ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?
ಮೊನ್ನೆ ಎಂಗಳ ಪಕ್ಕದ ಮನೆ ಹೆಮ್ಮಕ್ಕ ಒಂದು ದಾರುಣ ಸುದ್ದಿ ಹೇಳಿದವು .ಅವರ ಆಫೀಸ್ ಲಿ ಕೆಲಸ ಮಾಡುವ ಒಬ್ಬ ಆಫೀಸರ್ ಮತ್ತೆ ಅವನ ಹೆಂಡತಿ ಆತ್ಮ ಹತ್ಯೆಗೆ ಯತ್ನಿಸಿದ ಬಗ್ಗೆ ಹೇಳಿದವು .ಇಂದಿನ ದಿನಂಗಳಲ್ಲಿ ಆತ್ಮ ಹತ್ಯೆ ಹೆಚ್ಚಾವುತ್ತಾ ಇದ್ದು .ಕೆಲವು ಸ್ವಯಂಕೃತ ಅಪರಾಧಗಳ ಕಾರಣಕ್ಕೆ ಕೆಲವು ಬೇರೆಯೋರ ಉಪದ್ರ ತಾಳುಲೆ ಎಡಿಯದ್ದೆ ಇನ್ನು ಕೆಲವು ಸರಿಯಾದ ಕೆಲ್ಸ, ಸಂಬಳ ಸಿಕ್ಕದ್ದ ಬಗ್ಗೆ .ಪರೀಕ್ಷೇಲಿ ಫೈಲ್ ಆದ ಬಗ್ಗೆ .ಹೀಂಗೆ ದಿನ ನಿತ್ಯ ಇಂಥ ವಿಚಾರವ ನಾವು ಕೇಳುತ್ತು .ಅದರಲ್ಲಿ ಸುಮಾರು ಕೇಸ್ ಗ ಈ ದಂಪತಿಗಳ ಹಾಂಗೆ ಆತ್ಮ ಹತ್ಯೆ ಮಾಡಿಕೊಂಡೋವು ಇದ್ದವು .
ಈ ಗೆಂಡ ಹೆಂಡತಿಗೊಕ್ಕೆ ಇಬ್ರಿಂಗು ಒಳ್ಳೆಯ ಕೆಲಸ ಇದ್ದು.ಇವು ಪ್ರಾಮಾಣಿಕ ಕೆಲಸ ಗಾರರು ಕೂಡ .ಫೈಲ್ ಮುಟ್ಟಕ್ಕಾರೆಮೊದಲು ,ಮುಟ್ಟಿದ್ದಕ್ಕೆ ನಂತರ ಹೇಳಿ ಪೈಸೆ ಎಳಕ್ಕೊಂಬ ಜೆನಂಗ ಅಲ್ಲ .ಸಾಮಾನ್ಯವಾಗಿ ಲೆಂಚ ತೆಕ್ಕೊಂಡು ಭ್ರಷ್ಟಾಚಾರ ಮಾಡಿ ಸಿಕ್ಕು ಹಾಕಿಕೊಂಡು ಅನೇಕ ಜನಂಗ ಅತ್ಮಹತ್ಯೆಯತ್ತ ಮೋರೆ ಮಾಡುದು ಅಲ್ಲಲ್ಲಿ ಕಂಡು ಬತ್ತು .ಭ್ರಷ್ಟಾಚಾರ ಮಾಡಿರೆ ಅದರ ಅರಗಿಸಿಕೊಂಬದು ಕೂಡ ಸುಲಭದ ವಿಚಾರ ಅಲ್ಲನ್ನೇ!
ಆದರೆ ಇವರದ್ದು ಈ ವಿಚಾರಕ್ಕೆ ಮಾಡಿಕೊಂಡ ಆತ್ಮ ಹತ್ಯೆಯಲ್ಲ .ಇವರಲ್ಲಿ ಹೆಂಡತಿಯ ತಂಗೆಯ ಗೆಂಡ ದೊಡ್ಡ ಬುಸಿನೆಸ್ ಮ್ಯಾನ್ .ತುಂಬಾ ದೊಡ್ಡ ವ್ಯವಹಾರ ಇದ್ದು ಅಡ.ಅವರತ್ರೆ ಏಳೆಂಟು ಬಂಗಲೆ ,ಕಾರುಗ ಎಲ್ಲ ಇದ್ದಡ.ಪ್ರಾಮಾಣಿಕವಾಗಿ ಕೆಲಸ ಮಾಡುವ ಸರ್ಕಾರಿ ಕೆಲಸಗಾರರಿಂಗೆ ಇಷ್ಟೆಲ್ಲಾ ಆದಾಯ ಇಲ್ಲೆ.ಈ ಗೆಂಡ ಹೆಂಡತಿಗ ಅವರ ಹೆಂಡತಿಯ ತಂಗೆಗೆ ಇಪ್ಪ ಹಾಂಗೆ ಸೀರೆ ಚಿನ್ನ ,ಮನೆ ವಾಹನಂಗ ಆಯಕ್ಕು ಹೇಳಿ ವಿಪರೀತ ಸಾಲ ಮಾಡಿ ದೊಡ್ಡ ಬಂಗಲೆ, ಇಪ್ಪತ್ತೈದು ಲಕ್ಷದ ಕಾರು ತೆಗದ್ದವು .ಮತ್ತೆ ಸಾಲ ಕೊಡುಲೆ ಎಡಿಯದ್ದೆ ಆತು .ಸಾಲಗಾರರೆಲ್ಲ ದಿನ ನಿತ್ಯ ಪೈಸೆ ಹಿಂದೆ ಕೊದುಲೇ ಹೇಳುಲೆ ಸುರು ಮಾಡಿದವು .ಇನ್ನೊಂದೆಡೆ ಬಾಂಕ್ ಗಳಿಂದ ನೋಟೀಸ್ ಬಂತು .
ಇಷ್ಟಪ್ಪಗ ಇದರೆಲ್ಲದರ ನಿಭಾಯಿಸುಲೆ ಎಡಿಯದ್ದೆ ಆ ದಂಪತಿಗ ಸಾವಿನತ್ತ ಮುಖ ಹಾಕಿದವು .
ಅಂಬಗ ಎನಗೆ ಇಂಥ ಸಂದರ್ಭಕ್ಕೆ ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹಾಕುಲೆ ಹೋದರೆ ಅಕ್ಕ ?ಹೇಳುವ ಮಾತು ಬಳಕೆಲಿ ಇಪ್ಪದು ಎನಗೆ ನೆನಪಾತು .ಹಾಸಿಗೆ ಇದ್ದಷ್ಟು ಕಾಲು ಚಾಚು ಹೇಳುವ ಗಾದೆ ಮಾತು ಇದ್ದು ಅದಕ್ಕೆ ಪ್ರತಿಯಾಗಿ ಹಾಸಿಗೆಯನ್ನೇ ದೊಡ್ಡಕ್ಕೆ ಹೊಲಿಸು ಹೇಳುವ ಆಧುನಿಕ ಚಿಂತನೆಗಳೂ ಇದ್ದು ,ಆದರೆ ಎಲ್ಲದಕ್ಕೂ ಒಂದು ಮಿತಿ ಇರಡದ.ಅವರವರ ಸಾಮರ್ಥ್ಯ ನೋಡಿಗೊಳ್ಳಡದ?
ಆನೆಗೆ ದೊಡ್ಡ ಪ್ರಮಾಣದ ಲದ್ದಿ ಹಾಕುಲೆ ಎಡಿತ್ತು .ಅದು ಹಾಂಗೆ ತಿಂತು ,ಕೆಲಸ ಮಾಡುತ್ತು ಕೂಡ !ಆದರೆ ಹುಲ್ಲಿನ ಕೊಡಿ ಕೊಡಿ ತಿಂಬ ಮೆರು (ಮೊಲ ) ಅನೆ ಹಾಂಗೆ ಲದ್ದಿ ಹಾಕುಲೇ ಹೆರಟ್ರೆ ಅದು ಅಸಾಧ್ಯವಾದ ವಿಚಾರ .
ನಮ್ಮ ಸಾಮರ್ಥ್ಯವ ಮೀರಿದ ಕೆಲಸಕ್ಕೆ ಕೈ ಹಾಕುವ ಸಂದರ್ಭಲ್ಲಿ ಬುದ್ಧಿ ಮಾತಾಗಿ ಈ ಹವ್ಯಕ ಪಡೆ ನುಡಿ ಬಳಕೆಲಿ ಇದ್ದು .ಸಿಂಹ ಆನೆಯ ಎಳವಲೆ ಹೆರಟ ಹಾಂಗೆ ಹೇಳಿ ಅರ್ಥ ಬಪ್ಪ ಸಂಸ್ಕೃತದ ನುಡಿಗಟ್ಟು ಸಂಸ್ಕೃತ ಭಾಷಾ ಸಾಹಿತ್ಯಲ್ಲಿ ಬಳಕೆಲಿ ಇದ್ದು .ಸಿಂಹ ಕ್ಕೆ ಆನೆಯ ಕೊಲ್ಲುಲೆ ಎಡಿಗು ಹಾಂಗೆ ಹೇಳಿ ಎಳಕ್ಕೊಂಡು ಹೊಪಲೆ ಹೆರಟ್ರೆ ಅದು ಶಕ್ತಿ ಕುಂದಿ ಸಾಯ್ತು ಹೇಳುವ ಕಥೆಯ ಹೇಳಿಕ್ಕಿ ಈ ಮಾತಿನ ಅರ್ಥ . ಅದೇ ರೀತಿಯ ಅರ್ಥವ” ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?”ಹೇಳುವ ಹವ್ಯಕ ನುಡಿ ಕಟ್ಟು ಕೊಡುತ್ತು .
ಸಾಮರ್ಥ್ಯಕ್ಕೆ ಮೀರಿದ ಕೆಲಸಕ್ಕೆ ಕೈ ಹಾಕಿದರೆ ಸೋಲಕ್ಕಾವುತ್ತು .ಹಾಂಗಾಗಿ ನಮ್ಮ ಇತಿ ಮಿತಿಯ ನೋಡಿಕೊಂಡು ಕೆಲಸ ಮಾಡಕ್ಕು .ಆರತ್ರೋ ಕಾರು ಬಂಗಲೆ ಇದ್ದು ಹೇಳಿ ಅತಿಯಾಗಿ ಸಾಲ ಮಾಡಿ ಜೀವನ ಇಡೀ ಅದರ ಬೂಟುಲೆ ಹೆಣಗಾಡಕ್ಕಾದ ಅಗತ್ಯ ಬತ್ತು .ನೆಮ್ಮದಿಯ ಕಳಕ್ಕೊಂಡು ಬದುಕ್ಕಾವುತ್ತು ಹೇಳುವ ಎಚ್ಚರಿಕೆ ಕೊಡುವ ನುಡಿಗಟ್ಟು ಇದು