊತ್ತ ತೀರಾ ಕಡಿಮೆ. ಇದೀಗ ಸರ್ಕಾರ ಅಲ್ಲಿನ ತೈಲವನ್ನು ಹೊರತೆಗೆಯಲು ನಿರ್ಧರಿಸಿದೆ. ಇದರ ಪರಿಣಾಮವೇನೆಂದು ಬೇರೆ ಹೇಳಬೇಕಿಲ್ಲ. ಈ ಧರೆಯ ಸ್ವರ್ಗ ನರಕವಾಗಿ ಬದಲಾಗುವ ದಿನಗಳು ದೂರವಿಲ್ಲ. ಇಂದು ಯಾಸೂನಿಗೊದಗಿದ ದುರ್ಗತಿಯೇ ಮುಂದೊಂದು ದಿನ ಬೇರೆಲ್ಲ ಮಳೆಕಾಡುಗಳಿಗೂ ಉಂಟಾಗುತ್ತದೆ. ಇಂಥ ದುರಂತವನ್ನು ತಪ್ಪಿಸಲು ನಾವು ನಮ್ಮ ಕೈಲಾದ ಪ್ರಯತ್ನ ಮಾಡಬೇಕಾಗಿದೆ. ಏಕೆಂದರೆ ಪ್ರಕೃತಿ ತನ್ನ ಮೇಲಿನ ದೌರ್ಜನ್ಯ, ಅತ್ಯಾಚಾರಗಳನ್ನೆಲ್ಲ ಎಲ್ಲಿಯವರೆಗೆ ಮೌನವಾಗಿ ಸಹಿಸಿಕೊಳ್ಳುತ್ತದೆಯೋ ಅಲ್ಲಿಯವರೆಗಷ್ಟೇ ನಮಗೆ ಉಳಿಗಾಲ. ನಂತರ ಅಳಿಯುತ್ತಿರುವ ಇತರ ಪ್ರಾಣಿಗಳ ದಾರಿಯನ್ನೇ ನಾವೂ ಹಿಡಿಯಬೇಕಾಗುತ್ತದೆ!