ಕಾಸರಗೋಡು ಜಿಲ್ಲೆಯ ಪುಟ್ಟ ಹಳ್ಳಿ ಮೀಯಪದವು.ತುಳುನಾಡಿನ ಎಲ್ಲೆಡೆಯಂತೆ ಇಲ್ಲಿ ಕೂಡ ಭೂತಾರಧನೆಗೆ ತುಂಬಾ ಮಹತ್ವ ಇದೆ.ಈ ಪರಿಸರದಲ್ಲಿ ಆರಾಧಿಸಲ್ಪಡುವ ಕನ್ನಡ ಬೀರ,ಕುರೆ ಪೆರ್ಗಡೆ ,ಉರವ ,ಎರುಬಂಟ ,ಬೀರ್ನಾಚಾರಿ ,ಕುರವ , ಕುಂಞಲ್ವ ಬಂಟ ಮೊದಲಾದ ಅನೇಕ ಭೂತಗಳ ಹೆಸರು ಕೂಡ ಜಾನಪದ ವಿದ್ವಾಂಸರ ಪಟ್ಟಿಯಲ್ಲಿ ದಾಖಲಾಗಿಲ್ಲ
ತುಳುವರ ಭೂತ ಕನ್ನಡದ ಭೂತವಲ್ಲ.ತುಳುವಿನ ಭೂತ ಪದಕ್ಕೆ ಕನ್ನಡದ ಭೂತ ಎಂಬ ಪದಕೆ ಇರುವಂತೆ ಭೂತ ಪ್ರೇತ ಪಿಶಾಚಿ ಎಂಬ ಕೆಟ್ಟ ಅರ್ಥವಿಲ್ಲ.ತುಳುವರ ಭೂತಗಳು ಜನರನ್ನು ಹೆದರಿಸಿ ಬೆದರಿಸಿ ಕಾಡುವ ಕೆಟ್ಟ ,ಕ್ಷುದ್ರ ಶಕ್ತಿಗಳಲ್ಲ .ತುಳುವರ ಭೂತ ಪದ ದೇವತಾ ವಾಚಿ ಪದ .ದುಷ್ಟ ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸತ್ಯದ ಶಕ್ತಿಗಳು ಇವು.
ಸಂಸ್ಕೃತ ಮೂಲದ ಪೂತಮ್ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ವರ್ಣ ವ್ಯತ್ಯಯ ಗೊಂಡು ಸಂಸ್ಕೃತೀಕರಣಕ್ಕೊಳಗಾಗಿ ಬೂತೊ>ಭೂತೋ>ಭೂತ ಆಗಿರಬಹುದು .ಕೊಡವರು ಇಂದಿಗೂ ಭೂತವನ್ನು ಪೂದ ಎಂದೇ ಕರೆಯುತ್ತಾರೆ.ತುಳುವಿನಲ್ಲಿ ಪೂ >ಭೂ ಆದರೆ ಕೊಡವರಲ್ಲಿ ತ>ದ ಆಗಿ ವರ್ಣ ಬದಲಾವಣೆ ಆಗಿದೆ ಇದೆ.ಅಥವ ತುಳು ಭೂತಗಳಲ್ಲಿ ಹೆಚ್ಚಿನವರು ಅಸಾಮಾನ್ಯ ಸಾಹಸ ಮರೆದು ದುರಂತವನ್ನಪ್ಪಿ ಮಾಯವಾಗಿ ದೈವತ್ವ ಪಡೆದ ಸಾಂಸ್ಕೃತಿಕ ನಾಯಕರೇ ಆಗಿದ್ದಾರೆ.
© ಡಾ.ಲಕ್ಷ್ಮೀ ಜಿ ಪ್ರಸಾದ್ ಹಿಂದೆ ಇದ್ದವರು ಎಂಬ ಅರ್ಥದಲ್ಲಿಯೂ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ
.ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಯಾವುದೇ ಜಾತಿ ಭೇದ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೊಕ್ಕೊಟು ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ ಅವರು ತಿಳಿಸಿದ್ದಾರ © ಡಾ.ಲಕ್ಷ್ಮೀ ಜಿ ಪ್ರಸಾದ್
ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ , ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು . ರಾಮ ಶೆಟ್ಟಿ ಎಂಬ ವೀರ ಶೈವ ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ, ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.
ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಬಬ್ಬರ್ಯ, ,ಬ್ಯಾರ್ದಿ ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು ,ಮಾಪುಳ್ತಿ ಧೂಮಾವತಿ ಮೊದಲಾದವರು ಮುಸ್ಲಿಂ ಮೂಲದ ದೈವತಗಳು.
ಹೀಗೆ ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ .
ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. ಅನೇಕ ಕನ್ನಡ ಮೂಲದ ವ್ಯಕ್ತಿಗಳು. ತುಳುನಾಡಿನಲ್ಲಿ ಭೂತ ಗಳಾಗಿ ಆರಾಧಿಸಲ್ಪಡುತ್ತಿದ್ದಾರೆ ಕನ್ನಡ ಬೀರ, ಬಚ್ಚನಾಯಕ, ಬೈಸು ನಾಯಕ, ಕರಿಯಣ್ಣ ನಾಯಕ, ಕಚ್ಚೆ ಭಟ್ಟ, ಕನ್ನಡ ಭೂತ, ಕನ್ನಡ ಭೂತ ಯಾನೆ ಪುರುಷ ಭೂತ,ಕನ್ನಡಿಗ ಭೂತ ಮೊದಲಾದವರು ಮೂಲತಃ ಕನ್ನಡ ಭಾಷಿಗರು ಆಗಿದ್ದವವರು
ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ.ಹೀಗೆ ಆಲಿ ಚಾಮುಂಡಿ ಕೂಡಾ ಮಂತ್ರ ದೇವತೆಯ ಆಗ್ರಹಕ್ಕೆ ತುತ್ತಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು ಆರಾಧಿಸಲ್ಪಡುವ ಭೂತ
ಬೆಜ್ಜಂಗಳ ,ಮದಂಗಲ್ಲು,ಬೆಣ್ಣೆ ಮನೆ,ಪಂಜಿಗುಳಿ ಸೇರಿದಂತೆ ಮೀಯಪದವಿನ ಸುತ್ತು ಮುತ್ತಲಿನ ಪರಿಸರದಲ್ಲಿ ಧೂಮಾವತಿ ಭೂತದೊಂದಿಗೆ ಸೇರಿಗೆ ದೈವವಾಗಿ ಆರಾಧಿಸಲ್ಪಡುವ ಕನ್ನಡ ಬೀರ ಇಂಥಹ ಒಂದು ಅಪರೂಪದ ಭೂತ ಬಿಳಿ ಬಟ್ಟೆಯ ಕಚ್ಚೆಯನ್ನು ಧರಿಸುವ ಈತನಿಗೆ ತುಳುನಾಡಿನ ಇತರ ದೈವಗಳಂತೆ ತೆಂಗಿನ ತಿರಿಯ ಅಲಂಕಾರ, ಅರದಳ, ಮುಖವರ್ಣಿಕೆ, ಪುಳ್ಳೆಗಳು ಇರುವುದಿಲ್ಲ.
ಮನುಷ್ಯರ ಸಹಜ ಅಲಂಕಾರವಿರುತ್ತದೆ. ಇಲ್ಲಿ ಲಭ್ಯವಿರುವ ಐತಿಹ್ಯದ ಪ್ರಕಾರ ಈತ ಕನ್ನಡ ಪ್ರದೇಶದ ಸುಬೇದಾರ. ಮೀಯಪದವು ಸಮೀಪದಲ್ಲಿ ಪೊ ಳ್ಳಕಜೆ ಎಂಬುದು ಪ್ರಸಿದ್ಧ ಧಾರ್ಮಿಕರ ಮನೆತನವಾಗಿದ್ದು, ಅಲ್ಲಿ ದುರ್ಗಾರಾಧನೆ ಮಾಡುತ್ತಾರೆ. ಈಗ ಅಲ್ಲಿನ ಯಜಮಾನರಾದ ಶ್ರೀ ಗೋವಿಂದ ಭಟ್ಟರ ಅಜ್ಜ ಶ್ರೀ ನಾರಾಯಣ ಭಟ್ಟರ ಕಾಲದಲ್ಲಿ ನಡೆದ ಘಟನೆ ಇದು.
ಯಾವುದೋ ಕಾರಣಕ್ಕೆ ಇವರ ಮನೆಯನ್ನು ಜಪ್ತಿ ಮಾಡಲು ಬ್ರಿಟಿಷ್ ಅಧಿಕಾರಿಗಳು ಇಬ್ಬರು ಕನ್ನಡ ಪ್ರದೇಶದ ಕನ್ನಡಿಗ ಸುಬೇದಾರರನ್ನು ಕಳುಹಿಸುತ್ತಾರೆ.ಭಟ್ಟರು ಒಳಗೆ ಪೂಜೆ ಮಾಡುತ್ತಿರುತ್ತಾರೆ .ಸುಬೇದಾರರು ಬಂದಿರುವ ವಿಚಾರವನ್ನು ಅವರಿಗೆ ಭಟ್ಟರ ಹೆಂಡತಿ ತಿಳಿಸುತ್ತಾರೆ .ನಮ್ಮ ತುಳು ನಾಡಿನಲ್ಲಿ ಮಧ್ಯಾಹ್ನದ ಹೊತ್ತಿಗೆ ಮನೆಬಾಗಿಲಿಗೆ ಬಂದ ಎಲ್ಲರಿಗೂ ಊಟ ಬಡಿಸುವುದು ಸಂಪ್ರದಾಯ . ಭಟ್ಟರು “ಸರಿ ಮೊದಲು ಅವರಿಗೆ ಊಟ ಬಡಿಸು” ಎಂದು ಹೇಳಿದರು. ಅವರು ಹೇಳಿದಂತೆ ಆ ಸುಬೇದಾರರಿಗೆ ಬಾಳೆ ಎಲೆ ನೀರು ಕೊಟ್ಟು ಊಟ ಬಡಿಸಿದರು.,©
ದೇವಾಲಯದ ಭಟ್ಟರ ಹೆಂಡತಿ ಅವರಿಗೆ ಊಟ ಬಡಿಸಿ ಒಳಗೆ ಹೋಗಿ ಹೊರಬರುವಷ್ಟರಲ್ಲಿ ಇಬ್ಬರು ಸುಬೇದಾರರಲ್ಲಿ ಒಬ್ಬ ಮಾಯವಾಗಿರುತ್ತಾನೆ!. ಮಾಯವಾದ ಕುರುಹಾಗಿ ಆತನ ತಲೆಕೂದಲು, ಉಗುರು ಉಳಿದಿರುತ್ತದೆ. ಇದನ್ನು ನೋಡಿದ ಇನ್ನೊಬ್ಬ ಸುಬೇದಾರ ಓಡಿ ಹೋಗುತ್ತಾನೆ. ಇಲ್ಲಿ ಮಾಯವಾದ ಸುಬೇದಾರ ಕನ್ನಡಿಗನಾಗಿದ್ದು, ಆತನು ಧೂಮಾವತಿ ದೈವದ ಸೇರಿಗೆಗೆ ಸಂದು ಹೋಗಿ, ದೈವತ್ವಕ್ಕೇರಿ ‘ಕನ್ನಡ ಬೀರ’ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾನೆ.ಇದು ಇತ್ತೀಚಿಗೆ ಅಂದರೆ ಸುಮಾರು ೧೫೦ -೧೮೦ ವರ್ಷಗಳ ಹಿಂದೆ ನಡೆದ ಸತ್ಯ ಘಟನೆಯಾಗಿದೆ ಈತನಿಗೊಂದು ಬನ ಕೂಡ ಬೆಣ್ಣೆಮನೆ ಗೋಪಾಲ ಭಟ್ಟರ ತೋಟದಲ್ಲಿದೆ.ಈ ಭೂತ ಉದ್ಭವವಾದ ಸ್ಥಳ ಎಂದು ಭಾವಿಸಲಾದ ನೀರಿನ ಗುಂಡಿಯೊಂದು ಸಮೀಪದಲ್ಲಿದೆ
ಜಪ್ತಿಗೆಂದು ಬಂದ ಕನ್ನಡಿಗ ಸುಭೇದಾರ ಏಕೆ ಮಾಯವಾದ ?ಎಂಬುದಕ್ಕೆ ಇಲ್ಲಿ ನೇರ ಉತ್ತರ ದೊರೆಯುತ್ತಿಲ್ಲ.ಬಹುಷಃ ಧರ್ಮಿಷ್ಟರಾದ ,ತನ್ನ ಅನನ್ಯ ಭಕ್ತರೂ ಆದ ಪೊಳ್ಳ ಕಜೆ ಭಟ್ಟರ ಮನೆ ಜಪ್ತಿಯಾಗದಂತೆ ತಡೆಯುವ ಸಲುವಾಗಿ ನಂಬಿದ ದೇವತೆ ದುರ್ಗಾಂಬೆ ಅಥವಾ ದೈವ ಧೂಮಾವತಿ ಆತನನ್ನು ಮಾಯ ಮಾಡಿ ತನ್ನ ಕಾರಣಿಕ ತೋರಿರ ಬಹುದು ಎಂಬುದು ಅಲೌಕಿಕ ನೆಲೆಯಲ್ಲಿ ಸಮಾಧಾನ ಹೇಳ ಬಹುದು.ಡಾ.ಲಕ್ಷ್ಮೀ ಜಿಪ್ರಸಾದ್
ವಾಸ್ತವಿಕ ನೆಲೆಯಲ್ಲಿ ಚರ್ಚಿಸುವುದಾದರೆ ಜಪ್ತಿಗೆ ಬಂದವರಿಗೂ ಊಟ ಉಣ ಬಡಿಸಿದ ಮನೆಯ ಯಜಮಾನನ ಔದಾರ್ಯ ನೋಡಿದ ಆ ಸುಭೇದಾರ ಇವರನ್ನು ಜಪ್ತಿ ಮಾಡಲು ಮನ ಒಪ್ಪದೆ,ಬ್ರಿಟಿಶ್ ಸರಕಾರದ ಆದೇಶ ತಪ್ಪು ಎಂದು ಮನಗಂಡು ಓಡಿ ಹೋಗಿರ ಬಹುದು.ಓಡಿ ಹೋಗುವ ಸಂದರ್ಭದಲ್ಲಿ ದುರಂತವನ್ನಪ್ಪಿರ ಬಹುದು.ದುರಂತ ಮತ್ತು ದೈವತ್ವ ತುಳುನಾಡಿನ ಸಂಸ್ಕೃತಿಯ ಒಂದು ವಿಶಿಷ್ಟ ಲಕ್ಷಣ.ಅಂತೆಯೇ ಆತ ಮುಂದೆ ಧೂಮಾವತಿ ದೈವದ ಸೇರಿಗೆಗೆ ಸಂದು ಹೋಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಿರ ಬಹುದು
© ಡಾ.ಲಕ್ಷ್ಮೀ ಜಿ ಪ್ರಸಾದ್
0 Followers
0 Following