"ಸಂಖ್ಯಾಶಾಸ್ತ್ರ - ಅಂಕಿ ಸಂಖ್ಯೆಗಳು ಹೇಳುವ ಭವಿಷ್ಯ"

ಸಂಖ್ಯಾಶಾಸ್ತ್ರ ಸತ್ಯಾವೋ? ಮಿಥ್ಯವೋ?

ProfileImg
31 Mar '24
4 min read


image

ಸಂಖ್ಯಾಶಾಸ್ತ್ರ - ಅಂಕಿ ಸಂಖ್ಯೆಗಳು ಹೇಳುವ ಭವಿಷ್ಯ


ಇತ್ತೀಚಿನ ದಿನಗಳಲ್ಲಿ ಸಂಖ್ಯಾಶಾಸ್ತ್ರ ಹೆಚ್ಚು ಪ್ರಚಲಿತದಲ್ಲಿದೆ. ಹುಟ್ಟಿದ ದಿನಾಂಕದ ಜೊತೆಗೆ ಹೊಂದಾಣಿಕೆ ಆಗುವಂತೆ ಹಾಗೂ ಜೀವನದಲ್ಲಿ ಯಶಸ್ಸು ಪಡೆಯಲು ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ಬದಲಾವಣೆ ಮಾಡಿಕೊಳ್ಳುವುದು ದಿನೇ ದಿನೇ ಹೆಚ್ಚುತ್ತಿದೆ. ಕೆಲವು ನಟ ನಟಿಯರು, ಪ್ರಮುಖ ವ್ಯಕ್ತಿಗಳು ಹೆಸರಿನಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡಿರುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ.

ಹಾಗಿದ್ದರೆ ಸಂಖ್ಯಾಶಾಸ್ತ್ರ ನಿಜವೇ? ಅದರಿಂದ ಬದಲಾವಣೆ ಸಾಧ್ಯವೇ? ಹೆಸರು, ಮೊಬೈಲ್ ಸಂಖ್ಯೆ ಬದಲಾಯಿಸಿದರೆ ಭವಿಷ್ಯ ಬದಲಾಗುವುದೇ? ಈ ತರಹದ ಪ್ರಶ್ನೆಗಳು ಅನೇಕರಲ್ಲಿ ಉದ್ಭವಿಸಿರಬಹುದು. ಈ ಲೇಖನದಲ್ಲಿ ಅದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಯೋಣ. ಅದಕ್ಕೂ ಮೊದಲು ಹೆಸರು ಬದಲಾಯಿಸಿಕೊಂಡ ಕೆಲವು ಬಾಲಿವುಡ್ ಜನಪ್ರಿಯರ ಉದಾಹರಣೆ ನೋಡೋಣ.

ಸಂಖ್ಯಾಶಾಸ್ತ್ರದಲ್ಲಿ ಒಂದೊಂದು ಸಂಖ್ಯೆ/ಅಂಕಿಗೂ ವಿಭಿನ್ನ ರೀತಿಯ ಗುಣ ಲಕ್ಷಣಗಳಿವೆ. ಇಂಗ್ಲಿಷ್ ವರ್ಣಮಾಲೆಯ ಒಂದೊಂದು ಅಕ್ಷರಕ್ಕೆ ಒಂದೊಂದು ಸಂಖ್ಯೆ ನೀಡುಲಾಗುವುದು. ಅದರ ಆಧಾರದ ಮೇಲೆ ವ್ಯಕ್ತಿಯ ಹುಟ್ಟಿದ ದಿನಾಂಕಕ್ಕೆ ಹೆಸರು ಸೂಕ್ತ ಹೌದೋ ಅಲ್ಲವೋ ಎನ್ನುವುದನ್ನು ನಿರ್ಧರಿಸಲಾಗುತ್ತದೆ. 
(ಸಂಖ್ಯಾಶಾಸ್ತ್ರದಲ್ಲಿ ಇಂಗ್ಲಿಷ್ ವರ್ಣಮಾಲೆಗಳನ್ನು ಬಳಸುವುದರ ಕಾರಣ ಇಲ್ಲಿ ಹೆಸರುಗಳನ್ನು ಇಂಗ್ಲಿಷಿನಲ್ಲಿ ಬರೆಯಲಾಗಿದೆ)

ಮೊದಲ ಹೆಸರು     ಬದಲಾವಣೆಯ ನಂತರ
Rajkumar Yadav - Rajkummar Rao
Rani Mukherji - Rani Mukerji
Ayushman Khurana - Ayushmann Khurrana
Karishma Kapoor - karisma Kapoor
Ajay Devgan - Ajay Devgn
Sunil Shetty - Suniel Shetty
Javed Jaafery - Javed Jefferey
Tushar Kapoor - Tusshar Kapoor 
Rithik Roshan - Hrithik Roshan 
Vivek Oberoi - Viveik Oberoi 


ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಒಂದೊಂದೇ ಅಕ್ಷರಗಳು ಬದಲಾಗಿದೆ ಕಾರಣ ಆ ಅಕ್ಷರಗಳಿಗೆ ನೀಡಿದ ಸಂಖ್ಯೆಯ ಕಂಪನಗಳ ಮೇಲೆ ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕತೆಯನ್ನು ಆಕರ್ಷಿಸಲು ಸಹಾಯಕವಾಗುತ್ತವೆ ಎನ್ನುವ ನಂಬಿಕೆ.

ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಹಸ್ತ್ರ ಸಾಮುದ್ರಿಕ, ಗಿಣಿ ಶಾಸ್ತ್ರ, ವಾಸ್ತು ಶಾಸ್ತ್ರ, ಶಕುನ ಶಾಸ್ತ್ರ, ಇಲಿ ಶಾಸ್ತ್ರ, ಪಂಚಾಂಗ ಶಾಸ್ತ್ರ ಇದೆಲ್ಲ ಇಂದು ನೆನ್ನೆ ಅಥವಾ ದುಡ್ಡಿಗಾಗಿ ಅಥವಾ ಜನರನ್ನು ಮೋಸಗೊಳಿಸಲು ಅಥವಾ ಹೊಟ್ಟೆ ಪಾಡಿಗಾಗಿ ಹುಟ್ಟಿಕೊಂಡದ್ದಲ್ಲ. ಪ್ರಾಚೀನ ಕಾಲದಿಂದಲೂ ಇದೆಲ್ಲವೂ ಬಳಕೆಯಲ್ಲಿತ್ತು ಆದರೆ ಅದು ಇತಿ ಮಿತಿಯಲ್ಲಿತ್ತು. ಇಂದು ಅದರ ಬಳಕೆ ಅತಿಯಾಗಿದೆ ಹಾಗೂ ದುರಾಸೆಗೆ ಬಿದ್ದ ಮಾನವ ಅದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ.

ಹಾಗಿದ್ದರೆ ಏನಿದು ಸಂಖ್ಯಾಶಾಸ್ತ್ರ? ಇದೊಂದು ರೀತಿ ಸಂಖ್ಯೆಗಳ ವಿಜ್ಞಾನ. ಒಂದೊಂದು ಸಂಖ್ಯೆಗಳು ಹಾಗೂ ಅವುಗಳ ಕಂಪನದ ಆಧಾರದ ಮೇಲೆ ಸಂಖ್ಯಾಶಾಸ್ತ್ರಜ್ಞರು ವ್ಯಕ್ತಿಯ ಗುಣ ಲಕ್ಷಣಗಳು ಹಾಗೂ ಜೀವನದ ಪ್ರಮುಖ ಘಟನೆಗಳನ್ನು ವಿಶ್ಲೇಷಣೆ ಮಾಡುತ್ತಾರೆಯೆ ಹೊರತು ನೂರಕ್ಕೆ ನೂರರಷ್ಟು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ.

ಜೀವನದ ಪ್ರತಿಯೊಂದು ಹಂತದಲ್ಲೂ ಸಂಖ್ಯೆಗಳ ಬಳಕೆ ಇದ್ದೆ ಇದೆ. ಮಗುವಿನ ಜನನದಿಂದ ಪ್ರಾರಂಭಿಸಿ ಮರಣದವರೆಗೂ ಸಂಖ್ಯೆಗಳ ಪ್ರಭಾವ ಇರುತ್ತದೆ. ಹೀಗಿದ್ದಾಗ ಸಂಖ್ಯೆಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧ ಹೊಂದಿವೆ ಎನ್ನುವುದು ಸ್ಪಷ್ಟವಾಗುತ್ತದೆ.

ಇಲ್ಲಿ ಒಂದರಿಂದ ಒಂಬತ್ತರವರೆಗೆ ಮಾತ್ರವೇ ಸಂಖ್ಯೆಗಳ ಬಳಕೆ, ಸೊನ್ನೆಗೆ ಬೆಲೆಯಿಲ್ಲ. ಒಂದೊಂದು ಸಂಖ್ಯೆಯೂ ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತವೆ ಜೊತೆಗೆ ಅದರದ್ದೇ ಆದ ಗುಣ ಲಕ್ಷಣಗಳನ್ನು ಹೊಂದಿವೆ. ಗ್ರಹಗಳ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವ, ಗುಣ ಲಕ್ಷಣ, ವೃತ್ತಿ, ಮದುವೆ, ಕೆಲಸ ಇತ್ಯಾದಿ ವಿಷಯಗಳನ್ನು ವಿಶ್ಲೇಷಿಸಿ ಮುಂದೆ ಏನಾಗಬಹುದು ಎನ್ನುವುದನ್ನು ಊಹಿಸಿ ಮಾರ್ಗದರ್ಶನ ನೀಡುವುದೇ ಸಂಖ್ಯಾಶಾಸ್ತ್ರ.

ಸಂಖ್ಯಾಶಾಸ್ತ್ರದಲ್ಲಿಯೇ ಹಲವಾರು ವಿಧಾನಗಳಿವೆ. ಬೇರೆ ಬೇರೆ ಸಂಸ್ಕೃತಿಯಲ್ಲಿ ಬೇರೆ ಬೇರೆ ವಿಧಾನಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಬಳಕೆಯಲ್ಲಿರುವುದು ಚಾಲ್ಡಿಯನ್ ಸಂಖ್ಯಾಶಾಸ್ತ್ರ.

ಭಾಗ್ಯಾಂಕ, ಮೂಲಾಂಕ, ಏಂಜೆಲ್ ಸಂಖ್ಯೆ ಹೀಗೆ ಹುಟ್ಟಿದ ದಿನಾಂಕದಲ್ಲಿ ಸಂಖ್ಯೆಗಳನ್ನು ವಿಂಗಡಿಸಿ ಅದರ ಆಧಾರದ ಮೇಲೆ ವ್ಯಕ್ತಿಯ ಮುಂದಿನ ಜೀವನದ ಆಯ್ಕೆಗಳ ಬಗ್ಗೆ ಸಂಖ್ಯಾಶಾಸ್ತ್ರಜ್ಞರು ಮಾರ್ಗದರ್ಶನ ನೀಡುವರು.

ಸಂಖ್ಯಾಶಾಸ್ತ್ರ ಯಾವೆಲ್ಲಾ ಕ್ಷೇತ್ರದಲ್ಲಿ ನಮಗೆ ಸಹಾಯಕಾರಿಯಾಗಬಹುದು ಎಂದು ತಿಳಿಯುವುದು ಕೂಡ ಇಲ್ಲಿ ಮುಖ್ಯವಾಗುತ್ತದೆ. 

ಹುಟ್ಟಿದ ದಿನಾಂಕದ ಆಧಾರದ ಮೇಲೆ ಯಾವ ವೃತ್ತಿ ಆಯ್ಕೆ ಮಾಡಿಕೊಂಡರೆ ಯಶಸ್ಸು ಸಿಗುವುದು ಎನ್ನುವುದನ್ನು ತಿಳಿಸುತ್ತದೆ. 
ವ್ಯಕ್ತಿಯ ವ್ಯಕ್ತಿತ್ವ ಹಾಗೂ ಆತನ ಸಾಮರ್ಥ್ಯ, ದೌರ್ಬಲ್ಯಗಳನ್ನು ತಿಳಿಸುತ್ತದೆ.
ಇಬ್ಬರು ವ್ಯಕ್ತಿಗಳ ಮಧ್ಯೆ ಮದುವೆ ಅಥವಾ ಬ್ಯುಸಿನೆಸ್'ಗೆ ಸಂಬಂಧಿಸಿದಂತೆ ಆಯ್ಕೆ ಮಾಡಿಕೊಳ್ಳಲು ಸಹಕಾರಿ. ಮುಂದೆ ಅವರಿಬ್ಬರ ಮಧ್ಯೆ ಯಾವ ಮಟ್ಟದ ಹೊಂದಾಣಿಕೆ ಸಾಧ್ಯ ಎನ್ನುವುದನ್ನು ತಿಳಿಸುತ್ತದೆ. 
ಕೆಲವು ಬಾರಿ ಮಕ್ಕಳ ಜನನದ ಬಗ್ಗೆ ಊಹೆ ಕೂಡ ಮಾಡಬಹುದು. 
ಎಲ್ಲಾ ಗ್ರಹಗತಿಗಳು ಸರಿ ಇದ್ದಾಗಲೂ ಸಮಸ್ಯೆ ಎದುರಿಸುವವರು ಅನೇಕರು, ಆಗ ಅವರ ಹೆೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ವಿಶ್ಲೇಷಿಸಿ ಮಾರ್ಗದರ್ಶನ ನೀಡುತ್ತದೆ. 
ನಮಗೆ ಗೊತ್ತಿಲ್ಲದ ಹಾಗೆ ನಮ್ಮಲ್ಲಿ ಅಡಗಿರುವ ಪ್ರತಿಭೆ ಹೊರತರುವಲ್ಲು ಕೆಲವು ಬಾರಿ ಸಹಾಯ ಮಾಡುತ್ತದೆ.

ಒಂದೊಂದು ಸಂಖ್ಯೆಯೂ ಒಂದೊಂದು ಗ್ರಹವನ್ನು ಪ್ರತಿನಿಧಿಸುವುದರ ಜೊತೆಗೆ ಎಲ್ಲವೂ ಒಂದು ಆಸ್ಥಾನ ಅಥವಾ ಒಂದು ಕುಟುಂಬದಂತೆ ಗುಣಗಳನ್ನು ಹೊಂದಿವೆ. ಸೂರ್ಯ, ಚಂದ್ರ, ಗುರು, ರಾಹು, ಬುಧ, ಶುಕ್ರ, ಕೇತು, ಶನಿ ಹಾಗೂ ಮಂಗಳ.

ಒಂದನೇ ತಾರೀಖಿನಂದು ಹುಟ್ಟಿದವರಿಗೆ ಸೂರ್ಯ ಅಧಿಪತಿಯಾಗಿರುತ್ತಾನೆ ಹಾಗೂ ಆತ ಮನೆಯ ಹಿರಿಯ ಸದಸ್ಯನಂತೆ (ತಂದೆ) ಅಥವಾ ರಾಜನಂತೆ.

ಎರಡನೆ ತಾರೀಖಿನಲ್ಲಿ ಹುಟ್ಟಿದವರು ಚಂದ್ರನ ಅಧಿಪತ್ಯಕ್ಕೆ ಒಳಗಾಗುತ್ತಾರೆ ಮತ್ತು ತಾಯಿಯ ಗುಣಗಳನ್ನು ಹೊಂದಿರುತ್ತಾರೆ ಅಥವಾ ರಾಣಿಯಂತೆ ಅವರು.

ಮೂರನೇ ತಾರೀಖಿನಲ್ಲಿ ಜನಿಸಿದವರು ಗುರು ಗ್ರಹದ ಅಧೀನಕ್ಕೆ ಒಳಗಾಗುತ್ತಾರೆ ಮತ್ತು ಆಸ್ಥಾನದಲ್ಲಿ ಗುರುವಿನ ಸ್ಥಾನದಲ್ಲಿರುವವರು. ರಾಜನಿಗೆ ಮಾರ್ಗದರ್ಶನ ನೀಡುವವರು.

ನಾಲ್ಕನೇ ದಿನಾಂಕದಲ್ಲಿ ಜನಿಸಿದವರು ರಾಹುವಿನ ಅಧಿಪತ್ಯಕ್ಕೆ ಒಳಪಡುತ್ತಾರೆ. 

ಐದನೇ ತಾರೀಖಿನಲ್ಲಿ ಹುಟ್ಟಿದವರು ಬುಧನ ಗುಣಗಳನ್ನು ಹೊಂದಿರುತ್ತಾರೆ ಮತ್ತು ಅವರು ಯುವರಾಜನಂತೆ, ಎಲ್ಲರಿಂದಲೂ ಪ್ರೀತಿ ಪಡೆಯುತ್ತಾರೆ, ದ್ವೇಷಿಗಳು ಇರುವುದಿಲ್ಲ.

ಆರನೇ ತಾರೀಖಿನಂದು ಜನಿಸಿದವರು ಶುಕ್ರ ಗ್ರಹದ ಅಧೀನದಲ್ಲಿ ಬರುತ್ತಾರೆ. ಶುಕ್ರ ದಾನವ ಗುರುವಿನಂತೆ. 

ಏಳನೆ ತಾರೀಖಿನ ವ್ಯಕ್ತಿಗಳು ಕೇತುವಿನ ಅಧಿಪತ್ಯಕ್ಕೆ ಒಳಗಾಗುತ್ತಾರೆ.

ಎಂಟನೇ ತಾರೀಖಿನ ವ್ಯಕ್ತಿಗಳಿಗೆ ಶನಿ ಗ್ರಹ ಅಧಿಪತಿ. ಎಲ್ಲಾ ಕೆಲಸಗಳನ್ನೂ ನಿಷ್ಠೆಯಿಂದ ಮಾಡುವ ಸೂರ್ಯನಿಗೆ ನಿಷ್ಟಾವಂತ ಕೆಲಸಗಾರ. ಶ್ರಮಜೀವಿ. ಆದರೆ ಶನಿಯನ್ನು ಕಂಡರೆ ಸೂರ್ಯನಿಗೆ ಇಷ್ಟವಾಗುವುದಿಲ್ಲ.

ಒಂಬತ್ತನೇ ತಾರೀಖಿನಲ್ಲಿ ಹುಟ್ಟಿದವರು ಮಂಗಳನ ಅಧೀನದಲ್ಲಿ ಬರುವರು. ಕುಟುಂಬದಲ್ಲಿ ಸಹೋದರನಂತೆ ಅಥವಾ ಸೇನಾಧಿಪತಿಯಂತೆ ಕಾರ್ಯ ನಿರ್ವಹಿಸುವರು.

ಸಂಖ್ಯಾಶಾಸ್ತ್ರ ಸತ್ಯವೇ ಅಥವಾ ಮಿತ್ಯವೆ ಎಂದು ಚರ್ಚಿಸುವುದು ಸಮಯ ವ್ಯರ್ಥವಿದ್ದಂತೆ. ನಮ್ಮ ನಮ್ಮ ನಂಬಿಕೆಯ ಆಧಾರದ ಮೇಲೆ ಸಂಖ್ಯಾಶಾಸ್ತ್ರದ ಫಲಿತಾಂಶ ನಿರ್ಧರಿತವಾಗುತ್ತದೆ. 

ಕೆಲವರಿಗೆ ಬೇಗನೆ ಫಲಿತಾಂಶ ದೊರೆತರೆ ಮತ್ತೆ ಕೆಲವರಿಗೆ ತಡವಾಗಿ ಅದರ ಅನುಭವವಾಗುತ್ತದೆ. ಇನ್ನು ಕೆಲವರ ಜೀವನದಲ್ಲಿ ಯಾವುದೇ ರೀತಿಯಲ್ಲೂ ಬದಲಾವಣೆ ಅಥವಾ ಎಳ್ಗೆ ಕಾಣುವುದಿಲ್ಲ ಕಾರಣ ಅವರವರ ಕರ್ಮ ಫಲ ಹಾಗೂ ನಂಬಿಕೆ ಇಲ್ಲದಿರುವುದು. ಯಾಾವುದೆ ಕೆಲಸದಲ್ಲಾದರೂ ನಂಬಿಕೆ ಇದ್ದರೆ ಮಾತ್ರವೇ ಅದರ ಪೂರ್ಣ ಪ್ರತಿಫಲ ದೊರೆಯುತ್ತದೆ. ಅರೆಮನಸ್ಸಿನಿಂದ ಮಾಡಿದರೆ ಒಳ್ಳೆಯ ಕೆಲಸವೂ ಹಾಳಾಗಿ ಹೋಗುತ್ತದೆ. 

ಉದಾಹರಣೆಗೆ ಯಾರೋ ಒಬ್ಬ ವ್ಯಕ್ತಿಯ ಜಾತಕದಲ್ಲಿ ರಾಜಯೋಗವಿರುತ್ತದೆ ಆದರೆ ಆತ ರಾಜಯೋಗವನ್ನೆ ನಂಬಿಕೊಂಡು ಕೆಲಸ ಕಾರ್ಯ ಮಾಡದೆ ಮನೆಯಲ್ಲೇ ಕುಳಿತರೆ ಆತನಿಗೆ ವೈಭೋಗ ಸಿಗುವುದೇ? ಅದಕ್ಕೆ ತಕ್ಕಂತೆ ಕೆಲಸ ಮಾಡಿದರೆ ಅಥವಾ ಜೀವನ ಶೈಲಿಯನ್ನು ಬದಲಾಯಿಸಿಕೊಂಡರೆ ಖಂಡಿತ ರಾಜಯೋಗ ದೊರೆಯುತ್ತದೆ.

ಯಾವುದೇ ಶಾಸ್ತ್ರವಾಗಲಿ ಕೆಲಸ ಮಾಡದೆ ಕುಳಿತು ಸಮಯ ವ್ಯರ್ಥ ಮಾಡಲು ಹೇಳುವುದಿಲ್ಲ. ಕೇವಲ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳು ಅಥವಾ ಅವಕಾಶಗಳ ಬಗ್ಗೆ ಒಂದು ಮಾರ್ಗದರ್ಶನ ನೀಡುತ್ತದೆ ಅದರಂತೆ ಜೀವನ ಬದಲಿಸಿಕೊಂಡು ನಡೆದರೆ ಉತ್ತಮ ಭವಿಷ್ಯ ಎಲ್ಲರಿಗೂ ದೊರೆಯುತ್ತದೆ.

ಕೆಲವರು ಕೇಳಬಹುದು ಅಥವಾ ಹೇಳಬಹುದು ಭವಿಷ್ಯ ಹೇಳುವವರ ಭವಿಷ್ಯವೇ ಅವರಿಗೆ ತಿಳಿದಿರುವುದಿಲ್ಲ ಎಂದು. ಆದರೆ ಅದು ನೂರಕ್ಕೆ ನೂರರಷ್ಟು ಸತ್ಯವಲ್ಲ. ಯಾವ ವ್ಯಕ್ತಿ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಿರುತ್ತಾರೋ ಅಂತವರ ಭವಿಷ್ಯ ಬೇರೆಯವರಿಗೆ ಅಥವಾ ಸ್ವತಃ ಅವರಿಗೇ ತಿಳಿಯುವುದಿಲ್ಲ ಅದನ್ನು ಕಂಡು ಹಿಡಿಯುವುದು ಅಷ್ಟು ಸುಲಭವೂ ಅಲ್ಲ.

ಅನೇಕರು ಹಣಕ್ಕಾಗಿ ಈ ರೀತಿಯ ಕೆಲಸಗಳನ್ನು ಮಾಡುವರು ಅವರ ಭವಿಷ್ಯ ತಿಳಿದಿರುವ ಕಾರಣದಿಂದಲೇ ಜನರನ್ನು ಮೋಸಗೊಳಿಸಿ ಹಣ ಸಂಪಾದನೆಗೆ ಇಳಿದಿರುತ್ತಾರೆ.

ಇನ್ನು ಕೆಲವರು ಹಣ ಪಡೆಯದೆ ಜನಸೇವೆ ಮಾಡುವವರು ಕಷ್ಟದಲ್ಲಿ ಇರುತ್ತಾರೆ ಕಾರಣ ಅವರಿಂದ ಭವಿಷ್ಯ ಹೇಳಿಸಿಕೊಂಡವರು ಅದಕ್ಕೆ ಬದಲಾಗಿ ಏನನ್ನೂ ನೀಡುವುದಿಲ್ಲ. ಆಗ ಭವಿಷ್ಯ ಕೇಳಿದವರಲ್ಲಿದ್ದ ನಕಾರಾತ್ಮಕ ಶಕ್ತಿ ಭವಿಷ್ಯ ಹೇಳುವವರಿಗೆ ವರ್ಗಾವಣೆಯಾಗುತ್ತದೆ ಅದರಿಂದಾಗಿ ಅವರು ಕಷ್ಟಗಳನ್ನು ಎದುರಿಸುವ ಸಂದರ್ಭ ಒದಗಿ ಬರುತ್ತದೆ. ಆದ ಕಾರಣ ಯಾರೇ ಆಗಲಿ ಸಹಾಯ ಮಾಡಿದಾಗ ಅವರಿಗೆ ಸಣ್ಣ ಪ್ರಮಾಣದಲ್ಲಾದರೂ ಹಣ ನೀಡಬೇಕು ಅಥವಾ ಬೇರೆ ಏನನ್ನಾದರೂ ನೀಡಿದರೆ ಅದರಿಂದ ಅವರಿಗೆ ನಕಾರಾತ್ಮಕ ಶಕ್ತಿ ವರ್ಗಾವಣೆ ಆಗುವುದು ತಪ್ಪುತ್ತದೆ.

ಇಲ್ಲಿ ಎಲ್ಲವೂ ಅವರವರ ನಂಬಿಕೆಗೆ ಬಿಟ್ಟದ್ದು ಹಾಗೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಅವಕಾಶ ದೊರೆಯುವುದು. ಈ ಲೇಖನ ಕೇವಲ ತಿಳುವಳಿಕೆಗಾಗಿ ಮಾತ್ರ.

ಧನ್ಯವಾದಗಳು.
 

Category:Education



ProfileImg

Written by Ashwiini H K 1176

Writer