ನೋಡಿಲ್ಲಿ ಹುಚ್ಚೀ..,
ನಿನಗೊಂದು ವಿಷಯ ಹೇಳಲಾ..??
ವಸ್ತು ಕಣ್ಣಿಗೆ ಹತ್ತಿರ ಆದಷ್ಟೂ ಅಸ್ಪಷ್ಟವಾಗಿ ಕಾಣ್ತಾ ಹೋಗುತ್ತೆ..
ಹಾಗೇನೇ ಯಾವ ವ್ಯಕ್ತಿಯಾದರೂ ನಮ್ಮ ಹೃದಯಕ್ಕೆ ಹತ್ತಿರ ಆದಷ್ಟೂ ಆ ವ್ಯಕ್ತಿಯ ಗುಣಾವಗುಣಗಳು ಅಸ್ಪಷ್ಟ ಆಗ್ತಾ ಹೋಗುತ್ತೆ.
ನೀನೆಂಥಾ ಪೆದ್ದಿ ಗೊತ್ತಾ..,
ನೀನು ಪ್ರೀತಿಸಿದ ಅವನು ಎಂಥವನು ಅನ್ನುವ ಒಂದು ಸ್ಪಷ್ಟವಾದ ಚಿತ್ರವೇ ಇಲ್ಲದೇ ಅವನನ್ನು ನಿನ್ನೆದೆಯ ತೆಕ್ಕೆಗೆ ಎಳಕೊಂಡು ಬಿಟ್ಟೆ..
ಜಗತ್ತಿಗೆ ನಿನ್ನ ಪ್ರೀತಿ ಅರ್ಥವಾಗುವುದಿಲ್ಲ ಬಿಡು.
ಅದು ಲೆಕ್ಕಾಚಾರಗಳನ್ನು ಉಸಿರಾಡುವ, ಲಾಭ ನಷ್ಟಗಳನ್ನು ತೂಗುವ ಮಂಡಿ.
ಜಗತ್ತನ್ನು ಕಂಡಿರುವ ಅವನಿಗಾದರೂ ನೀನು ಅರ್ಥವಾಗಬೇಕಿತ್ತು.
ನೀನು ಕೇಳಿದ್ದೆಲ್ಲಾ ಏನ್ಮಹಾ..??
ಒಂದು ಬಿಗಿ ಮುಷ್ಠಿಯಷ್ಟು ಪ್ರೀತಿಯಷ್ಟೇ.
ನಿನ್ನ ನೋವು ನಿನಗೆ ಸಾಕಷ್ಟಿತ್ತು.
ಕಷ್ಟಗಳು ನಿನ್ನನ್ನು ಬೇಟೆನಾಯಿಗಳಂತೆ ಅಟ್ಟಿಸುವಾಗ.., ಓಡಿ ಓಡಿ ಸಾಕಾದ ನಿನಗೆ ಅರಘಳಿಗೆಯ ವಿಶ್ರಾಂತಿಗಾಗಿ ಅವನ ಹೆಗಲು ಕೊಟ್ಟಿದ್ದರೆ ಸಾಕಿತ್ತು.
ಪಳಗಿದ ಯೋಧಳಂತೆ ನೀನು ವಿಧಿಯೊಡನೆ ಹೋರಾಡುವಾಗ ನಿನ್ನ ಬೆನ್ನ ಮೇಲವನ ಬೆಚ್ಚನೆಯ ನೆರಳಿದ್ದರೆ ಸಾಕಿತ್ತು.
ಅಪರಾತ್ರಿಯ ಕೆಟ್ಟ ಕನಸುಗಳಿಗೆ ಬೆಚ್ಚಿ ನೀನು ನಡುಗುವಾಗ ಅವನ ತೋಳುಗಳು ತುಸು ಹೊತ್ತು ಅಮ್ಮನ ಸೆರಗಾಗಿದ್ದರೆ ಸಾಕಿತ್ತು.
ಅವನ ಮನೆ, ಮಂಚಗಳಲ್ಲಿ ನಿನಗೆ ಜಾಗವಿರಲಿಲ್ಲ ನಿಜ.
ಅವನ ನಗುವಿನಲ್ಲಿ, ನೋವಿನಲ್ಲಿ, ಭಯದಲ್ಲಿ, ಭಕ್ತಿಯಲ್ಲಿಯೂ ನಿನಗೊಂದು ಪುಟಾಣಿ ಪಾಲೂ ಕೊಡದ ಭಾವ ಜಿಪುಣ ಅವನು.
ಅವನಿಗ್ಯಾಕೆ ಬಿದ್ದೆಯೇ ದಡ್ಡಿ.
ಈಗ ಅನುಭವಿಸುತ್ತಿದ್ದೀಯ ನೋಡು ಇದೆಂಥ ನರಕ..??
ತನ್ನ ವಿದ್ರೋಹಗಳನ್ನು ಪದಕಗಳ ಹಾಗೆ ನೇತಾಡಿಸಿಕೊಂಡಿರುವ ಆ ನಿಷ್ಕರುಣಿಗೋಸ್ಕರ ನೀನು ಅಳುತ್ತಾ ಇದ್ದೀಯ.
ನೆನಪುಗಳನ್ನು ಸಾಯಿಸಲಾರದೇ ಮರೆವನ್ನು ದಯಪಾಲಿಸುವ ಸಾವಿಗಾಗಿ ಹಂಬಲಿಸುತ್ತಾ ಇದೀಯ.
ಆದರೆ ಅವನಲ್ಲಿ ಇನ್ಯಾವಳ ಜೊತೆಗೋ..
ಬೇಕಿತ್ತಾ ಇದೆಲ್ಲಾ ಪುಟ್ಟೀ..?
This is a story of a concerned sibling advising her sister who is in pain because of her loved husband who deceived her and cheated her. Every sister close to heart has a concern about her family members during their marriage and choice of future partners. I have tried to bring those feelings and advise through these lines of a story-cum-poetry.
written by Jaishree D Hallur