‘ಭಾರತ’ ಎಂಬ ಮೂರು ಅಕ್ಷರಗಳಲ್ಲಿ ಅದೇನು ಆಕರ್ಷಣೆ. ಆಹಾ! ಪಾಶ್ಚಿಮಾತ್ಯರೂ ಹೆಮ್ಮೆ ಪಡುವ ನಾಡು ನಮ್ಮ ಭರತ ಖಂಡ.
ಈ ನಮ್ಮ ಹೆಮ್ಮೆಯ ಭಾರತಾಂಭೆಯನ್ನು ಇಲ್ಲಿಯವರೆಗೆ ಆಳಿದವರು ಅದೆಷ್ಟು ಮಂದಿಯೋ, ಹಾಗೆಯೇ ತುಳಿದವರೂ ಇನ್ನೆಷ್ಟು ಜನರೋ…. ತರ್ಕಕ್ಕೆ ನಿಲುಕದ ಸಂಗತಿ! ಆಳಿದವರು ಇತಿಹಾಸದ ಪುಟಗಳಲ್ಲಿ ಸೇರಿಕೊಂಡರೆ ತುಳಿದವರು ಮಣ್ಣಲ್ಲಿ ಮಣ್ಣಾಗಿ ಹೋಗಿರುವುದು ಮಾತ್ರ ವಾಸ್ತವ!
ಅದೇನೇ ಇರಲಿ, ಭಾರತ ದೇಶದಂಥಹ ಒಂದು ಸುಂದರವಾದ ದೇಶಕ್ಕೆ ಬ್ರಿಟೀಷ್ ಎಂಬ ಗ್ರಹಣ ಬಂದು ಅದರಿಂದ ಬಿಡುಗಡೆ ಹೊಂದಲು ಹಲವಾರು ದೇಶ ಭಕ್ತರು ಪ್ರಾಣವನ್ನು ಅರ್ಪಣೆ ಮಾಡಬೇಕಾಗಿ ಬಂದದ್ದು ವಿಪರ್ಯಾಸವೆ ಸರಿ… ನಮ್ಮ ದೇಶದಲ್ಲಿ ನಾವು ಬದುಕಲು ಬೇರೆ ದೇಶದವರೊಂದಿಗೆ ಹೋರಾಡಬೇಕಿತ್ತು. ಇದನ್ನು ದುರ್ದೈವ ಎನ್ನದೇ ಇರಲು ಸಾಧ್ಯವೇ, ಖಂಡಿತಾ ಇಲ್ಲ. ನಮ್ಮ ದೇಶದ ಸಂಪತ್ತನ್ನು ಪರಕೀಯರು ದೋಚಿಕೊಂಡು ಹೋಗುತ್ತ ಇದ್ದದ್ದನ್ನು ನೋಡಿಕೊಂಡು ಅಸಹಾಯಕತೆಯಿಂದ ಕೈ ಕಟ್ಟಿ ಕೂರುವ ಕಾಲವೊಂದಿತ್ತು. ತಾನು ಮಾಡಿದ್ದೇ ಸರಿ ನನ್ನದೇ ಕಾನೂನು, ನಾವು ಏನು ಹೇಳುತ್ತೇವೆಯೋ ಅದನ್ನು ನೀವುಗಳು ಕೇಳಿಕೊಂಡು ಬದುಕಬೇಕು ಎಂದು ದಬ್ಬಾಳಿಕೆ ನಡೆಸುತ್ತಿದ್ದ ಬಿಳಿಯನ್ನರ ಅಡಿಯಾಳಾಗಿ ಬದುಕಬೇಕಿದ್ದ ಕಾಲವೂ ಅದೇ ಆಗಿತ್ತು. ಅಬ್ಬಾ! ಈಗ ನಾವು ಅವೆಲ್ಲವನ್ನೂ ಕಲ್ಪಿಸಿಕೊಳ್ಳಲೂ ಭಯ ಪಡುತ್ತೇವೆ ಎಂದರೆ ಆ ಸ್ವಾತಂತ್ರ್ಯ ಸಿಗುವ ಹಿಂದಿನ ದಿನಗಳು ಅದೆಷ್ಟು ಘನಘೋರ ಆಗಿ ಇದ್ದಿರಬೇಕು!!
ಸ್ವಾತಂತ್ರ್ಯ ಹೋರಾಟಗಾರರ ಸತತ ಪರಿಶ್ರಮದ ಫಲವೇ ನಾವು ಇಂದು ಅನುಭವಿಸುತ್ತಿರುವ ನೆಮ್ಮದಿಯ ದಿನಗಳು! ಅಂದಿನ ಆ ಹೋರಾಟಗಾರರ ತ್ಯಾಗ, ಬಲಿದಾನಗಳಿಗೆ ಇತಿಶ್ರೀ ಹಾಡಿದ ದಿನ ಎಂದರೆ ಅದು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ದಿನ ಆಗಸ್ಟ್ 15, 1947…
ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೇಳು ವರ್ಷಗಳಷ್ಟು ಸುಧೀರ್ಘ ಸಮಯ ಕಳೆದು ಹೋಗಿಯೇ ಬಿಟ್ಟಿದೆ. ಈ 77 ವರ್ಷಗಳಲ್ಲಿ ಹಲವಾರು ಒಳ್ಳೆಯದು, ಕೆಟ್ಟದ್ದು ಈ ಎಲ್ಲವನ್ನೂ ಕಂಡಿದ್ದೇವೆ.
ಒಂದು ಕಡೆ ಕಾಶ್ಮೀರದ ಹಿಮ ಪರ್ವತದಲ್ಲಿ ದೇಶಕ್ಕಾಗಿ ನಿರಂತರವಾಗಿ ಹೋರಾಡುತ್ತಿರುವ ಸೈನಿಕರು. ಇವರ ಬಗ್ಗೆ ನಾನು ಇಲ್ಲಿ ಹೇಳಲೇಬೇಕು. ಇಲ್ಲವಾದರೆ ಈ ಬರಹ ಅಪೂರ್ಣವಾದೀತು ಎಂಬುದು ನನ್ನ ಅನಿಸಿಕೆ. ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಗಡಿಯಲ್ಲಿ ಜೀವ ಒತ್ತೆಯಿಟ್ಟು ದೇಶವನ್ನು ಕಾಯುತ್ತಿರುವ ವೀರ ಯೋಧರು. ತನ್ನ ಕುಟುಂಬ ಎಂಬ ಭಾವುಕತೆಗೆ ಒಳಗಾಗದೇ ತಮ್ಮ ಕರ್ತವ್ಯಕ್ಕಾಗಿ ಎಲ್ಲವನ್ನೂ ಮರೆತವರಿಗೆ ಇಲ್ಲಿಂದಲೇ ನನ್ನದೊಂದು ಸಲಾಂ!!
ಹಲವಾರು ಜಾತಿ, ಮತ, ಧರ್ಮಗಳ ಸಂಗಮವೇ ಈ ರಾಮ ಜನ್ಮ ಭೂಮಿ. ಸಾಕ್ಷಾತ್ ದೇವರುಗಳೇ ಅವತಾರ ಎತ್ತಿ ಭಾರತಾಂಬೆಯ ಮಡಿಲನ್ನು ಪಾವನಗೊಳಿಸಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತೇ ಇದೆ. ಪ್ರಭು ಶ್ರೀ ರಾಮ ಜನಿಸಿದ ಈ ಪುಣ್ಯಭೂಮಿಯ ಬಗ್ಗೆ ಎಷ್ಟು ಮಾತನಾಡಿದರೂ ಅದು ಕಡಿಮೆ ಅನ್ನಿಸಬಹುದು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಇರುವ ಅಚ್ಚರಿಗಳು ಅದೆಷ್ಟೋ…. ಮೂರೂ ದಿಕ್ಕುಗಳಿಂದ ಜಲಾವೃತಗೊಂಡಿರುವ ನಮ್ಮ ಈ ಪುಣ್ಯಭೂಮಿಯ ಸಂಸ್ಕೃತಿಗೆ ಪಾಶ್ಚಿಮಾತ್ಯರೇ ಮಾರು ಹೋಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವೇ ಸರಿ. ಇಂಥಹ ಒಂದು ಸುಸಂಸ್ಕೃತ ನಾಡಲ್ಲಿ ಹುಟ್ಟಿರುವ ನಾವುಗಳು ನಿಜಕ್ಕೂ ಪುಣ್ಯವಂತರು ಎಂದು ಅಂದುಕೊಂಡಿದ್ದೇನೆ. ಅಯೋಧ್ಯೆ ಎಂಬ ಪ್ರದೇಶದಲ್ಲಿ ಪ್ರಭು ಶ್ರೀರಾಮರು ಜನಿಸಿದ್ದು ಮತ್ತೊಮ್ಮೆ ಶ್ರೀರಾಮರನ್ನು ಅದೇ ಅಯೋಧ್ಯೆಯಲ್ಲಿ ನಾವೆಲ್ಲರೂ ನೋಡುವಂಥಹ ಭಾಗ್ಯ ನಮ್ಮೆಲ್ಲರ ಅದೃಷ್ಟ ಎನ್ನದಿರಲು ಸಾಧ್ಯವೇ?
ಒಬ್ಬ ಭಾರತೀಯ ಎಂದು ಕರೆಸಿಕೊಂಡ ಯಾರೇ ಆಗಲಿ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮೆಚ್ಚಲೇಬೇಕು ಹಾಗೂ ಅದಕ್ಕೆ ಆತ ತಲೆ ಬಾಗಲೇಬೇಕು. ಆಗಲೇ ಆತ ಪರಿಪೂರ್ಣ ಭಾರತೀಯನಾಗಲು ಸಾಧ್ಯ! ಭಾರತ ಮಾತೆಗೆ ಜಯವಾಗಲಿ… ನಾವೆಲ್ಲರೂ ಒಂದೇ, ಅದೇ ನಾವು ಭಾರತೀಯರು…..
#AyraWritingContest
#IndiaIndependanceDay2024
0 Followers
0 Following