ಕಪ್ಪೆ ಹಾವನ್ನೇ ನುಂಗಿತ್ತಾ!!

ವಿಲೋಮ ಬೇಟೆ ಎಂಬ ಅಚ್ಚರಿ

ProfileImg
12 Jul '24
6 min read


image

       ಜೀವಜಗತ್ತಿನಲ್ಲಿ ಒಂದು ಪ್ರಾಣಿ ಇನ್ನೊಂದನ್ನು ಕೊಂದು ತಿನ್ನುವುದು ಪ್ರಕೃತಿ ನಿಯಮ. ಜಗತ್ತಿನಲ್ಲಿ ಸಸ್ಯಾಹಾರಿ ಪ್ರಾಣಿಗಳಿರುವಂತೆಯೇ ಅವುಗಳ ಸಂಖ್ಯಾನಿಯ೦ತ್ರಣ ಮಾಡಲು ಮಾಂಸಾಹಾರಿ ಪ್ರಾಣಿಗಳೂ ಹೇರಳವಾಗಿವೆ. ಇದು ಕೇವಲ ದೊಡ್ಡ ಪ್ರಾಣಿಗಳಿಗಷ್ಟೇ ಸೀಮಿತವಲ್ಲ. ಕೀಟಗಳು, ಸಂಧಿಪದಿಗಳು ಹಾಗೂ ಇನ್ನಿತರ ಚಿಕ್ಕಪುಟ್ಟ ಜೀವಿಗಳ ವಿಷಯದಲ್ಲೂ ಇದು ಸತ್ಯ. ದೊಡ್ಡ ಅಥವಾ ಬಲಿಷ್ಠ ಜೀವಿಗಳು ಚಿಕ್ಕ ಜೀವಿಗಳನ್ನು ಹಿಡಿದು ತಿನ್ನುತ್ತವೆ. ಆಹಾರ ಸರಪಳಿ ಮತ್ತು ಆಹಾರ ಜಾಲಗಳ ಸಮತೋಲನ ಇದರ ಮೇಲೆಯೇ ಅವಲಂಬಿತವಾಗಿದೆ. ಸರಳವಾಗಿ ನಾವು ಹೇಳುವುದಾದರೆ ಮಿಡತೆ ಹುಲ್ಲು ತಿನ್ನುತ್ತದೆ, ಕಪ್ಪೆ ಮಿಡತೆಯನ್ನು ತಿನ್ನುತ್ತದೆ, ಕಪ್ಪೆಯನ್ನು ಹಾವು ತಿನ್ನುತ್ತದೆ ಹಾಗೂ ಹಾವನ್ನು ಹದ್ದು ತಿನ್ನುತ್ತದೆ. ಇದು ನಾವು ಉದಾಹರಿಸಬಹುದಾದ ಅತಿ ಸರಳವಾದ ಆಹಾರ ಸರಪಳಿಯ ಉದಾಹರಣೆ. ಇಂಥ ಉದಹರಣೆಗಳು ಜಗತ್ತಿನಲ್ಲಿ ಬೇಕಾದಷ್ಟಿವೆ. ಆದರೆ ನಮ್ಮ ಸಾಮಾನ್ಯ ತಿಳುವಳಿಕೆಗೆ ವಿರುದ್ಧವಾಗಿ ಯಾವ ಜೀವಿ ಸಾಧಾರಣವಾಗಿ ಇನ್ನೊಂದು ಜೀವಿಗೆ ಬಲಿಯಾಗುತ್ತದೆ ಎಂದು ನಾವು ಭಾವಿಸುತ್ತೇವೋ ಅದೇ ಬೇಟೆಗಾರನನ್ನು ಕೊಂದು ತಿನ್ನುವ ಉದಾಹರಣೆಗಳೂ ಇವೆ ಎಂದರೆ ನಂಬುತ್ತೀರಾ? "ರಿವರ್ಸ್ ಪ್ರಿಡೇಶನ್" ಅಥವಾ ವಿಲೋಮ ಬೇಟೆ ಎಂದು ಕರೆಯಲಾಗುವ ಈ ಪ್ರಕ್ರಿಯೆ ಜೀವಜಗತ್ತಿನಲ್ಲೊಂದು ರೋಚಕ ಅಧ್ಯಾಯ. ಇದರ ಬಗ್ಗೆ ನಿಮಗೆಷ್ಟು ಗೊತ್ತು?

 

       ಕಪ್ಪೆಗಳನ್ನೇ ತಿನ್ನುವ ಲಾರ್ವಾಗಳು!

       ಕೀಟಗಳು ಜನಸಾಮಾನ್ಯರಿಗೆ ಪರಿಚಿತವಾದ ಜೀವಿಗಳು. ನಮಗೆ ಅವುಗಳಿಂದ ಎಷ್ಟೊಂದು ಪ್ರಯೋಜನವಿದ್ದರೂ ಅವುಗಳನ್ನು ಕ್ಷÄದ್ರ, ಕ್ಷÄಲ್ಲಕ ಜೀವಿಗಳೆಂದು ತಾತ್ಸಾರ ಮಾಡುತ್ತೇವೆ. ನಮಗೆಲ್ಲ ಸಾಮಾನ್ಯವಾಗಿ ಗೊತ್ತಿರುವಂತೆ ಕೀಟಗಳು ಒಂದೋ ನಮ್ಮ ಆಹಾರವಾದ ದವಸಧಾನ್ಯಗಳು ಅಥವಾ ಅವುಗಳನ್ನು ತಿನ್ನುವ ಗಿಡಗಂಟೆಗಳನ್ನು ತಿನ್ನುತ್ತವೆ, ಅಥವಾ ತಮಗಿಂ ತ ದುರ್ಬಲವಾದ ಚಿಕ್ಕ ಕೀಟಗಳನ್ನು ಹಿಡಿದು ತಿನ್ನುತ್ತವೆ. ಇದರ ಜೊತೆಗೆ ಕೀಟಗಳು ಹೇರಳ ಜೀವಿಪ್ರಭೇದಗಳಿಗೆ ಆಹಾರವೂ ಆಗಿವೆ. ಪಕ್ಷಿಗಳು, ಜೇಡಗಳು, ಕಪ್ಪೆಗಳು ಮತ್ತು ಸಣ್ಣ ಸಸ್ತನಿಗಳು ತಮ್ಮ ಆಹಾರಕ್ಕಾಗಿ ಕೀಟಗಳನ್ನು ಅವಲಂಬಿಸಿರುವ ಪ್ರಮುಖ ಜೀವಿವರ್ಗಗಳು. ಆದರೆ ಕಪ್ಪೆಗಳನ್ನೇ ಹಿಡಿದು ಭಕ್ಷಿಸುವ ಕೀಟಗಳಿವೆ ಎಂದರೆ ನಂಬುತ್ತೀರಾ? ನಿಜಕ್ಕೂ ಇದು ನಂಬಲಸಾಧ್ಯ, ಆದರೆ ಇದು ಸತ್ಯ. ಎಪೋಮಿಸ್ ಎಂಬ ಒಂದು ಜಾತಿಯ ಓಡುಹುಳುಗಳ ಲಾರ್ವಾಗಳಿಗೆ ಕಪ್ಪೆಗಳೇ ಪ್ರಮುಖ ಆಹಾರ. ಇವು ಬೇಟೆಯಾಡಲು ಬಳಸುವ ವಿಧಾನವೂ ಸ್ವಾರಸ್ಯಕರ. ನೆಲದ ಮೇಲೆ ಅಸಹಾಯಕವಾಗಿ ಬಿದ್ದು ಒದ್ದಾಡುತ್ತಿರುವ ಇವನ್ನು ಕಂಡ ಕೂಡಲೇ ಕಪ್ಪೆಗಳು ತಮ್ಮ ಬಲೆಗೆ ಒಂದು ಸುಲಭದ ಮಿಕ ಸಿಕ್ಕಿತೆಂದು ಭಾವಿಸುತ್ತವೆ. ಆದರೆ ಒಮ್ಮೆ ಕಪ್ಪೆ ಆ ಲಾರ್ವಾದ ಬಳಿ ಸಾರಿ ಅದನ್ನು ಹಿಡಿದಕೂಡಲೇ ಪರಿಸ್ಥಿತಿಯೇ ಬದಲಾಗುತ್ತದೆ. ಅದು ಕಪ್ಪೆಯ ದೇಹದ ಯಾವುದಾದರೂ ಒಂದು ಭಾಗವನ್ನು ತನ್ನ ಇಕ್ಕಳದಂಥ ದವಡೆಗಳಿಂದ ಹಿಡಿದುಕೊಂಡು ಜೀವಂತವಾಗಿಯೇ ಅದನ್ನು ತಿನ್ನಲು ಆರಂಭಿಸುತ್ತದೆ. ನೋಡಲು ಅತ್ಯಂತ ಭೀಕರವಾಗಿ ಕಾಣುವ ಈ ದೃಶ್ಯ ಪ್ರಕೃತಿ ವ್ಯವಸ್ಥೆಯ ಒಂದು ಭಾಗವೇ ಆಗಿದೆ. ಒಮ್ಮೆ ಹಿಡಿದ ಲಾರ್ವಾದಿಂದ ಏನು ಮಾಡಿದರೂ ಬಿಡಿಸಿಕೊಳ್ಳಲು ಕಪ್ಪೆಗೆ ಸಾಧ್ಯವಾಗುವುದಿಲ್ಲ. ಜೀವಂತವಾಗಿ ಲಾರ್ವಾಗೆ ಆಹಾರವಾಗುವ ದುರ್ಗತಿ ಅದರದ್ದಾಗುತ್ತದೆ. 

       ಈ ಲಾರ್ವಾಗಳು ಬೆಳೆದು ಓಡುಹುಳುಗಳಾದ ನಂತರವೂ ಇವು ಕಪ್ಪೆಗಳಿಗೆ ದುಃಸ್ವಪ್ನವಾಗಿಯೇ ಉಳಿಯುತ್ತವೆ. ಸುಮಾರು ಎರಡು ಸೆಂಟಿಮೀಟರ್‌ಗಳಷ್ಟೇ ಉದ್ದವಿರುವ ಇವು ತಮಗಿಂತಲೂ ನಾಲ್ಕಾರು ಪಟ್ಟು ದೊಡ್ಡದಿರುವ ಕಪ್ಪೆ, ಸಲಮ್ಯಾಂಡರ್ ಇತ್ಯಾದಿಗಳನ್ನು ಆರಾಮವಾಗಿ ಹಿಡಿದು ತಿನ್ನುತ್ತವೆ. ಇವು ತಮ್ಮ ಲಾರ್ವಾಗಳಂತೆ ಬರೇ ಕಪ್ಪೆಗಳನ್ನು ಮಾತ್ರ ತಿನ್ನುವುದಿಲ್ಲ, ಬೇರೆ ಚಿಕ್ಕಪುಟ್ಟ ಕೀಟಗಳನ್ನು ಹಾಗೂ ಇನ್ನಿತರ ಜೀವಿಗಳನ್ನೂ ತಿನ್ನುತ್ತದೆ ಎಂಬುದೊ೦ದೇ ಕಪ್ಪೆಗಳಿಗೆ ಸಮಾಧಾನದ ಸಂಗತಿ! 

       ಬೇಟೆಗಾರನೇ ಬಲಿಗೆ ಬಲಿಯಾಗುವ ಈ ವಿಚಿತ್ರ ವಿದ್ಯಮಾನ ಆರಂಭವಾಗಿದ್ದಾದರೂ ಹೇಗೆ ಎಂದು ಇದುವರೆಗೂ ನಮಗೆ ತಿಳಿದುಬಂದಿಲ್ಲ. ತಮ್ಮನ್ನು ತಿನ್ನಲು ಬರುವ ಈ ಕಪ್ಪೆಗಳನ್ನು ತಾವೇ ತಿನ್ನಬಹುದು ಎಂದು ಕೀಟಗಳು ಹೇಗೆ ಕಂಡುಕೊ೦ಡವು? ಬಹುಶಃ ಅವು ಮೊದಲಿಗೆ ಆತ್ಮರಕ್ಷಣೆಯ ವಿಧಾನವಾಗಿ ಕಪ್ಪೆಗಳ ಮೇಲೆ ಈ ರೀತಿ ದಾಳಿ ಮಾಡಲು ಆರಂಭಿಸಿದ್ದಿರಬಹುದು. ಕ್ರಮೇಣ ಕಪ್ಪೆಗಳನ್ನು ತಿನ್ನುವುದೂ ಸಾಧ್ಯ ಎಂದು ಅವು ಕಂಡುಕೊ೦ಡಿರಬಹುದು. ಇದೆಲ್ಲ ನಮ್ಮ ಊಹೆ ಮತ್ತು ತರ್ಕಗಳಷ್ಟೇ. ವಾಸ್ತವಸಂಗತಿ ಎಷ್ಟೋ ಸಹಸ್ರಮಾನಗಳ ಕಾಲದ ಪದರದೊಳಗೆ ಹೂತುಹೋಗಿದೆ.

 

       ಮೀನು, ಆಮೆಗಳನ್ನೇ ತಿನ್ನುವ ದೈತ್ಯಕೀಟಗಳು!

       ನಮ್ಮ ಮನೆಯಲ್ಲಿ ಹಾಸಿಗೆಯಲ್ಲಿ ಸೇರಿಕೊಂಡು ತೊಂದರೆ ಕೊಡುವ ತಿಗಣೆಗಳು ಎಲ್ಲರಿಗೂ ಚಿರಪರಿಚಿತ. ಅವುಗಳ ವರ್ಗಕ್ಕೇ ಸೇರಿದ ದೈತ್ಯ ಕೀಟವೊಂದು ಜಪಾನ್, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ವಾಸಿಸುತ್ತದೆ. ಇದರಲ್ಲಿ ಎರಡು ಸೆಂಟಿಮೀಟರ್‌ಗಳಿ೦ದ ಹಿಡಿದು ಹನ್ನೆರಡು ಸೆಂಟಿಮೀಟರ್‌ಗಳಷ್ಟು ಉದ್ದವಿರುವ ದೈತ್ಯ ಪ್ರಭೇದಗಳೂ ಅಸ್ತಿತ್ವದಲ್ಲಿವೆ. ಇವುಗಳನ್ನು ಜೈಂಟ್ ವಾಟರ್‌ಬಗ್ ಎನ್ನುತ್ತಾರೆ. ಕನ್ನಡದಲ್ಲಿ ಇವುಗಳನ್ನು ದೈತ್ಯ ಜಲಕೀಟಗಳು ಎನ್ನಬಹುದು. ಇವು ಸಹ ಕಪ್ಪೆ ಮತ್ತು ಚಿಕ್ಕಪುಟ್ಟ ಮೀನುಗಳನ್ನೇ ಹಿಡಿದು ತಿನ್ನುತ್ತವೆ. ಅಷ್ಟೇ ಅಲ್ಲ, ಒಮ್ಮೆ ಜಪಾನಿನಲ್ಲಿ ರಾತ್ರಿಯವೇಳೆ ಒಂದು ಕೀಟ ಆಮೆಮರಿಯೊಂದನ್ನು ತಿನ್ನುತ್ತಿದ್ದುದನ್ನು ಸಹ ವಿಜ್ಞಾನಿಗಳು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಇದರಲ್ಲೇ ಕೆಲವು ಪ್ರಭೇದಗಳು ಚಿಕ್ಕಪುಟ್ಟ ನೀರುಹಾವುಗಳನ್ನು ಸಹ ಹಿಡಿದು ತಿನ್ನುವುದನ್ನು ಕೂಡ ದಾಖಲಿಸಿದ್ದಾರೆ. 

       ಕಪ್ಪೆ ಹಾವನ್ನೇ ನುಂಗಿತ್ತಾ!

       ಹಾವು ಕಪ್ಪೆಯನ್ನು ನುಂಗುವುದು ಪ್ರಕೃತಿಸಹಜ ಪ್ರವೃತ್ತಿ. ಆದರೆ ಕಪ್ಪೆಯೇ ಹಾವನ್ನು ನುಂಗಿದರೆ? ಅಪರೂಪದಲ್ಲಿ ಅಪರೂಪವಾದರೂ ಇಂಥ ಪ್ರಕರಣಗಳು ಇವೆ. ಇತ್ತೀಚೆಗೆ ಹಸಿರು ಕಪ್ಪೆಯೊಂದರ ಬಾಯಿಯಲ್ಲಿ ಹಾವಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂಥ ಎಲ್ಲ ಚಿತ್ರಗಳೂ ವಿಶ್ವಾಸಾರ್ಹ ಅಲ್ಲದಿದ್ದರೂ ಕಪ್ಪೆಗಳು ಹಾವುಗಳನ್ನು ನುಂಗಿರುವ ಉದಾಹರಣೆಗಳು ಇವೆ. ಈ ಸಂದರ್ಭಗಳಲ್ಲೆಲ್ಲ ಕಪ್ಪೆಗಳು ಭಾರೀ ಗಾತ್ರದ ಗೂಳಿಕಪ್ಪೆ ಅಥವಾ ಅಂಥದ್ದೇ ಬೇರೆಜಾತಿಗಳಾಗಿದ್ದು ಹಾವುಗಳು ಚಿಕ್ಕ ಜಾತಿಯದ್ದಾಗಿದ್ದು ಕಂಡುಬ೦ದಿದೆ. ಮೂರು ಕಿಲೋಗ್ರಾಂ ಅಥವಾ ಅದಕ್ಕಿಂತಲೂ ಹೆಚ್ಚು ತೂಗುವ ಆಫ್ರಿಕಾದ ಗೋಲಿಯಾತ್ ಕಪ್ಪೆ ಜಗತ್ತಿನ ಅತಿದೊಡ್ಡ ಕಪ್ಪೆಯಾಗಿದ್ದು, ಇದು ಹಾವುಗಳನ್ನು ನುಂಗುವ ಪ್ರಮುಖ ಕಪ್ಪೆಯಾಗಿದೆ. ಜೊತೆಗೆ ಇದು ಚಿಕ್ಕಪುಟ್ಟ ಆಮೆಮರಿಗಳನ್ನು ಸಹ ಹಿಡಿದು ನುಂಗಬಲ್ಲದು. 

 

       ಹಕ್ಕಿಗಳನ್ನು ತಿನ್ನುವ ಸೂರ್ಯನ ಕುದುರೆ, ಜೇಡಗಳು

       ಹಕ್ಕಿಗಳು ಕೀಟಗಳನ್ನು ತಿನ್ನುವುದು ಸಾಮಾನ್ಯ ಸಂಗತಿ. ಆದರೆ ಕೀಟಗಳೇ ಹಕ್ಕಿಗಳನ್ನು ಹಿಡಿದು ತಿನ್ನುವುದೆಂದರೆ? ಇಂಥ ಕೀಟ ಇರುವುದು ನಿಜ. ದಕ್ಷಿಣ ಅಮೆರಿಕದ ಮಳೆಕಾಡುಗಳಲ್ಲಿ ಬೃಹದ್ಗಾತ್ರದ ಸೂರ್ಯಕುದುರೆಗಳು (ಪ್ರೇಯಿಂಗ್ ಮ್ಯಾಂಟಿಸ್) ವಾಸವಾಗಿವೆ. ನಮ್ಮಲ್ಲೂ ಒಂದೆರಡು ಇಂಚು ಉದ್ದದ ಸೂರ್ಯಕುದುರೆಗಳಿದ್ದರೂ ಅವು ತಮ್ಮ ಮೆನುವನ್ನು ಕೇವಲ ಚಿಟ್ಟೆ, ಮಿಡತೆಗಳಂಥ ಚಿಕ್ಕಪುಟ್ಟ ಕೀಟಗಳಿಗೆ ಸೀಮಿತಗೊಳಿಸಿಕೊಂಡಿವೆ. ಆದರೆ ದಕ್ಷಿಣ ಅಮೆರಿಕದ ಈ ದೈತ್ಯ ಸೂರ್ಯನ ಕುದುರೆಗಳು ಅರ್ಧ ಅಡಿಯಷು ಉದ್ದವಿರುತ್ತವೆ. ಅವಕ್ಕೆ ಬಲಿಯಾಗುವ ಬಡಪಾಯಿಗಳೆಂದರೆ ಝೇಂಕಾರದ ಹಕ್ಕಿಗಳು (ಹಮ್ಮಿಂಗ್ ಬರ್ಡ್). ಜಗತ್ತಿನಲ್ಲೇ ಅತ್ಯಂತ ಚಿಕ್ಕ ಗಾತ್ರದ ಹಕ್ಕಿಗಳು ಎಂಬ ಹೆಗ್ಗಳಿಕೆ ಹೊಂದಿರುವ ಈ ಹಕ್ಕಿಗಳಿಗೆ ಈ ಚಿಕ್ಕ ಗಾತ್ರ ವರವಾಗಿರುವಂತೆ ಸೂರ್ಯನ ಕುದುರೆಗಳ ವಿಷಯದಲ್ಲಿ ಶಾಪವೂ ಆಗಿದೆ. ತಮ್ಮ ಇಕ್ಕಳದಂಥ ತೋಳುಗಳಿಂದ ಹಿಡಿಯಲು ಸಾಧ್ಯವಿರುವ ಏನನ್ನೇ ಆದರೂ ಈ ಕೀಟಗಳು ಹಿಡಿದು ತಿನ್ನುತ್ತವೆ. ಝೇಂಕಾರದ ಹಕ್ಕಿಗಳ ಆಹಾರವೇ ಹೂವಿನ ಮಕರಂದ. ಮಕರಂದ ಹೀರಲು ಅವು ಹೂಗಳ ಹತ್ತಿರ ಬಂದಾಗ ತಮ್ಮ ಇಕ್ಕಳಗಳಿಂದ ಅವುಗಳನ್ನು ಹಿಡಿಯುತ್ತವೆ. ಈ ಹಠಾತ್ ದಾಳಿಯಿಂದ ಕಂಗಾಲಾಗುವ ಹಕ್ಕಿ ಇನ್ನೂ ಸಾಯುವ ಮೊದಲೇ ಸೂರ್ಯನ ಕುದುರೆ ಅದನ್ನು ತಿನ್ನಲಾರಂಭಿಸುತ್ತದೆ. ನಿಜಕ್ಕೂ ಇದೊಂದು ಭೀಭತ್ಸ ದೃಶ್ಯವೇ ಸರಿ.

       ಕೀಟಗಳಂತೆಯೇ ಜೇಡಗಳು ಸಹ ಸಾಮಾನ್ಯವಾಗಿ ಹಕ್ಕಿಗಳ ಆಹಾರ. ಆದರೆ ಇದಕ್ಕೆ ವಿರುದ್ಧವಾಗಿ ಹಕ್ಕಿಗಳನ್ನೇ ಕಬಳಿಸುವ ಜೇಡಗಳೂ ಇವೆ! ಮೆಕ್ಸಿಕೋದ ದೈತ್ಯ ಗೋಲಿಯತ್ ಬರ್ಡ್ ಈಟಿಂಗ್ ಸ್ಪೆöÊಡರ್ ಎಂಬ ಟ್ಯಾರಂಟುಲಾ ಜಾತಿಗೆ ಸೇರಿದ ಜೇಡವನ್ನು ಬಿಡಿ, ನಮ್ಮ ದೇಶದಲ್ಲೇ ಬಲೆಯಲ್ಲಿ ಕೀಟಗಳನ್ನು ಸಿಲುಕಿಸಬಲ್ಲ ಭಾರೀ ಜೇಡಗಳಿವೆ. ಗೋಲ್ಡನ್ ಸಿಲ್ಕ್ ಆರ್ಬ್ ವೀವಿಂಗ್ ಸ್ಪೆöÊಡರ್ ಎಂಬ ಭಾರೀ ಜೇಡ ನೇಯುವ ಬಲೆ ಎಷ್ಟೊಂದು ಬಲಿಷ್ಠವಾಗಿರುತ್ತದೆಯೆಂದರೆ ಅದರಲ್ಲಿ ಸಿಲುಕಿದ ಗುಬ್ಬಚ್ಚಿಯಂಥ ಚಿಕ್ಕಪುಟ್ಟ ಕೀಟಗಳಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ನಮ್ಮ ಕಾಡುಗಳಲ್ಲಿ ಹೀಗೆ ಜೇಡಗಳಿಗೆ ಹಕ್ಕಿಗಳು ಬಲಿಯಾದ ಉದಾಹರಣೆಗಳು ಸಾಕಷ್ಟಿವೆ. 

       ಜೇಡಗಳ ಆಹಾರ ಕೀಟಗಳು ಎಂಬುದು ಸರ್ವವಿದಿತ. ಆದರೆ ಜೇಡಗಳು ಹೇಗೆ ತಮ್ಮನ್ನು ತಿನ್ನಬಹುದಾದ ಹಕ್ಕಿಗಳನ್ನೇ ಬಲೆಯಲ್ಲಿ ಕೆಡವಿ ತಿನ್ನುತ್ತವೆಯೋ ಹಾಗೆ ಕೀಟಸಾಮ್ರಾಜ್ಯದಲ್ಲಿ ಕೂಡ ಜೇಡಗಳನ್ನು ಬಲಿಹಾಕುವ ಕಣಜಗಳಿವೆ. ಪಾಂಪಿಲಿಡೇ ಎಂಬ ಕುಟುಂಬಕ್ಕೆ ಸೇರಿದ ಸುಮಾರು ಐದುಸಾವಿರ ಪ್ರಭೇದದ ಕಣಜಗಳು ಸ್ಪೆöÊಡರ್ ವಾಸ್ಪ್ ಎಂದೇ ಹೆಸರಾಗಿವೆ, ಬೇರೆ ಕಣಜಗಳು ಮೊಟ್ಟೆ ಇಡಲು ಸಾಮಾನ್ಯವಾಗಿ ಕೀಟಗಳ ಲಾರ್ವಾಗಳನ್ನು ಆಯ್ದುಕೊಂಡರೆ ಈ ಕಣಜಗಳು ಜೇಡಗಳನ್ನೇ ಆಯ್ದುಕೊಳ್ಳುತ್ತವೆ! ತನ್ನ ವಿಷದ ಕೊಂಡಿಯಿ೦ದ ವಿಷ ಚುಚ್ಚಿ ಜೇಡವನ್ನು ಪ್ರಜ್ಞೆತಪ್ಪಿಸಿ ಹೊತ್ತೊಯ್ಯುತ್ತದೆ. ಆಮೇಲೆ ಅದನ್ನು ಗೂಡಿನೊಳಗೆ ಬಂಧಿಸಿ ಅದರ ಮೇಲೆ ಮೊಟ್ಟೆಯಿಡುತ್ತದೆ. ಮೊಟ್ಟೆಯೊಡೆದು ಹೊರಬರುವ ಕನಜದ ಲಾರ್ವಾಕ್ಕೆ ಜೇಡವೇ ಆಹಾರವಾಗುತ್ತದೆ. ಅದರಲ್ಲೂ ಟ್ಯಾರಂಟುಲಾ ಹಾಕ್ ಎಂಬ ಒಂದು ಜಾತಿಯ ಕಣಜಗಳಂತೂ ಹಕ್ಕಿ, ಇಲಿ, ಕಪ್ಪೆಗಳನ್ನೂ ಬೇಟೆಯಾಡುವ ಉತ್ತರ ಹಾಗೂ ದಕ್ಷಿಣ ಅಮೆರಿಕಾದ ದೈತ್ಯ ಟ್ಯಾರಂಟುಲಾ ಜೇಡಗಳನ್ನೇ ಹಿಡಿದು ತನ್ನ ಗೂಡೊಳಕ್ಕೆ ಸಾಗಿಸುತ್ತದೆ! ಜಗತ್ತಿನಲ್ಲಿ ಬುಲೆಟ್ ಆಂಟ್ ಎಂಬ ಇರುವೆಗಳನ್ನು ಹೊರತುಪಡಿಸಿ ಅತಿಹೆಚ್ಚು ನೋವನ್ನುಂಟುಮಾಡುವ ಕಡಿತವೆಂದರೆ ಟ್ಯಾರಂಟುಲಾ ಹಾಕ್ ಕಣಜದ್ದು. ಅದರಿಂದ ಕಡಿಸಿಕೊಂಡವರು ಅದರ ನೋವನ್ನು ದೇಹದೊಳಕ್ಕೆ ಬೆಂಕಿಯಲ್ಲಿ ಕಾಯಿಸಿದ ಮೊಳೆಯನ್ನು ಚುಚ್ಚಿದಂತೆ ಎಂದು ಬಣ್ಣಿಸಿದ್ದಾರೆ. 

       ಟ್ಯಾರಂಟುಲಾ ಜೇಡಗಳು ನೋಡಿದೊಡನೆಯೇ ಭಯ ಹುಟ್ಟಿಸುವಂಥ ಬೃಹತ್ ಜೇಡಗಳು. ಅವುಗಳ ಮುಖ್ಯ ಆಹಾರವೇ ಚಿಕ್ಕ ಕಪ್ಪೆಗಳು, ಹಲ್ಲಿಗಳು, ಹಾವುಗಳು, ಹಕ್ಕಿಗಳು, ಇಲಿಗಳು ಇತ್ಯಾದಿಗಳು. ಆದರೆ ಅರ್ಜೆಂಟೀನಾದಲ್ಲಿ ಹಾರ್ನ್ಡ್ ಫ್ರಾಗ್ ಎಂಬ ಧಡೂತಿ ಕಪ್ಪೆಯೊಂದಿದೆ. ಈ ಕಪ್ಪೆ ಟ್ಯಾರಂಟುಲಾಗಳನ್ನೇ ಹಿಡಿದು ನುಂಗಬಲ್ಲದು! ವಿಪರೀತ ಧೈರ್ಯಶಾಲಿಯಾದ ಈ ಕಪ್ಪೆ ತನ್ನ ಗಾತ್ರಕ್ಕೆ ಸರಿಸಮಾನವಾದ ಬೇಟೆಯನ್ನು ಕೂಡ ಹಿಡಿಯಲು ಹಿಂದೆ ಮುಂದೆ ನೋಡುವುದಿಲ್ಲ. ಅಷ್ಟೇ ಅಲ್ಲ, ಮನುಷ್ಯರು ಕೂಡ ಇವುಗಳನ್ನು ಬೆದರಿಸಲು ಪ್ರಯತ್ನಿಸಿದರೆ ಇವು ನೋವಾಗವಂತೆ ಕಚ್ಚಬಲ್ಲವು ಕೂಡ. 

       ತಮ್ಮ ಬೇಟೆಗಾರರನ್ನೆ ಹಿಡಿದು ತಿನ್ನಬಲ್ಲ ಸಾಮರ್ಥ್ಯದಲ್ಲಿ ಬಹುಶಃ ಇರುವೆಗಳನ್ನು ಮೀರಿಸುವಂಥ ಜೀವಿಗಳು ಬೇರೆ ಇಲ್ಲ. ಸಾಮಾನ್ಯವಾಗಿ ಕ್ಷÄದ್ರಕೀಟಗಳೆಂದು ಎಲ್ಲರೂ ಅವುಗಳನ್ನು ಕೇವಲವಾಗಿ ಕಾಣುತ್ತಾರೆ. ಇರುವೆಗಳು ಹೇರಳ ಜೀವಿಗಳಿಗೆ ಆಹಾರವಾಗಿಯೂ ಒದಗುತ್ತವೆ ಕೂಡ. ಕಪ್ಪೆ, ಹಲ್ಲಿ ಇತ್ಯಾದಿ ಜೀವಿಗಳು ಇರುವೆಗಳನ್ನು ತಿನ್ನುತ್ತವೆ. ಆದರೆ ಇರುವೆಗಳ ಸಂಖ್ಯೆ ಕಡಿಮೆಯಿದ್ದಾಗ ಮಾತ್ರ ಇದು ಸಾಧ್ಯವಾದೀತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬ೦ತೆ ಇರುವೆಗಳ ಸಾಲಿನಲ್ಲಿ ಅಥವಾ ಗೂಡಿನೊಳಗೇನಾದರೂ ಕಪ್ಪೆ, ಹಲ್ಲಿಗಳು ನುಗ್ಗಿದರೆ ಅವುಗಳ ಆಯುಷ್ಯ ಮುಗಿಯಿತೆಂದೇ ಅರ್ಥ. ಉಗ್ರ ದಾಳಿಕೋರರಾದ ಇರುವೆಗಳು ಮೈಯೆಲ್ಲ ಮುತ್ತಿ ಅವುಗಳನ್ನು ಕೊಂದು ಸಾಗಿಸುತ್ತವೆ. 

 

       ಬುದ್ಧಿ ಇದ್ದವನು ಬಾಳಿಯಾನು!

       ನಮ್ಮಲ್ಲಿ ಲಕ್ಷಿö್ಮÃಚೇಳು, ಕಾಳೀಮಾತೆಯ ಕೊರಳ ಆಭರಣ ಎಂದೆಲ್ಲ ಕರೆಯಲ್ಪಡುವ ಶತಪದಿಯೊಂದಿದೆ. ಸ್ಕೋಲೋಪೆಂಡ್ರಾ ಎಂಬ ಜೀನಸ್‌ಗೆ ಸೇರಿದ ಈ ಶತಪದಿಗಳು ಜಗತ್ತಿನಾದ್ಯಂತ ಇವೆ. ಇವುಗಳ ಪೈಕಿ ಒಂದಡಿ ಉದ್ದಕ್ಕೆ ಬೆಳೆಯುವ ದೈತ್ಯ ಶತಪದಿಗಳೂ ಇವೆ. ಇವು ಅಪ್ಪಟ ಮಾಂಸಾಹಾರಿಗಳು. ಸಣ್ಣಪುಟ್ಟ ಕೀಟಗಳನ್ನಲ್ಲದೆ ಕಪ್ಪೆ, ಹಾವು, ಬಾವಲಿ ಮತ್ತು ಗುಬ್ಬಚ್ಚಿ ಗಾತ್ರದ ಹಕ್ಕಿಗಳನ್ನೂ ಹಿಡಿದು ತಿನ್ನಬಲ್ಲ ಭಯಾನಕ ಬೇಟೆಗಾರರು ಇವು. ಆದರೆ ಸೇರಿಗೆ ಸವ್ವಾಸೇರು ಎಂಬ೦ತೆ ಈ ಭಯಾನಕ ಬೇಟೆಗಾರರನ್ನೇ ಹಿಡಿದು ತಿನ್ನಬಲ್ಲ ಕೀಟಗಳಿವೆ ಎಂದರೆ ನಂಬುತ್ತೀರಾ? ಈ ಶತಪದಿಗಳು ತಮ್ಮ ಬೇಟೆಯನ್ನು ಹಿಡಿದು ಅವುಗಳ ದೇಹಕ್ಕೆ ವಿಷ ಚುಚ್ಚಿ ಅವು ಪ್ರಜ್ಞಾಹೀನವಾಗುವಂತೆ ಮಾಡಿ ಅವುಗಳನ್ನು ತಿನ್ನುತ್ತವೆ. ಆದರೆ ವಾರಿಯರ್ ಬೀಟಲ್ ಎಂದು ಕರೆಯಲ್ಪಡುವ ಒಂದು ಬಗೆಯ ದುಂಬಿಗಳು ಈ ವಿಷಕಾರಿ ಶತಪದಿಗಳನ್ನೂ ತಿನ್ನುತ್ತವೆ. ದುಂಬಿಗಳ ಮೈಮೇಲೆ ದಪ್ಪನೆಯ ಚಿಪ್ಪು ಇರುವುದರಿಂದ ಶತಪದಿಗಳ ಕೊಂಡಿಗಳು ಅವುಗಳನ್ನು ಭೇದಿಸಲಾರವು. ಹಾಗಾಗಿ ಅವುಗಳ ದೇಹಕ್ಕೆ ವಿಷವನ್ನು ಚುಚ್ಚಲು ಅವಕ್ಕೆ ಸಾಧ್ಯವಾಗುವುದಿಲ್ಲ. ದುಂಬಿಗಳಿಗಾದರೋ ಬಲಿಷ್ಠ ಕೊಂಡಿಗಳಿರುವುದರಿ೦ದ ಅವು ಸುಲಭವಾಗಿ ಶತಪದಿಯನ್ನು ಅಡ್ಡಡ್ಡ ಕತ್ತರಿಸಿ ತಿನ್ನಬಲ್ಲವು!

       ಇನ್ನು ಅಪರೂಪದಲ್ಲಿ ಅಪರೂಪವಾದರೂ ಆಗಾಗ ಕಪ್ಪೆಗಳು ಹಾಗೂ ಹಲ್ಲಿಗಳು ಸಹ ಶತಪದಿಗಳನ್ನು ತಿಂದ ಉದಾಹರಣೆಗಳಿವೆ. ಹಲ್ಲಿ, ಕಪ್ಪೆಗಳು ಶತಪದಿಗಳನ್ನು ತಿನ್ನಬೇಕೆಂದರೆ ಮೊದಲಿಗೇ ಅವುಗಳ ತಲೆಗೆ ಬಾಯಿ ಹಾಕಿ ಅವುಗಳ ವಿಷದ ಕೊಂಡಿಗಳನ್ನು ಪ್ರಯೋಜನಕ್ಕೆ ಬಾರದಂತೆ ಮಾಡಬೇಕು. ವಿಷದ ಕೊಂಡಿಗಳನ್ನು ಪ್ರಯೋಗಿಸುವ ಅವಕಾಶವೇನಾದರೂ ಅವಕ್ಕೆ ಸಿಕ್ಕಿದರೆ ಅಲ್ಲಿಗೆ ಹಲ್ಲಿ, ಕಪ್ಪೆಗಳ ಕಥೆ ಮುಗಿದಂತೆ. ಹಾಗಲ್ಲದೆ ಜಾಣ್ಮೆಯಿಂದ ಮೊದಲೇ ಅವುಗಳ ತಲೆ ಹಿಡಿದರೆ ಹಲ್ಲಿ ಅಥವಾ ಕಪ್ಪೆ ಗೆದ್ದಂತೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಯುದ್ಧದಲ್ಲಿ ಶತಪದಿಗಳೇ ಗೆಲ್ಲುವುದು. 

 

       ಮೊಸಳೆಗಳನ್ನೇ ನುಂಗುವ ಮಹಾಸರ್ಪಗಳು!

       ಇನ್ನು ಕೆಲವೊಂದು ಸಂದರ್ಭಗಳಲ್ಲಿ ಚಿಕ್ಕಗಾತ್ರದ, ಚಿಕ್ಕವಯಸ್ಸಿನ ಬೇಟೆಗಾರರನ್ನು ದೊಡ್ಡಗಾತ್ರದ ಪ್ರೌಢ ಬಲಿಪ್ರಾಣಿಗಳು ತಿನ್ನುತ್ತವೆ. ಆದರೆ ಅದೇ ಬಲಿಪ್ರಾಣಿಗಳು ಬೆಳೆದು ದೊಡ್ಡವಾದ ಬಳಿಕ ಬೇಟೆಗಾರರನ್ನೇ ಹಿಡಿದು ನುಂಗುತ್ತವೆ! ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ದಕ್ಷಿಣ ಅಮೆರಿಕಾದ ಅನಕೊಂಡಾ (ದಕ್ಷಿಣ ಅಮೆರಿಕಾದ ಬೃಹತ್ ಹೆಬ್ಬಾವುಗಳು) ಮತ್ತು ಕೇಮ್ಯಾನ್‌ಗಳ (ಇವು ಒಂದು ಜಾತಿಯ ಮೊಸಳೆಗಳು) ಮೇಲಾಟ. ಅನಕೊಂಡಾದ ಮರಿಗಳನ್ನು ಕೇಮ್ಯಾನ್‌ಗಳು ತಿನ್ನುತ್ತವೆ. ಆದರೆ ಅನಕೊಂಡಾ ಬೆಳೆದು ಪ್ರೌಢಾವಸ್ಥೆಗೆ ಬಂದಮೇಲೆ ಕೇಮ್ಯಾನ್‌ಗಳನ್ನೇ ಹಿಡಿದು ನುಂಗುತ್ತವೆ!

       ಹೀಗೆ ಜೀವಜಗತ್ತಿನಲ್ಲಿ ಪ್ರತಿನಿತ್ಯ ನಮ್ಮ ಗಮನಕ್ಕೇ ಬಾರದಂಥ ವಿಸ್ಮಯಗಳು ಘಟಿಸುತ್ತಿರುತ್ತವೆ. ಒಟ್ಟಿನಲ್ಲಿ ಯಾರು ಯಾರನ್ನು ತಿಂದರೂ ಅದರ ಉದ್ದೇಶ ಒಂದೇ- ತನ್ನ ಹೊಟ್ಟೆ ಹೊರೆಯುವುದು. ಯಾವ ಜೀವಿಯೂ ಪ್ರಜ್ಞಾಪೂರ್ವಕವಾಗಿ ಇನ್ನೊಂದು ಜೀವಿಗೆ ನೋವುಂಟುಮಾಡುವ ಉದ್ದೇಶದಿಂದ ಅದನ್ನು ಕೊಲ್ಲುವುದಿಲ್ಲ. ನಾವೂ ಈ ಪ್ರಕೃತಿವಿಸ್ಮಯವನ್ನು ನೋಡಿ ಆನಂದಿಸೋಣ ಮತ್ತು ಇಂಥ ಅದ್ಭುತ ಪ್ರಕೃತಿಯನ್ನು ಕಾಪಾಡಲು ನಮ್ಮ ಕೈಲಾದ ಪ್ರಯತ್ನ ಮಾಡೋಣ, ಅಲ್ಲವೇ?

 




ProfileImg

Written by Srinivasa Murthy

Verified

0 Followers

0 Following