ಹುಣಸೆ

ಪಾಕ ಪ್ರವೀಣೆಯ ಲೇಖನಿಯಿಂದ

ProfileImg
19 Jul '24
2 min read


image

 

ಹುಣಸೆ ರುಚಿ 

ಹುಣಸೆ ಮರದಲ್ಲಿ ದೆವ್ವ ಇರುತ್ತವೆ ಎನ್ನುವ ಬಾಲ್ಯದಲ್ಲಿ ನಂಬಿದ ಹೇಳಿಕೆ, ಈಗ ನೆನಪಿಸಿಕೊಂಡರೆ ನಗು. ಬೇಸಿಗೆಯ ಪ್ರಾರಂಭದಲ್ಲಿ ಹುಣಸೆ ಹಣ್ಣು ಖರೀದಿಸಿ, ಅಮ್ಮ ಅದನ್ನು ಶುಚಿಗೊಳಿಸುವ ಪ್ರಕ್ರಿಯಲ್ಲಿ ತೊಡಗಿದಾಗ, ನಮಗೆ ಅದರ ಜೊತೆ ಆಟ. ಹುಣಸೆ ಬೊಟಿಗೆ ಅಂಟಿಕೊಂಡ ಕಡ್ಡಿಗಳು, ದೆವ್ವದ ರಕ್ತಹೀನ ನರಗಳು ಎಂದು ಹೇಳುತ್ತಿದ್ದರು. 

ನಮ್ಮ ಕಡೆ ಹುಣಸೆ ಅಡುಗೆಗೆ, ತಾಮ್ರ ಹಿತ್ತಾಳೆ ಪಾತ್ರೆ ತೊಳಿಯುವದಕ್ಕೆ ಬೇಕೇ ಬೇಕು. 

ನಮ್ಮ ಕಡೆ ಅಡುಗೆಯಲ್ಲಿ ಟೊಮೇಟೊ ಬಳಕೆ ಕಡಿಮೆ, ಕಾಯಿರಸ, ಹುಳಿ ( ಸಾಂಬಾರ್ ) ಅಳ್ಳಿಟ್ಟು, ಬಿಸಿಬೇಳೆ ಅನ್ನ, ರಸವಿರುವ ಪಲ್ಯಗಳು, ಮುದ್ದಿ ಪಲ್ಯ ಹೀಗೆ ಹುಣಸೆ ಅಡುಗೆಯ ಪ್ರಧಾನ ವಸ್ತು. ಹೀಗಾಗಿ, ಇಡೀ ವರ್ಷ ಬೇಕಾಗುವಷ್ಟು ಖರೀದಿಸಿ, ಶುಚಿಗೊಳಿಸಿ, ತಗಡಿನ ಡಬ್ಬದಲ್ಲಿ ಶೇಕರಿಸಿ ಇಡುವ ಪದ್ಧತಿ ಮನೆ ಮನೆಗಳಲ್ಲಿ ನಡೆಯುತ್ತಿತ್ತು. ಈ ಸಮಯದಲ್ಲಿ, ನಮಗೆ ಆಟಕ್ಕೆ ಹುಣಸೆ ಕಪ್ಪಾ(ಬೀಜ ) ಸಂಗ್ರಹಿಸುವು ಸಂಭ್ರಮ, ಜೊತೆಗೆ ಅಮ್ಮನು ಹೇಳಿದಂತೆ ‘ಚಿಗಳಿ’ ಕುಟ್ಟುವ ಆತುರ. 

ಒರಳಿನಲ್ಲಿ, ಕಡ್ಡಿ ಬಿಡಿಸಿದ ಒಂದಿಷ್ಟು ಕೆಂಪು ಬಣ್ಣದ ಹುಣಸೆ  ಹಾಕಿ, ಪುಟ್ಟ ಪುಟ್ಟ ಕೈಗಳನ್ನು ಬಳಿಸಿ, ಕುಟ್ಟಾಣಿ ಎತ್ತಿ ಎತ್ತಿ ಕುಟ್ಟಿ, ಅದಕ್ಕಿಷ್ಟು ಉಪ್ಪು, ಖಾರ, ಜೀರಿಗೆ ಬೆಲ್ಲ ಹಾಕಿ ಮತ್ತೆ ಕುಟ್ಟಿ ಕುಟ್ಟಿ ಹದ ಮಾಡಿ, ಚಮಚಕ್ಕೆ ಅಥವಾ ಕಡ್ಡಿಗೆ ದುಂಡಾಗಿ ಒತ್ತಿ, ಲಾಲಿ ಪಾಪನಂತೆ ಮಾಡಿ, ಅದನ್ನು ದಿನವಿಡಿ ಚೀಪುತ್ತಾ ಓಡಾಡುವುದು . ಅದರ ರುಚಿ ನೆನೆದರೆ ಈಗಲೂ ಬಾಯಲ್ಲಿ ನೀರು.... ಆಹಾ...! 😋😋

‘ಚಿಗಳಿ’ ಚೀಪುತ್ತಾ, ಹುಣಸೆ, ಕಪ್ಪಗಳೊಡನೆ ವಿವಿಧ ಆಟ ಕೂಡ ಆಡುತ್ತಿದ್ದೆವು. ನೆಲದ ಮೇಲೆ ಬೀಜದ ರಾಶಿ ಹಾಕಿ ಅದನ್ನು ಊದಿ, ಒಂದೊಂದೇ ಬಿಡಿಸುವುದು, ಕೈ ಕಾಸುವ ಆಟ, ಗುಂಪಿನ ಆಟ ಹೀಗೆ ಹಲವಾರು ಆಟಗಳು.

ಈಗ ಈ ಹುಣಸೆ ಹಣ್ಣು ಬಳಸಿ ಮಾಡುವ ಮೀಠಾ ಚಟ್ನಿ ಅಂತೂ ಚಾಟ್ಸ್ ನ್ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕಚೋರಿ, ಸಮೋಸಾ, ಭೇಳ್, ಗಿರ್ಮಿಟ್, ಮಾಸಾಲ್ ಪೂರಿ, ಪಾನಿ ಪೂರಿಗೆ ಖರ್ಜುರ, ಬೆಲ್ಲ, ಗಟ್ಟಿ ಹುಣಸೆ ರಸ ಸೇರಿಸಿ, ಅದಕ್ಕೆ ಜೀರಿಗೆ ಪುಡಿ, ಕಪ್ಪುಉಪ್ಪು, ಸ್ವಲ್ಪ ಖಾರದ ಪುಡಿ ಹಾಕಿ ಕತ ಕತ ಕುದಿಸಿದರೆ 'ಮೀಠಾ' ರೆಡಿ. ಇದು ಇದ್ದರೇನೇ ಚಟ ಪಟಾ ಚಾಟ್ಸ್. 

ನಮ್ಮಲ್ಲಿ ಅಂತೂ ದೇವರ ಪೂಜೆಗೆ ಬೇಕಾಗುವ ಹಿತ್ತಾಳೆ ತಾಮ್ರದ ಪರಿಕರಗಳನ್ನು ಬೆಳಗಲು ಅಡುಗೆಗಿಂತ ಹೆಚ್ಚಿನ ಹುಣಸೆ ಹಣ್ಣು ಬೇಕಾಗುತ್ತದೆ. ಅದರಲ್ಲಿನ ಹುಳಿ ಅಂಶ, ಸ್ವಲ್ಪ ಉಪ್ಪು ಸೇರಿಸಿ ಉಜ್ಜಿದರೆ ಸಾಕು ಪಾತ್ರೆಗಳು ಫಳ ಫಳ ಹೊಳೆಯುತ್ತವೆ. 

ಹಣ್ಣು ಅಷ್ಟೇ ಅಲ್ಲ ಹುಣಸೆ ಕಾಯಿಯನ್ನು ಕೂಡ ಬಳಸಿ ಹಸಿರು ಮೆಣಸಿನಕಾಯಿ ಉಪ್ಪು ಇಂಗು ಹಾಕಿ ಒರಳಿನಲ್ಲಿ ಕೈಯಿಂದ ಕುಟ್ಟಿ ಕುಟ್ಟಿ ಮಾಡಿದ ತೊಕ್ಕು ತಿಂದಿದ್ದೀರಾ... ಆಹಾ..! ಖಾರ ಹುಳಿ ಉಪ್ಪು ಮೇಲುಗೈ ಸಾಧಿಸಿದ ಈ ಪದಾರ್ಥಕ್ಕೆ, ಹಸಿ ಎಣ್ಣೆ, ಅಥವಾ ಒಗ್ಗರಣೆ ಹಾಕಿ ಭಕ್ರಿ ( ರೊಟ್ಟಿ ) ಜೊತೆ ತಿಂದರೆ ಇದರಂಥ ಮಿಗಿಲಾದ ರುಚಿ ಇನ್ನೊಂದಿಲ್ಲ  ಎನ್ನುವಂತೆ ಮಾಡುತ್ತದೆ. ಈ ತೊಕ್ಕಿಗೆ, ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ ಬೆರೆಸಿ ತಿಂದು ನೋಡಿ ಅದೊಂದು ಬೇರೇನೇ ರುಚಿ ಕೊಡುತ್ತದೆ. 

ಕೆಲವರು ಹುಣಸೆ ಬೀಜ ಹುರಿದು, ಅದರ ಕೆಂಪು ಕವಚ ಬಿಡಿಸಿ, ಗಟ್ಟಿಯಾದ ಬಿಳಿ ಭಾಗವನ್ನು ಅಡಕೆಯಂತೆ ಜಗಿಯುತ್ತಿದ್ದರು, ಆದ್ರೆ ಅಮ್ಮ ನಮಗೆ ಹುಣಸೆ ಬೀಜ  ತಿನ್ನಲು ಬಿಡುತ್ತಿರಲ್ಲಿಲ್ಲ. ಅದು ಹಲ್ಲಿಗೆ ಒಳ್ಳೆಯದಲ್ಲವಂತೆ.

ನೈಸರ್ಗಿಕ ಸಿಗುವ ಪದಾರ್ಥಗಳನ್ನು, ಶುಚಿಯಾಗಿ ಮನೆಯಲ್ಲೇ ಮಾಡಿ, ಮಿತವಾಗಿ ಬಳಸಿದರೆ ಯಾವುದೂ ಅನಾರೋಗ್ಯಕರವಲ್ಲ. ಹುಣಸೆ ಹಣ್ಣಿನಲ್ಲಿಯೂ ಆರೋಗ್ಯಕ್ಕ ಹಿತಕರ ಗುಣಗಳಿವೆ, ಬೇಸಿಗೆಯಲ್ಲಿ ಹುಣಸೆ ರಸ ಬೆರಿಸಿದ ಪಾನಕ ದೇಹಕ್ಕೆ ತಂಪು ನೀಡುತ್ತದೆ. ಆದ್ರೆ ಹುಣಸೆ ಸೇವನೆ ಅತಿಯಾದರೆ ಆಸಿಡಿಟಿ ಅಂತಹ ಸಮಸ್ಯೆ ತಲೆದೂರಬಹುದು. 

ಶಾಲೆಯ ಆಚೆ, ಹುರಿದ ಹುಣಸೆ ಬೀಜ ದೊರಕುತ್ತಿದ್ದವು. ಬೇಸಿಗೆ ರಜೆಯಲ್ಲಿ ಹುಣಸೆ ಬೀಜ, ನಾರು , ಅಷ್ಟೇ ಏಕೆ ಅಪ್ಪ ಹೇಳುತ್ತಿದ್ದ ದೆವ್ವದ ಕಥೆಗಳಲ್ಲಿಯೂ ಹುಣಸೆ ಮರ ಇಣುಕುತ್ತಿತ್ತು. ರಸ್ತೆ ಬದಿಯಲ್ಲಿ, ಹುಣಸೆ ಮರ ಕಂಡರೆ, ತಲೆಯತ್ತಿ ನೋಡಲೂ  ಭಯವಾಗುತ್ತಿತ್ತು. ಮರಕ್ಕೆ ಕಲ್ಲು ಎಸೆದು ಹುಣಸೆ ತಿನ್ನುವ ವಾರಗಿ ಗಂಡು ಹುಡುಗರನ್ನು ನೋಡಿ, ಅಬ್ಬಾ...!  ಇವರು ಎಷ್ಟು ಧೈರ್ಯವಂತರು, ಇವರು ದೆವ್ವದ ಮನೆಗೆ ಕಲ್ಲು ಎಸೆಯುತ್ತಾರಲ್ಲ ಎಂದು ಅನಿಸುತ್ತಿತ್ತು. 😄😄😄 

ಮೃಣಾಲಿನಿ ❤️❤️

Category:Food and Cooking



ProfileImg

Written by Mrunalini Agarkhed

English,Kannada Blogger

0 Followers

0 Following