Do you have a passion for writing?Join Ayra as a Writertoday and start earning.

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ;ಸಂತಸ ಸಂಭ್ರಮ

“ರಾಮಮಂದಿರ ನಿರ್ಮಾಣಕ್ಕಾಗಿ ಘನಘೋರ ಕದನ”

ProfileImg
21 Jan '24
7 min read


image

-ಎಸ್ . ಮೂರ್ತಿ, ಮಾಜಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ.(ಲೇಖಕರು)

. 22, 2024 ರಂದು ಉತ್ತರ  ಪ್ರದೇಶದ ಅಯೋಧ್ಯ  "ರಾಮ ಮಂದಿರ" ದಲ್ಲಿ ಶ್ರೀ ರಾಮನ ವಿಗ್ರಹಕ್ಕೆ  'ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ' ನಿಗದಿಯಾಗಿದೆ. ದೇಶ ಮತ್ತು ವಿಶ್ವದ ಎಲ್ಲೆಡೆಯ ಹಿಂದುಗಳು ಸಂತೋಷ, ಉಲ್ಲಾಸ, ಸಡಗರ ಸಂಭ್ರಮದಲ್ಲಿರುವುದು ಅತೀವ ಸಂತಸದ ವಿಷಯ.

ತ್ರೆತಾಯುಗದಲ್ಲಿ  'ಕುಶ'  ಆಳ್ವಿಕೆ ಮಾಡುವಾಗ,  ಅಯೋಧ್ಯೆ ಯಲ್ಲಿ "ಶ್ರೀರಾಮ ಮಂದಿರ"  ನಿರ್ಮಾಣ ಮಾಡಿಸಿದ್ದನು. ಯುಗಾಂತರಗಳು ಉರುಳಿ, ಕಲಿಯುಗ ಕಾಲದಲ್ಲಿ ಆ ಭೂಮಿಯನ್ನು ಆಳ್ವಿಕೆ ಮಾಡಿದ,  ಬಹಳಷ್ಟು ಅರಸರು 500 ಅಥವಾ 600 ವರ್ಷಗಳಿಗೊಮ್ಮೆ ಸದರಿ "ರಾಮಮಂದಿರ"ವನ್ನು ಪುನರ್ ನಿರ್ಮಾಣ ಅಥವಾ ನವೀಕರಣ ಮಾಡಿಕೊಂಡು ಉಳಿಸಿಕೊಂಡು ಬಂದಿದ್ದರು. 

ಹೀಗೆ,  ತ್ರೆತಾಯುಗದಿಂದ ಕಲಿಯುಗದವರೆಗೂ ಯುಗ ಯುಗಗಳಿಂದ ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿದ್ದ "ರಾಮ ಮಂದಿರ" -  ಕ್ರಿಸ್ತಶಕ  15ನೇ ಶತಮಾನದಲ್ಲಿ , ಅಫ್ಘಾನ್ ದೇಶದ ಮುಸ್ಲಿಂ /ಮೊಘಲ್ ದೊರೆ, ಬಾಬರ್ ಭಾರತದ ಹಿಂದುಗಳು ಮತ್ತು ಅವರ ದೇವಸ್ಥಾನಗಳ ನಾಶಕ್ಕೆ ದಾಳಿ ಮಾಡಿದ. ಈ ದಾಳಿಯಲ್ಲಿ "ರಾಮಮಂದಿರ"  ಬಾಬರನ ಸೇನಾಧಿಪತಿ ಮೀರ್ ಬಾಕಿ ಮತ್ತು ಸೈನಿಕರು ನಾಶ ಮಾಡಿದರು.  ಕೆಡವಿದ ರಾಮ ಮಂದಿರದ ತಳಪಾಯದ ಮೇಲ್ಭಾಗದಲ್ಲಿ ಸೇನಾಧಿಪತಿ ಮೀರ್ ಬಾಕಿ, ಮಸೀದಿ ಗುಂಬಜ್ ನಿರ್ಮಾಣ ಮಾಡಿ,  "ಬಾಬರ್ ಮಸೀದಿ" ಎಂದು ನಾಮಕರಣ ಮಾಡಿದ. 

ಈ ಕಲಿಯುಗದ ಮುಂದಿನ ಶತಮಾನ/ದಶಕಗಳಲ್ಲಿ , ದೇಶದ ಸಾಧು ಸಂತರು, ರಾಮನ ಪೂಜೆಗಾಗಿ ಮೊಗಲ್ ದೊರೆಗಳ ವಿರುದ್ಧ ಧ್ವನಿ ಎತ್ತಿ 76 ಬಾರಿ ಪ್ರತಿಭಟಿಸಿದರು. ಇದ್ಯಾವುದಕ್ಕೂ ಮೊಗಲ್ ದೊರೆಗಳು ಬಗ್ಗಲಿಲ್ಲ. ಮುಂದೆ 18 ಮತ್ತು 19ನೇ ಶತಮಾನದಲ್ಲಿ ಭಾರತವನ್ನು ಆಳ್ವಿಕೆ ಮಾಡಿದ ಬ್ರಿಟಿಷರು ಕೂಡ ದೇವಸ್ಥಾನ ಮಸೀದಿ, ಇತ್ಯಾದಿಗಳ ಬಗ್ಗೆ ವಿರೋಧ ಅಥವಾ ಪರ ವಹಿಸಲಿಲ್ಲ . ಹೀಗಾಗಿ ಶ್ರೀರಾಮ ಮಂದಿರದ ತಳಪಾಯದ ಮೇಲ್ಭಾಗದಲ್ಲಿ ನಿರ್ಮಾಣ ಮಾಡಿದ್ದ  ಕಾಲದಿಂದ, "ಬಾಬರಿ ಮಸೀದಿ" ಹಾಗೆಯೇ ಅಸ್ತಿತ್ವದಲ್ಲಿತ್ತು. ಈ  ಮಸೀದಿಯನ್ನು ಗತಕಾಲದಿಂದ ಮುಸ್ಲಿಂರು ಪ್ರಾರ್ಥನೆ ಮಾಡಲು, ಬಳಕೆ ಮಾಡಿಕೊಳ್ಳುತ್ತಿದ್ದರು.  

1947ರಲ್ಲಿ , ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಆಗ ಕೂಡ ಮುಸ್ಲಿಂ ಹಿಡಿತದಲ್ಲಿದ್ದ "ಬಾಬರಿ ಮಸೀದಿ" ಹಿಂದುಗಳ ಕೈಗೆ ಬರಲಿಲ್ಲ.  ಆದಾಗಿಯೂ ದಿನಾಂಕ 22-12-1949ರಂದು ಹಿಂದುಗಳು, ಸದರಿ "ಬಾಬರಿ ಮಸೀದಿ" ಒಳ ಪ್ರವೇಶ ಮಾಡಿ, ಶ್ರೀರಾಮನ ಮೂರ್ತಿ ಇಟ್ಟು  ಪೂಜೆ ಮಾಡಿದರು. 

1983ರಲ್ಲಿ ಉತ್ತರಪ್ರದೇಶದ ಮುಜಾಪುರ್  ನಗರದಲ್ಲಿ 'ಹಿಂದುಗಳ ಸಮ್ಮೇಳನ'   ಏರ್ಪಾಡಾಗಿತ್ತು. ಈ ಸಮ್ಮೇಳನದಲ್ಲಿ , ಭಾಗವಹಿಸಿದ್ದ ಕಾಂಗ್ರೆಸ್ ಪಕ್ಷದ ನಾಯಕ ವಿಷ್ಣು ಹರಿ ದಾಲ್ಮಿಯ ಇವರು ರಾಮಜನ್ಮಭೂಮಿ ಮತ್ತು ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಪ್ರಸ್ತಾವಿಸಿ, ಈ ಜವಾಬ್ದಾರಿಗಳನ್ನು ವಿಶ್ವ ಹಿಂದೂ ಪರಿಷತ್ (VHP) ದೇಶದಲ್ಲಿ ವಹಿಸಿಕೊಳ್ಳ ಬೇಕೆಂದು ಮನವಿ ಮಾಡಿದರು. ಈ ಪ್ರಸ್ತಾವವನ್ನು ಸಭೆ ಸರ್ವಾನುಮತದಿಂದ ಒಪ್ಪಿತು . ಇದನ್ನು ವಿಶ್ವ  ಹಿಂದು  ಪರಿಷತ್ (VHP)ಸ್ವೀಕಾರ ಮಾಡಿತು. 

ಮೊದಲ ಹಂತವಾಗಿ, ಸಾಧು ಸಂತರು, ಹಿರಿಯರು, ಭಕ್ತರನ್ನು ಒಟ್ಟುಗೂಡಿಸಿ 'ರಾಮ ಜಾನಕಿ  ಯಾತ್ರೆ' ಯನ್ನು ಅಯೋಧ್ಯ ನಗರದ ಸುತ್ತ VHP  ನಡೆಸಿತು. ಇದಕ್ಕೆ ಸ್ಥಳೀಯ ಮುಸ್ಲಿಮರು  ಪ್ರಾರಂಭದಲ್ಲಿ ವಿರೋಧ ಮಾಡಿದರು. ಆಗ VHP ಮುಖ್ಯಸ್ಥರಾಗಿದ್ದ ಅಶೋಕ್ ಸಿಂಗಲ್  ದೇಶದ ಯುವಕರಿಗೆ ಕರೆ ನೀಡಿ, ಯುವಕರನ್ನು ಒಳಗೊಂಡ "ಬಜರಂಗದಳ" ಸ್ಥಾಪನೆ ಮಾಡಿಸಿದರು. ಈ ತರುವಾಯ, ಬಜರಂಗದಳದ ಯುವಕರು ಕೈಯಲ್ಲಿ ದಂಡ (ದೊಣ್ಣೆ) ಹಿಡಿದು VHP ಉತ್ತರ ಪ್ರದೇಶದ  ಉದ್ದಕ್ಕೂ  ಏರ್ಪಡಿಸುತ್ತಿದ್ದ 'ರಾಮ ಜಾನಕಿ ಯಾತ್ರೆ'ಗಳಲ್ಲಿ ಪಾಲ್ಗೊಂಡರು. (ಯುವಕರ ಕೈಯಲ್ಲಿ ದೊಣ್ಣೆ ಇರುವುದನ್ನು ಗಮನಿಸಿದ ಮುಸ್ಲಿಂರು ಬೆದರಿ, ಹಿಂದೂ- ಮುಸ್ಲಿಂ ಸಂಘರ್ಷ ಉಂಟಾಗಬಹುದು ಎಂದು ಈ ಯಾತ್ರೆಯನ್ನು ಜಾಸ್ತಿ ವಿರೋಧಿಸಲಿಲ್ಲ) 

VHP ಪ್ರಾರಂಭಿಸಿದ ರಾಮಜನ್ಮಭೂಮಿಯಲ್ಲಿ , ರಾಮನ ದೇವಸ್ಥಾನ ನಿರ್ಮಾಣ ಆಗಲೇಬೇಕೆಂದು "ಜನಜಾಗೃತಿ" ಉತ್ತರ ಪ್ರದೇಶದ ತುಂಬಾ ವ್ಯಾಪಿಸಿ,  ಅದು ದೇಶದ ಇತರಡೆ  ಹಬ್ಬಲು ಪ್ರಾರಂಭಿಸಿತು. ಹೀಗೆ ಮುಂದುವರೆದು

1985ರಲ್ಲಿ VHPಯ "ಜನಜಾಗೃತಿ" ಪ್ರಕಾರಗಳು ಹಲವು  ರೂಪ ತಾಳಿದವು. ಗಂಗಾಜಲವನ್ನು ದೇಶದ ಉದ್ದ ಆಗಲಕ್ಕೂ ಕೊಂಡೊಯ್ಯಲಾಯಿತು; ಹಿಂದುಗಳ ಮೇಲೆ ಅವರ ವಾಸದ ಸ್ಥಳಗಳಲ್ಲಿ ಸಿಂಪಡಿಸಲಾಯಿತು;  ದೇಶದ ಉದ್ದಗಲಕ್ಕೂ ಏಕಾತ್ಮಕ ರಥಯಾತ್ರೆಗಳು  ಏರ್ಪಾಡಾದವು; ಉಡುಪಿಯ ಪೇಜಾವರ ಮಠ 'ಧರ್ಮ ಸಂಸದ' ಏರ್ಪಡಿಸಿ, ಒಂದು ನಿರ್ಣಯವನ್ನು ಮಾಡಿತು. ಉತ್ತರ ಪ್ರದೇಶ್ ಸರ್ಕಾರ, ಬಾಬರಿ ಮಸೀದಿಗೆ ಹಾಕಿರುವ ಬೀಗವನ್ನು  6-12-1985 ತಾರೀಕಿನ ಒಳಗೆ ತೆರೆದು ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ, ದೇಶಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕರೆ ನೀಡಿತು. ಇಲ್ಲಿಂದ ಪೇಜಾವರ ಮಠ ಕೂಡ  VHP ಜೊತೆ ಬಹಿರಂಗವಾಗಿ ಕೈಜೋಡಿಸಿತು.

ದೇಶದ ಉದ್ದಗಲಕ್ಕೂ ಇರುವ ಹಿಂದೂ ದೇವಸ್ಥಾನಗಳು, ಮಠಗಳು, ಸ್ವಾಮೀಜಿಗಳು, ಸಾಧು ಸಂತರು, ಭಕ್ತರು.... ಹೀಗೆ ಹತ್ತು ಹಲವು  ನಾಯಕರು / ನಾಗರಿಕರನ್ನು VHP ಸಂಘಟಿಸಿತು,  ಒತ್ತಡ ನಿರ್ಮಾಣ ಮಾಡಿತು. 

ಕೇಂದ್ರದಲ್ಲಿದ್ದ ಶ್ರೀ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ 3-12-1985 ತಾರೀಕಿನಂದೆ ಬಾಬರ್ ಮಸೀದಿಯ ಬೀಗ ತೆಗೆದು, ಹಿಂದುಗಳಿಗೆ ಒಳ ಪ್ರವೇಶ ಮಾಡಲು ಮತ್ತು ಶ್ರೀರಾಮನ ಪ್ರತಿಮೆ ಇಟ್ಟು  ಪೂಜೆ ಮಾಡಲು ಅವಕಾಶ ನೀಡಿತು. 

ಶ್ರೀ ರಾಜೀವ್ ಗಾಂಧಿ ನೀಡಿದ ಈ ಅವಕಾಶಗಳಿಂದ ಪ್ರೇರೇಪಿತರಾದ  VHP ಮತ್ತು  ಹಿಂದೂ ಸಂಘಟನೆಗಳು, ತಮ್ಮ ಮುಂದಿನ ಹೋರಾಟಗಳ ಬಗೆಗಳನ್ನು ಮತ್ತಷ್ಟು ಪರಿಣಾಮಕಾರಿ ಗೊಳಿಸಿದರು. ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ "ರಾಮ ಮಂದಿರ" ನಿರ್ಮಾಣ ಆಗಲೇಬೇಕೆಂದು ದೇಶದಾದ್ಯಂತ ಹಿಂದುಗಳಲ್ಲಿ ಜಾಗೃತಿ ಹೆಚ್ಚು ಮಾಡಿದರು.

1988 - 1989 ಈ ಎರಡು ವರ್ಷಗಳಲ್ಲಿ , ದೇಶದ ಪ್ರತಿ ಗ್ರಾಮ ಗ್ರಾಮಗಳ  ಪ್ರತಿಯೊಬ್ಬ ಹಿಂದುಗಳು, ಒಂದೊಂದು ಇಟ್ಟಿಗೆಯನ್ನು ರಾಮಮಂದಿರ ನಿರ್ಮಾಣ ಮಾಡಲು ಆಯೋಧ್ಯೆಗೆ ಕಳುಹಿಸಿಕೊಡಬೇಕು ; ಸಾಧು ಸಂತರು, ಸ್ವಾಮೀಜಿಗಳು, ದೇವಸ್ಥಾನಗಳ ಮತ್ತು ಮಠಗಳ ಮಾನ್ಯರುಗಳು, ಎಲ್ಲಾ ಹಿಂದುಗಳು,  ಶ್ರೀರಾಮ ಭಕ್ತರು ರಾಮ ಮಂದಿರ ನಿರ್ಮಾಣಕ್ಕಾಗಿ ಜನಜಾಗೃತಿ ಹೆಚ್ಚಳ ಮಾಡಬೇಕೆಂದು   VHPಕರೆ ನೀಡಿತು.ಈ ಕರೆಗೆ ಬೆಂಬಲಿಸಿ, ಕರ್ನಾಟಕದಲ್ಲಿ ,  ಮಾರಿಕಾಂಬ ರಥ, ಬಾಲಗಂಗಾಧರನಾಥ ಸ್ವಾಮಿ ರಥ, ಬಸವೇಶ್ವರ ರಥ, ಮತ್ತೊಂದು ಉಳುವಿಯಿಂದ ಚನ್ನಬಸವೇಶ್ವರ ರಥ... ಹೀಗೆ ಕರ್ನಾಟಕದಿಂದ ಎಂಟು ರಥಗಳು ಹೊರಟವು. ದೇಶದ ಲಕ್ಷಾಂತರ ಜನ ತಂಡ  ತಂಡವಾಗಿ ಉತ್ತರ ಪ್ರದೇಶದ ಅಯೋಧ್ಯ  ತಲುಪಿದರು. ಬಾಬ್ರಿ ಮಸೀದಿಯ ಮುಂದೆ ದಿನಾಂಕ 9-11-1989 ರಂದು "ರಾಮ ಮಂದಿರ" ನಿರ್ಮಾಣದ ಸಲುವಾಗಿ, ಭೂಮಿ ಪೂಜೆ ಏರ್ಪಡಿಸಿ, ಬಿಹಾರದ ಹರಿಜನ ಜಾತಿಯ ಕಾಮೇಶ್ವರ ಚೌಪಾಲ್  (ಪ್ರಸ್ತುತ ರಾಮಮಂದಿರದ ಒಬ್ಬ ಟ್ರಸ್ಟಿ) ಮೊದಲನೇ ಇಟ್ಟಿಗೆಯನ್ನು ಇಡಿಸಿ ಕಟ್ಟೆ ಕಟ್ಟಿ , ಭೂಮಿ ಪೂಜೆ ನೆರವೇರಿಸಲಾಯಿತು. (ಈ ವೇಳೆ , ಕೇಂದ್ರದಲ್ಲಿ ರಾಜೀವ್ ಗಾಂಧಿ ಅವರ ಸರ್ಕಾರ ಆಡಳಿತದಲ್ಲಿತ್ತು. ದೇಶದ ಮೂಲೆ ಮೂಲೆಗಳಿಂದ ಕರಸೇವಕರು ಅಯೋಧ್ಯೆಗೆ ಆಗಮಿಸಲು ಮತ್ತು  ಈ ಭೂಮಿ ಪೂಜೆ ಮಾಡಲು ಅವಕಾಶ ಕೊಟ್ಟರು)

(1990ರ ದಶಕ) ಮೇಲಿನ ಫಲದಿಂದ ಮತ್ತಷ್ಟು ಪ್ರೇರೇಪಿತರಾದ VHP ಮತ್ತು ಶ್ರೀರಾಮ ಭಕ್ತರು , ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮತ್ತಷ್ಟು ಜನಜಾಗೃತಿಗೆ ಮುಂದಾದರು. ದೇಶದ ಮೂಲೆ ಮೂಲೆಗಳಲ್ಲಿನ ಹಿಂದುಗಳು ಕರಸೇವಕರ ರೂಪದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಗೆ ಬನ್ನಿ ಎಂದು ಕರೆ ನೀಡಿದರು. ದೇಶದ ಎಲ್ಲೆಡೆ ಹಿಂದುಗಳು,  ಉತ್ತರ ಪ್ರದೇಶದ ಅಯೋಧ್ಯೆಯತ್ತ  ತಂಡ ತಂಡವಾಗಿ ಪಯಣ  ಬೆಳೆಸಿದರು.  ಈ ವೇಳೆಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷತೆಯನ್ನು ಎಲ್ ಕೆ ಅಡ್ವಾಣಿ ಅವರಿಗೆ ವಹಿಸಲಾಯಿತು. ಇವರು ಕೂಡ ಅಯೋಧ್ಯೆಯಲ್ಲಿ "ರಾಮಮಂದಿರ" ನಿರ್ಮಾಣ ಆಗಬೇಕೆಂದು ದಿನಾಂಕ 25-9-1990ರಂದು ರಥ  ಯಾತ್ರೆಯನ್ನು ದೇಶದಲ್ಲಿ ಹಮ್ಮಿಕೊಂಡರು. ಈ ಯಾತ್ರೆಗೆ ಬಾರಿ ಜನ ಬೆಂಬಲ ದೊರೆಯಿತು. ಹೀಗೆ ರಥಯಾತ್ರೆ, ಹತ್ತು ಹಲವು ತಂಡ ತಂಡ ಬ್ಯಾಚ್ ಗಳಲ್ಲಿ ,  ಹಿಂದುಗಳು ಅಯೋಧ್ಯೆ ಕಡೆ ಧಾಪುಗಲು ಹಾಕಿದರು. ಈ ವೇಳೆ ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್ ಅವರ ನೇತೃತ್ವದ ಸರ್ಕಾರ ಆಡಳಿತದಲ್ಲಿತ್ತು. ದೇಶದ ಮೂಲೆ ಮೂಲೆಗಳಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಆಗಮಿಸುತ್ತಿದ್ದ  ಕರಸೇವಕರನ್ನು ತಡೆಯಲು ಮುಲಯಿಂ ಸಿಂಗ್ ಯಾದವ್ ಪ್ರಯತ್ನಿಸಿದರು. ಸಿಕ್ಕ ಸಿಕ್ಕ  ಕರಸೇವಕರನ್ನು ಬಂಧನ ಮಾಡಿದರು.  ಉತ್ತರ ಪ್ರದೇಶದ ಕಾರಾಗೃಹಗಳು ಭರ್ತಿಯಾದವು. ಶಾಲಾ ಕಾಲೇಜುಗಳ ಕಟ್ಟಡಗಳನ್ನು  ಬಂದಿಖಾನೆಗಳನ್ನಾಗಿ ಪರಿವರ್ತಿಸಿಕೊಂಡು, ಅಲ್ಲಿ ಕೂಡ ಕರಸೇವಕರನ್ನು ಕೂಡಿ ಹಾಕಿದರು.  ಈ ಬಂಧನಗಳನ್ನು ಲೆಕ್ಕಿಸದೆ  ಕರಸೇವಕರು  ದೇಶದ ಮೂಲೆ ಮೂಲೆಗಳಿಂದ ಅಯೋಧ್ಯೆಗೆ ತಂಡ  ತಂಡ ರೂಪದಲ್ಲಿ ಬರುತ್ತಲೇ ಇದ್ದರು. ಹೀಗೆ ಅಯೋಧ್ಯೆ ತಲುಪಿದ ಲಕ್ಷಾಂತರ ಕರಸೇವಕರು ದಿನಾಂಕ 30-10-1990 ಮತ್ತು 1-11-1990ಗಳಂದು  ಬಾಬರಿ ಮಸೀದಿಯ ಗುಂಬಜ್ ಗಳ ಮೇಲೆ ಹತ್ತಿ,  VHPಯ ಭಗದ್ವಜ ಆರೋಹಣ ಮಾಡಿದರು. ಮುಲಾಯಂ ಸಿಂಗ್ ಯಾದವ್ ಸರ್ಕಾರ ಕರಸೇವಕರ ವಿರುದ್ಧ ಲಾಠಿ, ಅಸ್ರುವಾಯಿ , ಗೋಲಿಬಾರ್ ನಡೆಸಿತು. ಈ ಘಟನೆ ಮತ್ತು ಜನರ ಕಾಲ್ತುಳಿತ, ಈ ಕಾರಣಗಳಿಂದ ನೂರಾರು ಜನ ಮೃತಪಟ್ಟರು. ಬಿದ್ದಿರುವ ಹೆಣಗಳನ್ನು ಗುರುತಿಸಲಾಗದೆ, ಅನಾಥವಾಗಿ ಉಳಿದ ಹೆಣಗಳನ್ನು  ಗಂಗಾನದಿಗೆ ಹಾಕಲಾಯಿತು. ಈ ಗೋಲಿಬಾರ್ ಮತ್ತು ಸಾವು ನೋವುಗಳಿಂದ ಭಾರತ ದೇಶದಲ್ಲಿ ಹಿಂದುಗಳು ದುಖಿತರಾದರು ಮತ್ತಷ್ಟು  ಕ್ರೋಧರಾದರು.  

ಈ ಕ್ರೋಧ, ಅಶಾಂತಿಯ ಪ್ರಭಾವಳಿಯಿಂದ 1991 ವೇಳೆಯಲ್ಲಿ ,  ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ್ ಈ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ದೇಶದ ಎಲ್ಲೆಡೆ ಅಯೋಧ್ಯೆಯಲ್ಲಿ "ರಾಮಮಂದಿರ" ನಿರ್ಮಾಣ ಮಾಡಲೇಬೇಕೆಂಬ, ಹಿಂದುಗಳ / ಕರಸೇವಕರ  ಹೋರಾಟ ಮತ್ತಷ್ಟು ಮತ್ತಷ್ಟು ಹೆಚ್ಚಳಗೊಳ್ಳತೊಡಗಿತು. ಹಿಂದೆ ಆದ ಸಾವು ನೋವುಗಳಿಗೆ ಹೆದರದೆ,  ಉತ್ತರ ಪ್ರದೇಶದ ಅಯೋಧ್ಯ ಕಡೆ ದೇಶದ ಮೂಲೆ ಮೂಲೆಗಳಿಂದ ಶ್ರೀರಾಮ ಭಕ್ತರು, ಕರಸೇವಕರು ಮುತ್ತಿಗೆ ಹಾಕುವ ರೂಪದಲ್ಲಿ ಸಮರೂಪಾದಿಯಲ್ಲಿ ಅಯೋಧ್ಯೆ ಕಡೆ ಆಗಮಿಸುತ್ತಿದ್ದರು.

ಹೀಗೆ,  ದಿನಾಂಕ 6-12-1992 ರಂದು ದೇಶದ ಮೂಲೆ ಮೂಲೆಯಿಂದ ಅಯೋಧ್ಯೆ ತಲುಪಿದ ಲಕ್ಷಾಂತರ ಹಿಂದುಗಳು / ಕರಸೆವಕರು,  ಬಾಬರಿ ಮಸೀದಿಯ ಕಟ್ಟಡ ಪ್ರವೇಶಿಸಿ, ಗುಂಬಜ್ ಗಳ ಮೇಲೆ ಹತ್ತಿ,  ಗುಂಬಜ್ ಮತ್ತು ಕಟ್ಟಡವನ್ನು ಕೆಡುವಲು ಪ್ರಾರಂಭಿಸಿದರು. ಒಂದನೇ ಗುಂಬಜ್, ಎರಡನೇ ಗುಂಬಜ್ ನಂತರ ಮೂರನೇ ಗುಂಬಜ್  ಹೀಗೆ ಒಂದೊಂದೇ ಗುಂಬಜ್ ಗಳು ನೆಲಕ್ಕೆ ಉರುಳಿದವು.  ಬಾಬರಿ ಮಸೀದಿ ಕಟ್ಟಡ ಚುರು ಚುರಾಗಿ, ಪುಡಿ ಪುಡಿಯಾಯಿತು. ದೇಶದ ಟಿವಿ ಮಾಧ್ಯಮಗಳು ಲೈವ್ ಟೆಲಿಕಾಸ್ಟ್ ಮಾಡಿದವು. ದೇಶವೇ ಬೆಂಕಿಗೆ ಆಹುತಿ ಆಗಿದೆ ಎನ್ನುವ ಮಟ್ಟದಲ್ಲಿ ಪ್ರಚಾರವನ್ನು ಸುದ್ದಿ ಮಾಧ್ಯಮಗಳು ಮಾಡಿದವು. ಬಾಬರಿ ಮಸೀದಿ ಕೆಡವಿದ ಸುದ್ದಿ , ವಿಶ್ವದ ಸುದ್ದಿಯಾಗಿದ್ದರು,  ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್  ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿ ಪಿ.ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರಗಳು  ಮೌನವಹಿಸಿದ್ದವು.  ಸಂಜೆಗೆ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಬಾಬರಿ ಮಸೀದಿ ಕೆಡವಿದ ಕರಸೇವಕರು, ಹಿಂದುಗಳು ನಾಗರಿಕರು ಹರ್ಷೋದ್ಗಾರಗಳಿಂದ, ಆ ಸ್ಥಳದಿಂದ ಅವರವರ ಊರುಗಳಿಗೆ ತೆರಳಲು ಪ್ರಾರಂಭಿಸಿದರು.  ತ್ರೆತಾಯುಗದ "ರಾಮ ಮಂದಿರ" ತರುವಾಯ ಕಲಿಯುಗದ "ಬಾಬರಿ ಮಸೀದಿ"  ನೆಲಸಮಗೊಂಡು, ಕಟ್ಟಡಗಳ ಚೂರುಗಳ ರಾಶಿಯಾಗಿತ್ತು .

VHP ಮತ್ತು ದೇಶದ ಹಿಂದು ಗಳು, ಶ್ರೀರಾಮ ಭಕ್ತರ  ಹೋರಾಟಗಳು ಇಲ್ಲಿಗೆ ಮುಕ್ತಾಯವಾದವು.  

ಇಲ್ಲಿಂದ ಮುಂದೆ, ಹಿಂದು ಮತ್ತು ಮುಸ್ಲಿಂ ಇವರ ಕಾನೂನು ಹೋರಾಟಗಳು ಪ್ರಾರಂಭಗೊಂಡವು. 2010ರಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟಿನ ಪೀಠ ತೀರ್ಪು ಪ್ರಕಟಿಸಿ, ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ವಿಂಗಡಿಸಿ, ಒಂದನ್ನು ನಿರ್ಮೂಹಿ ಅಕಾಡ, ಮತ್ತೊಂದು ಬಾಬರಿ ಕಮಿಟಿ, ಮತ್ತೊಂದು ಶ್ರೀರಾಮ ನ್ಯಾಸ ಇವುಗಳಿಗೆ ಹಂಚಿಕೆ ಮಾಡಿತು. ಈ ತೀರ್ಪಿನಿಂದ ಬೇಸತ್ತ ಹಿಂದು ಮತ್ತು ಮುಸ್ಲಿಂ ಇಬ್ಬರು ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಶ್ನೆ ಮಾಡಿದರು. ಕುರುಡು ಸಂತ ಶ್ರೀರಾಮಭದ್ರಾಚಾರ್ಯ (ಕಣ್ಣಿಲ್ಲದ ವ್ಯಕ್ತಿ) ಸುಮಾರು 441 ಸಾಕ್ಷಿಗಳನ್ನು ಕರೆತಂದು ಜೊತೆಗೆ , ವೇದ ಉಪನಿಷತ್ತುಗಳ ಉಲ್ಲೇಖ, ಇನ್ನಿತರೆ ಸಾಕ್ಷಾಗಳನ್ನು ಒದಗಿಸಿ, ಶ್ರೀರಾಮ ಮತ್ತು ಶ್ರೀರಾಮ ಮಂದಿರದ ಇರುವಿಕೆ ಬಗ್ಗೆ ನ್ಯಾಯಾಲಯಕ್ಕೆ ಖಾತ್ರಿಪಡಿಸಿದರು. ನ್ಯಾಯಮೂರ್ತಿ ಗೋಗಾಯ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ದಿನಾಂಕ 9-11-2019 ರಂದು ತೀರ್ಪು ಪ್ರಕಟಿಸಿ - "ಸದರಿ ವಿವಾದಿತ ಸ್ಥಳ ಹಿಂದುಗಳ ಪವಿತ್ರ ಸ್ಥಳ. ಅಲ್ಲಿ ರಾಮ ಮಂದಿರ ಇತ್ತು ಎನ್ನುವುದು ಖಾತ್ರಿಯಾಗಿದೆ.  ಯಾವುದೇ ಸಂಸ್ಥೆ / ಟ್ರಸ್ಟ್ ಗಳಿಗೆ ಈ ಭೂಮಿಯನ್ನು ನ್ಯಾಯಾಲಯ ವಹಿಸುವುದಿಲ್ಲ.  ಸರ್ಕಾರವೇ ಒಂದು ಟ್ರಸ್ಟ್ ಮಾಡಿ, ಆ ಸ್ಥಳದಲ್ಲಿ  ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಮುಸ್ಲಿಂ ನವರಿಗೆ ಅಯೋಧ್ಯೆ ನಗರದಲ್ಲಿ  ಬೇರೆಡೆ ಐದು ಎಕರೆ ಭೂಮಿ ನೀಡಬೇಕು" ಎಂದು ತೀರ್ಪು ನೀಡಿತು. 

ನ್ಯಾಯಾಲಯದ ತೀರ್ಪಿನ ತರುವ, ಹಾಲಿ ಮೋದಿ ನೇತೃತ್ವದ ಭಾರತ ಸರ್ಕಾರ,  

" ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ " ಸ್ಥಾಪನೆ ಮಾಡಿತು ಮತ್ತು ದಿನಾಂಕ 5-8-2020ರಂದು  ಅಯೋಧ್ಯೆಯ ಉದ್ದೇಶಿತ ಸ್ಥಳದಲ್ಲಿ, ರಾಮ ಮಂದಿರ ನಿರ್ಮಾಣಕ್ಕೆ 'ಭೂಮಿ ಪೂಜೆ' ಯನ್ನು  ನೆರವೇರಿಸಿತು. ಕಳೆದ ಮೂರು ವರ್ಷಗಳಿಂದ  ನಿರ್ಮಾಣ ಕಾಮಗಾರಿಗಳು ನಡೆದು ಈಗ ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ "ರಾಮಮಂದಿರ" ನಿರ್ಮಾಣಗೊಂಡಿದೆ. ರಾಮ ಮಂದಿರವು ಪೂರ್ವ-ಪಶ್ಚಿಮ ದಿಕ್ಕಿಗೆ 380 ಅಡಿ ಉದ್ದ; ಉತ್ತರ-ದಕ್ಷಿಣ ದಿಕ್ಕಿಗೆ 380 ಅಡಿ ಅಗಲ; 161 ಅಡಿ ಎತ್ತರ; 392 ಕಂಬಗಳು ಮತ್ತು 44 ದ್ವಾರಗಳನ್ನು ಒಳಗೊಂಡಿದೆ. ದಿನಾಂಕ 22-1-2024ರಂದು "ಶ್ರೀ ರಾಮ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ" ವನ್ನು ದೇಶದ ಪ್ರಧಾನಿ ಮೋದಿ ನೇತೃತ್ವದಲ್ಲಿ ಸದರಿ ಟ್ರಸ್ಟ್ ಏರ್ಪಡು ಮಾಡಿದೆ.  

ದೇಶ ಮತ್ತು ವಿಶ್ವದ ಹಿಂದುಗಳ ಸಂತಸ ಆಕಾಶ ಮುಟ್ಟಿದೆ.   ಈ ಸಂತಸದ ಹಿಂದೆ VHP,  ದೇಶದ ಹಿಂದುಗಳ, ಶ್ರೀರಾಮ ಭಕ್ತರ, ಮಠ ಮಾನ್ಯರ, ಶ್ರಮ ತ್ಯಾಗ ಬಲಿದಾನ ಇದೆ. ಈ  ಘನಘೋರ ಕದನದಲ್ಲಿ ನೂರಾರು ಶ್ರೀರಾಮ ಭಕ್ತರು ಸಾವನ್ನಪ್ಪಿದ್ದಾರೆ.  ಸಾವನ್ನಪ್ಪಿದ ಆ ವೀರರ ಆತ್ಮಗಳಿಗೆ ಈಗಲಾದರೂ ಶಾಂತಿ ಸಿಗಲಿ.

 

Category : History


ProfileImg

Written by Balappa m kuppi