ಕಥೆ

ಲಕ್ಕಿ

ProfileImg
19 Mar '24
12 min read


image

"ಅಮ್ಮಾ, ನಾನು ಕ್ರಿಕೆಟ್ ಆಡಿ ಬರ್ತೀನಿ" ಜಾರುತ್ತಿದ್ದ ತನ್ನ ಚಡ್ಡಿಯನ್ನು ಮೇಲೆಳೆದುಕೊಳ್ಳುತ್ತ ಒಂದು ಕೈಲಿ ಬ್ಯಾಟು, ಇನ್ನೊಂದು ಕೈಲಿ ವಿಕೆಟ್ಟು ಹಿಡಿದು ಓಡಿದ ಹನ್ನೆರಡು ವರ್ಷದ ಮಗ ಲಕ್ಕಿಯನ್ನು ನೋಡಿ ಲಕ್ಷ್ಮಮ್ಮ ನಿಟ್ಟುಸಿರಿಟ್ಟಳು. "ಅದ್ಯಾವ ಮನೆಹಾಳ ಬೇವರ್ಸಿ ನನ್ಮಗ ಕಂಡುಹಿಡಿದ್ನೋ ಆ ದರಿದ್ರದ ಕಿರ್ಕೆಟ್ಟು ಆಟವನ್ನು. ಮೂರು ಹೊತ್ತೂ ಅದ್ರಲ್ಲೇ ಬಿದ್ದಿರ್ತಾನೆ. ನಾಲ್ಕಕ್ಷರ ಕಲ್ತು ಏನಾದ್ರೂ ಕೆಲ್ಸ ಹಿಡಿಯೋದು ಬಿಟ್ಟು" ಕ್ರಿಕೆಟ್ಟನ್ನು ಕಂಡುಹಿಡಿದ ಆ ಅನಾಮಧೇಯನಿಗೆ ಹಿಡಿಶಾಪ ಹಾಕುತ್ತ ಒಳಗೆ ಹೋದಳು.
    ಲಕ್ಕಿ ಲಕ್ಷ್ಮಮ್ಮನ ಒಬ್ಬನೇ ಮಗ. ಅವಳ ಗಂಡ ಕರಿಯಪ್ಪ ಹತ್ತು ವರ್ಷಗಳ ಕೆಳಗೆ ಕುಡಿದು ಕುಡಿದೇ ಇಹಲೋಕ ತ್ಯಜಿಸಿದಾಗ ಲಕ್ಕಿ ಇನ್ನೂ ಎರಡು ವರ್ಷದ ಕೂಸು. ಕರಿಯಪ್ಪನ ಅಪ್ಪನಿಗೆ ಮಗ ಸೈನಿಕನಾಗಿ ದೇಶಸೇವೆ ಮಾಡಬೇಕೆಂಬಾಸೆಯಿತ್ತು. ಆದರೆ ಕರಿಯಪ್ಪ ಎಸ್ಸೆಸ್ಸೆಲ್ಸಿಯಲ್ಲೇ ಹ್ಯಾಟ್ರಿಕ್ ಸಾಧಿಸಿದಾಗ ಅಪ್ಪನ ಆಶಾಗೋಪುರ ಕುಸಿದುಬಿದ್ದಿತ್ತು. ಬೇರೆ ದಾರಿ ಕಾಣದೆ ಅವನನ್ನು ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಹಚ್ಚಿದ್ದ. ಆದರೆ ತಂದೆ ತಾನು ಗಂಡುಗಲಿಯಾಗಲೆಂದು ಬಯಸಿದರೆ ಮಗ "ಗುಂಡುಗಲಿ"ಯಾದ. ಶಾಲೆಯಲ್ಲಿ ಎಂದೂ ಥರ್ಟಿ ದಾಟದವ ಈಗ ಮೂರು ಹೊತ್ತೂ ನೈಂಟಿ ತೆಗೆದುಕೊಳ್ಳತೊಡಗಿದ! ಮದುವೆ ಮಾಡಿದರೆ ಮಗ ಸರಿಹೋಗಬಹುದೆಂದು ಅಪ್ಪ ಅದನ್ನೂ ಮಾಡಿನೋಡಿದ. ಆದರೆ ಹೆಂಡತಿಗೆ ಮಗುವೊಂದನ್ನು ಕರುಣಿಸಿ ಬಳಿಕ ಅದಕ್ಕೂ ತನಗೂ ಸಂಬಂಧವೇ ಇಲ್ಲದಂತೆ ಮೂರು ಹೊತ್ತೂ ಕುಡಿದು ಬಿದ್ದಿರುತ್ತಿದ್ದ. ಒಮ್ಮೆ ಮಳೆಗಾಲದಲ್ಲಿ ಹಾಗೇ ಕುಡಿದು ತೂರಾಡುತ್ತ ನಡೆಯುತ್ತಿದ್ದವ ಆಯತಪ್ಪಿ ಚರಂಡಿಗೆ ಬಿದ್ದವನು ಕೊಚ್ಚಿಕೊಂಡು ಹೋದ. ಮಗನ ಅಗಲಿಕೆಯ ನೋವಿನಲ್ಲೇ ತಿಂಗಳೊಳಗೆ ತಂದೆತಾಯಿಗಳೂ ತೀರಿಕೊಂಡರು. ತವರಿನವರೂ ಮನೆಗೆ ಸೇರಿಸದಿದ್ದಾಗ ನಿರಕ್ಷರಕುಕ್ಷಿಯಾದ ಲಕ್ಷ್ಮಮ್ಮ ಏಕಾಂಗಿಯಾದಳು. ಅವಳಿಗೆ ಕೂಲಿಯೊಂದೇ ಉಳಿದಿದ್ದ ದಾರಿ. ಮಗನಿಗೆ ಲಕ್ಕಿ ಎಂದು ಹೆಸರಿಟ್ಟವಳೂ ಅವಳೇ. ಕಾಲೇಜು ಕಲಿತಿದ್ದ ಪಕ್ಕದ ಮನೆಯ ಹುಡುಗ ಕಲ್ಲೇಶಿ "ನಿನ್ನ ಮಗನಿಗೆ ಲಕ್ಕಿ ಅಂತ ಹೆಸರಿಡು ಲಕ್ಷ್ಮಮ್ಮ. ಹಾಗಂದರೆ ಅದೃಷ್ಟವಂತ ಅಂತರ್ಥ. ನಿನ್ನ ಮಗ ಅದೃಷ್ಟವಂತ ಆಗ್ತಾನೆ" ಎಂದಿದ್ದಕ್ಕೆ ಆ ಹೆಸರು ಇಟ್ಟಿದ್ದಳು. ಈಗ ಅದೇ ಕಲ್ಲೇಶಿ ಮಗನಿಗೆ ಕ್ರಿಕೆಟ್ ಗುರುವಾಗಿದ್ದಾನೆ. ಪಿಯುಸಿಯಲ್ಲಿ ಹ್ಯಾಟ್ರಿಕ್ ಸಾಧಿಸಿದ ಬಳಿಕ ಓದಿಗೆ ಸಲಾಂ ಹೊಡೆದ ಕಲ್ಲೇಶಿ ಉಂಡಾಡಿಗುಂಡನಂತೆ ತಿರುಗುತ್ತಿದ್ದ. ಅಪ್ಪ ಮರಿಗೌಡರು ಹತ್ತು ಜನ್ಮ ಕುಳಿತು ತಿಂದರೂ ಮುಗಿಯದಷ್ಟು ಆಸ್ತಿ ಮಾಡಿಟ್ಟಿದ್ದರು. ಮದುವೆಯಾಗುವುದಕ್ಕೂ ಆಸಕ್ತಿ ತೋರದ ಕಲ್ಲೇಶಿಗೆ ಕ್ರಿಕೆಟ್ ಹುಚ್ಚು ವಿಪರೀತ. ತನಗಿಂತ ಇಪ್ಪತ್ತು ವರ್ಷ ಕಿರಿಯವನಾದ ಲಕ್ಕಿಗೆ ಅವನು ಪ್ರೀತಿಯ "ಕಲ್ಲಿಮಾಮ". ಇಬ್ಬರೂ ಗಂಟೆಗಟ್ಟಲೆ ಊರ ಹೊರಗಿನ ಬಯಲಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಲಕ್ಕಿಗೆ ಸೋಲು ಯಾವಾಗಲೂ ಕಟ್ಟಿಟ್ಟ ಬುತ್ತಿ. ಭಾರತ, ಆಸ್ಟ್ರೇಲಿಯಾ ತಂಡಗಳ ಎದುರು ಆಡುವ ಜಿಂಬಾಬ್ವೆ ತಂಡದಂತೆ ಅವನ ಪರಿಸ್ಥಿತಿ. ಆದರೆ ಅದಕ್ಕೆಲ್ಲ ಅವನು ತಲೆ ಕೆಡಿಸಿಕೊಂಡವನೇ ಅಲ್ಲ. ಏಕೆಂದರೆ ಅವನ ಆಸಕ್ತಿ ಕ್ರಿಕೆಟ್‌ಗಿಂತಲೂ ಹೆಚ್ಚಾಗಿ ಕಲ್ಲೇಶಿ ತರುತ್ತಿದ್ದ ತಿಂಡಿಗಳ ಮೇಲೆಯೇ ಇರುತ್ತಿತ್ತು. ಪಿಜ್ಜಾ, ಬರ್ಗರ್, ಕೇಕ್, ಸ್ಯಾಂಡ್‌ವಿಚ್, ಇನ್ನೂ ಏನೇನೋ ಲಕ್ಕಿಗೆ ಹೆಸರೇ ಗೊತ್ತಿರದ ತಿಂಡಿಗಳನ್ನೆಲ್ಲ ಪೇಟೆಯಿಂದ ತಂದುಕೊಡುತ್ತಿದ್ದ ಕಲ್ಲೇಶಿ. ಪ್ರತಿದಿನ ಒಂದು ಹೊತ್ತು ಊಟಕ್ಕಿಂತ ಹೆಚ್ಚಾಗಿ ಇಂಥ ತಿಂಡಿಗಳೇ ಸಿಗುವುದಾದರೆ ಸೋಲಲು ಅವನಿಗೆ ಬೇಸರವಾದರೂ ಯಾಕೆ? ಅದಕ್ಕಾಗಿ ಕೆಲವೊಮ್ಮೆ ಸುಮ್ಮಸುಮ್ಮನೇ ತನಗೆ ಇಂದು ಆಡಲು ಆಸಕ್ತಿ ಇಲ್ಲವೆಂದೋ ಅಥವಾ ಹುಷಾರಿಲ್ಲವೆಂದೋ ಸುಳ್ಳು ಹೇಳುತ್ತಿದ್ದ. ಆಗೆಲ್ಲ ಕಲ್ಲೇಶಿ ಅವನನ್ನು ಲಂಚದ ಮೊತ್ತವನ್ನು ಇನ್ನಷ್ಟು ಏರಿಸಿ ಕರೆದೊಯ್ಯುತ್ತಿದ್ದ. ಅಲ್ಲದೆ ಅವನ ಕ್ರಿಕೆಟ್ ತೆವಲಿಗೆ ಲಕ್ಕಿಗಿಂತ ಸುಲಭದ ಮಿಕ ಆ ಹಳ್ಳಿಯಲ್ಲಿ ಸಿಗುತ್ತಿರಲಿಲ್ಲ.
    "ಲಕ್ಕಿ, ನಿನಗೆ ಗೊತ್ತಾ? ಕ್ರಿಕೆಟ್ ಆಟದಲ್ಲಿ ಒಳ್ಳೇ ಹೆಸರು ಮಾಡಿದರೆ ಕೋಟಿಗಟ್ಟಲೆ ದುಡ್ಡು ಸಂಪಾದಿಸಬಹುದು" ಕಲ್ಲೇಶಿ ಹೇಳಿದಾಗ ಕಣ್ಣುಬಾಯಿ ಬಿಟ್ಟುಕೊಂಡು ಕೇಳುತ್ತಿದ್ದ ಲಕ್ಕಿ. "ಹೌದಾ ಕಲ್ಲಿಮಾಮ, ಮತ್ತೆ ನೀನ್ಯಾಕೆ ಹೋಗಲಿಲ್ಲ?" ಎಂದು ಕೇಳಿದ. ಗಂಭೀರ ಮುಖಮುದ್ರೆಯಿಂದ ಕಲ್ಲೇಶಿ "ನನಗೆ ಒಮ್ಮೆ ಭಾರತ ತಂಡದಲ್ಲಿ ಕರೆದಿದ್ದರು. ಸಚಿನ್ ಗಾಯಗೊಂಡಿದ್ದಾಗ ಅವನ ಬದಲಿಗೆ ನನ್ನನ್ನು ಕರೆದಿದ್ದರು. ಆದರೆ ಈಗಾಗಲೇ ಕೋಟಿಗಟ್ಟಲೆ ಹಣ ಇರುವ ನನಗೆ ಅದರ ಅವಶ್ಯಕತೆ ಇರಲಿಲ್ಲ. ಅದಕ್ಕೆ ಹೋಗಲಿಲ್ಲ" ಎಂದು ಬ್ರೆಟ್ ಲೀ ಬಿಟ್ಟ ಬಾಲಿಗಿಂತಲೂ ವೇಗವಾಗಿ ತನ್ನ ರೈಲು ಬಿಡುತ್ತಿದ್ದ. "ಆದ್ರೆ ಕಲ್ಲಿಮಾಮ, ನನಗೆ ಚಾನ್ಸ್ ಕೊಡಿಸ್ತೀಯಾ? ನನ್ ಹತ್ರ ದುಡ್ಡು ಇಲ್ಲ. ಕ್ರಿಕೆಟ್ ಆಡಿ ದುಡ್ಡು ಸಂಪಾದನೆ ಮಾಡ್ತೀನಿ" ಅವನ ಮಾತು ಕೇಳಿ ಕಲ್ಲೇಶಿ ಪಕಪಕನೆ ನಕ್ಕಿದ್ದ. "ಲೇ ಕ್ರಿಕೆಟ್ ಆಡೋದು ಅಂದ್ರೆ ಅಷ್ಟು ಸುಲಭ ಐತೇನಲೆ? ನಿನಗಿನ್ನೂ ಹನ್ನೆರಡು ವರ್ಷ. ಹದಿನೆಂಟು ವರ್ಷ ಆದರೂ ಆಗ್ಬೇಕು. ಅಲ್ಲೀತನಕ ನನ್ ಜೊತೆ ಆಡ್ತಾ ಪ್ರಾಕ್ಟೀಸ್ ಮಾಡು. ನಿಂಗೆ ಹದಿನೆಂಟಾದ ಕೂಡ್ಲೇ ಚಾನ್ಸ್ ಕೊಡ್ಸೋ ಜವಾಬ್ದಾರಿ ನಂದು. ಸಚಿನ್ನು, ಗಂಗೂಲಿ, ಧೋನಿ, ಕುಂಬ್ಳೆ ಎಲ್ಲಾ ನಂಗೆ ತುಂಬಾ ಪರಿಚಯ. ನಾನು ಒಂದು ಮಾತು ಹೇಳಿದರೆ ಅವರು ಇಲ್ಲಾ ಅನ್ನಾಕಿಲ್ಲ" ಕಲ್ಲೇಶಿ ಸತ್ಯದ ತಲೆ ಮೇಲೆ ಹೊಡೆದಂತೆ ಹಸೀ ಹಸೀ ಸುಳ್ಳು ಹೇಳಿದ. ಅಂದಿನಿಂದ ಲಕ್ಕಿ ಸೀರಿಯಸ್ಸಾಗಿ ಕ್ರಿಕೆಟ್ ಬಗ್ಗೆ ಚಿಂತಿಸತೊಡಗಿದ.
    "ಓದೋಕೆ ಗೀದೋಕೆ ಏನೂ ಇಲ್ವೇನೋ? ಇಡೀ ದಿನ ಅದೇನೋ ಹಾಳು ಆಟ ಆಡ್ತಾ ತಿರುಗ್ತಾ ಇರ್ತೀಯಲ್ಲ? ಇನ್ನು ಮುಂದೆ ನೀನು ಸಂಜೆ ಬಂದ ಕೂಡ್ಲೇ ಓದೋಕೆ ಕೂರ್ಬೇಕು. ಆಡೋಕೆ ಅಂತ ಓಡಿದ್ರೆ ಸೌದೆ ತಗಂಡು ಬೆನ್ನ ಮೇಲೆ ಹಾಕ್ತೀನಿ ನೋಡು" ತಡವಾಗಿ ಮನೆಗೆ ಬಂದ ಮಗನನ್ನು ಲಕ್ಷ್ಮಮ್ಮ ತರಾಟೆಗೆ ತೆಗೆದುಕೊಂಡಳು. ಅದರ ಬಗ್ಗೆ ಗಮನವನ್ನೇ ಹರಿಸದ ಮಗ "ಅಮ್ಮಾ, ಕಲ್ಲಿಮಾಮ ನನ್ನನ್ನು ಭಾರತ ತಂಡಕ್ಕೆ ಸೇರಿಸ್ತಾನಂತೆ. ಈಗ ಅವನ ಜೊತೆ ಆಡಿ ಪ್ರಾಕ್ಟೀಸ್ ಮಾಡಿದ್ರೆ ಹದಿನೆಂಟು ವರ್ಷ ಆದ ಕೂಡ್ಲೇ ನನ್ನ ಕ್ರಿಕೆಟ್‌ಗೆ ಸೇರಿಸ್ತಾನಂತೆ. ಕೋಟಿಗಟ್ಲೆ ದುಡ್ಡು ಸಿಗುತ್ತೆ ಅಮ್ಮಾ" ಸಂಭ್ರಮದಿಂದ ನುಡಿದ. ಮೊದಲೇ ಮಗ ಓದಲಿಲ್ಲ ಎಂದು ತಲೆಕೆಡಿಸಿಕೊಂಡು ಕೂತಿದ್ದ ಅವಳಿಗೆ ಪಿತ್ತ ನೆತ್ತಿಗೇರಿತು. "ಹಾಳ್ಮುಂಡೇದೆ, ಆ ಕಲ್ಲೇಶಿ ಜೊತೆ ಸೇರಿ ಕೆಟ್ಟೋಗ್ಬುಟ್ಟೆ ನೀನು. ಆಟ ಆಡಿದ್ರೆ ದುಡ್ಡು ಎಲ್ಲಿ ನಿಮ್ಮ ಅಪ್ಪ ಮೇಲಿಂದ ಸುರೀತಾನಾ? ನಾಳೆಯಿಂದ ಅವನ ಹಿಂದೆ ಓಡಿದರೆ ಚಮ್ಡ ಸುಲಿದುಬಿಡ್ತೀನಿ" ಎನ್ನುತ್ತ ಮಗನ ಬೆನ್ನಿನ ಮೇಲೆ ಎರಡು ಬಾರಿಸಿದಳು. ಲಕ್ಕಿಯ ಬಲೂನಿಗೆ ಸೂಜಿ ಚುಚ್ಚಿದಂತಾಯಿತು. ನೆಪಮಾತ್ರಕ್ಕೆ ಪುಸ್ತಕ ಹಿಡಿದು ಕುಳಿತರೂ ಅವನ ತಲೆಯ ತುಂಬಾ ಸಚಿನ್, ಧೋನಿ, ಗಂಗೂಲಿಗಳೇ ಸುತ್ತುತಿದ್ದರು. ನಾಳೆ ಬೆಳಿಗ್ಗೆ ಕಲ್ಲೇಶನ ಹತ್ತಿರ ಎಲ್ಲಾ ಹೇಳಿಬಿಡಬೇಕೆಂದುಕೊಂಡ.
    ಬೆಳಿಗ್ಗೆ ಎದ್ದು ಶಾಲೆಗೆ ಹೋಗುವಾಗ ದಾರಿಯಲ್ಲಿ ಕಲ್ಲೇಶನಿಗಾಗಿ ಸುತ್ತೆಲ್ಲ ನೋಡುತ್ತ ನಡೆದ ಲಕ್ಕಿ. ಆದರೆ ಕಲ್ಲೇಶ ಎಲ್ಲೂ ಕಾಣಲೇ ಇಲ್ಲ. ಖಿನ್ನನಾಗಿ ಶಾಲೆಗೆ ಹೋದವನ ತಲೆಯಲ್ಲೂ ಕಲ್ಲೇಶನದೇ ಯೋಚನೆ. ಗಣಿತ ಮೇಷ್ಟ್ರು ಪರಮೇಶ್ವರಪ್ಪ ಎಲ್ಲರಿಗೂ ಮಗ್ಗಿ ಕೇಳುತ್ತ ಬಂದರು. "ಎಂಟೆಂಟ್ಲಿ ಎಷ್ಟು? ಲೇಯ್ ಲಕ್ಕಿ ಎದ್ದೇಳು ಮೇಲೆ. ಏನು ಕನಸು ಕಾಣ್ತಾ ಇದೀಯಾ? ಹೇಳು ಎಂಟೆಂಟ್ಲಿ ಎಷ್ಟು?" ಕೇಳಿದರು. ಲಕ್ಕಿಯ ತಲೆಯೆಲ್ಲ ಕಲ್ಲೇಶಿ, ಕ್ರಿಕೆಟ್, ಕೋಟಿ ಕೋಟಿ ಹಣ ಇದೇ ಚಿಂತೆ. ಅದೇ ಯೋಚನೆಯಲ್ಲಿ ಲಕ್ಕಿ "ಸಾರ್ ಕೋಟಿ ಸಾರ್" ಎಂದ. ಇಡೀ ತರಗತಿ ಗೊಳ್ಳೆಂದು ನಕ್ಕಿತು. ಮೇಷ್ಟ್ರಿಗೂ ನಗೆ ತಡೆಯಲಾಗಲಿಲ್ಲ. "ಕೋಟಿಯಂತೆ ಕೋಟಿ. ನಿನ್ ತಲೆ. ನೀನೇನು ಪುನೀತ್ ರಾಜ್‌ಕುಮಾರನೇನೋ? ಹಿಡಿ ಕೈ. ಸರಿಯಾಗಿ ಮಗ್ಗಿನೂ ಬರಲ್ವಲ್ಲೋ ಬೇಕೂಫ" ಎಂದು ಬೆತ್ತದಿಂದ ನಾಲ್ಕು ಬಾರಿಸಿದರು. ಅಂಥ ಏಟುಗಳೆಲ್ಲ ಲಕ್ಕಿಗೆ ಲೆಕ್ಕವೇ ಇಲ್ಲ. ಹತ್ತರೊಟ್ಟಿಗೆ ಹನ್ನೊಂದು ಅಷ್ಟೆ. ತನ್ನ ಅಮ್ಮ ಹೊಡೆಯುವಾಗ ಆಗುವ ನೋವಿನ ಕಾಲುಭಾಗದಷ್ಟಾದರೂ ಆಗುತ್ತದೋ ಇಲ್ಲವೋ ಎಂದು ಯೋಚಿಸುತ್ತಿದ್ದ. ಹನ್ನೆರಡು ವರ್ಷದವನಾದರೂ ಸಾಕಷ್ಟು ಬಲವಾಗಿಯೇ ಇದ್ದ ಅವನಿಗೆ ಈ ಏಟುಗಳೆಲ್ಲಾ ತಗಲುತ್ತಲೇ ಇರಲಿಲ್ಲ.
    ಸಂಜೆ ಲಕ್ಕಿಗೆ ಶಾಲೆ ಬಿಡುವುದು ನಾಲ್ಕು ಗಂಟೆಗೆ. ಕಾಫಿ ತಿಂಡಿ ಮುಗಿಸಿ ನಾಲ್ಕೂವರೆಗೆ ಆಡಲು ಓಡುವುದು ಅವನ ರೂಢಿ. ಅವತ್ತು ಮಾತ್ರ ಕಾಫಿ ಕುಡಿಯುವಾಗಲೇ ಅಮ್ಮ ತಾಕೀತು ಮಾಡಿದಳು. "ಇವತ್ತು ಕಿರ್ಕಿಟ್ಟು ಪರ್ಕಿಟ್ಟು ಅಂತ ಆ ಅಯೋಗ್ಯನ ಹಿಂದೆ ಓಡಿದರೆ ಜಾಗ್ರತೆ. ಓದೋಕೆ ಕೂತ್ಕೋ. ಅವನು ಬಂದ್ರೆ ನಾನು ವಾಪಾಸ್ ಕಳಿಸ್ತೀನಿ" ಎಂದಳು ಲಕ್ಷ್ಮಮ್ಮ. ಲಕ್ಕಿ ಉತ್ತರಿಸಲಿಲ್ಲ. "ಏನು ನಾನು ಹೇಳಿದ್ದು ತಿಳೀತಿಲ್ಲೋ? ಬೆತ್ತ ಇಲ್ಲೇ ಇದೆ. ಹೋದರೆ ಜಾಗ್ರತೆ" ಪಕ್ಕದಲ್ಲೇ ಇದ್ದ ನಾಗರಬೆತ್ತ ತೋರಿಸಿ ಮಗನನ್ನು ಬೆದರಿಸಿದಳು. ಲಕ್ಕಿ ಮನಸ್ಸಿಲ್ಲದ ಮನಸ್ಸಿನಿಂದ ಓದಲು ಒಳಗೆ ಹೋದ. ಅವನ ಕಣ್ಣು ಪುಸ್ತಕದ ಮೇಲಿದ್ದರೂ ಕಿವಿ ಮಾತ್ರ ಹೊರಗೇ ಇತ್ತು. ಕಲ್ಲೇಶಿ ಯಾವ ಕ್ಷಣದಲ್ಲಾದರೂ ಬರಬಹುದು. ಹತ್ತು ನಿಮಿಷ ಕಾಯುತ್ತಾನೆ. ತನ್ನ ಸುಳಿವಿಲ್ಲವೆಂದಾದರೆ ಹುಡುಕಿಕೊಂಡು ಮನೆಗೆ ಬಂದೇ ಬರುತ್ತಾನೆ ಎಂದು ಲಕ್ಕಿಗೆ ಗೊತ್ತಿತ್ತು. ಅದಕ್ಕೇ ಮೈಯೆಲ್ಲಾ ಕಿವಿಯಾಗಿಸಿಕೊಂಡು ಕುಳಿತಿದ್ದ.
    ಕೊಂಚ ಹೊತ್ತಿನಲ್ಲೇ ಅವನು ನಿರೀಕ್ಷಿಸಿದ್ದಂತೆಯೇ "ಅವ್ವಾ, ಲಕ್ಕಿ ಎಲ್ಲವನೆ" ಎಂಬ ಕಲ್ಲೇಶಿಯ ದನಿ ಕೇಳಿಸಿತು. ಅಮ್ಮ ಏನು ಉತ್ತರಿಸಬಹುದೆಂದು ಕಾತರದಿಂದ ಕುಳಿತ ಲಕ್ಕಿ. "ಏ ಪಾಪಿ ಮುಂಡೇದೆ, ನಿಂಗೆ ಮಾಡೋಕೆ ಬೇರೆ ಕೆಲ್ಸ ಏನೂ ಇಲ್ವಾ? ಅದೇನೋ ಕಿರ್ಕಿಟ್ಟು ಆಡಿದರೆ ಕೋಟಿ ದುಡ್ಡು ಬತ್ತದೆ ಅಂತ ನನ್ ಮಗಂಗೆ ಹೇಳಿ ತಲೆ ಕೆಡ್ಸಿದೀಯಲ್ಲಾ, ದುಡ್ಡೇನು ನಿಮ್ಮಪ್ಪ ತಂದು ಹಾಕ್ತಾನಾ? ನಿಂಗೆ ಅಪ್ಪ ಮಾಡಿಟ್ಟ ಆಸ್ತಿ ಇದೆ ಅವ್ನಿಗೇನಿದೆ? ಅವ್ನು ಓದೋದು ಬಿಟ್ಟು ನಿನ್ ಹಿಂದೆ ಸುತ್ತುತ್ತಾ ಇದ್ರೆ ಉದ್ಧಾರ ಆದ ಹಾಗೆ. ಇನ್ಮೇಲೆ ಅವನು ಆಡೋಕೆ ಬರಲ್ಲ. ನೀನು ಕರಿಯೋಕೂ ಬರ್ಬೇಡ. ತೊಲಗಾಚೆ" ಎಂದು ಅಬ್ಬರಿಸಿದಳು. ಲಕ್ಷ್ಮಮ್ಮನ ಈ ಹೊಸ ಅವತಾರವನ್ನು ಬೆಕ್ಕಸಬೆರಗಾಗಿ ನೋಡಿದ ಕಲ್ಲೇಶಿ "ಅದು ಹಾಗಲ್ಲವ್ವಾ" ಎಂದು ಏನೋ ಸಮಜಾಯಿಷಿ ಹೇಳಲು ಯತ್ನಿಸುತ್ತಿದ್ದಂತೆ "ಹಾಗೂ ಇಲ್ಲ ಹೀಗೂ ಇಲ್ಲ. ನೀನು ಬಾಯಿ ಮುಚ್ಕೊಂಡು ಹೋಗು ಇಲ್ಲಿಂದ. ಆ ಪರ್ದೇಶಿ ಆಟದಿಂದ ನೀನೊಬ್ಬ ಹಾಳಾಗಿದ್ದು ಸಾಕು. ನನ್ ಮಗನ್ನೂ ಕೆಡಿಸಬೇಡ" ಎಂದು ಬೊಬ್ಬಿರಿದಳು. ಇದೇಕೋ ಪರಿಸ್ಥಿತಿ ಕೈಮೀರುವ ಹಾಗಿದೆ ಎಂದುಕೊಂಡ ಕಲ್ಲೇಶಿ, ಅವಳ ಮನಸ್ಸೇಕೋ ಸರಿಯಿಲ್ಲವೆನಿಸುತ್ತದೆ ಎಂದುಕೊಂಡು ಮರುದಿನ ವಿಚಾರಿಸೋಣವೆಂದುಕೊಂಡು ಮನೆಯತ್ತ ಮರಳಿದ.
    ಲಕ್ಕಿಗೆ ಅಳು ಬರುವಂತಾಯಿತು. ಪಾಪ ಕಲ್ಲೇಶಿ ಎಷ್ಟು ಒಳ್ಳೆಯವನು. ನನಗೋಸ್ಕರ ದಿನಾಲೂ ಏನೇನೋ ತಿಂಡಿ ತಂದು ಕೊಡುತ್ತಾನೆ. ಈ ಅಮ್ಮ ಯಾಕೆ ಹಿಂಗೆ ಮಾಡ್ತಾಳೋ ಏನೋ? ಓಡಿ ಹೋಗಿ ಕಲ್ಲೇಶಿಯ ಕಾಲು ಹಿಡಿದು ಅಮ್ಮನ ಪರವಾಗಿ ಸಾರಿ ಕೇಳಿ ಅವನನ್ನು ಕರೆದುಕೊಂಡುಬರಬೇಕೆಂದುಕೊಂಡನಾದರೂ ಅಮ್ಮನ ಬೆತ್ತ ನೆನಪಾಗಿ ಭಯದಿಂದ ಸುಮ್ಮನೆ ಕುಳಿತ.
    ಓದುತ್ತ ಕುಳಿತ ಲಕ್ಕಿಗೆ ಹಾಗೇ ನಿದ್ರೆ ಬಂತು. "ಮಗಾ ಊಟ ಮಾಡು ಬಾ" ಎಂದು ಕರೆಯಲು ಬಂದ ಲಕ್ಷ್ಮಮ್ಮ ಮಗ ಅಲ್ಲೇ ನಿದ್ರೆಗೆ ಜಾರಿರುವುದನ್ನು ಕಂಡು ಕೆಂಡಾಮಂಡಲವಾದಳು. "ಕಳ್ಳ ನನ್ಮಗ್ನೆ ಓದ್ಕೋ ಅಂತ ಕೂರಿಸಿದ್ರೆ ನಿದ್ದೆ ಮಾಡ್ತೀಯಾ ಕತ್ತೆ ಭಡವಾ? ಎದ್ದೇಳೋ ಮೇಲೆ" ಎಂದು ಬೆತ್ತದಿಂದ ನಾಲ್ಕು ಬಾರಿಸಿದಳು. ನಿದ್ರೆಯಲ್ಲಿದ್ದ ಲಕ್ಕಿ ಮೈಮೇಲೆ ಇದ್ದಕ್ಕಿದ್ದಂತೆ ಇದ್ಯಾವ ದೆವ್ವ ದಾಳಿ ಮಾಡಿತೆಂದು ಅರ್ಥವಾಗದೆ ಬೆಚ್ಚಿ ಎದ್ದುಕುಳಿತ. "ನಿನ್ ಮೂತಿಗಿಷ್ಟು ಬೆಂಕಿಹಾಕ. ಇವತ್ತು ರಾತ್ರಿ ನೀನು ಮಲಗ್ಬೇಡ. ನಾನೂ ಕೂತಿರ್ತೀನಿ. ಇಡೀ ರಾತ್ರಿ ಓದ್ಕೋಬೇಕು. ಈಗ ಮಲಗಿದ್ದಕ್ಕೆ ಈ ಶಿಕ್ಷೆ" ಎಂದಳು. "ಊಟ ಹಾಕಮ್ಮಾ ಹಸಿವಾಗುತ್ತಿದೆ" ಎಂದ ಲಕ್ಕಿ. ಅವನು ರಾತ್ರಿ ಊಟ ಕೇಳಿದ್ದು ಅವತ್ತೇ ಮೊದಲು. ಪ್ರತಿದಿನ ಕಲ್ಲೇಶಿ ಏನಾದರೂ ತಿಂಡಿ ಕೊಡುತ್ತಿದ್ದುದರಿಂದ ಅವನ ಹೊಟ್ಟೆ ತುಂಬಿರುತ್ತಿತ್ತು. ಆದರೆ ಇಂದು ಕಲ್ಲೇಶಿಯೂ ಇಲ್ಲ, ತಿಂಡಿಯೂ ಇಲ್ಲ. "ಓದು ಅಂದ್ರೆ ಓದಲ್ಲ. ಊಟಕ್ಕೆ ಮಾತ್ರ ಸರಿಯಾಗಿ ಓಡಿ ಬರ್ತಾನೆ ಕಳ್ಳಭಡವ" ಬೈದಳು. ವಾಸ್ತವವಾಗಿ ಅವನು ಊಟ ಬಡಿಸೆಂದು ಎಂದೂ ಕೇಳಿದವನೇ ಅಲ್ಲ. ಬಡಿಸಿದರೂ ತಿಂದ ಶಾಸ್ತ್ರ ಮಾಡಿ ಕೈತೊಳೆದುಕೊಳ್ಳುತ್ತಿದ್ದ. ಎಲ್ಲಾ ಕಲ್ಲೇಶಿಯ ಕೃಪೆ. ಆದರೆ ಲಕ್ಷ್ಮಮ್ಮ ತನ್ನ ಸಿಟ್ಟು ತೀರಿಸಿಕೊಳ್ಳಲು ಸಹಸ್ರನಾಮಾರ್ಚನೆ ಶುರುವಿಟ್ಟುಕೊಂಡಿದ್ದಳು.
    ಅವತ್ತು ಮಾತ್ರ ಎರಡೆರಡು ಸಲ ಕೇಳಿ ಬಡಿಸಿಕೊಂಡು ಊಟಮಾಡಿದ ಲಕ್ಕಿ. ಊಟ ಆದಮೇಲೆ ತನ್ನ ಮನಸ್ಸು ಬದಲಿಸಿದ ಲಕ್ಷ್ಮಮ್ಮ "ಇವತ್ತು ಓದಿದ್ದು ಸಾಕು ಬೆಳಿಗ್ಗೆ ಬೇಗ ಎದ್ದು ಓದ್ಕೋ" ಎಂದು ವಿನಾಯಿತಿ ತೋರಿದಳು. ಲಕ್ಕಿಗೂ ಅಷ್ಟೇ ಬೇಕಾಗಿತ್ತು. ಅವನು ಮಲಗಿದ ಕೂಡಲೇ ನಿದ್ರಾದೇವಿ ಆವರಿಸಿಕೊಂಡಳು.
    ಮರುದಿನ ಲಕ್ಕಿ ಶಾಲೆಗೆ ಹೋಗುವಾಗ ದಾರಿಯಲ್ಲಿ ಕಲ್ಲೇಶಿ ಕಾದುನಿಂತಿದ್ದ. "ಕಲ್ಲಿಮಾಮಾ ಸಾರಿ ಕಣೋ, ನಿನ್ನೆ ಅಮ್ಮ ನಂಗೆ ತುಂಬಾ ಬೈದು, ಹೊಡೆದುಬಿಟ್ಟಳು ಕಣೋ. ಈಗ ಏನ್ಮಾಡೋದು ಅಂತ ಗೊತ್ತಾಗ್ತಾ ಇಲ್ಲ. ನಿಂಗೆ ತುಂಬಾ ಬೈದ್ಲು ಅಂತ ಕಾಣುತ್ತೆ ಅಲ್ವಾ? ನಂಗೆ ಈಗ ಏನು ಮಾಡ್ಬೇಕು ಅಂತ್ಲೇ ಗೊತ್ತಾಗ್ತಾ ಇಲ್ಲ ಕಣೋ" ಗದ್ಗದ ಸ್ವರದಲ್ಲಿ ಲಕ್ಕಿ ಹೇಳಿದಾಗ ಅಯ್ಯೋ ಪಾಪ ಎನಿಸದಿರಲಿಲ್ಲ ಕಲ್ಲೇಶಿಗೆ. ಅವನ ಕಣ್ಣೀರೊರೆಸುತ್ತ ಹೇಳಿದ. "ಹೋಗ್ಲಿ ಬಿಡೋ ಲಕ್ಕಿ. ನಂಗೂ ಏನ್ಮಾಡೋದು ಅಂತ ತಿಳಿತಾ ಇಲ್ಲ. ಯೋಚನೆ ಮಾಡಿ ಇವತ್ತು ಸಂಜೆ ಹೇಳ್ತೀನಿ ಆಯ್ತಾ? ಏನಾದ್ರೂ ಉಪಾಯ ಮಾಡೇ ಮಾಡ್ತೀನಿ ಯೋಚಿಸ್ಬೇಡ. ಸಂಜೆ ಇಲ್ಲಿಗೇ ಬಾ ಸಿಕ್ತೀನಿ" ಎಂದ. ಲಕ್ಕಿ ಮನಸ್ಸಿಲ್ಲದ ಮನಸ್ಸಿನಿಂದಲೇ ಶಾಲೆಗೆ ನಡೆದ. 
    ಸಂಜೆ ಶಾಲೆಯಿಂದ ಮರಳಿದ ಲಕ್ಕಿಗೆ ಕಲ್ಲೇಶಿಯ ಹಸನ್ಮುಖ ಕಂಡು ಆಶಾಭಾವನೆ ಉಂಟಾಯಿತು. ಏನೋ ಒಂದು ಉಪಾಯ ಯೋಚಿಸಿದ್ದಾನೆ ಎಂದುಕೊಂಡ. "ಕಲ್ಲಿಮಾಮಾ, ಏನಾದರೂ ಉಪಾಯ ಹೊಳೀತಾ? ನನಗೆ ನಿನ್ನೆ ಒಂದು ದಿನ ಕ್ರಿಕೆಟ್ ಆಡದೆ ಏನೇನೋ ಆಗ್ತಾ ಇದೆ. ಇವತ್ತಾದ್ರೂ ಆಡಲೇ ಬೇಕು" ಎಂದ. ಕಲ್ಲೇಶಿ ಹೇಳಿದ "ಒಂದು ಕೆಲಸ ಮಾಡು. ಲೆಕ್ಕದಲ್ಲಿ ನಾನು ತುಂಬಾ ದಡ್ಡ ಇದೀನಂತ ಮೇಷ್ಟ್ರು ಮನೆಪಾಠಕ್ಕೆ ಬರೋಕೆ ಹೇಳಿದಾರಂತ ನಿನ್ನಮ್ಮಂಗೆ ಹೇಳ್ಬಿಟ್ಟು ಬಾ. ಮುಂದಿನದನ್ನು ನಾನು ನೋಡ್ಕೋತೀನಿ" ಎಂದ. "ಸರಿ ಈಗಲೇ ಹೋಗಿ ಹೇಳಿ ಬರ್ತೀನಿ" ಎಂದು ಓಡುತ್ತ ಹೊರಟ ಲಕ್ಕಿಯನ್ನು ತಡೆದ ಕಲ್ಲೇಶಿ ಹೇಳಿದ "ಲೇ ಬೇಕೂಫ, ಸ್ವಲ್ಪ ತಡಿ. ನೀನು ಇವತ್ತೇ ಹೀಗೆ ಹೇಳಿದರೆ ನಿಮ್ಮಮ್ಮಂಗೆ ಡೌಟ್ ಬಂದೇ ಬರುತ್ತೆ. ಇನ್ನು ನಾಲ್ಕೈದು ದಿನ ಶಿಸ್ತಾಗಿ ಮನೇಲೇ ಕೂತ್ಕೊಂಡು ಓದು. ಆಮೇಲೆ ನಾನೇ ಹೇಳ್ತೀನಿ ಯಾವತ್ತು ಬರ್ಬೇಕು ಅಂತ. ಗಡಿಬಿಡಿ ಮಾಡ್ಬೇಡ ಕಣೋ. ಸ್ವಲ್ಪ ತಲೆ ಓಡಿಸ್ಬೇಕು. ಅದ್ಕೇ ನಿಂಗೆ ಬುದ್ಧಿಯಿಲ್ಲ ಅನ್ನೋದು" ಎಂದ. ಲಕ್ಕಿಗೆ ಅದೂ ಹೌದೆನಿಸಿ ಬೆಪ್ಪನಂತೆ ತಲೆಯಾಡಿಸಿದ. "ಇದನ್ನು ತಗೋ. ಇಲ್ಲೇ ತಿಂದು ಹೋಗು" ಎನ್ನುತ್ತ ಕಲ್ಲೇಶಿ ಕೊಟ್ಟ ಬ್ರೆಡ್ ಮತ್ತು ಕೇಕನ್ನು ಗಬಗಬನೆ ತಿಂದು ಮನೆಗೋಡಿದ ಲಕ್ಕಿ.
    ನಾಲ್ಕು ದಿನ ಕಲ್ಲೇಶಿಯ ಭೇಟಿಯೇ ಇಲ್ಲ. ಇತ್ತ ಲಕ್ಷ್ಮಮ್ಮನೂ ತನ್ನ ಮಗ ಅವನ ಸಹವಾಸ ತ್ಯಜಿಸಿ ಓದಲು ಶುರುವಿಟ್ಟುಕೊಂಡಿದ್ದನ್ನು ನೋಡಿ ಖುಷಿಯಾದಳು. ಲಕ್ಕಿ ಸಂಜೆ ಶಿಸ್ತಿನ ಸಿಪಾಯಿಯಂತೆ ಮನೆಗೆ ಬಂದು ಕಾಫಿ ಕುಡಿದು ತಿಂಡಿ ತಿಂದು ಓದಲು ಕೂರುತ್ತಿದ್ದ. ಕಲ್ಲೇಶಿ ಏನು ತನ್ನನ್ನು ಮರೆತೇ ಬಿಟ್ಟನೇನೋ ಎಂದು ಆತಂಕಗೊಂಡಿದ್ದ ಆತನಿಗೆ ಐದನೆಯ ದಿನ ಕಲ್ಲೇಶಿಯ ದರ್ಶನವಾಯಿತು. ಮುಖ ಇಷ್ಟಗಲ ಮಾಡಿಕೊಂಡು ತನ್ನತ್ತ ಓಡಿ ಬಂದ ಲಕ್ಕಿಯ ತಲೆ ನೇವರಿಸಿದ ಕಲ್ಲೇಶಿ "ನಾಳೆಯಿಂದ ಆಟಕ್ಕೆ ಬಾ ಲಕ್ಕಿ. ಇವತ್ತು ನಿಮ್ಮಮ್ಮಂಗೆ ನಾನು ಹೇಳಿಕೊಟ್ಟಹಾಗೆ ಹೇಳು ಆಯಿತಾ?" ಎಂದಾಗ ಲಕ್ಕಿ ಒಪ್ಪಿ ತಲೆಯಾಡಿಸಿದ.
    ಮಗ ಮೇಷ್ಟ್ರ ಬಳಿ ಮನೆಪಾಠಕ್ಕೆ ಹೋಗುತ್ತೇನೆಂದಾಗ ಲಕ್ಷ್ಮಮ್ಮನಿಗೆ ಅದರಲ್ಲಿ ತಪ್ಪೇನೂ ಕಾಣಲಿಲ್ಲ. ಅದು ಒಳ್ಳೆಯದೇ ಎಂದಾಕೆ ಯೋಚಿಸಿದಳು. ಎಷ್ಟೆಂದರೂ ಗುರುಗಳ ಬಳಿ ಮನೆಪಾಠಕ್ಕೆ ಹೋದರೆ ಮಗನ ಕಲಿಕಾಮಟ್ಟ ಉತ್ತಮಗೊಳ್ಳುವುದು ಖಂಡಿತ ಎಂದು ಯೋಚಿಸಿದ ಆಕೆ ಕೂಡಲೇ ಒಪ್ಪಿದಳು. ಮಗನಿಗಿಂತಲೂ ಹೆಚ್ಚು ಉತ್ಸುಕಳಾಗಿದ್ದ ಆಕೆ "ನಾಳೆ ಯಾಕೆ? ಇವತ್ತೇ ಹೋಗು" ಎಂದು ಅವಸರಪಡಿಸಿದಳು. ಒಮ್ಮೆ ಹೋಗೋಣವೆಂದು ಯೋಚಿಸಿದ ಲಕ್ಕಿ ಮರುಕ್ಷಣವೇ ಕಲ್ಲೇಶಿ ಬೇರೆಲ್ಲೋ ಹೋಗಿರುತ್ತಾನೆ, ಅವನನ್ನು ಹುಡುಕುವುದೆಲ್ಲಿ ಎಂದು ಗೊತ್ತಾಗದೆ "ಮೇಷ್ಟ್ರಿಗೆ ಇವತ್ತು ಪುರುಸೊತ್ತಿಲ್ಲವಂತೆ ಅಮ್ಮಾ. ಅದಕ್ಕೆ ನಾಳೆ ಬಾ ಎಂದರು" ಎಂದ. "ಸರಿ ನಿನಗೆ ತಡವಾಗಿಯಾದರೂ ಬುದ್ಧಿ ಬಂತಲ್ಲ, ನಾಳೆಯಿಂದ ತಪ್ಪದೆ ಮನೆಪಾಠಕ್ಕೆ ಹೋಗು" ಎಂದಳು. 
    ಮರುದಿನ ಎಲ್ಲವೂ ಅವರು ಅಂದುಕೊಂಡಂತೆಯೇ ನಡೆಯಿತು. ಮನೆಪಾಠದ ನೆಪ ಹೇಳಿ ಬಂದ ಲಕ್ಕಿ ಕಲ್ಲೇಶಿಯ ಜೊತೆಗೆ ಮಾಮೂಲಿಗಿಂತ ಹೆಚ್ಚು ಹೊತ್ತೇ ಕ್ರಿಕೆಟ್ ಆಡಿದ. ಅದಕ್ಕೆ ತಕ್ಕಂತೆ ತಿಂಡಿಯೂ ಹೆಚ್ಚು ಸಿಕ್ಕಿತು. ಹೇಗೂ ಮನೆಪಾಠಕ್ಕೆಂದು ಹೇಳಿದ್ದರಿಂದ ಅಮ್ಮನೂ ತಡವಾಗಿ ಹೋಗಿದ್ದಕ್ಕೆ ಆಕ್ಷೇಪಿಸಲಿಲ್ಲ. ರಾತ್ರಿ ಓದುವಂತೆಯೂ ಹೇಳಲಿಲ್ಲ. ಹೇಗೂ ಮನೆಪಾಠಕ್ಕೆ ಹೋಗಿದ್ದಾನೆ. ಮೇಷ್ಟ್ರು ಚೆನ್ನಾಗಿಯೇ ಓದಿಸಿರುತ್ತಾರೆ. ಆದ್ದರಿಂದ ಮಲಗಲೆಂದು ಸುಮ್ಮನಾದಳು. ಲಕ್ಕಿಗೆ ಸ್ವರ್ಗಕ್ಕೆ ಮೂರೇ ಗೇಣು. ಅನೇಕ ದಿನಗಳವರೆಗೆ ಈ ರೀತಿ ಅವರ ಆಟ ನಿರಾತಂಕವಾಗಿ ಸಾಗಿತು. ಲಕ್ಷ್ಮಮ್ಮನಿಗೆ ಸಣ್ಣ ಅನುಮಾನವೂ ಬರಲಿಲ್ಲ.
    ಒಂದು ದಿನ ಸಂಜೆ ಆಟಕ್ಕೆ ಹೋದಾಗ ಕಲ್ಲೇಶಿ ಗಂಭೀರವಾಗಿದ್ದ. ಯಾಕೆಂದು ಲಕ್ಕಿ ವಿಚಾರಿಸಿದ. "ನಾನು ಇನ್ನು ಒಂದು ವಾರ ಇರಲ್ಲ ಕಣೋ. ಬೆಂಗಳೂರಿಗೆ ಹೋಗ್ತಾ ಇದೀನಿ. ಐಪಿಎಲ್ ಮ್ಯಾಚ್ ನೋಡಕ್ಕೆ ಹೋಗ್ತಾ ಇದೀನಿ" ಎಂದ. "ಐಪಿಲ್ ಅಂದ್ರೆ ಏನು ಕಲ್ಲಿಮಾಮಾ?" ಎಂದು ಕುತೂಹಲದಿಂದ ಲಕ್ಕಿ ಕೇಳಿದಾಗ ಕಲ್ಲೇಶಿಗೆ ನಗು ತಡೆಯಲಾಗಲಿಲ್ಲ. "ಐಪಿಲ್ ಅಲ್ಲ ಕಣೋ ಗೂಬೆ, ಐಪಿಎಲ್ ಅಂತ. ಕ್ರಿಕೆಟ್ ಮ್ಯಾಚು. ನಮ್ಮ ಬೆಂಗಳೂರು ಟೀಮಿಂದು ಮ್ಯಾಚಿದೆ. ಅದನ್ನ ನೋಡೋಕೆ ಹೋಗ್ತಾ ಇದೀನಿ. ನಮ್ಮ ಟೀಮಲ್ಲಿ ಕ್ರಿಸ್ ಗೇಲ್ ಅಂತ ಒಬ್ಬ ಇದಾನೆ. ಮಸ್ತಾಗಿ ಆಡ್ತಾನೆ. ಅವ್ನು ಸುಮ್ನೆ ಬಾಲಿಗೆ ಬ್ಯಾಟು ತಾಗಿಸಿದರೆ ಸಾಕು, ಸಿಕ್ಸರ್ ಗ್ಯಾರಂಟಿ" ಎಂದ ಕಲ್ಲೇಶಿ. "ಕಲ್ಲಿಮಾಮಾ, ನಂಗೆ ನೀನಿಲ್ದೆ ಒಂದು ವಾರ ಇರಕ್ಕಾಗಲ್ಲ. ನನ್ನೂ ಕರ್ಕೊಂಡು ಹೋಗು ಪ್ಲೀಸ್" ಎಂದು ಗೋಗರೆದ. "ಅಯ್ಯೋ ಅದಕ್ಕೆ ಸಾವಿರಾರು ರೂಪಾಯಿ ದುಡ್ಡು ಬೇಕು. ಆಟ ನೋಡೋಕೆ ದುಡ್ಡು ಕೊಡ್ಬೇಕು. ನಿನ್ ಹತ್ರ ಅಷ್ಟು ದುಡ್ಡಿದ್ರೆ ಬಾ. ಇಲ್ಲ ಅಂದ್ರೆ ಆಗಲ್ಲ ಅಷ್ಟೆ" ಕಲ್ಲೇಶಿ ಹೇಳಿದಾಗ ಲಕ್ಕಿಗೆ ಅಳು ಬರುವಂತಾಯಿತು. "ಕಲ್ಲಿಮಾಮಾ, ನನ್ಹತ್ರ ಅಷ್ಟೆಲ್ಲ ದುಡ್ಡಿಲ್ಲ. ನೀನೇ ದುಡ್ಡು ಕೊಟ್ಟು ಕರ್ಕೊಂಡ್ಹೋಗೋ ಪ್ಲೀಸ್" ಎಂದು ಅಂಗಲಾಚಿದ. ಕಲ್ಲೇಶಿಯೂ ಅದನ್ನೇ ಯೋಚಿಸುತ್ತಿದ್ದನಾದರೂ ಒಮ್ಮೆ ಅವನೇ ಬೇಡಿಕೊಳ್ಳಲೆಂದು ಸುಮ್ಮನಿದ್ದ. ಈಗ ಅವನಿಚ್ಛೆಯಂತೆ ಲಕ್ಕಿ ಬೇಡಿಕೊಂಡಾಗ ಕೂಡ ಕೂಡಲೇ ಒಪ್ಪಿಕೊಳ್ಳದೆ ಅಳೆದೂ ಸುರಿದೂ "ನೋಡೋಣ ಲಕ್ಕಿ, ನನ್ಹತ್ರ ಇಬ್ರಿಗಾಗೋವಷ್ಟು ದುಡ್ಡಿಲ್ಲ. ಟ್ರೈ ಮಾಡ್ತೀನಿ" ಎಂದ. "ಕಲ್ಲಿಮಾಮಾ, ನೀನು ಏನಾದ್ರೂ ಮಾಡಿ ನನ್ನ ಕರ್ಕೊಂಡು ಹೋಗ್ಲೇ ಬೇಕು. ಇಲ್ಲಾಂದ್ರೆ ನಾನು ಇನ್ಮೇಲೆ ನಿನ್ಜೊತೆ ಆಡೋಕೆ ಬರಲ್ಲ. ನಿನ್ಹತ್ರ ಮಾತಾಡೋದೂ ಇಲ್ಲ" ಎಂದು ಗಂಭೀರ ಬೆದರಿಕೆ ಹಾಕಿದ. ಅದೆಲ್ಲ ಸುಳ್ಳೆಂದು ಕಲ್ಲೇಶಿಗೆ ಚೆನ್ನಾಗಿ ಗೊತ್ತು. ತಿಂಡಿ ಆಸೆ ತೋರಿಸಿದರೆ ಹಿಂದೆಮುಂದೆ ನೋಡದೆ ಆಟಕ್ಕೆ ಓಡಿಬರುತ್ತಾನೆ. ಆದರೆ ಅವನು ತನ್ನ ಬಳಿ ಬೇಡಿಕೊಳ್ಳುವುದು ಬಿಟ್ಟು ತನಗೇ ಬೆದರಿಕೆ ಹಾಕಲು ಬಂದಾಗ "ಪರವಾಗಿಲ್ಲವೇ ಈ ಹುಡುಗ, ಬಲೇ ಜೋರಿದಾನೆ. ನಾನು ಏನೋ ಅಂತಿದ್ದೆ" ಎಂದು ಹುಬ್ಬೇರಿಸಿದ. "ಆಯ್ತು ಲಕ್ಕಿ, ಇನ್ನೂ ನಾಲ್ಕೈದು ದಿನ ಟೈಮಿದೆ. ನಾನು ನಿನಗೂ ಟಿಕೆಟ್ ತರ್ತೀನಿ" ಎಂದದ್ದೇ ತಡ, ಕುಣಿದು ಕುಪ್ಪಳಿಸಿದ ಲಕ್ಕಿ "ಕಲ್ಲಿಮಾಮಾ ನೀನೆಷ್ಟು ಒಳ್ಳೆಯವನು" ಎಂದು ಅವನನ್ನು ತಬ್ಬಿಕೊಂಡೇ ಬಿಟ್ಟ.
    ಮರುದಿನ ಆಡುವಾಗ ಕಲ್ಲೇಶಿ ಕೇಳಿದ "ಅಲ್ವೋ ಲಕ್ಕಿ, ನೀನು ಬೆಂಗಳೂರಿಗೆ ಬರೋದೇನೋ ಸರಿ, ಆದ್ರೆ ನಿಮ್ಮಮ್ಮಂಗೆ ಏನು ಹೇಳ್ತೀಯಾ?" ಎಂದು ಪ್ರಶ್ನಿಸಿದ. ಲಕ್ಕಿ ಅದುವರೆಗೂ ಆ ಬಗ್ಗೆ ಯೋಚಿಸಿಯೇ ಇರಲಿಲ್ಲ. "ಓಹ್ ಹೌದಲ್ಲ, ನಿಜವಾಗ್ಲೂ ನನಗೆ ಏನು ಹೇಳ್ಬೇಕು ಅಂತ ಗೊತ್ತಿಲ್ಲ. ನೀನೇ ಏನಾದ್ರೂ ಉಪಾಯ ಹೇಳ್ಕೊಡು ಮಾಮಾ, ನಾನು ಈ ಬಗ್ಗೆ ಯೋಚಿಸಿಯೇ ಇಲ್ಲ" ಎಂದ. "ಮುಠ್ಠಾಳ ಕಣಯ್ಯ ನೀನು. ಬೆಂಗಳೂರಿಗೆ ಬರ್ತೀನಂತ ಕುಣೀತಾ ಹೇಳ್ದೆ. ಈ ಬಗ್ಗೆ ಏನೂ ಯೋಚಿಸಿಲ್ಲ ಅಂತ ಈಗ ಹೇಳ್ತಾ ಇದೀಯಲ್ಲೋ, ನಂಗೊತ್ತಿಲ್ಲ ಏನಾದ್ರೂ ಮಾಡ್ಕೋ ಹೋಗು. ನಾನು ಏನೂ ಉಪಾಯ ಹೇಳ್ಕೊಡಲ್ಲ" ಎಂದ ಕಲ್ಲೇಶಿ. "ಕಲ್ಲಿಮಾಮಾ ಪ್ಲೀಸ್" ಲಕ್ಕಿ ಬಿಡಬೇಕಲ್ಲ. ಅವನು ಒಪ್ಪಿಕೊಂಡ ಮೇಲೆಯೇ ಲಕ್ಕಿ ಆಟ ಮುಂದುವರೆಸಲು ಒಪ್ಪಿದ್ದು.
    ಮನೆಗೆ ಹೋಗುವಾಗ ಕಲ್ಲೇಶಿ "ಲಕ್ಕಿ, ನಿಮ್ಮಮ್ಮಂಗೆ ಶಾಲೆಯಿಂದ ಟೂರ್ ಕರ್ಕೊಂಡು ಹೋಗ್ತಾ ಇದಾರೆ ಅನ್ನು. ಸ್ಟಡಿ ಟೂರ್ ಅಂತ ಹೇಳು. ದುಡ್ಡು ಅವರೇ ಕೊಡ್ತಾರಂತೆ ಅಂತ್ಲೂ ಹೇಳು. ಒಪ್ಪಿಯೇ ಒಪ್ತಾರೆ. ಟೂರಿಗೆ ಹೋಗಿಲ್ಲಾಂದ್ರೆ ಫೇಲ್ ಮಾಡ್ತಾರಂತೆ ಅಂತ ಹೇಳು" ಎಂದ. ಹಾಗೆಯೇ ಆಗಲೆಂದು ಮನೆಗೆ ಹೋದ ಲಕ್ಕಿ ಅಮ್ಮನ ಎದುರು ಕಲ್ಲೇಶಿ ಹೇಳಿಕೊಟ್ಟ ಅದೇ ಗಿಳಿಪಾಠ ಒಪ್ಪಿಸಿದ. ಲಕ್ಷ್ಮಮ್ಮನಿಗೆ ಒಂದು ವಾರ ಮಗನನ್ನು ಗೊತ್ತಿಲ್ಲದ ದೂರದೂರಿಗೆ ಕಳುಹಿಸಲು ಇಷ್ಟವೇ ಇರಲಿಲ್ಲ. ಆದರೆ ಹೋಗದಿದ್ದರೆ ಫೇಲ್ ಮಾಡುತ್ತಾರಂತೆ ಎಂದು ಮಗ ಹೇಳಿದ್ದರಿಂದ ಮತ್ತು ದುಡ್ಡನ್ನೇನೂ ಕೇಳದಿದ್ದರಿಂದ ಅರೆಮನಸ್ಸಿನಿಂದ ಒಪ್ಪಿದಳು.
    ಮರುದಿನ ಲಕ್ಕಿ ಕಲ್ಲೇಶಿಗೆ ಅಮ್ಮ ಒಪ್ಪಿದ ಸಂಗತಿ ತಿಳಿಸಿದ. "ಗುಡ್, ಭಾನುವಾರ ಮ್ಯಾಚಿದೆ. ಶನಿವಾರ ರಾತ್ರಿ ಬಸ್ಸಿಗೆ ಹೋಗೋಣ. ನೀನು ಶನಿವಾರ ಬೆಳಿಗ್ಗೆ ಶಾಲೆಗೆ ಬರುವಾಗ್ಲೇ ಮನೆಗೆ ಬರಲ್ಲಾಂತ ಹೇಳಿ ಬಂದ್ಬಿಡು. ಭಾನುವಾರ ಮ್ಯಾಚ್ ಮುಗಿದ ಮೇಲೆ ನಾನು ಅಲ್ಲಿ ಇಲ್ಲಿ ಅಂತ ನಿನಗೆ ಒಂದು ವಾರ ಬೆಂಗಳೂರೆಲ್ಲ ಸುತ್ತಾಡಿಸಿ ಕರ್ಕೊಂಡು ಬರ್ತೀನಿ" ಎಂದ. ಲಕ್ಕಿ ಒಪ್ಪಿ ತಲೆಯಲ್ಲಾಡಿಸಿದ.
    ಶನಿವಾರ ಬೆಳಿಗ್ಗೆ ಶಾಲೆಗೆ ಹೊರಟ ಮಗನಿಗೆ "ಜೋಪಾನ ಮಗಾ, ಜಾಗ್ರತೆಯಾಗಿರು. ಬೆಂಗಳೂರು ತುಂಬಾ ದೊಡ್ಡ ಊರಂತೆ. ಅಲ್ಲಿ ಇಲ್ಲಿ ಸುತ್ತಾಡೋಕೆ ಹೋಗ್ಬೇಡ. ಮೇಷ್ಟç ಜೊತೇನೇ ಇರು ಆಯ್ತಾ?" ಎಂದು ಎಚ್ಚರಿಕೆ ಹೇಳಿದಳು ಲಕ್ಷ್ಮಮ್ಮ. "ಸರಿ ಕಣಮ್ಮಾ, ಜಾಗ್ರತೆಯಾಗಿ ಇರ್ತೀನಿ ಏನೂ ಚಿಂತೆ ಮಾಡ್ಬೇಡ ಮುಂದಿನ ಸೋಮವಾರ ಬರ್ತೀನಿ" ಎಂದು ಓಡಿದ.
    ಸಂಜೆ ಲಕ್ಕಿಗೆ ಇನ್ನೊಂದು ಚಿಂತೆ ಶುರುವಾಯಿತು. ಎಲ್ಲಾ ಸರಿ, ಒಂದು ವಾರ ಶಾಲೆಗೆ ಚಕ್ಕರ್ ಹಾಕಿದರೆ ಮೇಷ್ಟ್ರಿಗೆ ಏನು ಹೇಳುವುದು? ಇಂಥ ಸಮಸ್ಯೆಗಳ ಬಗೆಗೆಲ್ಲ ಅವನು ಯಾವತ್ತೂ ತಲೆಕೆಡಿಸಿಕೊಂಡವನೇ ಅಲ್ಲ. ಅದನ್ನೆಲ್ಲ ಕಲ್ಲೇಶಿಯ ತಲೆಗೆ ಕಟ್ಟಿ ನಿರಾಳನಾಗುತ್ತಿದ್ದ. ಅಂದೂ ಹಾಗೆಯೇ ಆ ಸಮಸ್ಯೆಯನ್ನು ಕಲ್ಲೇಶಿಯ ಮುಂದಿಟ್ಟ. "ಹುಷಾರಿರ್ಲಿಲ್ಲ ಅಂತ ಹೇಳಿದ್ರಾಯ್ತು ಬಿಡೋ. ನಾನು ಒಂದು ರಜಾ ಅರ್ಜಿ ಬರ್ಕೊಡ್ತೀನಿ. ಅದಕ್ಕೆ ಅಮ್ಮನ ಹತ್ರ ಸೈನ್ ಮಾಡ್ಸಿ ಮೇಷ್ಟ್ರಿಗೆ ಕೊಡು ತಲೆ ಕೆಡಿಸ್ಕೋಬೇಡ. ನಿಮ್ಮಮ್ಮಂಗೆ ಹೇಗೂ ಓದೋಕೆ ಬರಿಯೋಕೆ ಬರಲ್ಲ. ಏನಾದ್ರೂ ಒಂದು ನೆಪ ಹೇಳಿ ಸೈನ್ ಹಾಕಿಸಿದ್ರಾಯ್ತು" ಎಂದ.
    ರಾತ್ರಿ ಕಲ್ಲೇಶಿಯ ಜೊತೆ ಬಸ್ ನಿಲ್ದಾಣಕ್ಕೆ ಹೋದ ಲಕ್ಕಿ ಅಲ್ಲಿ ತಮ್ಮ ಟಿಕೆಟನ್ನು ಕಾಯ್ದಿರಿಸಲಾಗಿದ್ದ ವೋಲ್ವೋ ಬಸ್ಸಿನ ವೈಭವವನ್ನು ಕಂಡು ಬೆಕ್ಕಸಬೆರಗಾದ. ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತ ನಿಂತ ಅವನನ್ನು ಕಲ್ಲೇಶಿಯೇ ಎಚ್ಚರಿಸಿದ. "ಏನು ನೋಡ್ತಾ ಇದೀಯಾ ಲಕ್ಕಿ, ಹತ್ತು ಮೇಲೆ. ಆರಾಮವಾಗಿ ಮಲಗಿ ನಿದ್ರೆ ಮಾಡ್ತಾ ಹೋಗ್ಬಹುದು ಈ ಬಸ್ನಲ್ಲಿ" ಎಂದ. ಲಕ್ಕಿ ಹಿಂಜರಿಯುತ್ತಲೇ ಹತ್ತಿದ. ಒಮ್ಮೆ ಸೀಟಿನಲ್ಲಿ ಪವಡಿಸಿದ ಕೂಡಲೇ ಅವನಿಗೇಕೋ ಇರಿಸುಮುರಿಸಾಯಿತು. ಮನೆಯಲ್ಲಿ ಹರುಕು ಚಾಪೆಯ ಮೇಲೆ ಮಲಗಿ ಆರಾಮವಾಗಿ ಗೊರಕೆ ಹೊಡೆಯುತ್ತಿದ್ದವನಿಗೆ ಈ ಸುಖದ ಸುಪ್ಪತ್ತಿಗೆ ಹಿಡಿಸಲಿಲ್ಲ. ಕಲ್ಲೇಶಿ ಮಲಗಿ ಎರಡೇ ನಿಮಿಷಕ್ಕೆ ಗೊರಕೆ ಹೊಡೆಯತೊಡಗಿದ. ಲಕ್ಕಿ ಮಾತ್ರ ನಿದ್ರೆ ಬಾರದೆ ಇಡೀ ರಾತ್ರಿ ಎಚ್ಚರವಾಗಿಯೇ ಕಳೆದ.
    ಬೆಳಗಿನ ಜಾವ ಬಸ್ಸು ಬೆಂಗಳೂರು ತಲುಪಿತು. ಎಚ್ಚೆತ್ತ ಕಲ್ಲೇಶಿಗೆ ಲಕ್ಕಿಯ ಕಣ್ಣುಗಳನ್ನು ನೋಡಿದ ಕೂಡಲೇ ಅವನು ನಿದ್ರೆ ಮಾಡಿಲ್ಲವೆಂದು ತಿಳಿಯಿತು. "ಯಾಕೋ ಲಕ್ಕಿ ನಿದ್ರೆ ಬರಲಿಲ್ಲವೇನೋ" ಎಂದು ಕೇಳಿದ. "ಇಲ್ಲ ಕಲ್ಲಿಮಾಮಾ, ನನಗೆ ಇದೆಲ್ಲ ಅಭ್ಯಾಸವಿಲ್ಲವಲ್ಲ ಹಾಗಾಗಿ ನಿದ್ರೆ ಬರಲಿಲ್ಲ" ಎಂದ. "ಹೋಗ್ಲಿ ಬಿಡು, ನಾವು ಈಗ ಪೇಟೆಯಲ್ಲಿ ಸುತ್ತಾಡೋಣ. ರಾತ್ರಿ ಎಂಟು ಗಂಟೆಗೆ ಮ್ಯಾಚಿದೆ. ಅಲ್ಲಿವರೆಗೂ ಬೆಂಗಳೂರು ತೋರಿಸ್ತೀನಿ ನಿನಗೆ" ಎಂದೆ. ಪೇಟೆಯಲ್ಲಿ ಎಲ್ಲೆಂದರಲ್ಲಿ ಕಾಣುತ್ತಿದ್ದ ಗಗನಚುಂಬಿ ಕಟ್ಟಡಗಳನ್ನು ಬೆಕ್ಕಸಬೆರಗಾಗಿ ನೋಡುತ್ತಿದ್ದ ಲಕ್ಕಿ. ಮೈಮೇಲೇ ಏರಿಬರುವಂತೆ ಬರುತ್ತಿದ್ದ ವಾಹನಗಳ ಭರಾಟೆಯನ್ನು ಕಂಡು ಗಾಬರಿಯಾದ. ಕಲ್ಲೇಶಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೇ ಓಡಾಡಿದ.
    ಹಸಿವಾದಾಗ ಯಾವುದೋ ಫೈವ್‌ಸ್ಟಾರ್ ಹೋಟೆಲ್‌ಗೆ ಕರೆದೊಯ್ದ ಕಲ್ಲೇಶಿ. ಮೆನುವಿನಲ್ಲಿದ್ದ ಚಿತ್ರವಿಚಿತ್ರ ಹೆಸರುಗಳನ್ನು ನೋಡಿ ಗಲಿಬಿಲಿಯಾದ ಲಕ್ಕಿ ಕಡೆಗೆ ಕೇವಲ ಅನ್ನ ಸಾಂಬಾರ್ ಮಾತ್ರ ಕೇಳಿದ. ಕಲ್ಲೇಶಿ ಏನೇನನ್ನೋ ತರಿಸಿಕೊಂಡು ತಿಂದ. ರುಚಿ ನೋಡುವಂತೆ ಲಕ್ಕಿಯನ್ನು ಒತ್ತಾಯಿಸಿದರೂ ಲಕ್ಕಿ ಬೇಡವೆಂದು ಅನ್ನ ಸಾಂಬಾರಿಗೇ ತೃಪ್ತಿಪಟ್ಟ. ಇಬ್ಬರ ಊಟದ ಬಿಲ್ ಸಾವಿರ ರೂಪಾಯಿ ಆಗಿತ್ತು! ಲಕ್ಕಿ ಅದನ್ನು ನೋಡಿ ಗಾಬರಿಯಾಗಿಬಿಟ್ಟ. ಅವನ ಮುಖ ನೋಡಿದ ಕಲ್ಲೇಶಿಗೆ ಅದು ಅರಿವಾಯಿತು. ಅವನು ನಗುತ್ತ "ನೋಡು ಲಕ್ಕಿ, ಬೆಂಗಳೂರಿನಲ್ಲಿ ಇದೆಲ್ಲ ಕಾಮನ್ ಕಣೋ. ಅದ್ಯಾಕೆ ಅಷ್ಟು ಗಾಬರಿಯಾಗ್ತೀಯಾ? ಇಷ್ಟಕ್ಕೂ ಬಿಲ್ ಕೊಡೋನು ನಾನೇ ತಾನೇ?" ಎಂದ. "ಅದು ಹೌದು ಕಲ್ಲಿಮಾಮಾ, ಆದರೆ ಬರೇ ಒಂದು ಹೊತ್ತಿನ ಊಟಕ್ಕೆ ಸಾವಿರ ರೂಪಾಯಿ ಅಂದ್ರೆ ಆಶ್ಚರ್ಯ ಆಗ್ತಿದೆ" ಅಂದ.
    ಸಂಜೆ ಕ್ರಿಕೆಟ್ ನೋಡಲು ಹೋಗುವಾಗ ಕಲ್ಲೇಶಿ ಹೇಳಿದ "ಲಕ್ಕಿ, ಇವತ್ತು ನಡೆಯೋ ಮ್ಯಾಚು ಬೆಂಗಳೂರು ಮತ್ತು ಡೆಲ್ಲಿ ಮಧ್ಯೆ. ಬೆಂಗಳೂರು ತಂಡದ ಓನರ್ ವಿಜಯ ಮಲ್ಯ ಅಂತ ಇದಾರೆ. ಅವರು ತಮ್ಮ ತಂಡದಲ್ಲಿ ಆಡೋರಿಗೆ ಕೋಟಿಗಟ್ಲೆ ದುಡ್ಡು ಕೊಡ್ತಾರೆ". ಅದನ್ನು ಕೇಳಿ ಲಕ್ಕಿಗೆ ರೋಮಾಂಚನವಾಯ್ತು. "ಕಲ್ಲಿಮಾಮಾ, ನಿನಗೆ ಅವರ ಪರಿಚಯ ಇದ್ಯಾ? ಅವರಿಗೆ ಹೇಳಿ ನನಗೊಂದು ಚಾನ್ಸ್ ಕೊಡಿಸ್ತೀಯಾ?" ಎಂದು ಕೇಳಿದ. ಕಲ್ಲೇಶಿಯ ಹಸಿಸುಳ್ಳುಗಳ ಸರಪಳಿಗೆ ಇನ್ನೊಂದು ಕೊಂಡಿ ಸೇರ್ಪಡೆಯಾಯಿತು. "ಹೂಂ ನನಗೆ ಗೊತ್ತು. ಆದ್ರೆ ಈಗ ಅವರು ಬಿಜಿಯಾಗಿರ್ತಾರೆ. ಐಪಿಎಲ್ ಮುಗಿದ ಮೇಲೆ ನಿನ್ನನ್ನೇ ಕರ್ಕೊಂಡು ಹೋಗಿ ಖುದ್ದಾಗಿ ಅವರ ಭೇಟಿ ಮಾಡಿಸ್ತೀನಿ. ಈಗ ಮ್ಯಾಚು ನೋಡೋಣ ಬಾ" ಎಂದ. ಝಗಮಗಿಸುವ ಸ್ಟೇಡಿಯಂಗೆ ಹೋಗಿ ಇಬ್ಬರೂ ತಮ್ಮತಮ್ಮ ಆಸನಗಳಲ್ಲಿ ಕುಳಿತರು.
    ಮ್ಯಾಚು ಶುರುವಾಗಿ ಇನ್ನೂ ಹತ್ತು ನಿಮಿಷವೂ ಆಗಿರಲಿಲ್ಲ, ಆಗಲೇ ಏನೋ ಭಯಂಕರವಾದ ಶಬ್ದ ಕೇಳಿಸಿತು. ಒಮ್ಮೆಲೇ ದೀಪಗಳೆಲ್ಲ ಆರಿಹೋದವು. ಎಲ್ಲೆಡೆ ಗಾಢಾಂಧಕಾರ ಕವಿಯಿತು. ಸುತ್ತೆಲ್ಲ ಕವಿದ ಹೊಗೆಯ ಮಧ್ಯೆ ಏನಾಯಿತೆಂದು ಕಲ್ಲೇಶಿಗೆ ಅರಿವಾಗುವ ಮೊದಲೇ ಮೈಕೈ ಎಲ್ಲ ಸಾವಿರ ಬಾಣಗಳು ಚುಚ್ಚಿದಂತೆ ಯಮಯಾತನೆಯಾಯ್ತು. "ಕಲ್ಲಿಮಾಮಾ" ಎಂಬ ಅವನ ಕೂಗು ಗಂಟಲಿನಲ್ಲೇ ಉಳಿದುಹೋಯ್ತು. ಯಾರೋ ಗಾಳಿಯಲ್ಲಿ ಎತ್ತಿ ಎಸೆದಂತೆ ಭಾಸವಾಯಿತು. ಅನಾಮಧೇಯ ಕಿಡಿಗೇಡಿಗಳು ಯಾವುದೋ ದುರುದ್ದೇಶದಿಂದ ಇಟ್ಟ ಬಾಂಬಿಗೆ ಕೋಟಿ ಕೋಟಿ ಹಣ ಮಾಡುವ ಕನಸಿನಲ್ಲಿ ಕ್ರಿಕೆಟ್ ಎಂಬ ಮಾಯಾಜಿಂಕೆಯ ಬೆನ್ನುಹತ್ತಿ ಬೆಂಗಳೂರಿಗೆ ಬಂದಿದ್ದ ಮುಗ್ಧಜೀವ ಬಲಿಯಾಗಿಹೋಯಿತು..

Category:Stories



ProfileImg

Written by Srinivasa Murthy

Verified