Do you have a passion for writing?Join Ayra as a Writertoday and start earning.

"ಮಹಾ ಶಿವರಾತ್ರಿ" ಆಚರಣೆಯ ಹಿನ್ನಲೆ ಮತ್ತು ಮಹತ್ವ

ProfileImg
07 Mar '24
4 min read


image

ಎಡವಿದರೆ ಮುಡಿ 
ಶಿವನ ಪಾದದಡಿ ಇರಲಿ 
ತೊದಲಿದರೆ ನಾಲಿಗೆಗೆ 
ಶಿವನಾಮ ಬರಲಿ ..!!
ಮಿಡಿಯಲೆನ್ನಯ ಹೃದಯ 
ಶಿವ ಪದದ ಲಯಕೆ 
ತೂಗಲೆನ್ನೆಯ ಶಿರ 
ಶಿವ ಜಪದ ತಾಳಕೆ ..!!
ಭಾರತ ಸಾಂಸ್ಕೃತಿಕ ರಾಷ್ಟ್ರ !ಇಲ್ಲಿಯ ಮಣ್ಣಿನ  ಮೂಲ  ಧರ್ಮ "ಹಿಂದೂಧರ್ಮ"!ಈ ನಮ್ಮ ಸನಾತನ ಹಿಂದೂಧರ್ಮ ತನ್ನದೇ ವ್ಯಶಿಷ್ಟ್ಯ ಸಂಸ್ಕೃತಿ ಆಚಾರ ವಿಚಾರ ಪದ್ದತಿ ಆಚರಣೆಗಳಿಂದ ವಿಶ್ವ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ, ಪ್ರಪಂಚದಾದ್ಯಂತ ಬೇರೆ ಬೇರೆ ರಾಷ್ಟ್ರಗಳನ್ನು ನೋಡಿದಾಗ ಬೇರೆ ಯಾವ ರಾಷ್ಟ್ರಗಳು ಆಚರಿಸದಷ್ಟು ಹಬ್ಬಗಳು ಭಾರತದಲ್ಲಿ ಆಚರಿಸಲ್ಪಡುತ್ತವೆ! ಅಲ್ಲದೆ ಪ್ರತಿ ಹಬ್ಬಗಳೂ ವ್ಯೆಜ್ಞಾನಿಕ ಹಿನ್ನಲೆಯೊಂದಿಗೆ ಒಂದೊಂದು ಉತ್ತಮ ಸಂದೇಶಗಳನ್ನೂ  ಒಳಗೊಂಡಿವೆ.ಹಾಗಾಗಿ ಭಾರತದಲ್ಲಿ ಆಚರಿಸಲ್ಪಡುವ ಪ್ರತಿ ಹಬ್ಬಗಳು, ಸಮಾರಂಭ ದಿನಾಚರಣೆ, ಜಯಂತಿ, ಉತ್ಸವಗಳು ವಿಶೇಷವಾಗಿ ಅಳಿಯದೆ ಅಮರವಾಗಿ ಉಳಿದಿರುವ ಗತ ವ್ಯಕ್ತಿಯ, ಶಕ್ತಿಯ ಹಾಗೂ ಪ್ರಾಚೀನತೆಯ ಪ್ರತೀಕಗಳಾಗಿ ಮಹತ್ವವನ್ನು ಪಡೆದುಕೊಂಡಿರುತ್ತವೆ!
ಹಿಂದೂಗಳ ಪ್ರಮುಖ ಹಬ್ಬಗಳಲ್ಲೊoದಾದ 
"ಮಹಾ ಶಿವರಾತ್ರಿ" ತನ್ನದೇ ಹಿನ್ನಲೆ ಮತ್ತು ಆಚರಣೆಯಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ,ಹೆಸರಲ್ಲೇ ಇರುವಂತೆ ಈ
"ಮಹಾ ಶಿವರಾತ್ರಿ"  "ಓಂಕಾರ" ಪ್ರಿಯ ಶಿವನನ್ನು ಆರಾಧಿಸುವ ಹಬ್ಬವಾಗಿ ಮಹತ್ವವೆನಿಸಿದೆ, ಕೈಲಾಸದೀಶ ಶಿವನಿಗೆ ಅತ್ಯಂತ ಪ್ರಿಯವಾದ ಈ ದಿನದಂದು ಶಿವನನ್ನು ಆರಾಧಿಸುವುದರಿಂದ ಶಿವ ತನ್ನ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಈ ಹಬ್ಬ ಹಲವು ಹಿನ್ನಲೆಗಳನ್ನು ಒಳಗೊಂಡಿದೆ, ಅವುಗಳನ್ನು ತಿಳಿಯೋಣ ಬನ್ನಿ, ಕೈಲಾಸನಾಥನಾದ ಶಿವ ಈ ದಿನದಂದು ಭೂಮಿಗೆ ಆಗಮಿಸಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ.ಹಾಗಾಗಿ ಭಕ್ತಿ,ಭಾವ  ಶುಚಿಯಿಂದ ವಿವಿಧ ಅಭಿಷೇಕಗಳ ಜೊತೆ ಪೂಜೆ ಪುನಸ್ಕಾ ರಗಳೊಂದಿಗೆ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಆಹಾರ ಸೇವಿಸದೇ ಉಪವಾಸ ಕೈಗೊಳ್ಳುತ್ತಾರೆ, ಆದ್ದರಿಂದ ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ  ಮತ್ತು ಪ್ರಾಮುಖ್ಯತೆ ಇದೆ,
ಮಾಘಮಾಸದ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವಿವಾಹವಾದ ಪವಿತ್ರ ದಿವಸವೆಂದೂ  ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ "ಗಿರಿಜಾ ಕಲ್ಯಾಣ" ವೀಕ್ಷಿಸಿ; ಶಿವಪಾರ್ವತಿಯರನ್ನು ಪೂಜಿಸಿದರಂತೆ ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎಂದು "ಶಿವಪುರಾಣ"ದಲ್ಲಿ ಉಲ್ಲೇಖವಿದೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು,ರಾತ್ರಿ ವೇಳೆಯಲ್ಲಿ ಶಿವನು ಪಾರ್ವತಿ ಜೊತೆಯಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲಾ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ,ಆ ಸಮಯದಲ್ಲಿ ಶಿವನನ್ನು ಪೂಜಿಸುವವರ ಪಾಪಗಳು ಪರಿಹಾರವಾಗುತ್ತವೆ ಎಂಬ ಪ್ರತೀತಿಯು ಇದೆ ! ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ಇಟ್ಟುಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನಲ್ಲಿ ಪ್ರಾರ್ಥಿಸಿದ. ಫಲವಾಗಿ ಆತನ ಭಕ್ತಿಗೆ ಮೆಚ್ಚಿ ಶಿವನು ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನಎಂದೂ ಸಹ ಪುರಾಣಗಳು ಹೇಳುತ್ತವೆ, ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು 
ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬ ಪ್ರತೀತಿಯೂ ಇದೆ,! 
ದೇವತೆಗಳು ಮತ್ತು ರಾಕ್ಷಸರ ಜೊತೆಗಿನ ಯುದ್ಧದ ಪರಿಣಾಮ ಸಮುದ್ರ ಮಂಥನದಿಂದ ಹೊರಹೊಮ್ಮಿದ ಹಾಲಾಹಲವನ್ನು;ಜಗತ್ತನ್ನು ವಿಷದಿಂದ ರಕ್ಷಿಸಲು ಶಿವನು ತಾನೇ ಕುಡಿಯುತ್ತಾನೆ, ಅದರ ಪರಿಣಾಮ ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿ ಶಿವನು ನೀಲಕಂಠನೆಂದು ಖ್ಯಾತನಾ ಗುತ್ತಾನೆ. ಹಾಗಾಗಿ ಮಹಾ ಶಿವರಾತ್ರಿಯನ್ನು ಶಿವನು ಜಗತ್ತನ್ನು ವಿನಾಶದಿಂದ ರಕ್ಷಿಸಿದ ದಿನವೆಂದು ಸಹ ಆಚರಿಸಲಾಗುತ್ತದೆ.!
ಶಿವ ಪುರಾಣದಲ್ಲಿ ಶಿವನು ಪ್ರಪಂಚದ ಪಾಪಗಳಿಂದ ಮುಕ್ತಿ ಹೊಂದಲು ದೀರ್ಘ ಮತ್ತು ಕಠಿಣ ಧ್ಯಾನವನ್ನು ಕೈಗೊಂಡ ಫಲವಾಗಿ ಶಿವನಿಗೆ ಜ್ಞಾನೋದಯವಾಗಿ, ಯೋಗಿಯಾಗಿ ಮಹಾಸಿದ್ಧರಲ್ಲಿ ಮೊದಲಿಗನಾಗುತ್ತಾನೆ ಆದ್ದರಿಂದ ಮಹಾ ಶಿವರಾತ್ರಿಯನ್ನು ಶಿವನು ಮೊದಲ ಯೋಗಿಯಾದ ಮತ್ತು ಆಧ್ಯಾತ್ಮಿಕ ಮುಕ್ತಿಯನ್ನು ಪಡೆದ ದಿನವೆಂದು ಆಚರಿಸಲಾಗುತ್ತದೆ ಎಂಬ  ಉಲ್ಲೇಖವೂ ಇದೆ.ಶಿವರಾತ್ರಿಯು ಬೇಸಿಗೆಯ ಸೂಚಕವು ಹೌದು ಜೊತೆಗೆ ಶಿವರಾತ್ರಿ ಹಬ್ಬ ಕಳೆದೊಡನೆ ಪವಾಡವೋ ಎಂಬಂತೆ ಚಳಿಗಾಲದಲ್ಲಿ ಕಳೆಗುಂದಿದ ಭೂಮಿಯ ಫಲವತ್ತತೆಯು ಪುನರುಜ್ಜೀವನಗೊಂಡು ಪ್ರಕೃತಿಯಲ್ಲಿ ವಿಸ್ಮಯವು ಜರುಗಿ ಮರಗಿಡಗಳೆಲ್ಲವೂ ಫಲಪುಷ್ಪಗಳಿಂದ ತುಂಬಿ ತುಳುಕುತ್ತವೆ ಒಟ್ಟಿನಲ್ಲಿ ಫಲವತ್ತತೆಯ ಸಂಕೇತವಾಗಿ ಶಿವಲಿ೦ಗವನ್ನು ಭಾರತ ದೇಶದಾದ್ಯಂತ ವಿವಿಧ ರೀತಿಯಲ್ಲಿ ಆರಾಧಿಸುತ್ತ; "ಮಹಾ ಶಿವರಾತ್ರಿ"ಯನ್ನು ಭಕ್ತಿಯೊಂದಿಗೆ ವಿಜೃಂಭಣೆ, ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ..!!
"ಓಂ"ಕಾರದ ಮಹತ್ವ:
"ಓಂಕಾರ"ವೆಂದರೆ ಅನಂತವಾದ ಒಂದು ಧನಾತ್ಮಕ ಶಕ್ತಿ!
ಓಂಕಾರ, ಭಕ್ತಿ ,ಶಾಂತಿ ಹಾಗೂ ನೆಮ್ಮದಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ"ಓಂಕಾರ"ಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅತೀ ಹೆಚ್ಚು ಮಹತ್ವವನ್ನು ಕೊಡಲಾಗಿದೆ !
ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಸಿಕ್, ಜೈನ, ಬೌದ್ಧ ಧರ್ಮಗಳಲ್ಲಿಯೂ ಓಂಕಾರ ನಾದ ಪವಿತ್ರತೆಯ ಸಂಕೇತವಾಗಿದೆ ಹಿಂದೂಧರ್ಮದಲ್ಲಿ 'ಓಂ' ಉಚ್ಛಾರ ಮಾಡದೇ ಯಾವ ಪೂಜೆಗಳು ಸಂಪೂರ್ಣವಾಗುವುದಿಲ್ಲ,ಅದಕ್ಕೇ ಹಿಂಧೂ ಪುರಾಣಗಳು ಹಾಗೂ ಗ್ರಂಥಗಳಲ್ಲಿ ಓಂಕಾರವನ್ನ"ಮಂತ್ರಗಳ ತಾಯಿ"ಎಂದು ವಿಶ್ಲೇಷಿಸಲಾಗಿದೆ, ಮನಸ್ಸಿನ ಏಕಾಗ್ರತೆಗೆ ಹಾಗೂ ಒತ್ತಡ,ದುಃಖ,ಆತಂಕಗ ಳಿಂದ ಮುಕ್ತಿ ಹೊಂದಲು ಓಂಕಾರ ನಾಮವನ್ನು ಕೇಳಿದರೆ ಸಾಕು ಮನಸ್ಸು ಪುನಶ್ಚೆತನ ಗೊಂಡು ಶಾಂತವಾಗುತ್ತದೆ ಓಂಕಾರ ನಾದದವನ್ನು ಆಸ್ವಾದಿಸಿದವರಿಗಷ್ಟೇ ಗೊತ್ತು ಅದರ ಮಹತ್ವ ಎನ್ನುವುದು ಧ್ಯಾನಪ್ರಿಯರ ಅಭಿಪ್ರಾಯ!
ಶಿವನು ನಾದಪ್ರಿಯ ,ಓಂಕಾರ ಪ್ರಿಯ,!ಪ್ರಪಂಚ ಹುಟ್ಟಿದಾಗ ಓಂಕಾರದ ನಾಧವೆ ಝೆಂಕರಿಸಿದ್ದು ಎಂಬುದು ಹಿಂದೂ ಧರ್ಮದವರ ನಂಬಿಕೆ. ಈ ಶಬ್ದವು ನಮ್ಮ ಅಂತರ್‌ ಜ್ಞಾನಕ್ಕೆ ನೇರವಾಗಿ ಸಂಪರ್ಕಿಸುವ ನಮ್ಮ ಜ್ಞಾನದ ಕಣ್ಣು ಎಂಬ ಉಲ್ಲಿಖವಿದೆ. ಅಂದರೆ  ಜ್ಞಾನದ ಕಣ್ಣನ್ನು ಓಂಕಾರವು ತೆರೆಸುತ್ತದೆ, ಸಂಸ್ಕೃತದಲ್ಲಿ ಪ್ರಣವ ಮಂತ್ರ ಎಂದೂ ಕರೆಯುವ ಈ ಓಂಕಾರವನ್ನು ನಮ್ಮ ಹಿಂಧೂ ಧರ್ಮದಲ್ಲಿ ಸಾರ್ವಭೌಮ ಮಂತ್ರ ಎಂದು ಕರೆಯಲಾಗುತ್ತದೆ.! 
"ಓಂ "ಎನ್ನುವುದು ಕೇವಲ ಒಂದು ಪದವಲ್ಲ 
ಓಂ ಅ,ಉ,ಮ ಎಂಬ ಮೂರು ಅಕ್ಷರಗಳ ಸಂಗಮ.“ಅ’ ಅಂದರೆ ಅಗತ್ಯ, “ಉ’ ಅಂದರೆ ಉದ್ದೇಶ ಹಾಗೂ “ಮ’ ಎಂದರೆ ಮಹತ್ವ ಎಂಬರ್ಥ!'ಓಂ' ಪದವು ಸೃಷ್ಟಿಯ ಆದಿ ಮತ್ತು ಅಂತ್ಯವನ್ನು ಪ್ರತಿಬಿಂಬಿಸುತ್ತದೆ. ಸೃಷ್ಟಿಯ ಆದಿ ಮತ್ತು ಅಂತ್ಯದ ಪ್ರತೀಕ ಶಿವ ಎಂಬುದನ್ನು ಹಿಂದೂ ಪುರಾಣಗಳು, ಗ್ರಂಥಗಳು ಹೇಳುತ್ತವೆ,!ಅಲ್ಲದೆ , ಓಂಕಾರ ಬೀಜಾಕ್ಷರ ಪಠಣೆಯು ಥೈರಾಯಿಡ್, ಹಾಗೂ ಹಲವು ಮಾನಸಿಕ ರೋಗಗಳನ್ನೂ ನಿವಾರಣೆ ಮಾಡುತ್ತದೆ !
"ಬಿಲ್ವಪತ್ರೆಯ ಮಹತ್ವ"
ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ, ತ್ರಿಜನ್ಮ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ’ !
ಎಂಬ ಸ್ತೋತ್ರ ಇದೆ. ಅಂದರೆ ಮೂರು ದಳ, ಮೂರು ಆಕಾರ, ಮೂರು ಕಣ್ಣು ಹಾಗೂ ಮೂರು ಆಯುಧವನ್ನು ಹೊಂದಿರುವ ಒಂದು ಬಿಲ್ವಪತ್ರೆಯನ್ನು ಭಕ್ತಿಯಿಂದ ಈಶ್ವರನಿಗೆ ಸರ್ಮಪಿಸಿದರೆ ಮೂರು ಜನ್ಮದ ಪಾಪವು ಪರಿಹಾರವಾಗುತ್ತದೆ ಎಂಬುದು ಈ ಸ್ತೋತ್ರದ ಅರ್ಥ,ಶಿವ ಬಿಲ್ವಪ್ರಿಯ! ಬಿಲ್ವಪತ್ರೆಯಿಂದ ಶಿವನ್ನನ್ನು ಪೂಜಿಸುವದರಿಂದ ಶಿವ ಬೇಗ ಪ್ರಸನ್ನನಾಗುತ್ತಾನೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ, ಹಾಗಾಗಿ ಶಿವನ ದೇವಾಲಯವಿದ್ದ ಕಡೆ ಸಾಮಾನ್ಯವಾಗಿ ಬಿಲ್ವಪತ್ರೆ ಮರಗಳು ಇದ್ದೇ ಇರುತ್ತವೆ,ಈ ಪವಿತ್ರ "ಬಿಲ್ವಪತ್ರೆ" ಯ ಮೂರು ದಳಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮಹೇಶ್ವರನ್ನು ಪ್ರತಿನಿಧಿಸುತ್ತದೆ,ಜೊತೆಗೆ ಮೂರು ಎಲೆಗಳು ಶಿವನ ಮೂರು ಕಣ್ಣುಗಳನ್ನು ಸಂಕೇತಿಸುತ್ತದೆ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ, ಹಾಗಾಗಿ ಇದು ಪೂಜೆಗಳಲ್ಲಿ ಪವಿತ್ರ ಹಾಗೂ ಆಗ್ರಸ್ಥಾನ ಪಡೆದಿದೆ, ಬಿಲ್ವಪತ್ರೆಯು ತಂಪು ಗುಣವುಳ್ಳದ್ದಾಗಿದ್ದು ಶಿವಲಿಂಗವನ್ನು ಬಿಲ್ವಪತ್ರೆಯಿಂದ ಪೂಜಿಸುವುದರಿಂದ ಶಿವಲಿಂಗದ ಅಗ್ನಿ ತತ್ತ್ವವನ್ನು ಶಾಂತಗೊಳಿಸುತ್ತದೆ. ಎಂಬ ವಿಜ್ಞಾನವೂ ಇದರಲ್ಲಿ ಅಡಗಿದೆ,ಅಷ್ಟಲ್ಲದೆ ಆರೋಗ್ಯ ದೃಷಿಯಿಂದ ಬಿಲ್ವಪತ್ರೆ ಮತ್ತು ಅದರ ಕಾಯಿಗಳು ತುಂಬಾ ಮಹತ್ವ ಪಡೆದಿವೆ.ಬಿಲ್ವಪತ್ರೆ ತಂಪು ಗುಣ ಹೊಂದಿರುವುದರಿಂದ  ಉಷ್ಣಕಾರಕ ರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ಆಯುರ್ವೇದಲ್ಲಂತೂ ಚರ್ಮ, ಕಣ್ಣು, ಹೃದಯ  ಹೀಗೆ ಹಲವಾರು ರೋಗಗಳಿಗೆ ಬಿಲ್ವಪತ್ರೆ ರಾಮಬಾಣವಾಗಿದೆ !
ಗೀತಾಂಜಲಿ ಎನ್  ಎಮ್

Category : Spirituality


ProfileImg

Written by Geethanjali NM

Helping hands are better than praying lips..!!