ಭಾರತದ ಅತ್ಯಂತ ಐಷಾರಾಮಿ ಹೋಟೆಲ್‌ಗಳನ್ನು ನಿರ್ಮಾಣ ಮಾಡಿರುವ ಟಾಟಾ ಗ್ರೂಪ್‌ನ ಇಂಡಿಯನ್ ಹೋಟೆಲ್ಸ್ ಕಂಪನಿ (ಐಎಚ್‌ಸಿಎಲ್) ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದ ಸುಹೇಲಿ ಹಾಗೂ ಕದ್ಮತ್ ದ್ವೀಪಗಳಲ್ಲಿ ಎರಡು ತಾಜ್ ಬ್ರ್ಯಾಂಡ್‌ನ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುವಿದಾಗಿ ಘೋಷಣೆ ಮಾಡಿದೆ. ಈ ರೆಸಾರ್ಟ್‌ಗಳು 2026ರಲ್ಲಿ ಆರಂಭವಾಗುವ ಸಾಧ್ಯತೆಗಳಿದ್ದು, ದ್ವೀಪದ ಪರಿಸರ ವ್ಯವಸ್ಥೆಯ ಸುಸ್ಥಿರತೆ ಹಾಗೂ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದೆ. ಭಾರತದ ಅತಿ ದೊಡ್ಡ ಹಾಸ್ಪಿಟಾಲಿಟಿ ಕಂಪನಿಯಾದ ಐಎಚ್‌ಸಿಎಲ್, ರಾಜಸ್ಥಾನ, ಕೇರಳ, ಗೋವಾ ಹಾಗೂ ಅಂಡಮಾನ್‌ಗಳಂಥ ಸ್ಥಳಗಳನ್ನು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ಇರಿಸಿರುವ ನಮ್ಮ ಬದ್ಧತೆಯೇ ಲಕ್ಷದ್ವೀಪದಲ್ಲಿ ಕೆಲಸ ಮಾಡಲಿದೆ ಎಂಧು ತಿಳಿಸಿದೆ. ಐಎಚ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪುನೀತ್ ಛತ್ವಾಲ್ ಮಾತನಾಡಿ, ಈ ರೆಸಾರ್ಟ್‌ಗಳು ಪ್ರವಾಸಿಗರಿಗೆ ವಿಶಿಷ್ಟವಾದ ಮತ್ತು ವಿಭಿನ್ನವಾದ ಅನುಭವವನ್ನು ನೀಡುತ್ತವೆ ಮತ್ತು ಪರಿಸರದ ಮೇಲೆ ಯಾವುದೇ ಕೆಟ್ಟ ಪ್ರಭಾವವನ್ನು ಈ ರೆಸಾರ್ಟ್‌ಗಳು ಬೀರೋದಿಲ್ಲ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಹದಗೆಟ್ಟ ಸಂಬಂಧಗಳ ಮಧ್ಯೆ, ಲಕ್ಷದ್ವೀಪವನ್ನು ಭಾರತೀಯ ಪ್ರವಾಸಿಗರಿಗೆ ಪ್ರಮುಖ ವಿಹಾರ ತಾಣವಾಗಿ ಪ್ರಚಾರ ಮಾಡುತ್ತಿರುವ ಸಮಯದಲ್ಲಿ ಐಎಸ್‌ಸಿಎಲ್ ಈ ನಿರ್ಧಾರ ಮಾಡಿದೆ. ಭಾರತವು ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಲ್ಡೀವ್ಸ್ ಸರ್ಕಾರ ಆರೋಪಿಸಿದೆ ಮತ್ತು ಅದರ ಕೆಲವು ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ. ಪ್ರತಿಕ್ರಿಯೆಯಾಗಿ, ಮೋದಿ 2023 ಡಿಸೆಂಬರ್‌ನಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಲಕ್ಷದ್ವೀಪವನ್ನು ಪ್ರವಾಸಿ ತಾಣವನ್ನಾಗಿ ಆಯ್ಕೆ ಮಾಡಲು ಭಾರತೀಯರನ್ನು ಒತ್ತಾಯಿಸಿದರು.
ಸುಹೇಲಿ ದ್ವೀಪದಲ್ಲಿ ನಿರ್ಮಾಣವಾಗಲಿರುವ ತಾಜ್ ಸುಹೇಲಿಯಲ್ಲಿ 110 ಕೋಣೆಗಳು ಇರಲಿದ್ದು, ಇದರಲ್ಲಿ 60 ಬೀಚ್ ವಿಲ್ಲಾಗಳು ಆಗಿರಲಿದೆ. 50 ವಾಟರ್ ವಿಲ್ಲಾ ಆಗಿರಲಿದೆ. ಇನ್ನು ತಾಜ್ ಕದ್ಮತ್‌ನಲ್ಲಿ 110 ಕೋಣೆಗಳು ಇರಲಿದ್ದು, ಇದರಲ್ಲಿ 75 ಬೀಚ್ ವಿಲ್ಲಾಗಳಾಗಿದ್ದರೆ, 35 ವಾಟರ್ ವಿಲ್ಲಾ ಆಗಿರಲಿದೆ. ಏಲಕ್ಕಿ ದ್ವೀಪ ಎಂದೂ ಕರೆಯಲ್ಪಡುವ ಕಡ್ಮತ್ ದ್ವೀಪವು ಹವಳದ ದ್ವೀಪವಾಗಿದ್ದು, ಸಮುದ್ರ ಆಮೆಗಳ ಗೂಡುಕಟ್ಟುವಿಕೆಗೆ ಪ್ರಮುಖವಾದ ಸಮುದ್ರದ ಹಾಸುಗಳನ್ನು ಹೊಂದಿರುವ ದೊಡ್ಡ ಆವೃತ ಮತ್ತು ಸಮುದ್ರ ಸಂರಕ್ಷಿತ ಪ್ರದೇಶವಾಗಿದೆ.
ಐಎಚ್‌ಸಿಎಲ್ ಉತ್ತರ ಪ್ರದೇಶದ ದುಧ್ವಾದಲ್ಲಿ ಜಾಗೀರ್ ಮ್ಯಾನರ್ ಎಂಬ SeleQtions ಹೋಟೆಲ್ ಅನ್ನು ಸಹ ಪ್ರಾರಂಭಿಸಿದೆ. ಈ 20-ಕೋಣೆಗಳ ಹೋಟೆಲ್, ತೋಟಗಳು ಮತ್ತು ಕಾಡುಗಳ ನಡುವೆ ವ್ಯಾಪಿಸಿದೆ. 1940 ರ ದಶಕದ ಪರಂಪರೆಯ ಕೊಠಡಿಗಳು ಮತ್ತು ಐಷಾರಾಮಿ ವಿಲ್ಲಾಗಳನ್ನು ಇದು ಹೊಂದಿದೆ.
ಭಾರತೀಯರ ಕುರಿತು ಟೀಕೆ ಮಾಡಿದ ಮಾಲ್ಡೀವ್ಸ್ ಆಡಳಿತಾರೂಢ ಪಕ್ಷದ ಸದಸ್ಯ, ನೆಟ್ಟಿಗರು ಕೊಟ್ರು ಪರ್ಫೆಕ್ಟ್ ಉತ್ತರ
ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ಮಾಡಿ ಮಾಡಿರುವ ಒಂದೇ ಒಂದು ಟ್ವಿಟರ್ ಪೋಸ್ಟ್ ಇಡೀ ಮಾಲ್ಡೀವ್ಸ್‌ನ ಆರ್ಥಿಕತೆಯನ್ನೇ ಅಲುಗಾಡಿಸುವ ಲಕ್ಷಣ ತೋರಿದೆ. ಎರಡು ದಿನಗಳ ಹಿಂದೆ ತಮ್ಮ ಟ್ವಿಟರ್ ಖಾತೆಯಲ್ಲಿ ಲಕ್ಷದ್ವೀಪ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದ ನರೇಂದ್ರ ಮೋದಿ, ಭಾರತೀಯರು ಈ ದ್ವೀಪಗಳ ಅನ್ವೇಷಣೆಗೆ ಮುಂದಾಗಬೇಕು ಎಂದು ಹೇಳಿದ್ದರು. ಆ ಮೂಲಕ ವಿಹಾರಕ್ಕಾಗಿ ಮಾಲ್ಡೀವ್ಸ್‌ನಂಥ ದೇಶಗಳಿಗೆ ಹೋಗುವ ಬದಲು ನಮ್ಮಲ್ಲೇ ಎಷ್ಟೋ ಪ್ರದೇಶಗಳಿವೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಇದು, ಮಾಲ್ಡೀವ್ಸ್‌ನಲ್ಲಿ ಬಂದಿರುವ ಭಾರತ ವಿರೋಧಿ ಸರ್ಕಾರಕ್ಕೆ ಮೋದಿ ನೀಡಿದ ಉತ್ತರ ಎನ್ನುವಂತೆ ಬಿಂಬಿಸಲಾಗಿತ್ತು. ಇದೇ ಅರ್ಥದಲ್ಲಿ ಭಾರತೀಯರೊಬ್ಬರು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಮಾಲ್ಡೀವ್ಸ್‌ನ ಆಡಳಿತಾರೂಢ ಪ್ರೋಗ್ರೆಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ ಪಕ್ಷದ ಸದಸ್ಯ ಭಾರತೀಯರನ್ನು ಅಪಹಾಸ್ಯ ಮಾಡಿ ಟ್ವೀಟ್ ಮಾಡಿರುವುದು ಈಗ ಈ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿದಿದೆ. ಪಿಪಿಎಂ ಕೌನ್ಸಿಲ್ ಸದಸ್ಯ ಜಾಹೀದ್ ರಮೀಜ್ ಮಾಡಿರುವ ಜನಾಂಗೀಯ ಟ್ವೀಟ್‌ನಿಂದ ಕೆಂಡಾಮಂಡಲರಾಗಿರುವ ಭಾರತೀಯರು ತಮ್ಮ ಮುಂಬರುವ ಮಾಲ್ಡೀವ್ಸ್ ಪ್ರಯಾಣದ ಬುಕ್ಕಿಂಗ್‌ಗಳನ್ನು ರದ್ದು ಮಾಡಿ ಅದರ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಇದೇ ಜಾಹೀದ್ ರಮೀಜ್ ಹಿಂದೊಮ್ಮೆ ಭಾರತದ ಪೌರತ್ವ ಪಡೆಯುವ ಪ್ರಯತ್ನವನ್ನೂ ಮಾಡಿದ್ದ ಎನ್ನುವ ಅಂಶವನ್ನು ಹಿಡಿದು ಆತನಿಗೆ ಜಾಡಿಸಿದ್ದಾರೆ.
ಮೋದಿ ಲಕ್ವದೀಪ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದ ಮಿ.ಸಿನ್ಹಾ ಹೆಸರಿನ ಟ್ವೀಟರ್ ಪೇಜ್ ಅದರೊಂದಿಗೆ, 'ಎಂತಹ ಉತ್ತಮ ನಡೆ! ಇದು ಮಾಲ್ಡೀವ್ಸ್‌ನ ಹೊಸ ಚೀನೀ ಕೈಗೊಂಬೆ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅಲ್ಲದೆ, ಇದು ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ' ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜಾಹಿದ್ ರಮೀಜ್, “ನಡೆಯೇನೋ ಅದ್ಭುತವಾಗಿದೆ. ಆದರೆ, ನಮ್ಮೊಂದಿಗೆ ಸ್ಪರ್ಧಿಸುವ ಆಲೋಚನೆ ನಿಮ್ಮ ಭ್ರಮೆ. ನಾವು ನೀಡುವ ಸೇವೆಯನ್ನು ಭಾರತೀಯರು ಹೇಗೆ ಒದಗಿಸಲು ಸಾಧ್ಯ? ಭಾರತೀಯರು ನಮ್ಮಷ್ಟು ಸ್ವಚ್ಛವಾಗಿ ಇರೋದಿಲ್ಲ? ಕೊಠಡಿಗಳಲ್ಲಿನ ಶಾಶ್ವತ ವಾಸನೆಯೇ ನಿಮಗೆ ದೊಡ್ಡ ಹಿನ್ನಡೆ' ಎಂದು ಬರೆದುಕೊಂಡಿದ್ದರು.
ಭಾರತೀಯರು ಶುಚಿತ್ವವಿಲ್ಲದವರು ಮತ್ತು ಕೊಳಕು ಎಂದು ಸೂಚಿಸುವ ಪಿಪಿಎಂ ಸದಸ್ಯ ಮಾಡಿದ ಜನಾಂಗೀಯ ಹೇಳಿಕೆಗೆ ಹಲವಾರು ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದರು. ಅದರೊಂದಿಗೆ ಮಾಲ್ಡೀವ್ಸ್‌ಅನ್ನು ಪ್ರವಾಸಿ ತಾಣವಾಗಿ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಲ್ಲದೆ, ಅದೇ ರೀತಿಯ ಅನುಭವ ಲಕ್ಷದ್ವೀಪದಲ್ಲಿಯೇ ಕಳೆಯುವುದಾಗಿ ತಿಳಿಸಿದ್ದಾರೆ.
ಭಾರತೀಯರು ಮಾಲ್ಡೀವ್ಸ್‌ಗೆ ವಿಹಾರಕ್ಕೆ ಹೋಗೋದನ್ನ ಶಾಶ್ವತವಾಗಿ ಬಹಿಷ್ಕರಿಸಬೇಕು. ಅದರ ಬದಲು ನಮ್ಮದೇ ಆದ ಲಕ್ಷದ್ವೀಪಕ್ಕೆ ಭೇಟಿ ನೀಡಬೇಕು. ನಮ್ಮ ಸುಂದರ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಒಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂದಿನ ಒಂದು ವರ್ಷದಲ್ಲಿ ಮಾಲ್ಡೀವ್ಸ್‌ಗೆ ಬಂದ ಪ್ರವಾಸಿಗರ ಡೇಟಾವನ್ನು ನೀವು ಪರಿಶೀಲನೆ ಮಾಡಿ. ಮಾಲ್ಡೀವ್ಸ್‌ಗೆ ಬರುವ ಪ್ರವಾಸಿಗರಲ್ಲಿ ಎಷ್ಟು ಕುಸಿತವಾಗಿದೆ ಅನ್ನೋದನ್ನು ನೀವು ನೋಡ್ತೀರಿ. ಭಾರತದಿಂದ ಪ್ರವಾಸಿಗರು ನಿಮ್ಮ ಆರ್ಥಿಕತೆಗೆಎಷ್ಟು ಮುಖ್ಯ ಎಂದು ಅರ್ಥ ಮಾಡಿಕೊಳ್ಳುವ ಸಂದೇಶ ಅದಾಗಿರಲಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ. ನಮ್ಮ ಪ್ರವಾಸಿ ತಾಣಗಳಲ್ಲಿ ಶಾಶ್ವತವಾದ ವಾಸನೆಗಳಿರುತ್ತದೆ ಎಂದು ಹೇಳುವ ಮೂಲಕ ನಮ್ಮನ್ನು ಕೆಣಕಿದ್ದಾನೆ. ಯಾರು ಅರ್ಹರಲ್ಲವೋ ಆ ದೇಶದಲ್ಲಿ ಹಣ ಖರ್ಚು ಮಾಡೋದನ್ನು ಕಡಿಮೆ ಮಾಡಿ. ಅವರು ನಮ್ಮ ಕಾಲಿಗೆ ಬೀಳುವಂತೆ ಮಾಡಿ ಎಂದು ಇನ್ನೊಬ್ಬರು ಬರೆದಿದ್ದಾರೆ.
ಭಾರತೀಯರ ಬಗ್ಗೆ ಈ ಕಾಮೆಂಟ್ ಮಾಡಿರುವ ಜಾಹಿದ್ ರಮೀಜ್, ಹಿಂದೊಮ್ಮೆ ಭಾರತದ ಪೌರತ್ವವನ್ನು ಕೇಳಿದ್ದ ಎನ್ನುವುದನ್ನು ಇನ್ನೊಬ್ಬರು ಬಹಿರಂಗಪಡಿಸಿದ್ದಾರೆ. ಕಳೆದ ವರ್ಷದ ಜೂನ್ 28ರ ಅವರ ಟ್ವೀಟ್‌ಅನ್ನು ಪೋಸ್ಟ್ ಮಾಡಿದ್ದು, ಈತ ಭಾರತೀಯ ಪೌರತ್ವ ಕೇಳಿದ್ದ. ಈತನಿಗೆ ಯಾವುದೇ ಕಾರಣಕ್ಕೂ ಪೌರತ್ವ ನೀಡಬಾರದು' ಎಂದು ಕೇಂದ್ರ ಗೃಹ ಇಲಾಖೆ ಹಾಗೂ ವಿದೇಶಾಂಗ ಇಲಾಖೆಗೆ ಟ್ವೀಟ್ ಮಾಡಿದ್ದಾರೆ.ಜಾಹಿದ್ ರಮೀಜ್ ಅವರ ಪೋಸ್ಟ್‌ನಿಂದ ಜೂನ್ 28ರಂದು, ಅವರು ಮಾಲ್ಡೀವ್ಸ್‌ನಲ್ಲಿರುವ ಭಾರತದ ಹೈಕಮಿಷನ್ ಅನ್ನು ಟ್ಯಾಗ್ ಮಾಡಿ ಭಾರತದ ಪೌರತ್ವವನ್ನು ನೀಡುವಂತೆ ಮನವಿ ಮಾಡಿದ್ದರು.
ಭಾರತೀಯರ ವಿರುದ್ಧ ಜಾಹಿದ್ ರಮೀಜ್ ಅವರ ಜನಾಂಗೀಯ ಹೇಳಿಕೆಗೆ ಹಲವಾರು ಸೋಶಿಯಲ್ ಮೀಡಿಯಾ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ ನಂತರ, ಆಡಳಿತಾರೂಢ ಪಿಪಿಎಂ ಸದಸ್ಯ ಕ್ಷಮೆಯಾಚಿಸುವ ಅಥವಾ ಅವರ ಹೇಳಿಕೆಯನ್ನು ಹಿಂತೆಗೆದುಕೊಳ್ಳುವ ಬದಲು, 'ಮುಸ್ಲಿಂ ಕಾರ್ಡ್' ಬಳಕೆ ಮಾಡುವ ಮೂಲಕ ತಾನು ಹೇಳಿದ್ದೇ ಸರಿ ಎಂದು ವಾದ ಮಾಡಿದ್ದಾರೆ. "ನಾನು ಭಾರತದಲ್ಲಿ ಜನಿಸಿದವನು ಮತ್ತು ನಾನು ಶಾಸಕನಲ್ಲ. ಟ್ವೀಟ್‌ಗಳ ಮೂಲಕ ನನ್ನ ಆಲೋಚನೆಗಳನ್ನು ಹಂಚಿಕೊಳ್ಳುತ್ತೇನೆ. ವಿಶೇಷವಾಗಿ ನಿಮ್ಮ ಜನರಿಂದ ನಮ್ಮ, ಮುಸ್ಲಿಮರು ಮತ್ತು ಪ್ಯಾಲೆಸ್ತೀನ್ ಬಗ್ಗೆ ಹೆಚ್ಚು ನೋವುಂಟುಮಾಡುವ ಕಾಮೆಂಟ್‌ಗಳು ಬಂದಾಗ ಬರದ ಪ್ರತಿಕ್ರಿಯೆ ಈಗ ಬರುತ್ತಿರುವುದು ನನಗೆ ಗೊಂದಲ ಮೂಡಿಸಿದೆ" ಎಂದು ಬರೆದಿದ್ದಾರೆ.
0 Followers
0 Following