ಟ್ಯಾಟಿಂಗ್ ಕಲೆ

ಟ್ಯಾಟಿಂಗ್

ProfileImg
09 May '24
3 min read


image

19ನೇ ಶತಮಾನದಲ್ಲಿ ಬೆಸ್ತರು ತಮ್ಮ ಹೆಂಗಸರಿಗಾಗಿ ದಾರದಿಂದ ಬಲೆಯನ್ನು ಅಲಂಕಾರಿಕವಾಗಿ ಹೊಲಿಯುತ್ತಿದ್ದರು. ಇದೇ ಮುಂದೆ ಟ್ಯಾಟಿಂಗ್ ನ ರೂಪವನ್ನು ಪಡೆಯಿತು ಎಂದು ಹೇಳುತ್ತಾರೆ. ಇದು ಯುರೋಪಿಯನ್ ದೇಶಗಳಲ್ಲಿ ಮೊದಲು ಪ್ರಚಿಲಿತ ವಾಯಿತು. ನಂತರ ಅಮೆರಿಕ ಆಸ್ಟ್ರೇಲಿಯಾ ಮತ್ತು ಏಷ್ಯಾ ಖಂಡದಲ್ಲಿಯೂ ಜನರಿಗೆ ಪರಿಚಯವಾಯಿತು. ಈಗ ಈ ಕಲೆಯನ್ನು ಮಾಡುವವರು ಎಲ್ಲಾ ದೇಶದಲ್ಲೂ ಇದ್ದಾರೆ. ಆದರೂ ಇದು ಕ್ರೊಷಾ , ನಿಟ್ಟಿಂಗ್ ಮುಂತಾದ ಕೈ ಕೆಲಸದಷ್ಟು ಪ್ರಸಿದ್ಧಿ ಪಡೆದಿಲ್ಲ. 

ಟ್ಯಾಟಿಂಗ್ ಅನ್ನು ಹತ್ತಿಯ ಅಥವಾ ನೈಲಾನ್ ದಾರದಲ್ಲಿ ಹಾಕುತ್ತಾರೆ. ಇದಕ್ಕೆ ಶಟಲ್ ಎನ್ನುವ ಕಣ್ಣಿನ ಆಕಾರದ ಮರದ ಅಥವಾ ಪ್ಲಾಸ್ಟಿಕ್ ಇಂದ ಮಾಡಿದ ಉಪಕರಣವನ್ನು ಉಪಯೋಗಿಸುತ್ತಾರೆ. ಇದು ಹೊಲಿಗೆ ಯಂತ್ರದ ಬಾಬಿನ್ ನಂತೆ ಎರಡು ಭಾಗಗಳಿದ್ದು ಮಧ್ಯೆ ಒಂದು ಸಣ್ಣ ತುಂಡಿನಿಂದ ಸೇರಿರುತ್ತದೆ. ಶಟಲ್ ನಲ್ಲಿ ದಾರವನ್ನು ಸುತ್ತಿಕೊಂಡು ಅದನ್ನು ಇನ್ನೊಂದು ದಾರದ ಮೇಲೆ ಕೆಳಗೆ ಆಡಿಸುವುದ ರಿಂದ ಟ್ಯಾಟಿಂಗ್ ನ ಹೊಲಿಗೆ ಹಾಕಲಾಗುತ್ತದೆ. ಕಣ್ಣಿನ ಆಕಾರವು ಸುತ್ತಿದ ದಾರದ  ಒಳ ಹೊರಗಿನ ಓಡಾಟಕ್ಕೆ ಪೂರಕವಾಗುತ್ತದೆ. ಈ ಶಟಲ್ ನ ಕೊನೆಗೆ ಒಂದು ಸಣ್ಣ ಕೊಕ್ಕೆ ಇರುತ್ತದೆ. ಇದರ ಸಹಾಯದಿಂದ ದಾರವನ್ನು ಎಳೆದುಕೊಳ್ಳಲು ಸಹಾಯವಾಗುತ್ತದೆ. ಇಲ್ಲದಿದ್ದರೆ ಒಂದು ಕ್ರೋಶಾ ಹುಕ್ ಅನ್ನು ಇದಕ್ಕಾಗಿ ಉಪಯೋಗಿಸುತ್ತಾರೆ.   

ಇನ್ನು ಈ ಟ್ಯಾಟಿಂಗ್ ಹೊಲಿಗೆ  ಗಣಿತದ ಪೈ π ಆಕಾರದಲ್ಲಿ ಇರುತ್ತದೆ . ಕೆಳಗೆ ಎರಡು ದಾರ ಅದನ್ನು ಸೇರಿಸಿದಂತೆ ಮೇಲೆ ಒಂದು ದಾರ. ಇದು ಹಾಕಲು ೨ ಸಲ ಹೊಲೆಯ ಬೇಕು. ಹಾಗಾಗಿ ಒಂದು ವಿನ್ಯಾಸದಲ್ಲಿ ೧೦೦ ಹೊಲಿಗೆ ಇದ್ದರೆ ಅದನ್ನು ಹಾಕಲು ೨೦೦ ಸಲ ಶಟಲ್ ಆನ್ನು ತಿರುಗಿಸಬೇಕು !! ಇದರಲ್ಲಿ ಪ್ರಮುಖವಾಗಿ ಎರಡು ರೀತಿ. ಒಂದು ವೃತ್ತ (ಸರ್ಕಲ್) ಒಂದು ಬಳ್ಳಿ (ಚೇನ್). ಅದೇ ಹೊಲಿಗೆ ಹಾಕಿ ಎಲ್ಲಾ ವಿನ್ಯಾಸಗಳನ್ನು ಮಾಡಲಾಗುತ್ತದೆ. ವೃತ್ತ ಮಾಡಲು ಹಾಕಿದ ಹೊಲಿಗೆಗಳನ್ನು ಹತ್ತಿರಕ್ಕೆ ಎಳೆಯಬೇಕು. ಇದನ್ನು ಮತ್ತೆ ತೆಗೆಯುವುದು ಕಷ್ಟ.  ಬಳ್ಳಿಯಲ್ಲಿ ಹೊಲಿಗೆ ಯು ಹತ್ತಿರಕ್ಕೆ ಸೇರಿದರೂ ಪೂರ್ತಿ ಹತ್ತಿರ ಬರುವುದಿಲ್ಲ. ಇದರ ಒಂದು ವಿಶೇಷವೆಂದರೆ π ಹೊಲಿಗೆಗಳು ದಾರದ ಮೇಲೆ ಪೋಣಿಸಿದ ರೀತಿ ಇರುತ್ತದೆ. ಹಿಂದೆ ಮುಂದೆ ಸರಿಯುತ್ತದೆ. ಈ ರೀತಿ ಸರಿದರೆ ಹೊಲಿಗೆ ಸರಿಯಾಗಿದೆ , ಇಲ್ಲದಿದ್ದರೆ ಸರಿಯಿಲ್ಲ!! ಈ ಹೊಲಿಗೆಯ ಮಧ್ಯೆ ಸಣ್ಣ ಒಂದು ದಾರದ ಕೊಂಡಿಯನ್ನು ಬಿಡಲಾಗುತ್ತದೆ. ಇದಕ್ಕೆ ಪಿಕಾಟ್ ಅಥವಾ ಪೀಕೊ ಎನ್ನುತ್ತಾರೆ. ಇದು ಅಲಂಕಾರಿಕ ವಾಗಿಯೂ ಒಪಯೋಗವಾಗುತ್ತದೆ, ಮತ್ತು ಒಂದು ರಿಂಗ್ ಅನ್ನು ಇನ್ನೊಂದುಕ್ಕೆ ಸೇರಿಸಲು ಸಹ  ಉಪಯೋಗವಾಗುತ್ತದೆ. ವೃತ್ತ ಮತ್ತು ಬಳ್ಳಿಯನ್ನು ಸೇರಿಸಿ ಮಾಡಿದ ಡಿಸೈನ್ 15" ಅಥವಾ ಅದಕ್ಕಿಂತ ದೊಡ್ಡ ಕಲಾಕೃತಿ ಮಾಡುತ್ತಾರೆ. 

 

ಶಟಲ್ ಕೂಡ ಒಂದು ರೀತಿಯ ಕಲೆಯೇ ಆಗಿದೆ. ಇದನ್ನು ಪ್ಲಾಸ್ಟಿಕ್, ಬೆಳ್ಳಿ, ಮರ, ದಂತ, ಅಲ್ಲದೇ ಬೇರೆ ಬೇರೆ ಲೋಹದಿಂದಲೂ ಮಾಡುತ್ತಾರೆ. ಅವುಗಳನ್ನು ಅದರ ಉಪಯೋಗದಂತೆ ಅತಿ ಚಿಕ್ಕಂದರಿಂದ ದೋಡ್ಡದರವರೆಗೆ ಮಾಡುತ್ತಾರೆ. ಶಟಲ್ ಗೆ  ಬಣ್ಣಗಳು, ಕೆತ್ತನೆ, ಡೆಕೊಪೇಜ್ ನ ಅಲಂಕಾರ ಎಲ್ಲಾ ರೀತಿಯೂ ಮಾಡುತ್ತಾರೆ.  ಈಗ ಹೊಸ ಆವಿಷ್ಕಾರ ವಾದ ತ್ರಿಡಿ ಪ್ರಿಂಟಿಂಗ್ ನಲ್ಲಿ ಸಹ ಶಟಲ್ ಮಾಡುತ್ತಾರೆ. ಮೌಲ್ಯದ ಪ್ರಕಾರ ಶಟಲ್ ನ ಬೆಲೆಯೂ ಹೆಚ್ಚಾಗುತ್ತದೆ. 

 

ದಾರಗಳಲ್ಲೂ ವಿವಿಧ ರೀತಿ ಇದೆ. ಅತಿ ಸಣ್ಣ ದಾರದಿಂದ ದಪ್ಪನೆಯ ದಾರದ ತನಕ ವಿನ್ಯಾಸಕ್ಕೆ ತಕ್ಕಂತೆ ದಾರವನ್ನು ಆರಿಸಿಕೊಳ್ಳುತ್ತಾರೆ . ಚಿನ್ನದ ಬಣ್ಣದ ದಾರವನ್ನು ಬೇರೆ ಬಣ್ಣದ ದಾರದ ಜೊತೆ ಸೇರಿಸಿ ಹೊಳೆಯುವ ದಾರ ಮಾಡುತ್ತಾರೆ. ಒಂದೇ ದಾರದಲ್ಲಿ ಬೇರೆ ಬೇರೆ ಬಣ್ಣ ಹಾಕಿದ ಬಣ್ಣ ಬಣ್ಣದ ದಾರ ಕೂಡ ಸಿಗುತ್ತದೆ. ಹೀಗೆ ಒಂದೇ ವಿನ್ಯಾಸ ನನ್ನು ಬೇರೆ ರೀತಿ ಕಾಣುವಂತೆ ಬೇರೆ ಬೇರೆ ದಾರಗಳನ್ನು ಉಪಯೋಗಿಸಿ ಮಾಡಬಹುದು. 

 

ಟ್ಯಾಟಿಂಗ್  ಬಟ್ಟೆಯ ಅಲಂಕಾರಕ್ಕೆ ಉಪಯುಕ್ತ. ಕತ್ತಿನ ಹತ್ತಿರ ಮತ್ತು ಕೈ ಗೆ ಲೇಸ್ ನಂತೆ ಇರುವ ಇದನ್ನು ಇಟ್ಟು ಹೊಲಿದುಕೊಂಡರೆ ಬಟ್ಟೆಯ ಚೆಂದ ದ್ವಿಗುಣ ವಾಗುತ್ತದೆ. ಸೀರೆಯ ಅಂಚಿಗೆ , ಸೆರಗಿಗೂ ಹೊಲಿಯ ಬಹುದು. ಸೆರಗಿನ ಅಂಚಿಗಿಟ್ಟು ಕುಚ್ಚು ಮಾಡಬಹುದು. 

ಅಷ್ಟಲ್ಲದೆ ಮೇಜಿನ ಮೇಲೆ, ಟಿವಿ ಮೇಲೆ ಹಾಕುವ ಬಟ್ಟೆಯ ಅಂಚಿಗೆ ಸೇರಿಸಬಹುದು. ಮೇಜಿನ ಮಧ್ಯ ಭಾಗದಲ್ಲಿ ಇಡುವ 'ಡಾಲಿ' ಗಳನ್ನು ಮಾಡಬಹುದು.

 

ದಾರವು ತುಂಬಾ ಮೆತ್ತಗೆ ಇರುವುದರಿಂದ ಅದನ್ನು ಸ್ಟಾರ್ಚ ಹಾಕಿ ಗಟ್ಟಿಯಾಗಿ ಮಾಡಿ ಸರ , ಬಳೆ,  ಓಲೆ ಎಲ್ಲಾ ಮಾಡಬಹುದು. ಟ್ಯಾಟಿಂಗ್ ದಾರದಲ್ಲಿ ಮಣಿಗಳನ್ನು , ಸೇರಿಸಿದರೆ ಅದು ಬಹಳ ಸುಂದರವಾಗಿ ಕಾಣುತ್ತದೆ. 

ಟ್ಯಾಟಿಂಗ್ ಅನ್ನು ನಮ್ಮ ಕಲ್ಪನೆಗೆ ಬಂದಹಾಗೆ ಯಾವುದಕ್ಕೆ ಬೇಕಾದರೂ ಸೇರಿಸಿ ಅದರ ಅಂದ ಚೆಂದವನ್ನು ಹೆಚ್ಚಿಸಬಹುದು. ನಾನು ಸುಮಾರು ೫ ವರ್ಷ ಗಳಿಂದ ಈ ಕಲೆಯನ್ನು ಮಾಡುತ್ತಿದ್ದೇನೆ. ಯಾರು ಹೇಳಿಕೊಡುವವರಿಲ್ಲ ಎಂದು ಯೋಚಿಸಬೇಕಾಗಿಲ್ಲ ಗೂಗಲ್ , ಯುಟ್ಯೂಬ್ ನಲ್ಲಿ ವಿಡಿಯೋ ನೋಡಿ ಕಲಿಯ ಬಹುದು. ವಾಟ್ಸಾಪ್ ನಲ್ಲಿ ಇದರ ಗುಂಪುಗಳಿವೆ ಸೇರಿ ಕಲಿಯ ಬಹುದು. 

ನಮ್ಮ ದೇಶದ ಕಲೆ ಅಲ್ಲದಿದ್ದರೂ ನಮ್ಮ ಸಂಸ್ಕೃತಿಗೆ ಅಳವಡಿಸಿಕೊಂಡು ಆನಂದಿಸೋಣ !!! 

ನನ್ನ ಟ್ಯಾಟಿಂಗ್ ಫೇಸ್ಬುಕ್ ಪೇಜ್ ನೋಡಲು ಈ ಲಿಂಕ್ ಒತ್ತಿ ಲೈಕ್ ಮಾಡಿ 

https://www.facebook.com/tattingfantacy/

Category:Arts and Crafts



ProfileImg

Written by Ambika Rao

0 Followers

0 Following