ನಮ್ಮ ‌ಪೂರ್ವಿಕರ ಗ್ರಾಮಗಳ ರಚನಾವಿನ್ಯಾಸ

ProfileImg
11 May '24
3 min read


 

ನಲವತ್ತು ಐವತ್ತು ವರ್ಷಗಳ‌ ಹಿಂದಿನ‌ ಭಾರತವನ್ನು ಅವಲೋಕಿಸಿದರೆ ನಗರಗಳು ಇವತ್ತಿನ ಹಾಗೆ ಅಭಿವೃದ್ಧಿ ಹೊಂದಿರಲಿಲ್ಲ. ಬಹುತೇಕರ ಬದುಕಿನ‌ಬಂಡಿ ಸಾಗುತ್ತಿದ್ದುದೇ ಹಳ್ಳಿಗಳಲ್ಲಿ. ಬಡತನದ ನಡುವೆ. ಇಲ್ಲಿ ವಾಸಿಸುತ್ತಿದ್ದ ಜನರಿಗೆ, ಊರಿನ ಜವಾಬ್ದಾರಿಯನ್ನು ಹೊತ್ತಿದ್ದ ನಾಯಕರಿಗೆ, ಅಷ್ಟಾಗಿ ಅಕ್ಷರಜ್ಞಾನ ಇಲ್ಲದಿರಬಹುದು. ಆದರೆ ಬದುಕಿಗೆ ಯಾವುದು ಮುಖ್ಯ, ಯಾವುದು ಅಮುಖ್ಯ, ಯಾವುದು ಎಲ್ಲಿರಬೇಕು, ಯಾವುದು ಅ lookಲ್ಲಿರಬಾರದು ಎಂಬುದರ ಪೂರ್ಣಪ್ರಜ್ಞೆಯಂತು ಇದ್ದಂತೆ ಕಾಣುತ್ತದೆ.

ಈ ಕಾರಣಕ್ಕಾಗಿಯೇ ಅವರು ತಮ್ಮ  ಅಸ್ಥಿತ್ವಕ್ಕೆ ಅನಿವಾರ್ಯವಾದ, ಗಾಳಿ, ನೀರು, ಬೆಳಕು, ಬೆಂಕಿ, ಭೂಮಿಗಳನ್ನು ಆರಾಧಿಸಿದ್ದಾರೆ. ಅಲ್ಲದೆ ಆಹಾರಧಾನ್ಯಗಳ ಉತ್ಪಾದನೆಗೆ ಯಾವ ಭೂಮಿ ಬಳಸಬೇಕು, ಯಾವ ಭೂಪ್ರದೇಶದಲ್ಲಿ ಕೆರೆ, ಕುಂಟೆ, ಭಾವಿಗಳ ನಿರ್ಮಾಣ ಮಾಡಿದರೆ ಸೂಕ್ತ, ಎಲ್ಲಿ ಗಿಡಮರಗಳನ್ನು ಬೆಳೆಸಬೇಕು, ಎಲ್ಲಿ ದೇವಾಲಯಗಳನ್ನು ಕಟ್ಟಬೇಕು, ಎಲ್ಲಿ ಸ್ಮಶಾನಗಳನ್ನು ನಿರ್ಮಾಣಬೇಕು, ಎಲ್ಲಿ‌ ರಸ್ತೆಗಳನ್ನು ಮಾಡಬೇಕು, ಗೋಮಾಳ ಎಲ್ಲಿರಬೇಕು, ಗುಂಡುತೋಪು ಎಲ್ಲಿದ್ದರೆ ಚಂದ ಎಂಬುದನ್ನು ತಕ್ಷಣದ ಸಂದರ್ಭಕ್ಕೆ ಮಾತ್ರವಲ್ಲದೆ, ಭವಿಷ್ಯದ ಮಕ್ಕಳ ನೆಮ್ಮದಿಯುತ ಬದುಕನ್ನು ಕೇಂದ್ರೀಕರಿಸಿಕೊಂಡು ಆಲೋಚಿಸಿ, ಸ್ಥಳದ ಆಯ್ಕೆ ಮಾಡಿ ನಿರ್ಮಾಣ ಮಾಡಿದ್ದಾರೆ

ಕೆರೆಕುಂಟೆಗಳ ನಿರ್ಮಾಣಕ್ಕೆ ನೀರಿನ ಸರಾಗ ಹರಿಯುವಿಕೆಯ ಮಾರ್ಗಗಳು ಜೊತೆಗೆ,  ನೀರು ಬಹುಬೇಗ ಇಂಗದ ಸ್ಥಳಗಳು ಪ್ರಧಾನವಾದರೆ, ದೇವಾಸ್ತಾನದ ನಿರ್ಮಾಣಕ್ಕೆ ಯಾವುದೇ ಅಪಶಕುನ‌ಗಳು ಎದುರಾಗಬಾರದು, ಸುತ್ತಲೂ ಸೂತಕ ಆವರಿಸಬಾರದು, ಮೈಲಿಗೆಗಳು ಉಂಟಾಗಬಾರದು, ಜನನಿಬಿಡ ಪ್ರದೇಶವಾಗಿರಬೇಕು. ಬಂದುಹೋಗಲು ಸುಲಭವಾದ ದಾರಿಗಳು ಇರಬೇಕು, ಗಂಡುತೋಪು, ಗೋಮಾಳ, ರಸ್ತೆ, ಮೈದಾನ, ಸ್ಮಶಾನ ಹೀಗೆ ಪ್ರತಿಯೊಂದಕ್ಕು ಅವುಗಳ ಅಗತ್ಯತೆ, ಅನಿವಾರ್ಯತೆಯನ್ನು ಅರಿತು ಸೂಕ್ತ ಸ್ಥಳಗಳಲ್ಲಿಯೇ ಅವುಗಳನ್ನು ನಿರ್ಮಾಣ ಮಾಡಿದ್ದಾರೆ.

ಹೀಗಾಗಿ ನಮಗೆ ದೇವಾಲಯದ ಪಕ್ಕ, ಹೆಚ್ಚು ಜನಸಂದಣಿಯಿರುವ, ಜನನಿಬಿಡ ಪ್ರದೇಶದಲ್ಲಿ,  ಫಲವತ್ತಾದ ಕೃಷಿ ಭೂಮಿಯಲ್ಲಿ, ಹಚ್ಚಹಸುರಿನ ಮರಗಿಡಗಳು, ಕಾಡುಗಳು ಇರುವ, ದನಕರುಗಳು ಮೇಯಿಸಲು ಅನುಕೂಲವಾದ ಗೋಮಾಳಗಳಲ್ಲಿ  ಸ್ಮಶಾನಗಳ ಹೆಚ್ಚಾಗಿ ಕಾಣುವುದಿಲ್ಲ.   ಬದಲಾಗಿ ಊರಚೆ ಜನಪ್ರವೇಶ ಕಡಿಮೆಯಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಸ್ಮಶಾನಗಳನ್ನು ಕಾಣಿಸಿಕೊಳ್ಳುತ್ತವೆ‌.

ಮನುಷ್ಯನಿಗೆ ದೇವಾಲಯ ಮತ್ತು ಸ್ಮಶಾನ ಎರಡೂ ಮುಖ್ಯವಾದರೂ ಎರಡರ ಅಗತ್ಯತೆ, ಅನಿವಾರ್ಯತೆ, ಆಚರಣೆಯ ವಿಧಾನ, ನಂಬಿಕೆಗಳು, ಅವುಗಳು ನಮ್ಮ ಮನಸ್ಸು, ಭಾವನೆ, ಬದುಕಿನೊಳಗೆ ಉಂಟುಮಾಡುವ ಪರಿಣಾಮಗಳು ಬೇರೆಬೇರೆಯೇ ಆಗಿವೆ.

ಹೀಗಾಗಿ ಹಿಂದಿನ ಕಾಲದಲ್ಲಿ ಜನರು ತಾನು ವಾಸಿಸುವ ಪ್ರದೇಶದಲ್ಲಿ ತನಗೆ ಅನಿವಾರ್ಯವಾದವುಗಳನ್ನು ನಿರ್ಮಾಣ ಮಾಡಿಕೊಳ್ಳುವಾಗ ತಕ್ಷಣದ ಅನಿವಾರ್ಯವಾದ ಜೊತೆಗೆ ಭವಿಷ್ಯದ ಬದುಕನ್ನು ಆಧಾರವಾಗಿಸಿಕೊಂಡು ತೀರ್ಮಾನಗಳನ್ನು ತೆಗೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಈ ತೀರ್ಮಾನಗಳು, ಯಾವುದೇ, ಜಾತಿ, ಧರ್ಮ, ಮತ, ಪಂಥ, ರಾಜಕೀಯ ಲಾಭನಷ್ಟಗಳ ಕೇಂದ್ರಕರಣಕ್ಕಿಂತ ಮುಖ್ಯವಾಗಿ ಊರಿನಲ್ಲಿ ವಾಸಿಸುತ್ತಿರುವ ಎಲ್ಲಾ ಜನವರ್ಗಗಳ ಪ್ರೀತಿ, ಸಹಬಾಳ್ವೆ, ಶಾಂತಿಯುತ ಜೀವನಕ್ಕೆ ಅನುಕೂಲಕರವಾಗಿ ಇರುತ್ತಿದ್ದವು. ಹೀಗಾಗಿ ಎಷ್ಟೋ ಸಂದರ್ಭಗಳಲ್ಲಿ ‌ಜನರು ತನ್ನೂರಿನ‌ ಹಿತಕ್ಕಾಗಿ ತಮ್ಮ ವೈಯಕ್ತಿಕ ‌ಸುಖ, ಸಂಪತ್ತುಗಳನ್ನು ತ್ಯಾಗ ಮಾಡಿ ಮಾನವೀಯತೆಯನ್ನು ತೋರಿದ್ದಾರೆ, ಆ ಮೂಲಕ ತನ್ನ‌ನೆಲದ ಹಿತ, ಗೌರವವನ್ನು ಕಾಪಾಡಿದ್ದಾರೆ.

ಆದರೆ ಇಂದು ಜನಪ್ರತಿನಿಧಿಗಳಿಗೆ ಅವುಗಳು ಸಂಪೂರ್ಣವಾಗಿ ಜಾತಿ, ಧರ್ಮ, ಮತ, ಪಂಥ, ರಾಜಕೀಯ ಲಾಭದ ದಾಳಗಳಾಗಿದ್ದು, ತನ್ನ‌ ಪ್ರತಿಷ್ಟೆಯ ವಸ್ತುಗಳಾಗಿವೆ. ಹೀಗಾಗಿ ತಾನು ಹುಟ್ಟಿ ಬೆಳೆದ ನೆಲದ ಹಿತ, ಗೌರವ ಸರ್ವನಾಶವಾದರೂ ಚಿಂತೆಯಿಲ್ಲ. ಭವಿಷ್ಯ ಬರ್ಬರತೆಯನ್ನು ಪಡೆದರು ತೊಂದರೆ‌ಯಿಲ್ಲ, ತಾನು ಅಂದುಕೊಂಡದ್ದು ಸಾಧಿಸಿದೆ ಎನ್ನುವ ಅಹಂನಿನ ತೃಪ್ತಿ ಅಥವಾ ತನ್ನ‌ ಎದುರಾಳಿಗೆ ಸರಿಯಾದ ಪಾಠ ಕಲಿಸಿದೆ‌ ಎನ್ನುವ ಪ್ರತಿಷ್ಟೆ ಲಭ್ಯವಾದರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ಇದ್ದಾರೆ. ಇದರಿಂದಾಗಿ ಹಳ್ಳಿಗಳಲ್ಲಿ ಜನಸಮುದಾಯಗಳ ನಡುವೆ ಇದುವರೆವಿಗೆ ಇದ್ದ ಕೊಳುಕೊಡುವಿಕೆಯ ಸೌಹಾರ್ದಯುತ ಸಂಬಂಧಗಳ ಹಂತಹಂತವಾಗಿ ನಶಿಸುತ್ತಿವೆ, ಕೋಮುದಳ್ಳುರಿಗಳು ಜ್ವಾಲಾಮುಖಿಯಾಗಿ ಹಬ್ಬುತ್ತಿವೆ. ಇವುಗಳು ವ್ಯಾಪಿಸುತ್ತಿರುವ ರೀತಿ ನೋಡಿದರೆ ಹಳ್ಳಿಗಳ  ಮುಂದಿನ ದಿನಗಳು ಅತೀಭಯಂಕರ ಸ್ವರೂಪವನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೀಗಾಗಿಯೇ ಯಾವುದೇ ಜನನಾಯಕನಾದವನಿಗೆ ತಾನು ಹುಟ್ಟಿ ಬೆಳೆದ ಪರಿಸರದ ಬಗ್ಗೆ ಗರಿಷ್ಟ ಜ್ಞಾನ ಬೇಡ, ಕನಿಷ್ಟ ತಿಳುವಳಿಕೆಯಾದರು ಇರಬೇಕು. ಇಂತಹ ಜ್ಞಾನವಿಲ್ಲದ ಜನನಾಯಕರನ್ನು ಆಯ್ಕೆಮಾಡಿರುವ ಕಾರಣ ಅವರು ತಮ್ಮ ಹಣ, ಅಧಿಕಾರ, ರಾಜಕೀಯ ಲಾಭಕ್ಕಾಗಿ ತಮ್ಮ‌ಅಧಿಕಾರ ವ್ಯಾಪ್ತಿಯ ಕೆರೆಕುಂಟೆ, ರಾಜಕಾಲುವೆ, ಕಾಡು, ಕಣಿವೆ, ಬೆಟ್ಟ, ಗುಡ್ಡ, ಸರ್ಕಾರಿ ಭೂಮಿ ಎಲ್ಲವನ್ನೂ ಹರಾಜಿಗಿಟ್ಟು ಮಾರಿದ್ದಾರೆ . ಪರಿಣಾಮವಾಗಿ ನಾವಿಂದು ಕಲುಷಿತ, ನೀರು, ಗಾಳಿ,  ಆಹಾರಗಳನ್ನು ತಿನ್ನುವ ಸ್ಥಿತಿಗೆ ಬಂದು‌ ನಿಂತಿದ್ದೇವೆ.

ಇಂತಹ ಕಠಿಣವಾದ ಸಂದರ್ಭಗಳಲ್ಲಿಯಾದರು ಜನನಾಯಕರಾದವರು ತಾವು ಇಂದು ತೆಗೆದುಕೊಳ್ಳುವ ತೀರ್ಮಾನಗಳು ಮುಂದೆ ತಾನು ಹುಟ್ಟಿ, ಬೆಳೆದು, ತನಗೊಂದು ಅಸ್ಥಿತ್ವವನ್ನು ತಂದುಕೊಟ್ಟ ಪ್ರದೇಶದ ಜನರ ಸೌಹಾರ್ದಯುತ ಜೀವನ ಯಾವ ಹಂತವನ್ನು ತಲುಪಬಹುದು ಎನ್ನುವ ಕನಿಷ್ಟಜ್ಞಾನವನ್ನಾದರು ಹೊಂದುವ ಅವಶ್ಯಕತೆ ಇದೆ. ಇಂತಹ ಕನಿಷ್ಟ ಜ್ಞಾನ ಇಲ್ಲದವರನ್ನು ಹೊರಗಿಟ್ಟು, ತನ್ನ ದೇಶ, ಭಾಷೆ, ಜಲ, ಸಂಸ್ಕೃತಿ, ಊರಿನ‌‌ ಹಿತ, ಗೌರವ, ಮಹತ್ವವನ್ನು ಅರಿತವರನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಇಲ್ಲದೆ ಹೋದರೆ ನಮ್ಮೆಲ್ಲರ ಬದುಕುಗಳನ್ನೆ ಸಂಪೂರ್ಣವಾಗಿ ಹಾಳು ಮಾಡಿಬಿಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೆ ಸರ್ವನಾಶ ಕಟ್ಟಿಟ್ಟ ಬುತ್ತಿಯಾಗಿಬಿಡುತ್ತದೆ

ಡಾ.ಮಂಜುನಾಥ ಕೆ.ಆರ್.




ProfileImg

Written by Manjunatha kr