ಭಾವನೆಗಳ ಸೇತುವೆ "ಸ್ನೇಹ""

ProfileImg
03 Aug '25
3 min read


image

ಎರಡು ಮನಸುಗಳ ನಡುವೆ ಭಾವನಾತ್ಮಕ ನಂಟನ್ನು ಬೆಸೆಯುವ "ಸ್ನೇಹ" ಸೃಷ್ಟಿಯ ಒಂದು ಸುಂದರ ಕೊಡುಗೆ ! ಈ ಸುಂದರ ಸಂಬಂಧವನ್ನು ಆಚರಣೆ ಮಾಡಲು ಇದಕ್ಕೆಂದೇ ಒಂದು ಮೀಸಲಾದ ದಿನವನ್ನು ಹೊಂದಿದ್ದಿವೆ ಅದೇ ನಾವಿಂದು ಆಚರಿಸಲ್ಪಡುತ್ತಿರುವ "ಸ್ನೇಹಿತರ ದಿನ"!
ಹಾಲ್‌ಮಾರ್ಕ್ ಕಾರ್ಡ್‌ಗಳ ಮಾಲೀಕರಾದ ಜಾಯ್ಸ್ ಹಾಲ್, ಅಮೆರಿಕದಲ್ಲಿ ತನ್ನ ಕಾರ್ಡ್‌ಗಳ ಮಾರಾಟವನ್ನು ಉತ್ತೇಜಿಸಲು 1920 ರಲ್ಲಿ ಸ್ನೇಹ ದಿನದ ಕಲ್ಪನೆಯನ್ನು ಮೊದಲು ಪ್ರಚಾರ ಮಾಡಿದರು. ನಂತರ ವಿಶ್ವಸಂಸ್ಥೆಯು ಜುಲೈ 30ರಂದು ಅಂತರಾಷ್ಟ್ರೀಯ "ಸ್ನೇಹ ದಿನ" ಎಂದು ಗೊತ್ತುಪಡಿಸಿತು. ಆದರೆ ಭಾರತ ಸೇರಿ ಬಾಂಗ್ಲಾ, ಮಲೇಷ್ಯಾ,ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ ಇನ್ನಿತರ ರಾಷ್ಟ್ರಗಳಲ್ಲಿ ಈ ಸ್ನೇಹದ ದಿನವನ್ನು ಆಗಸ್ಟ್‌ನ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಇನ್ನು ಕೆಲವು ದೇಶಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವುದು.

ಹೀಗೆ ಒಂದೊಂದು ದೇಶದಲ್ಲಿ ಒಂದೊಂದು ದಿನ ಸ್ನೇಹಿತರ ದಿನವನ್ನು ಆಚರಿಸಲಾಗುವುದು. ಹಾಗಾಗಿ ಸ್ನೇಹಿತರ ದಿನ ಯಾವುದು ಎಂಬ ಬಗ್ಗೆ ಹಲವರಿಗೆ ಗೊಂದಲಗಳಿವೆ. ಈ ಸ್ನೇಹ ದಿನ ವಿವಿಧ ರಾಷ್ಟ್ರಗಳಲ್ಲಿ ವಿಭಿನ್ನ ಇತಿಹಾಸವನ್ನು ಹೊಂದಿದ್ದರೂ ಆಚರಣೆಯ ಉದ್ದೇಶ ಮಾತ್ರ ಒಂದೇ ಎಂಬುದು ಗಮನಾರ್ಹ.
ಸ್ನೇಹ ಬಂಧವನ್ನು ಸಂಭ್ರಮಿಸುವ ಸುಂದರ ದಿನವಾಗಿ ಅಂತರಾಷ್ಟ್ರೀಯ ಸ್ನೇಹ ದಿನ ಪರಸ್ಪರ ದೇಶ ದೇಶಗಳ ನಡುವಿನ ಸಂಬಂಧ ಮತ್ತು ವ್ಯಕ್ತಿಗಳ ನಡುವಿನ ಸ್ನೇಹ ಸಂಬಂಧಗಳನ್ನು ಬಿತ್ತಿ ಬೆಳಸಿ ಉತ್ತೇಜಿಸಿ ವೃದ್ಧಿಸುವು ದಲ್ಲದೆ ಜಾಗತಿಕ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಸ್ನೇಹವು ಹೇಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ.ವಿವಿಧ ದೇಶಗಳ ಸ್ನೇಹಿತರೊಂದಿಗೆ ತಿಳುವಳಿಕೆ, ಜ್ಞಾನ ಮತ್ತು ಸಹಾನುಭೂತಿಯನ್ನು ಬೆಳೆಸುವ ಮೂಲಕ ಸದ್ಭಾವನೆಯನ್ನು ಬೆಳೆಸುತ್ತದೆ. ಮತ್ತು ದೇಶ ದೇಶಗಳ ನಡುವಿನ ಸಂಸ್ಕೃತಿಯನ್ನು ಪರಿಚಯಿಸಿ ಅನುಸರಿಸುವಂತೆ ಮಾಡುವುದರ ಜೊತೆಗೆ ಶಾಂತಿ ಸೌಹಾರ್ದಯುತ ಜಗತ್ತನ್ನು ಉತ್ತೇಜಿಸುವಲ್ಲಿ ಸ್ನೇಹವು ನಿರ್ಣಾಯಕ ಪಾತ್ರವನ್ನು ವಹಿಸುವ ಮೂಲಕ ಜಗತ್ತಿಗೆ ಒಂದು ಉತ್ತಮ ಕೊಡುಗೆಯಾಗಿದೆ. ಸ್ನೇಹವೆಂಬುದು ಪ್ರತಿಯೊಬ್ಬರ ಬದುಕಿನಲ್ಲಿ ತುಂಬಾ ಮಹತ್ವವಾದದ್ದು

ಸ್ನೇಹಿತರು ನಮ್ಮ ಜೀವನದ ಅವಿಭಾಜ್ಯ ಅಂಗವೆನ್ನಬಹುದು ಪ್ರಾಯಶಃ ಸ್ನೇಹಿತರಿಲ್ಲದವರು ಜಗತ್ತಿನಲ್ಲಿ ಯಾರೂ ಇಲ್ಲವೆನ್ನಬಹುದು ಒಳ್ಳೆಯ ಮೌಲ್ಯಯುತ ಸ್ನೇಹದಲ್ಲಿ ಸ್ವಾರ್ಥ ಮೋಸ,ವಂಚನೆ ಮತ್ತು ನಿರೀಕ್ಷೆಗಳು ಇರುವುದಿಲ್ಲ ಅಲ್ಲಿ ಕೇವಲ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆ ಹಾಗೂ ಒಬ್ಬರ ಏಳಿಗೆಯನ್ನು ಮತ್ತೊಬ್ಬರು ಬಯಸುವ ನಿಸ್ವಾರ್ಥದ ಗುಣವಿರುತ್ತದೆ ಹಾಗಾಗಿ ಹೆತ್ತವರು, ಸಂಗಾತಿ ಅಕ್ಕ ತಂಗಿ ಅಣ್ಣ ತಮ್ಮ ಹೀಗೆ ಮನೆ ಮಂದಿಯೊಂದಿಗೆ ಹಂಚಿಕೊಳ್ಳಲಾಗದ ಭಾವನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ, ಅದಕ್ಕಾಗಿಯೇ ಸ್ನೇಹವನ್ನು ರಕ್ತ ಸಂಬಂಧಕ್ಕೂ ಮೀರಿದ ಒಂದು ಪವಿತ್ರ ಹಾಗೂ ಬೆಲೆಕಟ್ಟಲಾಗದ ಬಂಧ ಎನ್ನುವುದು. ನಮ್ಮ ಜೀವನದಲ್ಲಿ ಸ್ನೇಹಿತರು ವಹಿಸುವ ಪ್ರಮುಖ ಪಾತ್ರವನ್ನು ಗೌರವಿಸಲು ಆಚರಿಸಲ್ಪಡುವ ಈ ಸ್ನೇಹ ದೇಶ ಭಾಷೆಗಳು ಜಾತಿಗಳು ಮತ್ತು ಜನಾಂಗಗಳನ್ನು ಮೀರಿದ ಬಂಧವಾಗಿದೆ.ಹಾಗಾಗಿ ಪುರಾಣ ಕಾಲದಿಂದಲೂ ಸ್ನೇಹಕ್ಕಿರುವ ಬೆಲೆ ಬೇರೆ ಯಾವ ಸಂಬಂಧಕ್ಕೂ ಇಲ್ಲ ಎನ್ನಬಹುದು  ಸ್ನೇಹವು ಪರಸ್ಪರ ಅಂತರವನ್ನು ನಿವಾರಿಸುತ್ತದೆ, ಮತ್ತು ಸಂಬಂಧಗಳನ್ನು ಪ್ರೀತಿಯಿಂದ ತುಂಬುತ್ತದೆ.ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕೃಷ್ಣ ಮತ್ತು ಸುಧಾಮ. ಇವರಿಬ್ಬರ ಸಂಬಂಧ ಸ್ನೇಹದ ನಿಜವಾದ ಅರ್ಥವನ್ನು ಸಂಪೂರ್ಣವಾಗಿ ಚಿತ್ರಿಸುತ್ತದೆ. ಅಲ್ಲದೆ ಜಗತ್ತಿಗೆ ಸ್ನೇಹ ಸಂಬಂಧದ ಮೌಲ್ಯವನ್ನು ತಿಳಿದುವುದಕ್ಕೆ ಕೃಷ್ಣ ಸುಧಾಮರ ನಿರ್ಮಲವಾದ ಸಂಬಂಧಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ.! ಸ್ನೇಹಿತರ ದಿನವೆಂದರೆ ಕೇವಲ ಉಡುಗೊರೆಗಳನ್ನು ಕೊಡುವುದಾಗಲಿ ಕೇವಲ ಪರಸ್ಪರ ಸಂದೇಶಗಳನ್ನು ಕಳುಹಿಸುವುದಲ್ಲ ಇದು ಉಡುಗೊರೆಗಳ ವಿನಿಮಯವನ್ನು ಮೀರಿದ ಎರಡು ಹೃದಯಗಳನ್ನು ಸಂಪರ್ಕಿಸುವ ಸಂಬಂಧಗಳನ್ನು ಬಲಪಡಿಸುವ ಕೊಂಡಿಯಾಗಿ ಸ್ನೇಹ ಸಂಬಂಧದ ಶ್ರೀಮಂತ ಬಂಧವನ್ನು ಆಚರಿಸುವ ದಿನವಾಗಿದೆ.! 
ಸ್ನೇಹಿತರು ಭಾವನಾತ್ಮಕವಾಗಿ ಬೆಂಬಲವನ್ನು ನೀಡುತ್ತಾರೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತಾರೆ ಸ್ನೇಹವು ಸಮಯ, ದೂರ ಮತ್ತು ಸಂದರ್ಭಗಳನ್ನು ಮೀರಿದೆ ಹಾಗಾಗಿ ಸ್ನೇಹ ಎನ್ನುವುದು ಸದಾ ನಮ್ಮ ಜೊತೆಯಿರುವ ಇನ್ನೊಂದು ಮನಸ್ಸು, ಬಡವ, ಶ್ರೀಮಂತ, ಮೇಲು-ಕೀಳು, ಸೌಂದರ್ಯ-ಕುರೂಪಿ ಇವುಗಳನ್ನು ನೋಡಿ ಹುಟ್ಟುವುದಿಲ್ಲ. ಎರಡು ಸಮಾನ ಜೀವಗಳು ಪರಸ್ಪರ ಕಷ್ಟ ಸುಖಗಳಿಗೆ ಸ್ಪಂಧಿಸಿದಾಗ ಮಾತ್ರ ಸ್ನೇಹದ ಹುಟ್ಟುವುದು ಸ್ನೇಹಕ್ಕೆ ವಯೋಮಿತಿಯಿಲ್ಲ ಚಿಕ್ಕ ಮಕ್ಕಳಿಗೆ ಅಜ್ಜ ಅಜ್ಜಿಯಷ್ಟು ವಯಸ್ಸಾಗಿರುವವರೂ ಸಹ ಸ್ನೇಹಿತರಾಗಿರುತ್ತಾರೆ.!ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು ನಿಷ್ಠೆಯಿಂದ ಇರುವುದು ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳು ವುದೇ ಸ್ನೇಹ. ಹಾಗಾಗಿ  ಉತ್ತಮವಾದ ನಂಬುಗೆಯ ಸ್ನೇಹಿತರು ಸಿಗಲು ನಿಜವಾಗಿಯೂ ಪುಣ್ಯ ಮಾಡಿರಬೇಕು. ಆಟ, ಪಾಠ, ಊಟದ ಜೊತೆಗೆ ಸಂತೋಷ, ಸಂಭ್ರಮ, ನೋವು, ನಲಿವುಗಳ ಜೊತೆ ಪ್ರತೀ ವಿಷಯವನ್ನೂ ಜೀವನದ ಪ್ರತಿಯೊಂದು ಕ್ಷಣವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುವುದು ಸ್ನೇಹಿತರೊಂದಿಗೆ ಮಾತ್ರ,ಉತ್ತಮ ಸ್ನೇಹ ಬಾಂಧವ್ಯ ಇದ್ದಲ್ಲಿ ಶಾಲಾ ದಿನಗಳಿಂದ ಹಿಡಿದು ಕೊನೆಯ ಉಸಿರಿನ ತನಕ ಸ್ನೇಹಿತರು ನಮ್ಮ ಜೊತೆಗಿರುತ್ತಾರೆ. ನಮ್ಮ ಸಂಬಧಿಗಳಿಗಿಂತ ನಮ್ಮ ಕಷ್ಟದ ದಿನಗಳಿಗೆ ಹೆಗಲು ನೀಡುವವರು ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರೆ ಆಗಿರುತ್ತಾರೆ, ನಮ್ಮನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ಮತ್ತು ನಮ್ಮ ನ್ಯೂನತೆಗಳ ಹೊರತಾಗಿಯೂ ನಮ್ಮನ್ನು ಸ್ವೀಕರಿಸುವ ಸ್ನೇಹಿತರನ್ನು ನಾವು ಹೊಂದಿದ್ದರೆ, ಜಗತ್ತಿನಲ್ಲಿ ನಾವು ತುಂಬಾ ಅದೃಷ್ಟ ಶಾಲಿ ವ್ಯಕ್ತಿಗಳಾಗಿರುತ್ತೇವೆ.  

ಭಾರತದ ಗೌರವಾನ್ವಿತ ಮಾಜಿ ರಾಷ್ಟ್ರಪತಿಗಳು ಮತ್ತು ಭಾರತ ರತ್ನ ಪುರಸ್ಕೃತರೂ ಆದ ಡಾ. ಎ. ಪಿ. ಜೆ ಅಬ್ದುಲ್ ಕಲಾಂ ರವರು"ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ" ಎಂದು ಅದಕ್ಕೇ ಹೇಳಿರುವುದು.!
ಗೀತಾಂಜಲಿ ಎನ್,ಎಮ್
ಕೊಡಗು




ProfileImg

Written by Geethanjali NM

Author ✍️

0 Followers

0 Following