ಜಗದೊಳು ಸೌಂದರ್ಯವತಿ ಹೆಣ್ಣೋ...? ಹೂವೋ..?

ProfileImg
27 Feb '24
10 min read


image

ಪೂರ್ವದಲ್ಲಿ ಬ್ರಹ್ಮನು ಸೃಷ್ಟಿ ಕಾರ್ಯ ಮೊದಲು ಗೊಳಿಸಿದವನೇ, ಮೊದಲು ತನ್ನ ಹಾಗೂ ತನ್ನ ಪರಿವಾರಕ್ಕಾಗಿ ಸತ್ಯಲೋಕ(ಬ್ರಹ್ಮ ಲೋಕ) ವನ್ನು ಸೃಷ್ಟಿಸಿಕೊಂಡನು. ತದನಂತರ ದೇವತೆಗಳ ವಾಸಸ್ಥಾನಕ್ಕಾಗಿ 'ತಪೋ ಲೋಕ' ವನ್ನು ಅನಂತರದಲ್ಲಿ ಮಹಾಜ್ಞಾನಿಗಳಾದ ಸಪ್ತರ್ಷಿಗಳು ಸೇರಿದಂತೆ ತನ್ನ ಮಕ್ಕಳು, ಸನತ್ಕುಮಾರರು,ನಾರದ,ದಕ್ಷ ಮತ್ತು ಕರ್ದಾಮರ ವಾಸಕ್ಕಾಗಿ 'ಜನ ಲೋಕ' ವನ್ನು ಸೃಷ್ಟಿ ಮಾಡಿಕೊಟ್ಟನು. ಮಾರ್ಕಂಡೇಯ ಮತ್ತು ಇತರ ಋಷಿಗಳಿಗಾಗಿ 'ಮಹರ್ ಲೋಕ', ಇಂದ್ರಾದಿ ದೇವತೆಗಳ
ಮತ್ತವರ ಪರಿವಾರಕ್ಕಾಗಿ 'ಸ್ವರ್ಗ ಲೋಕ' ವನ್ನು, ಪಿತೃದೇವತೆಗಳಿಗಾಗಿ 'ಭುವರ್ಲೋಕ' (ಪಿತೃ ಲೋಕ) ವನ್ನು ಹಾಗೆಯೇ ಮನುಷ್ಯದಿ ಇತರ ಪ್ರಾಣಿ ಪಕ್ಷಿಗಳಿಗಾಗಿ 'ಭೂಲೋಕ'ವನ್ನು ಸೃಷ್ಟಿಸಿದನು.

ಬ್ರಹ್ಮಲೋಕದಿಂದ ಭೂಲೋಕದವರೆಗೆ ಏಳು ಲೋಕಗಳ ಸೃಷ್ಟಿಯಾದ ನಂತರ ಭೂಲೋಕದ ಕೆಳಗೆ ಮತ್ತೆ ಏಳು ಲೋಕಗಳನ್ನು ನಿರ್ಮಾಣ ಮಾಡಿದನು. ಅತಳ ಲೋಕ, ವಿತಳ ಲೋಕ, ಸುತಳ ಲೋಕ, ತಳಾತಳ ಲೋಕ, ಮಹಾತಳ ಲೋಕ (ಮಹಾತಳ ಲೋಕದಲ್ಲಿ ಋಷಿ ಕಶ್ಯಪನ ಪತ್ನಿಯಾದ ಕದ್ರುವಿನಿಂದ ಜನಿಸಿದ ತಕ್ಷಕ, ಖುಕ ಮತ್ತು ಕಾಳಿಯಾ ಮುಂತಾದ ಅನೇಕ ತಲೆಗಳನ್ನು ಹೊಂದಿರುವ ದೈತ್ಯ ಹಾವುಗಳು ವಾಸಿಸುತ್ತವೆ)ರಸಾತಳ ಲೋಕ, ಪಾತಾಳ ಲೋಕವನ್ನು ಸೃಷ್ಟಿಸಿ ಬ್ರಹ್ಮದೇವನು ಬ್ರಹ್ಮಾಂಡವಾದ ಬ್ರಹ್ಮಾಂಡದ ನಿರ್ಮಾಣವನ್ನು ಪೂರ್ಣಗೊಳಿಸಿದನು.

ಯಾರು ಎಲ್ಲೆಲ್ಲಿ ವಾಸಿಸಬೇಕು ಎಂಬುದನ್ನು ಮೊದಲು ಪಟ್ಟಿ ಮಾಡಿ ಪೂರ್ಣಗೊಳಿಸಿದ್ದನು ಹೀಗಾಗಿ ಆಸ್ತಿ ತಗಾದೆಗಳು ಯಾರಿಗೂ ಇರಲಿಲ್ಲ. ಆದರೂ ದೇವತೆಗಳು ಮತ್ತು ರಾಕ್ಷಸರ ನಡುವೆ ಸ್ವರ್ಗದ ವಿಷಯದಲ್ಲಿ ಸ್ವಲ್ಪ ತಕರಾರು ಇದ್ದೇ ಇತ್ತು. ಇದನ್ನು ಹೊರತು ಎಲ್ಲರೂ ಕೂಡ ಅವರವರ ಲೋಕಗಳನ್ನು ಅವರವರು ಒಪ್ಪಿಕೊಂಡು ಬದುಕಲಾರಂಭಿಸಿದರು. ಎಲ್ಲಾ ಲೋಕಗಳಲ್ಲಿಯೂ ಒಂದು ಪ್ರಕೃತಿಯ ಸೌಂದರ್ಯ, ಪುರುಷ ಮತ್ತು ಸ್ತ್ರೀ ಪ್ರಾಧ್ಯಾನತೆ ತುಂಬಿಕೊಂಡಿತ್ತು. ಪುರುಷರು, ಸ್ತ್ರೀಯರು ಎಂಬುದು ಎಲ್ಲಾ ಲೋಕದ ಎಲ್ಲಾ ವರ್ಗದ ಸಮಾಜಗಳಿಗೂ ಸಮವಾದ ಒಬ್ಬರಿಗೆ ಇನ್ನೊಬ್ಬರು ಪೂರಕವಾದ ಜೀವನದ ಪಯಣಿಗರು. ಏನೇ ಆಗಲಿ ಬ್ರಹ್ಮನ ಸೃಷ್ಟಿಯಲ್ಲಿ ಇದ್ದದ್ದೆ ಎರಡೇ ಒಂದು ಗಂಡು, ಜಾತಿ ಇನ್ನೊಂದು ಹೆಣ್ಣು ಅದರ ಜೊತೆಗೆ ಪ್ರಕೃತಿಯೆಂಬ ಇನ್ನೊಂದು ಜಾತಿ. ಆಯಾಯ ಲೋಕಕ್ಕೆ ಅನುಗುಣವಾಗಿ ದೇವತೆಗಳು, ದಾನವರು, ಮಾನವರು ಹೀಗೆ ಒಂದೊಂದು ಧರ್ಮಗಳು ನೆಲೆ ನಿಂತವು.

ಸೃಷ್ಟಿ ಕಾರ್ಯದ ಆರಂಭದಲ್ಲೇ ಬ್ರಹ್ಮನು ಜೀವದ ರಸೋತ್ಪತ್ತಿಗಾಗಿ (ಸಂತೋಷಕ್ಕಾಗಿ) ತಂಗಾಳಿಯಲ್ಲಿ ಕಾಮದ ವಾಸನೆಯನ್ನು ಬೆರೆಸಿ, ಕಣ್ಣಿಂದ ಕಣ್ಣಿಗೆ ಅದು ಸೋಕಿ, ಎರಡು ಜೀವಗಳು ಸುವಾನಾಭರಿತವಾಗಿ ಅರಳಿ, ಬದುಕಿನ ಆನಂದವನ್ನು ಅವರು ಅನುಭವಿಸಲೆಂದು ಪ್ರಕೃತಿ ಪುರುಷನನ್ನು ಮೊದಲೇ ಸೃಷ್ಟಿಸಿದ್ದನು. ಪ್ರಕೃತಿ ಪುರುಷನಿಗೆ ಸಂಗಾತಿಯಾಗಿ ಮರ, ಗಿಡ, ಹೂವು, ಕಾಯಿಗಳ ಹಸಿರಿನ ಕಾನನವನ್ನೇ ಕೊಟ್ಟನು. ನದಿ, ಜಲಗಳು ಪ್ರಕೃತಿ ಪುರುಷನ ವಾಸಸ್ಥಾನವಾಯಿತು. ಪ್ರಾಣಿ, ಪಕ್ಷಿಗಳು ಇವರಿಗೆ ಜೊತೆಯಾದರು.

14 ಲೋಕಗಳ ಸೃಷ್ಟಿ ಪೂರ್ಣಗೊಂಡಾಗ ಬ್ರಹ್ಮಾಂಡದೊಳಗೆ ವೇದವಿತ್ತು, ಶಾಸ್ತ್ರವಿತ್ತು, ಜ್ಞಾನವಿತ್ತು, ಕಾಮವಿತ್ತು, ಅಜ್ಞಾನವು ವಿಜೃಂಭಿಸುತ್ತಿತ್ತು. ಮನುಷ್ಯ ಕುಲವಂತೂ ಹಸಿವು, ನಿದ್ರೆ, ಮಕ್ಕಳು, ಬಂಧು ಬಳಗಗಳಲ್ಲಿ ಸಾಂಸಾರಿಕ ಜೀವನವನ್ನು ಕಂಡುಕೊಂಡರು. ಉಳಿದವರಿಗೆ ಹಸಿವು, ನಿದ್ರೆಗಿತ್ತಾ ಹೆಚ್ಚು ಕಾಮಾಸಕ್ತಿ ಇತ್ತು. ಮನುಷ್ಯರನ್ನು ಇತರರಿಂದ ಇಲ್ಲಿಯೇ ಬ್ರಹ್ಮನು ಬೇರ್ಪಡಿಸಿದ್ದು. ಮನುಷ್ಯ ಜಾತಿಗೆ ಹಚ್ಚಿ ಸಾಂಸಾರಿಕ ಜೀವನವನ್ನು ಅನುಭವಿಸುವಂತೆ ಬ್ರಹ್ಮನು ಆಶೀರ್ವದಿಸಿದ್ದನು. ಜೀವನವನ್ನು ಅಂದಾಗ ಅದು ಹೇಳಲಾಗದ ಆದರೆ ಅನುಭವಿಸಲೇಬೇಕಾದ ಒಂದು ಅನುಭೂತಿ. ಇತರ ವರ್ಗಗಳಿಗಿಂತ ಸಾಂಸಾರಿಕ ಸುಖದ ಕಲ್ಪನೆ ಭಿನ್ನವಾಗಿತ್ತು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಅದು ಮಾನವ ಸಂಬಂಧಗಳಲ್ಲಿ ವ್ಯಕ್ತವಾಯಿತು. ಇದು ಹೊರತಾಗಿ ಕಾಮದ ಅಪೇಕ್ಷೆ ಮತ್ತು ದೈಹಿಕ ವಾಂಛೆ ಎಲ್ಲರಲ್ಲೂ ಕೂಡ ಸರಿಸಮಾನವಾಗಿತ್ತು. ಒಂದು ಹೆಣ್ಣು, ಗಂಡು ಆಕರ್ಷಣೆಯಿಂದ ಅನುರಾಗಕ್ಕೆ ಒಳಗಾಗುವ, ಅನುಬಂಧಕ್ಕೆ ಒಳಪಡುವ, ಕಾಮದಿಂದ ಜೊತೆಗೂಡುವ ಸುಖವನ್ನು ಎಲ್ಲರಲ್ಲೂ ಕೂಡ ಅವನು (ಬ್ರಹ್ಮನು) ಸಮಾನವಾಗಿಯೇ ಹಂಚಿದ್ದನು.

ಬ್ರಹ್ಮಲೋಕದಿಂದ ಹಿಡಿದು ಪಾತಾಳ ಲೋಕದವರಿಗೂ ಎಲ್ಲಡೆಯೂ ಒಂದು ಸೌಂದರ್ಯಮಯವಾದ ಪ್ರಕೃತಿ ಅಲ್ಲಿ ಪುರುಷ- ಸ್ತ್ರೀಯರ ನಡುವಿನ ಅನುರಾಗ, ಕಾಮಪೇಕ್ಷೆಗಳು ಏರ್ಪಟ್ಟಿತ್ತು. ಇದೊಂದು ಪ್ರಾಕೃತಿಕ ನಿಯಮ, ಎಲ್ಲಿ ಪ್ರಕೃತಿ ನಗುನಗುತ್ತಿರುತ್ತದೆ ಅಲ್ಲಿ ಸಹಜವಾಗಿಯೇ ಬಯಕೆಗಳಿಂದ ಕೂಡಿದ ಹೊಂಗನಸುಗಳ ಮೊಗ್ಗು ಅರಳಿ ಹೂವಾಗುತ್ತದೆ. ಹೆಣ್ಣು, ಗಂಡಿನ ನಡುವಿನ ಆತ್ಮೀಯತೆಗೆ ಪ್ರಕೃತಿ ಸ್ವರ್ಗ ಸೀಮೆಯ ಮಹಾ ದ್ವಾರವನ್ನು ತೆರೆದು ಹೊಸದೊಂದು ಲೋಕಕ್ಕೆ ದಾಟಿಸುತ್ತದೆ. ವಾಸ್ತವಕ್ಕೆ ಪ್ರಕೃತಿ ಪುರುಷನಾದರೂ ಅವನ ತರಂಗದ ಸೌಂದರ್ಯ ಅಡಗಿರುವುದು ಅದರ (ಪ್ರಕೃತಿಯ) ಹೆಣ್ತನದಲ್ಲೇ!

ಹೆಣ್ತನಕ್ಕೆ ನಿಜವಾದ ಅರ್ಥದಲ್ಲಿ ಪೂರ್ಣತೆಯನ್ನು ತುಂಬಿದ್ದು ಪುರುಷ ಪ್ರಧಾನವಾದ ಭೂಲೋಕವೇ. ಭೂಲೋಕದ ಸಾಂಸಾರಿಕ ಜಗತ್ತು ಹೆಣ್ಣಿಗೆ ಕೊಟ್ಟ ಸ್ವಾತಂತ್ರ್ಯ ಕಡಿಮೆಯಾದರೂ ಅವಳ ವ್ಯಾಪ್ತಿಯನ್ನು ಮಾತ್ರ ಹಿಗ್ಗಿಸಿತು. ಮಾತೃತ್ವದ ಕಲ್ಪನೆ ಮತ್ತದರ ಅನುರಾಗ ಭೂಲೋಕದ ಸ್ತ್ರೀಯರಲ್ಲಿ ಅತಿ ಹೆಚ್ಚು ಬಲಗೊಂಡಿತ್ತು. ಭೂಲೋಕದ ಸ್ತ್ರೀಯರ ವಿಷಯಕ್ಕೆ ಬರುವುದಾದರೆ ಅವಳು ತನ್ನ ಸುಖ ಮತ್ತು ಆನಂದಗಳನ್ನು ಬೇರೆಲ್ಲೂ ಹುಡುಕುವುದಿಲ್ಲ ಬದಲಾಗಿ ಅವಳಿಗದು ತನ್ನ ಗಂಡನಿಗೆ ಅನುರಕ್ತಳಾಗುವುದರಲ್ಲಿದೆ. ಮಗುವಿಗೆ ತಾಯಿಯಾಗಿ ಪೋಷಿಸುವುದರಲ್ಲಿದೆ. ತನ್ನ ಬಂಧು-ಬಳಗ ಪರಿವಾರದ ಕಷ್ಟ, ಸುಖ,ನೋವು ನಲಿವಿನಲ್ಲಿ ಜೊತೆಗೂಡುವುದರಲ್ಲಿದೆ. ಹೆಣ್ಣು ನಕ್ಕರೆ ಆ ಸುತ್ತಲಿನ ಪ್ರಕೃತಿಯೇ ನಂದನವನದಂತೆ ಅರಳಿ ನಲಿಯುತ್ತದೆ. ಅಂತಹ ಅಂದ ಹೆಣ್ಣಿನ ನಗುವಿನ ಹಿಂದೆ ಅಡಗಿದೆ.ಅಷ್ಟೇ ವಿಷಾದನೀಯವೂ ಕೂಡ ಅವಳ ಜೊತೆಗೆ ನಡೆದು ಬಂದಿದೆ. ಹೆಣ್ಣಿನ ಕಣ್ಣೀರು ಅವಳ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸುತ್ತದೆ. ಅವಳ ಕಣ್ಣೀರಿನ ಮುಂದೆ ರಾಜ್ಯಗಳೇ ಪತರುಗುಟ್ಟಿ ಹೋಗಿವೆ. ಹೆಣ್ಣು ಮಾಯೆಯೂ ಹೌದು, ಪ್ರಕೃತಿಯು ಹೌದು, ಪುರುಷ ವಿಧಾನದ ಜೀವನ ಮಾರ್ಗವೂ ಹೌದು. ಹೆಣ್ಣಿನ ಆನಂದದಲ್ಲಿ ಒಂದು ಸಂಸಾರದ ಪ್ರಕೃತಿಯ ಅಂದವಿರುತ್ತದೆ. ಅವಳ ದುಃಖದಲ್ಲಿ ಬಾಡಿ ಬರುಡಾದ ಭೂಮಿಯ ನೋವು ಯಾತನೆಗಳಿರುತ್ತದೆ. ಪ್ರಕೃತಿಯು ಕೂಡ ಅಷ್ಟೇ,ಅಲ್ಲಿಯೂ ಶೃಂಗಾರದ ಮಳೆ ಸುರಿದು ಅದರ ಮೈಯೆಲ್ಲ ತಂಪಾಗಿ, ನದಿಯಾಗಿ ಹರಿದು, ಗಿಡ ಮರಗಳು ಹಸಿರಾಗಿ ಹಸಿರಾಗಿ ನಲಿದು, ಪ್ರಾಣಿ ಪಕ್ಷಿಗಳು ತನ್ನ ಒಡಿಲಲ್ಲಿ ಆನಂದ ಓಡಾಡುತ್ತಿದ್ದರೆ ಪ್ರಕೃತಿಯ ಆನಂದ ಹೇಳತಿರದು. ಅದೇ ಮಳೆ ಇಲ್ಲವಾದರೆ, ಭೂಮಿ ಒಣಗಿದರೆ, ನದಿಗಳು ಬತ್ತಿ ಹೋದರೆ, ಮರ-ಗಿಡಗಳು ಹಸಿರಿಲ್ಲದೆ ಹಸಿವಿನಿಂದ ಬಳಲುತ್ತಿದ್ದರೆ ಪ್ರಕೃತಿಯದು ಕೂಡ ತಾಯ್ತನದ ಅರಣ್ಯರೋಧನೆ

ಬ್ರಹ್ಮನ ಸೃಷ್ಟಿಯಲ್ಲೇ ಅತ್ಯದ್ಭುತವೆಂದರೆ ಅದು ಹೆಣ್ಣು, ಮತ್ತವಳ ಸೌಂದರ್ಯ. ಮತ್ತೊಂದು ಅವನು ಸೃಷ್ಟಿಸಿದ ಅದ್ಭುತವೆಂದರೆ ಅದು ಪ್ರಾಕೃತಿಕ ಸೌಂದರ್ಯ ರಾಶಿ. ಹೆಣ್ಣು ನಿಜವಾದ ಅರ್ಥದಲ್ಲಿ ಪರಿಪೂರ್ಣ ಹೆಣ್ಣಾಗುವುದು ಒಂದು ತಾಯಿಯಾದಾಗ ಅದೇ ರೀತಿಯಲ್ಲಿ ಪ್ರಕೃತಿಗೆ ಪರಿಪೂರ್ಣತೆ ದಕ್ಕುವುದು ಹಸಿರಿನ ಹೊನ್ನಸಿರಿಯಲ್ಲಿ. ಮಗುವಿಲ್ಲದ ಹೆಣ್ಣು ಬಂಜೆ ಅನ್ನೋದಾದರೆ ಹಸಿರಿಲ್ಲದ ಪ್ರಕೃತಿಯು ಕೂಡ ಬಂಜೆನೆ! ಇನ್ನು ಹೆಣ್ಣಿನ ನಿಜವಾದ ಅಂದ ಅವಳ ಲಜ್ಜೆಯ ಮೇಲೆ ಅರಳುತ್ತದೆ. ಪ್ರಕೃತಿಯ ಸೌಂದರ್ಯ ಹೂವಿನಲ್ಲಿ ಪರಿಮಳಿಸುತ್ತದೆ. ಹಸಿರಿನವನಕ್ಕೆ ಹೂವಿದ್ದರೇನೇ ಚೆಲುವು. ಕಾನನದೊಳಗೊಂದು ಮಲ್ಲಿಗೆ ಇದ್ದಾಗಲೇ ಅದಕ್ಕೊಂದು ಘಮಲು. ಆ ಘಮಲೇ ಕಾನನದ ಸೊಬಗು.

ಹೆಣ್ಣಿಗೂ ಅದರ ಅಂದಕ್ಕೂ ಇನ್ನೊಂದು ಹತ್ತಿರದ ಪದವೇ ಹೂವು! ಕವಿಗೆ ಸೌಂದರ್ಯದ ಅಕ್ಷರಗಳಿಗೆ ಹೆಣ್ಣು ಮತ್ತು ಹೂವು ಎರಡು ಕಣ್ಣುಗಳಿದ್ದಂತೆ. ಹೂವು ಮತ್ತು ಹೆಣ್ಣು ಬ್ರಹ್ಮನ ಸೃಷ್ಟಿಯ ಎರಡು ಅಪರೂಪದ ಸೌಂದರ್ಯದ ಗಣಿಗಳು. ಅದೆಷ್ಟೇ ಜ್ಞಾನಿಯಾಗಲಿ, ಋಷಿಯಾಗಲಿ, ಮಾನವ-ದಾನವ- ಯಕ್ಷ-ಗಂಧರ್ವ ಕೊನೆಗೆ ದೇವರೇ ಇರಲಿ ಹೆಣ್ಣಿನ ಚೆಲುವಿಗೆ ಸೋಲದವನಿಲ್ಲ. ಹೆಣ್ಣಿನ ಅಂದವನ್ನು ಬಣ್ಣಿಸದ ಯಕ್ಷ ಗಂಧರ್ವರ ಸಂಗೀತವಿಲ್ಲ. ಇಂದ್ರಾದಿ ದೇವತೆಗಳು ನಿರ್ಲಜ್ಜರಾಗಿದ್ದು ಹೆಣ್ಣಿನ ಮುಂದೆ. ವಿಶ್ವಾಮಿತ್ರನು ಸೋತಿದ್ದು ಮೇನಕೆಗೆ, ಮತಿ ಭ್ರಷ್ಟನಾದ ರಾವಣನು
ಅತ್ಯಾಚಾರ ಮಾಡಿದ್ದು ಅಪ್ಸರೆ ರಂಭೆಯನ್ನು. 
ಅಂದರೆ ಜ್ಞಾನಿಗಳು ಅದೆಷ್ಟೇ ದೊಡ್ಡವರಾಗಲಿ ಹೆಣ್ಣಿನ ಮುಂದೆ ಅವಳ ಸಂಘದ ಮುಂದೆ ಸಣ್ಣವರಾಗುತ್ತಾರೆ, ಆಗಲೇಬೇಕು. ಇದು ಸಹಜವಾಗಿಯೇ ಇಡೀ ಬ್ರಹ್ಮಾಂಡದಲ್ಲಿ ಸ್ತ್ರೀ ಸೌಂದರ್ಯ ಮತ್ತು ಅದರ ಸಂಚಲನವನ್ನು ಪ್ರತಿಬಿಂಬಿಸುತ್ತದೆ.

ಬ್ರಹ್ಮನ ಸೃಷ್ಟಿಯಲ್ಲಿ ಬಹು ಅದ್ಭುತವಾದ ಶೃಂಗಾರ ರಸವನ್ನು ಅವನು ಹೆಣ್ಣಿನಲ್ಲಿ ಪ್ರಸ್ತುತವಾಗಿಸಿದ ರೀತಿ 'ನಾ ಭೂತೋ: ನಾ ಭವಿಷ್ಯತಿ:' ಎಂಬಂತಿದೆ. ಬ್ರಹ್ಮನ ಸೃಷ್ಟಿ ಅಂತಹ ಅದ್ಭುತದ ಸೌಂದರ್ಯದ ನಿಧಿ, ಗಣಿ ಹೆಣ್ಣು!
ರಂಭೆ, ಮೇನಕೆ, ಪೂರ್ವಶಿ ಇನ್ನಿತರ ಅಪ್ಸರಾ ಕನ್ಯೆಯರಿಲ್ಲದ ಸ್ವರ್ಗಲೋಕವನ್ನು ನೀವದು ಸ್ವರ್ಗಲೋಕ ಎನ್ನಲು ಸಾಧ್ಯವೇ?

ಸ್ವರ್ಗಲೋಕದಲ್ಲಿ ಸುರಪಾನವಿದೆ, ಪುಷ್ಪಕ ವಿಮಾನವಿದೆ, ಐರಾವತವಿದೆ ಆದರೂ ಸತ್ತವರೆಲ್ಲ ಸ್ವರ್ಗವನ್ನು ಹುಡುಕಿಕೊಂಡು ಹೋಗುವುದು ಇವು ಯಾವುದಕ್ಕಾಗಿಯೂ ಅಲ್ಲ. ಬದಲಾಗಿ ಅಲ್ಲಿ ಅಪ್ಸರೆಯರಿದ್ದಾರೆ ಎಂಬ ಕಾರಣಕ್ಕಾಗಿ! ಬ್ರಹ್ಮನ ಸಾಮಾಜಿಕ ನಾಯ ಹಳಿತಪ್ಪಿದ್ದೇ ಇಲ್ಲಿ. ಇಂಥ ಎಲ್ಲಾ ಅಪ್ಸರೆಯರನ್ನು ಸ್ವರ್ಗದಲ್ಲೇ ಇಟ್ಟು ಬಿಟ್ಟನು. ಉಳಿದ ಲೋಕಗಳಿಗೂ ಒಂದಷ್ಟು ಅಪ್ಸರೆ ರನ್ನು ಅವನು ಹಂಚಿದ್ದಿದ್ದರೆ, ಯಾರು ಯಾರ ಮೇಲೆಯೂ ಕತ್ತಿ ಮಸಿಯುತ್ತಿರಲಿಲ್ಲ ಬದಲಾಗಿ ಅವರವರಲ್ಲೇ ಅವರವರೆ ಬಡೆದಾಡಿಕೊಳ್ಳುತ್ತಿದ್ದರು. ಒಂದು ಸ್ವರ್ಗ ಲೋಕವೇ ಯಾಕೆ ಯಾವ ಲೋಕದಲ್ಲಾದರೂ ಸರಿಯೇ ದಾನವ, ಮಾನವ, ದೇವಾದಿಗಳು ಕೂಡ ಹೆಣ್ಣಿನ ಸೌಂದರ್ಯದ ಮುಂದೆ ಶರಣು ಶರಣಾರ್ಥಿ ಎಂದವರೇ, ತನು, ಮನ, ಧನಗಳನ್ನು ಅರ್ಪಿಸಿದವರೇ. ಲೋಕ ಅದ್ಯಾವದೇ ಆಗಿರಲಿ ಒಂದು ಪುರುಷ ಮತ್ತು ಸ್ತ್ರೀ ಸಮಾಗಮ ಅದೊಂದು ಅವರಿಬ್ಬರ ರಸರಮ್ಯ ಲೋಕ. ಅವರ ಆ ಕಾಮಕೇಳಿಗೆ ಇರಲೇಬೇಕು ಪ್ರಕೃತಿಯ ಸಹಕಾರ. ಅಲ್ಲಿ ಅರಳಿ ನಗಲೇ ಬೇಕು ಹೂಗಳ ಮಮಕಾರ.

ಹೀಗೆ ಒಂದು ದಿನ, ಸುಂದರ ರಸ ರಮ್ಯಮಯ ಕ್ಷಣಗಳನ್ನು ಕಳೆಯಲೆಂದೆ ಒಂದು ಪುರುಷ ಮತ್ತು ಸ್ತ್ರೀ ಕಾನೂನನದೊಳಗೆ ಪ್ರವೇಶಿಸಿದರು. ಕಣ್ಣಾಡಿಸಿ ಸುತ್ತಲೂ ನೋಡಲು ಕಾಮಕೇಳಿಗೆ ಹೇಳಿ ಮಾಡಿಸಿದಂತಿತ್ತು ಅಲ್ಲಿನ ಸ್ವರ್ಗ ಸೀಮೆ. ಇಂಪಾದ ಇಂಚರ ಮರದ ಮೇಲೆ, ಉದರಿದ ಹಸಿರಿನ ಎಲೆಗಳ ಹೊದಿಕೆ ನೆಲದ ಮೇಲೆ...
ಎದುರಾಗಿದ್ದ ಸಣ್ಣ ಗಿಡದೊಂದರಲ್ಲಿ ನಶೆ ಏರಿಸುವಂತೆ
ಬಿರುದು ನಗುತ್ತಿದ್ದ ಹೂವಿನ ಘಮಲು...

ಹೆಣ್ಣೆಂದರೆ ಸುಮ್ಮನೆನೇ?! ಅವಳನ್ನು ಒಲಿಸಿಕೊಳ್ಳುವ ಪರಿ ಇದಿಯಲ್ಲ ನಿಸ್ಸಂದೇಹವಾಗಿ ಅದು ಪುರುಷಪ್ರಧಾನವಾದ ಕಲೆ. ಹೆಣ್ಣು ಸೌಂದರ್ಯದಿಂದ ಪುರುಷನನ್ನು ಕೆಣಕಬಹುದು, ಹಠದಿಂದ ಸಾಧಿಸಿಕೋಬಹುದು. ಆದರೆ ಒಲಿಸಿಕೊಳ್ಳಲು ವಿದ್ಯೆ ಕಲಿತಿರುವುದು ಮಾತ್ರ ಪುರುಷ ಸಮಾಜಕ್ಕೆ ಮೀಸಲು. 
ಒಲಿದು ಬಂದ ಜೀವವನ್ನು ಓಲೈಸಿದರೆ ಪ್ರೀತಿಯು ಅಮೃತವನ್ನು ಸುರಿಸದೇ ಇರುವುದೇ?

ಆಲಿಂಗನದ ಆನಂದದಲ್ಲಿ ಅವಳ ಸೌಂದರ್ಯದ ದಿವ್ಯ ಸಾನಿಧ್ಯದಲ್ಲಿ ಹೃದಯ ತೆರೆದ ಪುರುಷನು "ಬ್ರಹ್ಮನ ಎಲ್ಲಾ ಸೃಷ್ಟಿಗಳ ಪೈಕಿ ಸೌಂದರ್ಯವೆಂದರೆ ಅದು ಹೆಣ್ಣು! 
ಸುರಪಾನ ಮಾಡದ ಪುರುಷರು ಸಿಗಬಹುದು ಆದರೆ ಹೆಣ್ಣಿನ ಅಂದದಲ್ಲಿ ಅಭಿಮಾನ ಭಂಗವಾಗದ ದೇವರು ಕೂಡ ಸಿಗಲಾರ. ಸುಂದರವಾದ ಇಡೀ ಪ್ರಕೃತಿಯನ್ನೇ ಒಂದು ಭಾಗವಾಗಿಸಿ, ಹೆಣ್ಣನ್ನು ಮತ್ತೊಂದು ಭಾಗವಾಗಿಸಿ ನೋಡಿದಾಗ ಇಬ್ಬರಲ್ಲಿ ತುಸು ಭಾರ ಹೆಣ್ಣಿನದೇ. ಜಗದೊಳಗೆ ನಿಜವಾದ ಸೌಂದರ್ಯವತಿ ಎಂದರೆ ಅದು ಹೆಣ್ಣು!" ಎಂದನವನು. ಆ ಮಾತುಗಳಿಗೆ ಅವಳ ಸೌಂದರ್ಯವೂ ಕೂಡ ಹಿಗ್ಗಿ ಹಿಗ್ಗಿ ಹಿರಿದಾದಾಗ ಕೆರಳಿದ ಕಾನನವೇ ಕುಬ್ಜವಾಯಿತು.

"ಎಂತಹ ಮಾತು...ಇಡೀ ಪ್ರಕೃತಿಗೆ ಅಪಮಾನವಿದು..!"

ಹರಿಯುವ ನದಿಯು ಹಾಗೆ ನಿಂತು ಹೋಯ್ತು, ಬೀಸುವ ತಂಗಾಳಿ ಮೌನವಾಯಿತು, ಮರ-ಗಿಡಗಳಲ್ಲಿನ ಎಲೆ ಎಲೆಯೂ ಕೆಂಬಣ್ಣವಾಯಿತು. ಹೂಗಳ ಅಂದವೆಲ್ಲ ಸೊರಗಿ ಹೋಯಿತು.ಭೂಮಿಗೆ ಗರ ಬಡಿಯಿತು, ಪ್ರಕೃತಿ ಪುರುಷನು ನಿರುತ್ತರನಾದನು. ಯಾರಿಗೆ ಹೇಗೆ ಪ್ರತಿಕ್ರಿಸಬೇಕೆಂದು ತೋಚದಾಯಿತು. ಕೊನೆಗೂ ಅವರೆದುರಿಗಿದ್ದ ಆ ಸಣ್ಣ ಗಿಡವೇ ಮೌನ ಮುರಿದು, ತನ್ನ ಸೌಂದರ್ಯ ನಿಧಿಯಾದ ಹೂವಿಗೆ "ನೋಡಿದಿಯಾ ಚಂದುಳ್ಳಿ ಚೆಲುವೆ, ಹೆಣ್ಣೇ ತುಸು ಅಂದದಲ್ಲಿ ಪ್ರಕೃತಿಗೆಂತ ಹೆಚ್ಚಂತೆ. ಹ...ಹ... ಸೃಷ್ಟಿಕರ್ತನಾದ ಬ್ರಹ್ಮದೇವನು ಸ್ವಾರ್ಥವನ್ನು ಎಲ್ಲಿ ಇಡುವುದೆಂದು ಯೋಚಿಸಿದಾಗ ಕಂಡಿದ್ದು ಈ ಪುರುಷರು. ಅದಕ್ಕೆ ಇವರು ತಮ್ಮ ಬಯಕೆಯನ್ನು ಪೂರೈಸುವ ಪ್ರೇಯಸಿಯನ್ನು ಅವಳಿಗಿಂತ ಸೌಂದರ್ಯವತಿಯೇ ಇಲ್ಲವೆಂದು ಅವಳಂದವನ್ನು ಹೊಗಳಿಕೆ ಹೊನ್ನ ಶೂಲಕ್ಕೇರಿಸಿ ತಮ್ಮಗಳ ಕಾರ್ಯ ಸಾಧನೆ ಮಾಡಿಕೊಂಡು ಬಿಡುವರು. ಆದರೆ ಪ್ರಕೃತಿ ಸಹಕರಿಸದೆ ಹೋದರೆ ಆ ಹೆಣ್ಣಿಗೂ ಆಸಕ್ತಿ ವೃದ್ಧಿಸದು, ಅವನ ಬಯಕೆ ತೀರದು. ಆದಾಗ್ಯೂ, ಸುಳ್ಳನ್ನೇ ಸತ್ಯವೆಂದು ನಂಬುವ ಸ್ತ್ರೀಯರಿಗೆ, ಪದೇ ಪದೇ ನೀನೇ ಸೌಂದರ್ಯವತಿ ಎಂದು ನಂಬಲರ್ಹವಲ್ಲದ ಮಾತುಗಳನ್ನೇಳಿ ಅವರನ್ನು ನಂಬಿಸುತ್ತಾರೆ. ಜಗದೊಳಗೆ ನಿಜವಾದ ಸೌಂದರ್ಯ ಎಲ್ಲಡಗಿದೆ? ಜಗದೊಳಗೆ ನಿಜವಾದ ಸೌಂದರ್ಯವತಿ ಯಾರೆಂದು ಈ ಮೂಢಮತಿ ಮಹಿಳೆಯರಿಗೆ ತಿಳಿ ಹೇಳುವವರ್ಯಾರು? ಸುಳ್ಳಿನ ಸಂಸಾರವೇ ಹೆಣ್ಣಿನ ಸೌಂದರ್ಯ, ಏನನ್ನುವೆ ನನ್ನ ಚೆಲುವೆ(ಹೂವೆ)?" ಎಂದಾಗ ಇಡೀ ಪ್ರಕೃತಿಯೇ ಜೋರಾಗಿ ಕೇಕೆ ಹಾಕಿ ನಕ್ಕಿತು.

ಹೆಣ್ಣು ಯಾವುದನ್ನಾದರೂ ಸಹಿಸಿಕೊಳ್ಳುತ್ತಾಳೆ ಆದರೆ ನೀನು ಸೌಂದರ್ಯವತಿಯಲ್ಲ ಅಂದರೆ ಅದನ್ನು ಮಾತ್ರ ಅವಳು ಸಹಿಸಿಕೊಳ್ಳಲಾರಳು. ಅವಳ ಕಣ್ಣುಗಳು ಕೆಂಪಾಯಿತು, ಬಾಹುಬಂಧನದಲ್ಲಿದ್ದ ಪುರುಷನನ್ನು ಪಕ್ಕಕ್ಕೆ ಸರಿಸಿದವಳೇ "ಏನು... ಜಗದೊಳಗೆ ಸೌಂದರ್ಯ ಸ್ತ್ರೀಯರ ಆಸ್ತಿಯಲ್ಲವೇ? ಪುರುಷರು ಕೇವಲ ನಮ್ಮನ್ನು ಒಲಿಸಿಕೊಳ್ಳಲು ನೀವೇ ಸೌಂದರ್ಯವತಿಯರು ಅಂತ ಹೊಗಳುತ್ತಾರೆಯೇ?" ಎಂದು ಆ ಗಿಡಕ್ಕೆ ನೇರವಾಗಿಯೇ ಪ್ರಶ್ನೆ ಮಾಡಿದಳು

ಅದಕ್ಕೆ ಆ ಗಿಡ "ನಿಸ್ಸಂದೇಹವಾಗಿ ಇದರಲ್ಲಿ ಯಾವ ಅನುಮಾನವೂ ಇಲ್ಲ...ನಿನಗಿಂತ ಸೌಂದರ್ಯವತಿ ಈ ಜಗತ್ತಿನಲ್ಲಿ ಮತ್ತೊಬ್ಬಳು ಇದ್ದಾಳೆ" ಎಂದು ಉತ್ತರಿಸಿತು.

"ಯಾರು ಆ ನನ್ನ ಸವತಿ...?" ಕಣ್ಣುಗಳನ್ನು ಕೆಂಪಾಗಿಸಿ ಕೇಳಿದಳು ಹೆಣ್ಣು...

"ಇಡಿ ಪ್ರಕೃತಿಗೆ ಕಳಶಪ್ರಾಯವಿಟ್ಟನಂತೆ, ಪ್ರಣಯಕ್ಕೆ ಸುರಪಾನ ಅದ್ದಿದಂತೆ, ರಸಿಕನ ಕಾವ್ಯದ ಕಣ್ಣಾಗಿ, ಜಗದೊಳಗಿನ ಸೌಂದರ್ಯದ ನಿಧಿಯಾಗಿ ಅರಳಿ ನಗುತ್ತಿರುವ ಹೂವು, ಅವಳೇ ಈ ಜಗದೊಳಗೆ ಚಂದುಳ್ಳಿ ಚೆಲುವೆ. ಅವಳೇ ಈ ಪ್ರಕೃತಿಗೆ ಒಡವೆ" ಅಂದದ್ದೆ ತಡ ವಿರಹದಲ್ಲಿ ಬೆಂದಿದ್ದ ಹೂಗಳೆಲ್ಲ ಅರಳಿ ನಳನಳಿಸಿದವು. 
ಪ್ರಕೃತಿಗೆ ಕಳೆದು ಹೋಗಿದ್ದ ಸೌಂದರ್ಯ ಮರಳಿ ಬಂತು, 
ನದಿ, ತೊರೆ, ಜಲ, ಭೂಮಿ, ಗಿಡ, ಕಾಡು ಯೌವ್ವನದ ಹೊಳೆಯೊಳಗೆ ಬಿದ್ದರು. ವಿಷದಾಗ್ನಿಯಲ್ಲಿ ಬೆಂದ ಹೆಣ್ಣು ಎದ್ದು ನಿಂತಳು.

ಮುಂದುವರಿದು "ಹೂಗಳಿಂದಲೇ ಪ್ರಕೃತಿಗೊಂದು ಅಂದ, ಅದನ್ನು ನೋಡಿ ಆನಂದಿಸುವ ಪ್ರತಿ ಕಣ್ಣಿಗೂ ಆನಂದ" ಎಂದಾಗ ಇಡೀ ಪ್ರಕೃತಿಯೇ ಹೌದೆಂದಿತು.

"ಇದು ಅಸಂಭವ ನನಗಿಂತ ಸೌಂದರ್ಯವತಿ ಈ ಜಗದೊಳಗೆ ಯಾರು ಇಲ್ಲ. ಸೃಷ್ಟಿಕರ್ತನಾದ ಬ್ರಹ್ಮನು ನನ್ನಲ್ಲಿ ಸೌಂದರ್ಯದ ವಿಶೇಷತೆಯನ್ನು ಸೃಷ್ಟಿಸಿದ್ದಾನೆ. ಅದರಿಂದಲೇ ಪುರುಷನು ನನ್ನಲ್ಲಿ ಅನುರಕ್ತನಾಗುತ್ತಾನೆ. ಅಂತಹ ಅನುರಕ್ತತೆಯ ಭಾವ ಹೂವಲ್ಲಿ ಎಲ್ಲಿದೆ?" ಎಂದು ಹೆಣ್ಣು ಆ ಇಡೀ ಪ್ರಕೃತಿಯನ್ನೇ ಪ್ರಶ್ನೆ ಮಾಡಿತು

ಆಗ ಮಾತಿಗಿಳಿದ ಕಾನನವು "ನಿನ್ನನ್ನು ಒಲಿಸಿಕೊಳ್ಳಲು ಪುರುಷನು ನಿನ್ನನ್ನ ಏನೆಂದು ಪೊಗಳವನು?" ಎಂದು ಕೇಳಿತು.

"ಎನಗಿಂತ ಸೌಂದರ್ಯವತಿ ಇಲ್ಲ!" ಎನ್ನುವನು, ಎಂದು ಹೆಣ್ಣು ಬದಲು ಕೊಟ್ಟಿತು.

"ಸರಿ ನೀನು (ಹೆಣ್ಣು) ಸೌಂದರ್ಯವತಿ ಅಂತಲೇ ಒಂದು ಕ್ಷಣಕ್ಕೆ ಭಾವಿಸೋಣ. ನಿನ್ನ ಸೌಂದರ್ಯದ ಮೂಲ ಸೆಲೆ ಯಾವುದರಲ್ಲಿದೆ? ಕಣ್ಣಲ್ಲಿ ತಾನೆ? ಆ ಕಣ್ಣಿಂದ ತಾನೇ ಪುರುಷನು ನಿನ್ನನ್ನು ನೋಡುವುದು, ಆಕರ್ಷಣೆಗೆ ಒಳಗಾಗುವುದು ಎಲ್ಲವೂ..."

"ಹೌದು ನಿಸ್ಸಂದೇಹವಾಗಿ ಕಣ್ಣುಗಳು ಸೌಂದರ್ಯವತಿಯ ಆಭರಣವಿದ್ದಂತೆ!"

"ಅಂತಹ ಕಣ್ಣನ್ನು ಪುರುಷನು ಯಾಕೆ ಅರಳಿದ ತಾವರೆಗೆ ಹೋಲಿಸುತ್ತಾನೆ? ಅಲ್ಲಿಗೆ ಹೆಣ್ಣಿನ ಕಣ್ಣಿಗಿಂತ ತಾವರೆ ಸೌಂದರ್ಯವತಿಯಂತಲ್ಲವೇ? ನಿಜವಾದ ಸೌಂದರ್ಯ ಹೆಣ್ಣಿಗಿಂತ ಹೂವಿನಲ್ಲಿದೆ ಅಂತಲ್ಲವೇ?" ಎಂತು ಕಾನನವು

ಉತ್ತರಿಸಲಾಗದ ಸಂಧಿಗ್ಧತೆಗೆ ಹೆಣ್ಣು ಒಳಗಾದಳು.

ಪುರುಷನೆಂದರೆ ಸುಮ್ಮನೆ? "ಹೂವು ಅದಷ್ಟೇ ಸುಂದರವಾಗಿದ್ದರೂ ಅದೊಂದು ಗಿಡ ಅಥವಾ ಮರಕ್ಕೆ ಅಂಟಿಕೊಂಡಿರುತ್ತದೆ. ಅದೇ ಹೆಣ್ಣು ಪ್ರಕೃತಿಯ ತುಂಬೆಲ್ಲ ಓಡಾಡಿ ಪುರುಷನಿಗೆ ಕೊಡುವಷ್ಟೇ ಸಂತಸವನ್ನು ಇಡೀ ಪ್ರಕೃತಿಗೂ ಹಂಚುತ್ತದೆ. ಹೆಣ್ಣನ್ನು ನೋಡಿಯೇ ನವಿಲು ನಾಟ್ಯ ಕಲ್ತಿದ್ದು. ಹೆಣ್ಣಿನಿಂದಲೇ ಹೂವಿಗೆ ಲಜ್ಜೆಯ ಅರ್ಥ ತಿಳಿದಿದ್ದು. ಹೆಣ್ಣಿನಿಂದಲೇ ಅವಳ ಅಲಂಕಾರದಿಂದಲೇ
ಪ್ರಕೃತಿಗೂ ಈ ಕಾನನಕ್ಕೂ ಸೌಂದರ್ಯದ ಅರ್ಥ ತಿಳಿದಿದ್ದು"ಎಂದೇಳಿ ಹೆಣ್ಣಿನ ಪರವಾಗಿ ನಿಂತನು.

ಆದರೂ ವಿಷಯ ಅಲ್ಲಿ ಇತ್ಯರ್ಥವಾಗಲಿಲ್ಲ...ಜಗದೊಳು ಸೌಂದರ್ಯವತಿ ಹೆಣ್ಣೋ...? ಹೂವೋ..? ಈ ಪ್ರಶ್ನೆ ಬಹುದೊಡ್ಡದಾಯಿತು..ವಿಷಯ ಎಲ್ಲಾ ಲೋಕಗಳಲ್ಲೂ ವ್ಯಾಪಿಸಿತು. ದೇವರು, ದಾನವರು, ಮಾನವರು, ನಾಗರು, ಯಕ್ಷ-ಗಂಧರ್ವರು ಹೀಗೆ ಎಲ್ಲಾ ಸಮಾಜಗಳು ಒಂದಾದವು. ಎಲ್ಲರೂ ಕೂಡ ತಮ್ಮ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಸ್ತ್ರೀಯ ಪರವಾಗಿ ಧ್ವನಿ ಎತ್ತಿ ನಿಂತರು. ಇದಕ್ಕೆ ಪ್ರತಿಯಾಗಿ ನಾವೇನು ಕಮ್ಮಿ ಅಂತ ಪ್ರಕೃತಿಗಳೆಲ್ಲ ಸಂಘಟಿತವಾಗಿ 'ಹೂವು ಜಗತ್ತಿನ ಚೆಲುವು' ಅಂತ ಘೋಷಿಸಿದವು. ವಿವಾದವು
ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಲ್ಲರೂ ಒಟ್ಟುಗೂಡಿ ಸೃಷ್ಟಿ ಕರ್ತನಾದ ಬ್ರಹ್ಮನ ಬಳಿಗೆ ಸಾಗಿದರು.

"ಈಗ ಇತ್ಯರ್ಥವಾಗಬೇಕಾದದ್ದು; ಜಗದೊಳು ಸೌಂದರ್ಯವತಿ ಹೆಣ್ಣೋ...? ಹೂವೋ..?" ಎಂಬದನ್ನು ಬ್ರಹ್ಮನ ಮುಂದಿಟ್ಟರು.

ನ್ಯಾಯಾಧೀಶನ ಸ್ಥಾನದಲ್ಲಿ ಕುಳಿತಿದ್ದ ಬ್ರಹ್ಮನು ಒಮ್ಮೆ ಹೆಣ್ಣಿನ ಕಡೆಗೆ ನೋಡಿದ, "ಹೌದು, ಈಕೆಯೇ ಸೌಂದರ್ಯವತಿ..."ಎಂದು ನಿಶ್ಚಯಿಸಿಕೊಂಡು ಹೂವಿನ ಕಡೆಗೆ ನೋಡಿದ, "ಅಬ್ಬಾ! ಎಂತಹ ಚೆಲುವು, ನಿಜಕ್ಕೂ ಇವಳೇ ಸುಂದರಿ..."ಅಂದುಕೊಂಡು ಅವರಿಬ್ಬರ ಅಂದವನ್ನು ಸೌಂದರ್ಯದ ತಕ್ಕಡಿಗೆ ಹಾಕಿ ನೋಡಿದ. ಇಬ್ಬರಿಗೂ ಸರಿ ಸಮಾನವಾದ ಅಂಕಗಳು. ಬ್ರಹ್ಮನಿಗೂ ಬ್ರಹ್ಮ ಚಿಂತೆ (ದೊಡ್ಡ ಚಿಂತೆ)ಮೊದಲಾಯಿತು...ಸಾಕಷ್ಟು ಸಮಯ ಇದಕ್ಕಾಗಿ ತೆಗೆದುಕೊಂಡನು. ಕೊನೆಗೂ ಒಂದು ನಿರ್ಣಯಕ್ಕೆ ಬಂದು ಆ ನಿರ್ಣಯವನ್ನು ಸಭೆಯ ಮುಂದಿಟ್ಟನು.

"ಈಗ ಈ ಸಮಸ್ತ ಸೃಷ್ಟಿಯಲ್ಲಿಯೇ ಸೌಂದರ್ಯವತಿ ಹೆಣ್ಣೋ...? ಹೂವೋ..?" ಎಂಬುದು ಇತ್ಯರ್ಥಪಡಿಸುವ ಸಮಯ ಬಂದಾಗಿದೆ. ನಾನು ಸೃಷ್ಟಿ ಮಾಡುವ ಸಮಯಕ್ಕೆ ಸುಖಕ್ಕೆ ಅಲ್ಪಾಯುಷ್ಯವನ್ನು, ದುಃಖಕ್ಕೆ ಧೀರ್ಘಾಯುಷ್ಯವನ್ನು ಕೊಟ್ಟಿದ್ದೆ. ಹಾಗೆಯೇ ಈಗ ಅಂದಕೂ ಆಯುಷ್ಯವನ್ನು ನಿರ್ಧರಿಸುವ ಸಮಯ ಬಂದಿದೆ.ಅಂದ(ಸೌಂದರ್ಯ) ಕ್ಕೆ ಅಲ್ಪಾಯುಷ್ಯನ್ನು, ಕುರೂಪಕ್ಕೆ (ಕುರೂಪಿ)ದೀರ್ಘಾಯುಷ್ಯವನ್ನು ಕರುಣಿಸುತ್ತಿದ್ದೇನೆ. ಯಾರು ಜಗದ ಸೌಂದರ್ಯವತಿಯಾಗಲು ಇಚ್ಚಿಸುತ್ತೀರೋ ಅವರಿಗೆ ಅಲ್ಪಾಯುಷ್ಯವನ್ನು, ಕುರೂಪಿಯಾಗುವವರಿಗೆ ದೀರ್ಘಾಯುಷ್ಯನ್ನು ಪ್ರಸಾಧಿಸುತ್ತಿದ್ದೇನೆ. ಈಗ ನಿಮ್ಮಲ್ಲಿ ಯಾರು ಅಲ್ಪ ಆಯುಷಿ ಆಗಲು ಇಚ್ಚಿಸುತ್ತಾರೋ ಅವರೇ ಜಗದ ಸೌಂದರ್ಯವತಿಯಾಗುತ್ತಾಳೆ. ಈಗ ನಿರ್ಣಯವನ್ನು ನಿಮ್ಮಿಬ್ಬರಿಗೆ ಬಿಟ್ಟಿದ್ದೇನೆ" ಎಂದನು.

ಇತ್ತ ಪ್ರಕೃತಿ ಅತ್ತ ಪುರುಷಪ್ರಪಂಚ ಎರಡು ತಲ್ಲಣಿಸಿತು. ಯಾರು ಕೂಡ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳಲು ಸಿದ್ದರಲಿಲ್ಲ. ಅದು ಅಲ್ಲದೆ, ಆಗ ಸಹಸ್ತ್ರಾರು ವರ್ಷಗಳ ಕಾಲ ಅರಳಿ ನಿಲ್ಲುತ್ತಿದ್ದ ಹೂವು, ಗಂಡ-ಮಕ್ಕಳು- ಸಂಸಾರ ಅಂತ ಸಾಗುತ್ತಿದ್ದ ಹೆಣ್ಣು ಇಬ್ಬರು ಏಕಕಾಲಕ್ಕೆ ಚಿಂತೆಗೆ ಬಿದ್ದರೂ ಸಹ ಇಬ್ಬರೂ ಕೂಡ ಸೌಂದರ್ಯ ವತಿಯ ಪಟ್ಟ ಬಿಟ್ಟುಕೊಡಲು ಸಿದ್ದರಲಿಲ್ಲ. ಹೆಣ್ಣು ಅಲ್ಪಾಯುಷ್ಯದ ಸೌಂದರ್ಯ ವತಿಯ ಪಟ್ಟವನ್ನು ಪಡೆಯಲು ಬಯಸಿದರು, ಅವಳಿಗೊಂದು ಸಂಸಾರಿಕ ಬದ್ಧತೆ ಇತ್ತು. ತಾನು ತನಗಿಂತ ತನ್ನವರಿಗಾಗಿ ಬದುಕಬೇಕಿತ್ತು. ಹೀಗಾಗಿ ಅವಳು 'ತಾನು ಸೌಂದರ್ಯವತಿಯ ಪಟ್ಟ ಅಲಂಕರಿಸಿ ಮೆರೆಯುವುದಕ್ಕಿಂತ ಒಂದು ಹೆಣ್ಣಾಗಿ
ಸಂಸಾರದ ಕಣ್ಣಾಗಿ ಮುನ್ನಡೆಯುವುದೇ ಉತ್ತಮ'ವೆಂದು ಭಾವಿಸಿ "ಅಲ್ಪ ಆಯುಷ್ಯದ ಸೌಂದರ್ಯಕ್ಕಿಂತ ದೀರ್ಘಾಯುಷ್ಯದ ಕುರೂಪವೇ ತನಗಿರಲಿ" ಎಂದು ಬ್ರಹ್ಮನಲ್ಲಿ ಕೇಳಿಕೊಂಡಳು.

'ಇನ್ನೊಂದಡೆ ಅದೆಷ್ಟೇ ಕಾಲ ನಾನು ಅರಳಿ ನಿಂತಿದ್ದರೂ ಹೆಣ್ಣಿನಂತೆ ನನಗೆ ಸಂಸಾರದ ಬಂಧನವಿಲ್ಲ, ಸತ್ತರೂ ಅಳುವವರಿಲ್ಲ. ಹೆಚ್ಚು ಕಾಲ ಬದುಕಿದರೂ ಚಲನೆ ಇಲ್ಲ.
ಹೆಣ್ಣಿಗಾಗಿ ಅನೇಕ ಅಲಂಕಾರಿಕ ಸಾಧನಗಳಿವೆ. ನನಗೇನಿದೆ ಮಣ್ಣು ಮಸಿ. ತನ್ನನ್ನು ಸೌಂದರ್ಯವತಿಯಾಗಿ ಮೆರೆಸುತ್ತಿರುವ ನನ್ನ ಪ್ರಕೃತಿಯ ಋಣ ಸಂದಾಯ ಮಾಡಿಕೊಳ್ಳುವುದಕ್ಕಾದರೂ ನಾನು 
ಅಲ್ಪ ಆಯುಷ್ಯವನ್ನು ಹೊಂದಿಯಾದರು ಸೌಂದರ್ಯ ವತಿಯ ಪಟ್ಟವನ್ನು ಪಡದೇ ತೀರಬೇಕು' ಅಂತ ನಿಶ್ಚಯಿಸಿಕೊಂಡವಳೇ, ಅವಳು 'ಹೆಣ್ಣಿನ ಅಂದಕ್ಕೂ ಸೋಲದ ಪುರುಷನಿರಬಹುದು, ಆದರೆ ಅರಳಿದ ಹೂವಿನ ಚೆಲುವಿಗೆ ಸೋಲದ ಮನಸಿರುವುದೇ? ಪ್ರಕೃತಿಗೆ ಸೌಂದರ್ಯದ ಅಂದ ಕೊಡುವ ನಾನು ಬಹುಕಾಲ ಹೀಗೆ ಬದುಕುವುದಕ್ಕಿಂತ ಹೀಗೆ ಅರಳಿ ಹಾಗೆ ಕಣ್ಮರೆಯಾದರೆ ಆ ಆನಂದವೇ ದೊಡ್ಡದು ಎಂದು ಭಾವಿಸಿ "ನಾನು "
ಅಲ್ಪ ಆಯುಷ್ಯವನ್ನು ಹೊಂದಿ ಸಾಯಲು ಸಿದ್ದಲಿದ್ದೇನೆ ಆದರೆ ಸೌಂದರ್ಯವತಿಯ ಪಟ್ಟ ನನಗೆ ಬೇಕು" ಎಂದು ಬ್ರಹ್ಮನಲ್ಲಿ ಕೇಳಿಕೊಂಡಿತು.


ಇಬ್ಬರ ಮಾತುಗಳನ್ನು ಆಲಿಸಿದ ಬ್ರಹ್ಮನು, ಕೊನೆಗೆ "ನೀವಿಬ್ಬರೂ ನಿಜವಾದ ಅರ್ಥದಲ್ಲಿ ಸೌಂದರ್ಯ ವತಿಯರೇ. ಇಬ್ಬರಲ್ಲಿ ಯಾರು ಹೆಚ್ಚು ಅಲ್ಲ ಯಾರು ಕಡಿಮೆಯೂ ಅಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ನಿಮ್ಮ ನಿಮ್ಮ ಆಲೋಚನೆಗಳಲ್ಲಿ ನಿಜವಾದ ಸೌಂದರ್ಯವನ್ನು ಅನಾವರಣಗೊಳಿಸಿದ್ದೀರಿ.ಸೌಂದರ್ಯ ಅನ್ನೋದು ಕೇವಲ ಚಿತ್ತ ಆಕರ್ಷಣೆಯಲ್ಲ, ವ್ಯಕ್ತಿತ್ವದಲ್ಲಿ ಅಡಿಗಿರುವಂತಹ ತ್ಯಾಗದ ಮನೋಭಾವ. ಹೆಣ್ಣು ತನ್ನ ಸಂಸಾರಕ್ಕಾಗಿ ತನ್ನ ಸೌಂದರ್ಯ ವತಿಯ ಪಟ್ಟವನ್ನು ತ್ಯಾಗ ಮಾಡಿದರೆ, ಪ್ರಕೃತಿಯನ್ನೇ ಉದ್ದಿಪನಗೊಳಿಸುವ ತನ್ನ ಅಂದವನ್ನು ಅರಳಿಸಿ, ಸುಂದರವಾದ ನಗೆಯೊಂದನ್ನು ಬೀರಿ ಇರುವಷ್ಟೇ ಸಮಯ ಪ್ರಕೃತಿಗೊಂದು ಅಂದವಿತ್ತು ಹೊರಟು ಹೋಗುವ ಹೂವಿನ ತ್ಯಾಗ ತನ್ನವರಿಗಾಗಿ ತನ್ನನ್ನು ತ್ಯಾಗ ಮಾಡಿಕೊಳ್ಳುವ ಸೌಂದರ್ಯದ ಪರಿ ಕೂಡ ಅಷ್ಟೇ ಅದ್ಭುತ ಮತ್ತು ಅಂದಮಯವಾಗಿದೆ.

ಇನ್ನು ಮುಂದೆ,ಹೂವು ಬದುಕುವುದು ಕೆಲಕಾಲವಾದರೂ ಇರುವಷ್ಟು ಕಾಲ ಅದು ಸೌಂದರ್ಯವತಿಯಾಗಿಯೇ ಉಳಿದು ಉದುರಿ ಹೋಗಲಿ. ಹೆಣ್ಣಿನ ಸೌಂದರ್ಯ ಪ್ರಾಯದಲ್ಲಿ ಪ್ರಕೃತಿಯಷ್ಟು ರಮ್ಯವಾಗಿಯೂಅರಳಿ ಮಧ್ಯ ವಯಸ್ಸಿಗೆ ಅದು ಕಾಲದಷ್ಟು ಬೇಗ ಕರಗಿ ಹೋಗಿ ವೃದ್ಯಾಪ್ಯದಲ್ಲಿ ಅದು ಅಮಾವಾಸ್ಯೆಯ ಕತ್ತಲಿನ ಕಣ್ಣೀರಾಗಲಿ...ಆದರೂ ಬಾಹ್ಯ ಸೌಂದರ್ಯ ಕಳೆದು ಹೋದರು ತನ್ನವರಗಾಗಿ ತಾನು ಮಾಡಿದ ತ್ಯಾಗಕ್ಕಾಗಿ
ಹೆಣ್ಣಿನ ಅಂತರಂಗದ ಸೌಂದರ್ಯ ಬೆಳದಿಂಗಳ ರಾತ್ರಿಯಂತೆ ಧಾರ್ಮಿಕವಾಗಿ ಅವಳಿಡಿ ಕುಟುಂಬವನ್ನೇ ಬೆಳಗಲಿ" ಎಂದು ಜಗದ ಸೌಂದರ್ಯವತಿಯ ಪಟ್ಟವನ್ನು ಇತ್ಯರ್ಥ ಪಡಿಸಿದನು.


ಸೌಂದರ್ಯವೆಂಬುದು ಕರಗಿ ಹೋಗುವ ಹುಣ್ಣಿಮೆ. ಬದುಕೆಂಬುವುದು ಬದಲಾಗುತ್ತಲೇ ಇರುವ ಕಗ್ಗತ್ತಲು. ಬೆಳಕು ಕಂಡಂತೆ ಕಾಣುತ್ತದೆ, ಕತ್ತಲು ಬಂದು ಆವರಿಸಿಕೊಳ್ಳುತ್ತದೆ.ಹೆಣ್ಣೆಂದರೂ ಹೂವೆಂದರೂ ಅಲ್ಪಮತಿಯ ಮಾನವನಿಗೆ ಅದೊಂದು ಬಲು ಪ್ರೀತಿ. 
ಕಥೆ, ಕವಿತೆ, ಕಾದಂಬರಿಗಳಿಗೆ ಅಡಿಪಾಯದ ಅಕ್ಷರಗಳಾಗಿ ಕಾವ್ಯದ ಮಹಲುಗಳನ್ನು ಕಟ್ಟಲು ಇವರನ್ನೇ ಸರಕುಗಳನ್ನಾಗಿ ಬಳಸುತ್ತಿದ್ದಾನೆ. ಹೂವು ಪ್ರಕೃತಿಯ ಅಧೀನ ಆದರೂ ಕೂಡ ದುಶ್ಯಾಸನನು ದ್ರೌಪದಿಯ ಸೀರೆ ಎಳೆದಂತೆ ಸ್ವಾರ್ಥಿ ಮನುಷ್ಯ ಕೈಗೆಟಗಿದರೆ ಇದನ್ನು ಬದುಕಲು ಬಿಡಲಾರನು. ಅಷ್ಟೇ ಯಾಕೆ, ಹೆಣ್ಣಿಗೆ ಸ್ವಾರ್ಥವಿರಲಿಲ್ಲ ಬ್ರಹ್ಮನು ಕೊಟ್ಟಿದ್ದನ್ನು ಸ್ವೀಕರಿಸಿದಳು ಆದರೆ ಸ್ವಾರ್ಥಿಯಾದ ಪುರುಷನು ಬ್ರಹ್ಮನಲ್ಲಿ "ಹೆಣ್ಣಿನಲ್ಲಿ ಅಂದವಿಲ್ಲವೆಂದರೆ ಚಿತ್ತಕ್ಕೆ ಆಕರ್ಷಣೆ ಹತ್ತುವುದಿಲ್ಲ. ಮನಸ್ಸು ರೋಮಾಂಚನಗೊಳ್ಳುವುದಿಲ್ಲ. ಏನಾದರೂ ಮಾಡಿ ಅವಳಿಗೆ ಕುರೂಪಿ ಪಟ್ಟದಿಂದ ವಿಮುಕ್ತಿಗೊಳಿಸಿ"ಎಂದು ಬೇಡಿಕೊಂಡನು. ಇದು ಯಾವುದೋ ಒಂದು ಪುರುಷನ ಬೇಡಿಕೆಯಾಗಿರಲಿಲ್ಲ ಎಲ್ಲ ಸಮಾಜದ ಪುರುಷರುಗಳ ಸರ್ವಾನುಮತದ ತೀರ್ಮಾನವಾಗಿತ್ತು.

ಬ್ರಹ್ಮನು ಕೂಡ ಎಷ್ಟಾದರೂ ಪುರುಷನೇ ಅಲ್ಲವೇ! ಪುರುಷ ಪ್ರಪಂಚವನ್ನು ಸಮಾಧಾನಗೊಳಿಸಲೇಬೇಕು ತಾನೆ? ಹಾಗಂತ ವಿಧಿ ಲಿಖಿತವನ್ನು ಬದಲಾಯಿಸಲು ಸಾಧ್ಯವೇ?

"ಸೌಂದರ್ಯ ಎಂಬ ಪದವೇ ಅಲ್ಪ ಆಯುಷ್ಯನಿಂದ ಕೂಡಿದೆ. ದೀರ್ಘಾಯುಷ್ಯವನ್ನು ಹೊಂದಿರುವ ಮಹಿಳೆಗೆ ಈಗ ಅಲ್ಪ ಆಯುಷ್ಯನ ಸೌಂದರ್ಯವನ್ನು ಆಕೆ ಜೀವನ ಪರಿಯಂತ ಅನುಭವಿಸುತ್ತಲೇ ಇರಲಿ, ಅದಕ್ಕಾಗಿ ಒಂದು ಸೌಂದರ್ಯ ವರ್ಧಕಗಳನ್ನು ಸೃಷ್ಟಿಸುತ್ತೇನೆ. ಅದು ಅವಳಿಗೆ ಅಂದವನ್ನು ಕೊಟ್ಟು ಸೌಂದರ್ಯವನ್ನು ತುಂಬುತ್ತದೆ. ಆ ಸೌಂದರ್ಯವರ್ಧಕಗಳ ಕಾಂತಿಯಲ್ಲಿ ಅವಳು ಸುರ ಸುಂದರಿಯಂತೆ ಮಿಂಚುತ್ತಾಳೆ.ಇಂದು ಹೆಣ್ಣು ತ್ಯಾಗ ಮಾಡಿ ದೀರ್ಘಾಯುಷ್ಯವನ್ನು ಪಡೆದಿದ್ದಾಳೆ ಮುಂದೆ ಹೆಣ್ಣು ತನ್ನ ಆಯುಷ್ಯವನ್ನೆಲ್ಲ ಹಿಂದೆ ತ್ಯಾಗ ಮಾಡಿದ ಸೌಂದರ್ಯಕ್ಕಾಗಿಯೇ ಮೀಸಲಿಡುತ್ತಾಳೆ"
ಎಂದೇಳಿ ಪುರುಷ ಸಮಾಜಕ್ಕೂ ಸಮಾಧಾನ ಪಡಿಸಿದನು.

ಹೀಗಾಗಿಯೇ, ಇವತ್ತು ಮಹಿಳೆಯರ ಸೌಂದರ್ಯಕ್ಕಾಗಿ ಕ್ರೀಮ್‌ಗಳು, ಲೋಶನ್‌ಗಳು, ಪೌಡರ್‌ಗಳು, ಪರ್ಫ್ಯೂಮ್‌ಗಳು, ಲಿಪ್‌ಸ್ಟಿಕ್‌ಗಳು, ಬೆರಳು ಉಗುರುಗಳ ಮತ್ತು ಕಾಲ್ಬೆರಳ ಉಗುರು ಬಣ್ಣ, ಕಣ್ಣು ಮತ್ತು ಮುಖದ ಮೇಕಪ್, ಶಾಶ್ವತ ವೇವ್ಸ್, ಬಣ್ಣದ ಕಾಂಟ್ಯಾಕ್ಟ್ ಲೆನ್ಸ್‌ಗಳು, ಕೂದಲು ಬಣ್ಣಗಳು, ಕೂದಲು ಸ್ಪ್ರೇಗಳು ಮತ್ತು ಜೆಲ್‌ಗಳು, ಡಿಯೊಡ್ರಂಟ್‌ಗಳು ಅಬ್ಬಬ್ಬಾ ಹೇಳ್ತಾ ಇದ್ರೆ ಹನುಮಂತನ ಬಾಲದಂತೆ ಬೆಳಿತಾನೆ ಇರುತ್ತೆ ಮಹಿಳೆಯರ ಸೌಂದರ್ಯ ವರ್ಧಕಗಳು. ಹಿಂದಿನ ಮಹಿಳೆಯ ತ್ಯಾಗಕ್ಕೆ ಇಂದಿನ ಮಹಿಳೆಯರು ಸೌಂದರ್ಯವತಿಯರಾಗಲು ಸೌಂದರ್ಯವರ್ಧಕಗಳಿಗೆ ಶರಣಾಗಿದ್ದಾರೆ.

-ರವೀಂದ್ರ ಕೊಟಕಿ

 

 

Category:Literature



ProfileImg

Written by Ravindra kotaki

0 Followers

0 Following