ವಾಸ್ತವದಲ್ಲಿರಿ...

ಬೀ ಪ್ರಾಕ್ಟಿಕಲ್!!

ProfileImg
28 Mar '24
4 min read


image

ಯಾವಾಗ ಸ್ಮಾರ್ಟ್ ಫೋನ್ ಯುಗ ಪ್ರಾರಂಭವಾಯಿತೋ, ಆಗಿನಿಂದ ನಮ್ಮ ದೇಶದಲ್ಲಿ ಯುವಜನತೆ ಮಾತ್ರವಲ್ಲ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ಮಧ್ಯ ವಯಸ್ಸಿನ ಆಂಟಿ-ಅಂಕಲ್ಗಳು ಮತ್ತು ವಯಸ್ಸಾದ ಅಜ್ಜಿ-ತಾತಂದಿರು ಸಹ ದಿನಕ್ಕೆ ಕನಿಷ್ಠ ಒಂದೆರಡು ಗಂಟೆ ಮೊಬೈಲ್ ಫೋನ್ ನೋಡುವುದಕ್ಕಾಗಿಯೇ ಮೀಸಲಿಟ್ಟು ಬಿಟ್ಟಿದ್ದಾರೆ!

ಅದರಲ್ಲೂ ಆ ದಿನದ ನ್ಯೂಸ್ ಅಪ್ಡೇಟ್, ಹಾಡು, ಸಿನಿಮಾ, ತಮ್ಮ ಕೆಲಸಕ್ಕೆ ಸಂಬಂಧಿಸಿದ ಫೈಲ್ಗಳನ್ನು ರೆಡಿ ಮಾಡಿಕೊಳ್ಳುವುದು, ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳನ್ನು ನೋಡುವುದಕ್ಕೆ ಹಿರಿಯರು ಮೊಬೈಲ್ ಉಪಯೋಗಿಸಿದರೆ, ಮಕ್ಕಳಂತೂ ತಮ್ಮ ವಯಸ್ಸಿಗನುಸಾರವಾಗಿ ಮಕ್ಕಳ ಹಾಡುಗಳು, ಶಿಶು ಗೀತೆಗಳನ್ನು ನೋಡುವುದಕ್ಕೆ ಮೊಬೈಲ್ ಕೈಯಲ್ಲಿ ಹಿಡಿಯುತ್ತಾರೆ. ಕೆಲವು ಮನೆಗಳಲ್ಲಂತೂ ಮಕ್ಕಳು ಎಷ್ಟು ಈ ಮೊಬೈಲ್ ಫೋನ್ ಗೆ ಅಡಿಕ್ಟ್ ಆಗಿದ್ದಾರೆ ಅಂದರೆ, ಫೋನನ್ನು ನೋಡದೇ ಒಂದು ತುತ್ತು ಊಟ ಕೂಡ ಅವರ ಗಂಟಲಲ್ಲಿ ಇಳಿಯುವುದಿಲ್ಲ! ಒಂದಾದರೊಂದರ ಮೇಲೆ ಹಾಡುಗಳು ಬರುತ್ತಿದ್ದರೆ, ತಾವು ತಿನ್ನುತ್ತಿರುವ ಊಟ ಏನೆಂದು ಸಹ ಗಮನವಹಿಸದೇ ತಮ್ಮ ಪಾಡಿಗೆ ತಾವು ತಿನ್ನುತ್ತಾ ಹೋಗುತ್ತಾರೆ!

ಆ ಮಟ್ಟಿಗೆ ಈ ಮೊಬೈಲ್ ವ್ಯಸನ ಇತ್ತೀಚಿನ ಮಕ್ಕಳಲ್ಲಿ ಅಂಟುಬಿಟ್ಟಿದೆ. ಇನ್ನು ಶಾಲೆಗೆ ಹೋಗುವ ಮಕ್ಕಳು ಅದರಲ್ಲೂ ಹೈಸ್ಕೂಲ್ ಮಕ್ಕಳು ಕರೋನಾ ಮಹಾಮಾರಿ ಬಂದು ಹೋದ ನಂತರ ಮೊಬೈಲ್ ಅವರ ಪಠ್ಯಪುಸ್ತಕದಂತೆ ಆಗಿಬಿಟ್ಟಿದೆ. ಪಠ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು, ಶಾಲೆಯಲ್ಲಿ ಕೊಟ್ಟ ಪ್ರಾಜೆಕ್ಟ್ ಗಳನ್ನು ತಯಾರಿಸಲು, ಅಥವಾ ಮೊಬೈಲ್ ನಲ್ಲಿ ಆಟಗಳನ್ನು ಆಡಲು ಬಳಸುತ್ತಾರೆ. ತೀರಾ ಅವಶ್ಯಕತೆ ಇದ್ದಾಗ ಮೊಬೈಲ್ ಬಳಕೆ ತಪ್ಪಲ್ಲ. ಆದರೆ ಓದುವ ಪುಸ್ತಕಕ್ಕಿಂತಲೂ, ಆಡುವ ಆಟಕ್ಕಿಂತಲೂ, ಮೊಬೈಲ್ ನೋಡುವ ಸಮಯವೇ ಜಾಸ್ತಿ ಆಕ್ರಮಿಸಿಬಿಟ್ಟರೆ, ಅದು ಒಳ್ಳೆಯ ವಿದ್ಯಾರ್ಥಿಯ ಜೀವನ ಶೈಲಿಯಲ್ಲಿ ಎನ್ನಬಹುದು.

ಈಗಂತೂ ಇನ್ಸ್ಟಾಗ್ರಾಂ- ಫೇಸ್ಬುಕ್ ರೀಲ್ಸ್ ಗಳ ಹವಾ ಜಾಸ್ತಿ ಆಗಿಬಿಟ್ಟಿದೆ. ಶಾಲೆಗೆ ಹೋಗುವ ಪ್ರೈಮರಿ ಮಕ್ಕಳು ಸಹ ತಮ್ಮ ಶಾಲೆಯ ಯೂನಿಫಾರ್ಮ್ ನಲ್ಲಿಯೇ 'ಕರಿಮಣಿ ಮಾಲೀಕ ನಾನಲ್ಲ' ಹಾಡಿಗೆ ನೃತ್ಯ ಮಾಡುವ ಹಂತಕ್ಕೆ ತಲುಪಿದ್ದಾರೆ! ಈ ರೀಲ್ಸ್ ಮಾಡುವುದು ಒಂದು ಗೀಳಿದ್ದಂತೆ. ಎಂದೋ ಯಾವಾಗಲೋ ಮಾಡುವುದರಲ್ಲಿ ತಪ್ಪಲ್ಲ. ಆದರೆ ಅದರ ಹುಚ್ಚಿಗೆ ಬಿದ್ದು, ಒಂದಾದರೊಂದರ ಮೇಲೆ ಮಕ್ಕಳಾಗಲಿ, ಯುವಕ- ಯುವತಿಯರಾಗಲಿ, ಮಧ್ಯ ಅಥವಾ ಹಿರಿ ವಯಸ್ಸಿನ ವ್ಯಕ್ತಿಗಳಾಗಲಿ, ಆ ಹಾಡಿನ ಧಾಟಿಗೆ ಲಿಪ್ ಸಿಂಕ್ ಮಾಡುತ್ತಾ ಹೆಜ್ಜೆ ಹಾಕುತ್ತಾ ಹೋದರೆ ಅದೇ ಒಂದು ವ್ಯಸನವಾಗಿ ಬದಲಾಗುವುದರಲ್ಲಿ ಸಂದೇಹವಿಲ್ಲ.

ಲೈಕ್- ಕಮೆಂಟ್ ಗಳು ಸಿಗುತ್ತಾ ಹೋದಂತೆ, ಇನ್ನೊಂದು ಮತ್ತೊಂದು ಎಂದು ರೀಲ್ಸ್ ಮಾಡುತ್ತಲೇ ಇರುತ್ತಾರೆ. ಎಷ್ಟೆಂದರೆ ಅಡುಗೆ ಮಾಡುವಾಗ, ಊಟ ಮಾಡುವಾಗ, ವ್ಯಾಯಾಮ ಮಾಡುವಾಗ, ಬಣ್ಣ ಬಣ್ಣದ ಬಟ್ಟೆ ತೊಟ್ಟು, ತಮ್ಮ ಚಿತ್ರ ವಿಚಿತ್ರ ಹಾವಭಾವಗಳಿಂದ ನೋಡುಗರನ್ನು ಆಕರ್ಷಿಸುತ್ತಾರೆ!

ಇದರಿಂದ ಕಾಣದ ರೀಲ್ಸ್ ಲೋಕಕ್ಕೆ ಧುಮುಕಿ, ವಾಸ್ತವದಲ್ಲಿರುವ ರಿಯಲ್ ಲೋಕದ ಸಂಪರ್ಕವನ್ನು ಕಡೆದುಕೊಳ್ಳುತ್ತಾ ಹೋಗುತ್ತಾರೆ. ಎಷ್ಟೋ ಯುವ ಜೋಡಿಗಳು, ಯುವಕ- ಯುವತಿಯರು ಟ್ರಿಪ್ ಗಳಿಗೆ ಹೋದಾಗ ನೀರಿನ ನಡುವಲ್ಲಿ, ಬೆಟ್ಟದ ತುದಿಯಲ್ಲಿ, ಚಲಿಸುತ್ತಿರುವ ಬಸ್ಸು- ಟ್ರೈನುಗಳಲ್ಲಿ ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದನ್ನು ನೋಡಿರಬಹುದು. ಇವೆಲ್ಲದರಿಂದ ಮನುಷ್ಯ ಒಂದಷ್ಟು ಪಾಠ ಕಲಿತನೇನೋ ಎಂದುಕೊಳ್ಳುತ್ತಿರುವಾಗಲೇ, ಮತ್ತೊಂದು ಟ್ರೆಂಡಿಂಗ್ ಹಾಡಿಗೆ ಒಬ್ಬರಿಂದ ರೀಲ್ಸ್ ರೆಡಿಯಾಗಿರುತ್ತದೆ!

ಮತ್ತೆ ಶುರು. ಒಬ್ಬೊಬ್ಬರದು ಒಂದೊಂದು ಧಾಟಿಯ ರೀಲ್ಸ್ ಗಳನ್ನು ಮಾಡಿಬಿಡುವ ಸರದಿ. ಹೀಗೆ ಬೇರೆಯವರನ್ನು ಸೆಳೆಯುವಂತೆ ರೀಲ್ಸ್ ಗಳನ್ನು ಮಾಡಿ ಇನ್ಸ್ಟಾಗ್ರಾಮ್ ಮೂಲಕ ಪ್ರತಿನಿತ್ಯ ಹಣವನ್ನು ಸಹ ಸಂಪಾದಿಸುವವರು ನಮ್ಮ ನಿಮ್ಮ ನಡುವೆ ಅನೇಕರು ಇದ್ದಾರೆ!

ಇಂಥವರಿಗೆ ಸಂಬಂಧಗಳ ಬೆಲೆಯೂ ಕೆಲವೊಮ್ಮೆ ಗೊತ್ತಿರುವುದಿಲ್ಲ ಎಂಬುದೇ ವಿಪರ್ಯಾಸ. ನೋಡುವವರ ಸಂಖ್ಯೆ ಹೆಚ್ಚಲಿ ಎಂಬ ಕಾರಣಕ್ಕೆ ತಾವಲ್ಲದ ತಾವಾಗಿ, ತಾವಲ್ಲದ ಬೇರೊಬ್ಬರಾಗಿ, ವಿಡಿಯೋ, ರೀಲ್ಸ್ ಗಳ ಮುಖಾಂತರ ನಮ್ಮ ಮುಂದೆ ಬರುತ್ತಾರೆ.

ಎಷ್ಟೋ ಸಲ ಕಾಮೆಂಟ್ ನಲ್ಲಿ ಇಂಥವರ ಬಗ್ಗೆ ಪ್ರಶ್ನಿಸಿ ಬೈದಿದ್ದರೂ, ಅದರ ಬಗ್ಗೆ ಅವರೇನು ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಬೇಕಿರುವುದು ನೋಡುಗರ ಸಂಖ್ಯೆ ಮಾತ್ರ. ಅದು ಸಾವಿರ- ಲಕ್ಷ ವ್ಯೂಗಳು (views) ಆದರೆ ಹಣ ಬರುವುದು ತಮಗೆ!ಹಾಗಾಗಿ ಇಂತಹ ಯಾವುದೇ ಹೇಟ್ ಕಮೆಂಟ್ಸ್ ಗೆ ಅಂತವರು ಜಗ್ಗುವುದಿಲ್ಲ. ರೀಲ್ಸ್ ಮಾಡುವುದರಲ್ಲಿ ಮೈಮರೆಯುತ್ತಾ, ಬರುವ ದುಡ್ಡನ್ನು ಎಣಿಸುತ್ತಾ, ನೈತಿಕತೆಯನ್ನೇ ಮರೆತುಬಿಡುತ್ತಾರೆ ಇಂಥವರು!

ಇನ್ನೂ ಕೆಲವು ಮಂದಿ ಕಪಲ್ ವಿಡಿಯೋ ಮಾಡಿ ಹಾಕುವುದು ಜಾಸ್ತಿ. ಅದೇ ಈಗಿನ ಟ್ರೆಂಡ್ ಎಂದರೂ ತಪ್ಪಲ್ಲ. ಅವರಿಬ್ಬರೂ ನಿಜಕ್ಕೂ ಮದುವೆಯಾದ ಜೋಡಿಯೇ ಅಥವಾ ಈ ರೀಲ್ಸ್ ಹುಚ್ಚಿಗೆ ಬಿದ್ದು ಜೋಡಿ ಎಂದು ನಾಟಕ ಮಾಡುತ್ತಿದ್ದಾರೆಯೇ ಎಂಬ ಸಂದೇಹವು ಕೆಲವೊಮ್ಮೆ ಬರುತ್ತದೆ!

ಒಂದಾದರೊಂದರಂತೆ ಭಾರತದ ಸುತ್ತಮುತ್ತ ಮಾತ್ರವಲ್ಲ, ಪ್ರಪಂಚದ ಸುತ್ತಲೂ ಇರುವ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟು, ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ತಾವು ಮದುವೆಯಾದ ದಿನದ ವಿಡಿಯೋ, ಪ್ರೀ ವೆಡ್ಡಿಂಗ್ (pre wedding) ಫೋಟೋಶೂಟ್, ಡೆಸ್ಟಿನೇಷನ್ ವೆಡ್ಡಿಂಗ್ ಇವೆಲ್ಲ ಇತ್ತೀಚಿಗೆ ಶುರುವಾಗಿರುವ ಹೊಸ ವಿಧಿ ವಿಧಾನಗಳು. ಇವುಗಳನ್ನು ನೋಡುತ್ತಾ ಮೈ ಮರೆಯುವ ಜನರು ವಾಸ್ತವಕ್ಕಿಂತ ಇಂತಹ ಭ್ರಮೆಯ ಅವಾಸ್ತವಿಕ ಲೋಕದಲ್ಲಿಯೇ ವಿಹರಿಸಲು ಹೆಚ್ಚು ಇಷ್ಟಪಡುತ್ತಾರೆ!

ಆದರೆ ಎಷ್ಟೋ ಸಲ ಇಂತಹ ವಿಡಿಯೋ- ರೀಲ್ಸ್ ಗಳಲ್ಲಿ ತಾವು ನೋಡಿ ಇಷ್ಟಪಟ್ಟ ಸೆಲೆಬ್ರಿಟಿ ಜೋಡಿ, ಅವರ ಲೈಫ್ ಸ್ಟೈಲ್, ಅವರ ಆಡಂಬರ, ಇವೆಲ್ಲವೂ ಕ್ಷಣಿಕ ಮಾತ್ರ, ವಾಸ್ತವವೇ ಬೇರೆ ಈ ಫೋಟೋ- ವೀಡಿಯೋ ಮುಂದೆ ನಿಂತು ಕೊಡುವ ಪೋಸ್ಗಳೇ ಬೇರೆ ಅದಷ್ಟೇ ಬದುಕಲ್ಲ, ಬದುಕೇ ಬೇರೆ ರೀಲ್ಸ್ ಲೋಕವೇ ಬೇರೆ ಎಂದು ನೋಡುವವರಿಗಾಗಲಿ ಅಥವಾ ಮಾಡುವವರಿಗಾಗಲಿ ತಕ್ಷಣಕ್ಕೆ ಗೊತ್ತಾಗದೇ, ಒಂದಷ್ಟು ಸಮಯದ ನಂತರ ಗೊತ್ತಾಗುತ್ತದೆ!

ಕೈ ಕೈ ಹಿಡಿದು ಡ್ಯಾನ್ಸ್ ಮಾಡುತ್ತಾ ಪ್ರೀತಿ ನಿವೇದಿಸಿಕೊಂಡು ಪರದೇಶದಲ್ಲಿ ಮದುವೆಯಾಗಿ, ಫೋಟೋ- ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಜೋಡಿಗಳು, ಕೆಲವೇ ದಿನಗಳಲ್ಲಿ ಬೇರ್ಪಡುವುದನ್ನು ನೋಡುವುದಕ್ಕೆ ನಿಜಕ್ಕೂ ಖೇದನೀಯ. ಆದರೆ ನಿಜಾಂಶವೇನೆಂದು ತಿಳಿಯದ ನೋಡುಗ "ಛೇ, ತನ್ನ ಜೀವನ ಇಷ್ಟು ಸುಖಕರವಾಗಿಲ್ಲವಲ್ಲ! ತಾನಿಷ್ಟು ಶ್ರೀಮಂತನಲ್ಲವಲ್ಲ. ತಾನಿಷ್ಟು ಸುಂದರವಾಗಿಲ್ಲವಲ್ಲ. ತನ್ನ ಮನೆ ಇಷ್ಟು ದೊಡ್ಡದಿಲ್ಲವಲ್ಲ!" ಎಂದು ಗೋಳಾಡುತ್ತಾ ಕೊರಗುತ್ತಾನೆ.

ಆದರೆ ಹೀಗೆ ಸಮಯ ವ್ಯರ್ಥ ಮಾಡುತ್ತಾ, ರೀಲ್ಸ್ ನೋಡುತ್ತಾ, ಬೇಸರಗೊಳ್ಳುವ ನೋಡುಗನಿಗೆ ತಾನು ಜೀವಿಸುತ್ತಿರುವ ಜೀವನವೇ ಅತಿ ಸುಂದರವಾಗಿದೆ, ಜೀವನವೆಂದರೆ ಬರಿ ಮೇಕಪ್ ಮಾಡಿಕೊಂಡು ಆಕರ್ಷಕವಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪೋಸು ಕೊಡುವುದಲ್ಲ, ಬೆವರು ಸುರಿಸುತ್ತಾ ಒಂದೊಂದು ಕ್ಷಣವನ್ನು ಚಿನ್ನದಂತೆ ಉಪಯೋಗಿಸುತ್ತಿರುವ ತಾನು ಮತ್ತು ತನ್ನ ಮನೆಯವರೇ ನಿಜವಾದ ಅದೃಷ್ಟವಂತರು, ನಾವೇ ಇತರರಿಗೂ ಅನುಕರಣೀಯರು, ಅವೆಲ್ಲ ಲೈಕ್- ಕಮೆಂಟ್ಗಳಿಗಾಗಿ, ಹಿಂಬಾಲಕರಿಗಾಗಿ, ದುಡ್ಡಿಗಾಗಿ ನಡೆಯುವ ದೊಂಬರಾಟ, ನಿಜ ಜೀವನವೇ ಬೇರೆ ಇದೆ, ಕಷ್ಟ- ಸುಖ ಇವೆರಡೂ ಮಿಳಿತವಾಗಿರುವ ತನ್ನ ಜೀವನವೇ ವಾಸ್ತವಕ್ಕೆ ಹತ್ತಿರವಾಗಿದ್ದು ನೆಮ್ಮದಿಯಿಂದ ಕೂಡಿದೆ ಎಂಬುದು ಗೊತ್ತಾಗುವುದಿಲ್ಲ!

ವಾಸ್ತವದಲ್ಲಿ ಇದ್ದುಕೊಂಡು ಎಲ್ಲೂ ಕಳೆದು ಹೋಗದೇ, ಪ್ರಾಕ್ಟಿಕಲ್ ಆಗಿ ಚಿಂತಿಸುತ್ತಾ, ಜೀವನ ಸಾಗಿಸುವುದೇ ನಿಜವಾದ ಬದುಕು. ಬದುಕು ಬಂದಂತೆ ಸ್ವೀಕರಿಸುತ್ತಾ ಹೋಗುವುದೇ ನಿಜವಾದ ಕಲೆ ಎಂದು ಗೊತ್ತಾಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಾನೆ. ತನ್ನ ಜೀವನವೇ ಸುಖಕರವಾಗಿದೆ ಎಂದುಕೊಳ್ಳುವಷ್ಟರಲ್ಲಿ ಅವನ ಜೀವಿತಾವಧಿಯ ಅರ್ಧ ಆಯಸ್ಸು ಮುಗಿದು ಹೋಗಿರುತ್ತದೆ ಎಂಬುದೇ ಕಟು ವಾಸ್ತವ!

ಜೀವನವನ್ನು ನಿರ್ವಹಿಸುವ, ಜೀವನವನ್ನು ಸಂಭ್ರಮಿಸುವ ಕಲೆಯನ್ನು ಎಲ್ಲೋ ಹುಡುಕಬೇಕಲ್ಲ, ಎಲ್ಲೂ ಕಲಿಯಬೇಕಿಲ್ಲ ಅದು ತನ್ನೊಳಗೆ ಇದೆ, ತನ್ನ ಅರಿವಿಗೆ ಬಾರದೇ ಬೆಚ್ಚಗೆ ಅವಿತು ಕುಳಿತಿದೆ, ಎಲ್ಲರಂತೆ ತನ್ನ ಜೀವನವು ಸಂತೋಷಕರವಾಗಿ, ನೆಮ್ಮದಿಯುತವಾಗಿ ಇದೆ ಎಂದು ತಿಳಿಯಲು ಇಂದಿನ ಮನುಷ್ಯ ಬಹಳ ಕಷ್ಟಪಡುತ್ತಾನೆ.

ತನ್ನ ಜೀವನದ ಬಗ್ಗೆ ಕೀಳರಿಮೆ ಮಾಯವಾಗಿಸಿ, ಇತರರ ಜೀವನದೊಂದಿಗೆ ಹೋಲಿಕೆ ನಿಲ್ಲಿಸಿ, ತನ್ನ ಬದುಕೇ ಸುಖಮಯವೆಂದು ಅರಿವಾಗಲು ಅವನು ಮಾಡಬೇಕಾದುದು ಇಷ್ಟೇ. ಮೂರು ಹೊತ್ತು ಮೊಬೈಲ್ ನಲ್ಲಿ ಮುಖ ಹುದುಗಿಸಿ, ಟೈಮ್ ವೇಸ್ಟ್ ಮಾಡುವ ಬದಲು, ಬೇಕಿರುವಷ್ಟು ಹೊತ್ತು ಮಾತ್ರ ಮೊಬೈಲ್ ಅನ್ನು ಉಪಯೋಗಿಸಿ, ಮಿಕ್ಕ ಸಮಯದಲ್ಲಿ ತನ್ನ ಸುತ್ತಲೂ ಇರುವ ಸುಂದರ ಪ್ರಪಂಚವನ್ನು ಕಣ್ಣು ಹಾಯಿಸಿ ನೋಡಬೇಕಿದೆ. ಅಲ್ಲಿ ತನಗಿಂತ ಕೆಳಮಟ್ಟದಲ್ಲಿದ್ದರೂ, ಕಷ್ಟಪಟ್ಟು ಎರಡು ಹೊತ್ತು ಊಟವನ್ನು ಸಂಪಾದಿಸಿದರೂ, ತೃಪ್ತಿಯಾಗಿ ನಗುತ್ತಾ ಜೀವನ ಸವೆಸುತ್ತಿರುವ ಕುಟುಂಬಗಳನ್ನು ಒಳಗಣ್ಣನ್ನು ಬಿಟ್ಟು ನೋಡಬೇಕಿದೆ. ಅಂತವರಿಗಿಂತ ತನ್ನ ಬದುಕೆಷ್ಟು ಆರಾಮದಾಯಕವಾಗಿದೆ, ತನ್ನ ಬದುಕೆಷ್ಟು ಸುಖಕರವಾಗಿದೆ ಎಂದು ಅವಶ್ಯವಾಗಿ ತಿಳಿಯಬೇಕಿದೆ!!

✍️ ಅಚಲ ಬಿ ಹೆನ್ಲಿ 

 

Category:Personal Development



ProfileImg

Written by Achala B.Henly