ದುರ್ಗಸಿಂಹನ "ಪಂಚತಂತ್ರ"ದ ಕತೆಗಳು

ಕಥಾಪ್ರಾರಂಭ

ProfileImg
15 Jan '24
9 min read


image

ಕಥಾಮುಖ :

1. ನರಿಯ ಕಥೆ:

   ಸಿರಿವಾಸಿಯೆಂಬ ಪುರ. ಅಲ್ಲಿ ಸಿರಿವಂತನೆಂಬ ಒಬ್ಬ ಶೂದ್ರನಿದ್ದ. ಆತ ತನ್ನ ತೋಟದಲ್ಲಿ ಕಾಮನಬಿಲ್ಲಿಗೆ ಸಮಾನವಾದ ಕಬ್ಬನ್ನು ಬಿತ್ತಿ ಬೆಳೆದಿದ್ದ. ಅದನ್ನು ಆತ ಹಗಲಿರುಳು ಕಾಯುತ್ತಿದ್ದ ; ತೋಟದ ಸುತ್ತಲೂ ಬೇಲಿ ಕಟ್ಟಿ ರಕ್ಷಿಸುತ್ತಿದ್ದ. ಕಬ್ಬಿನ ಬೆಳೆ ಚೆನ್ನಾಗಿ ಬೆಳೆದು ಗಿಣ್ಣು ತುಂಬಿಕೊಂಡು ನಿಂತಿತು.

  ಹೀಗಿರಲು, ಒಂದು ದಿನ ಮೃಗಧೂರ್ತನೆಂಬ ನರಿ ಆ ಬ್ಬಿನ ಬೆಳೆಯನ್ನು ನೋಡಿತು. ತೋಟದ ಸಮೀಪಕ್ಕೆ ಬಂದ ಅದು ಸುತ್ತಲೂ ಸುತ್ತಿ ನೋಡಿ,ಕಳ್ಳದಾರಿಯೊಂದನ್ನು ಪತ್ತೆ ಹಚ್ಚಿತು. ಅಂದಿನಿಂದ ಪ್ರತಿನಿತ್ಯ ಕಬ್ಬಿನ ತೋಟಕ್ಕೆ ಬಂದು, ಕಳ್ಳದಾರಿಯಿಂದ ಒಳನುಗ್ಗಿ, ಕಬ್ಬನ್ನು ತಿಂದು ತೋಟದ ಒಡೆಯ ಸಿರಿವಂತನಿಗೆ ಬೇಸರವನ್ನುಂಟು ಮಾಡಿತು. ಮೃಗಧೂರ್ತ ನರಿಯ ಕಾಟಕ್ಕೆ ಬೇಸತ್ತ ಆ ಶೂದ್ರ ಒಂದು ದಿನ ನರಿಯನ್ನು ಕೊಲ್ಲಲು ಉಪಾಯವೊಂದನ್ನು ಕಂಡುಹಿಡಿದ. ಒಂದು ಮಾರಗಲದ ಬೇಲಿಯನ್ನು ಕಿತ್ತು ದೊಡ್ಡದೊಂದು ದಾರಿಯನ್ನು ಮಾಡಿದ. ತಾನು ಬೈಗಿನ ಹೊತ್ತು ಆ ದಾರಿಯಲ್ಲಿ ಒಂದು ಕೈಯಲ್ಲಿ ಬುತ್ತಿಯನ್ನೂ, ಇನ್ನೊಂದು ಕೈಯಲ್ಲಿ ದೊಡ್ಡದೊಂದು ಕೋಲನ್ನೂ ಹಿಡಿದುಕೊಂಡು , ತಲೆ ಕೆದರಿಕೊಂಡು , ಕಣ್ಮುಚ್ಚಿ ಸತ್ತ ಹೆಣದಂತೆ ಬಿದ್ದುಕೊಂಡ.

  ಆದರೆ, ಪ್ರತಿದಿನದಂತೆ ತೋಟಕ್ಕೆ ಬಂದ ಮೃಗಧೂರ್ತ ನರಿ ಸತ್ತ ಹೆಣದಂತೆ ಬಿದ್ದಿದ್ದ ಶೂದ್ರನನ್ನು ನೋಡಿತು. ಆತನ ಸಮೀಪಕ್ಕೆ ಬಂದ ಅದರ ಮನದಲ್ಲಿ ಸಂಶಯ ಮೂಡಿತು, ಸ್ವಲ್ಪ ದೂರಕ್ಕೆ ಬಂದು ತನ್ನ ಮನದಲ್ಲಿ,

“ಯಾವ ಕಡೆಯಲ್ಲೂ ಇಂಥ ಸಾವನ್ನು ನಾನು ಕಂಡುದಿಲ್ಲ ಈತನು ಯಾವ ಕಾರಣಕ್ಕಾಗಿ ಹೀಗೆ ಬಿದ್ದಿರುವನೋ ಏನೋ. ನನ್ನನ್ನು ಕೊಲ್ಲಲೆಂದು ಕಪಟ ಮರಣವನ್ನು ತಾಳಿರುವನೋ, ಅಥವಾ ನಡೆಯುವಾಗ ದಾರಿಯಲ್ಲೇ ಹಸಿದು ಬುತ್ತಿಯನ್ನು ಉಣ್ಣಲೆಂದು ಕುಳಿತು ಉಣ್ಣುತ್ತ ಗಂಟಲು ಸಿಕ್ಕು ಸತ್ತನೋ ? ಏನೇ ಇರಲಿ. ಇದನ್ನು ನಂಬಬಾರದು! ಇದನ್ನು ವಿಚಾರಿಸಲೇಬೇಕು. ಈತನು ಸತ್ತದ್ದು ಸುಳ್ಳೋ ನಿಜವೋ ತಿಳಿದುಕೊಳ್ಳಬೇಕು. ಊರ ಸಮೀಪಕ್ಕೆ ಹೋಗಬೇಕು ಈತನು ಸತ್ತದ್ದೇ ನಿಜವಾಗಿದ್ದರೆ ಊರಲ್ಲಿ ಹಲಬುತ್ತ ಅಳುತ್ತಿರುತ್ತಾರೆ. ಇಲ್ಲದಿದ್ದರೆ ಸುಮ್ಮನಿರುತ್ತಾರೆ.” ಎಂದು ವಿಚಾರಿಸಿತು.

  ಹೀಗೆ ವಿಚಾರಿಸಿಕೊಂಡ ಮೃಗಧೂರ್ತ ನರಿ ಊರ ಸಮೀಪಕ್ಕೆ ಬಂದು ನಾಲ್ಕೂ ಕಡೆ ಹುಡುಕಿ ನೋಡಿತು. ಆದರೆ, ಊರಲ್ಲಿ ಅದಕ್ಕೆ ಯಾವ ಕಳವಳವೂ ಕೇಳಿ ಬರಲಿಲ್ಲ. ಅಲ್ಲಿಂದ ಹಿಂದಿರುಗಿದ ನರಿ ತನ್ನನ್ನು ಕೊಲ್ಲಲೆಂದು ಈತನು ಮಾಡಿದ ಮಾಯವಿದೆಂದು ನಿಶ್ಚಯಿಸಿ ತನ್ನ ಬುದ್ದಿಗೆ ತಾನೇ ಮೆಚ್ಚಿ ನಕ್ಕಿತು. “ಒಂದು ಕೈಯಲ್ಲಿ ಬುತ್ತಿ, ಇನ್ನೊಂದು ಕೈಯಲ್ಲಿ ದಂಡ ವನ್ನು ಹಿಡಿದು ಬಿದ್ದಿದ್ದ ಅಪೂರ್ವವಾದ ಸಾವನ್ನು ಕಂಡೆ ಆದರೆ ಊರಲ್ಲಿ ಯಾವ ಕಳವಳವೂ ಇಲ್ಲ !' ಎಂದುಕೊಳ್ಳುತ್ತಾ ಆ ನರಿ ಅಲ್ಲಿಂದ ಓಡಿ ಹೋಗಿ ಬದುಕಿಕೊಂಡಿತು. 

2. ಸಿಂಹ ಮತ್ತು ಎತ್ತು 

 ಒಂದು ಕಾಡಿನಲ್ಲಿ ಸಿಂಹ ಮತ್ತು ಎತ್ತಿನ ಮಧ್ಯ ಹಿರಿದಾದ ಸ್ನೇಹ ಬೆಳೆಯಿತು. ಆದರೆ ಆ ಸ್ನೇಹ ಅತ್ಯಂತ ಚಾಡಿಕೋರ ಹಾಗೂ ಲೋಭಿಯಾದ ನರಿಯಿಂದ ಕೆಟ್ಟಿತು. ಆ ಕಥೆ ಹೀಗಿದೆ. 

  ಉಜ್ಜಯಿನಿ ಪಟ್ಟಣದಲ್ಲಿ ವರ್ಧಮಾನನೆಂಬ ವೈಶ್ಯವಂಶ ಶ್ರೇಷ್ಠನಿದ್ದ. ಸಂಪತ್ತಿನಲ್ಲಿ ಕುಬೇರನಿಗೆ ಸಮಾನನಾಗಿದ್ದ ಆತ ಕಾಮ, ಭೋಗಗಳನ್ನು ಅನುಭವಿಸುತ್ತ, ನ್ಯಾಯ ಹಾಗೂ ಧರ್ಮವಂತನಾಗಿ ಕೆಲಕಾಲ ಸುಖದಿಂದಿದ್ದ. 

  ಹೀಗಿರಲು, ಒಂದು ದಿನ ವರ್ಧಮಾನ ಅಪೂರ್ವ ಸಂಪಾದನೆಯನ್ನು ಚಿಂತಿಸುತ್ತ, ತನ್ನ ಮನದಲ್ಲಿ ಹೀಗೆ ವಿಚಾರಿಸಿಕೊಂಡ : 

“ಯಾವ ಉಪಾಯದಿಂದಲಾದರೂ ಧನವನ್ನು ಸಂಪಾದಿಸಬೇಕು. ಧನವೊಂದಿದ್ದರೆ ಚತುರ ಮಾತಿನ ಪೆಂಪು, ನುಡಿಯ ಬಲ್ಮೆ , ಕಡುಗಲಿತನ, ಸೌಭಾಗ್ಯ, ಒಳ್ಳೆಯಗುಣ, ಉನ್ನತಿ - ಇವೆಲ್ಲಾ ಲಭಿಸುತ್ತವೆ. ಹಣವಿಲ್ಲದಿದ್ದರೆ ಇವೆಲ್ಲವೂ ಕೆಡುತ್ತವೆ ! ಆದ್ದರಿಂದ ಸಂಪಾದನೆಯೇ ವ್ಯಾಪಾರದ ಮೂಲ.ಸಂಪಾದಿಸಿದ ಸಂಪತ್ತನ್ನು ವ್ಯರ್ಥವಾಗಿ ವ್ಯಯಮಾಡಿದರೆ ಅದು ದಿನನಿತ್ಯ ಕಣ್ಣಿಗೆ ಬಳಸುವ ಅಂಜನದಂತೆ ನಾಶವಾಗುತ್ತದೆ. 

  ಹೀಗೆ ವಿಚಾರಿಸಿ ಧನಸಂಪಾದನೆಗೆಂದು ಪರದೇಶಕ್ಕೆ ಹೋಗಲು ನಿಶ್ಚಯಿಸಿದ ಸಮಸ್ತ ವರ್ಧಮಾನ ಒಡವೆವಸ್ತ್ರಗಳನ್ನು ಬಂಡಿ ಯಲ್ಲಿ ತುಂಬಿಕೊಂಡು ಸಂಜೀವಕನೆಂಬ ಎತ್ತನ್ನು ಬಂಡಿಗೆ ಹೂಡಿಕೊಂಡು ಮಥುರಾಪುರಕ್ಕೆ ಹೊರಟ. ಅನೇಕ ಜನಪದ, ನದಿ ಪ್ರದೇಶಗಳನ್ನು ದಾಟಿ, ದಟ್ಟವಾಗಿದ್ದ ಮಹಾ ಅರಣ್ಯವೊಂದಕ್ಕೆ ಬಂದ. ಆ ಮಹಾರಣ್ಯದ ದುರ್ಗಮವಾದ ದಾರಿಯಲ್ಲಿ ಹೋಗುತ್ತಿರುವಾಗ ಬಂಡಿಯ ಅಪಾರ ಭಾರದಿಂದ ತೊಡೆ ನೋವಾಗಿ ಸಂಜೀವಕನೆಂಬ ಎತ್ತು ಕುಸಿದು ಬಿತ್ತು. ಹೀಗಾಗಿ ವರ್ಧಮಾನ ಮೂರು ದಿನ ಅಲ್ಲೇ ನಿಲ್ಲಬೇಕಾಯಿತು.. ಏನೇ ಆದರು ಆ ಎತ್ತು ಚೇತರಿಸಿ ಕೊಳ್ಳಲಿಲ್ಲ. ಕೊನೆಗೆ ನಾಲ್ವರನ್ನು ಅದಕ್ಕೆ ಕಾವಲಿಟ್ಟು ವರ್ಧಮಾನ ಮಥುರೆಗೆ ಬಂದ..

  ಇತ್ತ ಕಾವಲಿನವರು ವ್ಯಾಘ್ರ ಮೊದಲಾದ ಭೀಕರ ಪ್ರಾಣಿಗಳ ಭೀತಿಯಿಂದ ಆ ಮಹಾರಣ್ಯದಲ್ಲಿ ನಿಲ್ಲಲಾರದೆ ಹೆದರಿ, ಮಥುರೆಗೆ ಬಂದು, ಸಂಜೀವಕ ಎತ್ತು ಸತ್ತಿತೆಂದು ಸುಳ್ಳು ಹೇಳಿದರು. ಈ ಸುಳ್ಳನ್ನು ಸತ್ಯವೆಂದು ನಂಬಿದ ವರ್ತಮಾನ ಮನಸ್ಸಿನಲ್ಲಿ ನೊಂದು ಉಜ್ಜಯಿನಿಗೆ ಹೊರಟು ಬಂದ.

   ಇತ್ತ ವಿಮಲ ಸರೋವರದ ತುಂತುರು ಹನಿ ಹಾಗೂ ವನಗಂಧಗಳಿಂದ ಕೂಡಿ,ನಾಟ್ಯವಾಡುತ್ತ ಬಂದ ತಂಗಾಳಿ ಸಂಜೀವಕನ ಶ್ರಮವನ್ನು ಹಿಂಗಿಸಿತು. ಇದರಿಂದ ಚೇತರಿಸಿಕೊಂಡ ಸಂಜೀವಕ ದಾರಿಶ್ರಮವನ್ನು ಆರಿಸಿಕೊಂಡು, ಗುಣಮುಖನಾಗಿ ಕಾಳಿಂದೀ ನದಿ ದಡದ ಅರಣ್ಯದಲ್ಲಿ ಸ್ವೇಚ್ಛೆಯಿಂದ ತಿಂದುಂಡು ಕೊಬ್ಬಿತು; ಗೂಳಿಯಾಕಾರವನ್ನು ತಾಳಿತು. 

  ಇತ್ತ ಆ ಅರಣ್ಯದಲ್ಲಿ ಪಿಂಗಳಕನೆಂಬ ಮೃಗರಾಜನಿದ್ದ. ಕರಟಕ - ದವನಕರೆಂಬ ನರಿಗಳು ಆತನಿಗೆ ಮಂತ್ರಿಗಳಾಗಿದ್ದರು. ಪಿಂಗಳಕನು ಮೃಗಾಧಿರಾಜ ಪದವಿಯನ್ನು ಸ್ವೀಕರಿಸಿ ಅರಣ್ಯದಲ್ಲಿ ರಾಜ್ಯಭಾರ ಮಾಡುತ್ತಿದ್ದ. 

  ಹೀಗಿರಲು, ಒಂದು ದಿನ ಪಿಂಗಳಕ ಆನೆಗಳ ಗುಂಪನ್ನು ಹೆದರಿಸಿ, ಬೆನ್ನಟ್ಟಿಕೊಂಡು ಬಂದ. ಆ ಗುಂಪನ್ನು ತನ್ನ ಹರಿತವಾದ ಉಗುರಿಂದ ಸೀಳಿ ಅತ್ತಿತ್ತ ಚೆಲ್ಲಾಟವಾಡಿದ. ಇದರಿಂದ ದಣಿದ ಪಿಂಗಳಕ ನೀರು ಕುಡಿಯುವ ಆಸೆಯಿಂದ ಯಮುನಾನದಿ ತೀರದಲ್ಲಿ ಬರುತ್ತಿದ್ದ. ಅದೇ ಸಮಯಕ್ಕೆ ಸಂಜೀವಕ ಉತ್ಸಾಹದಿಂದ ಡುರುಕಿ ಹಾಕಿದ. ಆ ಭಯಂಕರಗರ್ಜನೆಯನ್ನು ಕೇಳಿ ಪಿಂಗಳಕ ಭಯಗೊಂಡ ಆದ್ದರಿಂದ. ನೀರು ಕುಡಿಯಲು ಸಹಿತ ಧೈರ ಸಾಲದಂತಾಗಿ ಬಾಯಾರಿಕೆಯಲ್ಲೇ ಹಿಂದಿರುಗಿ ಓಡಿ ಬಂದ ಪಿಂಗಳಕ ವಿಶಾಲವಾದ ಆಲದ ಮರವೊಂದರ ಕೆಳಗೆ ಹರಿಣ, ತೋಳ, ಕಾಡುಹಂದಿ ಮೊದಲಾದ ತನ್ನ ಪ್ರಮುಖ ಪರಿವಾರವನ್ನು ಸುತ್ತ ಹಾಕಿ ಮರೆ ಮಾಡಿಕೊಂಡು ಕುಳಿತ.    

ಪಿಂಗಳಕನ ಈ ಸ್ಥಿತಿಯನ್ನು ಕಂಡು ಕರಟಕ - ದವನಕರಿಗೆ ಆಶ್ಚರ್ಯವಾಯಿತು. ಆಗ ದವನಕ ಕರಟಕನನ್ನು ಕುರಿತು, "ಕರಟಕ! ನಮ್ಮ ಅರಸನಾದರೋ ಇದೀಗ ತಾನೇ ಬಾಯಾರಿಕೆಯನ್ನು ಕಳೆಯಲೆಂದು ಯಮುನಾನದಿಗೆ ಹೋಗಿದ್ದ. ಆದರೆ ಆಕಸ್ಮಿಕವಾಗಿ ಮರಳಿ ಬಂದು ಅವಮಾನ ಪಟ್ಟ ಮಂತ್ರಿಯಂತೆ ಅಂಜಿ ಮರೆ ಮಾಡಿಕೊಂಡು ಕೂತಿದ್ದಾನೆ.ಇದಕ್ಕೆ ಕಾರಣವೇನೆಂಬುದನ್ನು ವಿಚಾರಿಸಿಕೊಂಡು ಬರೋಣ ಬಾ".ಆದರೆ ಅದಕ್ಕೆ ಒಪ್ಪದ ಕರಟಕ," ದವನಕ! ನಾವಾದರೂ ಪಳೆಯರ ಮಕ್ಕಳು ನಾವಿರುವುದು ಅರಸನಿಗೆ ಆಪ್ತರಾಗಿಯೇ ಹೊರತು ಬೇರೆ ಕಾರ್ಯಕ್ಕಾಗಿ ಅಲ್ಲ. ಈಗಲಾದರೂ ನಮ್ಮ ಅರಸ ಅವಮಾನಿತನಾಗಿದ್ದಾನೆ. ಇಂತಹ ಸಮಯದಲ್ಲಿ ನಾವು ಸ್ವಾಮಿಹಿತ ಮಹತ್ವವನ್ನು 

ಕೈಕೊಂಡು ನುಡಿಯುವುದು ನಯವಲ್ಲ. ಅರಸನು ಯಾವ ಕಾರಣಕ್ಕಾಗಿ ಈ ರೀತಿ ಕುಳಿತಿದ್ದಾನೆಂಬುದನ್ನು ಅರಿಯಲೂಬಾರದು. ಅರಸನ ಇರವನ್ನು ಕಂಡು ಆತನ ಅಭಿನವ ಪ್ರಧಾನರೂ, ಅನುಯಾಯಿಗಳೂ ಏನೂ ಹೇಳುತ್ತಾರೆಂಬುದನ್ನು ನಾವು ಕೇಳುವುದಷ್ಟೇ ಸಾಕು ! ಈ ಸಮಯದಲ್ಲಿ ನಾವು ಏನಾದರೊಂದನ್ನು ನುಡಿಯದ್ದಾದರೆ ದುಷ್ಟರಿಂದ ಸುತ್ತುವರಿದ ಅರಸ ನಮಗೇನು ಮಾಡುತ್ತಾನೆಂಬುದನ್ನು ಹೇಳಲಿಕ್ಕಾಗದು. ಆದ್ದರಿಂದ ಈಗ ನಾವು ಏನನ್ನು ಮಾತನಾಡದೆ ಸುಮ್ಮನಿರುವುದೇ ನಮ್ಮ ಕಾರ್ಯ ! ಅದು ಅಲ್ಲದೆ, ನಮ್ಮಂತಹ ಆಪ್ತರನ್ನೂ ಹಿತರನ್ನೂ ಬುದ್ಧಿವಂತರನ್ನೂ ಅವಿಶ್ವಾಸದಿಂದ ಕಂಡು ಅನಾಪ್ತರನ್ನೂ, ಅಹಿತರನ್ನೂ ಅವಿನೀತರನ್ನೂ ವಿಶ್ವಾಸದಿಂದ ಸ್ವಾಗತಿಸಿ ಪ್ರಧಾನರನ್ನಾಗಿ ಮಾಡಿಕೊಂಡ ಮೂಢ ಸಿಂಹಕ್ಕೆ ಈಗ ನಾವು ಏನೇ ಹೇಳಿದರೂ ಕಾರ್ಯ ಹಾನಿಯಾಗದೆ ಇರದು! ಅದು ನಮಗೇ ಹಾನಿ. ಇದಕ್ಕೆ ದೃಷ್ಟಾಂತವಾಗಿ ಕಚದ್ರುಮನ ಕಥೆಯನ್ನು ಹೇಳುತ್ತೇನೆ ಕೇಳು" ಎಂದ. ಹೀಗೆ ಕರಟಕ ದವನಕನಿಗೆ ನುಡಿದು ಕಚದ್ರುಮನ ಕಥೆಯನ್ನು ಹೇಳತೊಡಗಿದ.

  3 . ಕಚದ್ರುಮನ ಕತೆ 

ಮಹಾದ್ರುಮ ಅರಸ ಮಗ ಕಚದ್ರುಮ ಬಾಲ್ಯಕಾಲದಿಂದಲೂ ಹಿರಿಯರ ಸೇವೆ ಮಾಡದೆ ಸಪ್ತವ್ಯಸನಕ್ಕೆ ವಶನಾಗಿ ದುಷ್ಟ ಸಹವಾಸಿಯಾಗಿದ್ದ. ಕೆಲಕಾಲದ ನಂತರ ಕಚದ್ರುಮನ ತಂದೆ ಮಹಾದ್ರುಮ ನಿಧನನಾದ. ಕಚದ್ರುಮ ರಾಜ್ಯ ಪದವಿಯಲ್ಲಿ ನಿಂತ. ಆದರೆ, ನೀತಿ ಬಾಹೀರನೂ,ಪೂರ್ವಾಪರ ವಿಚಾರಹೀನನೂ ಆಗಿದ್ದ ಕಚದ್ರುಮ ತನಗೆ ಹಿತರಾದ ಪೂರೋಹಿತ,ಮಂತ್ರಿ,ಸಾಮಂತ,ಪ್ರಧಾನ, ಸೇನಾನಾಯಕ ಮೊದಲಾದ ಪ್ರಮುಖರ ವೃತ್ತಿಗಳನ್ನು ಕಿತ್ತುಕೊಂಡು ತನ್ನ ಒಡನಾಡಿಗಳಾದ 'ಭಂಡಮಂಡಳಿ'ಯವರನ್ನೇ ಪ್ರಧಾನಿ ಸಾಮಂತಾದಿಗಳನ್ನಾಗಿ ಮಾಡಿದ. ತಂದೆ ಸಂಪಾದಿಸಿಟ್ಟ ಹಣದಿಂದ ಮದೋನ್ಮತ್ತನಾದ ಕಚದ್ರುಮ ಧರ್ಮಬಾಹಿರನಾಗಿ ಅನ್ಯಾಯ ಮಾರ್ಗದಲ್ಲಿ ಸಂಪಾದಿಸುವವನಾಗಿ, ಅತಿ ಕಾಮುಕನಾಗಿ, ಮೋಕ್ಷದಲ್ಲಿ ನಿರಪೇಕ್ಷಕನಾಗಿ ಬಾಳತೊಡಗಿದ. ರಾಮ ಮೊದಲಾದ ಅನೇಕ ರಾಜದತ್ತಿಗಳಾದ ಭೂದೇವ, ಬೋಗಾಗ್ರಹಾರಗಳನ್ನು ಆಗ್ರಹದಿಂದ ನಾಶಪಡಿಸಿದ ; ಶಾಂತವಾದ ನಾಡನ್ನು ಬೇಡರಂತೆ ಹರಿದರಿದು ಕೆಡಿಸಿದ.

ಕಚದ್ರುಮನು ಇಷ್ಟಕ್ಕೂ ಬಿಡಲಿಲ್ಲ. ಶಿಷ್ಯರಿಗೆ ಅನಿಷ್ಯವನ್ನೂ, ದುಷ್ಟರಿಗೆ ಇಷ್ಟವನ್ನೂ ಮಾಡುತ್ತ ಮೇಲ್ಮರ್ಗ ಕೆಳವರ್ಗದವರ,ಹಳೆಯ ನಿಯೋಗಿಗಳ ಹಾಗೂ ನಾನಾ ದೇಶಿಗರ ವ್ಯವಹಾರಗಳನ್ನು ಸುಲಿಗೆ ಮಾಡಿದ. ಅವರೆಲ್ಲರಿಂದ ಲೂಟಿ ಮಾಡಿದ ಸಮಸ್ತ ವಸ್ತು ವಾಹನಗಳನ್ನು ತನ್ನ ಒಡನಾಡಿಗಳಾದ ಭಂಡ ಮಂಡಲಿಗೆ ಸೂರೆಗೊಟ್ಟ. ಕೊನೆಗೆ ಸಪ್ತಾಂಗ ಗಳಲ್ಲಿ ಏಕಾಂಗವೊಂದು  ಉಳಿಯಿತು. ಕಚದ್ರುಮನ ರಾಜ್ಯ ಚದುರಿ ಚೆಲ್ಲಾಪಿಲ್ಲಿಯಾಯಿತು. 

  ಕಚದ್ರುಮನ ರಾಜ್ಯ ಸರ್ವನಾಶವಾದ ಸುದ್ದಿ ಆತನ ದಾಯಾದಿ ಸಿಂಹಬಳನಿಗೆ ಮುಟ್ಟಿತು. ಸಿಂಹಬಳ ಕಚದ್ರುಮನ ಮೇಲೆ ದಂಡೆತ್ತಿ ಬಂದ. ಮೊದಲೇ ಭೀತಿ ಸ್ವಭಾವದರಾದ ಕಚದ್ರುಮನ ಭಂಡಮಂಡಳಿಯ ಕೆಲವರು ಭೀತಿಯಿಂದ ಓಡಿದರು. ಇನ್ನು ಕೆಲವರು ವೈರಿಗಳೊಂದಿಗೆ ಕೂಡಿಕೊಂಡರು. ಆದರೆ ಶತ್ರುಗಳ ಕೈವಶಕ್ಕೆ ಬಲಿಯಾದವನೆಂದರೆ ಕಚದ್ರುಮನೊಬ್ಬನೆ ! ಉಪ್ಪರಿಗೆಯ ಮನೆಯಲ್ಲಿ ಬಿಳಿಯ ಪಾರವಾಳದಂತಿದ್ದ ದುಷ್ಟ ಕಚದ್ರುಮ ಶತ್ರುಗಳ ಕೈವಶನಾದ.

  ಹೀಗೆ, , 'ಕಚದ್ರುಮನ ಕತೆ'ಯನ್ನು ದವನಕನಿಗೆ ಹೇಳಿ ಮುಗಿಸಿದ ಕರಟಕ ಬಳಿಕ, “ ಆದ್ದರಿಂದ, ಪಿಂಗಳಕನಿಗೆ ಏನು ಹೇಳುವುದೂ ತರವಲ್ಲ. ಏನು ಮಾಡುವುದೂ ಒಳ್ಳೆಯದಲ್ಲ. ಏನೊಂದು ಕಾರ್ಯವನ್ನು ನಾವು ಹೊರಗಿದ್ದುಕೊಂಡು ನೋಡುವುದಷ್ಟೇ ಸಾಕು! ಏನೇ ಆಗಲಿ, ಯಾವ ಅವ್ಯವಹಾರ ವೃತ್ತಿ ಸಲ್ಲದು! ವ್ಯವಹರಿಸಲು ಯೋಗ್ಯವಲ್ಲದ ಸ್ಥಳದಲ್ಲಿ ಯಾವನು ವ್ಯವಹರಿಸಲು ಇಚ್ಛಿಸುವನೋ, ಆತನು ಕೀಲನುಚ್ಚಿದ ಕೋಡಗನಂತ ಕೆಡುವುದು ಖಚಿತ!" ಎಂದು ಹೇಳಿದ.

ಕರಟಕನ ಈ ಮಾತುಗಳನ್ನು ಕೇಳಿದ ದವನಕ 'ಕೀಲನುಚ್ಚಿದ ಕೋಡಗನ ಕತೆಯನ್ನು ಹೇಳುವಂತೆ ಕೇಳಿಕೊಂಡ. ಕರಟಕ ಹೇಳತೊಡಗಿದ ಆ ಕಥೆ ಹೀಗಿದೆ:

4 . ಕೀಲನುಚ್ಚಿದ ಕೋಡಗನ ಕಥೆ

  ಗಿರಿನಗರ ಪಟ್ಟಣದ ರಾಜ ಸುಶರ್ಮ ಜಗತ್ತಿನಲ್ಲೇ ವಿರಳವಾದ ದೇವಾಲಯವೊಂದನ್ನು ಕಟ್ಟಿಸುತ್ತಿದ್ದ. ಒಂದು ದಿನ ದೇವಾಲಯದ ಕೆಲಸಗಾರರು ಮಧ್ಯಾಹ್ನದವರೆಗೆ ಕೆಲಸ ಮಾಡಿ, ಬಳಿಕ ತಮ್ಮ ತಮ್ಮ ಮನೆಗಳಿಗೆ ಉಣ್ಣಲು ಹೋದರು. ಆಗ ದೇವಾಲಯದ ಸಮೀಪದ ನಂದನವನದಲ್ಲಿ ಸಂಚರಿಸುತ್ತಿದ್ದ ಕಪಿಗಳ ಹಿಂಡು ಸ್ಟೇಚ್ಛೆಯಿಂದ ಅಲೆದಾಡುತ್ತ ದೇವಾಲಯದ ಸಮೀಪಕ್ಕೆ ಬಂದಿತು. ದೇವಾಲಯದ ಶಿಖರವನ್ನು ಹತ್ತಿ, ಅಲ್ಲಿ ಒಟ್ಟಿದ್ದ ಇಟ್ಟಿಗೆಗಳನ್ನು ಕಪಿಗಳು ಕೆದರ ತೊಡಗಿದವು. ಅಲ್ಲಿದ್ದ ತಿದಿಗಳನ್ನು ಸೀಳುತ್ತ, ಇದ್ದಿಲರಾಶಿಯನ್ನು ಚೆಲ್ಲಾಪಿಲ್ಲಿಯಾಗಿ ಸೂಸುತ್ತ, ಪ್ರಕೃತಿ ಸಹಜವಾದ ಚಪಲ ಸ್ವಭಾವದಿಂದ ಆಡತೊಡಗಿದವು. ಆ ಕೋಡಗದ ಗುಂಪಿನಲ್ಲಿದ್ದ ಮೃತ್ಯುಕಾಲ ಸಮೀಪಿಸಿದ ಮುದಿ ಕೋಡಗವೊಂದು ಎಲ್ಲೆಂದರಲ್ಲಿ ಸ್ಟೇಚ್ಛೆಯಿಂದ ಪರಿದಾಡುತ್ತ ಬಂದು, ಕೆಲಸಗಾರರು ಕೆಲಸಗಾರರು ಒಂದು ಭಾಗದವರೆಗೆ ಸೀಳಿ ಕೀಲನ್ನು ಚುಚ್ಚಿದ್ದ ಮರದ ದಿಮ್ಮಿಯೊಂದನ್ನು ನೋಡಿತು. 

  ಕೆಲಸಗಾರರು ಊಟಕ್ಕೆ ಹೋಗುವಾಗ ಮರದ ದಿಮ್ಮೆಯೊಂದನ್ನು ಅರ್ಧ ಸೀಳಿ ಕೀಲವೊಂದನ್ನು ಬಲವಾಗಿ ಚುಚ್ಚಿ ಹೋಗಿದ್ದರು. ಇದನ್ನು ಕಂಡ ಮುದಿ ಕೋಡಗ ಆ ಕೀಲವನ್ನು ಹಿಡಿದು ಸಾಧ್ಯವಾದಷ್ಟು ಜೋರಾಗಿ ಅಲ್ಲಾಡಿಸಿ ಕಿತ್ತಿತು. ಒಡನೆಯೇ ಮರದ ತುಂಡುಗಳೆರಡು ಕೋಡಗದ ಮರ್ಮಸ್ಥಾನವನ್ನು ಔಂಕಿ ಬಿಟ್ಟವು. ಕೋಡಗ ಅರಚುತ್ತ ಅಲ್ಲೇ ಪ್ರಾಣಬಿಟ್ಟಿತು. 

  ಹೀಗೆ ದವನಕನಿಗೆ ' ಕೀಲನುರ್ಚಿದ ಕೋಡಗನ ಕತೆ'ಯನ್ನು ಹೇಳಿ ಮುಗಿಸಿದ ಕರಟಕನು ಬಳಿಕ, “ನಾವು ಹೊಟ್ಟೆಪಾಡಿಗಾಗಿ ಅರಸನ ಸೇವೆಯನ್ನು ಮಾಡುತ್ತಿದ್ದೇವೆಯಷ್ಟೇ. ಹೀಗಿರುವಾಗ ಉಳಿದ ವ್ಯವಹಾರ ನಮಗೇಕೆ ? ರಾಜರ ಬಗ್ಗೆ ನಾವು ವಿಚಾರಿಸುವುದು ಒಳಿತಲ್ಲ.” ಎಂದು ಹೇಳಿದ. ಕರಟಕನ ಈ ಮಾತಿಗೆ ದವನಕ ಪ್ರತಿಯಾಗಿ, “ಮಿತ್ರರಿಗೆ ಉಪಕಾರ ಮಾಡಬೇಕು: ರಾಜರಿಗೆ ಸೇವೆ ಸಲ್ಲಿಸಬೇಕು ಎಂದು ವಿದ್ವಾಂಸರು ಹೇಳುತ್ತಾರೆ. ತನ್ನ ಒಡಲನ್ನು ರಕ್ಷಿಸಿಗೊಳ್ಳದವನು ಯಾವನೂ ಇಲ್ಲ ಎಂಬ ಪುರಾತನ ವಾಕ್ಯವುಂಟು. ಆದರೆ ಹೊಟ್ಟೆಯನ್ನು ಹೊರೆಯುವುದೇ ಮುಖ್ಯವಲ್ಲ. ಪಶುಪಕ್ಷಿಗಳು ತಮ್ಮ ಹೊಟ್ಟೆಯನ್ನು ಹೊರೆಯುತ್ತವೆ. ಹಾಗೇ ನಾವು ಹೊಟ್ಟೆ ಹೊರೆದರೆ ಏನು ಬಂತು ? ರಾಜನ ಸೇವೆ ಕೇವಲ ಹೊಟ್ಟೆ ಹೊರೆಯುವುದಕ್ಕಷ್ಟೇ ಸಿಮೀತವಾಗಬಾರದು. ಆದ್ದರಿಂದ ಮೃಗರಾಜನ ಆಪ್ತರೂ,ಹಿತರೂ ಆದ ನಾವೇ ಅವರ ಬಗ್ಗೆ ವಿಚಾರಿಸದಿದ್ದರೆ ಹೇಗೆ ? ಒಡೆಯನು ಗುಣವಿಲ್ಲದವನಾಗಿದ್ದರೂ ಆತನನ್ನು ಆಪತ್ತಿನಲ್ಲಿ ಬಿಡಬಾರದೆಂಬ ನೀತಿ ವಾಕ್ಯವಿದೆ. ಆದ್ದರಿಂದ ಒಡೆಯ ಎಷ್ಟೇ ನಿರ್ಗುಣನಾಗಿದ್ದರೂ ಗುಣವಂತನಾದ ಸೇವಕ ಆತನ ಎಡರುಗಳನ್ನು ಕಡೆಗಣಿಸುವುದು ಒಪ್ಪದು ! ಅದೂ ಅಲ್ಲದೇ, ನಮ್ಮ ಅರಸ ಈಗ ಭಯಾತುರನಾಗಿದ್ದಾನೆ. ಆತ ಗುಪ್ತ ಕಾರ್ಯವನ್ನು ಆಪ್ತವರ್ಗಕ್ಕಲ್ಲದೆ ಉಳಿದ ವರ್ಗದವರಿಗೆ ಹೇಳಲಾರ. ಆದ್ದರಿಂದ, ಅರಸನಲ್ಲಿಗೆ ಹೋಗಿ ಕಾರ್ಯದ ಒಳಗನ್ನು ಅರಿಯೋಣ'' ಎಂದು ಹೇಳಿದ. 

  ಆಗ ದವನಕನ "ಅರಸ ಭೀತನಾದುದನ್ನು ನೀನು ಹೇಗೆ ತಿಳಿದುಕೊಂಡೆ?” ಎಂದು ಕರಟಕನನ್ನು ಕೇಳಿದ. ಅದಕ್ಕೆ ದವನಕ, “ವಿವೇಕಿಗಳು ಹೇಳದಿದ್ದರೂ ಅರಿತುಕೊಳ್ಳುತ್ತಾರೆ! ಪರರ ಅಂತರಂಗವನ್ನು ಅರಿಯುವುದೇ ಬುದ್ಧಿಗೆ ಫಲ ! ನಾನು ನಮ್ಮಒಡೆಯನ ಇರುವಿಕೆಯನ್ನು ಕಂಡೇ ಆತ ಭೀತನಾದುದನ್ನು ಅರಿತುಕೊಂಡೆ. ಈ ಸಮಯದಲ್ಲಿ ಒಳಹೊಕ್ಕು, ಅರಸರ ಮನದಲ್ಲಿ ಉಂಟಾದ ಭಯಕ್ಕೆ ಕಾರಣ ತಿಳಿದು, ಅದಕ್ಕೆ ಯೋಗ್ಯ ಪರಿಹಾರ ಕಂಡುಕೊಳ್ಳಬೇಕು. ಆಗಲೇ ನಾವು ಅರಸರಿಗೆ ಆಪ್ತರೂ, ಹಿತರೂ ಆಗುವುದು” ಎಂದು ಹೇಳಿದ.

  ದವನಕನ ಈ ಮಾತನ್ನು ಒಪ್ಪದ ಕರಟಕ ದವನಕನನ್ನು ಕುರಿತು, "ನೋಡು, ಈಗ ಕೋಪಭೀಕಾರನಾಗಿರುವ ನಮ್ಮ ಒಡೆಯನಲ್ಲಿಗೆ ಹೋಗಿ ಭಿನ್ನವಿಸಬೇಡ. ಎಷ್ಟೆಂದರೂ ನಾವು ಸೇವಕರು. ವೈರಿ ರಾಜರು ಕೋಪದಲ್ಲಿರುವಾಗ, ಮಂತ್ರಾಲೋಚನೆಯಲ್ಲಿ ತೊಡಗಿರುವಾಗ ಸೇವಕನಾದವನು ಭಿನ್ನವಿಸಿಕೊಳ್ಳಬಾರದು. ಆದ್ದರಿಂದ ನಾವು ಸೇವಾದ ಧರ್ಮವನ್ನು ಅರಿತೂ ಅರಿಯದವರಂತೆ ಒಳಹೊಕ್ಕು ನುಡಿಯುವುದು ಒಳ್ಳೆಯದಲ್ಲ" ಎಂದು ಹೇಳಿದ.

   ಕರಟಕನ ಈ ಮಾತನ್ನು ಒಪ್ಪದ ದವನಕ, "ನೀನು ಹೇಳಿದಂತೆ ನೀತಿವಿದನಾದ ಅರಸನನ್ನು ಯಾವ ಬಗೆಯಿಂದಲಾದರೂ ಸೇವಿಸುವುದೇ ನೀತಿ. ಅಲ್ಲದೆ, ತನ್ನ ಹಾಗೂ ಇತರರ ಅಂತರಂಗವನ್ನು ಅರಿಯದ ಆರಸನ ಸಮೀಪಕ್ಕೆ ಹೋಗಿ ದುರಾಭಿಮಾನದಿಂದ ನುಡಿಯುವುದೂ ತಕ್ಕುದಲ್ಲ. ಇದೆಲ್ಲ ಸರಿಯೇ. ಆದರೆ 'ತಮ್ಮ ರಕ್ಷಣೆಯಲ್ಲಿದ್ದು ಸೇವೆ ಮಾಡುವವನನ್ನು ಅರಸರು ಸ್ವೀಕರಿಸುತ್ತಾರೆ. ಆದ್ದರಿಂದ ಅರಸನಲ್ಲಿಗೆ ಹೋಗುವುದು ತಪ್ಪಲ್ಲ" ಎಂದು ಹೇಳಿದ. 

 ಆದರೆ, ದವನಕನ ಈ ಮಾತು ಕರಟಕನಿಗೂ ಒಪ್ಪಿಗೆಯಾಗಲಿಲ್ಲ. ಆಗವನು ದವನಕನನ್ನು ಕುರಿತು,

“ಆಗ್ರಹ ಪಡಿಸುವುದಾಗಲಿ, ಆಗ್ರಹ ಪಡುವುದಾಗಲಿ ಯಾವ ಕಾಲಕ್ಕೂ ಒಳ್ಳೆಯದಲ್ಲ. ಆಗ್ರಹವಿಲ್ಲದಿರುವುದೇ ಬುದ್ಧಿಗೆ ಫಲ ಎಂಬ ನೀತಿಯುಂಟು. ಆದರೂ ನೀನು ನನ್ನನ್ನು ಆಗ್ರಹಪಡಿಸುತ್ತಿದ್ದೀಯೆ. ನೀನೂ ಆಗ್ರಹ ಪಡುತ್ತಿದ್ದೀಯಾ. ನಿನ್ನ ಈ ದುರಾಗ್ರಹದಿಂದ ನಿನಗೆ ಏನಾದರೊಂದು ದುಷ್ಪಲ ಆಗದಿರದು ! ಅದನ್ನು ನೀನು ಕಂಡೇ ಕಾಣುತ್ತೀಯಾ !ನಿನಗೆ ಇದುವೇ ಕರ್ತವ್ಯವೆನ್ನುವುದಾದರೆ, ನೀನು ಈ ಕ್ಷಣವೇ ಅರಸನಲ್ಲಿಗೆ ಹೋಗು" ಎಂದು ಹೇಳಿದ.

  ಮೃಗರಾಜ ಪಿಂಗಳಕನ ಬಳಿಗೆ ಹೋಗಿ, ಒಳಹೊಕ್ಕು ನಿಜ ಸಂಗತಿಯನ್ನು ಅರಿತುಕೊಳ್ಳಬೇಕೆಂದು ತವಕಿಸುತ್ತಿದ್ದ ದವನಕನಿಗೆ ಕೊನೆಗೂ ಕರಟಕನ ಮಾತು ಹಿಡಿಸುವುದಿಲ್ಲ. ಆತ ಪಿಂಗಳಕನಲ್ಲಿಗೆ ಹೋಗಿ ಆತನ ಎದುರಲ್ಲಿ ನಿಂತುಕೊಂಡ. ತನ್ನ ಎದುರಲ್ಲಿ ನಿಂತ ದವನಕನನ್ನು ಪಿ೦ಗಳಕ ಕಂಡು, "ಅರಸರು ತಮಗೆ ಎಷ್ಟೇ ಸಮಚಿತ್ತವಿಲ್ಲದಿದ್ದರೂ ಸಮ್ಮುಖಕ್ಕೆ ಬಂದವರ ವಿಷಯದಲ್ಲಿ ಮಾತ್ರ ಮುಖ ತಿರುಗಿಸಬಾರದು;ದಾಕ್ಷಿಣ್ಯ ತೋರಿಸಬೇಕು ಎಂಬ ನೀತಿಯೊಂದುಂಟು. ಈತ ಆಪ್ತನೂ, ಕಾರ್ಯಸಹಾಯನೂ ಆಗಿದ್ದಾನೆ. ಈ ಸಮಯದಲ್ಲಿ ಆತನನ್ನು ಬರಮಾಡಿಕೊಂಡು ನನ್ನ ಮನೋಗತ ಕಾರ್ಯವನ್ನು ಹೇಳಬೇಕು'' ಎಂದು ತನ್ನ ಮನದಲ್ಲಿ ವಿಚಾರಿಸಿಕೊಂಡ.

ಪಿಂಗಳಕ ಹೀಗೆ ವಿಚಾರಿಸಿಕೊಳ್ಳುತ್ತಿರುವಾಗಲೇ ವಿನೀತವೇಷನಾದ ದವನಕ ಮೆಲ್ಲಮೆಲ್ಲನೆ ಮೃಗರಾಜನ ಸಮೀಪಕ್ಕೆ ಬಂದು ನಮಸ್ಕರಿಸಿದ. ಇದನ್ನು ಕಂಡ ಪಿಂಗಳಕ ದವನಕನಿಗೆ 'ಇತ್ತ ಬಾ !' ಎಂದ. ದವನಕ `ಆಗಲಿ ಮಹಾ ಪ್ರಸಾದ !' ಎನ್ನುತ್ತ ಯಥೋಚಿತ ಸ್ಥಾನದಲ್ಲಿ ಕುಳಿತುಕೊಂಡ. ಪಿಂಗಳಕ ದವನಕನ ಮೊಗವನ್ನು ನೋಡಿ ಆದರದಿಂದ, "ದವನಕ ಇದೇನಿದು ? ಹಲವು ದಿನಗಳಿಂದ ನೀನು ನನ್ನನ್ನು ಕಂಡೇ ಇಲ್ಲವಲ್ಲ. ಬರದಿದ್ದು ರೆಕ್ಕೆ ಕಾರಣವಾದರೇನು ಗೊತ್ತಾಗದ ಕಾರ್ಯವನ್ನು ತಿಳಿಸಿಕೊಡುವ ಗುಣ ಸಚಿವನಿಗಲ್ಲದೆ ಉಳಿದವರಿಗುಂಟೆ? ನಿನಗೆ ಕೊಡುತ್ತಿದ್ದ ಮನ್ನಣೆಯನ್ನೇನಾದರೂ ನಾನು ಮರೆತೇನೆ? " ಎಂದು ನುಡಿದ. ಆ ಮಾತಿಗೆ ದವನಕ, "ಮೃಗರಾಜನೇ, ನೀರನ್ನು ಕುಡಿಯಲೆಂದು ಯಮುನಾನದಿಗೆ ಹೋದವನು ಒಮ್ಮೆಲೇ ಬೆಚ್ಚಿದಂತೆ ಹಿಂದುರಿಗಿ ಬಂದು, ನಿನ್ನಲ್ಲೇ ನೀನು ಚಿಂತಿಸುತ್ತ ಕುಳಿತಿರಲು ಆಕೆ ಕಾರಣವೇನು ?' "ಎಂದು ದವನಕ ಬಿನ್ನವಿಸಿಕೊಂಡ. ದವನಕನ ಈ ಮಾತಿಗೆ ಪಿಂಗಳಕ ವಿಸ್ಮಯಪಟ್ಟು,ತನ್ನ ಮನದಲ್ಲಿ ಹೀಗೆ ವಿಚಾರಿಸಿಕೊಂಡ : 

  ''ಪರರ ಇಂಗಿತವನ್ನು ಅರಿಯುವ ಜ್ಞಾನ ಈತನಿಗಿರುವಂತೆ ಇನ್ನಾರಿಗೂ ಇಲ್ಲ. ಈತ ಪರರ ಅಂತರಂಗದಲ್ಲಿದ್ದ ಇಂಗಿತವನ್ನು ಅರಿಯಬಲ್ಲ ಜಾಣ. ಆದ್ದರಿಂದ,ನನ್ನ ಮನದಲ್ಲಿ ಮೂಡಿದ ಮಹಾಭಯದ ಕಾರಣಕ್ಕೆ ಏಕಾಂಗಿಯಾಗಿ ಚಿಂತಿಸಬಾರದು.ಈತ ಸಹಾಯಗುಣ ಸಂಪನ್ನನೂ, ಸೇವಾಗುಣಸಂಪೂರ್ಣನೂ ಆಗಿರುವನಾದ್ದರಿಂದ ಈತನ ಮುಂದೆ ನನ್ನ ಭಯಕ್ಕೆ ಕಾರಣವಾದ ವಿಷಯದ ಬಗ್ಗೆ ಚರ್ಚಿಸಿದರೆ ಯಾವ ತಪ್ಪಿಲ್ಲ. ಗುಣಗಳನ್ನು ಅರಿಯುವ ಒಡೆಯನಲ್ಲಿ, ಗುಣವಂತನಾದ ಸೇವಕನಲ್ಲಿ, ಅನುಕೂಲೆಯಾದ ಸ್ತ್ರೀಯಲ್ಲಿ, ದಾರಿತಪ್ಪದ ಮಿತ್ರನಲ್ಲಿ ದುಃಖವನ್ನು ತೋಡಿಕೊಂಡರೆ ಸುಖವೆನಿಸುತ್ತದೆ. ! ವೈದ್ಯನಿಗೆ ತಿಳಿಸಿದರೆ ರೋಗ ನಾಶವಾಗುವಂತೆ ಈತನಿಗೆ ಮನೋಗತವನ್ನು ಹೇಳಿದರೆ ಕಾರ್ಯ ತೀರದಿರದು!"

    ನಿಷ್ಕಪಟಚಿತ್ರನಾದ ಪಿಂಗಳಕ ತನ್ನ ಮನದಲ್ಲಿ ಹೀಗೆ ವಿಚಾರಿಸಿಕೊಂಡ ಬಳಿಕ ಕಪಟಪಟುವಾದ ದವನಕನಿಗೆ ಹೇಳಿದ : 

  "ದವನಕ! ನಾನು ಯಮುನಾನದಿಗೆ ನೀರು ಕುಡಿಯಲು ಹೋಗುತ್ತಿರುವಾಗ ಮೋಡದ ಗುಡುಗಿನಂತಿರುವ ಶಬ್ದವೊಂದು ನನ್ನ ಕಿವಿಯನ್ನು ತುಂಬಿತು. ಆ ಘನಘೋರ ಶಬ್ದವನ್ನು ಕೇಳಿ ಹೆದರಿ ವಿಹ್ವಲನಾದೆ. ಮನ ಭಯದಿಂದ ಅಲ್ಲಾಡಿತು. ನೀರು ಕುಡಿಯಲು ಸಹಿತ ಧೈರ್ಯವಿಲ್ಲದಂತಾಗಿ ಹಿಂದಿರುಗಿ ಓಡಿಬಂದು ಬಿಟ್ಟೆ. ಆದ್ದರಿಂದ ಇಲ್ಲಿಂದ ಹೋಗುವುದೇ ಈಗ ನಮಗುಳಿದಿರುವ ಕಾರ್ಯ !''.

  ಆಗ ದವನಕ ಪಿಂಗಳಕನಲ್ಲಿ ಧೈರ್ಯ ತುಂಬುತ್ತ, ''ದೇವಾ !

  ಭೇರಿ, ಮೃದಂಗ, ಗಂಟೆ, ಮೋಡ, ಗರ್ಜನೆ, ಶಂಖ ಮೊದಲಾದವುಗಳಿಂದ ಹುಟ್ಟಿದ ಶಬ್ದ ಅನೇಕ ಆಕಾರವನ್ನು ತಾಳುವುದುಂಟು. ಯಾವುದೋ ಕೇಳಿದ ಮಾತ್ರಕ್ಕೆ ಚೆನ್ನಾಗಿ ವಿಚಾರಿಸದವನಂತೆ ಪಿತೃ ಪರಂಪರಾಗತವಾಗಿ ಬಂದ ಈ ಬನವನ್ನು ಬಿಟ್ಟು ಬಿಡುವುದು ತಕ್ಕುದಲ್ಲ?" ಎಂದು ಹೇಳಿದ. ಅದಕ್ಕೆ ಪಿಂಗಳಕ 

"ದವನಕ! ಈ ಮಹಾಗಂಭೀರ ಘೋರ ನಿರ್ಘೋಷವನ್ನು ನೀನು ಕೇವಲ ಶಬ್ದ ಮಾತ್ರವೆಂದು ಏಕೆ ನಿರಾಕರಿಸುವೆ ? ವಿಚಾರಿಸಿ ನೋಡಿದರೆ ಈ ಮಹಾಶಬ್ದಕ್ಕೆ ತಕ್ಕ ದೇಹವಿರಬೇಕು. ಆ ದೇಹಕ್ಕೆ ತಕ್ಕ ಸತ್ವ ಪ್ರಾಪ್ತವಾಗಿರಲೇಬೇಕು. ಆ ಸತ್ವಕ್ಕೆ ತಕ್ಕ ದರ್ಪ ಉಂಟಾಗಿರಲೇಬೇಕು. ಆ ದರ್ಪಕ್ಕೆ ತಕ್ಕ ಕಲಿತನ ಒದಗಿ ಬಂದಿರಲೂ ಸಾಕು ! ಸ್ವಭಾವ ಸಹಜ ಕಲಿಯಾದ ಈ ಮಹಾಶಬ್ದ ಕಲಹವನ್ನೇ ಬಯಸಿ, ತನಗಿಂತಲೂ ಅಧಿಕವಾದವನನ್ನು ಹುಡುಕುತ್ತಿರಬೇಕು. ನೀನು ಹೇಳಿದಂತೆ, ಅದರ ಬಲಸಾಧಾರಣವೆಂದು ತಿಳಿದು ನನ್ನ ಬಲವನ್ನು ನಂಬಿ ಯುದ್ಧಕ್ಕೆ ಪ್ರಯತ್ನಿಸಿದನಾದರೆ, ನಮ್ಮಿ ಬ್ಬರ ಕತೆ ಮುಗಿದಂತೆಯೇ ಸರಿ ! ಪೂರ್ವಪುರುಷರಿಂದಾದ ಮಹಾರಣ್ಯವನ್ನು ಬೀಡಬಾರದು ಎಂಬ ನೀತಿವಿರೋಧಿಗಳ ಮಾತನ್ನು ನನಗೆ ನೀನು ಹೇಳಿದೆಯಷ್ಟೇ. ಈ ಪ್ರಸಂಗಕ್ಕೆ ತಕ್ಕ ಕಥೆಯೊಂದನ್ನು ಹೇಳುತ್ತೇನೆ ಕೇಳು" ಎಂದು ನುಡಿದು ದವನಕನಿಗೆ 'ನರಿ ಮತ್ತು ಮಾತನಾಡುವ ಬಿಲದ ಕಥೆ' ಯನ್ನು ಹೇಳತೊಡಗಿದ. ಆ ಕಥೆ ಹೀಗಿದೆ :

                      ( ಮುಂದುವರೆಯುವುದು)

 

Category:StoriesProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.