ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಿಸುವುದು ಸಾಮಾನ್ಯ. ಆದರೆ ನೆದರ್‌ಲ್ಯಾಂಡ್‌ನಲ್ಲಿ ವಿಶೇಷವಾದ ಬಸ್ ನಿಲ್ದಾಣಗಳು ಜೇನುನೊಣಗಳಿಗಾಗಿ ನಿರ್ಮಿಸಲ್ಪಟ್ಟಿವೆ!
ಪರಿಸರ ಮಾಲಿನ್ಯದಿಂದ ಜೇನುನೊಣಗಳ ಸಂತತಿ ಕ್ಷೀಣಿಸುತ್ತಿದೆ ಎನ್ನುವ ಕೂಗಿನ ನಡುವೆಯೇ ದೂರದ ನೆದರ್‌ಲ್ಯಾಂಡ್‌ನಲ್ಲಿ ಅಲ್ಲಿನ ಸರಕಾರ ಜೇನುನೊಣಗಳಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣಗಳನ್ನು ಜೇನುನೊಣ ಸ್ನೇಹಿಯಾಗಿ ಪರಿವರ್ತಿಸಿದೆ.
ನೆದರ್‌ಲ್ಯಾಂಡ್‌ನಲ್ಲಿ 358 ಪ್ರಬೇಧದ ಜೇನುನೊಣಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ ಇವುಗಳ ಪೈಕಿ 50 ಶೇಕಡಾಕ್ಕೂ ಹೆಚ್ಚು ಪ್ರಬೇಧಗಳು ವಿನಾಶದ ಅಂಚಿಗೆ ಸಿಲುಕಿದ್ದು ಅವುಗಳನ್ನು ಡಚ್ ರೆಡ್ ಲೀಸ್ಟ್ಗೆ ಸೇರ್ಪಡೆಗೊಳಿಸಲಾಗಿದೆ. ಜೇನುನೊಣಗಳ ಸಂತತಿ ನಶಿಸುವ ಹಾದಿಯೆಡೆಗೆ ಸಾಗುತ್ತಿರುವುದನ್ನು ಗಂಭೀರವಾಗಿ ಪರಿಣಮಿಸಿದ ಅಲ್ಲಿನ ಸರಕಾರ ನಾಲ್ಕನೇ ದೊಡ್ಡ ನಗರವಾಗಿರುವ ಉರ್ಟೆಚ್‌ನಲ್ಲಿ 316 ಬಸ್ ನಿಲ್ದಾಣಗಳ ಮೇಲೆ ಜೇನುನೊಣಗಳಿಗೆ ಅನುಕೂಲಕರ ಮೇಲ್ಛಾವಣಿಯನ್ನು ನಿರ್ಮಿಸಿದೆ.
ಈ ಮೇಲ್ಛಾವಣಿಯಲ್ಲಿ ಜೇನುನೊಣಗಳಿಗೆ ಅನುಕೂಲಕರವಾದ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಇದು ಜೇನುನೊಣಗಳಿಗೆ ಮಕರಂದ ಒದಗಿಸುವ ಜೊತೆಗೆ ಧೂಳಿನ ಕಣವನ್ನು ತಡೆದು ವಾಯು ಮಾಲಿನ್ಯವನ್ನು ತಡೆಯುತ್ತಿದೆ. ಈ ಛಾವಣಿ ಮಳೆ ನೀರು ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಿದೆ.
ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಈ ಜೇನುನೊಣ ಸ್ನೇಹಿ ಹಸಿರು ಛಾವಣಿಯ ಮೇಲ್ವಿಚಾರಣೆಗೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಹಸಿರು ಹೊದಿಕೆಯ ಈ ಮೇಲ್ಛಾವಣಿ ಈಗ ಜೀವ ವೈವಿಧ್ಯತೆಯ ತಾಣವಾಗಿ ಬದಲಾಗಿದೆ. ಜೇನು ನೊಣಗಳ ಜೊತೆಗೆ ಚಿಟ್ಟೆ, ಕೀಟಗಳು ಇಲ್ಲಿರುವ ಹೂಗಳಿಗೆ ಭೇಟಿ ನೀಡಲು ಬರುತ್ತಿವೆ. ಈ ಹಸಿರು ಛಾವಣಿಯಿಂದ ಬಸ್ ನಿಲ್ದಾಣ ತಂಪಾಗಿ ಪ್ರಯಾಣಿಕರಿಗೆ ಹಿತಾನುಭವ ನೀಡುತ್ತಿದೆ.
ಸಾಮಾನ್ಯವಾಗಿ ಜೇನುನೊಣಗಳು ಅವುಗಳ ಮೇಲೆ ದಾಳಿ ಮಾಡದ ಹೊರತು ಯಾರ ಮೇಲೂ ದಾಳಿ ಮಾಡುವುದಿಲ್ಲ. ನೆದರ್‌ಲ್ಯಾಂಡ್ ಸರಕಾರದ ಈ ಪರಿಸರಸ್ನೇಹಿ ಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಗಾತ್ರದಲ್ಲಿ ಚಿಕ್ಕದಾಗಿರುವ ಜೇನುನೊಣಗಳು ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಮೆರಿಕಾದ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರಪಂಚದ ಕೃಷಿ ಉತ್ಪಾದನೆಯಲ್ಲಿ ಕನಿಷ್ಠ ಶೇ.33ರಷ್ಟು ಪಾಲು ಜೇನುನೊಣಗಳದ್ದಾಗಿದೆ. ಇವುಗಳು ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರ ವಹಿಸುವುದೇ ಇದಕ್ಕೆ ಕಾರಣವಾಗಿದೆ.
2015ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಅಮೆರಿಕಾದಲ್ಲಿ ಶೇ.42ರಷ್ಟು ಜೇನುನೊಣಗಳು ನಶಿಸಿ ಹೋಗಿವೆ. ಇದು ಅಲ್ಲಿನ ಆಹಾರ ಉತ್ಪಾದನೆಯ ಮೇಲೆ ಭಾರೀ ಪರಿಣಾಮ ಬೀರಿದೆ ಎಂದೇ ಅಂದಾಜಿಸಲಾಗಿದೆ.
ಜೇನುನೊಣಸ್ನೇಹಿ ಬಸ್ ನಿಲ್ದಾಣ ನಿರ್ಮಿಸಿರುವ ನೆದರ್‌ಲ್ಯಾಂಡ್ ಸರಕಾರ ಹವಾಮಾನ ವೈಪರೀತ್ಯಕ್ಕೂ ಉತ್ತರವಾಗಿ ಹಲವಾರು ಪರಿಸರ ಯೋಜನೆಗಳನ್ನು ಹಮ್ಮಿಕೊಂಡಿದೆ. ತಾಪವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮನೆಯ ಮೇಲ್ಛಾವಣಿಗಳಲ್ಲಿ ಹಸಿರು ಛಾವಣಿ ಅಳವಡಿಸಲು ಮುಂದಾಗುವ ಜನರಿಗೆ ಸಹಾಯಧನವನ್ನೂ ನೀಡಲಿದೆ.
-ಅರುಣ್ ಕಿಲ್ಲೂರು
-------
Author,Journalist,Photographer