ಕಥೆ: 💥ನಕಲಿ ಪ್ರೀತಿ.💥

ProfileImg
23 Apr '24
3 min read


image

 

ಶೇಖರ ಹೋಟೆಲ್ ಮಾಣಿ ತಂದಿಟ್ಟ ಬಿಲ್ ಪುಸ್ತಕದೊಳಗೆ ಹಣ ಇಟ್ಟು ಕೈ ತೊಳೆಯಲು ಹೋದ. ಆದರೆ ಆತ ಕೈತೊಳೆದು ಬರುವಷ್ಟರಲ್ಲಿ ತಾನು   ಬಿಲ್ಲಿನೊಟ್ಟಿಗೆ ಇಟ್ಟ ನೂರು ರುಪಾಯಿ ತೆಗೆದು ಹತ್ತು ರುಪಾಯಿ ಇಟ್ಟಿದ್ದಳು ಮೀನಲ್.

ಇಲ್ಲಿ ಟಿಪ್ಸ್ ಕೊಡಬೇಕಾದ ಅನಿವಾರ್ಯತೆ ಇಲ್ಲದಿದ್ದರೂ  ಮೃದು ಮನಸ್ಸಿನ ಶೇಖರ ಟಿಪ್ಸ್ ಕೊಡಲು ಹಿಂಜರಿದಿದ್ದಿಲ್ಲ.ಈಗ ಈ ಮೀನಲಳ  ಬುದ್ಧಿ ನೋಡಿ ಇವಳನ್ನುಪ್ರೀತಿ ಮಾಡಿ ತಪ್ಪು ಮಾಡಿದೆನೇನೋ ಎಂಬ ಭಾವನೆ ಮೂಡಿ  ಮಾಯವಾಯಿತು.ಇವಳನ್ನು ಪ್ರೀತಿ ಮಾಡುವಾಗ ಅವಳ ಚಿಲ್ಲರೆ ಬುದ್ಧಿಯ ಕಡೆಗೆ ಏಕೆ ಮನಸು ಹೋಗಲಿಲ್ಲವೋ .ಪ್ರೀತಿ ಕುರುಡು ಅನ್ನುವುದು ಇದಕ್ಕೇ ಅಲ್ಲವೇ.

ಮೀನಲಳನ್ನು ಒಮ್ಮೆ ಗಮನಿಸಿದ ಶೇಖರನ    ನೋಟ ತಾನು ನಡೆದು ಬಂದ ದಾರಿಯಲ್ಲೊಮ್ಮೆ ನೆಟ್ಟಿತ್ತು. ಮನಸು ಹಿಂದಕ್ಕೆ ಹೋಯಿತು.

ಶೇಖರ ಬಡತನದಲ್ಲಿ ಬೆಳೆದವ.ಆತನ ತಂದೆ ಕೃಷ್ಣಪ್ಪನಿಗೆ ಶೇಖರ ,ರಾಜೀವ ಎಂಬ ಇಬ್ಬರು ಮಕ್ಕಳು. ಕೃಷ್ಣಪ್ಪ  ತೋಟದ ಕೆಲಸಕ್ಕೆ ಕೂಲಿ ಮಾಡಲು ಹೋಗುತ್ತಿದ್ದ. ಆತನ ಮಕ್ಕಳೂ ಜೊತೆಗೆ ಹೋಗುತ್ತಲೇ ಹತ್ತನೆ ತರಗತಿ ಮುಗಿಸಿದರು. ರಾಜೀವನಿಗೆ ವಿದ್ಯೆ ಅಷ್ಟಕ್ಕಷ್ಟೇ. ಆತ ಹತ್ತನೆ ತರಗತಿ ಮುಗಿಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಶೇಖರನ ಅದೃಷ್ಟ ಚೆನ್ನಾಗಿತ್ತು. ಓದಿನಲ್ಲಿ ಬಹಳ ಮುಂದು. ಓದಬೇಕೆಂಬ ಅದಮ್ಯ ಆಸೆಗೆ ಬಡತನ ಅಡ್ಡಿ ಆಗುತ್ತಿದ್ದರೂ ಸ್ವಾಭಿಮಾನ ಬೆಳೆಸಿಕೊಂಡಿದ್ದ ಶೇಖರ ರಜೆಯಲ್ಲಿ ಕೂಲಿ ಕೆಲಸಕ್ಕೂ ಹೋಗುತ್ತಿದ್ದ. 
ರಜೆಯಲ್ಲಿ ಶೆಟ್ಟರ ಹೋಟೆಲಿನಲ್ಲಿ  ಪಾತ್ರೆ  ತೊಳೆಯುವ ಕೆಲಸ ಮಾಡುತ್ತಿದ್ದ. ಪಿಯು ಸಿ ಯಲ್ಲಿ ಚೆನ್ನಾಗಿ ಅಂಕ ಗಳಿಸಿ ತನ್ನೂರಿಗೆ ಸಮೀಪದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಲು ಸೇರಿಕೊಂಡ. ಇಲ್ಲಿಯೂ ತನ್ನ ಬಿಡುವಿನ ವೇಳೆಯಲ್ಲಿ ಶೆಟ್ಟರ ಹೋಟೆಲಿನಲ್ಲಿ ಸಪ್ಲೈಯರ್ ಕೆಲಸವನ್ನೂ ಮಾಡುತ್ತಿದ್ದ. ಇಲ್ಲಿಂದ ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋದವರು ಹೋಟೆಲಿನಲ್ಲಿ ,ಮಾಲುಗಳಲ್ಲಿ ಕೆಲಸ ಮಾಡುವುದನ್ನು ತಿಳಿದಿದ್ದ ಶೇಖರನಿಗೆ ತನ್ನೂರಿನಲ್ಲಿ ಆ ಕೆಲಸ ಮಾಡುವುದಕ್ಕೆ ಯಾಕೆ ಅವಮಾನ ಪಡಬೇಕು ಎಂಬ ಆಲೋಚನೆ. ಹಾಗಾಗಿ ಸಹಪಾಠಿಗಳ ಮುಂದೆಯೂ ಆತನಿಗೆ ತನ್ನ ಕೆಲಸ ಅವಮಾನ ಅಂತ ಅನ್ನಿಸಲೇ ಇಲ್ಲ.
ತನಗೆ ಗುರಿಯಿತ್ತು. ತನ್ನ ನೆಲೆ ತನಗೆ ಗೊತ್ತು.
ಮಿಕ್ಕದ್ದೆಲ್ಲ ಗೌಣ ಎಂಬ ಅಭಿಪ್ರಾಯ ಹೊಂದಿದ್ದ ಶೇಖರ್ ಉತ್ತಮ ಅಂಕಗಳೊಂದಿಗೆ ಇಂಜಿನಿಯರಿಂಗ್ ಮುಗಿಸಿ ಒಂದು ಅಮೆರಿಕನ್ ಕಂಪೆನಿಯಲ್ಲಿ ಕೆಲಸವನ್ನೂ ದೊರಕಿಸಿಕೊಂಡನು.
ಹಾಗಾಗಿ  ಆ ಕಂಪೆನಿಯಿದ್ದ ನೋಯ್ಡಾಕ್ಕೆ ಬಂದು ಸೇರಿಕೊಂಡಿದ್ದ.ಶೇಖರ ಸ್ಪುರದ್ರೂಪಿಯಾಗಿದ್ದ.
ನೋಡಿದರೇ ಪ್ರಾಮಾಣಿಕ ಅಂತ ಅನ್ನಿಸುವ ವರ್ಚಸ್ಸು.ಜೊತೆಗೆ ಬುದ್ಧಿವಂತ . ತುಂಬಾ ಹುಡುಗಿಯರು ಅವನ ಗೆಳೆತನ ಬಯಸಿದರೂ ಶೇಖರ್ ಯಾರನ್ನೂ ಹಚ್ಚಿಕೊಂಡಿರಲಿಲ್ಲ.

ಆತನಿಗೆ ತನ್ನ ಬೇರು ಗೊತ್ತಿತ್ತು. ಥಳಕು ಬೆಳಕಿನ ಜೀವನ ಶಾಶ್ವತವಲ್ಲ ಎಂಬ ಅರಿವು ಅವನಿಗಿತ್ತು.  ತನ್ನ ಮನೆಯ ಸರಳ ಜೀವನಕ್ಕೂ ಈ ಮಹಾನಗರಗಳ ಜೀವನಕ್ಕೂ ವ್ಯತ್ಯಾಸವಿತ್ತು. ಇಷ್ಟೆಲ್ಲಾ ಅರಿವಿದ್ದರೂ ಶೇಖರ್ ಮೀನಲಳಿಗೆ ಸೋತಿದ್ದ. ಅವಳ ಬಣ್ಣಕ್ಕೋ, ಜಾಣ್ಮಿಗೋ ,ಮಾತಿಗೋ ಅವಳನ್ನು ಇಷ್ಟಪಟ್ಟಿದ್ದ.

ಜೊತೆಜೊತೆಯಾಗಿ ಓಡಾಡುವುದು ಹೆಚ್ಚಾಯಿತು.ಆದರೆ ಆಗಾಗ್ಗೆ ಅವಳ ನಿಜ ಸ್ವರೂಪದ ಅನಾವರಣವಾಗುತ್ತಿತ್ತು. ಅವಳಲ್ಲಿ ಬಡವರೆಂದರೆ  ತಾತ್ಸಾರ ಎದ್ದು ಕಾಣುತ್ತಿತ್ತು. ಅದು ಇಂದಿನ ಅವಳ ವರ್ತನೆಯಿಂದ ಅವಳ ಬಗೆಗಿನ ಅಭಿಪ್ರಾಯ  ಶೇಖರನಿಗೆ  ದೃಢವಾಯಿತು.ಬೇಗ ಎಚ್ಚೆತ್ತುಕೊ ಎಂದು ಅವನ ಅಂತರಾತ್ಮ ಕೂಗಿ ಹೇಳಿದಂತಾಯಿತು. ಶೇಖರನಿಗೆ ಇಂಥವಳು ತನ್ನ ಊರಿನ ಪುಟ್ಟ ಮನೆಯಲ್ಲಿ ಒಂದು ದಿನವಾದರೂ ಇರುವಳೇ?ಅಯ್ಯೋ ದೇವರೇ..ಈಕೆ ತಾನು ಅವಳನ್ನು ಮದುವೆಯಾಗುವೆನೆಂದು ನಂಬಿದ್ದಾಳೆ.ನಾಳೆ ಆಕೆ ತನ್ನನ್ನು ಅವಳ ಮನೆಗೆ ಕರಕೊಂಡು ಹೋಗಿ ಹೆತ್ತವರ ಪರಿಚಯ ಮಾಡಿಸುತ್ತೇನೆ ಎಂದಿದ್ದಾಳೆ. ಅವರು ಹೇಗೋ.ಆದರೆ ಕೆಲವರಿಗೆ ದಕ್ಷಿಣ ಭಾರತೀಯರೆಂದರೆ ತಾತ್ಸಾರ ಇರುವುದನ್ನು ನೋಡಿದ್ದೆ. ಮೇಲಾಗಿ ತನ್ನ ಅಪ್ಪ ಕೂಲಿಯಾಳು. ನೋಡೋಣ. ಅವರಲ್ಲಿ ತನ್ನ ಮನೆತನದ ಬಗ್ಗೆ ಹೇಳಬೇಕೆಂದು ಕೊಂಡನು.

"ಕ್ಯಾ ಸೋಚ್ ರಹೇ ಹೋ ಶೇಖರ್" ಟಿಪ್ಸ್ ಇತ್ನಾ ಕ್ಯೋಂ ದೇ ರಹೇ ಹೋ "ಎಂದಾಗಲೇ ಶೇಖರ ವಾಸ್ತವ ಜಗತ್ತಿಗೆ ಬಂದುದು.
"ಕುಚ್ ನಹೀಂ"ಅಂತ ಹೇಳಿದ ಶೇಖರ್.ಇಬ್ಬರೂ  ರೆಸ್ಟೋರೆಂಟಿಂದ ಹೊರ ಬಂದರು. ಸಿನೆಮಾಕ್ಕೆ ಅವಳೇ ಟಿಕೆಟ್ ಕಾಯ್ದಿರಿಸಿದ್ದಳು. ಶೇಖರ ಅರೆ ಮನಸಿನಿಂದಲೇ ಆಕೆಗೆ ಜೊತೆಯಾದರೂ ಮನಸು ಸಿನೆಮಾದಲ್ಲಿರಲಿಲ್ಲ.ಮರುದಿನ ಮೀನಲಳ ಮನೆಗೆ ಹೋಗುವ ವಿಚಾರವೇ ತುಂಬಿತ್ತು.ಮನಸು ಗೊಂದಲದ ಗೂಡಾಗಿತ್ತು.ಈಕೆಯನ್ನು ಮದುವೆಯಾದರೆ ತನ್ನ ಅಪ್ಪ ಅಮ್ಮನನ್ನು ಮರೆಯಬೇಕಾದೀತು .

ಛೇ, ಅಂತಹ ತಪ್ಪನ್ನು ಮಾಡಬಾರದು.

ಬಹುಷಃ ಈ ದಿನ ಅವಳ ಜೊತೆಯ ಸಿನೆಮಾ ಕೊನೆಯ ಸಿನೆಮವೂ ಆಗಿರಬಹುದು. 
ಸಿನೆಮಾ ಮುಗಿಸಿ 'ನಾಳೆ ನಮ್ಮ ಮನೆಗೆ ಬಾ ಹತ್ತು ಗಂಟೆಗೆ 'ಎಂದು ಹೇಳಿ ವಿಳಾಸ ಕೊಟ್ಟಳು ಮೀನಲ್.

ಮರುದಿನ ಹತ್ತು ಗಂಟೆಗೆ ಮೀನಲಳ ಮನೆಗೆ ಹೋದ ಶೇಖರ  .ಆ ಮನೆಯ ಆಡಂಬರ ನೋಡಿ ದಂಗಾದನು.ಅಂತಹ ಭವ್ಯವಾದ ಮನೆಯನ್ನು ಆತ ಇಷ್ಟರ ವರೆಗೆ ನೋಡಿದ್ದೇ ಇಲ್ಲ. ಇಲ್ಲಿ ಅಳಿಯನಾಗಿ ಬರುವುದೆಂದರೆ ಬಂಧನಕ್ಕೆ ಒಳಗಾದಂತೆ ಎಂದು ಆತ ಆಲೋಚಿಸಿದನು‌. ಇವರ ಕುಟುಂಬಕ್ಕೆ ಸೇರಿಕೊಂಡರೆ ತನ್ನ ಬಡ ಕುಟುಂಬವನ್ನು ಮರೆತಂತೆ ಎಂದುಕೊಂಡನು.
ತನ್ನನ್ನೇ ನಂಬಿದ ಹೆತ್ತವರನ್ನು ನೆನಪಾಯಿತು. ಇವಳನ್ನು ಮದುವೆಯಾದರೆ ಅವರ ನಂಬಿಕೆಗೆ ದ್ರೋಹ ಮಾಡಿದಂತೆ ಅಂತ ಅವನಿಗೆ ಅನ್ನಿಸಿತು. ಹೀಗೆ ಮದುವೆಯಾಗಿ ಊರನ್ನೇ ಮರೆತ ತನ್ನೂರಿನ ಕೇಶವನನ್ನು ನೆನಪಾಯಿತು.

ತಾನು ಬೈಕಿನಲ್ಲಿ ಬಂದುದನ್ನು ನೋಡಿ  ಮೀನಳ ಅಮ್ಮನ ಮುಖದಲ್ಲಿ ಮೂಡಿದ್ದ ತಾತ್ಸಾರ ಗಮನಿಸಿದನು. ಬಿಳಿ ಬಟ್ಟೆಯಲ್ಲಿ ಮಿಂಚುತ್ತಿದ್ದ
ದೊಡ್ಡ ಉದ್ದಿಮೆದಾರ ಮೀನಳ ಅಪ್ಪನ ಮಾತುಗಳನ್ನು ಕೇಳುವಾಗ ತಾನು ಇಲ್ಲಿ ಏನೂ ಅಲ್ಲ ಎಂದು ಆಲೋಚಿಸಿದನು. ಅಷ್ಟರಲ್ಲಿ ತಟ್ಟೆ ತುಂಬಾ ತಿಂಡಿ , ಹಣ್ಣುಗಳನ್ನು ಅಡಿಗೆಯವನು ತಂದಿಟ್ಟ. ಮೀನಲಳೂ  ಹೆಮ್ಮೆಯಿಂದ  ಸೋಫಾದಲ್ಲಿ ಕುಳಿತುಕೊಂಡು ಮಾತನಾಡತೊಡಗಿದಳು. ಅವಳ ಹೆತ್ತವರೂ ಆತನ  ಮನೆಯ ,ಕುಟುಂಬದ  ವಿಷಯ ಹೇಳುತ್ತಿದ್ದಂತೆ ಅವರ ಮುಖದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಗಮನಿಸಿದನು. ಅವನೂ ಮತ್ತೂ ಮುಂದಕ್ಕೆ ಹೋಗಿ ಹೋಟೆಲಿನಲ್ಲಿ ಮಾಣಿ ಕೆಲಸವನ್ನು ಮಾಡಿ ,ಪಾತ್ರೆ ತೊಳೆದು ಕೆಲಸ ಮಾಡಿದ್ದು ,ತನಗೆ ಟಿಪ್ಸ್ ಸಿಗುತ್ತಿದ್ದುದನ್ನು 
ಹೋಟೆಲಿನ ಕಷ್ಟವನ್ನು ಸ್ವಲ್ಪ ಅತಿಯಾಗಿಯೇ ಹೇಳಿದನು. ಟಿಪ್ಸ್ ಎಂದಾಗ ಮೀನಲಳ ಮುಖವನ್ನು ಗಮನಿಸಿ ಅವಳ ಮುಖದಲ್ಲಿ ಏನಾದರೂ ಬದಲಾವಣೆಯಾಯಿತೇ ಎಂದು ಅವಲೋಕಿಸಿದನು‌ . ಹಾಗೆಯೂ ಆಗಲಿಲ್ಲ. ಇವರು ಮನುಷ್ಯತ್ವಕ್ಕೆ ಬೆಲೆ ಇಲ್ಲದವರು ಎಂಬುದನ್ನು ಕಂಡುಕೊಂಡಿದ್ದನು
ಅವನ ಪೂರ್ಣ ವಿಷಯ ತಿಳಿದುಕೊಂಡ ಮೀನಲಳಲ್ಲು ಅವನಲ್ಲಿ ಆಸಕ್ತಿ ಉಳಿಯಲಿಲ್ಲ. ಕೂಲಿಯಾಳುಗಳನ್ನು ಅತ್ತೆ ಮಾವ ಅಂತ ಒಪ್ಪಿಕೊಳ್ಳಲು ಅವಳಿಂದಾಗಲಿಲ್ಲ. ಸರಿ ಸರಿ ಇದ್ದರೆ ತಾನೇ ಪರಿ ಪರಿ ನೆಂಟರು? . ಬಂದಾಗ ಇದ್ದ ಉಪಚಾರ ಕಡಿಮೆಯಾಯಿತು. ಮಧ್ಯಾಹ್ನ ಊಟಕ್ಕೆ ನಿಲ್ಲು ಅಂತ ಯಾರೂ ಹೇಳಲಿಲ್ಲ. ಅವನಿಗೆ ಅದು ಒಳ್ಳೆಯದೇ ಆಯಿತು‌
ಮರುದಿನದಿಂದ ಶೇಖರ್ ಯಾರೋ ,ಮೀನಲ್ ಯಾರೋ. ಶೇಖರ್ ತಂದೆಗೆ ಫೋನ್ ಮಾಡಿದ ನಮ್ಮಲ್ಲಿ ಯಾರಾದರೂ ಕಲಿತ ಒಳ್ಳೆಯ ಹುಡುಗಿಯನ್ನು ನೋಡಿ ಅಂತ.ಅವನ ಮನಸ್ಸು ಬಂಧನದಿಂದ ಬಿಡುಗಡೆ ಹೊಂದಿದ ಹಕ್ಕಿಯಂತಾಯಿತು.
 

✍️ಪರಮೇಶ್ವರಿ ಭಟ್

Category:Relationships



ProfileImg

Written by Parameshwari Bhat