ನನ್ನ ಯಶೋದ ಟೀಚರ್

ProfileImg
20 May '24
1 min read


image

ಅಮ್ಮನನ್ನು  ಬಿಟ್ಟಿರಲಾರದೇ ಅಳುತ್ತಲೇ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಮೆಟ್ಟಿಲು ಹತ್ತಿದ್ದ ಒಂದನೇ ತರಗತಿಯ ದಿನಗಳವು.ಕೆಲವೇ ದಿನಗಳಲ್ಲಿ ಶಾಲಾ ಮುಖ್ಯ ಶಿಕ್ಷಕಿ," ಮಕ್ಕಳೇ ,ಇವತ್ತಿನಿಂದ ಇವರೇ ನಿಮ್ಮ ಟೀಚರ್ ಆಯ್ತಾ" ಅಂತ ಯಶೋದ ಟೀಚರ್ ಅನ್ನು ಪರಿಚಯಿಸಿದ್ದರು. ಅಳುತ್ತಿದ್ದ ನನ್ನನ್ನು ಅಮ್ಮನಂತೆಯೇ ಸಮಾಧಾನಿಸಿ ಧೈರ್ಯ ತುಂಬಿದವರು.ನನಗೆ ಆಪ್ತವೆನಿಸಿದ ವ್ಯಕ್ತಿಗಳಲ್ಲಿ ಯಶೋದ ಟೀಚರ್ ಕೂಡ ಒಬ್ಬರು.ಶಾಲಾದಿನಗಳಲ್ಲಿ ಅವರೊಡನೆ ಹಂಚಿಕೊಳ್ಳದ ವಿಷಯಗಳಿಲ್ಲ.ಅಷ್ಟರಮಟ್ಟಿಗೆ ಮಕ್ಕಳನ್ನು ಶಾಲೆಯತ್ತ ಸೆಳೆಯುವಲ್ಲಿ ಟೀಚರ್ ಯಶಸ್ವಿಯಾದವರು.ಮಕ್ಕಳಲ್ಲಿ ಯಾವ ಭೇದಭಾವ ಮಾಡದೇ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು

      ಶಾಲಾ ಪ್ರವಾಸದ ದಿನಗಳಲ್ಲಿ ಟೀಚರ್ ಪಕ್ಕದ ಸ್ಥಳಕ್ಕಾಗಿ  ಪೈಪೋಟಿ.ಒಟ್ಟಿನಲ್ಲಿ ಯಶೋದ ಟೀಚರ್ ಎಲ್ಲರಿಗೂ ಆಪ್ತರು.ನನ್ನನ್ನು ಕಂಡಾಗೆಲ್ಲ ನಾನು ಶಾಲಾರಂಭಿಕ ದಿನಗಳಲ್ಲಿ ಅಮ್ಮನ ನೆನಪಾದಾಗಲೆಲ್ಲ ಪಠ್ಯ ಪುಸ್ತಕದೆಡೆಯಿರಿಸಿದ ಅಮ್ಮನ ಫೋಟೊ ನೋಡುತ್ತಿದ್ದ ದಿನಗಳನ್ನು ಮೆಲುಕು ಹಾಕಿ ನಗುವುದುಂಟು. ಮದುವೆಯ ದಿನವೂ ಮರೆಯದೆ ಈ ವಿಷಯ ನನ್ನ ಯಜಮಾನರಲ್ಲಿ ಹೇಳಿದ್ದರು. ಮದುವೆಯ ನಂತರದ ದಿನಗಳಲ್ಲಿ ಊರ ಜಾತ್ರೆ, ಇನ್ನಿತರ ಸಮಾರಂಭಗಳಲ್ಲಿ  ಕಣ್ಣುಗಳು ಯಶೋದ ಟೀಚರ್ ನನ್ನೇ ಹುಡುಕುತ್ತಿರುತ್ತವೆ.ಅದೆಷ್ಟೇ ಅವಸರವಿದ್ದರೂ ಓಡಿ ಬಂದು ಅವರ ಕೈ ಹಿಡಿದು ಮಾತನಾಡಿದರಷ್ಟೇ ಮನಸಿಗೆ ತ್ ಪ್ತಿ.
      ಅವರ ಸುಂದರ ಕೈಬರಹವೇ ನಮಗೆ ಬರೆಯಲು ಸ್ಪೂರ್ತಿ. ದಿನವೂ ನಾವೆಲ್ಲ ತರುತ್ತಿದ್ದ ವಿವಿಧ ಹೂಗಳಿಂದ ಅವರ ಜಡೆ ತುಂಬುತ್ತಿತ್ತು.ಒಮ್ಮೆ ಟೀಚರ್ ಅವರ ಪರೀಕ್ಷಾ ವಿಷಯ ವಾಗಿ ಹತ್ತು ದಿನ ರಜೆ ಎಂದಿದ್ದರು.ನಾನಂತೂ  ಮನೆಯವರೆಗೂ ಅತ್ತುಕೊಂಡು ಬಂದಿದ್ದೆ.ನನ್ನ ಅಮ್ಮನನ್ನು ಕಂಡಾಗಲೆಲ್ಲ "ಇವಳು ನನ್ನ ಮಗಳು" ಅಂತ ಟೀಚರ್ ಹೇಳುವುದು ಉಂಟು.ನನಗೆ ಮಗ ಹುಟ್ಟಿದ ವಿಷಯ ತಿಳಿದು "ನನ್ನ ಪುಳ್ಳಿ " ಅಂತ ಖುಷಿಪಟ್ಟಿದ್ದರು.
        ಮಕ್ಕಳೆಲ್ಲರನ್ನೂ  ಸ್ವಂತ ಮಕ್ಕಳಂತೆ ,ತಾಳ್ಮೆಯಿಂದ ತಿದ್ದಿ ತೀಡಿ,ಶಿಸ್ತಿನ ಪಾಠ ಕಲಿಸಿದವರು,ಮಕ್ಕಳ ಖುಷಿಯಲ್ಲಿಯೇ ತಮ್ಮ ಖುಷಿ ಕಂಡವರು, ಗೌರವ ಶಿಕ್ಷಕಿಯಾಗಿ ಶಾಲಾ ಏಳಿಗೆಗಾಗಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ ನನ್ನ ಯಶೋದ ಟೀಚರ್ ಸದಾ ಸಂತಸದಿಂದರಲಿ ಎಂಬ ಹಾರೈಕೆ ನನ್ನದು.

Category:Education



ProfileImg

Written by Akhilashree.K

0 Followers

0 Following