“ಅಯ್ಯೋ ಅಪ್ಪು... ಗಂಟೆ ಏಳು ಮೂವತ್ತು! ಕಾಲೇಜಿಗೆ ಹೋಗಲ್ವೇನೇ?”
ಮೂರನೇ ಬಾರಿ ಅಂಬಿಕಾರವರು ತಮ್ಮ ಮಗಳನ್ನು ಎಬ್ಬಿಸುತ್ತಿರುವುದು.
ಈ ಬಾರಿ ಗಂಟೆ ಏಳು ಮೂವತ್ತು ಎಂದು ತನ್ನ ತಾಯಿ ಹೇಳಿದ ಕಾರಣ ಐದು ನಿಮಿಷ ಎನ್ನದೇ ಚಾಪೆಯಿಂದ ದಿಗ್ಗನೇ ಎದ್ದು ಕೂತ ಅಪರ್ಣಳ ಕಣ್ಣು ಹೊರಳಿದ್ದು ಮಾತ್ರ ಗಡಿಯಾರದ ಕಡೆಗೆ. ನೋಡಿದರೆ ಸಮಯ ನಿಜವಾಗಿಯೂ ಏಳು ಮೂವತ್ತರ ಸಮೀಪಿಸಿತ್ತು.
ಗಡಿಬಿಡಿಯಲ್ಲಿ ಚಾಪೆಯಿಂದ ಮೇಲೆದ್ದ ಅಪರ್ಣಳ ನಿದ್ದೆಯೆಲ್ಲಾ ಅದೆಲ್ಲಿಗೆ ಹಾರಿ ಹೋಗಿತ್ತೋ ಅವಳೇ ಬಲ್ಲಳು. ಚಾಪೆಯಿಂದ ಎದ್ದವಳು ಚಾಪೆಯನೂ ಕೂಡ ಮಡಿಚದೇ ಬಚ್ಚಲು ಮನೆಗೆ ಓಡಿದಳು ತುಂಟಿ.
ಅವಳ ಅವಸ್ಥೆ ಕಂಡು ನಗುತ್ತಾ ಅಂಬಿಕಾರವರು ತಾನೇ ಚಾಪೆ ಮಡಿಚತೊಡಗಿದರು. ದಿನ ಬೆಳಗಾದರೆ ಇದೇ ಅವಸ್ಥೆಯಲ್ಲವೇ ಅವರ ಮನೆಯಲ್ಲಿ.
"ದಾಯೆಗ್ ದೆ ಮೆಂತಿನಿ ಆಲೆನ್ ನನಲ ಜೆಪ್ಪೊಡಿತ್ತ್ಂಡ್ ಆಲ್, ಕಾಲೇಜ್ಗ್ ಎಂಕುಲು ಪೋಯಿ” (ತುಳು ಭಾಷೆ).
ಅರ್ಥ:ಯಾಕೆ ಎಬ್ಬಿಸಿದ್ದು ಅವಳನ್ನು ಇನ್ನೂ ಮಲಗ್ಬೇಕಿತ್ತು, ಕಾಲೇಜಿಗೆ ನಾವು ಹೋಗುವ ಎಂದು ಅಜ್ಜಿ ಗಿರಿಜಮ್ಮನವರು ತಮ್ಮ ಮೊಮ್ಮಗಳಿಗೆ ಬೈಯುತ್ತಾ ಬಾಯಿಗೆ ಎಲೆ ಅಡಿಕೆಯನ್ನು ತುಂಬಿಸುವುದರಲ್ಲಿ ಕಾರ್ಯನಿರತರಾಗಿದ್ದರು.
ಅಜ್ಜಿಯ ಬೈಗುಳದ ನಡುವೆಯೂ ಬೆಳಗ್ಗಿನ ಮಜ್ಜನ ಮುಗಿಸಿದ ಅಪರ್ಣ ಬಚ್ಚಲುಮನೆಯಿಂದ ಓಡಿಕೊಂಡು ಬಂದು ನಿಂತದ್ದು ಮಾತ್ರ ಮನೆಯಂಗಳದಲ್ಲಿರುವ ಬಾವಿಯ ಮುಂದೆ . ಬೇಗ ಬೇಗನೆ ಬಾವಿಯಿಂದ ನೀರು ಸೇದಿ ತುಳಸಿ ಕಟ್ಟೆಗೆ ಪೂಜೆ ಮಾಡಿ, ತಲೆ ಬಾಚುತ್ತಿದ್ದ ತನ್ನ ತಂಗಿ ವಿನ್ನುವಿನ ಕೂದಲನ್ನು ಕೆದರಿಸಿ ಒಳಗೋಡಿದಳು.
"ಅಕ್ಕಾ..." ಎಂದು ತಂಗಿ ಚೀರಿ ಹೊಡೆಯುವ ಮುನ್ನವೇ ಅಲ್ಲಿಂದ ಕಾಲ್ಕಿತ್ತ ಅಪರ್ಣ ಹೋಗಿ ನಿಂತದ್ದು ಕನ್ನಡಿಯ ಮುಂದೆ.
ಕನ್ನಡಿಯ ಮುಂದೇನೋ ಹೋಗಿ ನಿಂತಳು ಆದರೆ ತಲೆ ಬಾಚಲು ಬಾಚಣಿಗೆ ಮಾತ್ರ ಕಾಣಿಸುತ್ತಿಲ್ಲ . "ಅಯ್ಯೋ ಇಲ್ಲೇ ಇತ್ತಲ್ಲ ಎಲ್ಲಿ ಹೋಯ್ತು?" ಎಂದು ಗಡಿಬಿಡಿಯಲ್ಲಿ ಬಾಚಣಿಗೆ ಹುಡುಕುತ್ತಲೇ "ವಿನ್ನೂ ನನ್ನ ಬಾಚಣಿಗೆ ನೋಡಿದ್ಯೇನೆ?" ಎಂದು ತಂಗಿಗೆ ಅಲ್ಲಿಂದಲೇ ಒಂದು ಕೂಗು ಹಾಕಿದಳು.
"ಹಾ, ನೋಡಿದೆ ಅಕ್ಕ. ಆಗ ಅಡುಗೆ ಮನೆಯಲ್ಲಿ ಡ್ಯಾನ್ಸ್ ಮಾಡ್ತಾ ಇತ್ತು" ಎಂದು ವಿನ್ನು ಅಕ್ಕನ ಮಾತಿಗೆ ತುಂಟ ಉತ್ತರ ಕೊಟ್ಟಾಗ ಬಂದುಬಿಟ್ಟಿತು ಅಪರ್ಣಳಿಗೆ ಎಲ್ಲಿಲ್ಲದ ಕೋಪ.
"ಹೋಗಿ ಹೋಗಿ ನಿನ್ಹತ್ರ ಕೇಳ್ತೀನಲ್ಲ,ನನಗೆ ಬುದ್ಧಿ ಇಲ್ಲ!" ಎಂದು ಬಯ್ಯುತ್ತಾ ತಂಗಿಯ ಕೈಯ್ಯಲ್ಲಿದ್ದ ಬಾಚಣಿಗೆ ಕಸಿದುಕೊಂಡು ಓಡಿದಳು ಕಳ್ಳಿ .
"ನಿನಗೆ ಬುದ್ಧಿ ಇಲ್ಲ ಅಂತ ಅದ್ಯಾವಾಗಲೋ ಗೊತ್ತಾಗಿದೆ ಬಿಡು! ಅದಿಕ್ಕೆ ತಾನೇ ದಿನಾ ಹೀಗೆ ರಾಕ್ಷಸಿ ತರಾ ಆಡೋದು ನೀನು" ಗೊಣಗಿಕೊಂಡವಳೇ ತಲೆ ಕಟ್ಟುವುದನ್ನೇ ನಿಲ್ಲಿಸಿ ದೋಸೆ ತಿನ್ನಲು ಅಡುಗೆಮನೆಯತ್ತ ಹೊರಟಳು.
ಇತ್ತ ಅವಸರವಸರವಾಗಿ ತಲೆ ಬಾಚಿದ ಅಪರ್ಣ ತನ್ನ ಕಾಲೇಜು ಯೂನಿಫಾರಂ ಹಿಡಿದು ಅದಕ್ಕೆ ಒಪ್ಪವಾಗಿ ಇಸ್ತ್ರೀ ಹಾಕಿ ಕುರ್ಚಿ ಮೇಲಿಟ್ಟು ದಾಪುಗಾಲಿಡುತ್ತಾ "ಅಮ್ಮಾ ದೋಸೆ" ಎಂದರಚುತ್ತಲೇ ಒಂದೇ ಉಸಿರಿಗೆ ಅಡುಗೆ ಮನೆಗೆ ಓಡಿ ಬಂದಿದ್ದಳು. ಇವಳ ಅವಸ್ಥೆ ನೋಡಿ ನಗುತ್ತಾ ಬಟ್ಟಲಿಗೆ ಬಿಸಿ ಬಿಸಿ ದೋಸೆ ಹಾಕಿದರು ಅವಳ ತಾಯಿ ಅಂಬಿಕಾರವರು.ಹಸಿವಿನಿಂದ ಚುರುಗುಡುತ್ತಿದ್ದ ಹೊಟ್ಟೆಯನ್ನು ದೋಸೆ ತಿಂದು ಶಾಂತ ಮಾಡಿದಳು ಅಪರ್ಣ. "ಇನ್ನು ಒಂದು ದೋಸೆ ತಿನ್ನು ಕೂಸೆ" ತಾಯಿ ಹೇಳುತ್ತಿರುವಾಗ ಅಲ್ಲಿಗೇ ಅಡ್ಡ ಬಾಯಿ ಹಾಕಿದವಳು "ಇನ್ನೂ ಒಂದು ದೋಸೆ ತಿಂದರೆ ನಾನು ಕ್ಲಾಸ್ನ ಹೊರಗೆ ನಿಲ್ಲಬೇಕಾಗುತ್ತಷ್ಟೇ.. ಸಾಕು ನಂಗಿಷ್ಟು." ಎಂದು ಹೇಳುತ್ತಾ ಕೈ ತೊಳೆದು ಅಲ್ಲಿಂದ ಕೋಣೆಗೆ ಓಡಿ ಬೇಗ ಬೇಗ ಯೂನಿಫಾರಂ ತೊಟ್ಟು ಹಣೆಗೊಂದು ಪುಟ್ಟ ಬಿಂದಿಯಿಟ್ಟು ಹೋಮ್ ವರ್ಕ್ ಮಾಡಿಟ್ಟ ಪುಸ್ತಕವನ್ನೆಲ್ಲಾ ತಂಗಿಗೆ ಪೂಸಿ ಹೊಡೆದು ಬ್ಯಾಗಿಗೆ ಹಾಕಿಸಿಕೊಳ್ಳುತ್ತಾ "ಅಮ್ಮಾ ನೀರು" ಎಂದು ಕಿರುಚುತ್ತಾ ಐಡಿಕಾರ್ಡು ಹಾಕುವ ಹೊತ್ತಿಗೆ ಅಂಬಿಕಾರವರು "ಅಲ್ವೇ ಅಪ್ಪು, ದಿನಾ ಒಂಚೂರು ಬೇಗ ಎದ್ರೆ ಹೀಗೆ ಗಡಿಬಿಡಿಲಿ ಹೊರಡೋ ರಗಳೆ ಬೇಕೇನೇ ನಿಂಗೆ? ಒಂಚೂರು ಬೇಗ ಏಳೋಕಾಗಲ್ವಾ ನಿಂಗೆ?"ಬಾಟಲಿಯಲ್ಲಿ ಬಿಸಿನೀರು ತುಂಬಿಸಿ ಬಂದವರು ಪ್ರತಿದಿನದ ಮಾತನ್ನು ಇಂದೂ ಅಂದರು.
"ಅಯ್ಯೋ ಹೋಗಮ್ಮ ನೀನು.. ಬೇಗ ಎದ್ದು ಏನ್ ಮಾಡೋಕಿದೆ ನೀನೇ ಹೇಳು.. ಹೀಗೆ ಲೇಟಾಗೆದ್ರೇನೆ ಕಾಲೇಜಿಗೆ ಬೇಗ ತಲುಪೋದು. ನನ್ ಲಾಜಿಕೆಲ್ಲ ನಿಂಗ್ ಗೊತ್ತಾಗಲ್ಲ ಬಿಡು" ಎಂದವಳು ನೀರಿನ ಬಾಟಲನ್ನು ಬ್ಯಾಗಿನಲ್ಲಿ ಹಾಕಿ ಪುಸ್ತಕವಿಟ್ಟ ಕಾರಣಕ್ಕೆ ತಂಗಿಗೆ ಥ್ಯಾಂಕ್ಸ್ ಹೇಳಿ ಅವಳ ಕೂದಲಿನ್ನೆಳೆಯುತ್ತಾ ಓಡಿದ್ದು ಸೀದಾ ಮನೆಯಂಗಳಕ್ಕೆ. ಚಪ್ಪಲಿ ಹಾಕುತ್ತಾ ತನ್ನ ಕೈಯಲ್ಲಿರುವ ವಾಚ್ನ ಕಡೆಗೆ ಕಣ್ಣು ಹೊರಳಿಸಿ ಸಮಯ ನೋಡುವಾಗ ಗಂಟೆ ಎಂಟು! "ಅಯ್ಯೋ ತಡವಾಯ್ತು! ಅಮ್ಮ ಅಜ್ಜಿ ಕಾಲೇಜಿಗೆ ಹೋಗಿ ಬರ್ತೀನಿ ವಿನ್ನು ಟಾಟಾ" ಎಂದು ಹೇಳುತ್ತಾ ಹೆಚ್ಚುಕಮ್ಮಿ ಓಡುತ್ತಲೇ ಹದಿನೈದು ನಿಮಿಷಗಳ ದಾರಿಯನ್ನು ಹತ್ತು ನಿಮಿಷದಲ್ಲಿ ಮುಗಿಸುವ ಇರಾದೆ ಅಪರ್ಣಳದ್ದು ."ಮೆಲ್ಲ ಅಪ್ಪು. ನಿಧಾನಕ್ಕೆ ಹೋಗು.ಹುಷಾರು" ಎಂದು ತಾಯಿ ಹೇಳುವುದು ಪ್ರತಿನಿತ್ಯದ ಶುಭನುಡಿ ಅಪರ್ಣಳಿಗೆ .
**********
ಅಂತೂ ಇಂತೂ ಹದಿನೈದು ನಿಮಿಷದ ದಾರಿಯನ್ನು ಹತ್ತು ನಿಮಿಷದಲ್ಲಿ ಮುಗಿಸಿದವಳು ಬಸ್ಸಿಗಾಗಿ ಬಸ್ ಸ್ಟಾಪ್ ನಲ್ಲಿ ಕಾಯುತ್ತಾ ನಿಂತಿದ್ದಳು. ಇವತ್ತು ಬೇರೆ ಬಸ್ ಸ್ಟಾಪ್ ನಲ್ಲಿ ನಿಂತು ಹರಟಲು ಅವಳ ಗ್ಯಾಂಗಿನ ಯಾವೊಬ್ಬ ಸದಸ್ಯರೂ ಅಲ್ಲಿರಲಿಲ್ಲ. "ಛೆ! ಎಲ್ಲಾ ಎಲ್ಲಿ ಹೋದ್ರು? ಇವತ್ತು ಒಬ್ಬರೂ ಕೂಡ ಬರ್ತಾನೆ ಇಲ್ವಲ್ಲ. ಮೇ ಬಿ ಬೇಗ ಹೋಗಿರ್ಬೇಕು." ಮನದಲ್ಲೇ ಗೆಳತಿಯರಿಗೆಲ್ಲ ಮಣ ಮಣ ಬೈದುಕೊಂಡಳು . ಇವಳ ಯೋಚನೆಗಳಿಗೆಲ್ಲಾ ಬ್ರೇಕ್ ಬೀಳುವ ಹಾಗೆ ಬಂತು ನೋಡಿ ಸ್ಟೇಟ್ ಬ್ಯಾಂಕ್ ಟು ಪುತ್ತೂರು ಬಸ್.
ಬಸ್ ಬಂದು ನಿಂತ ಕೂಡಲೇ ಬಸ್ಸಿಗೆ ಹತ್ತಿದ ಅಪರ್ಣಳ ಕಣ್ಣು ಬಸ್ ತುಂಬಾ ಸ್ಕ್ಯಾನ್ ಮಾಡುವಂತೆ ಪರಿಶೀಲನೆ ನಡೆಸಿದಾಗ ಕಂಡಳು ಅವಳ ಕ್ಲಾಸ್ಮೇಟ್ ಗ್ರೀಷ್ಮ.ಅಪರ್ಣ ಅವಳ ಸೀಟಿನ ಬಳಿ ಬೇರೆ ಯಾರೋ ಕೂತದ್ದು ನೋಡಿ ಎದುರಿನಿಂದಲೇ ಅವಳಿಗೊಂದು ಚಂದದ ನಗೆ ನೀಡಿ ಖಾಲಿಯಿದ್ದ ಸೀಟಿನಲ್ಲಿ ಹೋಗಿ ಕೂತು ದೊಡ್ಡದೊಂದು ಉಸಿರು ಬಿಟ್ಟಳು. ನಂತರ ಬಸ್ ಬಂದು ನಿಂತದ್ದು ಮುಂದಿನ ಸ್ಟಾಪ್ನಲ್ಲಿ.ಅಲ್ಲಿದ್ದರು ನೋಡಿ ಶ್ರೀರಾಮ ವಿದ್ಯಾಕೇಂದ್ರದ ಸುಪುತ್ರ ಸುಪುತ್ರಿಯರು ನಾ ಮುಂದೆ ನೀ ಮುಂದೆ ಎಂದು ಒಬ್ಬರನ್ನೊಬ್ಬರು ದೂಡುತ್ತಲೇ ಬಸ್ಸಿಗೆ ಹತ್ತಿದರು ಪುಟ್ಟ ಪೋರಿಗಳು, ಹದಿಹರೆಯದವರು, ಉಪನ್ಯಾಸಕರು ಮತ್ತು ಇನ್ನಿತರರು. ಇದನ್ನೆಲ್ಲಾ ಬಸ್ಸಿನ ಕಿಟಕಿಯಿಂದ ಇಣುಕಿ ನೋಡುತ್ತಿದ್ದ ಅಪರ್ಣಳ ಮುಖದಲ್ಲಿ ಮಾಸದ ಮಂದಹಾಸ.
ಕಂಡಕ್ಟರ್ "ಕಲ್ಲಡ್ಕ ಬಂತು ಎದ್ದೇಳಿ ಎಲ್ಲಾ" ಎಂದು ಬೊಬ್ಬಿಡುವ ಹೊತ್ತಿಗೆ ನಿಂತವರೆಲ್ಲಾ ಕೂತವರ ಬಳಿ ಹಿಡಿಯಲು ಕೊಟ್ಟಿದ್ದ ತಮ್ಮ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಬಸ್ಸಿನಿಂದಿಳಿಯಲೆಲ್ಲರೂ, ಬಸ್ಸಿಗೆ ಹತ್ತುವಾಗ ಎಷ್ಟು ಉತ್ಸಾಹ ಮತ್ತು ಪೈಪೋಟಿಯಲ್ಲಿದ್ದರೋ, ಬಸ್ಸಿನಿಂದೀಗ ಇಳಿಯುವಾಗಲೂ ಕೂಡ ಅಷ್ಟೇ ಉತ್ಸಾಹ ಮತ್ತು ಪೈಪೋಟಿಯನ್ನಿಟ್ಟಿಕೊಂಡು ಬಸ್ಸಿನಿಂದಿಳಿದರೆಲ್ಲಾ. ಈ ಜನಜಂಗುಳಿಯನ್ನೆಲ್ಲಾ ಸೀಳಿಕೊಂಡು ಬಸ್ಸಿನಿಂದಿಳಿಯುವ ಹೊತ್ತಿಗೆ ಸಾಕಾಗಿಹೋಗಿತ್ತು ಅಪರ್ಣಳಿಗೆ. ಬಸ್ಸಿನಿಂದಿಳಿದ ಅಪರ್ಣ ಗ್ರೀಷ್ಮಾಳ ಬಳಿ ಹರಟುತ್ತಾ ಕಾಲೇಜಿಗೆ ಹೆಜ್ಜೆ ಹಾಕತೊಡಗಿದಳು.
ಕಾಲೇಜಿಗೆ ತಲುಪಿದ ನಂತರ ಮತ್ತೆ ಶುರು ತನ್ನ ಗೆಳತಿಯರೊಂದಿಗೆ ಹರಟಲು, "ಓ ಧನ್ಯಾ ಅಕೌಂಟೆನ್ಸಿ ಹೋಮ್ ವರ್ಕ್ ಆಗಿದ್ಯಾ? ಬ್ಯಾಲೆನ್ಸ್ ಶೀಟ್ ಟ್ಯಾಲಿ ಬಂತಾ? ಬಂದ್ರೆ ಆನ್ಸರ್ ಎಷ್ಟು ನನ್ನದೂ ಲೆಕ್ಕ ಸರಿಯಾ ನೋಡು" ಇದೇ ಕೆಲಸ. ಹೋಮ್ ವರ್ಕ್ ಎಲ್ಲಾ ಸರಿಯಿದೆಯೆಂದು ಖುಷಿಯಲ್ಲಿ ಪುಸ್ತಕವನ್ನೆಲ್ಲಾ ಬ್ಯಾಗಿನಲ್ಲಿ ಜೋಡಿಸಿಟ್ಟು, ತನ್ನ ಆಪ್ತ ಗೆಳತಿಯರಾದ ಪಲ್ಲವಿ ಮತ್ತು ದಿಶಾಳಿಗಾಗಿ ಕುತ್ತಿಗೆಯನ್ನು ಆದಷ್ಟು ಉದ್ದ ಮಾಡಿ ಕಿಟಕಿಯ ಹೊರಗೆ ನೋಡುತ್ತಾ ಕೂರುವುದೇ ಕೆಲಸ .
ಅಂತೂ ಇಂತೂ ಪಲ್ಲವಿ ಮತ್ತು ದಿಶಾಳ ಆಗಮನವಾದ ನಂತರ ಶುರು ಮೂವರು ಕೂತು ಹರಟಲು. ಲೋಕದ ಪರಿವೆಯಿಲ್ಲದೆ ಇಡೀ ತರಗತಿಗೆ ತರಗತಿ ಕೋಣೆಯೇ ಅವರವರ ಗೆಳೆಯ ಗೆಳತಿಯರ ಬಳಿ ಹೀಗೆ ಅದು ಇದು ಎಂದು ಲೋಕಾರೂಢಿ ಮಾತನಾಡುತ್ತಿದ್ದರು ಎನ್ನುವುದಕ್ಕಿಂತ ಕಿರುಚುತ್ತಿದ್ದರೆಂದರೂ ತಪ್ಪಾಗಲಾರದು.
****************
-ಚೈತ್ರ