ಎಳನೀರು ಕುಡಿಯಲು, ಜ್ಯೂಸ್ ಕುಡಿಯಲು ಬಳಕೆಯಾಗುವ ಪ್ಲಾಸ್ಟಿಕ್ ಸ್ಟ್ರಾ ಪರಿಸರಕ್ಕೆ ಬಲುದೊಡ್ಡ ಸಮಸ್ಯೆಯನ್ನು ಮುಂದಿಟ್ಟಿದೆ. ಭೂಮಿಗೆ ಸೇರುವ ಮೂಲಕ ಮಣ್ಣಿಗೆ ವಿಷ ಸೂಸುವ, ನೀರಿಗೆ ಸೇರಿದಾಗ ಜಲಚರಗಳಿಗೆ ಕಂಟಕವಾಗಿ ಪರಿಣಮಿಸುವ ಪ್ಲಾಸ್ಟಿಕ್ ಸ್ಟ್ರಾಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ ವಿಯೆಟ್ನಾಂನ ಉದ್ಯಮಿಯೊಬ್ಬರು ಯಶಸ್ವಿಯಾಗಿದ್ದಾರೆ!
ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯ ಪ್ರಕಾರ ಜಾಗತಿಕವಾಗಿ ಪ್ರತೀ ವರ್ಷ 830 ಕೋಟಿ ಸ್ಟ್ರಾಗಳು ಭೂಮಿಯನ್ನು ಸೇರಿ ಮಾಲಿನ್ಯ ಉಂಟು ಮಾಡುತ್ತಿವೆ. ವಿಷವಾಗಿ ಪರಿಮಿಸುವ ಪ್ಲಾಸಿಕ್ ಸ್ಟ್ರಾಕ್ಕೆ ಪರ್ಯಾಯವಾಗಿ ಬೇರೆ ವಸ್ತುಗಳನ್ನು ಬಳಕೆ ಮಾಡುವ ಬಗ್ಗೆ ಸಾಕಷ್ಟು ಯತ್ನಗಳು ಭಾರತ ಸೇರಿದಂತೆ ಜಾಗತಿಕವಾಗಿ ನಡೆಯುತ್ತಲ್ಲೇ ಇವೆ. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಈ ನಡುವೆ ವಿಯೆಟ್ನಾಂನ ಉದ್ಯಮಿ ಟ್ರಾನ್ ಮಿನ್ ತೇನ್ ಎನ್ನುವವರು ಕಾಡಿನಲ್ಲಿ ಬೆಳೆಯುವ ಹುಲ್ಲಿನಿಂದ ಸ್ಟ್ರಾ ತಯಾರಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಓಂಗ್ ಹಟ್ ಕೊ ಕಂಪನಿಯ ಸಂಸ್ಥಾಪಕ ಟ್ರಾನ್ ಮಿನ್ ತೇನ್ ಅವರು ವಿಯೆಟ್ನಾಂನ ಮೆಕಾಂಗ್ ನದಿ ಮುಖಜ ಭೂಮಿಯಲ್ಲಿ ಧಾರಾಳವಾಗಿ ಬೆಳೆಯುವ ವೈಲ್ಡ್ ಸೆಡ್ಜ್ ಎಂದು ಕರೆಯಲಾಗುವ ಹುಲ್ಲನ್ನು ಬಳಸಿ ಸ್ಟ್ರಾ ತಯಾರು ಮಾಡಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಈ ಹುಲ್ಲಿನ ಸ್ಟ್ರಾಗಳು ಒಣಗಿದ ಮತ್ತು ಹಸಿ ರೂಪದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿವೆ.
ಹುಲ್ಲಿನ ಸ್ಟ್ರಾ ತಯಾರಿ ವಿಧಾನ: ಮೊದಲಿಗೆ ಈ ಹುಲ್ಲನ್ನು ತೊಳೆದು 20 ಸೆಂಟಿ ಮೀಟರ್‌ಗಳಿಗೆ ಕತ್ತರಿಸಲಾಗುತ್ತದೆ. ಬಳಿಕ ಕಬ್ಬಿಣದ ರಾಡ್ ಬಳಸಿ ಹುಲ್ಲಿನ ಒಳಭಾಗದ ಮೆದು ಪದರವನ್ನು ತೆಗೆಯಲಾಗುತ್ತದೆ. ಬಳಿಕ ಇದನ್ನು ನೀರಿನಲ್ಲಿ ತೊಳೆದು ಬಾಳೆಎಲೆಯನ್ನು ಸುತ್ತಿ ಮಾರಲಾಗುತ್ತದೆ.
ಇನ್ನು ಒಣ ಸ್ಟ್ರಾಗಳ ತಯಾರಿಗಾದರೆ ಸ್ವಲ್ಪ ಹೆಚ್ಚಿನ ಕೆಲಸ ಹಿಡಿಯುತ್ತದೆ. ಹಸಿ ಸ್ಟ್ರಾಗಳನ್ನು 2-3 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಬಳಿಕ ಓವೆನ್‌ನಲ್ಲಿ ಬಿಸಿ ಮಾಡಲಾಗುತ್ತದೆ. ಬಳಿಕ ಇವನ್ನು ಮಾರಲಾಗುತ್ತದೆ.
ಹಸಿ ಸ್ಟ್ರಾಗಳನ್ನು ರಟ್ಟಿನೊಳಗೆ ಹಾಕಿ ಫ್ರಿಜ್‌ನಲ್ಲಿಟ್ಟು ಎರಡು ವಾರಗಳ ಕಾಲ ಕೆಡದಂತೆ ಇಡಬಹುದಾಗಿದೆ. ಅಂತೆಯೇ ಒಣ ಸ್ಟ್ರಾವನ್ನು ಮನೆಯ ಸಾಮಾನ್ಯ ವಾತಾವರಣದಲ್ಲಿ ಆರು ತಿಂಗಳ ಕಾಲ ಕೆಡದಂತೆ ಇಡಬಹುದಾಗಿದೆ. ಈ ಸ್ಟ್ರಾಗಳನ್ನು ರೆಸ್ಟೋರೆಂಟ್‌ನಲ್ಲಿ ಒಂದು ಬಾರಿ, ಮನೆಯಲ್ಲಿ ಹಲವು ಬಾರಿ ಬಳಕೆ ಮಾಡಬಹುದಾಗಿದೆ.
ಹಸಿ ಸ್ಟ್ರಾವೊಂದಕ್ಕೆ ವಿಯೆಟ್ನಾಂನ 600 ಡಾಂಗ್ (ಭಾರತದ 1.6 ರೂ), ಒಣಗಿದ ಸ್ಟಾçವನ್ನು ವಿಯೆಟ್ನಾಂನ 1000 ಡಾಂಗ್ (ಭಾರತದ 2.7 ರೂ.)ಗೆ ಮಾರಾಟ ಮಾಡಲಾಗುತ್ತದೆ. ಈ ಸ್ಟ್ರಾ ಹುಲ್ಲಿನ ಸುವಾಸನೆಯನ್ನು ಹೊಂದಿದೆ.
ಹಸಿ ಸ್ಟ್ರಾವನ್ನು ಮರು ಬಳಕೆ ಮಾಡಲು ಅದನ್ನು ಉಪ್ಪು ನೀರಿನಲ್ಲಿ ಕುದಿಸಿ ಬಳಿಕ ಒಣಗಲು ಬಿಡಬೇಕು. ಬಳಿಕ ಇದನ್ನು ಮರುಬಳಕೆ ಮಾಡಬಹುದಾಗಿದೆ.
“ಒಣ, ಹಸಿ ಸ್ಟ್ರಾಗಳನ್ನು ಪಾನೀಯ ಕುಡಿದ ಬಳಿಕ ತಿನ್ನಬಹುದಾಗಿದೆ. ಇದರಿಂದ ಹಲ್ಲು ಶುದ್ಧವಾಗುತ್ತದೆ. ಇದಕ್ಕೆ ಯಾವುದೇ ರಸಾಯನಿಕ ಸೇರ್ಪಡೆ ಮಾಡುವುದಿಲ್ಲ’’ ಎನ್ನುತ್ತಾರೆ ಕಂಪನಿಯ ಸಂಸ್ಥಾಪಕ ಟ್ರಾನ್ ಮಿನ್ ತೇನ್.
ಬಳಕೆ ಮಾಡಿದ ಸ್ಟ್ರಾಗಳನ್ನು ಬಿಸಾಡಿದ ಕೆಲವೇ ದಿನಗಳಲ್ಲಿ ಇದು ಕೊಳೆತು ಮಣ್ಣಿನಲ್ಲಿ ಲೀನವಾಗುವ ಮೂಲಕ ಪ್ಲಾಸ್ಟಿಕ್ ಸ್ಟ್ರಾದ ಅನಾಹುತಕ್ಕೆ ಮಂಗಳ ಹಾಡಿದೆ. ಈಗ ಇದು ವಿಯೆಟ್ನಾಂನಲ್ಲಿ ಮಾತ್ರ ಮಾರುಕಟ್ಟೆ ಹೊಂದಿದ್ದು ಜಾಗತಿಕವಾಗಿ ವಿಸ್ತರಣೆಯಾದರೆ ಪ್ಲಾಸ್ಟಿಕ್ ಸ್ಟ್ರಾನಿಂದ ಆಗುವ ಅನಾಹುತಕ್ಕೆ ಇತಿಶ್ರೀ ಹಾಡಬಲ್ಲದು ಎಂದು ನಿರೀಕ್ಷಿಸಲಾಗಿದೆ.
-ಅರುಣ್ ಕಿಲ್ಲೂರು
Author,Journalist,Photographer